ಈ ವರದಿಯು ಪರಿಸರ ವರದಿಯ ವಿಭಾಗದಲ್ಲಿ 2019ರ ವರ್ಷದ ರಾಮನಾಥ್ಗೋ ಯೆಂಕಾ ಪ್ರಶಸ್ತಿಯನ್ನು ಗೆದ್ದ ಪರಿಯ ಹವಾಮಾನ ಬದಲಾವಣೆ ಕುರಿತ ಸರಣಿಯ ಭಾಗವಾಗಿದೆ.

ನಿಮ್ಮ ಹೊಲದಲ್ಲಿನ ಒಂದು ಎಕರೆಯಲ್ಲಿ ಬೆಳೆದ ಜೋಳ ಅಲ್ಪ ಅವಧಿಯಲ್ಲಿಯೇ ಏಕೆ ಮತ್ತು ಹೇಗೆ ಮಾಯವಾಯಿತು? "ಕಳೆದ ಎರಡು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ವಾರದ ಮಟ್ಟಿಗೆ ನಾನು ಹಳ್ಳಿಯನ್ನು ತೊರೆದಿದ್ದೆ. ಆ ಸಮಯದಲ್ಲಿ ಅವು ಎಲ್ಲವನ್ನೂ ಧ್ವಂಸಮಾಡಿವೆ." ಎನ್ನುತ್ತಾರೆ ಆನಂದ ಸಲ್ವಿ. ಇಲ್ಲಿ ಗೌರ್‍ಗಳ (ಬೊಸ್ ಗೌರಸ್) ಒಂದು ಹಿಂಡೇ ಇದ್ದು, ಇವನ್ನು ಕೆಲವೊಮ್ಮೆ ಭಾರತೀಯ ಕಾಡೆಮ್ಮೆಯೆಂತಲೂ ಕರೆಯುತ್ತಾರೆ. ಪ್ರಪಂಚದಲ್ಲಿನ ಅತ್ಯಂತ ಮಜಬೂತಾದ ಗೋವಿನ ಜಾತಿಗೆ ಸೇರಿದ ಪ್ರಾಣಿಗಳಿವು. ಗಂಡು ಜಾತಿಯವು ಭುಜದ ಮಟ್ಟಕ್ಕೆ 6 ಅಡಿ ಉದ್ದವಿದ್ದು, ಸುಮಾರು 500 ರಿಂದ 1000 ಕೆ.ಜಿ. ತೂಗುತ್ತವೆ.

ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯಲ್ಲಿನ ರಾಧಾನಗರಿಯ ವನ್ಯಜೀವಿ ಅಭಯಾರಣ್ಯದಲ್ಲಿ ಶಾಂತ ಜೀವಿಗಳಾದ ಮಹಾಕಾಯದ ಈ ಜಾನುವಾರುಗಳು, ಹೆದ್ದಾರಿಗಳಿಗೆ ಬಂದು ತಮ್ಮ ಸುತ್ತಮುತ್ತಲಿನ ಕೃಷಿ ಕ್ಷೇತ್ರಗಳಿಗೆ ದಾಳಿಯಿಡುತ್ತಿವೆ.

ರಕ್ಷಿ ಜಿಲ್ಲೆಯ ಸಲ್ವಿ, "ನನ್ನ ಜಮೀನನ್ನು ಕಾಯುವವರಾರೂ ಇರಲಿಲ್ಲ. ಅದೃಷ್ಟವಶಾತ್ ನನ್ನ ಒಂದು ಎಕರೆಯಲ್ಲಿನ ಕಬ್ಬನ್ನು (ಸುಮಾರು 80 ಟನ್) ಉಳಿಸಿಕೊಳ್ಳಲು ನನಗೆ ಸಾಧ್ಯವಾಯಿತು." 1000 ಕೆ.ಜಿ. ತೂಗುವ ಮಹಾಕಾಯದಿಂದ ಏನನ್ನಾದರೂ ಉಳಿಸಿಕೊಳ್ಳುವುದಾದರೂ ಹೇಗೆ? ಆಗ ಹುಟ್ಟಿಕೊಂಡ ತಂತ್ರವೇ ಪಟಾಕಿಗಳದ್ದು.

ಎರಡು ವರ್ಷಗಳ ಹಿಂದೆ, ಸಲ್ವಿ ಪ್ರತಿ ರಾತ್ರಿ ಜಮೀನಿನಲ್ಲೇ ಮಲಗಲು ಪ್ರಾರಂಭಿಸಿದರು. "ರಾತ್ರಿ 8 ಕ್ಕೆ ಬರುವ ನಾವು ಎಲ್ಲ ಗವಗಳೂ (ಗೌರ್‍ನ ಸ್ಥಳೀಯ ಪದ) ತೆರಳಿದ ನಂತರ ಮುಂಜಾನೆ 4 ಕ್ಕೆ ವಾಪಸ್ಸಾಗುತ್ತೇವೆ. ರಾತ್ರಿಯ ಹೊತ್ತು ಜಮೀನಿನಲ್ಲಿ ಪಟಾಕಿಗಳನ್ನು ಸಿಡಿಸುತ್ತೇವೆ. ಇದರಿಂದಾಗಿ ಕಾಡೆಮ್ಮೆಗಳು ಇವರ ಐದು ಎಕರೆಯ ಜಮೀನನ್ನು ಪ್ರವೇಶಿಸಲು ಹೆದರುತ್ತವೆ." ಅಕ್ಕಪಕ್ಕದ ಅನೇಕರು ಹೀಗೆಯೇ ಮಾಡುತ್ತಾರೆ. ಕಳೆದೆರಡು ವರ್ಷಗಳಿಂದ ಪನ್ಹಲ ತಾಲ್ಲೂಕಿನ ರಕ್ಷಿ ಗ್ರಾಮದಲ್ಲಿ ಕಾಡೆಮ್ಮೆಯಿಂದಾಗಿ ಬೆಳೆಗಳು ನಾಶವಾಗುತ್ತಿವೆ.

PHOTO • Sanket Jain

ಕುಗ್ಗುತ್ತಿರುವ ಸವ್ರಯ್ ಸಡ ಜಲಾಶಯವು ಅಭಯಾರಣ್ಯದ ಪ್ರಾಣಿ ಮತ್ತು ಪಕ್ಷಿಗಳ ನೀರಿನ ಪ್ರಮುಖ ನೆಲೆಗಳಲ್ಲಿ ಒಂದಾಗಿದೆ. (ಛಾಯಾಚಿತ್ರ: ಸಂಕೇತ್ ಜೈನ್/ಪರಿ)

"ನಾವು ಸೀಜನ್ನಿನಲ್ಲಿ ಪ್ರತಿ ದಿನವೂ ಪಟಾಕಿಯನ್ನು ಕೊಳ್ಳಲು 50 ರೂ.ಗಳನ್ನು ಖರ್ಚುಮಾಡುತ್ತೇವೆ", ಎನ್ನುತ್ತಾರೆ ಸಲ್ವಿಯ ಪತ್ನಿ ಸುನೀತಾ. ಹೀಗಾಗಿ, ಕೃಷಿಯ ವೆಚ್ಚಗಳಿಗೆ ಹೊಸದೊಂದು ಅಂಶವನ್ನು ಸೇರಿಸಿದಂತಾಗುತ್ತದೆ. “ರೈತರು ರಾತ್ರಿಯ ವೇಳೆ ಜಮೀನುಗಳಲ್ಲಿ ಮಲಗುವುದು ಬಹಳ ಅಪಾಯಕಾರಿಯಾದುದು. ಇತರೆ ವನ್ಯಜೀವಿಗಳೂ ಆ ಅವಧಿಯಲ್ಲಿ ಸಕ್ರಿಯವಾಗಿರುತ್ತವೆ. ಉದಾಹರಣೆಗೆ ಹಾವುಗಳು.”

ಪಟಾಕಿಗಳು ತಮಗೆ ಯಾವುದೇ ಹಾನಿಯನ್ನು ಉಂಟುಮಾಡುವುದಿಲ್ಲವೆಂಬುದನ್ನು ಕಾಡೆಮ್ಮೆಗಳು ಶೀಘ್ರದಲ್ಲೇ ಅರಿತುಕೊಳ್ಳುತ್ತವೆಂಬುದು ಜನರ ನಂಬಿಕೆ. ಹೀಗಾಗಿ ರಾಧಾನಗರಿ ತಾಲ್ಲೂಕಿನ ಕೆಲ ರೈತರು ವಿದ್ಯುತ್ ಬೇಲಿಗಳನ್ನು ಬಳಸಲಾರಂಭಿಸಿದ್ದಾರೆ. "ಇದನ್ನೂ ಅವು ಒಗ್ಗಿಸಿಕೊಳ್ಳುತ್ತವೆ" ಎನ್ನುತ್ತಾರೆ ರಾಧಾನಗರಿಯ ಅಭಯಾರಣ್ಯದ ಸರ್ಕಾರೇತರ ಸಂಸ್ಥೆಯಾದ ಬೈಸನ್ ನೇಚರ್ ಕ್ಲಬ್‍ನ ಸಹ ಸಂಸ್ಥಾಪಕರಾದ ಸಾಮ್ರಾಟ್ ಕೇರ್ಕರ್. "ಬೇಲಿಯು ಶಾಕ್ ಹೊಡೆಯುತ್ತದೆಯೇ ಎಂದು ಪರೀಕ್ಷಿಸಲು ಗೌರ್‍ಗಳು ನಿಧಾನವಾಗಿ ಬೇಲಿಯ ಮೇಲೆ ತಮ್ಮ ಕಾಲನ್ನಿಡುವುದನ್ನು ನಾವು ನೋಡಿದ್ದೇವೆ. ಮೊದಲಿಗೆ ಅವು ಮನುಷ್ಯರನ್ನು ಕಂಡರೆ ಹೆದರುತ್ತಿದ್ದವು. ಈಗ ನಮ್ಮನ್ನು ಕಂಡಾಗ ಅಷ್ಟು ಸುಲಭವಾಗಿ ಓಡಿಹೋಗುವುದಿಲ್ಲ."

"ಗವಗಳನ್ನು ನಾವು ನಿಂದಿಸುವುದಿಲ್ಲ." ಎನ್ನುತ್ತಾರೆ ಸುನೀತಾ. "ಇದು ಅರಣ್ಯ ಇಲಾಖೆಯ ತಪ್ಪು. ಅರಣ್ಯಗಳನ್ನು ಸೂಕ್ತವಾಗಿ ನಿರ್ವಹಿಸದಿದ್ದಲ್ಲಿ, ಪ್ರಾಣಿಗಳು ಹೊರಬರುತ್ತವೆ."

ಆಹಾರ ಮತ್ತು ನೀರನ್ನು ಅರಸುತ್ತಾ ಗೌರ್ ಕಾಡೆಮ್ಮೆಗಳು ವನ್ಯಜೀವಿ ಅಭಯಾರಣ್ಯದಿಂದ ಹೆಚ್ಚಿನ ಸಂಖ್ಯೆಯಲ್ಲಿ ಹೊರಬರುತ್ತಿವೆ. ಒಣಗುತ್ತಿರುವ ಅರಣ್ಯದಲ್ಲಿ ಇತರೆ ಪದಾರ್ಥಗಳೊಂದಿಗೆ ದುರ್ಲಭವಾಗುತ್ತಿರುವ ಕರ್ವಿ (ಸ್ಟ್ರೊಬಿಲಾಂಥೆಸ್ ಕಲ್ಲೊಸ) ಎಲೆಗಳನ್ನು ಅವು ಅರಸುತ್ತವೆ. ಅಲ್ಲದೆ, ಅಭಯಾರಣ್ಯದ ನೀರಿನ ನೆಲೆಯು ಬತ್ತುತ್ತಿರುವುದರಿಂದ ನೀರಿನ ಇತರೆ ನೆಲೆಗಳನ್ನು ಅವು ಅರಸುತ್ತವೆ. ಅರಣ್ಯ ಕಾವಲುಗಾರರು ಹಾಗೂ ಕ್ಷೇತ್ರ ಸಂಶೋಧಕರು ಹೇಳುವಂತೆ, ಅಭಯಾರಣ್ಯದ ಕ್ಷೀಣಿಸುತ್ತಿರುವ ಹುಲ್ಲುಗಾವಲಿನ ಕಾರಣದಿಂದಾಗಿಯೂ ಅವು ಹೊರಬರುತ್ತಿವೆ.

Anand Salvi lost an acre of jowar to a bison raid.
PHOTO • Sanket Jain
Sunita Salvi says she blames the forest department.
PHOTO • Sanket Jain
Metallic cots farmers sleep on in the fields, through the night.
PHOTO • Sanket Jain

ಎಡಕ್ಕೆ: ಕಾಡೆಮ್ಮೆಗಳ ದಾಳಿಯಿಂದಾಗಿ ಆನಂದ್ ಸಲ್ವಿ ಒಂದು ಎಕರೆ ಜೋಳವನ್ನು ಕಳೆದುಕೊಂಡರು. ಮಧ್ಯೆ: ನಾನು ಅರಣ್ಯ ಇಲಾಖೆಯನ್ನು ದೂಷಿಸುತ್ತೇನೆ ಎನ್ನುತ್ತಾರೆ ಸುನೀತಾ ಸಲ್ವಿ. ಬಲಕ್ಕೆ: ತಮ್ಮ ಜಮೀನುಗಳನ್ನು ಕಾಯುತ್ತಾ, ರೈತರು ಈ ಲೋಹದ ಮಂಚಗಳ ಮೇಲೆ ರಾತ್ರಿಯ ಹೊತ್ತು ಬಯಲಿನಲ್ಲಿ ಮಲಗುತ್ತಾರೆ. (ಛಾಯಾಚಿತ್ರಗಳು: ಸಂಕೇತ್ ಜೈನ್/ಪರಿ)

ಕೇಂದ್ರೀಯ ಅಂತರ್ಜಲ ಮಂಡಳಿಯ ದತ್ತಾಂಶದ ಪ್ರಕಾರ, ರಾಧಾನಗರಿ ತಾಲ್ಲೂಕಿನಲ್ಲಿ 2004 ರಲ್ಲಿ 3,510 ಮಿ. ಮೀ., 2008 ರಲ್ಲಿ 3,684 ಮಿ. ಮೀ. ಹಾಗೂ 2012 ರಲ್ಲಿ 3,072 ಮಿ. ಮೀ.ನಷ್ಟು ಮಳೆಯಾಗಿದ್ದು, 2018 ರಲ್ಲಿ ಅತ್ಯಂತ ಕಡಿಮೆ ಅಂದರೆ ಕೇವಲ 2,120 ಮಿ. ಮೀ.ನಷ್ಟು ಮಾತ್ರವೇ ಮಳೆಯಾಗಿದೆ. ಮಹಾರಾಷ್ಟ್ರದ ಇತರೆ ಭಾಗಗಳಂತೆ ಸುಮಾರು ಒಂದು ದಶಕದಿಂದಲೂ ಇಡೀ ಕೊಲ್ಹಾಪುರ ಜಿಲ್ಲೆಯಾದ್ಯಂತ ಮಳೆಯು ಅತ್ಯಂತ ಅನಿಯಮಿತವಾಗಿದೆ.

ದಶಕದ ಹಿಂದೆ, ರಾಜು ಪಾಟೀಲ್ ಎಂಬ 50 ವರ್ಷದ ಕುರುಬನು ದೇವ್‍ಗಡ್-ನಿಪ್ಪಾಣಿ ರಾಜ್ಯ ಹೆದ್ದಾರಿಯಲ್ಲಿ 12 ಗೌರ್‍ಗಳ ಗುಂಪನ್ನು ಮೊಟ್ಟಮೊದಲಿಗೆ ನೋಡಿದ. ತಮ್ಮ ಗ್ರಾಮದ ಹೊರವಲಯದಲ್ಲಿನ ವನ್ಯಜೀವಿ ಅಭಯಾರಣ್ಯದ ಬಗ್ಗೆ ಆತ ಕೇಳಿದ್ದನಾದರೂ, ಗವಗಳನ್ನು ಆತನೆಂದೂ ನೋಡಿರಲಿಲ್ಲ.

"ಅವು ಕಾಡಿನಿಂದ ಹೊರಬಂದದ್ದನ್ನು ನಾನು ನೋಡಿದ್ದು, ಕಳೆದ ದಶಕದಲ್ಲಷ್ಟೇ", ಎನ್ನುತ್ತಾನೆ ಆತ. ಅಲ್ಲಿಂದೀಚೆಗೆ ರಾಧಾನಗರಿ ಗ್ರಾಮದ ಜನರಿಗೆ ಈ ಮಜಬೂತಾದ ಸಸ್ಯಾಹಾರಿಗಳು ರಸ್ತೆಯನ್ನು ದಾಟುವ ದೃಶ್ಯವು ಸರ್ವೇಸಾಮಾನ್ಯವಾಯಿತು. ಗ್ರಾಮೀಣರು ತಮ್ಮ ಸೆಲ್‍ಫೋನುಗಳಲ್ಲಿ ಈ ಪ್ರಾಣಿಗಳ ವೀಡಿಯೋಗಳನ್ನು ತೆಗೆದಿದ್ದಾರೆ. ಗೌರ್‍ಗಳು ಕಬ್ಬು, ಶಲು(ಜೋಳ), ಧಾನ್ಯ ಹಾಗೂ ಭತ್ತವನ್ನು ತಿನ್ನಲು ಕೊಲ್ಹಾಪುರ ಜಿಲ್ಲೆಯ ರಾಧಾನಗರಿ, ಶಹುವಡಿ, ಕರ್ವಿರ್ ಮತ್ತು ಪನ್ಹಲ ತಾಲ್ಲೂಕಿನ ಜಮೀನುಗಳನ್ನು ಪ್ರವೇಶಿಸತೊಡಗಿವೆ.

ಅರಣ್ಯದಲ್ಲಿ ದುರ್ಲಭವಾಗುತ್ತಿರುವ ನೀರನ್ನು ಕುಡಿಯಲು ಸಹ ಅವು ಹೀಗೆ ಹೊರಬರುತ್ತಿವೆ.

ರಾಧಾನಗರಿ ತಾಲ್ಲೂಕಿನಲ್ಲಿ, ಕೇವಲ ಕಳೆದ 10-15 ವರ್ಷಗಳಿಂದೀಚೆಗೆ ಗವಗಳು ಅರಣ್ಯದಿಂದ ಹೊರಬಂದು ಬೆಳೆಯನ್ನು ಲೂಟಿಮಾಡುತ್ತಿವೆಯೆಂದು ಗ್ರಾಮದ ಜನತೆ ಖಚಿತವಾಗಿ ನುಡಿಯುತ್ತಾರೆ. ಪನ್ಹಲ ತಾಲ್ಲೂಕಿನಲ್ಲಿ ಇದು ತೀರ ಇತ್ತೀಚಿನ ಘಟನೆ. ಕಾಡಿನ ಬಳಿ ಜಮೀನನ್ನು ಹೊಂದಿರುವ ರಕ್ಷಿ ಗ್ರಾಮದ 42 ರ ಯುವರಾಜ್ ನಿರುಖೆ, "ಕಳೆದೆರಡು ವರ್ಷಗಳಿಂದಷ್ಟೇ ನಾವು ಗವಗಳನ್ನು ನೋಡುತ್ತಿದ್ದೇವೆ. ಇದಕ್ಕೂ ಮೊದಲು ಕಾಡು ಹಂದಿಗಳು ನಮ್ಮ ಬೆಳೆಗಳ ಮೇಲೆ ದಾಳಿಮಾಡುತ್ತಿದ್ದವು." ಎನ್ನುತ್ತಾರೆ. "ಜನವರಿಯಿಂದ 12 ಕಾಡೆಮ್ಮೆಗಳ ಗುಂಪು ಮೂರು ಬಾರಿ ಅವರ 0.75 ಎಕರೆ ಜಮೀನಿಗೆ ದಾಂಗುಡಿಯಿಟ್ಟಿವೆ. ಕನಿಷ್ಠ 4 ಕ್ವಿಂಟಾಲ್ ಶಲುವನ್ನು ನಾನು ಕಳೆದುಕೊಂಡಿದ್ದು, ಈ ಮಳೆಗಾಲದಲ್ಲಿ ಭತ್ತವನ್ನು ಬೆಳೆಯಲು ನನಗೆ ಧೈರ್ಯವಾಗುತ್ತಿಲ್ಲ" ಎಂದು ಅವರು ಅಲವತ್ತುಕೊಳ್ಳುತ್ತಾರೆ.

ರಾಧಾನಗರಿ ತಾಲ್ಲೂಕಿನ ಜನರು ತಮ್ಮ ಸೆಲ್‍ಫೋನ್‍ಗಳಲ್ಲಿ ಗೌರ್ ‍ಗಳು ಅಭಯಾರಣ್ಯದಿಂದ ಹೊರಬಂದು ರಸ್ತೆ ಹಾಗೂ ಹೆದ್ದಾರಿಗಳನ್ನು ದಾಟುತ್ತಿರುವ ವೀಡಿಯೋಗಳನ್ನು ತೆಗೆದಿದ್ದಾರೆ.

"ಹವಾಮಾನದ ಚಕ್ರವು ಸಂಪೂರ್ಣವಾಗಿ ಬದಲಾಗಿದೆ," ಎನ್ನುತ್ತಾರೆ ರಾಧಾನಗರಿಯ ಅರಣ್ಯ ವಲಯಾಧಿಕಾರಿಯಾದ ಪ್ರಶಾಂತ್ ತೆಂಡೂಲ್ಕರ್. "ಇದಕ್ಕೂ ಮೊದಲು, ಮಾರ್ಚ್ ಮತ್ತು ಏಪ್ರಿಲ್‍ನಲ್ಲಿ ಒಂದು ಬಾರಿಯಾದರೂ ಮಳೆ ಬೀಳುತ್ತಿದ್ದು, ನೀರಿನ ಹೊಂಡಗಳು ಮತ್ತೆ ತುಂಬಿಕೊಳ್ಳುತ್ತಿದ್ದವು. ನಾವು ಪರಿಸರಕ್ಕೆ ವಿರುದ್ಧವಾಗಿ ಹೋದಲ್ಲಿ, ಯಾರನ್ನು ನಿಂದಿಸುವುದು? 50-60 ವರ್ಷಗಳ ಹಿಂದೆ, ಅರಣ್ಯದ ಭೂಮಿ, ನಂತರ ಮೇವುಮಾಳ, ತರುವಾಯ ಹೊಲಗಳು ಹಾಗೂ ಅದಕ್ಕೆ ನಂತರದಲ್ಲಿ ಗ್ರಾಮಗಳಿರುತ್ತಿದ್ದವು. ಈಗ ಜನರು ಇಲ್ಲಿಯೂ ನೆಲೆಸಲು ಪ್ರಾರಂಭಿಸಿದ್ದು, ನಿಧಾನವಾಗಿ ಕಾಡನ್ನು ಸಹ ಪ್ರವೇಶಿಸುತ್ತಿದ್ದಾರೆ. ಗ್ರಾಮ ಹಾಗೂ ಕಾಡಿನ ನಡುವಿನ ಭೂಮಿಯನ್ನು ಅತಿಕ್ರಮಿಸಲಾಗಿದೆ."

ಈ ಅತಿಕ್ರಮಣವು ಬಾಕ್ಸೈಟ್ ಗಣಿಗಾರಿಕೆಯಂತಹ "ವಿನಾಶಕಾರಿ" ಸ್ವರೂಪದಲ್ಲಿದೆ. ಕೆಲವು ದಶಕಗಳಿಂದಲೂ ಇದು ಚಾಲ್ತಿಯಲ್ಲಿದ್ದು, ಕೆಲವೊಮ್ಮೆ ಸ್ಥಗಿತಗೊಂಡದ್ದೂ ಉಂಟು.

"ಹಲವು ವರ್ಷಗಳಿಂದಲೂ ಬಾಕ್ಸೈಟಿನ ಮುಕ್ತ ನಿಕ್ಷೇಪಣ ಗಣಿಗಾರಿಕೆಯು ರಾಧಾನಗರಿಯನ್ನು ವಿನಾಶದತ್ತ ತಳ್ಳಿದೆ",  ಎನ್ನುತ್ತಾರೆ ಸ್ಯಾಂಕ್ಚುರಿ ಏಶಿಯಾದ ಸಂಸ್ಥಾಪಕ ಸಂಪಾದಕರಾದ ಬಿಟ್ಟು ಸಹಗಲ್. "ಇದಕ್ಕೆ ಅಪಾರ ಪ್ರತಿರೋಧವಿದ್ದರೂ, INDAL ನಂತಹ ಗಣಿಗಾರಿಕಾ ಕಂಪನಿಗಳು (ನಂತರದಲ್ಲಿ ಇದು HINDALCO ದೊಂದಿಗೆ ವಿಲೀನಗೊಂಡಿತು) ಅಧಿಕಾರದ ವಲಯಗಳಲ್ಲಿ ವಿರೋಧಿಗಳಿಗಿಂತಲೂ ಹೆಚ್ಚಿನ ಪ್ರಭಾವವನ್ನು ಹೊಂದಿದ್ದಾರೆ. ಇದೇ ಕಂಪನಿಗಳು ಸರ್ಕಾರಿ ಕಛೇರಿಗಳಲ್ಲಿ ನೀತಿ ನಿಯಮಗಳನ್ನು ರೂಪಿಸುತ್ತಿವೆ. ಗಣಿಗಾರಿಕೆಯ ಚಟುವಟಿಕೆಗಳಿಂದಾಗಿ ಮೇವುಮಾಳಗಳು ಹಾಗೂ ನೀರಿನ ಮೂಲಗಳೆಲ್ಲವೂ ತೀವ್ರ ಹಾನಿಗೀಡಾಗಿವೆ."

1998 ರಿಂದ ಬಾಂಬೆ ಹೈಕೋರ್ಟ್ ಹಾಗೂ ಭಾರತದ ಸುಪ್ರೀಂ ಕೋರ್ಟ್ ಈ ಬಗ್ಗೆ ಅನೇಕ ಬಾರಿ ಆಕ್ಷೇಪವನ್ನು ವ್ಯಕ್ತಪಡಿಸಿವೆ. ಅಕ್ಟೋಬರ್ 2018 ರಲ್ಲಿ ‘ರಾಜ್ಯ ಸರ್ಕಾರದ ನಿರ್ಲಕ್ಷ್ಯದ’ ಬಗ್ಗೆ ಮುಖ್ಯ ಕಾರ್ಯದರ್ಶಿಯು ನ್ಯಾಯಾಲಯಕ್ಕೆ ಹಾಜರಾಗಬೇಕೆಂದು ಅಪೆಕ್ಸ್ ಕೋರ್ಟ್ ಆದೇಶವನ್ನು ಹೊರಡಿಸಿತು.

PHOTO • Sanket Jain

ಮೇಲಿನ ಸಾಲು: ಎಡಕ್ಕೆ: ಈ ಋತುವಿನಲ್ಲಿ ಭತ್ತದ ಕೃಷಿಗೆ ಹಿಂಜರಿಯುತ್ತಿರುವ ಯುವರಾಜ್ ನಿರುಖೆ. ಬಲಕ್ಕೆ: ಕಾಡೆಮ್ಮೆಯ ದೆಸೆಯಿಂದಾಗಿ ರಾಜು ಪಾಟೀಲರ 0.75 ಎಕರೆಯಲ್ಲಿನ ಕಬ್ಬು ಹಾನಿಗೀಡಾಯಿತು. ಕೆಳಗಿನ ಸಾಲು: ಕಾಡೆಮ್ಮೆಗಳ ದಾಳಿಯಿಂದಾಗಿ ಅರ್ಧ ಎಕರೆ (ಬಲಕ್ಕೆ) ನೆಪಿಯರ್ ಹುಲ್ಲು (ಎಲಿಫೆಂಟ್ ಗ್ರಾಸ್) ಹಾನಿಗೀಡಾಗಿರುವ ವಿಷಯವು ಮಾರುತಿ ನಿಕಂ ಅವರಿಗೆ ತಿಳಿದುಬಂದಿತು. (ಛಾಯಾಚಿತ್ರಗಳು: ಸಂಕೇತ್ ಜೈನ್/ಪರಿ)

ಕೊಲ್ಹಾಪುರದ ಶಿವಾಜಿ ವಿಶ್ವವಿದ್ಯಾಲಯದ ಸಂಶೋಧಕರ 2012 ರ ಅಧ್ಯಯನವು ಗಣಿಗಾರಿಕೆಯಿಂದಾಗುವ ದೀರ್ಘಕಾಲೀನ ಪರಿಣಾಮಗಳು ಮುಂದುವರಿಯುತ್ತಿರುವ ಬಗ್ಗೆ ಗಮನ ಸೆಳೆಯುತ್ತದೆ. ಕೊಲ್ಹಾಪುರ ಜಿಲ್ಲೆಯ ಪರಿಸರದ ಮೇಲೆ ಬಾಕ್ಸೈಟ್ ಗಣಿಗಾರಿಕಾ ಚಟುವಟಿಕೆಗಳಿಂದ ಉಂಟಾಗುತ್ತಿರುವ ಪರಿಣಾಮವನ್ನು ಕುರಿತ ಅವರ ವಿದ್ವತ್ಪ್ರಬಂಧವು , "ಸದರಿ ಪ್ರದೇಶದಲ್ಲಿ ಶಾಸನಬದ್ಧ ಹಾಗೂ ಶಾಸನಬದ್ಧವಲ್ಲದ ಗಣಿಗಾರಿಕಾ ಚಟುವಟಿಕೆಗಳು ಪರಿಸರಕ್ಕೆ ತೀವ್ರ ಸ್ವರೂಪದಲ್ಲಿ ಆಘಾತಕಾರಿಯಾಗಿ ಪರಿಣಮಿಸಿವೆಯೆಂದು ತಿಳಿಸುತ್ತದೆ. ಗಣಿಗಾರಿಕೆಯು ಪ್ರಾರಂಭದಲ್ಲಿ ಸೀಮಿತ ಸಂಖ್ಯೆಯ ಸ್ಥಳೀಯರಿಗೆ ಕೆಲಸವನ್ನು ದೊರಕಿಸಿ, ಸರ್ಕಾರಕ್ಕೆ ಆದಾಯವನ್ನು ಗಳಿಸಿಕೊಟ್ಟರೂ, ಅದು ಕೇವಲ ಕೆಲವೇ ದಿನಗಳಿಗಷ್ಟೇ. ಭೂ ಬಳಕೆಯನ್ನು ಕುರಿತ ಬದಲಾದ ಪ್ರವೃತ್ತಿಯಿಂದಾಗಿ ಸ್ಥಳೀಯ ಪರಿಸರಕ್ಕೆ ಉಂಟಾದ ಹಾನಿಯು ಶಾಶ್ವತವೆನಿಸಿತು", ಎಂದು ದಾಖಲಿಸಿದೆ.

"ರಾಧಾನಗರಿಯಿಂದ ಕೇವಲ 24 ಕಿ. ಮೀ. ದೂರದ ದಜಿಪುರದಲ್ಲಿ ಮತ್ತೊಂದು ವನ್ಯಜೀವಿ ಅಭಯಾರಣ್ಯವಿದೆ. 1980 ರ ಮಧ್ಯಭಾಗದಲ್ಲಿ ಇವೆರಡೂ ಪ್ರತ್ಯೇಕಗೊಳ್ಳುವವರೆಗೂ, ಒಂದೇ ಘಟಕವಾಗಿದ್ದವು. ಇವೆರಡರ ಕ್ರೋಢಿಕೃತ ಪ್ರದೇಶವು 351.16 ಚದರ ಕಿ.ಮೀ.ಗಳು. ಸವ್ರಯ್ ಸಡ ಎಂದು ಕರೆಯಲ್ಪಡುವ ದಜಿಪುರದಲ್ಲಿನ ಜಂಬುಮಣ್ಣಿನ ಪ್ರಸ್ಥಭೂಮಿಯಲ್ಲಿ ಜಲಾಶಯವಿದ್ದು, ಈ ಪ್ರದೇಶದ ಪ್ರಾಣಿ ಹಾಗೂ ಪಕ್ಷಿಗಳಿಗೆ ನೀರನ್ನು ಒದಗಿಸುವ ಬೃಹತ್ ನೆಲೆಯಾಗಿದೆ. ಆದರೆ ಈ ವರ್ಷದ ಮೇನಲ್ಲಿ ಈ ಜಲಾಶಯವು ಬಹುತೇಕ ಒಣಗಿಹೋಯಿತು.

"ಕಳೆದ ದಶಕದಿಂದೀಚೆಗೆ ಇಲ್ಲಿನ ಬಹುತೇಕ ಅರಣ್ಯ ವಿನಾಶದತ್ತ ಸಾಗಿದ್ದು, ಹವಾಮಾನದ ಚಕ್ರದ ಮೇಲೆ ಪರಿಣಾಮವನ್ನು ಬೀರಿದೆ." ಎನ್ನುತ್ತಾರೆ ಅಮಿತ್ ಸೈಯದ್. ಇವರು ವನ್ಯಜೀವಿಗಳ ಸಂಶೋಧಕರಾಗಿದ್ದು, ವನ್ಯಜೀವಿ ಸಂರಕ್ಷಣಾ ಹಾಗೂ ಸಂಶೋಧನಾ ಸೊಸೈಟಿಯ ಅಧ್ಯಕ್ಷರಾಗಿದ್ದಾರೆ.

ಪ್ರಾಣಿಗಳಿಗೆಂದು ಅರಣ್ಯ ಇಲಾಖೆಯು ಕೃತಕ ‘ಸಾಲ್ಟ್ ಲಿಕ್‍ಗಳನ್ನು’ನಿರ್ಮಿಸಿದ್ದು, ಸವ್ರಯ್ ಸಡದಲ್ಲಿಯೂ ಸಹ ಇದನ್ನು ಕಾಣಬಹುದು. ಉಪ್ಪು ಅಥವ ಖನಿಜವನ್ನು ಜಗಿಯುವ ಈ ಸ್ಥಳದಲ್ಲಿ ಪ್ರಾಣಿಗಳು ಅವಶ್ಯಕ ಪೌಷ್ಠಿಕಾಂಶಗಳನ್ನು ತಿನ್ನುತ್ತವೆ. ದಜಿಪುರ್ ಮತ್ತು ರಾಧಾನಗರಿಯ ಕೆಲವು ಜಾಗಗಳಲ್ಲಿ ಉಪ್ಪು ಮತ್ತು ಕೊಂಡಗಳನ್ನು (ತೊಗಟೆ/ಹೊಟ್ಟು) ಶೇಖರಿಸಲಾಗಿದೆ.

ಸಾಲ್ಟ್ ಲಿಕ್ ಗೆ ಹೋಲಿಸಿದಲ್ಲಿ ಹೆಚ್ಚು ಕೆಡುಕಿಲ್ಲದ ಮನುಷ್ಯನ ಉದಾರ ಸ್ವರೂಪದ ಮತ್ತೊಂದು ಹಸ್ತಕ್ಷೇಪವೆಂದರೆ: ಕಬ್ಬಿನ ವಿಸ್ತರಣೆ. ಕೊಲ್ಹಾಪುರದ ಕೆಲವು ತಾಲ್ಲೂಕುಗಳಲ್ಲಿನ ಸಮೃದ್ಧ ಮಳೆಯು ದಶಕಗಳಿಂದಲೂ ಕಬ್ಬಿನ ಬೆಳೆಗೆ ಸಹಕಾರಿಯಾಗಿದೆ. ಇದರ ಬೆಳೆಯು ಕೊಂಚ ಕಳವಳಕಾರಿಯೂ ಹೌದು. ರಾಜ್ಯದ ಸಕ್ಕರೆ ಕಮಿಷನರೇಟ್ ಮತ್ತು ಗೆeóÉಟಿಯರ್ ದತ್ತಾಂಶಗಳ ಪ್ರಕಾರ 1971-72 ರಲ್ಲಿ ಕಬ್ಬನ್ನು 40,000 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯುತ್ತಿದ್ದು, ಕಳೆದ ವರ್ಷ 2018-19 ರಲ್ಲಿ ಸದರಿ ಬೆಳೆಯು 155,000 ಹೆಕ್ಟೇರ್ ಪ್ರದೇಶವನ್ನಾವರಿಸಿದೆ. ಅಂದರೆ ಇದರ ವೃದ್ಧಿಯ ದರವು ಶೇ. 287 ರಷ್ಟಿದೆ. (ಮಹಾರಾಷ್ಟ್ರದ ಒಂದು ಎಕರೆ ಕಬ್ಬಿನ ಕೃಷಿಗೆ ಸುಮಾರು 18-20 ಮಿಲಿಯನ್ ಲೀಟರ್ ನೀರು ಅವಶ್ಯ.)

PHOTO • Sanket Jain

ಮೇಲಿನ ಸಾಲು ಎಡಕ್ಕೆ: ತನ್ನ ಗುಂಪಿನಿಂದ ಬೇರ್ಪಟ್ಟ ಗೌರ್. ಬಲಕ್ಕೆ: ಜಂಬುಮಣ್ಣಿನ ಪ್ರಸ್ಥಭೂಮಿ ಮತ್ತು ಅರಣ್ಯ. ಕೆಳಗಿನ ಸಾಲು ಎಡಕ್ಕೆ: ಸವ್ರಯ್ ಸಡದಲ್ಲಿ ಕಾಡುಪ್ರಾಣಿಗಳ ಖನಿಜಪೋಷಣೆಗಾಗಿ ಉಪ್ಪು ಮತ್ತು ಕೊಂಡವನ್ನಿಡಲಾಗಿದೆ (ತೊಗಟೆ/ಹೊಟ್ಟು). ಬಲಕ್ಕೆ: ಅಭಯಾರಣ್ಯದ ಹತ್ತಿರದ ಕಬ್ಬಿನ ಹೊಲ (ಛಾಯಾಚಿತ್ರಗಳು: ಸಂಕೇತ್ ಜೈನ್/ಪರಿ).

ಈ ಎಲ್ಲ ಪ್ರಕ್ರಿಯೆಗಳೂ ಭೂಮಿ, ನೀರು, ಅರಣ್ಯ, ಸಸ್ಯ ಮತ್ತು ಪ್ರಾಣಿ ಜಾಲ, ವಾತಾವರಣ ಹಾಗೂ ಹವಾಮಾನದ ಮೇಲೆ ಪರಿಣಾಮವನ್ನು ಬೀರುತ್ತವೆ. ದಕ್ಷಿಣದ ಅರೆ ನಿತ್ಯಹರಿದ್ವರ್ಣ, ತೇವ-ಮಿಶ್ರಿತ ಎಲೆ ಉದುರುವ ಮತ್ತು ನಿತ್ಯಹರಿದ್ವರ್ಣದ ಕಾಡುಗಳು ಈ ಅಭಯಾರಣ್ಯದ ಪ್ರಕಾರಗಳಾಗಿವೆ. ಈ ಎಲ್ಲ ಬದಲಾವಣೆಗಳ ಪ್ರಭಾವವು ಅಭಯಾರಣ್ಯದಾಚೆಗೂ ಪ್ರಚರಿಸಿದ್ದು, ಇಲ್ಲಿನ ನಿವಾಸಿಗಳ ಮೇಲೆ ಆಳವಾದ ಪರಿಣಾಮವನ್ನು ಬೀರಿದೆ. ಮಾನವ ಚಟುವಟಿಕೆಗಳು ಹೆಚ್ಚುತ್ತಿವೆಯೇ ಹೊರತು ಇಲ್ಲಿ ಗೌರ್ ಮಂದೆಗಳು ಹೆಚ್ಚುತ್ತಿಲ್ಲ.

ಕೆಲವು ದಶಕಗಳ ಹಿಂದೆ, ಭರ್ಜರಿಯಾಗಿರುವ ಈ ಪ್ರಾಣಿಗಳು ಸುಮಾರು ಒಂದು ಸಾವಿರ ಸಂಖ್ಯೆಯಲ್ಲಿದ್ದವು. ರಾಧಾನಗರಿ ವನ್ಯಜೀವಿ ಅಭಯಾರಣ್ಯದಲ್ಲಿ, ಈಗ ಇವುಗಳ ಸಂಖ್ಯೆ 500 ಎಂಬುದಾಗಿ ಮಹಾರಾಷ್ಟ್ರದ ಅರಣ್ಯ ಇಲಾಖೆಯು ತಿಳಿಸುತ್ತದೆ. ಅರಣ್ಯದ ವಲಯಾಧಿಕಾರಿ ಪ್ರಶಾಂತ್ ತೆಂಡೂಲ್ಕರ್ ಅವರ ಸ್ವಂತ ಅಂದಾಜಿನಲ್ಲಿ ಇವುಗಳ ಸಂಖ್ಯೆ 700. ಭಾರತದಲ್ಲಿ ಗೌರ್ ಗಳನ್ನು ವನ್ಯಜೀವಿ ಸಂರಕ್ಷಣಾ ಅಧಿನಿಯಮ 1972 ರ ಷೆಡ್ಯೂಲ್ 1 ರಡಿಯಲ್ಲಿ ವರ್ಗೀಕರಿಸಲಾಗಿದೆ. ಸದರಿ ಪಟ್ಟಿಯಲ್ಲಿನ ಜಾನುವಾರುಗಳಿಗೆ ಸಂಪೂರ್ಣ ರಕ್ಷಣೆಯನ್ನು ನೀಡತಕ್ಕದ್ದು. ಈ ಪ್ರಾಣಿಗಳನ್ನು ಕುರಿತ ಅಪರಾಧಗಳಿಗೆ ಹೆಚ್ಚಿನ ದಂಡವನ್ನು ವಿಧಿಸಲಾಗುತ್ತದೆ. ಇಂಟರ್‍ನ್ಯಾಷನಲ್ ಯೂನಿಯನ್ ಫಾರ್ ಕನ್ಸರ್ವೇಷನ್ ಆಫ್ ನೇಚರ್, ಗೌರ್ ಜಾನುವಾರುಗಳನ್ನು ‘ಅಸುರಕ್ಷಿತ’ವೆಂದು ವರ್ಗೀಕರಿಸಿದ್ದು; ಇದು ‘ಕೆಂಪು ಪಟ್ಟಿಯಡಿಯಲ್ಲಿನ’ ಸಂಕಷ್ಟದಲ್ಲಿರುವ ಪ್ರಾಣಿಯಾಗಿದೆ.

"ಗೌರ್‍ಗಳು ಒಂದೆಡೆಯಿಂದ ಮತ್ತೊಂದೆಡೆಗೆ ಸಂಚರಿಸುತ್ತಲೇ ಇರುತ್ತವೆಯಾದರೂ, ಅರಣ್ಯ ಇಲಾಖೆಯಲ್ಲಿ ಇವುಗಳ ವಲಸೆಯ ದತ್ತಾಂಶಗಳನ್ನೊಳಗೊಂಡ ಮಾಹಿತಿಯಿಲ್ಲ." ಎನ್ನುತ್ತಾರೆ ಅಮಿತ್ ಸೈಯದ್. "ಅವು ಎಲ್ಲಿಗೆ ತೆರಳುತ್ತಿವೆ? ಯಾವ ಪ್ರಕಾರದ ಮಾರ್ಗಗಳನ್ನು (ಕಾರಿಡಾರ್) ಅವು ಬಳಸುತ್ತಿವೆ? ಅವುಗಳ ಗುಂಪು ಯಾವ ರೀತಿಯಿದೆ? ಒಂದು ಗುಂಪಿನಲ್ಲಿ ಎಷ್ಟು ಪ್ರಾಣಿಗಳಿವೆ?" ಮುಂತಾದವುಗಳ ನಿಗಾ ವಹಿಸಿದಲ್ಲಿ, ಇಂತಹ ಘಟನೆಗಳು ಸಂಭವಿಸುವುದಿಲ್ಲ. ಇಂತಹ ಮಾರ್ಗಗಳಲ್ಲಿ ನೀರಿನ ನಿಕಾಯಗಳನ್ನು ವ್ಯವಸ್ಥೆಗೊಳಿಸತಕ್ಕದ್ದು.

ಕೊಲ್ಹಾಪುರ ಜಿಲ್ಲೆಯಲ್ಲಿನ 2014 ರ ಜೂನ್ ಮಾಹೆಯ ಮಳೆಯ ಪ್ರಮಾಣವು ಪ್ರತಿಬಾರಿಯ ಸರಾಸರಿ ಮಳೆಗಿಂತ 64% ಕಡಿಮೆಯಿದೆಯೆಂದು ಭಾರತೀಯ ಹವಾಮಾನ ಇಲಾಖೆಯ ದತ್ತಾಂಶವು ತಿಳಿಸುತ್ತದೆ. ಇದು, 2016 ರಲ್ಲಿ -39% ರಷ್ಟಿದ್ದು, (ಮೈನಸ್ 39%) 2018 ರಲ್ಲಿ ಸರಾಸರಿಗಿಂತಲೂ ಶೇಕಡ ಒಂದರಷ್ಟು ಹೆಚ್ಚಾಗಿತ್ತು. 2014 ರ ಜುಲೈನಲ್ಲಿ ಸದರಿ ಮಾಹೆಯ ಸರಾಸರಿಗಿಂತಲೂ ಶೇ. 5 ರಷ್ಟು ಹೆಚ್ಚಾಗಿದ್ದ ಮಳೆಯ ಪ್ರಮಾಣವು ಮುಂದಿನ ವರ್ಷದ ಜುಲೈ ತಿಂಗಳಿನಲ್ಲಿ -76% ರಷ್ಟಿತ್ತು (ಮೈನಸ್ 76%). ಈ ವರ್ಷ ಜೂನ್ 1 ರಿಂದ ಜುಲೈ 10 ರವರೆಗಿನ ಅವಧಿಯ ಮಳೆಯ ಪ್ರಮಾಣವು ಸರಾಸರಿಗಿಂತಲೂ 21% ಹೆಚ್ಚಿದೆಯಾದರೂ; ಇಲ್ಲಿನ ಹೆಚ್ಚಿನ ಜನರು, ಈ ಏಪ್ರಿಲ್ ಮತ್ತು ಮೇನಲ್ಲಿ ಮಾನ್ಸೂನ್ ಪೂರ್ವದ ತುಂತುರು ಮಳೆ ಇಲ್ಲವೇ ಇಲ್ಲವೆನ್ನುತ್ತಾರೆ. "ಕಳೆದ ದಶಕದಿಂದಲೂ ಮಳೆಯ ಸ್ವರೂಪದಲ್ಲಿ ಯಾವುದೆ ಕ್ರಮಬದ್ಧತೆಯಿಲ್ಲ" ಎನ್ನುತ್ತಾರೆ ಕೆರ್ಕರ್. ಇಲ್ಲಿನ ಅರಣ್ಯಗಳ ಅತಿ ಕಡಿಮೆ ಸಂಖ್ಯೆಯಲ್ಲಿರುವ ಸಾರ್ವಕಾಲಿಕ ಜಲ ಮೂಲಗಳ ಸಮಸ್ಯೆಯು ಇದರಿಂದಾಗಿ ಉಲ್ಬಣಿಸಿದೆ.

PHOTO • Rohan Bhate ,  Sanket Jain

ಮೇಲಿನ ಸಾಲು (ಎಡಕ್ಕೆ): ದಜಿಪುರ್ ಅರಣ್ಯದ ಒಳಭಾಗ (ಛಾಯಾಚಿತ್ರ: ಸಂಕೇತ್ ಜೈನ್/ಪರಿ). ಬಲಕ್ಕೆ: ತನ್ನ ಮರಿಗಳೊಂದಿಗೆ ಗೌರ್ ಕಾಡೆಮ್ಮೆ (ಛಾಯಾಚಿತ್ರ: ರೋಹನ್ ಭಟೆ). ಕೆಳಗಿನ ಸಾಲು ಎಡಕ್ಕೆ: ಕಾಡೆಮ್ಮೆಗಳಿಗೆಂದು ಪ್ರಕೃತಿದತ್ತ ಕೊಳದ ಹತ್ತಿರ ನಿರ್ಮಿಸಲಾದ ಕೃತಕ ಕೊಳ. ಬಲಕ್ಕೆ: 3,000 ಲೀಟರ್ ಟ್ಯಾಂಕರಿನಿಂದ ನೀರನ್ನು ಕೊಳಕ್ಕೆ ಸುರಿಯುತ್ತಿರುವ ಸಾಮ್ರಾಟ್ ಕೆರ್ಕರ್ (ಛಾಯಾಚಿತ್ರ: ಸಂಕೇತ್ ಜೈನ್/ಪರಿ).

ಏಪ್ರಿಲ್ ಮತ್ತು ಮೇ 2017 ರಲ್ಲಿ, ರಾಧಾನಗರಿ ಹಾಗೂ ದಜಿಪುರ್ ಕಾಡಿನಲ್ಲಿನ ಕೆಲವು ಕೊಳಗಳಿಗೆ ಮೊದಲ ಬಾರಿಗೆ ಕೃತಕವಾಗಿ ಟ್ಯಾಂಕರಿನಿಂದ ನೀರನ್ನು ತುಂಬಿಸಲಾಯಿತು. ಕೆರ್ಕರ್ ಅವರ ಬೈಸನ್ ನೇಚರ್ ಕ್ಲಬ್ ವತಿಯಿಂದ ಸುಮಾರು 20,000 ಲೀಟರ್ ನೀರನ್ನು ಎರಡು ಕಾಡುಗಳಲ್ಲಿನ ಮೂರು ಸ್ಥಳಗಳಿಗೆ ಒದಗಿಸಲಾಗಿದೆ. 2018 ರಲ್ಲಿ ಇದರ ಪ್ರಮಾಣ 24,000 ಲೀಟರಿನಷ್ಟಾಯಿತು. (ಅರಣ್ಯ ಇಲಾಖೆಯಿಂದ ನಿರ್ವಹಿಸುತ್ತಿರುವ ಅನೇಕ ಇತರೆ ಕೊಳಗಳೂ ಇವೆ.)

"ಈ ವರ್ಷ ರಾಧಾನಗರಿ ವಲಯದಲ್ಲಿ ಕೇವಲ ಒಂದು ಕೊಳಕ್ಕೆ ಮಾತ್ರವೇ ನೀರನ್ನು ಒದಗಿಸಲು ಅರಣ್ಯ ಇಲಾಖೆಯಿಂದ ನಮಗೆ ಅನುಮತಿ ದೊರೆತಿದ್ದು, ಇದರ ಕಾರಣವು ತಿಳಿದಿಲ್ಲ", ಎನ್ನುತ್ತಾರೆ ಕೆರ್ಕರ್. ಈ ವರ್ಷ ಸಕಾರೇತರ ಸಂಸ್ಥೆಯು 54,000 ಲೀಟರ್ ನೀರನ್ನು ಒದಗಿಸಿದೆ. "ಮೊದಲ ಎರಡು ಮಾನ್ಸೂನ್ ತುಂತುರು ಮಳೆಯ ನಂತರ ನಾವು ನೀರನ್ನು ಒದಗಿಸುವುದನ್ನು ನಿಲ್ಲಿಸಿದೆವು", ಎಂಬ ಮಾಹಿತಿಯನ್ನು ಕೆರ್ಕರ್ ನೀಡಿದರು.

ಅರಣ್ಯ ನಾಶ, ಗಣಿಗಾರಿಕೆ, ಬೆಳೆಯ ಪ್ರಕಾರಗಳಲ್ಲಿನ ಪ್ರಮುಖ ಬದಲಾವಣೆಗಳು, ಬರ, ಒಣಗುವಿಕೆ, ನೀರಿನ ಗುಣಮಟ್ಟದ ಇಳಿಕೆ, ಅಂತರ್ಜಲದ ಬಳಕೆ – ಈ ಎಲ್ಲ ಪ್ರಕ್ರಿಯೆಗಳೂ ಕಾಡು, ಹೊಲ, ಮಣ್ಣು, ರಾಧಾನಗರಿಯ ಹಾಗೂ ಅದರ ವ್ಯಾಪ್ತಿಯಲ್ಲಿನ ಹವಾಗುಣ ಮತ್ತು ಹವಾಮಾನವನ್ನು ಪ್ರಭಾವಿಸಿವೆ.

ಆದರೆ ನೈಸರ್ಗಿಕ ಹವಾಗುಣವಷ್ಟೇ ಅವನತಿಯೆಡೆಗೆ ಸಾಗುತ್ತಿಲ್ಲ.

ಮಾನವ ಹಾಗೂ ಗೌರ್ ಪ್ರಾಣಿಗಳ ನಡುವಣ ಸಂಘರ್ಷವೂ ತಾರಕಕ್ಕೇರುತ್ತಿದೆ. "ಪನ್ಹಲ ತಾಲ್ಲೂಕಿನ ನಿಕಂವಡಿ ಹಳ್ಳಿಯಲ್ಲಿ ಆರು ಎಕರೆ ಜಮೀನನ್ನು ಹೊಂದಿರುವ 40 ರ ಮಾರುತಿ ನಿಕಂ, 20 ಗುಂಟೆಯಲ್ಲಿ (ಸುಮಾರು ಅರ್ಧ ಎಕರೆ) ಬೆಳೆದಿದ್ದ ಎಲ್ಲ ನೆಪಿಯರ್ ಹುಲ್ಲನ್ನೂ ಗವಗಳು ತಿಂದಿವೆ", ಎಂದು ದುಃಖಿಸುತ್ತಾರೆ.

"ಮಳೆಗಾಲದಲ್ಲಿ ಕಾಡಿನಲ್ಲಿ ಹೆಚ್ಚು ನೀರಿರುತ್ತದೆಯಾದರೂ, ಅವಕ್ಕೆ ಆಹಾರವು ದೊರೆಯದಿದ್ದಲ್ಲಿ ಹೊಲಗಳಿಗೆ ಮರಳುತ್ತವೆ."

ಮುಖಪುಟ ಚಿತ್ರ: ಸ್ಯಾಂಕ್ಚುಅರಿ ಏಷ್ಯ ಹಾಗೂ ನಮಗೆ ತಮ್ಮ ಚಿತ್ರಗಳನ್ನು ಬಳಸಿಕೊಳ್ಳಲು ಅನುಮತಿಯಿತ್ತ ರೋಹನ್ ಭಟೆ ಅವರಿಗೆ ನಮ್ಮ ವಿಶೇಷ ಧನ್ಯವಾದಗಳು.

ಪರಿಯ ವತಿಯಿಂದ ಕೈಗೊಳ್ಳುತ್ತಿರುವ ದೇಶಾದ್ಯಂತದ ಪರಿಸರದ ಬದಲಾವಣೆಯನ್ನು ವರದಿಸುವ ಯೋಜನೆಯು ಯುಎನ್‍ಡಿಪಿ ಆಶ್ರಯದಲ್ಲಿನ ಕಾರ್ಯಾಚರಣೆಯಾಗಿದ್ದು, ಸದರಿ ವಿಷಯವನ್ನು ಕುರಿತಂತೆ ಸಾಮಾನ್ಯ ಜನರ ಅನುಭವ ಮತ್ತು ಹೇಳಿಕೆಗಳನ್ನು ಗ್ರಹಿಸಲಾಗುತ್ತಿದೆ.

ಈ ಲೇಖನವನ್ನು ಪ್ರಕಟಿಸಲು ಬಯಸುತ್ತೀರಾ? [email protected] ಗೆ ಬರೆದು ಅದರ ಪ್ರತಿಯನ್ನು [email protected] ಸಲ್ಲಿಸಿ.

ಅನುವಾದ: ಶೈಲಜ ಜಿ. ಪಿ.

Reporter : Sanket Jain

سنکیت جین، مہاراشٹر کے کولہاپور میں مقیم صحافی ہیں۔ وہ پاری کے سال ۲۰۲۲ کے سینئر فیلو ہیں، اور اس سے پہلے ۲۰۱۹ میں پاری کے فیلو رہ چکے ہیں۔

کے ذریعہ دیگر اسٹوریز Sanket Jain

پی سائی ناتھ ’پیپلز آرکائیو آف رورل انڈیا‘ کے بانی ایڈیٹر ہیں۔ وہ کئی دہائیوں تک دیہی ہندوستان کے رپورٹر رہے اور Everybody Loves a Good Drought اور The Last Heroes: Foot Soldiers of Indian Freedom کے مصنف ہیں۔

کے ذریعہ دیگر اسٹوریز پی۔ سائی ناتھ
Series Editors : P. Sainath

پی سائی ناتھ ’پیپلز آرکائیو آف رورل انڈیا‘ کے بانی ایڈیٹر ہیں۔ وہ کئی دہائیوں تک دیہی ہندوستان کے رپورٹر رہے اور Everybody Loves a Good Drought اور The Last Heroes: Foot Soldiers of Indian Freedom کے مصنف ہیں۔

کے ذریعہ دیگر اسٹوریز پی۔ سائی ناتھ
Series Editors : Sharmila Joshi

شرمیلا جوشی پیپلز آرکائیو آف رورل انڈیا کی سابق ایڈیٹوریل چیف ہیں، ساتھ ہی وہ ایک قلم کار، محقق اور عارضی ٹیچر بھی ہیں۔

کے ذریعہ دیگر اسٹوریز شرمیلا جوشی
Translator : Shailaja G. P.

Shailaja ([email protected]) is an author and translator of Kannada language. She has translated Khalid Hussain’s ‘The Kite Runner’ and Francis Buchanan’s ‘A Journey from Madras through the Countries of Mysore Canara and Malabar’ to Kannada. Many of her articles about various social issues including gender equality, women empowerment have been published in print media. Shailaja is also contributing as a translator for NGOs like Point of View, Helpage India and National Federation of the Blind.

کے ذریعہ دیگر اسٹوریز Shailaja G. P.