ಪ್ಯಾನೆಲ್ 'ಕಾಣುವ ಕೆಲಸಗಳ ನಡುವೆ ಕಾಣದೆ ಹೋಗುವ ಮಹಿಳೆಯರು' ಶೀರ್ಷಿಕೆಯ ಛಾಯಾಚಿತ್ರ ಪ್ರದರ್ಶನದ ಭಾಗವಾಗಿದ್ದು, ಇದರ ಅಡಿಯಲ್ಲಿ ಗ್ರಾಮೀಣ ಮಹಿಳೆಯರು ಮಾಡುವ ವಿವಿಧ ಕಾರ್ಯಗಳನ್ನು ಚಿತ್ರರೂಪದಲ್ಲಿ ದಾಖಲಿಸಲಾಗಿದೆ. ಎಲ್ಲಾ ಚಿತ್ರಗಳನ್ನು ಪಿ. ಸಾಯಿನಾಥ್ ಅವರು 1993 ರಿಂದ 2002 ನಡುವೆ ತಮ್ಮ 10 ರಾಜ್ಯಗಳಲ್ಲಿನ ಓಡಾಟದಲ್ಲಿ ತೆಗೆದಿದ್ದಾರೆ. ಇಲ್ಲಿ, ಪರಿ ಛಾಯಾಚಿತ್ರ ಪ್ರದರ್ಶನದ ಡಿಜಿಟಲ್ ಪ್ರಾತಿನಿಧ್ಯವನ್ನು ಸೃಜನಾತ್ಮಕವಾಗಿ ರಚಿಸಿದೆ, ಇದನ್ನು ಹಲವು ವರ್ಷಗಳಿಂದ ದೇಶದ ಬಹುತೇಕ ಭಾಗಗಳಲ್ಲಿ ಪ್ರದರ್ಶಿಸಲಾಗಿದೆ.

ಇಟ್ಟಿಗೆಗಳು, ಕಲ್ಲಿದ್ದಲು ಮತ್ತು ಕಲ್ಲು

ಅವರು ಬರಿಗಾಲಿನಲ್ಲಿ ನಡೆಯುತ್ತಿರುವುದಷ್ಟೇ ಅಲ್ಲ, ಅವರ ತಲೆಯ ಮೇಲೆ ಬಿಸಿ ಇಟ್ಟಿಗೆಗಳ ಹೊರೆಯೂ ಇದೆ. ಮರದ ಅಟ್ಟಣಿಗೆಯಂತಹ ಸೇತುವೆಯ ಮೇಲೆ ಸಾಲಾಗಿ ಸಾಗುತ್ತಿರುವ ಈ ಮಹಿಳೆಯರು ಒರಿಸ್ಸಾ ಮೂಲದ ಕೂಲಿ ಕಾರ್ಮಿಕರು. ಇಲ್ಲಿ ಆಂಧ್ರಪ್ರದೇಶದ ಇಟ್ಟಿಗೆ ಭಟ್ಟಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಸದ್ಯ ಇಲ್ಲಿನ ತಾಪಮಾನವು 49 ಡಿಗ್ರಿ ಸೆಲ್ಸಿಯಸ್ ಇದೆ. ಇಟ್ಟಿಗೆ ಭಟ್ಟಿಯ ಸುತ್ತ ಈ ತಾಪಮಾನವು ಇನ್ನಷ್ಟು ಹೆಚ್ಚಿರುತ್ತದೆ, ಈ ಮಹಿಳೆಯರು ಹೆಚ್ಚಿನ ಕೆಲಸವನ್ನು ಅಲ್ಲೇ ಮಾಡುತ್ತಾರೆ.

ದಿನವಿಡೀ ದುಡಿದ ನಂತರ ಪ್ರತಿ ಮಹಿಳೆಗೆ ಪ್ರತಿಫಲವಾಗಿ 10-12 ರೂಪಾಯಿ ಕೂಲಿ ಸಿಗುತ್ತದೆ, ಇದು ಪುರುಷರ ದೈನಂದಿನ ಕರುಣಾಜನಕವೆನ್ನಿಸುವ ಸಂಬಳವಾದ 15-20 ರೂಪಾಯಿಗಿಂತ ಕಡಿಮೆ. ಗುತ್ತಿಗೆದಾರರು ಇಂತಹ ವಲಸೆ ಕಾರ್ಮಿಕರ ಇಡೀ ಕುಟುಂಬವನ್ನು 'ಮುಂಗಡ' ಪಾವತಿಸಿ ಇಲ್ಲಿಗೆ ಕರೆತರುತ್ತಾರೆ. ಈ ಸಾಲಗಳಿಂದಾಗಿ, ಈ ವಲಸೆ ಕಾರ್ಮಿಕರು ಗುತ್ತಿಗೆದಾರರೊಂದಿಗೆ ಬಂಧಿಸಲ್ಪಟ್ಟಿದ್ದಾರೆ ಮತ್ತು ಆಗಾಗ್ಗೆ ಅವರ ಜೀತದಾಳುಗಳಂತಾಗಿಬಿಡುತ್ತಾರೆ. ಇಲ್ಲಿಗೆ ಬರುವ ಶೇಕಡ 90ರಷ್ಟು ಜನರು ಭೂರಹಿತರು ಅಥವಾ ಸಣ್ಣ-ಬಡ ರೈತರು.

ವಿಡಿಯೋ ನೋಡಿ: ʼಇಲ್ಲಿ ಶೇಕಡಾ 90ರಷ್ಟು ಮಹಿಳೆಯರೇ ಕೆಲಸ ಮಾಡುವುದನ್ನು ನೋಡಿದ್ದೇನೆ' ಎನ್ನುತ್ತಾರೆ ಪಿ ಸಾಯಿನಾಥ್. ಅವರು ಬೆನ್ನು ಮೂಳೆ ಮುರಿಯುಂತೆ ದುಡಿಯುತ್ತಿದ್ದರು, ಇಂತಹ ಕೆಲಸ ಮಾಡಲು ನಿಮ್ಮ ಬೆನ್ನು ಸಾಕಷ್ಟು ಬಲವಾಗಿರಬೇಕು

ಕನಿಷ್ಠ ವೇತನ ಕಾನೂನಿನ ಬಹಿರಂಗ ಉಲ್ಲಂಘನೆಯ ಹೊರತಾಗಿಯೂ, ಈ ಕಾರ್ಮಿಕರಲ್ಲಿ ಯಾರೂ ಸಹ ದೂರು ನೀಡಲು ಸಾಧ್ಯವಿಲ್ಲ. ವಲಸೆ ಕಾರ್ಮಿಕರಿಗಾಗಿ ರಚಿಸಲಾಗಿರುವ ಹಳೆಯ ಕಾನೂನುಗಳು ಅವರಿಗೆ ರಕ್ಷಣೆ ನೀಡುವುದಿಲ್ಲ. ಉದಾಹರಣೆಗೆ, ಈ ಕಾನೂನುಗಳು ಒಡಿಯಾ ಕಾರ್ಮಿಕರಿಗೆ ಸಹಾಯ ಮಾಡಲು ಆಂಧ್ರ ಪ್ರದೇಶದ ಕಾರ್ಮಿಕ ಇಲಾಖೆಯನ್ನು ಆಗ್ರಹಿಸುವುದಿಲ್ಲ. ಮತ್ತು ಒರಿಸ್ಸಾದ ಕಾರ್ಮಿಕ ಅಧಿಕಾರಿಗಳಿಗೆ ಆಂಧ್ರಪ್ರದೇಶದಲ್ಲಿ ಯಾವುದೇ ಅಧಿಕಾರವಿಲ್ಲ. ಗುತ್ತಿಗೆ ಕರಾರಿನ ಕಾರಣದಿಂದಾಗಿ, ಇಟ್ಟಿಗೆ ಗೂಡುಗಳಲ್ಲಿ ಕೆಲಸ ಮಾಡುವ ಅನೇಕ ಮಹಿಳೆಯರು ಮತ್ತು ಯುವತಿಯರು ಲೈಂಗಿಕ ದೌರ್ಜನ್ಯಕ್ಕೂ ಬಲಿಯಾಗುತ್ತಾರೆ.

ಈ ಒಂಟಿ ಮಹಿಳೆ ಮಣ‍್ಣು ಮತ್ತು ಕೆಸರಿನ ಮೂಲಕ ಸಾಗುತ್ತಿರುವ ರಸ್ತೆಯು ಹಾಗೂ ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ತೆರೆದ ಕಲ್ಲಿದ್ದಲು ಗಣಿಯ ಪಕ್ಕದ ಸಂಗ್ರಹಗಾರದ್ದು. ಈ ಪ್ರದೇಶದ ಇತರ ಅನೇಕ ಮಹಿಳೆಯರಂತೆ, ಅವರು ಈ ತ್ಯಾಜ್ಯದಿಂದ ತ್ಯಾಜ್ಯ ಕಲ್ಲಿದ್ದಲನ್ನು ಹೆಕ್ಕುತ್ತಾರೆ, ಇದನ್ನು ಒಂದಿಷ್ಟು ಹಣ ಗಳಿಸಲೆಂದು ಅವರು ಮನೆಗಳಿಗೆ ಉರುವಲಿಗೆಂದು ಮಾರುತ್ತಾರೆ. ಇಂತವರು ಇದರಲ್ಲಿನ ಕಲ್ಲಿದ್ದಲನ್ನು ಬೇರೆ ಮಾಡದಿದ್ದರೆ ಈ ಕಲ್ಲಿದ್ದಲು ಬಳಕೆಯಾಗದೆ ವ್ಯರ್ಥವಾಗಿಬಿಡುತ್ತದೆ. ಈ ಮೂಲಕ ರಾಷ್ಟ್ರಕ್ಕೆ ಈ ಮಹಿಳೆಯರು ಇಂಧನ ಉಳಿಸುವ ಕೆಲಸವನ್ನು ಮಾಡುತ್ತಿದ್ದಾರೆ, ಆದರೆ ಇದು ಕಾನೂನಿನ ದೃಷ್ಟಿಯಲ್ಲಿ ಅಪರಾಧವಾಗಿದೆ.

PHOTO • P. Sainath
PHOTO • P. Sainath

ಹೆಂಚು ತಯಾರಿಸುವ ಈ ಮಹಿಳೆ ಚತ್ತೀಸಗಢದ ಸುರ್ಗುಜಾದಲ್ಲಿ ನಿವಾಸಿ (ಬಲಕ್ಕೆ ಕೆಳಗೆ). ಸಾಲವನ್ನು ಮರುಪಾವತಿಸಲಾಗದ ಕಾರಣ ಇವರ ಕುಟುಂಬವು ಅಕ್ಷರಶಃ ತನ್ನ ತಲೆಯ ಮೇಲಿದ್ದ ಮಾಡನ್ನು ಕಳೆದುಕೊಂಡಿತು. ಛಾವಣಿಯಲ್ಲಿದ್ದ ಹೆಂಚುಗಳು ಮಾತ್ರವೇ ಸಾಲದ ಕಂತು ಕಟ್ಟಲು ಬೇಕಾಗುವಷ್ಟು ಹಣ ಸಂಗ್ರಹಿಸಲು ಅವರ ಬಳಿಯಿದ್ದ ವಸ್ತುವಾಗಿತ್ತು. ಆದ್ದರಿಂದ ಅವರು ಅದನ್ನೇ ಮಾರಿದರು. ಮತ್ತು ಈಗ ಅವರು ಹಳೆಯ ಹೆಂಚಿನ ಜಾಗದಲ್ಲಿ ಹೊದೆಸಲು ಹೊಸ ಹೆಂಚುಗಳನ್ನು ತಯಾರಿಸುತ್ತಿದ್ದಾರೆ.

ತಮಿಳುನಾಡಿನ ಪುದುಕೊಟ್ಟೈ ಮೂಲದ ಈ ಕಲ್ಲು ಒಡೆಯುವ ಮಹಿಳೆಯ ಕಥೆ ವಿಶಿಷ್ಟವಾಗಿದೆ. 1991ರಲ್ಲಿ, ಕ್ವಾರಿಗಳಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದ ಸುಮಾರು 4,000 ಬಡ ಮಹಿಳೆಯರು ಗಣಿಗಳನ್ನು ಸ್ವಾಧೀನಪಡಿಸಿಕೊಂಡರು. ಇದಕ್ಕೆ ಅಂದಿನ ಆಡಳಿತದ ಕೆಲವು ಆಮೂಲಾಗ್ರ ಚಳುವಳಿಗಳು ಕಾರಣ. ಮತ್ತು ಈ ನವಸಾಕ್ಷರ ಮಹಿಳೆಯರ ಸಂಘಟಿತ ಕ್ರಮವೇ ಅದನ್ನು ಸಾಕಾರಗೊಳಿಸಿತು. ಗಣಿಗಳಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯರ ಕುಟುಂಬಗಳು ನಾಟಕೀಯವಾಗಿ ಸುಧಾರಿಸಿದವು. ಈ ಹೊಸ ಮಾಲೀಕರ ಶ್ರಮದಿಂದ ಸರ್ಕಾರವೂ ಭಾರಿ ಲಾಭ ಗಳಿಸಿತು. ಆದರೆ, ಈ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ನಡೆಸುತ್ತಿರುವ ಗುತ್ತಿಗೆದಾರರಿಂದ ಈ ಪ್ರಕ್ರಿಯೆಗೆ ಅಡ್ಡಿಯಾಗಿದೆ. ಸಾಕಷ್ಟು ಹಾನಿ ಸಂಭವಿಸಿದೆ. ಈಗಲೂ ಅನೇಕ ಮಹಿಳೆಯರು ಉತ್ತಮ ಜೀವನದ ಭರವಸೆಯೊಂದಿಗೆ ತಮ್ಮ ಹೋರಾಟವನ್ನು ಮುಂದುವರೆಸಿದ್ದಾರೆ.

PHOTO • P. Sainath
PHOTO • P. Sainath

ಹಿನ್ನೆಲೆಯಲ್ಲಿ ಸೂರ್ಯ ಮುಳುಗುತ್ತಿದ್ದಾನೆ, ಈ ಮಹಿಳೆಯರು ಜಾರ್ಖಂಡ್‌ನ ಗೊಡ್ಡಾದಲ್ಲಿ ತೆರೆದ ಗಣಿಗಳ ಬಳಿಯ ತ್ಯಾಜ್ಯದ ದಿಬ್ಬಗಳಿಂದ ಹಿಂತಿರುಗುತ್ತಿದ್ದಾರೆ. ಹಗಲಿನಲ್ಲಿ ಎಷ್ಟು ಸಾಧ್ಯವೋ ಅಷ್ಟು ತ್ಯಾಜ್ಯ ಕಲ್ಲಿದ್ದಲನ್ನು ಸಂಗ್ರಹಿಸಿ ಮಳೆ ಬರುವ ಮುನ್ನ ಆ ಸ್ಥಳವನ್ನು ಬಿಡುತ್ತಾರೆ. ಒಂದೊಮ್ಮೆ ಮಳೆ ಬಂದರೆ ಕೆಸರು, ಮರಳಿನಲ್ಲಿ ಸಿಕ್ಕಿ ಹಾಕಿಕೊಂಡುಬಿಡುತ್ತಾರೆ. ಕಲ್ಲು ಮತ್ತು ಕಲ್ಲಿದ್ದಲು ಗಣಿಗಳಲ್ಲಿ ಕೆಲಸ ಮಾಡುವ ಮಹಿಳೆಯರ ಅಧಿಕೃತ ಸಂಖ್ಯೆಯನ್ನು ಹುಡುಕುವುದರಲ್ಲಿ ಅರ್ಥವಿಲ್ಲ. ಏಕೆಂದರೆ ಅನಧಿಕೃತ ಗಣಿಗಳಲ್ಲಿ ಮತ್ತು ಸುತ್ತಮುತ್ತ ಅಪಾಯಕಾರಿ ಕೆಲಸ ಮಾಡುವ ಅನೇಕ ಮಹಿಳೆಯರನ್ನು ಇದು ಒಳಗೊಂಡಿಲ್ಲ. ಕಸದ ರಾಶಿಯಿಂದ ಹಿಂದಿರುಗುವ ಈ ಮಹಿಳೆಯರಂತೆ ಅನೇಕರು ಲೆಕ್ಕದೊಳಗೆ ಬರುವುದಿಲ್ಲ. ಇವರು ದಿನವಿಡೀ ದುಡಿದು 10 ರೂಪಾಯಿ ಗಳಿಸಿದರೂ ಅದೇ ಅದೃಷ್ಟ!

ಅದೇ ಸಮಯದಲ್ಲಿ, ಮಹಿಳೆಯರು ಗಣಿ ಸ್ಫೋಟಗಳು, ವಿಷಕಾರಿ ಅನಿಲಗಳು, ಉತ್ತಮವಾದ ಧೂಳು ಮತ್ತು ಗಾಳಿಯಲ್ಲಿ ಇತರ ಮಾಲಿನ್ಯಕಾರಕಗಳ ಅಪಾಯವನ್ನು ಹೊಂದಿರುತ್ತಾರೆ. ಕೆಲವೊಮ್ಮೆ 120 ಟನ್ ಡಂಪರ್ ಟ್ರಕ್‌ಗಳು ಗಣಿಗಳ ಅಂಚಿನಲ್ಲಿ ನಿಲ್ಲಿಸಿ ಅಗೆದ ಮಣ್ಣನ್ನು ಸುರಿಯುತ್ತವೆ. ಈ ಮಣ್ಣಿನಲ್ಲಿ ಸಿಗುವ ತ್ಯಾಜ್ಯವನ್ನು ಸಂಗ್ರಹಿಸಲು ಹೆಣಗಾಡುವ ಕೆಲವು ಬಡ ಮಹಿಳೆಯರು ಅಂತಹ ಗುಡ್ಡಗಳ ಅಡಿಯಲ್ಲಿ ನಜ್ಜುಗುಜ್ಜಾಗುವ ಅಪಾಯವೂ ಇರುತ್ತದೆ.

PHOTO • P. Sainath

ಅನುವಾದ: ಶಂಕರ. ಎನ್. ಕೆಂಚನೂರು

پی سائی ناتھ ’پیپلز آرکائیو آف رورل انڈیا‘ کے بانی ایڈیٹر ہیں۔ وہ کئی دہائیوں تک دیہی ہندوستان کے رپورٹر رہے اور Everybody Loves a Good Drought اور The Last Heroes: Foot Soldiers of Indian Freedom کے مصنف ہیں۔

کے ذریعہ دیگر اسٹوریز پی۔ سائی ناتھ
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

کے ذریعہ دیگر اسٹوریز Shankar N. Kenchanuru