ವಾರಣಾಸಿ ಜಿಲ್ಲೆಯ ಅನೇಯ್ ಗ್ರಾಮದ ಸುದಾಮಾ ಆದಿವಾಸಿ ನೇರವಾಗಿ ಹೇಳುತ್ತಾರೆ, "ನನಗೆ ಆಯ್ಕೆಯಿದ್ದರೆ, ನಾನು ಎಂದೂ ಆಸ್ಪತ್ರೆಗೆ ಕಾಲಿಡುತ್ತಿರಲಿಲ್ಲ, ಅಲ್ಲಿ ನಮ್ಮನ್ನು ಪ್ರಾಣಿಗಳಂತೆ ನೋಡಲಾಗುತ್ತದೆ, ವೈದ್ಯರು ನಮ್ಮನ್ನು ತಪಾಸಣೆ ಮಾಡುವುದಿಲ್ಲ ಮತ್ತು ನರ್ಸ್‌ಗಳು ಪರಸ್ಪರ , "ಈ ಜನರು ಹೇಗೆ ಬದುಕುತ್ತಾರೆ! ಈ ಗಬ್ಬು ಜನರು ಎಲ್ಲಿಂದ ಬರುತ್ತಾರೆ?ʼ ಎಂದು ತಮ್ಮಲ್ಲೇ ಮಾತನಾಡಿಕೊಳ್ಳುತ್ತಾರೆ." ಸುದಾಮಾ ಅವರು ಮನೆಯಲ್ಲಿ ತನ್ನ ಮೊದಲ ಐದು ಮಕ್ಕಳಿಗೆ ಹೇಗೆ, ಯಾವಾಗ ಮತ್ತು ಏಕೆ ಜನ್ಮ ನೀಡಿದರು ಎಂಬುದನ್ನು ನೆನಪಿಸಿಕೊಳ್ಳುತ್ತಾ ಈ ಎಲ್ಲಾ ವಿಷಯಗಳನ್ನು ಹೇಳುತ್ತಾರೆ.

ಕಳೆದ 19 ವರ್ಷಗಳಲ್ಲಿ ಸುದಾಮಾ ಅವರಿಗೆ ಒಂಬತ್ತು ಮಕ್ಕಳಿದ್ದಾರೆ. 49 ವರ್ಷ ವಯಸ್ಸಾಗಿದ್ದರೂ, ಅವರಿಗೆ ಮುಟ್ಟು ನಿಂತಿಲ್ಲ.

ಅವರು ಬರಗಾಂವ್ ಬ್ಲಾಕ್‌ನಲ್ಲಿರುವ ಗ್ರಾಮದ ಒಂದು ತುದಿಯಲ್ಲಿರುವ 57 ಕುಟುಂಬಗಳ ಮುಸಹರ್ ಬಸ್ತಿಯಲ್ಲಿ ವಾಸಿಸುತ್ತಿದ್ದಾರೆ. ಆ ನೆಲೆಯ ಇನ್ನೊಂದು ಬದಿಯಲ್ಲಿ ಮೇಲ್ಜಾತಿಯ ಠಾಕೂರರು, ಬ್ರಾಹ್ಮಣರು ಮತ್ತು ಗುಪ್ತರ ಮನೆಗಳಿವೆ. ಅಲ್ಲದೆ, ಇತರ ಪರಿಶಿಷ್ಟ ಜಾತಿಗಳಿಗೆ (ಚಮಾರ್, ಧಾರ್ಕರ್, ಪಾಸಿ) ಸೇರಿದ ಕೆಲವು ಕುಟುಂಬಗಳು ಮತ್ತು ಮುಸ್ಲಿಮರ ಕೆಲವು ಮನೆಗಳಿವೆ. ಈ ಸಮುದಾಯಗಳಿಗೆ ಸಂಬಂಧಿಸಿದ ಅನೇಕ ರೀತಿಯ ಸ್ಟೀರಿಯೊ ಟೈಪ್‌ಗಳು ಬಸ್ತಿಗಳಲ್ಲಿ ಕಂಡುಬರುತ್ತವೆ, ಉದಾಹರಣೆಗೆ ದೇಹದ ಅರ್ಧ ಭಾಗವಷ್ಟೇ ಬಟ್ಟೆ ತೊಟ್ಟ ಧೂಳಿನಿಂದ ಲೇಪಿತವಾದ ಮಕ್ಕಳು, ಅವರ ಸುತ್ತಲೂ ಝೇಂಕರಿಸುವ ನೊಣಗಳು, ಆಹಾರ ಅಂಟಿರುವ ಮುಖಗಳು ಮತ್ತು ಎಲ್ಲಾ ರೀತಿಯ ಶುಚಿತ್ವದ ಕೊರತೆ. ಆದರೆ, ಈ ಇಡೀ ದೃಶ್ಯವನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ಬೇರೆಯದೇ ಕಥೆ ತಿಳಿಯುತ್ತದೆ.

ಉತ್ತರ ಪ್ರದೇಶದಲ್ಲಿ ಪರಿಶಿಷ್ಟ ಜಾತಿಯಡಿ  ಪಟ್ಟಿ ಮಾಡಲಾಗಿರುವ ಮುಸಹರ್‌ ಸಮುದಾಯದವರು ಮೂಲತಃ ಕೃಷಿ ಮತ್ತು ಅದರ ಉತ್ಪನ್ನಗಳಿಗೆ ಭಾರೀ ಹಾನಿಯುಂಟುಮಾಡುವ ಇಲಿಗಳನ್ನು ಹಿಡಿಯುವಲ್ಲಿ ನಿಪುಣರಾಗಿದ್ದರು. ಕಾಲಾನಂತರದಲ್ಲಿ, ಅವರ ಈ ವ್ಯವಹಾರವನ್ನು ತಿರಸ್ಕಾರದಿಂದ ನೋಡತೊಡಗಲಾಯಿತು. ಇದರೊಂದಿಗೆ, ಜನರು ಅವರನ್ನು 'ಇಲಿ ತಿನ್ನುವವರು' ​​ಎಂದು ತಿಳಿದುಕೊಳ್ಳಲು ಪ್ರಾರಂಭಿಸಿದರು ಮತ್ತು ಇದು 'ಮುಸಾಹರ್' ಪದದ ಅರ್ಥವೂ ಸಹ ಇದೇ ಆಗಿದೆ. ಈ ಸಮುದಾಯವು ಇತರ ಸಮುದಾಯಗಳ ಬಹಿಷ್ಕಾರ ಮತ್ತು ಅವಮಾನವನ್ನು ಎದುರಿಸಬೇಕಾಗಿದೆ ಮತ್ತು ಸರ್ಕಾರಗಳು ಅವರನ್ನು ನಿರ್ಲಕ್ಷಿಸಿವೆ, ಇದರಿಂದಾಗಿ ಈ ಸಮುದಾಯವು ಎಲ್ಲಾ ರೀತಿಯ ಅಭಾವಗಳೊಡನೆ ಹೋರಾಡುತ್ತಿದೆ. ನೆರೆಯ ರಾಜ್ಯವಾದ ಬಿಹಾರದಲ್ಲಿ ಅವರನ್ನು ' ಮಹಾದಲಿತ್ ' ವರ್ಗದಲ್ಲಿ ಸೇರಿಸಲಾಗಿದೆ. ಈ ಸಮುದಾಯಗಳು ಪರಿಶಿಷ್ಟ ಜಾತಿಗಳಲ್ಲಿ ಅತ್ಯಂತ ಬಡವರಾಗಿದ್ದು, ಅವರೂ ಅತಿ ಹೆಚ್ಚು ತಾರತಮ್ಯವನ್ನು ಎದುರಿಸುತ್ತಿದ್ದಾರೆ.

Sudama Adivasi and her children, on a cot outside their hut in Aneai village. 'We have seen times when our community was not supposed to have such cots in our huts. They were meant for the upper castes only,' says Sudama
PHOTO • Jigyasa Mishra

ಸುದಾಮಾ ಆದಿವಾಸಿ ತಮ್ಮ ಮಕ್ಕಳೊಂದಿಗೆ ಮಂಚದ ಮೇಲೆ ಕುಳಿತಿರುವುದು. 'ನಮ್ಮ ಸಮುದಾಯಕ್ಕೆ ಮಂಚಗಳನ್ನು ಹೊಂದಲು ಅನುಮತಿಯಿದ್ದಿಲ್ಲದ ಕಾಲವನ್ನು ಸಹ ನಾವು ನೋಡಿದ್ದೇವೆ. ಮೇಲ್ವರ್ಗದವರಿಗೆ ಮಾತ್ರವೇ ಈ ಹಕ್ಕಿತ್ತು'

ಅಪೌಷ್ಟಿಕತೆಯ ಆಗರವಾಗಿರುವ ಕುಗ್ರಾಮವಾದ ಅನೆಯ್‌ನ  ಮಧ್ಯದಲ್ಲಿ ತಮ್ಮ ಹುಲ್ಲಿನ ಗುಡಿಸಲಿನ ಹೊರಗೆ ಸುದಾಮಾ ಮಂಚದ ಮೇಲೆ ಕುಳಿತಿದ್ದರು (ಈ ಊರನ್ನು ಘೆಟ್ಟೋ ಎಂದು ಕರೆಯುವುದು ಹೆಚ್ಚು ಸೂಕ್ತವೆನ್ನಿಸುತ್ತದೆ). ಅವರು ತಾನು ಕುಳಿತಿರುವ ಮಂಚದತ್ತ ಕೈತೋರಿಸಿ, “ನಮ್ಮ ಸಮುದಾಯಕ್ಕೆ ಚಾರ್ಪಾಯಿ ಹಾಕಲು ಅನುಮತಿ ಇಲ್ಲದಿದ್ದ ಕಾಲವನ್ನು ಸಹ ನಾವು ನೋಡಿದ್ದೇವೆ, ಮೇಲ್ವರ್ಗದವರಿಗೆ ಮಾತ್ರ ಈ ಹಕ್ಕಿತ್ತು, ನಾವು  ಆಗೆಲ್ಲ ಹೀಗೆ ಮಂಚದ ಮೇಲೆ ಕುಳಿತಿರುವುದನ್ನು ಠಾಕೂರ್‌ ಜಾತಿಯವರು ನೋಡಿದ್ದರೆ ಒಂದೆರಡು ಮಾತು ಅನ್ನುತ್ತಿರಲಿಲ್ಲ , ಹಾಗಿತ್ತು ಆಗಿನ ಪರಿಸ್ಥಿತಿ.”

ಇತ್ತೀಚಿನ ದಿನಗಳಲ್ಲಿ ಜನರು ಜಾತಿಯನ್ನು ಅಷ್ಟಾಗಿ ನಂಬುವುದಿಲ್ಲವೆಂದು ಹೇಳಲಾಗುತ್ತದೆಯಾದರೂ, ತಮ್ಮ ಬದುಕು ಇನ್ನೂ ಅದರ ಹಿಡಿತದಿಂದ ಮುಕ್ತವಾಗಿಲ್ಲವೆಂದು ಅವರು ಹೇಳುತ್ತಾರೆ. "ಈಗ [ಇಲ್ಲಿ] ಪ್ರತಿ ಮನೆಯಲ್ಲೂ ಮಂಚಗಳಿವೆ, ಮತ್ತು ಜನರು ಅವುಗಳ ಮೇಲೆ ಕುಳಿತುಕೊಳ್ಳುತ್ತಾರೆ." ಅದೇನೆ ಇದ್ದರೂ, ಮಹಿಳೆಯರಿಗೆ ಈಗಲೂ ಈ ಹಕ್ಕು ಲಭ್ಯವಾಗಿಲ್ಲ: "ನಮ್ಮ ಹಿರಿಯರು [ಅತ್ತೆ-ಮಾವಂದಿರು] ಇರುವಾಗ, ಮಹಿಳೆಯರು ಈಗಲೂ ಹಾಸಿಗೆಯ ಮೇಲೆ ಕುಳಿತುಕೊಳ್ಳಲು ಸಾಧ್ಯವಿಲ್ಲ. ಒಮ್ಮೆ ನಾನು ಹಾಗೆ ಮಂಚದ ಮೇಲೆ ಕುಳಿತಿದ್ದಾಗ ಅತ್ತೆ ನನ್ನ ಮೇಲೆ ನೆರೆಹೊರೆಯವರೆದುರು ಕೂಗಾಡಿದ್ದರು."

ಸುದಾಮಾರ ಮೂವರು ಮಕ್ಕಳು ಮಂಚದ ಸುತ್ತಲೂ ಓಡುತ್ತಿದ್ದರೆ, ನಾಲ್ಕನೆ ಮಗುವನ್ನು ತನ್ನ ತೋಳುಗಳಲ್ಲಿಎತ್ತಿಕೊಂಡು ಕುಳಿತಿದ್ದರು. ಅವರಿಗೆ ಎಷ್ಟು ಮಕ್ಕಳೆಂದು ನಾನು ಕೇಳಿದಾಗ, ಅವರು ಒಂಚೂರು ಗಲಿಬಿಲಿಗೊಂಡರು. ಮೊದಲು  ಏಳು ಎಂದರು, ನಂತರ ತನ್ನನ್ನು ತಾನು ಸಂಭಾಳಿಸಿಕೊಂಡರು, ಏಕೆಂದರೆ ಅವರು ಈಗ ತನ್ನ ಅತ್ತೆಯ ಮನೆಯಲ್ಲಿ ವಾಸಿಸುತ್ತಿರುವ ತನ್ನ ವಿವಾಹಿತ ಮಗಳನ್ನು ಲೆಕ್ಕದಲ್ಲಿ ಸೇರಿಸಿಕೊಂಡಿರಲಿಲ್ಲ. ಜೊತೆಗೆ ಕಳೆದ ವರ್ಷ ಸತ್ತ ತನ್ನ ಮಗುವನ್ನು ನೆನಪಿಸಿಕೊಂಡರು. ಕೊನೆಗೆ, ಅವಳು ತನ್ನ ಬೆರಳುಗಳನ್ನು ಎಣಿಸಲು ಪ್ರಾರಂಭಿಸಿ: "19 ವರ್ಷ ವಯಸ್ಸಿನ ರಾಮ್ ಬಾಲಕ್, ಸಾಧನಾ 17 ವರ್ಷ, ಬಿಕಾಶ್ 13, ಶಿವ ಬಾಲಕ್ 9, ಅರ್ಪಿತಾ 3, ಆದಿತ್ಯ 4 ಮತ್ತು ಕೊನೆಯ ಅನುಜ್‌ಗೆ ಈಗ ಒಂದೂವರೆ ವರ್ಷ."

ನಂತರ ಗಾಳಿಯಲ್ಲಿ ಕೈಯಾಡಿಸುತ್ತಾ, ಸುದಾಮಾ ತನ್ನ ಮಗಳಿಗೆ ಅಕ್ಕಪಕ್ಕದ ಕೆಲವು ಮಹಿಳೆಯರನ್ನು ನಮ್ಮ ಬಳಿಗೆ ಕರೆತರುವಂತೆ ಹೇಳುತ್ತಾ, "ಅರೇ ಜಾವೋ, ಔರ್‌ ಜಾಕೆ ಚಾಚಿ ಲೋಗೋಂ ಕೋ ಬುಲಾ ಲಾವೋ." ಎಂದ ಅವರು ಮಾತು ಮುಂದುವರೆಸಿದರು, “ನನಗೆ ಮದುವೆಯಾದಾಗ 20 ವರ್ಷದವಳಿದ್ದೆ. ನನಗೆ ಮೂರು ಅಥವಾ ನಾಲ್ಕು ಮಕ್ಕಳಾಗುವ ತನಕ ಕಾಂಡೋಮ್ಗಳು ಅಥವಾ ಆಪರೇಶನ್ (ಸ್ಟೆರಿಲೈಜೇಷನ್ / ಸಂತಾನಹರಣ ವಿಧಾನಗಳು) ಕುರಿತು ನನಗೆ ಏನೂ ತಿಳಿದಿರಲಿಲ್ಲ. ನನಗೆ ಅದರ ಬಗ್ಗೆ ಗೊತ್ತಾದ ನಂಥರವೂ, ಅದರ ಉಪಯೋಗವನ್ನು ಪಡೆದುಕೊ‍ಳ್ಳುವಷ್ಟು ಧೈರ್ಯವನ್ನು ಒಟ್ಟುಗೂಡಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಆಪರೇಷನ್ ನೋವಿಗೆ ನಾನು ಹೆದರುತ್ತಿದ್ದೆ. ಸುಮಾರು 10 ಕಿ.ಮೀ ದೂರದಲ್ಲಿರುವ ಬರಾಗಾಂವ್ ಬ್ಲಾಕ್ ಹೆಡ್ ಕ್ವಾರ್ಟರ್ಸ್ ನಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ (ಪಿಎಚ್ ಸಿ) ಆಪರೇಷನ್‌ಗೆ ಹೋಗಬೇಕಿತ್ತು. ಅಂತಹ ಆಪರೇಶನ್‌ಗಳಿಗೆ ಬೇಕಾದ ಸೌಲಭ್ಯಗಳನ್ನು ಸ್ಥಳೀಯ ಪಿಎಚ್‌ಸಿಗಳು ಹೊಂದಿಲ್ಲ.

Sudama with her youngest child, Anuj.
PHOTO • Jigyasa Mishra
She cooks on a mud chulha in her hut. Most of the family’s meals comprise of rice with some salt or oil
PHOTO • Jigyasa Mishra

ಎಡ: ಸುದಾಮಾ ತನ್ನ ಕಿರಿಯ ಮಗ ಅನುಜ್ ಜೊತೆ. ಬಲ: ಅವರು ತನ್ನ ಗುಡಿಸಲಿನಲ್ಲಿ ಮಣ್ಣಿನ ಒಲೆಯ ಮೇಲೆ ಆಹಾರವನ್ನು ಬೇಯಿಸುತ್ತಾರೆ. ಮನೆಯವರು ಹೆಚ್ಚಿನ ಸಮಯ ಊಟದ ಹೆಸರಲ್ಲಿ ಅನ್ನವನ್ನು ಸ್ವಲ್ಪ ಉಪ್ಪು ಅಥವಾ ಎಣ್ಣೆ ಹಾಕಿ ತಿನ್ನುತ್ತಾರೆ

ಸುದಾಮಾ ಮನೆವಾರ್ತೆ ನೋಡಿಕೊಳ್ಳುತ್ತಾರೆ, ಅವರ ಗಂಡ ರಾಮ್ ಬಹದ್ದೂರ್, 57, ಕೃಷಿ ಕಾರ್ಮಿಕ. ಸುದಾಮಾ ಹೇಳುತ್ತಾರೆ, “ಈಗ ಅವರು ಗದ್ದೆಗೆ ಕೆಲಸಕ್ಕೆ ಹೋಗಿದ್ದಾರೆ. ಇದು ಬಿತ್ತನೆಯ ಕಾಲ. ಸುಗ್ಗಿಯ ನಂತರ, ಅವರು ಇಲ್ಲಿನ ಇತರ ಅನೇಕರಂತೆ, ನಿರ್ಮಾಣ ಸ್ಥಳಗಳಲ್ಲಿ ಕಾರ್ಮಿಕನಾಗಿ ಕೆಲಸ ಮಾಡಲು ಹತ್ತಿರದ ನಗರಕ್ಕೆ ವಲಸೆ ಹೋಗುತ್ತಾರೆ.”

ಇಲ್ಲಿನ ಮುಸಾಹರ್ ಸಮುದಾಯದ ಹೆಚ್ಚಿನ ಪುರುಷರು ಭೂರಹಿತ ಕೂಲಿ ಕಾರ್ಮಿಕರು, ಆದರೆ ಕೆಲವು ಕುಟುಂಬಗಳು ಅಧಿಯಾ, ತೀಸ್ರಿಯಾ ಅಥವಾ ಚೌತಿಯಾ (ಬೇರೆಯವರ ಹೊಲದಲ್ಲಿ ಕೆಲಸ ಮಾಡಿ ಒಪ್ಪಂದದ ಪ್ರಕಾರ ಅರ್ಧ, ಮೂರನೇ ಅಥವಾ ಕಾಲು ಭಾಗ) ಆಧಾರದ ಮೇಲೆ ಕೃಷಿ ಮಾಡುತ್ತಾರೆ. ಸುದಾಮಾರ ಪತಿ ತೀಸ್ರಿಯಾ ಆಧಾರದ ಮೇಲೆ ಕೃಷಿ ಕಾರ್ಮಿಕನಾಗಿ ಕೆಲಸ ಮಾಡುತ್ತಾರೆ ಮತ್ತು ಅದರಿಂದ ಬರುವ ಉತ್ಪನ್ನದ ಒಂದು ಭಾಗವನ್ನು ತನ್ನ ಕುಟುಂಬಕ್ಕೆ ಅಗತ್ಯ ವಸ್ತುಗಳನ್ನು ಖರೀದಿಸಲು ಮಾರಾಟ ಮಾಡುತ್ತಾರೆ.

ಇಂದು ಸುದಾಮಾ ಮಧ್ಯಾಹ್ನದ ಊಟಕ್ಕೆ ಅನ್ನ ಮಾಡಿದ್ರು. ಗುಡಿಸಲೊಳಗೆ ಮಣ್ಣಿನ ಒಲೆಯ ಮೇಲೆ ಅನ್ನದ ಮಡಕೆ ಇಟ್ಟಿದ್ದರು. ಊಟದ ಹೆಸರಲ್ಲಿ ಈ ಮನೆಯವರು ಅನ್ನಕ್ಕೆ ಸ್ವಲ್ಪ ಉಪ್ಪು ಅಥವಾ ಎಣ್ಣೆ ಹಾಕಿ ತಿನ್ನುತ್ತಾರೆ. ತುಂಬಾ ಒಳ್ಳೆಯ ದಿನ ಬಂದರೆ ತಟ್ಟೆಯಲ್ಲಿ ಉಪ್ಪು, ಎಣ್ಣೆಯ ಬದಲು ದಾಲ್, ತರಕಾರಿ ಅಥವಾ ಚಿಕನ್ ಇರುತ್ತವೆ. ಹಾಗೇ, ರೊಟ್ಟಿಯನ್ನು ವಾರಕ್ಕೊಮ್ಮೆ ಮಾತ್ರ ಮಾಡಲಾಗುತ್ತದೆ.

ಅವರ ಮಗಳು ಸಾಧನಾ, ತನ್ನ ಒಡಹುಟ್ಟಿದವರಿಗೆ ಸ್ಟೀಲ್ ಪ್ಲೇಟುಗಳಿಗೆ ಆಹಾರವನ್ನು ಬಡಿಸುತ್ತಾ, "ನಾವು ಮಾವಿನ ಉಪ್ಪಿನಕಾಯಿಯೊಂದಿಗೆ ಅನ್ನವನ್ನು ತಿನ್ನುತ್ತೇವೆ" ಎಂದು ಹೇಳುತ್ತಾರೆ. ಸಾಧನಾ ತನ್ನ ತಟ್ಟೆಯಿಂದ ಕಿರಿಯ ಮಗು ಅನುಜನಿಗೆ ತಿನ್ನಿಸಿದರೆ; ರಾಮ್, ಬಾಲಕ್ ಮತ್ತು ಬಿಕಾಶ್ ಒಂದೇ ತಟ್ಟೆಯಲ್ಲಿ ತಿನ್ನುತ್ತಾರೆ.

The caste system continues to have a hold on their lives, says Sudama.
PHOTO • Jigyasa Mishra
PHOTO • Jigyasa Mishra

ಎಡ: ಸುದಾಮಾ ಹೇಳುವಂತೆ ಅವರ ಬದುಕು ಇನ್ನೂ ಜಾತಿ ವ್ಯವಸ್ಥೆಯ ಕಪಿಮುಷ್ಠಿಯಲ್ಲಿ ಸಿಲುಕಿಕೊಂಡಿದೆ. ಬಲ: ಇಲ್ಲಿನ ಮುಸಹರ್ ಬಡಾವಣೆಯಲ್ಲಿ ಕೆಲಸ ಮಾಡುತ್ತಿರುವ ಮಾನವ ಹಕ್ಕುಗಳ ಕಾರ್ಯಕರ್ತೆ ಸಂಧ್ಯಾ, ಇಲ್ಲಿನ ಪ್ರತಿಯೊಬ್ಬ ಮಹಿಳೆಯೂ ರಕ್ತಹೀನತೆಗೆ ಬಲಿಯಾಗಿದ್ದಾಳೆ ಎಂದು ವಿವರಿಸುತ್ತಾರೆ

ಅಕ್ಕಪಕ್ಕದ ಕೆಲವು ಹೆಂಗಸರು ಅಷ್ಟೊತ್ತಿಗಾಗಲೇ ನಮ್ಮ ಬಳಿ ಬಂದು ಸೇರಿದ್ದರು. ಅವರಲ್ಲಿ ಒಬ್ಬರಾದ 32 ವರ್ಷದ ಸಂಧ್ಯಾ ಅವರು ಕಳೆದ ಐದು ವರ್ಷಗಳಿಂದ ಮಾನವ ಹಕ್ಕುಗಳ ಸಾರ್ವಜನಿಕ ಮೇಲ್ವಿಚಾರಣಾ ಸಮಿತಿಯ ಸದಸ್ಯರಾಗಿದ್ದಾರೆ. ಸಂಧ್ಯಾ ರಕ್ತಹೀನತೆಯ ವ್ಯಾಪಕ ಸಮಸ್ಯೆಯ ಕುರಿತು ಹೇಳುತ್ತಾ ಮಾತುಕತೆಯನ್ನು ಪ್ರಾರಂಭಿಸಿದರು. ಆದಾಗ್ಯೂ, 2015-16ರ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ-4 ( NFHS-4 ) ಉತ್ತರ ಪ್ರದೇಶದ 52 ಪ್ರತಿಶತ ಮಹಿಳೆಯರು ರಕ್ತಹೀನತೆಯಿಂದ ಬಳಲುತ್ತಿದ್ದಾರೆ ಎಂದು ಹೇಳುತ್ತದೆ. ಆನೆಯ್‌ನ ಶೇ.100ರಷ್ಟು ಮಹಿಳೆಯರು ಮಧ್ಯಮ ಅಥವಾ ತೀವ್ರ ರಕ್ತಹೀನತೆಯಿಂದ ಬಳಲುತ್ತಿದ್ದಾರೆ ಎನ್ನುತ್ತಾರೆ ಸಂಧ್ಯಾ.

ಸಂಧ್ಯಾ ಮುಂದುವರೆದು ಹೇಳುತ್ತಾರೆ, “ನಾವು ಇತ್ತೀಚೆಗೆ ಈ ಗ್ರಾಮದ ಎಲ್ಲಾ ಮಹಿಳೆಯರ ಪೌಷ್ಟಿಕಾಂಶ-ಮ್ಯಾಪಿಂಗ್ [ಪೌಷ್ಟಿಕ ಮೌಲ್ಯಮಾಪನ] ಮಾಡಿದ್ದೇವೆ ಮತ್ತು ಅವರಲ್ಲಿ ಯಾರೊಬ್ಬರೂ 10 g/dL.ಗಿಂತ ಹೆಚ್ಚಿನ ಹಿಮೋಗ್ಲೋಬಿನ್ ಹೊಂದಿಲ್ಲ ಎಂದು ಫಲಿತಾಂಶದಲ್ಲಿ ತಿಳಿದುಬಂದಿದೆ. ಅವರಲ್ಲಿ ಪ್ರತಿಯೊಬ್ಬರೂ ರಕ್ತಹೀನತೆಗೆ ಒಳಗಾಗಿದ್ದಾರೆ. ಇದಲ್ಲದೆ, ಲ್ಯುಕೋರಿಯಾ ಮತ್ತು ಕ್ಯಾಲ್ಸಿಯಂ ಕೊರತೆಯು ಇಲ್ಲಿನ ಮಹಿಳೆಯರಲ್ಲಿನ ಇತರ ಸಾಮಾನ್ಯ ಸಮಸ್ಯೆಗಳಾಗಿವೆ.

ಈ ಆರೋಗ್ಯ ಸಮಸ್ಯೆಗಳು ಮತ್ತು ನ್ಯೂನತೆಗಳ ಜೊತೆಗೆ, ಜನರು ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಮೇಲಿನ ನಂಬಿಕೆಯನ್ನು ಕಳೆದುಕೊಂಡಿದ್ದಾರೆ. ಆರೋಗ್ಯ ಸಂಸ್ಥೆಗಳಲ್ಲಿ ಅವರಿಗೆ ಅತ್ಯಂತ ಕಳಪೆ ಸೇವೆಗಳನ್ನು ನೀಡಲಾಗುತ್ತದೆ. ಹೀಗಾಗಿ ತುರ್ತು ಪರಿಸ್ಥಿತಿಯ ಹೊರತು ಮಹಿಳೆಯರು ಆಸ್ಪತ್ರೆಗೆ ಹೋಗುವುದಿಲ್ಲ. ಚಿಕಿತ್ಸಾಲಯಕ್ಕೆ ಹೋಗಲು ಇರುವ ಭಯದ ಬಗ್ಗೆ ಸುದಾಮಾ ಹೇಳುತ್ತಾರೆ, “ನನ್ನ ಮೊದಲ ಐದು ಹೆರಿಗೆಗಳು ಮನೆಯಲ್ಲಿಯೇ ನಡೆದವು. ನಂತರ ಆಶಾ [ಮಾನ್ಯತೆ ಪಡೆದ ಸಾಮಾಜಿಕ ಆರೋಗ್ಯ ಕಾರ್ಯಕರ್ತೆ] ನನ್ನನ್ನು ಆಸ್ಪತ್ರೆಗೆ ಕರೆದೊಯ್ಯಲು ಪ್ರಾರಂಭಿಸಿದರು.

ಸುದಾಮಾ ಅವರ ನೆರೆಯವರಾದ 47 ವರ್ಷದ ದುರ್ಗಮತಿ ಆದಿವಾಸಿ ಹೇಳುತ್ತಾರೆ, “ವೈದ್ಯರು ನಮ್ಮ ವಿರುದ್ಧ ತಾರತಮ್ಯ ಮಾಡುತ್ತಾರೆ. ಆದರೆ ಇದು ಹೊಸದೇನಲ್ಲ, ಮತ್ತು ನಿಜವಾದ ಸವಾಲು ಮನೆಯಿಂದಲೇ ಪ್ರಾರಂಭವಾಗುತ್ತದೆ. ಸರ್ಕಾರ, ವೈದ್ಯರು ಮತ್ತು ನಮ್ಮ ಗಂಡಂದಿರಿಂದ ನಮಗೆ ಅವಮಾನವಾಗಿದೆ. ಅವರಿಗೆ [ಪುರುಷರಿಗೆ] ದೈಹಿಕ ಆನಂದವನ್ನು ಹೇಗೆ ಪಡೆಯುವುದು ಎಂದು ಮಾತ್ರ ಗೊತ್ತು, ನಂತರ ತಾನು ಏನೂ ಮಾಡಬೇಕಿಲ್ಲ. ಕುಟುಂಬವನ್ನು ಪೋಷಿಸುವುದು ಮಾತ್ರ ತಮ್ಮ ಜವಾಬ್ದಾರಿ ಎಂದು ಭಾವಿಸುತ್ತಾರೆ. ಉಳಿದ ಕೆಲಸ ಮಹಿಳೆಯರ ಜವಾಬ್ದಾರಿ. ಹೀಗೆ ಹೇಳುತ್ತಾ ದುರ್ಗಮತಿ ವ್ಯಾಕುಗೊಳ್ಳುತ್ತಾರೆ.

The lead illustration by Jigyasa Mishra is inspired by the Patachitra painting tradition.

ಈ ಆರೋಗ್ಯ ಸಮಸ್ಯೆಗಳು ಮತ್ತು ನ್ಯೂನತೆಗಳ ಜೊತೆಗೆ, ಜನರು ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಮೇಲಿನ ನಂಬಿಕೆಯನ್ನು ಕಳೆದುಕೊಂಡಿದ್ದಾರೆ. ಆರೋಗ್ಯ ಸಂಸ್ಥೆಗಳಲ್ಲಿ ಅವರಿಗೆ ಅತ್ಯಂತ ಕಳಪೆ ದರ್ಜೆಯ ಸೇವೆಗಳನ್ನು ನೀಡಲಾಗುತ್ತದೆ. ಹೀಗಾಗಿ ತುರ್ತು ಪರಿಸ್ಥಿತಿಯ ಹೊರತು ಮಹಿಳೆಯರು ಆಸ್ಪತ್ರೆಗೆ ಹೋಗುವುದಿಲ್ಲ

45ರ ಹರೆಯದ ಮನೋರಮಾ ಸಿಂಗ್, “ಹರ್ ಬಿರಾದರಿ ಮೇ ಮಹಿಳಾ ಹೀ ಆಪರೇಶನ್ ಕರಾತಿ ಹೈ [ಪ್ರತಿಯೊಂದು ಸಮುದಾಯದಲ್ಲಿಯೂ ಮಹಿಳೆಯೇ ಆಪರೇಷನ್ (ಟ್ಯೂಬೆಕ್ಟಮಿ) ಮಾಡಿಸಿಕೊಳ್ಳುತ್ತಾಳೆ”ಎಂದು ಹೇಳುತ್ತಾರೆ. ಮನೋರಮಾ ಆಶಾ ಕಾರ್ಯಕರ್ತೆಯಾಗಿದ್ದು, ಕಬ್ಬಿಣದ ಅಂಶವುಳ್ಳ ಮಾತ್ರೆಗಳನ್ನು ವಿತರಿಸಲು ಬಂದಿದ್ದರು. "ಇಡೀ ಹಳ್ಳಿ ಸುತ್ತಿ - ಸಂತಾನಹರಣ ಮಾಡಿಸಿಕೊಂಡ ಒಬ್ಬನೇ ಒಬ್ಬ ಗಂಡಸು ಸಿಗುವುದಿಲ್ಲ. ಮಗುವಿಗೆ ಜನ್ಮ ನೀಡುವುದು ಮತ್ತು ಆಪರೇಷನ್ ಮಾಡಿಸುವುದು ಮಾತ್ರ ಹೆಣ್ಣಿನ ಕೆಲಸ ಹೀಗೆಕೆಂದು ದೇವರೇ ಬಲ್ಲ" ಎಂದು ಅವರು ಹೇಳುತ್ತಾರೆ. 2019-21ರ NFHS-5 ವಾರಣಾಸಿಯಲ್ಲಿ ಕೇವಲ 0.1 ಶೇಕಡಾ ಪುರುಷರು ಮಾತ್ರ ಸ್ಟೆರಿಲೈಸೇಷನ್‌ಗೆ ಒಳಗಾಗಿದ್ದಾರೆ ಎಂದು ತೋರಿಸುತ್ತದೆ, ಆದರೆ ಮಹಿಳೆಯರ ಸಂಖ್ಯೆ 23.9 ಶೇಕಡಾ.

NFHS-4 ಸಹ ಇದನ್ನು ದೃಢಪಡಿಸಿದೆ: "ಉತ್ತರ ಪ್ರದೇಶದಲ್ಲಿ 15-49 ವಯಸ್ಸಿನ ಸುಮಾರು 38 ಪ್ರತಿಶತ ಪುರುಷರು ಗರ್ಭನಿರೋಧಕವನ್ನು ತೆಗೆದುಕೊಳ್ಳುವುದು ಮಹಿಳೆಯರ ಕೆಲಸ ಮತ್ತು ಪುರುಷರು ಅದರ ಬಗ್ಗೆ ಚಿಂತಿಸಬೇಕಾಗಿಲ್ಲ ಎಂದು ನಂಬುತ್ತಾರೆ."

ಸಂಧ್ಯಾ ಹಳ್ಳಿಯಲ್ಲಿ ತನ್ನ ಕೆಲಸದ ಆಧಾರದ ಮೇಲೆ ಅದೇ ಅಭಿಪ್ರಾಯವನ್ನು ನೀಡುತ್ತಾರೆ. “ನಾವು ಅವರಿಗೆ [ಪುರುಷರಿಗೆ] ಕುಟುಂಬ ಯೋಜನೆ ಮತ್ತು ಕಾಂಡೋಮ್‌ಗಳನ್ನು ವಿತರಿಸುವ ಪ್ರಾಮುಖ್ಯತೆಯ ಬಗ್ಗೆ ಸಕ್ರಿಯವಾಗಿ ಶಿಕ್ಷಣ ನೀಡುತ್ತಿದ್ದೇವೆ. ಹೆಚ್ಚಿನ ಸಂದರ್ಭಗಳಲ್ಲಿ, ಪುರುಷರು ತಮ್ಮ ಹೆಂಡತಿಯರು ಆಗ್ರಹಿಸಿದರೂ ಕಾಂಡೋಮ್ಗಳನ್ನು ಬಳಸಲು ಸಿದ್ಧರಿರುವುದಿಲ್ಲ. ಇದಲ್ಲದೆ, ಕುಟುಂಬ ಮತ್ತು ಪತಿ ಬಯಸಿದಾಗ ಮಾತ್ರ ಮಕ್ಕಳನ್ನು ಹೆರುವುದು ನಿಲ್ಲುತ್ತದೆ.”

NFHS-4 ಪ್ರಕಾರ, ಉತ್ತರ ಪ್ರದೇಶದಲ್ಲಿ 15-49 ವಯಸ್ಸಿನ ವಿವಾಹಿತ ಮಹಿಳೆಯರಲ್ಲಿ ಗರ್ಭನಿರೋಧಕ ಬಳಕೆಯ ಪ್ರಮಾಣವು (CPR) 46 ಶೇಕಡಾ, ಇದು NFHS-3 ಅಂಕಿ (44 ಶೇಕಡಾ) ಗಿಂತ ಸ್ವಲ್ಪ ಹೆಚ್ಚಾಗಿದೆ. ಸಮೀಕ್ಷೆಯ ಪ್ರಕಾರ, ಉತ್ತರ ಪ್ರದೇಶದಲ್ಲಿ ಕುಟುಂಬಕ್ಕೆ ಈಗಾಗಲೇ ಒಂದು ಮಗನಿದ್ದರೆ, ಆ ಕುಟುಂಬದ ಮಹಿಳೆ ಗರ್ಭನಿರೋಧಕವನ್ನು ಬಳಸುವ ಸಾಧ್ಯತೆ ಹೆಚ್ಚು. ಮನೋರಮಾ ಅವರೊಂದಿಗೆ ಕೆಲಸ ಮಾಡುವ ಆಶಾ ಕಾರ್ಯಕರ್ತೆ ತಾರಾ ದೇವಿ ಹೇಳುತ್ತಾರೆ, "ಅವರು ಕುಟುಂಬ ಯೋಜನೆ ಬಗ್ಗೆ, ವಿಶೇಷವಾಗಿ ಪುರುಷರು ಈ ಬಗ್ಗೆ ಕಾಳಜಿ ವಹಿಸುವುದಿಲ್ಲ.” ತಾರಾ ಇನ್ನೊಂದು ಹತ್ತಿರದ ಹಳ್ಳಿಯಲ್ಲಿ ಕೆಲಸ ಮಾಡುತ್ತಾರೆ, ಅವರು ಮತ್ತೆ ಹೇಳುತ್ತಾರೆ, "ಇಲ್ಲಿನ ಕುಟುಂಬಗಳಲ್ಲಿ ಸರಾಸರಿ ಮಕ್ಕಳ ಸಂಖ್ಯೆ ಆರು. ಹೆಚ್ಚಿನ ಸಂದರ್ಭಗಳಲ್ಲಿ, ವಯಸ್ಸಾದ ಕಾರಣದಿಂದ ಗರ್ಭಾವಸ್ಥೆಯು ನಿಲ್ಲುತ್ತದೆ. ಮತ್ತು ಪುರುಷರಿಗೆ ಸಂತಾನಹರಣ ಮಾಡಿಸಿಕೊಳ್ಳುವಂತೆ ಕೇಳಿದರೆ ಅವರು ನೋವನ್ನು ಮತ್ತು ವ್ಯಾಸೆಕ್ಟಮಿಯ ಸಂಕೀರ್ಣತೆಯನ್ನು ಸಹಿಸಲು ಸಾಧ್ಯವಿಲ್ಲ ಎಂದು  ಹೇಳುತ್ತಾರೆ."

ಸುದಾಮಾ ಹೇಳುತ್ತಾರೆ, "ಅವರು ಮನೆ ನಡೆಸಲು ಮತ್ತು ಕುಟುಂಬವನ್ನು ನೋಡಿಕೊಳ್ಳಲು ದುಡಿಯಬೇಕು, ಅವರು ಆಪರೇಷನ್‌ ಮಾಡಿಸಿಕೊ‍ಳ್ಳಲಿ ಎಂದು ನಾನು ಹೇಗೆ ಬಯಸಲಿ? ಅದನ್ನೊಂದು ಆಯ್ಕೆಯಾಗಿಯೂ ನೋಡಲಾರೆ."

ಗ್ರಾಮೀಣ ಭಾರತದ ಹದಿಹರೆಯದ ಬಾಲಕಿಯರು ಮತ್ತು ಯುವತಿಯರ ಬಗ್ಗೆ PARI ಮತ್ತು ಕೌಂಟರ್‌ ಮೀಡಿಯಾ ಟ್ರಸ್ಟ್‌ನ ಬೆಂಬಲಿತ ರಾಷ್ಟ್ರವ್ಯಾಪಿ ವರದಿ ಮಾಡುವ ಯೋಜನೆಯು ಮಹತ್ವದ ಆದರೆ ಸಮಾಜದ ಅಂಚಿನಲ್ಲಿರುವ ಗುಂಪುಗಳ ಪರಿಸ್ಥಿತಿಯನ್ನು ಅನ್ವೇಷಿಸಲು, ಸಾಮಾನ್ಯ ಜನರ ಮಾತುಗಳು ಮತ್ತು ಜೀವಂತ ಅನುಭವಗಳ ಮೂಲಕ ತಿಳಿಯುವ ಉದ್ದೇಶವನ್ನು ಹೊಂದಿದೆ. ಇದು ಪಾಪ್ಯುಲೇಷನ್‌ ಆಫ್‌ ಇಂಡಿಯಾದ ಬೆಂಬಲವನ್ನು ಹೊಂದಿದೆ.

ಈ ಲೇಖನವನ್ನು ಮರುಪ್ರಕಟಿಸುವ ಆಸಕ್ತಿಯಿದೆಯೇ? ಇದಕ್ಕಾಗಿ ಈ ಇ-ಮೈಲ್ ವಿಳಾಸವನ್ನು ಸಂಪರ್ಕಿಸಿ: [email protected] ಒಂದು ಪ್ರತಿಯನ್ನು [email protected] . ಈ ವಿಳಾಸಕ್ಕೆ ಕಳುಹಿಸಿ

ಜಿಗ್ಯಾಸ ಮಿಶ್ರಾ ಠಾಕೂರ್ ಫ್ಯಾಮಿಲಿ ಫೌಂಡೇಶನ್‌ನ ಸ್ವತಂತ್ರ ಪತ್ರಿಕೋದ್ಯಮ ಅನುದಾನದ ಮೂಲಕ ಸಾರ್ವಜನಿಕ ಆರೋಗ್ಯ ಮತ್ತು ನಾಗರಿಕ ಸ್ವಾತಂತ್ರ್ಯಗಳ ಬಗ್ಗೆ ವರದಿ ಮಾಡುತ್ತಾರೆ. ಠಾಕೂರ್ ಫ್ಯಾಮಿಲಿ ಫೌಂಡೇಶನ್ ಈ ವರದಿಯ ವಿಷಯಗಳ ಮೇಲೆ ಯಾವುದೇ ಸಂಪಾದಕೀಯ ನಿಯಂತ್ರಣವನ್ನು ಹೊಂದಿಲ್ಲ.

ಜಿಗ್ಯಾಸಾ ಮಿಶ್ರಾ ಅವರು ಬಿಡಿಸಿರುವ ಮುಖ್ಯ ಚಿತ್ರವು ಪಟಚಿತ್ರ ಚಿತ್ರಕಲೆ ಸಂಪ್ರದಾಯದಿಂದ ಪ್ರೇರಿತವಾಗಿದೆ.

ಅನುವಾದ: ಶಂಕರ. ಎನ್. ಕೆಂಚನೂರು

Jigyasa Mishra

جِگیاسا مشرا اترپردیش کے چترکوٹ میں مقیم ایک آزاد صحافی ہیں۔ وہ بنیادی طور سے دیہی امور، فن و ثقافت پر مبنی رپورٹنگ کرتی ہیں۔

کے ذریعہ دیگر اسٹوریز Jigyasa Mishra
Editor : Pratishtha Pandya

پرتشٹھا پانڈیہ، پاری میں بطور سینئر ایڈیٹر کام کرتی ہیں، اور پاری کے تخلیقی تحریر والے شعبہ کی سربراہ ہیں۔ وہ پاری بھاشا ٹیم کی رکن ہیں اور گجراتی میں اسٹوریز کا ترجمہ اور ایڈیٹنگ کرتی ہیں۔ پرتشٹھا گجراتی اور انگریزی زبان کی شاعرہ بھی ہیں۔

کے ذریعہ دیگر اسٹوریز Pratishtha Pandya
Series Editor : Sharmila Joshi

شرمیلا جوشی پیپلز آرکائیو آف رورل انڈیا کی سابق ایڈیٹوریل چیف ہیں، ساتھ ہی وہ ایک قلم کار، محقق اور عارضی ٹیچر بھی ہیں۔

کے ذریعہ دیگر اسٹوریز شرمیلا جوشی
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

کے ذریعہ دیگر اسٹوریز Shankar N. Kenchanuru