"ನಾನು ಇಲ್ಲಿಯವರೆಗೆ ಏನನ್ನೂ ಕೇಳಿಲ್ಲ" ಎಂದು ಅವರು ಹೇಳಿದರು. "ನಾನು ನನ್ನ ದೇಶಕ್ಕಾಗಿ ಹೋರಾಡಿದೆ, ಪ್ರತಿಫಲಕ್ಕಾಗಿಯಲ್ಲ. ನನ್ನ ಕುಟುಂಬ ಸದಸ್ಯರಿಗಾಗಿ ನಾನು ಏನನ್ನೂ ಕೇಳಲಿಲ್ಲ. ಆದರೆ ಸದ್ಯಕ್ಕೆ, ಬದುಕಿನ ಅಂತಿಮ ಘಟ್ಟದಲ್ಲಿಯಾದರೂ ಸರಕಾರ ನನ್ನ ಹೋರಾಟವನ್ನು ಗುರುತಿಸಲಿ ಎನ್ನುವುದಷ್ಟೇ ನನ್ನ ನಿರೀಕ್ಷೆ"
ಕೆಲವು ವರ್ಷಗಳ ಹಿಂದೆ ಅನಾರೋಗ್ಯ ಮತ್ತು ಬಡತನದ ಕಾರಣ ಅವರ ಸ್ಥಿತಿ ಶೋಚನೀಯವಾಯಿತು. ಸ್ವಲ್ಪ ಸಮಯದ ನಂತರ, ಜೈಪುರದ ಪರೇಶ್ ರಥ್ ಎಂಬ ಯುವ ಪತ್ರಕರ್ತ ಅವರ ಬಗ್ಗೆ ಸುದ್ದಿ ಲೇಖನವನ್ನು ಪ್ರಕಟಿಸಿದರು. ಇದಲ್ಲದೆ, ಅವರು ಅವರನ್ನು ತನ್ನ ಸ್ವಂತ ಖರ್ಚಿನಲ್ಲಿ ಕೊಳೆಗೇರಿಯಿಂದ ಒಂದೇ ಕೋಣೆಯ ಮನೆಗೆ ಸ್ಥಳಾಂತರಿಸಿದರು ಮತ್ತು ಅವರ ವೈದ್ಯಕೀಯ ವೆಚ್ಚವನ್ನೂ ಸಹ ನೋಡಿಕೊಂಡರು. ಇತ್ತೀಚೆಗೆ, ಪಾಂಡಾ ಅನಾರೋಗ್ಯಕ್ಕೆ ಒಳಗಾಗಿ ಆಸ್ಪತ್ರೆಗೆ ಸೇರಿಸಬೇಕಾಯಿತು. ತನ್ನ ಮಗನ ಅಭ್ಯಾಸವನ್ನು ವಿರೋಧಿಸಿದರೂ ಅವರು ಪ್ರಸ್ತುತ ಅವನ ಮನೆಯಲ್ಲಿಯೇ ಇದ್ದಾರೆ. ರಥ್ ಸುದ್ದಿ ಪ್ರಕಟಿಸಿದ ನಂತರ ಅವರ ಕುರಿತು ಹೆಚ್ಚಿನ ಸುದ್ದಿ ಲೇಖನಗಳು ಹೊರಬಂದವು. ಅವರು ಒಮ್ಮೆ ರಾಷ್ಟ್ರೀಯ ಪತ್ರಿಕೆಯ ಮುಖಪುಟದಲ್ಲಿಯೂ ಸುದ್ದಿಯಾದರು.
"ನಾವು ಮೊದಲಿಗೆ ಸುದ್ದಿ ಲೇಖನವನ್ನು ಪ್ರಕಟಿಸಿದಾಗ, ಅವರಿಗೆ ಸ್ವಲ್ಪ ಸಹಾಯ ಸಿಕ್ಕಿತು" ಎಂದು ರಥ್ ಹೇಳಿದರು. "ಆಗಿನ ಕೊರಪುಟ್ ಜಿಲ್ಲಾಧಿಕಾರಿ ಉಷಾ ಪಾಧಿ ಅವರ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸಿ ರೂ. 10 ಸಾವಿರ ಮಂಜೂರು ಮಾಡಿದ್ದರು. ಸರ್ಕಾರಿ ಜಮೀನು ಮಂಜೂರು ಮಾಡಲಾಗುವುದು ಎಂದಿದ್ದರು. ಆದರೆ ಪಾಧಿಯವರಿಗೆ ವರ್ಗಾವಣೆಯಾಗಿದ್ದರಿಂದ ಜಿಲ್ಲೆಯನ್ನು ತೊರೆದರು. ಬಂಗಾಳದ ಕೆಲವರು ಅವರಿಗೆ ಒಂದಿಷ್ಟು ದೇಣಿಗೆ ಕಳುಹಿಸಿದ್ದಾರೆ. ”ಆದಾಗ್ಯೂ, ಸ್ವಲ್ಪ ಸಮಯದ ನಂತರ ಅವೆಲ್ಲವೂ ನಿಂತು ಹೋಗಿ ಅವರ ಬದುಕು ಮತ್ತೆ ಮೊದಲಿನಂತಾಯಿತು. "ಹಾಗಿದ್ದರೂ, ಇಲ್ಲಿ ಸಮಸ್ಯೆ ಕೇವಲ ಹಣವಲ್ಲ" ಎಂದು ರಥ್ ವಿವರಿಸಿದರು. "ಕೇಂದ್ರ ಸರ್ಕಾರವು ಅವರಿಗೆ ಪಿಂಚಣಿ ನೀಡಿದ್ದರೂ ಸಹ, ಈ ವಯಸ್ಸಿನಲ್ಲಿ ಅವರು ಅದನ್ನು ಇನ್ನೂ ಎಷ್ಟು ವರ್ಷಗಳವರೆಗೆ ಬಳಸಲು ಸಾಧ್ಯವಾಗುತ್ತದೆ?" ವಾಸ್ತವವಾಗಿ, ಅವರು ಪಿಂಚಣಿಯನ್ನು ಅರ್ಹವಾದ ಮಾನ್ಯತೆ ಮತ್ತು ಗೌರವವೆಂದು ಪರಿಗಣಿಸುತ್ತಾರೆ. ಆದರೆ ಕೇಂದ್ರ ಸರ್ಕಾರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಅನೇಕ ನಿರಾಶಾದಾಯಕ ಪ್ರಯತ್ನಗಳ ನಂತರ, ಲಕ್ಷ್ಮಿಯವರಿಗೆ ಈ ಜಿಲ್ಲೆಯ ಪಂಜಿಯಾಗುಡ ಗ್ರಾಮದಲ್ಲಿ ಕಳೆದ ವರ್ಷದ ಕೊನೆಯಲ್ಲಿ ಒಂದು ಸರ್ಕಾರಿ ಭೂಮಿಯ ತುಂಡನ್ನು ನೀಡಲಾಯಿತು. ಆದರೆ ಅವರು ಈಗಲೂ ಸರ್ಕಾರದ ಯೋಜನೆಯಡಿ ಅಲ್ಲಿ ಮನೆ ಕಟ್ಟಿಸಲು ಕಾಯುತ್ತಿದ್ದಾರೆ. ಸದ್ಯಕ್ಕೆ, ಅವರ ಹಳೆಯ ಕೋಣೆಗೆ ಹೊಂದಿಕೊಂಡಂತೆ ಉತ್ತಮವಾದ ಕೋಣೆಯನ್ನು ನಿರ್ಮಿಸಲು ರಥ್ ಹಣವನ್ನು ನೀಡಿದ್ದಾರೆ ಮತ್ತು ಶೀಘ್ರದಲ್ಲೇ ಅವರನ್ನು ಅಲ್ಲಿಗೆ ಸ್ಥಳಾಂತರಿಸುವ ನಿರೀಕ್ಷೆಯಲ್ಲಿದ್ದಾರೆ.
ಸ್ಥಳೀಯ ಮಟ್ಟದಲ್ಲಿ ಅವರಿಗೆ ಈಗೀಗ ಒಂದಷ್ಟು ಗುರುತು ಸಿಗುತ್ತಿದೆ. ಕೆಲವು ಸಂಸ್ಥೆಗಳು ಅವರ ಪ್ರಕರಣವನ್ನು ಕೈಗೆತ್ತಿಕೊಳ್ಳಲು ಮುಂದಾಗಿವೆ. ಆಗಸ್ಟ್ 14ರಂದು ಅವರು ನನಗೆ ಹೇಳಿದರು, "ನಾಳೆ, ನಾನು ಇಲ್ಲಿನ ದೀಪ್ತಿ ಶಾಲೆಯಲ್ಲಿ ಧ್ವಜವನ್ನು ಹಾರಿಸುತ್ತೇನೆ. ಅವರು ನನ್ನನ್ನು ಆಹ್ವಾನಿಸಿದ್ದಾರೆ." ಅವಳು ಅದರ ಕುರಿತು ಹೆಮ್ಮೆಯಿಂದ ಹೇಳುತ್ತಾರೆ, ಆದರೆ ಅವರು "ಸಮಾರಂಭಕ್ಕೆ ಉಡಲು ಉತ್ತಮ ಸೀರೆಯಿಲ್ಲ" ಎಂದು ಅಸಮಾಧಾನಗೊಂಡಿದ್ದಾರೆ.
ಏತನ್ಮಧ್ಯೆ, ಈ ಐಎನ್ಎಯ ಹಿರಿಯ ಯೋಧೆ ತಮ್ಮ ಮುಂದಿನ ಯುದ್ಧಕ್ಕೆ ತಯಾರಿ ನಡೆಸುತ್ತಿದ್ದಾರೆ. ಈ ವೃದ್ಧ ಮಹಿಳೆ ಹೇಳುತ್ತಾರೆ, "ನೇತಾಜಿ 'ಚಲೋ ಡೆಲ್ಲಿ' ಎಂದು ಹೇಳಿದ್ದರು. ಒಂದು ವೇಳೆ ಕೇಂದ್ರ ಸರ್ಕಾರವು ನನ್ನನ್ನು ಸ್ವಾತಂತ್ರ್ಯ ಹೋರಾಟಗಾರ್ತಿ ಎಂದು ಸ್ವೀಕರಿಸದಿದ್ದರೆ ಆಗಸ್ಟ್ 15ರ ನಂತರ ನಾನು ಅದೇ ರೀತಿ ಮಾಡುತ್ತೇನೆ. ನಾನು ಸಂಸತ್ತಿನ ಮುಂದೆ ಧರಣಿ ಕೂರುತ್ತೇನೆ. ʼದಿಲ್ಲಿ ಚಲೋ,' ನಾನು ಕೂಡ. ಅದನ್ನೇ ಮಾಡಲಿದ್ದೇನೆ"
ಅವರು ಖಂಡಿತ ಅದನ್ನು ಮಾಡಲಿದ್ದಾರೆ, ಬಹುಶಃ ಆರು ದಶಕಗಳಷ್ಟು ತಡವಾಗಿ. ಆದರೆ, ಅವರ ಹೃದಯದಲ್ಲಿ ಭರವಸೆಯಿದೆ, ಅವರು ಹಾಡುವ ಹಾಡಿನಂತೆ: "ಕದಮ್ ಕದಮ್ ಬಡಾಯೇ ಜಾ..."
ಫೋಟೊಗಳು: ಪಿ. ಸಾಯಿನಾಥ್