"ಈ ಎಲ್ಲಾ ಅರ್ಜಿಗಳನ್ನು ಹಿಂದಕ್ಕೆ ತೆಗೆದುಕೊಂಡು ಅವುಗಳನ್ನು ಹರಿದು ಹಾಕಿ" ಎಂದು ಚಮಾರು ಹೇಳಿದರು. "ಅವು ಮಾನ್ಯವಲ್ಲ. ಈ ನ್ಯಾಯಾಲಯವು ಅವುಗಳನ್ನು ಪರಿಗಣಿಸುವುದಿಲ್ಲ."
ಅವರು ನಿಜವಾಗಿಯೂ ಮ್ಯಾಜಿಸ್ಟ್ರೇಟ್ ಆಗಿರುವುದನ್ನು ಆನಂದಿಸಲು ಪ್ರಾರಂಭಿಸಿದ್ದರು.
ಅದು 1942ರ ಆಗಸ್ಟ್ ತಿಂಗಳು ಮತ್ತು ದೇಶವು ದೇಶದಲ್ಲಿ ಆಕ್ರೋಶ ಉಕ್ಕೇರುತ್ತಿತ್ತು. ಇದನ್ನು ಸಂಬಲ್ಪುರದ ನ್ಯಾಯಾಲಯದಲ್ಲಿಯೂ ್ತ್ತುಕಾಣಬಹುದಿತ್ತು. ಚಮಾರು ಪರಿಡಾ ಮತ್ತು ಅವರ ಸಂಗಾತಿಗಳು ಅದನ್ನು ವಶಕ್ಕೆ ಪಡೆದಿದ್ದರು. ಚಮಾರು ತನ್ನನ್ನು ತಾನು ನ್ಯಾಯಾಧೀಶನೆಂದು ಘೋಷಿಸಿಕೊಂಡಿದ್ದರು. ಜಿತೇಂದ್ರ ಪ್ರಧಾನ್ ಅವರ "ಆರ್ಡರ್ಲಿ". ಪೂರ್ಣಚಂದ್ರ ಪ್ರಧಾನ್ ಅವರನ್ನು ಪೇಶ್ಕರ್ ಅಥವಾ ನ್ಯಾಯಾಲಯದ ಗುಮಾಸ್ತರನ್ನಾಗಿ ಆಯ್ಕೆ ಮಾಡಿದ್ದರು.
ಕ್ವಿಟ್ ಇಂಡಿಯಾ ಚಳುವಳಿಗೆ ಅವರ ಕೊಡುಗೆಯ ಭಾಗವಾಗಿ ಅವರೆಲ್ಲರೂ ನ್ಯಾಯಾಲಯವನ್ನು ವಶಪಡಿಸಿಕೊಂಡಿದ್ದರು.
"ಈ ಅರ್ಜಿಗಳ ಕುರಿತು ರಾಜ್ ಗೆ ತಿಳಿಸಲಾಗುತ್ತದೆ" ಎಂದು ಚಮಾರೂ ನ್ಯಾಯಾಲಯದಲ್ಲಿ ಅಚ್ಚರಿಯಿಂದ ಕೂಡಿದ್ದ ಸಭೆಯಲ್ಲಿ ಹೇಳಿದರು. "ನಾವು ಸ್ವತಂತ್ರ ಭಾರತದಲ್ಲಿ ವಾಸಿಸುತ್ತಿದ್ದೇವೆ. ಈ ಪ್ರಕರಣಗಳನ್ನು ಪರಿಗಣಿಸಬೇಕೆಂದು ನೀವು ಬಯಸಿದರೆ, ಅವುಗಳನ್ನು ಹಿಂದಕ್ಕೆ ತೆಗೆದುಕೊಳ್ಳಿ. ನಿಮ್ಮ ಅರ್ಜಿಗಳನ್ನು ತಿದ್ದಿರಿ. ಅರ್ಜಿಯನ್ನು ಮಹಾತ್ಮಾ ಗಾಂಧಿ ಅವರನ್ನು ಉದ್ದೇಶಿಸಿ ಬರೆಯಿರಿ ಮತ್ತು ನಾವು ಅವುಗಳ ಬಗ್ಗೆ ಸೂಕ್ತ ಗಮನ ನೀಡುತ್ತೇವೆ."
ಅರವತ್ತು ವರ್ಷಗಳ ನಂತರವೂ, ಚಮಾರು ಈಗಲೂ ಸಂಭ್ರಮದಿಂದ ಆ ಕಥೆಯನ್ನು ಹೇಳುತ್ತಾರೆ. ಅವರಿಗೆ ಈಗ 91 ವರ್ಷ. 81 ವರ್ಷದ ಜಿತೇಂದ್ರ ಅವರ ಪಕ್ಕದಲ್ಲಿ ಕುಳಿತಿದ್ದಾರೆ. ಆದರೆ, ಪೂರ್ಣಚಂದ್ರ ಈಗಿಲ್ಲ. ಅವರು ಈಗಲೂ ಒಡಿಶಾದ ಬರ್ಘರ್ ಜಿಲ್ಲೆಯ ಪಾಣಿಮಾರಾ ಗ್ರಾಮದಲ್ಲಿ ವಾಸಿಸುತ್ತಿದ್ದಾರೆ. ಸ್ವಾತಂತ್ರ್ಯ ಹೋರಾಟ ಉತ್ತುಂಗದಲ್ಲಿದ್ದಾಗ, ಈ ಗ್ರಾಮವು ಆಶ್ಚರ್ಯಕರ ಸಂಖ್ಯೆಯ ಗಂಡುಮಕ್ಕಳು ಮತ್ತು ಹೆಣ್ಣುಮಕ್ಕಳನ್ನು ಯುದ್ಧಕ್ಕೆ ಕಳುಹಿಸಿತು. 1942ರಲ್ಲಿಯೇ ಇಲ್ಲಿಂದ 32 ಜನರು ಜೈಲಿಗೆ ಹೋದರು ಎಂದು ದಾಖಲೆಗಳು ಹೇಳುತ್ತವೆ. ಚಾಮಾರು, ಜಿತೇಂದ್ರ ಸೇರಿದಂತೆ ಏಳು ಮಂದಿ ಪ್ರಸ್ತುತ ಜೀವಂತವಾಗಿದ್ದಾರೆ.
ಒಂದು ಹಂತದಲ್ಲಿ, ಇಲ್ಲಿನ ಪ್ರತಿಯೊಂದು ಕುಟುಂಬವೂ ಹೋರಾಟಕ್ಕೆ ಸತ್ಯಾಗ್ರಹಿಯನ್ನು ಕಳುಹಿಸಿತು. ಅದು ಬ್ರಿಟಿಷರನ್ನು ಕೆರಳಿಸಿದ ಗ್ರಾಮವಾಗಿತ್ತು. ಅದರ ಐಕ್ಯತೆ ಅಲುಗಾಡದಂತೆ ಒಟ್ಟಾಗಿನಿಂತಿತ್ತು. ಅದರ ದೃಢನಿಶ್ಚಯವು ದಂತಕತೆಯಂತೆ ಬೆಳೆಯಿತು. ಅಂದು ರಾಜನನ್ನು ಎದುರಿಸುತ್ತಿದ್ದವರೆಂದರೆ ಬಡ, ಅಕ್ಷರರಹಿತ ರೈತರು. ಸಣ್ಣ ಹಿಡುವಳಿದಾರರು ತಮ್ಮ ದೈನಂದಿನ ಗುರಿಗಳನ್ನು ಪೂರೈಸಲು ಹೆಣಗಾಡುತ್ತಿದ್ದವರು. ಹೆಚ್ಚಿನವರ ಪರಿಸ್ಥಿತಿ ಇಂದಿಗೂ ಹಾಗೆಯೇ ಉಳಿದಿವೆ.
ಆದರೆ, ಇತಿಹಾಸ ಪುಸ್ತಕಗಳಲ್ಲಿ ಅವರನ್ನು ಎಲ್ಲಿಯೂ ಉಲ್ಲೇಖಿಸಲಾಗಿಲ್ಲ ಎಂಬುದು ಬಹಳ ವಿಚಿತ್ರ. ಅದರರ್ಥ, ಒಡಿಶಾ ಅವರನ್ನು ಮರೆತಿದೆಯೆಂದಲ್ಲ. ಬಾರ್‌ಗಢದಲ್ಲಿ ಇದು ಈಗಲೂ ಸ್ವಾತಂತ್ರ್ಯ ಹೋರಾಟಗಾರರ ಗ್ರಾಮವಾಗಿದೆ. ಇಲ್ಲಿ ಈ ಹೋರಾಟದಿಂದ ವೈಯಕ್ತಿಕ ಲಾಭ ಪಡೆದವರು ಒಬ್ಬರೂ ಇಲ್ಲ. ಮತ್ತು ಅವರಲ್ಲಿ ಯಾರಿಗೂ ಯಾವುದೇ ಪ್ರಶಸ್ತಿ, ಸ್ಥಾನ ಅಥವಾ ಉದ್ಯೋಗ ದೊರೆತಿಲ್ಲ ಎಂಬುದು ಖಚಿತ. ಅವರಿಗೆ ದೊರೆತಿದ್ದೇನಿದ್ದರೂ ವೈಯಕ್ತಿಕ ಕಷ್ಟ ಕಾರ್ಪಣ್ಯಗಳು. ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರು ಇವರು.
ಅವರು ಸ್ವಾತಂತ್ರ್ಯದ ಕಾಲಾಳುಗಳು. ಅದರಲ್ಲೂ ಬರಿಗಾಲಿನ ಕಾಲಾಳುಗಳು, ಏಕೆಂದರೆ ಅವರಲ್ಲಿ ಯಾರ ಬಳಿಯೂ ಶೂಗಳನ್ನು ಖರೀದಿಸಿ ಧರಿಸಲು ಸಾಕಷ್ಟು ಹಣವಿರಲಿಲ್ಲ.





