20 ವರ್ಷಗಳ ಹಿಂದೆ ತೆಗೆದುಕೊಂಡ ನಿರ್ಧಾರವೊಂದು ಇಂದು ಮತ್ತೆ ಕಾಡಬಹುದೆಂದು ಬಾಳಾಸಾಹೇಬ್ ಲೋಂಡೆಯವರು ಯೋಚಿಸಿರಲಿಲ್ಲ. ಮಹಾರಾಷ್ಟ್ರದ ಪುಣೆ ಜಿಲ್ಲೆಯ ಫುರ್ಸುಂಗಿ ಎಂಬ ಸಣ್ಣ ಪಟ್ಟಣದಲ್ಲಿ ಸಣ್ಣ ರೈತರ ಕುಟುಂಬದಲ್ಲಿ ಜನಿಸಿದ ಲೋಂಡೆ ಮೊದಲಿಗೆ ತಮ್ಮ ಜಮೀನಿನಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು, ಅಲ್ಲಿ ಅವರು ಮುಖ್ಯವಾಗಿ ಹತ್ತಿಯನ್ನು ಬೆಳೆಯುತ್ತಿದ್ದರು. ನಂತರ ಅವರಿಗೆ 18 ವರ್ಷ ವಯಸ್ಸಾದಾಗ, ಒಂದಷ್ಟು ಹೆಚ್ಚುವರಿ ಆದಾಯಕ್ಕಾಗಿ ಚಾಲಕನಾಗಿಯೂ ಕೆಲಸ ಮಾಡಲು ನಿರ್ಧರಿಸಿದರು.

"ಜಾನುವಾರುಗಳನ್ನು ಸಾಗಿಸುವ ವ್ಯವಹಾರವನ್ನು ನಡೆಸುತ್ತಿದ್ದ ಮುಸ್ಲಿಂ ಕುಟುಂಬಕ್ಕೆ ಸ್ನೇಹಿತರೊಬ್ಬರು ನನ್ನನ್ನು ಪರಿಚಯಿಸಿದರು" ಎಂದು 48 ವರ್ಷದ ಅವರು ಹೇಳುತ್ತಾರೆ. "ಅವರಿಗೆ ಚಾಲಕನ ಅಗತ್ಯವಿತ್ತು, ನಾನು ಅಲ್ಲಿ ಕೆಲಸಕ್ಕೆ ಸೇರಿಕೊಂಡೆ."

ಒಬ್ಬ ಉದ್ಯಮಶೀಲ ಯುವಕನಾಗಿದ್ದ ಲೋಂಡೆಯವರು ವ್ಯವಹಾರವನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡಿದರು. ಸುಮಾರು ಒಂದು ದಶಕದ ಕಳೆಯುವ ಹೊತ್ತಿಗೆ, ಲೋಂಡೆ ಕೆಲಸವನ್ನು ಕಲಿತು ಒಂದಷ್ಟು ಹಣವನ್ನೂ ಉಳಿಸಿದ್ದರು.

"8 ಲಕ್ಷ ರೂ.ಗಳಿಗೆ ಒಂದು ಸೆಕೆಂಡ್ ಹ್ಯಾಂಡ್ ಟ್ರಕ್ ಖರೀದಿಸಿ ಇನ್ನೂ 2 ಲಕ್ಷ ರೂ.ಗಳ ಬಂಡವಾಳ ಕೈಯಲ್ಲಿ ಉಳಿದಿತ್ತು" ಎಂದು ಅವರು ಹೇಳುತ್ತಾರೆ. "10 ವರ್ಷಗಳಲ್ಲಿ, ಮಾರುಕಟ್ಟೆಯಲ್ಲಿ ರೈತರು ಮತ್ತು ವ್ಯಾಪಾರಿಗಳೊಂದಿಗೆ ಒಳ್ಳೆಯ ಸಂಪರ್ಕವನ್ನೂ ಸಾಧಿಸಿದ್ದೆ."

ಲೋಂಡೆಯವರ ವ್ಯವಹಾರ ಅವರ ಕೈ ಹಿಡಿಯಿತು. ಬೆಳೆ ಬೆಲೆಗಳ ಕುಸಿತ, ಹಣದುಬ್ಬರ ಮತ್ತು ಹವಾಗುಣ ಬದಲಾವಣೆಯಿಂದ ಅವರ ಐದು ಎಕರೆ ಕೃಷಿ ಭೂಮಿ ನಷ್ಟ ಅನುಭವಿಸಿದ್ದ ಸಂದರ್ಭದಲ್ಲಿ ಈ ವ್ಯವಹಾರವೇ ಅವರನ್ನು ಉಳಿಸಿತ್ತು.

ಅವರ ಕೆಲಸ ಸರಳವಾಗಿತ್ತು. ಹಳ್ಳಿಯ ವಾರದ ಸಂತೆಗಳಲ್ಲಿ ಜಾನುವಾರು ಮಾರಾಟ ಮಾಡಲು ಬಯಸುವ ರೈತರಿಂದ ಜಾನುವಾರುಗಳನ್ನು ಖರೀದಿಸಿ ಅವುಗಳನ್ನು ಕಸಾಯಿಖಾನೆ ಅಥವಾ ಜಾನುವಾರು ಕೊಳ್ಳಲು ಬಯಸುವ ರೈತರಿಗೆ ಮಾರುವುದು ಅವರ ವ್ಯವಹಾರದ ಸ್ವರೂಪವಾಗಿತ್ತು. ಲಾಭವಾಗಿ ಕಮಿಷನ್‌ ದೊರೆಯುತ್ತಿತ್ತು. ವ್ಯವಹಾರ ಆರಂಭಿಸಿದ ಸುಮಾರು ಒಂದು ದಶಕದ ನಂತರ. 2014ರಲ್ಲಿ ತಮ್ಮ ವ್ಯಾಪಾರವನ್ನು ವಿಸ್ತರಿಸಲು ಯೋಚಿಸಿ ಇನ್ನೊಂದು ಟ್ರಕ್‌ ಖರೀದಿಸಿದರು.

ಪೆಟ್ರೋಲ್ ವೆಚ್ಚ, ವಾಹನ ನಿರ್ವಹಣಾ ವೆಚ್ಚ ಮತ್ತು ಚಾಲಕನ ಸಂಬಳವನ್ನು ಕೊಟ್ಟ ನಂತರ, ಆ ಸಮಯದಲ್ಲಿ ಅವರ ಸರಾಸರಿ ಮಾಸಿಕ ಆದಾಯವು ಸುಮಾರು 1 ಲಕ್ಷ ರೂಪಾಯಿಯಷ್ಟಿತ್ತು. ಮುಸ್ಲಿಂ ಖುರೇಷಿ ಸಮುದಾಯದ ಪ್ರಾಬಲ್ಯದ ಈ ವ್ಯಾಪಾರದಲ್ಲಿ ತೊಡಗಿರುವ ಕೆಲವೇ ಹಿಂದೂಗಳಲ್ಲಿ ಅವರೂ ಒಬ್ಬರಾಗಿದ್ದರು ಎಂಬುದು ಇಲ್ಲಿ ಅವರ ವ್ಯವಹಾರಕ್ಕೆ ತೊಡಕೇನೂ ಆಗಿರಲಿಲ್ಲ. "ಅವರು ತಮ್ಮ ಸಂಪರ್ಕಗಳು ಮತ್ತು ಸಲಹೆಗಳನ್ನು ಹಂಚಿಕೊಳ್ಳುತ್ತಾ ನನ್ನೊಂದಿಗೆ ಉದಾರವಾಗಿ ನಡೆದುಕೊಂಡಿದ್ದರು" ಎಂದು ಅವರು ಹೇಳುತ್ತಾರೆ. "ನಾನು ಬದುಕಿನಲ್ಲಿ ಒಂದು ನೆಲೆ ಸಿಕ್ಕಿತು ಎಂದು ಭಾವಿಸಿದ್ದೆ."

PHOTO • Parth M.N.

ಕೃಷಿಕರಾಗಿದ್ದ ಬಾಬಾಸಾಹೇಬ್‌ ಲೋಂಡೆ ನಂತರ ಯಶಸ್ವೀ ಜಾನುವಾರು ಸಾಗಣೆ ವ್ಯವಹಾರವನ್ನು ನಡೆಸುತ್ತಿದ್ದರು. ಆದರೆ 2014ರಲ್ಲಿ ಭಾರತೀಯ ಜನತಾ ಪಕ್ಷ ಅಧಿಕಾರಕ್ಕೆ ಬಂದ ನಂತರ, ಮಹಾರಾಷ್ಟ್ರದಲ್ಲಿ ಗೋರಕ್ಷಣೆ ಹೆಚ್ಚಾಗಲು ಪ್ರಾರಂಭಗೊಂಡು ಲೋಡೆಯವರ ವ್ಯವಹಾರ ನೆಲಕಚ್ಚಿತು. ಅವರು ಪ್ರಸ್ತುತ ತನ್ನ ಮತ್ತು ಚಾಲಕರ ಸುರಕ್ಷತೆಯ ಕುರಿತು ಚಿಂತಿತರಾಗಿದ್ದಾರೆ

ಆದರೆ 2014ರಲ್ಲಿ, ಭಾರತೀಯ ಜನತಾ ಪಕ್ಷ (ಬಿಜೆಪಿ) ಅಧಿಕಾರಕ್ಕೆ ಬಂದಿತು ಮತ್ತು ಗೋರಕ್ಷಣೆ ಕೆಲಸ ತೀವ್ರಗೊಳ್ಳಲು ಪ್ರಾರಂಭಿಸಿತು. ಗೋರಕ್ಷಕ ಹಿಂಸಾಚಾರವು ಭಾರತದಲ್ಲಿ ಕಂಡುಬರುವ ಜನಸಮೂಹ ಆಧಾರಿತ ಕ್ರೌರ್ಯವಾಗಿದೆ. ಹಿಂದೂ ಧರ್ಮದಲ್ಲಿ ಪವಿತ್ರ ಸ್ಥಾನಮಾನವನ್ನು ಹೊಂದಿರುವ ಪ್ರಾಣಿಯಾದ ಗೋವುಗಳನ್ನು ರಕ್ಷಿಸುವ ಹೆಸರಿನಲ್ಲಿ ಹಿಂದೂಯೇತರರನ್ನು, ಮುಖ್ಯವಾಗಿ ಮುಸ್ಲಿಮರನ್ನು ಗುರಿಯಾಗಿಸಿಕೊಂಡು ಹಿಂದೂ ರಾಷ್ಟ್ರೀಯವಾದಿಗಳು ನಡೆಸಿದ ದಾಳಿಗಳನ್ನು ಇದು ಒಳಗೊಂಡಿದೆ.

2019ರಲ್ಲಿ, ನ್ಯೂಯಾರ್ಕ್ ಮೂಲದ ಹಕ್ಕುಗಳ ಗುಂಪು ಹ್ಯೂಮನ್ ರೈಟ್ಸ್ ವಾಚ್ ಪ್ರಕಾರ, ಮೇ 2015 ಮತ್ತು ಡಿಸೆಂಬರ್ 2018ರ ನಡುವೆ ಭಾರತದಲ್ಲಿ 100ಕ್ಕೂ ಹೆಚ್ಚು ಗೋಮಾಂಸ ಸಂಬಂಧಿತ ದಾಳಿಗಳು ನಡೆದಿವೆ, ಇದರಲ್ಲಿ 280 ಜನರು ಗಾಯಗೊಂಡಿದ್ದಾರೆ ಮತ್ತು 44 ಜನರು ಸಾವನ್ನಪ್ಪಿದ್ದಾರೆ.

2010ರಿಂದೀಚೆಗೆ ಗೋ ಸಂಬಂಧಿತ ಗುಂಪು ಹತ್ಯೆಗಳನ್ನು ವಿಶ್ಲೇಷಿಸಿ ಇಂಡಿಯಾ ಸ್ಪೆಂಡ್ ಎಂಬ ಡೇಟಾ ವೆಬ್ಸೈಟ್ 2017ರಲ್ಲಿ ವರದಿಯೊಂದನ್ನು ಬಿಡುಗಡೆ ಮಾಡಿತ್ತು. ಇಂತಹ ಪ್ರಕರಣಗಳಲ್ಲಿ ಕೊಲ್ಲಲ್ಪಟ್ಟವರಲ್ಲಿ 86 ಪ್ರತಿಶತದಷ್ಟು ಮುಸ್ಲಿಮರು ಮತ್ತು ಮೋದಿ ಅಧಿಕಾರಕ್ಕೆ ಬಂದ ನಂತರ 97 ಪ್ರತಿಶತದಷ್ಟು ದಾಳಿಗಳು ನಡೆದಿವೆ ಎಂದು ಅದು ಹೇಳಿದೆ. ನಂತರ ವೆಬ್ಸೈಟ್ ತನ್ನ ಟ್ರ್ಯಾಕರ್ ತೆಗೆದುಹಾಕಿದೆ.

ಜನರ ಜೀವಕ್ಕೆ ಬೆದರಿಕೆ ಹಾಕುವುದನ್ನು ಒಳಗೊಂಡಿರುವ ಇಂತಹ ಹಿಂಸಾಚಾರವು ಕಳೆದ ಮೂರು ವರ್ಷಗಳಿಂದೀಚೆಗೆ ಹೆಚ್ಚಾಗಿದೆ ಎಂದು ಲೋಂಡೆ ಹೇಳುತ್ತಾರೆ. ಒಮ್ಮೆ ತಿಂಗಳಿಗೆ 1 ಲಕ್ಷ ರೂ.ಗಳನ್ನು ಸಂಪಾದಿಸುತ್ತಿದ್ದ ವ್ಯಕ್ತಿಗೆ, ಕಳೆದ ಮೂರು ವರ್ಷಗಳಲ್ಲಿ 30 ಲಕ್ಷ ರೂ.ಗಳಷ್ಟು ನಷ್ಟವನ್ನು ಎದುರಿಸಿದ್ದಾರೆ. ಅಲ್ಲದೆ ಅವರು ತನ್ನ ಹಾಗೂ ತನ್ನ ವಾಹನಗಳ ಚಾಲಕರ ದೈಹಿಕ ಸುರಕ್ಷತೆಯ ಕುರಿತು ಚಿಂತೆಗೀಡಾಗಿದ್ದಾರೆ.

"ಇದೊಂದು ದುಃಸ್ವಪ್ನ" ಎಂದು ಅವರು ಹೇಳುತ್ತಾರೆ.

*****

ಸೆಪ್ಟೆಂಬರ್ 21, 2023ರಂದು, ಸಣ್ಣ ಪಟ್ಟಣವಾದ ಕತ್ರಾಜ್ ಬಳಿ ತಲಾ 16 ಎಮ್ಮೆಗಳನ್ನು ಹೊತ್ತ ಲೋಂಡೆಯವರ ಎರಡು ಟ್ರಕ್ಕುಗಳು ಪುಣೆಯ ಮಾರುಕಟ್ಟೆಗೆ ತೆರಳುತ್ತಿದ್ದಾಗ ಗೋರಕ್ಷಕರು ಅವರನ್ನು ತಡೆದರು .

ಮಹಾರಾಷ್ಟ್ರದಲ್ಲಿ 1976ರಿಂದ ಗೋಹತ್ಯೆ ನಿಷೇಧ ಜಾರಿಯಲ್ಲಿದೆ. ಆದರೆ 2015ರಲ್ಲಿ ಆಗಿನ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಇದನ್ನು ಎತ್ತುಗಳು ಮತ್ತು ಹೋರಿಗಳಿಗೆ ವಿಸ್ತರಿಸಿದರು . ಲೋಂಡೆಯವರ ಟ್ರಕ್ ಹೊತ್ತೊಯ್ಯುತ್ತಿದ್ದ ಎಮ್ಮೆಗಳು ನಿಷೇಧದ ವ್ಯಾಪ್ತಿಗೆ ಬರುವುದಿಲ್ಲ.

"ಆದರೂ, ಇಬ್ಬರೂ ಚಾಲಕರ ಮೇಲೆ ಹಲ್ಲೆ ನಡೆಸಲಾಯಿತು, ಕಪಾಳಕ್ಕೆ ಹೊಡೆಯಲಾಯಿತು ಮತ್ತು ನಿಂದಿಸಲಾಯಿತು" ಎಂದು ಲೋಂಡೆ ಹೇಳುತ್ತಾರೆ. "ಒಬ್ಬರು ಹಿಂದೂ, ಇನ್ನೊಬ್ಬರು ಮುಸ್ಲಿಂ. ಕಾನೂನಿನ ಪ್ರಕಾರ ಅಗತ್ಯವಿರುವ ಎಲ್ಲಾ ಅನುಮತಿಗಳನ್ನು ನಾನು ಹೊಂದಿದ್ದೆ. ಆದರೂ ನನ್ನ ವಾಹನಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಯಿತು ಮತ್ತು ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು."

PHOTO • Parth M.N.

'ಜಾನುವಾರುಗಳನ್ನು ಹೊತ್ತ ಟ್ರಕ್ ಓಡಿಸುವುದೆಂದರೆ ಜೀವವನ್ನು ಪಣಕ್ಕಿಟ್ಟಂತೆ. ಬಹಳ ಒತ್ತಡದ ಕೆಲಸ. ಈ ಗೂಂಡಾ-ರಾಜ್ ಗ್ರಾಮೀಣ ಆರ್ಥಿಕತೆಯನ್ನು ನಾಶಪಡಿಸಿದೆ. ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ ತರುವವರಷ್ಟೇ ಉದ್ಧಾರವಾಗುತ್ತಿದ್ದಾರೆʼ

ಪುಣೆ ನಗರ ಪೊಲೀಸರು ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ, 1960 ರ ಅಡಿಯಲ್ಲಿ ಲೋಂಡೆ ಮತ್ತು ಅವರ ಇಬ್ಬರು ಚಾಲಕರ ವಿರುದ್ಧ ದೂರು ದಾಖಲಿಸಿದ್ದಾರೆ. "ಗೋರಕ್ಷಕರು ಆಕ್ರಮಣಕಾರಿಗಳಾಗಿರುತ್ತಾರೆ ಮತ್ತು ಪೊಲೀಸರು ಎಂದಿಗೂ ಹಿಂದೆ ಸರಿಯುವುದಿಲ್ಲ" ಎಂದು ಲೋಂಡೆ ಹೇಳುತ್ತಾರೆ. "ಇದು ಕೇವಲ ಕಿರುಕುಳದ ತಂತ್ರ."

ಲೋಂಡೆಯವರ ಜಾನುವಾರುಗಳನ್ನು ಪುಣೆಯ ಮಾವಲ್ ತಾಲ್ಲೂಕಿನ ಧಮಾನೆ ಗ್ರಾಮದ ದನದ ದೊಡ್ಡಿಗೆ ವರ್ಗಾಯಿಸಲಾಯಿತು ಮತ್ತು ಅವರು ಕಾನೂನು ಮಾರ್ಗವನ್ನು ಹಿಡಿಯಬೇಕಾಯಿತು. ಸುಮಾರು 6.5 ಲಕ್ಷ ರೂ. ಅಪಾಯದಲ್ಲಿತ್ತು. ಅವರು ಸಾಧ್ಯವಿರುವುದನ್ನೆಲ್ಲ ಮಾಡಿದರು. ಒಳ್ಳೆಯ ವಕೀಲರನ್ನೂ ಹಿಡಿದರು.

ಎರಡು ತಿಂಗಳ ನಂತರ, ನವೆಂಬರ್ 24, 2023ರಂದು, ಶಿವಾಜಿ ನಗರದ ಪುಣೆಯ ಸೆಷನ್ಸ್ ನ್ಯಾಯಾಲಯವು ತನ್ನ ತೀರ್ಪನ್ನು ನೀಡಿತು. ನ್ಯಾಯಾಧೀಶರು ಗೋರಕ್ಷಕರು ಜಾನುವಾರುಗಳನ್ನು ಹಿಂದಿರುಗಿಬೇಕೆಂದು ಆದೇಶಿಸಿದಾಗಲೇ ಲೋಂಡೆ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದು. ಆದೇಶವನ್ನು ಕಾರ್ಯಗತಗೊಳಿಸುವ ಜವಾಬ್ದಾರಿಯನ್ನು ಪೊಲೀಸ್ ಠಾಣೆಗೆ ವಹಿಸಲಾಯಿತು.

ದುರದೃಷ್ಟವಶಾತ್, ನ್ಯಾಯಾಲಯದಿಂದ ಲೋಂಡೆಯವರಿಗೆ ಅನುಕೂಲವಾಗುವ ತೀರ್ಪು ಬಂದಿದೆಯಾದರೂ, ಆ ಸಂಭ್ರಮ ಅವರ ಪಾಲಿಗೆ ಹೆಚ್ಚು ದಿನ ಉಳಿಯಲಿಲ್ಲ. ಇದುವರೆಗೂ ಅವರಿಗೆ ತನ್ನ ಜಾನುವಾರುಗಳು ಸಿಕ್ಕಿಲ್ಲ.

"ನ್ಯಾಯಾಲಯದ ಆದೇಶದ ಎರಡು ದಿನಗಳ ನಂತರ, ನಾನು ನನ್ನ ಟ್ರಕ್ಕುಗಳನ್ನು ಪೊಲೀಸರಿಂದ ಮರಳಿ ಪಡೆದೆ" ಎಂದು ಅವರು ಹೇಳುತ್ತಾರೆ. "ಟ್ರಕ್ಕುಗಳಿಲ್ಲದ ಕಾರಣ, ಆ ಅವಧಿಯಲ್ಲಿ ನನಗೆ ಯಾವುದೇ ಕೆಲಸ ಸಿಗಲಿಲ್ಲ. ಆದರೆ ನಂತರ ನಡೆದಿದ್ದು ಇನ್ನೂ ನಿರಾಶೆ ಹುಟ್ಟಿಸುವಂತಹದ್ದು."

“ನ್ಯಾಯಾಲಯದ ಆದೇಶದ ನಂತರ ನನಗೆ ಟ್ರಕ್‌ ಮರಳಿ ಸಿಕ್ಕಿತು. ಆದರೆ ಅದರ ನಂತರ ನಡೆದಿದ್ದು ಮತ್ತಷ್ಟು ನಿರಾಶೆ ಮೂಡಿಸುವ ಕೆಲಸ” ಎಂದು ಲೋಂಡೆ ನೆನಪಿಸಿಕೊಳ್ಳುತ್ತಾರೆ. ಅವರು ತಮ್ಮ ಜಾನುವಾರುಗಳನ್ನು ಹಿಂಪಡೆಯಲೆಂದು ಸಂತ ತುಕಾರಾಮ್ ಮಹಾರಾಜ್ ಗೋಶಾಲೆಗೆ ಹೋದರು, ಆದರೆ ಮರುದಿನ ಬರುವಂತೆ ಗೋಶಾಲೆಯ ಉಸ್ತುವಾರಿ ರೂಪೇಶ್ ಗರಡೆ ಹೇಳಿದರು.

ನಂತರ ಎಷ್ಟು ಸಲ ಹೋದರೂ ಅವರಿಗೆ ಸಿಕ್ಕಿದ್ದು ನೆಪಗಳು ಮಾತ್ರ - ಬಿಡುಗಡೆಗೆ ಮೊದಲು ಪ್ರಾಣಿಗಳನ್ನು ಪರೀಕ್ಷೆ ನಡೆಸಬೇಕಾದ ವೈದ್ಯರ ಅಲಭ್ಯತೆಯನ್ನು ಗರಡೆ ಉಲ್ಲೇಖಿಸಿದರು. ಕೆಲವು ದಿನಗಳ ನಂತರ, ಉಸ್ತುವಾರಿ ವ್ಯಕ್ತಿ ಉನ್ನತ ನ್ಯಾಯಾಲಯದಿಂದ ತಡೆಯಾಜ್ಞೆಯನ್ನು ಪಡೆದರು - ಸೆಷನ್ಸ್ ನ್ಯಾಯಾಲಯದ ತೀರ್ಪನ್ನು ಅಸಿಂಧುಗೊಳಿಸಿದರು. ಜಾನುವಾರುಗಳನ್ನು ಹಿಂದಿರುಗಿಸದಿರಲು ಗರಡೆ ಸಮಯವನ್ನು ಪಡೆಯುತ್ತಿದ್ದಾರೆನ್ನುವುದು ಇದರಿಂದ ಸ್ಪಷ್ಟವಾಗುತ್ತಿತ್ತು ಎಂದು ಲೋಂಡೆ ಹೇಳುತ್ತಾರೆ.  "ಆದರೆ ಪೊಲೀಸರು ಅವರು ಹೇಳಿದ ಎಲ್ಲದಕ್ಕೂ ತಲೆಯಾಡಿಸುತ್ತಿದ್ದರು. ಅದು ಹಾಸ್ಯಾಸ್ಪದವಾಗಿತ್ತು."

ಪುಣೆ ಮತ್ತು ಸುತ್ತಮುತ್ತಲಿನ ಖುರೇಷಿ ಸಮುದಾಯದೊಂದಿಗಿನ ಮಾತುಕತೆಗಳಿಂದ ಅದೇನೂ ವಿಶೇಷ ಸಂಗತಿಯಲ್ಲ, ಅದೊಂದು ಗೋರಕ್ಷಕರ ತಂತ್ರ ಎನ್ನುವುದು ತಿಳಿದುಬರುತ್ತದೆ. ಅನೇಕ ವ್ಯಾಪಾರಿಗಳು ಇದೇ ರೀತಿಯ ನಷ್ಟವನ್ನು ಅನುಭವಿಸಿದ್ದಾರೆ.  ಕಾಳಜಿಯಿಂದ ಜಾನುವಾರುಗಳನ್ನು ತಡೆಹಿಡಿಯುತ್ತೇವೆ ಎಂದು ಗೋರಕ್ಷಕರು ವಾದಿಸಿದರೆ, ಖುರೇಷಿ ಸಮುದಾಯವು ಇದನ್ನು ಅನುಮಾನಾಸ್ಪದವಾಗಿ ನೋಡುತ್ತದೆ.

PHOTO • Parth M.N.

'ಗೋರಕ್ಷಕರು ತಮ್ಮ ಜಾನುವಾರುಗಳನ್ನು ಮುಟ್ಟುಗೋಲು ಹಾಕಿಕೊಂಡ ನಂತರ ಜಾನುವಾರುಗಳು ಕಣ್ಮರೆಯಾಗುವುದನ್ನು ನನ್ನ ಅನೇಕ ಸಹೋದ್ಯೋಗಿಗಳು ನೋಡಿದ್ದಾರೆ. ಅವರು ಅವುಗಳನ್ನು ಮತ್ತೆ ಮಾರಾಟ ಮಾಡುತ್ತಿದ್ದಾರೆಯೇ? ಇಂತಹದ್ದೊಂದು ದಂಧೆ ನಡೆಯುತ್ತಿದೆಯೇ?' ಎಂದು ಸಮೀರ್ ಖುರೇಷಿ ಪ್ರಶ್ನಿಸುತ್ತಾರೆ. 2023ರಲ್ಲಿ, ಅವರ ಜಾನುವಾರುಗಳನ್ನು ವಶಪಡಿಸಿಕೊಳ್ಳಲಾಯಿತು ಮತ್ತು ಅವು ಅವರಿಗೆ ಸಿಗಲಿಲ್ಲ

"ಈ ಗೋರಕ್ಷಕರಿಗೆ ಜಾನುವಾರುಗಳ ಬಗ್ಗೆ ಅಷ್ಟೊಂದು ಕಾಳಜಿ ಇದ್ದರೆ, ರೈತರನ್ನು ಏಕೆ ಗುರಿಯಾಗಿಸುತ್ತಿಲ್ಲ?" ಎಂದು ಪುಣೆಯ ವ್ಯಾಪಾರಿ 52 ವರ್ಷದ ಸಮೀರ್ ಖುರೇಷಿ ಕೇಳುತ್ತಾರೆ. "ಅವರು ಅದನ್ನು ಮಾರಾಟ ಮಾಡುತ್ತಾರೆ. ನಾವು ಅದನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ  ಸಾಗಿಸುತ್ತೇವಷ್ಟೇ. ಇದರ ಹಿಂದಿನ ನಿಜವಾದ ಕಾರಣ ಮುಸ್ಲಿಮರನ್ನು ಬೇಟೆಯಾಡುವುದು.”

2023ರಲ್ಲಿ ಸಮೀರ್ ಅವರ ಟ್ರಕ್ ತಡೆದಾಗಲೂ ಇದೇ ರೀತಿ ನಡೆದಿತ್ತು. ಒಂದು ತಿಂಗಳ ನಂತರ ಕೋರ್ಟ್‌ ಆದೇಶದೊಂದಿಗೆ ಅವರು ತಮ್ಮ ವಾಹನವನ್ನು ಪಡೆಯಲೆಂದು ಪುರಂಧರ್ ತಾಲ್ಲೂಕಿನ ಜೆಂಡೆವಾಡಿ ಗ್ರಾಮದ ದನದ ದೊಡ್ಡಿಗೆ ಹೋದರು.

"ಆದರೆ ನಾನು ಸ್ಥಳಕ್ಕೆ ತಲುಪಿದಾಗ, ಅಲ್ಲಿ ನನ್ನ ಯಾವುದೇ ಜಾನುವಾರುಗಳನ್ನು ಸಹ ನೋಡಲು ಸಾಧ್ಯವಾಗಲಿಲ್ಲ" ಎಂದು ಸಮೀರ್ ಹೇಳುತ್ತಾರೆ. "ನನ್ನ ಬಳಿ 1.6 ಲಕ್ಷ ರೂಪಾಯಿ ಮೌಲ್ಯದ ಐದು ಎಮ್ಮೆಗಳು ಮತ್ತು 11 ಕರುಗಳಿದ್ದವು."

ಸಂಜೆ 4-11 ರ ನಡುವೆ ಏಳು ಗಂಟೆಗಳ ಕಾಲ, ಸಮೀರ್ ಯಾರಾದರೂ ಬಂದು ಕಾಣೆಯಾದ ತನ್ನ ಜಾನುವಾರುಗಳ ಕುರಿತು ವಿವರಿಸಬಹುದೆಂದು ತಾಳ್ಮೆಯಿಂದ ಕಾಯುತ್ತಿದ್ದರು. ಅಂತಿಮವಾಗಿ, ಪೊಲೀಸ್ ಅಧಿಕಾರಿ ಮರುದಿನ ಹಿಂತಿರುಗುವಂತೆ ಒತ್ತಡ ಹೇರಿದರು. "ಪೊಲೀಸರು ಅವರಿಗೆ ಪ್ರಶ್ನೆಗಳನ್ನು ಕೇಳಲು ಹೆದರುತ್ತಾರೆ" ಎಂದು ಸಮೀರ್ ಹೇಳುತ್ತಾರೆ. "ಮರುದಿನ ನಾನು ಹಿಂದಿರುಗುವ ಹೊತ್ತಿಗೆ, ಗೋರಕ್ಷಕರು ತಡೆಯಾಜ್ಞೆಯನ್ನು ಸಿದ್ಧಪಡಿಸಿದ್ದರು."

ಮಾನಸಿಕ ಒತ್ತಡದ ಹೊರತಾಗಿಯೂ, ಜಾನುವಾರುಗಳ ಮೌಲ್ಯಕ್ಕಿಂತ ಹೆಚ್ಚಿನ ಹಣವನ್ನು ಖರ್ಚು ಮಾಡಬೇಕಾಗುತ್ತದೆ ಎಂಬ ಭಯದಿಂದ ಸಮೀರ್ ನ್ಯಾಯಾಲಯದಲ್ಲಿ ಪ್ರಕರಣದ ವಿರುದ್ಧ ಹೋರಾಡುವುದನ್ನು ಬಿಟ್ಟಿದ್ದಾರೆ. "ಆದರೆ ಅವರು ಜಾನುವಾರುಗಳನ್ನು ನಮ್ಮಿಂದ ವಶಪಡಿಸಿಕೊಂಡ ನಂತರ ಅದನ್ನು ಏನು ಮಾಡುತ್ತಾರೆಂದು ತಿಳಿಯಲು ನಾನು ಬಯಸುತ್ತೇನೆ?" ಎಂದು ಅವರು ಕೇಳುತ್ತಾರೆ. "ನನ್ನ ಜಾನುವಾರುಗಳು ಎಲ್ಲಿದ್ದವು? ಇದನ್ನು ಗಮನಿಸಿದವನು ನಾನೊಬ್ಬನೇ ಅಲ್ಲ. ಗೋರಕ್ಷಕರು ಜಾನುವಾರುಗಳನ್ನು ವಶಪಡಿಸಿಕೊಂಡ ನಂತರ ಅವು ಕಣ್ಮರೆಯಾಗುವುದನ್ನು ನನ್ನ ಅನೇಕ ಸಹೋದ್ಯೋಗಿಗಳು ನೋಡಿದ್ದಾರೆ. ಅವರು ಅವುಗಳನ್ನು ಮತ್ತೆ ಮಾರಾಟ ಮಾಡುತ್ತಿದ್ದಾರೆಯೇ? ಇದೊಂದು ದಂಧೆ ಇರಬಹುದೆ?" ಅವರು ಎಂದು ಪ್ರಶ್ನಿಸುತ್ತಾರೆ.

ಕೆಲವು ಸಂದರ್ಭಗಳಲ್ಲಿ ಗೋರಕ್ಷಕರು ಜಾನುವಾರುಗಳನ್ನು ಬಿಡುಗಡೆ ಮಾಡಿದಾಗ, ನ್ಯಾಯಾಲಯದ ಪ್ರಕರಣದ ಅವಧಿಯವರೆಗೆ ಪ್ರಾಣಿಗಳನ್ನು ನೋಡಿಕೊಂಡಿದ್ದಕ್ಕೆ ಪರಿಹಾರ ಕೊಡುವಂತೆ ಕೇಳುತ್ತಾರೆ ಎಂದು ವ್ಯಾಪಾರಿಗಳು ಹೇಳುತ್ತಾರೆ. ಪುಣೆಯ ಮತ್ತೊಬ್ಬ ವ್ಯಾಪಾರಿ 28 ವರ್ಷದ ಶಹನವಾಜ್ ಖುರೇಷಿ, ಗೋರಕ್ಷಕರು ಪ್ರತಿ ಪ್ರಾಣಿಗೆ ದಿನಕ್ಕೆ 50 ರೂ.ಗಳನ್ನು ಕೇಳುತ್ತಾರೆ ಎಂದು ಹೇಳುತ್ತಾರೆ. "ಅಂದರೆ, ಅವರು 15 ಪ್ರಾಣಿಗಳನ್ನು ಒಂದೆರಡು ತಿಂಗಳು ಆರೈಕೆ ಮಾಡಿದರೆ, ಅವುಗಳನ್ನು ಹಿಂಪಡೆಯಲು ನಾವು 45,000 ರೂ.ಗಳನ್ನು ಪಾವತಿಸಬೇಕಾಗುತ್ತದೆ" ಎಂದು ಅವರು ಹೇಳುತ್ತಾರೆ. "ನಾವು ವರ್ಷಗಳಿಂದ ಈ ವ್ಯವಹಾರದಲ್ಲಿದ್ದೇವೆ. ಇದು ಅಸಂಬದ್ಧ ಮೊತ್ತ ಮತ್ತು ಸುಲಿಗೆ ನಡೆಸಲಾಗುತ್ತಿದೆ.”

PHOTO • Parth M.N.

ಕೆಲವು ಸಂದರ್ಭಗಳಲ್ಲಿ ಗೋರಕ್ಷಕರು ಜಾನುವಾರುಗಳನ್ನು ಬಿಡುಗಡೆ ಮಾಡಿದಾಗ, ನ್ಯಾಯಾಲಯದ ಪ್ರಕರಣದ ಅವಧಿಯವರೆಗೆ ಪ್ರಾಣಿಗಳನ್ನು ನೋಡಿಕೊಂಡಿದ್ದಕ್ಕೆ ಪರಿಹಾರ ಕೊಡುವಂತೆ ಕೇಳುತ್ತಾರೆ ಎನ್ನುತ್ತಾರೆ ಶಹನವಾಜ್ ಖುರೇಷಿ

ಪುಣೆ ಜಿಲ್ಲೆಯ ಸಾಸ್ವಾಡ್ ಎಂಬ ಸಣ್ಣ ಪಟ್ಟಣದಲ್ಲಿ, 14 ವರ್ಷದ ಸುಮಿತ್ ಗಾವ್ಡೆ ಜಾನುವಾರುಗಳನ್ನು ಸಾಗಿಸುತ್ತಿದ್ದ ಟ್ರಕ್ ಚಾಲಕನ ಮೇಲೆ ಹಲ್ಲೆ ನಡೆಸುವುದನ್ನು ನೋಡಿದ್ದಾನೆ. ಇದು ನಡೆದದ್ದು 2014ರಲ್ಲಿ.

“ಅದನ್ನು ನೋಡಿ ನನಗೆ ರೋಮಾಂಚನವಾಗಿತ್ತು, ನಾನೂ ಹಾಗೆ ಮಾಡಬೇಕು ಎನ್ನಿಸಿತ್ತು” ಎನ್ನುತ್ತಾರೆ ಗಾವಡೆ.

ಪುಣೆ ಜಿಲ್ಲೆಯು ಬರುವ ಪಶ್ಚಿಮ ಮಹಾರಾಷ್ಟ್ರದ ಈ ಪ್ರದೇಶದಲ್ಲಿ 88 ವರ್ಷದ ತೀವ್ರಗಾಮಿ ಹಿಂದೂ ರಾಷ್ಟ್ರೀಯವಾದಿ ಸಂಭಾಜಿ ಭಿಡೆ ಅತ್ಯಂತ ಜನಪ್ರಿಯರಾಗಿದ್ದಾರೆ. ಅವರು ಚಿಕ್ಕ ಹುಡುಗರನ್ನು ಬ್ರೈನ್ ವಾಶ್ ಮಾಡಿದ ಇತಿಹಾಸವನ್ನು ಹೊಂದಿದ್ದಾರೆ ಮತ್ತು ಹಿಂದಿನ ಯೋಧ ರಾಜ ಶಿವಾಜಿಯ ಪರಂಪರೆಯನ್ನು ಮುಸ್ಲಿಂ ವಿರೋಧಿ ಭಾವನೆಯನ್ನು ಮತ್ತಷ್ಟು ಹೆಚ್ಚಿಸಲು ದುರುಪಯೋಗಪಡಿಸಿಕೊಂಡಿದ್ದಾರೆ.

"ನಾನು ಅವರ ಭಾಷಣಗಳಿಗೆ ಹಾಜರಾಗಿದ್ದೆ, ಅಲ್ಲಿ ಅವರು ಮುಸ್ಲಿಮರಾದ ಮೊಘಲರನ್ನು ಶಿವಾಜಿ ಹೇಗೆ ಸೋಲಿಸಿದರು ಎಂಬುದರ ಬಗ್ಗೆ ಮಾತನಾಡಿದರು" ಎಂದು ಗಾವ್ಡೆ ಹೇಳುತ್ತಾರೆ. "ಅವರು ಹಿಂದೂ ಧರ್ಮದ ಬಗ್ಗೆ ಮತ್ತು ನಮ್ಮನ್ನು ರಕ್ಷಿಸಿಕೊಳ್ಳುವ ಅಗತ್ಯದ ಬಗ್ಗೆ ಜನರಿಗೆ ಶಿಕ್ಷಣ ನೀಡಿದರು."

ಕುತೂಹಲಿ 14 ವರ್ಷದ ಹುಡುಗನಿಗೆ, ಭಿಡೆ ಅವರ ಭಾಷಣಗಳು ಶಕ್ತಿ ತುಂಬಿದವು.  ಗೋರಕ್ಷಣೆಯನ್ನು ಹತ್ತಿರದಿಂದ ಗಮನಿಸುವುದು ರೋಮಾಂಚನಕಾರಿಎಂದು ಗಾವ್ಡೆ ಹೇಳುತ್ತಾರೆ. ಅವರು ಭಿಡೆ ಸ್ಥಾಪಿಸಿದ ಶಿವ ಪ್ರತಿಷ್ಠಾನ್ ಹಿಂದೂಸ್ತಾನ್ ಸಂಘಟನೆಯ ನಾಯಕ ಪಂಡಿತ್ ಮೋದಕ್ ಅವರೊಂದಿಗೆ ಸಂಪರ್ಕಕ್ಕೆ ಬಂದರು.

ಸಾಸ್ವಾಡ್ ಮೂಲದ ಮೋದಕ್ ಪುಣೆಯ ಪ್ರಮುಖ ಹಿಂದೂ ರಾಷ್ಟ್ರೀಯವಾದಿ ನಾಯಕಮತ್ತು ಪ್ರಸ್ತುತ ಬಿಜೆಪಿಯೊಂದಿಗೆ ನಿಕಟ ಸಂಬಂಧ ಹೊಂದಿದ್ದಾರೆ. ಸಾಸ್ವಾಡ್ ಮತ್ತು ಸುತ್ತಮುತ್ತಲಿನ ಗೋರಕ್ಷಕರು ಮೋದಕ್ ಕೆಳಗೆ ಕೆಲಸ ಮಾಡುತ್ತಾರೆ.

ಗಾವ್ಡೆ ಈಗ ಒಂದು ದಶಕದಿಂದ ಮೋದಕ್ ಪರವಾಗಿ ಕೆಲಸ ಮಾಡುತ್ತಿದ್ದಾರೆ ಮತ್ತು ಈ ಕಾರಣಕ್ಕಾಗಿ ಸಂಪೂರ್ಣವಾಗಿ ಬದ್ಧರಾಗಿದ್ದಾರೆ. "ನಮ್ಮ ಕಾವಲು ರಾತ್ರಿ 10:30ಕ್ಕೆ ಪ್ರಾರಂಭವಾಗುತ್ತದೆ ಮತ್ತು ಮುಂಜಾನೆ ನಾಲ್ಕು ಗಂಟೆಯವರೆಗೆ ಮುಂದುವರಿಯುತ್ತದೆ" ಎಂದು ಅವರು ಹೇಳುತ್ತಾರೆ. "ಏನಾದರೂ ಅನುಮಾನ ಮೂಡಿದರೆ ನಾವು ವಾಹನವನ್ನು ನಿಲ್ಲಿಸುತ್ತೇವೆ. ಚಾಲಕನನ್ನು ವಿಚಾರಣೆ ನಡೆಸಿ ಪೊಲೀಸ್ ಠಾಣೆಗೆ ಕರೆದೊಯ್ಯುತ್ತೇವೆ. ಪೊಲೀಸರು ಯಾವಾಗಲೂ ನಮಗೆ ಸಹಕಾರ ನೀಡುತ್ತಾರೆ.”

ಗಾವ್ಡೆ ಹಗಲಿನಲ್ಲಿ ಗಾರೆ ಕೆಲಸ ಮಾಡುತ್ತಾರೆ, ಆದರೆ ಅವರು "ಗೋರಕ್ಷಕ" ಆದಾಗಿನಿಂದ, ಸುತ್ತಲಿನ ಜನರು ತನ್ನನ್ನು ಗೌರವದಿಂದ ಕಾಣಲು ಪ್ರಾರಂಭಿಸಿದ್ದಾರೆ ಎಂದು ಹೇಳುತ್ತಾರೆ. "ನಾನು ಅದನ್ನು ಹಣಕ್ಕಾಗಿ ಮಾಡುವುದಿಲ್ಲ" ಎಂದು ಅವರು ಸ್ಪಷ್ಟಪಡಿಸುತ್ತಾರೆ. "ನಾವು ನಮ್ಮ ಬದುಕನ್ನು ಒತ್ತೆ ಇಡುತ್ತೇವೆ ಮತ್ತು ನಮ್ಮ ಸುತ್ತಲಿನ ಹಿಂದೂಗಳು ಅದನ್ನು ಒಪ್ಪಿಕೊಳ್ಳುತ್ತಾರೆ."

ಸಾಸ್ವಾಡ್ ಗ್ರಾಮವು ಬರುವ ಪುರಂದರದ ಒಂದು ತಾಲೂಕಿನಲ್ಲಿ ಮಾತ್ರವೇ ಸುಮಾರು 150 ಗೋರಕ್ಷಕರಿದ್ದಾರೆ ಎಂದು ಗಾವ್ಡೆ ಹೇಳುತ್ತಾರೆ. "ನಮ್ಮ ಜನರು ಎಲ್ಲಾ ಹಳ್ಳಿಗಳಲ್ಲಿ ಸಂಪರ್ಕ ಹೊಂದಿದ್ದಾರೆ" ಎಂದು ಅವರು ಹೇಳುತ್ತಾರೆ. "ಅವರು ಕಾವಲಿನಲ್ಲಿ ಭಾಗವಹಿಸಲು ಸಾಧ್ಯವಾಗದಿರಬಹುದು, ಆದರೆ ಅನುಮಾನಾಸ್ಪದ ವಾಹನವನ್ನು ನೋಡಿದಾಗಲೆಲ್ಲಾ ಮಾಹಿತಿ ನೀಡುತ್ತಾರೆ."

PHOTO • Parth M.N.

ಗೋರಕ್ಷಕರು ಪ್ರತಿ ಜಾನುವಾರಿಗೆ ಒಂದು ದಿನಕ್ಕೆ 50 ರೂಪಾಯಿಗಳನ್ನು ನೀಡುವಂತೆ ಕೇಳುತ್ತಾರೆ. 'ಇದರರ್ಥ 15 ಜಾನುವಾರುಗಳನ್ನು ಒಂದೆರಡು ತಿಂಗಳು ಆರೈಕೆ ಮಾಡಿದರೆ, ಅವುಗಳನ್ನು ಹಿಂಪಡೆಯಲು ನಾವು 45,000 ರೂ.ಗಳನ್ನು ಪಾವತಿಸಬೇಕಾಗುತ್ತದೆ' ಎಂದು ಅವರು ಹೇಳುತ್ತಾರೆ. 'ನಾವು ವರ್ಷಗಳಿಂದ ಈ ವ್ಯವಹಾರದಲ್ಲಿದ್ದೇವೆ. ಇದು ಅಸಂಬದ್ಧ ಮೊತ್ತ ಮತ್ತು ಸುಲಿಗೆ ನಡೆಸಲಾಗುತ್ತಿದೆ.' ಎನ್ನುತ್ತಾರೆ ಶಾನವಾಜ್

ಹಸುಗಳು ಗ್ರಾಮೀಣ ಆರ್ಥಿಕತೆಯ ಕೇಂದ್ರಬಿಂದು. ದಶಕಗಳಿಂದ, ರೈತರು ಪ್ರಾಣಿಗಳನ್ನು ವಿಮೆಯಾಗಿ ಬಳಸುತ್ತಿದ್ದಾರೆ - ಅವರು ಮದುವೆ, ಔಷಧಿ ಅಥವಾ ಮುಂಬರುವ ಬೆಳೆ ಋತುವಿನಲ್ಲಿ ತಕ್ಷಣದ ಬಂಡವಾಳವನ್ನು ಸಂಗ್ರಹಿಸಲು ತಮ್ಮ ಜಾನುವಾರುಗಳನ್ನು ಮಾರಾಟ ಮಾಡುತ್ತಿದ್ದರು.

ಆದರೆ ಗೋರಕ್ಷಕ ಗುಂಪುಗಳ ವಿಶಾಲ ಜಾಲವು ಅದನ್ನು ಸಂಪೂರ್ಣವಾಗಿ ನಾಶಪಡಿಸಿದೆ. ಪ್ರತಿ ವರ್ಷ ಕಳೆದಂತೆ, ಅವರ ಚಟುವಟಿಕೆಗಳು ಹೆಚ್ಚು ತೀವ್ರವಾಗುತ್ತವೆ, ಅವರ ಶಕ್ತಿ ಸಂಖ್ಯೆಯಲ್ಲಿ ಬೆಳೆಯುತ್ತದೆ. ಪ್ರಸ್ತುತ, ಶಿವ ಪ್ರತಿಷ್ಠಾನ್ ಹಿಂದೂಸ್ತಾನ್ ಹೊರತುಪಡಿಸಿ, ಕನಿಷ್ಠ ನಾಲ್ಕು ಹಿಂದೂ ರಾಷ್ಟ್ರೀಯವಾದಿ ಗುಂಪುಗಳು - ಬಜರಂಗದಳ, ಹಿಂದೂ ರಾಷ್ಟ್ರ ಸೇನೆ, ಸಮಸ್ತ ಹಿಂದೂ ಅಘಾಡಿ ಮತ್ತು ಹೋಯ್ ಹಿಂದೂ ಸೇನಾ - ಇವೆಲ್ಲವೂ ರಕ್ತಸಿಕ್ತ ಹಿಂಸಾಚಾರದ ಇತಿಹಾಸವನ್ನು ಹೊಂದಿವೆ - ಪುಣೆ ಜಿಲ್ಲೆಯಲ್ಲಿ ಸಕ್ರಿಯವಾಗಿವೆ.

"ತಳಮಟ್ಟದ ಕಾರ್ಯಕರ್ತರೆಲ್ಲರೂ ಪರಸ್ಪರರಿಗಾಗಿ ಕೆಲಸ ಮಾಡುತ್ತಾರೆ" ಎಂದು ಗಾವ್ಡೆ ಹೇಳುತ್ತಾರೆ. "ಇದರ ರಚನೆಯು ಸಂಕೀರ್ಣವಾಗಿದೆ. ನಮ್ಮ ಉದ್ದೇಶ ಒಂದೇ ಆಗಿರುವುದರಿಂದ ನಾವು ಪರಸ್ಪರ ಸಹಾಯ ಮಾಡುತ್ತೇವೆ.”

ಪುರಂಧರ ಒಂದರಲ್ಲೇ ತಿಂಗಳಿಗೆ ಸುಮಾರು ಐದು ವಾಹನಗಳನ್ನು ತಡೆಯವುದಾಗಿ ಗಾವ್ಡೆ ಹೇಳುತ್ತಾರೆ. ಈ ವಿಭಿನ್ನ ಗುಂಪುಗಳ ಸದಸ್ಯರು ಪುಣೆಯ ಕನಿಷ್ಠ ಏಳು ತಾಲ್ಲೂಕುಗಳಲ್ಲಿ ಸಕ್ರಿಯರಾಗಿದ್ದಾರೆ. ಅಂದರೆ ತಿಂಗಳಿಗೆ 35 ವಾಹನಗಳು, ಅಥವಾ ವರ್ಷಕ್ಕೆ 400.

ಲೆಕ್ಕ ಸರಿಯಿದೆ.

ಪುಣೆಯ ಖುರೇಷಿ ಸಮುದಾಯದ ಹಿರಿಯ ಸದಸ್ಯರು 2023ರಲ್ಲಿ ತಮ್ಮ ಸುಮಾರು 400-450 ವಾಹನಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಅಂದಾಜಿಸುತ್ತಾರೆ - ಪ್ರತಿಯೊಂದೂ ಕನಿಷ್ಠ 2 ಲಕ್ಷ ರೂ.ಗಳ ಮೌಲ್ಯದ ಜಾನುವಾರುಗಳನ್ನು ಸಾಗಿಸುತ್ತಿತ್ತು. ಸಾಂಪ್ರದಾಯಿಕ ಅಂದಾಜಿನ ಪ್ರಕಾರ, ಮಹಾರಾಷ್ಟ್ರದ 36 ಜಿಲ್ಲೆಗಳ ಪೈಕಿ ಕೇವಲ ಒಂದು ಜಿಲ್ಲೆಯಲ್ಲಿ ಗೋರಕ್ಷಕರು 8 ಕೋಟಿ ರೂ.ಗಳ ನಷ್ಟವನ್ನುಂಟು ಮಾಡಿದ್ದಾರೆ, ಇದು ಖುರೇಷಿ ಸಮುದಾಯವು ತಮ್ಮ ಜೀವನೋಪಾಯವನ್ನು ತ್ಯಜಿಸಲು ಯೋಚಿಸುವಂತೆ ಮಾಡಿದೆ.

"ನಾವು ಎಂದಿಗೂ ಕಾನೂನನ್ನು ನಮ್ಮ ಕೈಯಲ್ಲಿ ತೆಗೆದುಕೊಳ್ಳುವುದಿಲ್ಲ" ಎಂದು ಗಾವ್ಡೆ ಹೇಳುತ್ತಾರೆ. "ನಾವು ಯಾವಾಗಲೂ ಕಾನೂನನ್ನು ಅನುಸರಿಸುತ್ತೇವೆ."

ಆದರೆ ಗೋರಕ್ಷಕರ ಆಕ್ರೋಶಕ್ಕೆ ಒಳಗಾದ ವಾಹನಗಳ ಚಾಲಕರು ಬೇರೆಯದೇ ಕತೆ ಹೇಳುತ್ತಾರೆ.

*****

2023ರ ಆರಂಭದಲ್ಲಿ, 25 ಎಮ್ಮೆಗಳನ್ನು ಹೊತ್ತ ಶಬ್ಬೀರ್ ಮೌಲಾನಾ ಅವರ ವಾಹನವನ್ನು ಸಾಸ್ವಾಡ್ ಪ್ರದೇಶದಲ್ಲಿ ಗೋರಕ್ಷಕರು ತಡೆದರು. ಅವರು ಆ ರಾತ್ರಿಯನ್ನು ಈಗಲೂ ಭಯದಿಂದ ನೆನಪಿಸಿಕೊಳ್ಳುತ್ತಾರೆ.

“ಆ ರಾತ್ರಿ ನನ್ನನ್ನು ಹೊಡೆದು ಕೊಲ್ಲುತ್ತಾರೆಂದು ಭಾವಿಸಿದ್ದೆ. ಎಂದು ಪುಣೆಯ ಉತ್ತರಕ್ಕೆ ಎರಡು ಗಂಟೆಗಳ ದೂರದಲ್ಲಿರುವ ಸತಾರಾ ಜಿಲ್ಲೆಯ ಭದಲೆ ಗ್ರಾಮದ ನಿವಾಸಿ 43 ವರ್ಷದ ಮೌಲಾನಿ ಹೇಳುತ್ತಾರೆ. "ಅಂದು ನನ್ನನ್ನು ನಿಂದಿಸಲಾಯಿತು ಮತ್ತು ಕೆಟ್ಟದಾಗಿ ಥಳಿಸಲಾಯಿತು. ನಾನು ಕೇವಲ ಚಾಲಕ ಎಂದು ಅವರಿಗೆ ಹೇಳಲು ಪ್ರಯತ್ನಿಸಿದೆ, ಆದರೆ ಅದರಿಂದ ಪ್ರಯೋಜನವಾಗಲಿಲ್ಲ.”

PHOTO • Parth M.N.

2023ರಲ್ಲಿ ಶಬ್ಬೀರ್ ಮೌಲಾನಾ ಅವರ ವಾಹನಗಳನ್ನು ತಡೆದು ಥಳಿಸಲಾಗಿತ್ತು. ಈಗ, ಪ್ರತಿ ಬಾರಿ, ಮೌಲಾನಾ ಮನೆಯಿಂದ ಹೊರಟಾಗ, ಅವರ ಪತ್ನಿ ಸಮೀನಾ ಪತಿ ಜೀವಂತವಾಗಿರುವುದನ್ನು ಖಚಿತಪಡಿಸಿಕೊಳ್ಳಲು ಪ್ರತಿ ಅರ್ಧ ಗಂಟೆಗೊಮ್ಮೆ ಕರೆ ಮಾಡುತ್ತಲೇ ಇರುತ್ತಾರೆ. 'ನಾನು ಈ ಕೆಲಸವನ್ನು ಬಿಡಲು ಬಯಸುತ್ತೇನೆ, ಆದರೆ ಇಡೀ ಜೀವಮಾನ ಇದೇ ಕೆಲಸ ಮಾಡಿದವನು. ಮನೆಯನ್ನು ನಡೆಸಲು ನನಗೆ ಹಣ ಬೇಕು' ಎಂದು ಮೌಲಾನಿ ಹೇಳುತ್ತಾರೆ

ಗಾಯಗೊಂಡ ಮೌಲಾನಿಯವರನ್ನು ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು, ಅಲ್ಲಿ ಅವರ ವಿರುದ್ಧ ಪ್ರಾಣಿ ಕ್ರೌರ್ಯ ಕಾಯ್ದೆಯಡಿ ಆರೋಪ ಹೊರಿಸಿ ಪ್ರಕರಣ ದಾಖಲಿಸಲಾಯಿತು. ಅವರನ್ನು ಥಳಿಸಿದ ಜನರು ಯಾವುದೇ ಪರಿಣಾಮಗಳನ್ನು ಎದುರಿಸಲಿಲ್ಲ. "ಗೋರಕ್ಷಕರು ನನ್ನ ವಾಹನದಿಂದ 20,000 ರೂ.ಗಳನ್ನು ಸಹ ಲೂಟಿ ಮಾಡಿದ್ದಾರೆ" ಎಂದು ಅವರು ಹೇಳುತ್ತಾರೆ. "ನಾನು ಅದನ್ನು ಪೊಲೀಸರಿಗೆ ವಿವರಿಸಲು ಪ್ರಯತ್ನಿಸಿದೆ. ಆರಂಭದಲ್ಲಿ, ಅವರು ನನ್ನ ಮಾತನ್ನು ಕೇಳಿದರು. ಆದರೆ ನಂತರ ಪಂಡಿತ್ ಮೋದಕ್ ತಮ್ಮ ಕಾರಿನಲ್ಲಿ ಬಂದರು. ಅದರ ನಂತರ ಪೊಲೀಸರು ಸಂಪೂರ್ಣವಾಗಿ ಅವರ ಹಿಡಿತದಲ್ಲಿದ್ದರು."

ತಿಂಗಳಿಗೆ 15,000 ರೂ.ಗಳನ್ನು ಸಂಪಾದಿಸುವ ಮೌಲಾನಿ, ಒಂದು ತಿಂಗಳ ನಂತರ ತನ್ನ ಮಾಲೀಕರ ವಾಹನವನ್ನು ಹಿಂಪಡೆಯಲು ಸಾಧ್ಯವಾಯಿತು, ಆದರೆ ಜಾನುವಾರುಗಳು ಇನ್ನೂ ಗೋರಕ್ಷಕರ ಬಳಿ ಇವೆ. "ನಾವು ಕಾನೂನುಬಾಹಿರವಾಗಿ ಏನಾದರೂ ಮಾಡಿದ್ದರೆ, ಪೊಲೀಸರು ನಮ್ಮನ್ನು ಶಿಕ್ಷಿಸಲಿ" ಎಂದು ಅವರು ಹೇಳುತ್ತಾರೆ. "ನಮ್ಮನ್ನು ಬೀದಿಗಳಲ್ಲಿ ಹೊಡೆಯಲು ಅವರಿಗೆ ಏನು ಹಕ್ಕಿದೆ?"

ಪ್ರತಿ ಬಾರಿ ಮೌಲಾನಿ ತನ್ನ ಮನೆಯಿಂದ ಹೊರಬಿದ್ದಾಗಲೂ, ಅವರ 40 ವರ್ಷದ ಪತ್ನಿ ಸಮೀನಾರಿಗೆ ನಿದ್ರೆ ಮಾಡಲು ಸಾಧ್ಯವಾಗುತ್ತಿಲ್ಲ. ಅವರು ಜೀವಂತವಾಗಿರುವುದನ್ನು ಖಚಿತಪಡಿಸಿಕೊಳ್ಳಲು ಪ್ರತಿ ಅರ್ಧ ಗಂಟೆಗೊಮ್ಮೆ ಗಂಡನಿಗೆ ಕರೆ ಮಾಡುತ್ತಲೇ ಇರುತ್ತಾರೆ. "ನೀವು ಅವಳನ್ನು ದೂಷಿಸಲು ಸಾಧ್ಯವಿಲ್ಲ" ಎಂದು ಅವರು ಹೇಳುತ್ತಾರೆ. "ನಾನು ಈ ಕೆಲಸವನ್ನು ಬಿಡಲು ಬಯಸುತ್ತೇನೆ, ಆದರೆ ಇಡೀ ಜೀವನ ಇದೇ ಕೆಲಸ ಮಾಡಿದ್ದು. ನನಗೆ ಇಬ್ಬರು ಮಕ್ಕಳು ಮತ್ತು ಅನಾರೋಗ್ಯದಿಂದ ಬಳಲುತ್ತಿರುವ ತಾಯಿ ಇದ್ದಾರೆ. ಮನೆ ನಡೆಸಲು ನನಗೆ ಹಣ ಬೇಕು."

ಮೌಲಾನಿಯವರ ರೀತಿಯ ಹಲವಾರು ಪ್ರಕರಣಗಳನ್ನು ನಿರ್ವಹಿಸಿರುವ ಸತಾರಾ ಮೂಲದ ವಕೀಲ ಸರ್ಫರಾಜ್ ಸಯ್ಯದ್, ಗೋರಕ್ಷಕರು ನಿಯಮಿತವಾಗಿ ವಾಹನಗಳಿಂದ ಹಣವನ್ನು ಲೂಟಿ ಮಾಡುತ್ತಾರೆ ಮತ್ತು ಚಾಲಕರನ್ನು ನಿರ್ದಯವಾಗಿ ಥಳಿಸುತ್ತಾರೆ ಎಂದು ಹೇಳುತ್ತಾರೆ. "ಆದರೆ ಅವುಗಳಲ್ಲಿ ಯಾವುದೂ ಪ್ರಥಮ ವರ್ತಮಾನ ವರದಿಯಲ್ಲಿ ದಾಖಲಾಗುವುದಿಲ್ಲ" ಎಂದು ಅವರು ಹೇಳುತ್ತಾರೆ. "ಜಾನುವಾರುಗಳನ್ನು ಸಾಗಿಸುವುದು ಹಳೆಯ ವ್ಯವಹಾರ, ಮತ್ತು ನಮ್ಮ ಪಶ್ಚಿಮ ಮಹಾರಾಷ್ಟ್ರ ಪ್ರದೇಶದ ಮಾರುಕಟ್ಟೆಗಳು ಇದಕ್ಕೆ ಪ್ರಸಿದ್ಧ. ಅವರೆಲ್ಲರೂ ಒಂದೇ ಹೆದ್ದಾರಿಯಲ್ಲಿ ಸಾಗುವುದರಿಂದ ಚಾಲಕರನ್ನು ಪತ್ತೆಹಚ್ಚುವುದು ಮತ್ತು ಕಿರುಕುಳ ನೀಡುವುದು ಅವರಿಗೆ ಕಷ್ಟವಲ್ಲ.”

ಕೆಲಸ ಮಾಡಲು ಚಾಲಕರನ್ನು ಹುಡುಕುವುದೇ ಕಷ್ಟವಾಗಿದೆ ಎಂದು ಲೋಂಡೆ ಹೇಳುತ್ತಾರೆ. "ಸಂಬಳ ಕಡಿಮೆ ಮತ್ತು ಕೆಲಸದ ಲಭ್ಯತೆಯೂ ಕಡಿಮೆಯಿದ್ದರೂ ಹೆಚ್ಚಿನವರು ಕೂಲಿ ಕೆಲಸಕ್ಕೇ ಪ್ರಾಶಸ್ತ್ಯ ಕೊಡುತ್ತಾರೆ" ಎಂದು ಅವರು ಹೇಳುತ್ತಾರೆ. "ಜಾನುವಾರುಗಗಳಿರುವ ವಾಹನ ಓಡಿಸುವುದು ನಿಮ್ಮ ಜೀವವನ್ನು ಪಣಕ್ಕಿಟ್ಟಂತೆ. ಇದು ತುಂಬಾ ಒತ್ತಡದ ಕೆಲಸ. ಈ ಗೂಂಡಾರಾಜ್ ಗ್ರಾಮೀಣ ಆರ್ಥಿಕತೆಯನ್ನು ನಾಶಪಡಿಸಿದೆ.”

ಇಂದು ಇದೆಲ್ಲದರಿಂದಾಗಿ ರೈತರಿಗೆ ಜಾನುವಾರುಗಳಿಗೆ ಕಡಿಮೆ ಹಣ ಸಿಗುತ್ತಿದೆ ಎಂದು ಅವರು ಹೇಳುತ್ತಾರೆ. ವ್ಯಾಪಾರಿಗಳು ಹಣವನ್ನು ಕಳೆದುಕೊಳ್ಳುತ್ತಿದ್ದಾರೆ, ಮತ್ತು ಚಾಲಕರ ಕೊರತೆಯು ಈಗಾಗಲೇ ಮುಳುಗುತ್ತಿರುವ ಉದ್ಯೋಗದ ಮಾರುಕಟ್ಟೆಯನ್ನು ಇನ್ನಷ್ಟು ಮುಳುಗಿಸುತ್ತಿದೆ.

"ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ ತರುವವರು ಮಾತ್ರ ಅಭಿವೃದ್ಧಿ ಹೊಂದಿದ್ದಾರೆ."

ಅನುವಾದ: ಶಂಕರ. ಎನ್. ಕೆಂಚನೂರು

Parth M.N.

ପାର୍ଥ ଏମ୍.ଏନ୍. ୨୦୧୭ର ଜଣେ PARI ଫେଲୋ ଏବଂ ବିଭିନ୍ନ ୱେବ୍ସାଇଟ୍ପାଇଁ ଖବର ଦେଉଥିବା ଜଣେ ସ୍ୱାଧୀନ ସାମ୍ବାଦିକ। ସେ କ୍ରିକେଟ୍ ଏବଂ ଭ୍ରମଣକୁ ଭଲ ପାଆନ୍ତି ।

ଏହାଙ୍କ ଲିଖିତ ଅନ୍ୟ ବିଷୟଗୁଡିକ Parth M.N.
Editor : PARI Desk

ପରୀ ସମ୍ପାଦକୀୟ ବିଭାଗ ଆମ ସମ୍ପାଦନା କାର୍ଯ୍ୟର ପ୍ରମୁଖ କେନ୍ଦ୍ର। ସାରା ଦେଶରେ ଥିବା ଖବରଦାତା, ଗବେଷକ, ଫଟୋଗ୍ରାଫର, ଚଳଚ୍ଚିତ୍ର ନିର୍ମାତା ଓ ଅନୁବାଦକଙ୍କ ସହିତ ସମ୍ପାଦକୀୟ ଦଳ କାର୍ଯ୍ୟ କରିଥାଏ। ସମ୍ପାଦକୀୟ ବିଭାଗ ପରୀ ଦ୍ୱାରା ପ୍ରକାଶିତ ଲେଖା, ଭିଡିଓ, ଅଡିଓ ଏବଂ ଗବେଷଣା ରିପୋର୍ଟର ପ୍ରଯୋଜନା ଓ ପ୍ରକାଶନକୁ ପରିଚାଳନା କରିଥାଏ।

ଏହାଙ୍କ ଲିଖିତ ଅନ୍ୟ ବିଷୟଗୁଡିକ PARI Desk
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

ଏହାଙ୍କ ଲିଖିତ ଅନ୍ୟ ବିଷୟଗୁଡିକ Shankar N. Kenchanuru