ಪರಿ ಬೆಂಗಳೂರಿನ ಶಾಲೆಯೊಂದರಲ್ಲಿ ಪರಿ ಚಟುವಟಿಕೆಗಳು ಕುರಿತ ಪ್ರಸ್ತುತಿಯೊಂದರಲ್ಲಿ ತೊಡಗಿಸಿಕೊಂಡಿತ್ತು. ಆಗ ಅಲ್ಲಿ ಕುಳಿತಿದ್ದ ವಿದ್ಯಾರ್ಥಿಯೊಬ್ಬ “ಅಸಮಾನತೆಯಲ್ಲಿ ತಪ್ಪೇನಿದೆ?” ಎಂದು ಗೊಂದಲದಿಂದ ಕೇಳಿದ.
“ಕಿರಾಣಿ ಅಂಗಡಿಯವರು ತಮ್ಮದೇ ಆದ ಸಣ್ಣ ಅಂಗಡಿಯನ್ನು ಹೊಂದಿರುತ್ತಾರೆ. ಹಾಗೆಯೇ ಅಂಬಾನಿಯ ಬಳಿ ದೊಡ್ಡ ಉದ್ಯಮವಿದೆ. ಶ್ರಮವಹಿಸಿ ಕೆಲಸ ಮಾಡುವವರು ಯಶಸ್ಸು ಗಳಿಸುತ್ತಾರೆ” ಎಂದು ತನ್ನ ತರ್ಕದ ಕುರಿತು ವಿಶ್ವಾಸದಿಂದ ನುಡಿದ.
ಶಿಕ್ಷಣ, ಆರೋಗ್ಯ ಮತ್ತು ನ್ಯಾಯದ ಅಸಮಾನ ಲಭ್ಯತೆಯ ಕುರಿತ ಪರಿ ವರದಿಯೊಡನೆ ಈ ʼಯಶಸ್ಸಿನ ಕತೆಯನ್ನುʼ ಬಿಡಿಸಿ ನೋಡಬಹುದು. ಪರಿ ಮೂಲಕ ನಾವು ಹೊಲಗಳಲ್ಲಿ, ಕಾಡುಗಳಲ್ಲಿ, ಮತ್ತು ನಗರಗಳ ಅಂಚಿನ ಪ್ರದೇಶಗಳಲ್ಲಿ ಹಾಗೂ ಇನ್ನಿತರ ಸ್ಥಳಗಳಲ್ಲಿ ದುಡಿಯುವ ಜನರ ಕತೆಗಳನ್ನು ಹೇಳುತ್ತೇವೆ ಮತ್ತು ಅವುಗಳನ್ನು ತರಗತಿಗಳಿಗೂ ಕೊಂಡೊಯ್ಯುತ್ತೇವೆ.
ನಮ್ಮ ಶಿಕ್ಷಣ ಕಾರ್ಯಕ್ರಮವು ಪ್ರಸ್ತುತ ಜನಸಾಮಾನ್ಯರ ಬದುಕಿನ ಕುರಿತು ವಿದ್ಯಾರ್ಥಿಗಳೊಂದಿಗೆ ಸಂವಹನ ನಡೆಸಲು ಪರಿ ಬಹು ಮಾಧ್ಯಮ ವೇದಿಕೆಯ ಪತ್ರಕರ್ತರನ್ನು ತರಗತಿಗೆ ಕರೆದೊಯ್ಯುತ್ತದೆ. ಶಾಲೆಗಳು ಮತ್ತು ಕಾಲೇಜುಗಳಲ್ಲಿ, ಭಾರತ ದೇಶದೆಲ್ಲೆಡೆಯ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ, ನಮ್ಮ ಕಥೆಗಳು, ಛಾಯಾಚಿತ್ರಗಳು, ಚಲನಚಿತ್ರಗಳು, ಸಂಗೀತ ಮತ್ತು ಕಲೆಗಳ ಸಂಗ್ರಹದ ಮೂಲಕ ನಾವು ವಿಭಿನ್ನ ದೃಷ್ಟಿಕೋನಗಳನ್ನು ಪ್ರಸ್ತುತಪಡಿಸುತ್ತೇವೆ.
ಚೆನ್ನೈ ಮೂಲದ ಹೈಸ್ಕೂಲ್ ವಿದ್ಯಾರ್ಥಿ ಅರ್ನವ್ ಹೇಳುವಂತೆ “ನಾವು ಅವರನ್ನು [ತಾನಿರುವ ಸಾಮಾಜಿಕ-ಆರ್ಥಿಕ ಗುಂಪಿಗಿಂತ ಕೆಳಗಿರುವ ಜನರನ್ನು] ಅಂಕಿ-ಅಂಶಗಳಾಗಿ ನೋಡುತ್ತೇವೆ, ನಾವು ಅವರನ್ನು ನಮ್ಮಂತೆಯೇ ಅವರೂ ಕಷ್ಟ ಸುಖಗಳನ್ನು ಹೊಂದಿರುವ ಮನುಷ್ಯರು ಎನ್ನುವಂತೆ ನೋಡುವುದಿಲ್ಲ.”
ಸಾಮಾಜಿಕ ಸಮಸ್ಯೆಗಳು ಸಂಕೀರ್ಣವಾಗಿರುತ್ತವೆ, ಆದರೆ ಆ ಕುರಿತು ತಿಳಿಯಲು ಒಂದು ವರದಿ ಸಾಕಾಗುತ್ತದೆ̤ 2,000 ಗಂಟೆಗಳ ಕಾಲ ಕಬ್ಬು ಕಡಿಯುವ ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಕೃಷಿ ಕೂಲಿ ಕಾರ್ಮಿಕರ ಕತೆಯನ್ನು ಹೇಳುವ ಈ ವರದಿಯೂ ಅಂತಹದ್ದೇ ಒಂದು ಕಣ್ತೆರೆಸುವ ವರದಿಯಾಗಿದೆ. ಈ ಕಾರ್ಮಿಕರು ದೂರದ ಊರುಗಳಿಂದ ಇಲ್ಲಿಗೆ ಪ್ರಯಾಣಿಸಿ ದಿನಕ್ಕೆ ಹದಿನಾಲ್ಕು ಗಂಟೆಗಳ ಕಾಲ ಬೆಳೆದು ನಿಂತಿರುವ ಕಬ್ಬು ಕತ್ತರಿಸುವ ಕೆಲಸವನ್ನು ಮಾಡುತ್ತಾರೆ. ಈ ವರದಿಯ ಈ ಜನರ ಬದುಕಿನ ಉಪಕತೆಗಳು ಮತ್ತು ಕೆಲಸಕ್ಕಾಗಿ ಅವರು ಪಡುವ ಕಷ್ಟಗಳನ್ನು ಶಕ್ತ ರೀತಿಯಲ್ಲಿ ವಿವರಿಸುತ್ತದೆ. ಇದು ಮರಾಠಾವಾಡಾದ 6 ಲಕ್ಷ ಕೃಷಿ ಕಾರ್ಮಿಕರು ಕಬ್ಬು ಕಡಿಯುವ ಕೆಲಸಕ್ಕೆ ವರ್ಷ ವರ್ಷ ಏಕೆ ಪ್ರಯಾಣಿಸುತ್ತಾರೆನ್ನುವುದನ್ನು ವಿವರಿಸುತ್ತದೆ.
ಈ ಕೃಷಿ ಕಾರ್ಮಿಕರು ಕೃಷಿ ರಂಗದ ಬಿಕ್ಕಟ್ಟುಗಳ ಕುರಿತು ಅನೇಕ ಒಳನೋಟಗಳನ್ನು ನೀಡುತ್ತಾರೆ. ಕಳಪೆ ನೀತಿಗಳು, ಹೆಚ್ಚುತ್ತಿರುವ ಒಳಸುರಿ ವೆಚ್ಚಗಳು, ಅನಿರೀಕ್ಷಿತ ಹವಮಾನ ಮಾದರಿಗಳು ಅವುಗಳಲ್ಲಿ ಕೆಲವು. ಈ ಕುಟುಂಬಗಳು ತಮ್ಮ ವಲಸೆಯ ಕಾರಣಕ್ಕಾಗಿ ತಮ್ಮ ಮಕ್ಕಳನ್ನೂ ಜೊತೆಗೆ ಕರೆದೊಯ್ಯುತ್ತಾರೆ. ಇದರಿಂದಾಗಿ ಆ ಮಕ್ಕಳು ಶಿಕ್ಷಣದಿಂದ ವಂಚಿತರಾಗುವುದರ ಜೊತೆಗೆ ಶಿಕ್ಷಣದ ಕೊರತೆಯಿಂದಾಗಿ ಅವರು ತಮ್ಮ ಹೆತ್ತವರಂತೆಯೇ ಜೀವನ ನಡೆಸಬೇಕಾದ ಅನಿವಾರ್ಯತೆಗೆ ಒಳಗಾಗುತ್ತಾರೆ.
ಪಠ್ಯಪುಸ್ತಕಗಳಲ್ಲಿ ಆಗಾಗ ಕಂಡು ಬರುವ ʼಬಡತನವೆನ್ನುವ ವಿಷ ಚಕ್ರʼ ಎನ್ನುವ ಪದದ ಉದಾಹರಣೆಯನ್ನು ತರಗತಿಗಳಲ್ಲಿ ಈಗ ಮಾನವರೇ ಪ್ರಸ್ತುತಪಡಿಸುತ್ತಾರೆ. ಇದೊಂದು ರೀತಿ ಮಕ್ಕಳು ಮಕ್ಕಳೊಡನೆ ಮಾತನಾಡಿದಂತೆ.
ಆರ್ಥಿಕ ಯಶಸ್ಸು ಎನ್ನುವುದು ಕೇವಲ ಸಾಮರ್ಥ್ಯಕ್ಕೆ ಸಂಬಂಧಿಸಿದ ವಿಷಯ ಎನ್ನುವ ಭ್ರಮೆಯನ್ನು ತೊಡೆದು ಹಾಕುವಲ್ಲಿ ಇಂತಹ ವರದಿಗಳು ಸಹಾಯ ಮಾಡುತ್ತವೆ.
ಅದೇ ತರಗತಿಯ ಇನ್ನೊಂದು ಮಗು ಹೇಳುತ್ತದೆ, ಸಾಮರ್ಥ್ಯದಿಂದಲೇ ಮೇಲೆ ಬರಬಹುದು ಎನ್ನುವಂತಿದ್ದಿದ್ದರೆ “ರಿಕ್ಷಾ ಓಡಿಸುವವರು ಕೂಡಾ ಶ್ರಮವಹಿಸಿ ಕೆಲಸ ಮಾಡುತ್ತಾರೆ” ಎಂದು ಮೇಲಿನ ವಿದ್ಯಾರ್ಥಿಯ ವಾದಕ್ಕೆ ಎದುರುತ್ತರ ಕೊಡುತ್ತಾನೆ.
ನಾವು ನೈಜ ಕತೆಗಳು, ನೈಜ ಅಂಕಿ-ಅಂಶಗಳನ್ನು ಬಳಸಿಕೊಂಡು ವರದಿ ಮಾಡುವ ಮೂಲಕ ಕೇವಲ ಸಮಾಜದ ಕುರಿತು ವಿಮರ್ಶಾತ್ಮಕ ನೋಟವನ್ನಷ್ಟೇ ಬೆಳೆಸಲು ಪ್ರಯತ್ನಿಸುತ್ತಿಲ್ಲ. ಅದರ ಜೊತೆಗೆ ಮಕ್ಕಳು ತಮ್ಮ ಸಹಜೀವಿಗಳ ಕುರಿತು ಅನುಭೂತಿಯನ್ನು ಬೆಳೆಸಿಕೊಳ್ಳುವಂತೆ, ಮತ್ತು ಅವರು ತಮ್ಮ ಆರಾಮ ವಲಯದಿಂದ ಹೊರಬಂದು ಜಗತ್ತನ್ನು ನೋಡಿ ಆ ಕುರಿತು ಯೋಚಿಸಲು ಕೂಡಾ ಪ್ರೇರೇಪಿಸುತ್ತೇವೆ.
ಈ ನಿಟ್ಟಿನಲ್ಲಿ ನಾವು ಶಿಕ್ಷಕರೊಂದಿಗೂ ಕೆಲಸ ಮಾಡುತ್ತೇವೆ. ಅವರು ನಾವು ಹೇಳಿ ಹೋದ ವಿಷಯಗಳನ್ನು ತರಗತಿಯಲ್ಲಿ ಮುಂದುವರೆಸುತ್ತಾರೆ. ಅವರು ಪರಿಯಲ್ಲಿನ ಉಷ್ಣ ಮತ್ತು ಹಸಿರು ಶಕ್ತಿಗಳಂತಹ ವಿಷಯಗಳ ವರದಿಗಳನ್ನು ಹುಡುಕಿ ಪಾಠ ಮಾಡುತ್ತಾರೆ. ಜೊತೆಗೆ ಜನರ ಬದುಕು ಮತ್ತು ಅವರ ಸಂಸ್ಕೃತಿಯ ಕುರಿತು ವಾಸ್ತವ ನೆಲೆಯ ಕತೆಗಳನ್ನು ತಿಳಿಸುತ್ತಾರೆ. ಬೋಧನಾ ಸಾಮಗ್ರಿಯಾಗಿ ಬಳಸಬಹುದಾದ ವೃತ್ತಿಪರವಾಗಿ ಭಾಷಾಂತರಿಸಲಾದ ಕಥೆಗಳನ್ನು ನೋಡಿದಾಗ ಭಾಷಾ ಶಿಕ್ಷಕರು ರೋಮಾಂಚನಗೊಳ್ಳುತ್ತಾರೆ: “ಈ ಕತೆಯ ಪಂಜಾಬಿ ಅನುವಾದ ಲಭ್ಯವಿದೆಯೇ?” ಎಂದು ಅಚ್ಚರಿಯಿಂದ ಕೇಳುತ್ತಾರೆ. ನಾವು ಪಂಜಾಬಿ ಮಾತ್ರವಲ್ಲ ಭಾರತದ 14 ಭಾಷೆಗಳಿಗೆ ನಮ್ಮ ವರದಿಗಳನ್ನು ಅನುವಾದಿಸುತ್ತೇವೆ. ವಿಶ್ವವಿದ್ಯಾಲಯದ ಪ್ರಾಧ್ಯಾಪಕರಿಗಾಗಿ ನಮ್ಮ ಪರಿ ಲೈಬ್ರರಿ ಜೊತೆಗೆ ಹತ್ತು ಹಲವು ಸಂಪನ್ಮೂಲಗಳು ನಮ್ಮಲ್ಲಿ ಲಭ್ಯವಿವೆ.
*****
2023ರ ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ಭಾರತವು 161ನೇ ಸ್ಥಾನಕ್ಕೆ ಕುಸಿದಿದೆ. ಜಾಗತಿಕ ಮಾಧ್ಯಮ ಕಾವಲುಗಾರನಾದ ರಿಪೋರ್ಟರ್ಸ್ ವಿಥೌಟ್ ಬಾರ್ಡರ್ಸ್ (ಆರ್‌ಎಸ್ಎಫ್) ವರದಿಯ ಪ್ರಕಾರ, ಈ ವರದಿ 180 ದೇಶಗಳನ್ನು ಒಳಗೊಂಡಿದೆ.
ಸಾಮಾಜಿಕ ಮಾಧ್ಯಮಗಳಲ್ಲಿ ನಿರಂತರವಾಗಿ ಸುಳ್ಳು ಸುದ್ದಿಗಳಿಂದ ದಾಳಿಗೊಳಗಾಗುತ್ತಿರುವ, ನಿಜವಾದ ಪತ್ರಕರ್ತರ ವಿಶ್ವಾಸಾರ್ಹತೆಯನ್ನು ದುರ್ಬಲಗೊಳಿಸುವ ಯುವಜನರಿಗೆ ಈ ಆತಂಕಕಾರಿ 'ಪ್ರಜಾಪ್ರಭುತ್ವ ವಿರೋಧಿ' ಸತ್ಯವನ್ನು ನೀವು ಹೇಗೆ ತಲುಪಿಸುತ್ತೀರಿ?
ಇದಕ್ಕೆ ವಿಶ್ವವಿದ್ಯಾಲಯಗಳಲ್ಲಿ ಸ್ಥಳಾವಕಾಶವಿದೆ, ಜೊತೆಗೆ ಶಾಲಾ ಕೊಠಡಿಗಳಲ್ಲೂ.
ಪರಿಣಾಮಕಾರಿ ಫೋಟೊಗಳು, ವಿಡಿಯೋ ಮತ್ತು ಹಲವು ಭಾಷೆಗಳಲ್ಲಿ ವರದಿಗಳನ್ನು ಪ್ರಕಟಿಸುವ ಮೂಲಕ, ಪರಿ ಉತ್ತಮ ಪತ್ರಿಕೋದ್ಯಮವು ಅಧಿಕಾರದಲ್ಲಿರುವವರ ಬಗ್ಗೆ ಸತ್ಯವನ್ನು ಹೇಗೆ ಬಹಿರಂಗಪಡಿಸಬಹುದು ಮತ್ತು ಸತ್ಯವನ್ನು ಬರೆಯುವವರಿಗೆ ಹೇಗೆ ಬಲ ನೀಡುತ್ತೇವೆ ಎನ್ನುವುದನ್ನು ತೋರಿಸುತ್ತಿದ್ದೇವೆ.
ಜಾನಪದ ಕಲಾವಿದರು, ಪೋಸ್ಟ್ ಮ್ಯಾನ್, ಸ್ಥಳೀಯ ಸಂರಕ್ಷಣಾವಾದಿಗಳು, ರಬ್ಬರ್ ಟ್ಯಾಪರ್ ಗಳು, ಕಲ್ಲಿದ್ದಲಿನ ಚೂರುಗಳನ್ನು ಸಂಗ್ರಹಿಸುವ ಮಹಿಳೆಯರು ಮತ್ತು ನುರಿತ ಕುಶಲಕರ್ಮಿಗಳ ಕುರಿತಾದ ಕಥೆಗಳು ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕದ ಆಚೆಗಿನ ಸಂಗತಿಗಳನ್ನು ಕೇಳಲು ಮತ್ತು ಕಲಿಯಲು ಕಲಿಸುತ್ತವೆ, ಜ್ಞಾನ ವ್ಯವಸ್ಥೆಗಳ ಬಗೆಗಿನ ಕಲ್ಪನೆಗಳನ್ನು ಪ್ರಶ್ನಿಸುವುದನ್ನು ಕಲಿಸುತ್ತವೆ.
ನಮ್ಮನ್ನು ನಾವು ವಿಷಯ ತಜ್ಞರು ಎಂದು ಕರೆದುಕೊಳ್ಳುವುದಿಲ್ಲ. ತರಗತಿಯಲ್ಲಿ ಪತ್ರಕರ್ತರಾಗಿ ನಮ್ಮ ಗುರಿ ಯುವಜನರು ರಾಜ್ಯ ಅಧಿಕಾರವನ್ನು ಪ್ರಶ್ನಿಸುವ, ಸುದ್ದಿ ಪ್ರಸಾರದಲ್ಲಿ ಸ್ಟೀರಿಯೊಟೈಪ್ ಮಾದರಿಗಳು ಮತ್ತು ಪಕ್ಷಪಾತಗಳನ್ನು ಪ್ರಶ್ನಿಸುವ ಮತ್ತು ಜಾತಿ ಮತ್ತು ವರ್ಗ ಸವಲತ್ತುಗಳನ್ನು ಕರೆಯುವ ವಾತಾವರಣವನ್ನು ಪ್ರೋತ್ಸಾಹಿಸುವುದು - ಅವರು ಆನುವಂಶಿಕವಾಗಿ ಪಡೆಯುತ್ತಿರುವ ಪ್ರಪಂಚದ ಬಗ್ಗೆ ಕಲಿಯುವ ಒಂದು ಮಾರ್ಗವನ್ನು ಸೃಷ್ಟಿಸುವುದು.
ಕೆಲವೊಮ್ಮೆ ಶಾಲಾ ಸಿಬ್ಬಂದಿ ನಮಗೆ ಅಸಹಕಾರ ನೀಡುವುದೂ ಇರುತ್ತದೆ. ತರಗತಿಗಳಲ್ಲಿ ಜಾತಿ ಸಮಸ್ಯೆಗಳನ್ನು ಪರಿಚಯಿಸಲು ಅವರನ್ನು ಹಿಂಜರಿಕೆ ಕಾಡುತ್ತದೆ.
ಆದರೆ, ಈ ಕಥೆಗಳನ್ನು ಹೇಳದಿರುವುದು ಮತ್ತು ಅವುಗಳನ್ನು ಶಾಲಾ ತರಗತಿಗಳಿಂದ ಹೊರಗಿಡುವುದು ನಾಳಿನ ನಾಗರಿಕರಿಗೆ ಜಾತಿಯ ಸ್ಪಷ್ಟ ಮತ್ತು ಸೂಕ್ಷ್ಮ ದಬ್ಬಾಳಿಕೆಗಳ ಬಗ್ಗೆ ನಿರ್ಲಕ್ಷ್ಯ ಹೊಂದಲು ಮತ್ತು ಆ ಕುರಿತು ಅಜ್ಞಾನಿಯಾಗಲು ವೇದಿಕೆಯನ್ನು ನಿರ್ಮಿಸುತ್ತದೆ.
'ಯಾರ ಬದುಕೂ ಗಟಾರದಲ್ಲಿ ಕೊನೆಗೊಳ್ಳಬಾರದು' ಎಂಬ ನಮ್ಮ ವರದಿಯು ದೇಶದ ರಾಜಧಾನಿಯ ಉನ್ನತ ಮಾರುಕಟ್ಟೆ ಪ್ರದೇಶವಾದ ವಸಂತ್ ಕುಂಜ್ ಮಾಲ್ ಬಳಿಯ ಚರಂಡಿಯಲ್ಲಿ ಸಾವನ್ನಪ್ಪಿದ ಕಾರ್ಮಿಕನ ಕಥೆಯನ್ನು ವಿದ್ಯಾರ್ಥಿಗಳಿಗೆ ಹೇಳಿತು. ಅಂತಹ ಕಾನೂನುಬಾಹಿರ ಮತ್ತು ಮಾರಣಾಂತಿಕ ಕೆಲಸದ ಸ್ವರೂಪದಿಂದಾಗಿ ಮಾತ್ರವಲ್ಲ, ಘಟನೆಯ ಸಾಮೀಪ್ಯದಿಂದಾಗಿಯೂ ಅವರು ಆಘಾತಕ್ಕೊಳಗಾಗಿದ್ದರು. ಈ ಘಟನೆ ಅವರ ಶಾಲೆಯಿಂದ ಕೆಲವೇ ಕಿಲೋಮೀಟರ್ ದೂರದಲ್ಲಿ ನಡೆದಿತ್ತು.
ನಮ್ಮ ತರಗತಿಗಳಲ್ಲಿ ಇಂತಹ ಸಮಸ್ಯೆಗಳನ್ನು 'ಮುಚ್ಚಿಡುವ' ಅಥವಾ 'ನಿರ್ಲಕ್ಷಿಸುವ' ಮೂಲಕ, ನಾವು 'ಭಾರತ ಪ್ರಕಾಶಿಸುತ್ತಿದೆ' ಎಂಬ ತಪ್ಪು ಚಿತ್ರಣಕ್ಕೆ ಕೊಡುಗೆ ನೀಡುತ್ತೇವೆ.
ನಾವು ಅಂತಹ ಕಥೆಗಳನ್ನು ವಿದ್ಯಾರ್ಥಿಗಳಿಗೆ ತೋರಿಸಿದ ನಂತರ, ಅವರು ತಾವು ಹೇಗೆ ಸಹಾಯ ಮಾಡಬಹುದು ಎಂದು ನಮ್ಮನ್ನು ಯಾವಾಗಲೂ ಕೇಳುತ್ತಾರೆ.
ಕ್ಷೇತ್ರ ವರದಿಗಾರರು ಮತ್ತು ಪತ್ರಕರ್ತರಾಗಿ ತಕ್ಷಣದ ಪರಿಹಾರಗಳನ್ನು ಕಂಡುಹಿಡಿಯುವ ಅವರ ಉತ್ಸುಕತೆಯನ್ನು ನಾವು ಪ್ರಶಂಸಿಸುತ್ತೇವೆ, ಆದರೂ, ಅವರಲ್ಲಿ ತ್ವರಿತ ಪರಿಹಾರಗಳನ್ನು ಒದಗಿಸುವ ಬದಲು ತಮ್ಮ ಸುತ್ತಲಿನ ಜೀವನವನ್ನು ಗಮನಿಸುವ ಮತ್ತು ತಮ್ಮ ದೃಷ್ಟಿಕೋನವನ್ನು ಮರುಪರಿಶೀಲಿಸುವ ಹಸಿವನ್ನು ಹೆಚ್ಚಿಸುವುದು ನಮ್ಮ ಗುರಿಯಾಗಿದೆ.
ವಿದ್ಯಾರ್ಥಿಗಳು ಕೇವಲ ನಮ್ಮ ಮಾತನ್ನಷ್ಟೇ ಕೇಳಿ ತೀರ್ಮಾನಕ್ಕೆ ಬರಬಾರದು ಎನ್ನುವುದು ನಮ್ಮ ಕಾಳಜಿ. ಈ ನಿಟ್ಟಿನಲ್ಲಿ ನಾವು ಅವರು ವಿದ್ಯಾರ್ಥಿಗಳಾಗಿದ್ದಾಗ ಹೊರಗೆ ಹೋಗಿ ತಮ್ಮ ಸುತ್ತಲಿನ ವಿಷಯಗಳನ್ನು ದಾಖಲಿಸುವಂತೆ ಅವರನ್ನು ಪ್ರೋತ್ಸಾಹಿಸುತ್ತೇವೆ. ಪರಿ ಎಜುಕೇಶನ್ 2018ರಲ್ಲಿ ಪ್ರಾರಂಭವಾಯಿತು. ಇದು ಅಂದಿನಿಂದ 200ಕ್ಕೂ ಹೆಚ್ಚು ಸಂಸ್ಥೆಗಳು ಮತ್ತು ಸಾವಿರಾರು ವಿದ್ಯಾರ್ಥಿಗಳೊಂದಿಗೆ ಕೆಲಸ ಮಾಡಿದೆ. ನಾವು ಅವರ ಕೆಲಸವನ್ನು ದೇಶದ ಮೂಲೆ ಮೂಲೆಗೆ ತಲುಪಿಸಿದ್ದೇವೆ: ಸ್ನಾತಕೋತ್ತರ ಪದವೀಧರರಿಂದ ಪ್ರೌಢಶಾಲಾ ವಿದ್ಯಾರ್ಥಿಗಳವರೆಗೆ ಬರೆದ ಹಲವು ವರದಿಗಳನ್ನು ನೀವು ಪರಿ ವೇದಿಕೆಯಲ್ಲಿ ಓದಬಹುದು.
ಇದೊಂದು ಸ್ವಯಂಕ ಕೇಂದ್ರಿತವಲ್ಲದ ಕಲಿಕಾ ವಿಧಾನವಾಗಿದೆ. ಇಲ್ಲಿ ಅವರು ತಮ್ಮ ಕುರಿತು ಬ್ಲಾಗ್ ಬರೆಯುವ ಬದಲು ಇತರರ ಬದುಕಿಗೆ ದನಿ ನೀಡುತ್ತಾರೆ. ಅವರ ಬದುಕಿನ ಕುರಿತು ತಿಳಿಯುತ್ತಾರೆ. ಅವರ ಜೀವನೋಪಾಯಗಳಿಂದ ಪಾಠಗಳನ್ನು ಕಲಿಯುತ್ತಾರೆ.
ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯದ ಸ್ನಾತಕೋತ್ತರ ವಿದ್ಯಾರ್ಥಿ ದೀಪ್ಶಿಖಾ ಸಿಂಗ್, ಬಿಹಾರದ ಮಹಿಳಾ ನರ್ತಕಿಯರ ಕುರಿತ ವರದಿಯಲ್ಲಿ ಆ ನೃತ್ಯಗಾತಿಯರ ಬದುಕಿನ ಆಳಕ್ಕೆ ಇಳಿದಿದ್ದಾರೆ. “ಕಾರ್ಯಕ್ರಮಗಳಲ್ಲಿ ಗಂಡಸರು ನಮ್ಮ ಸೊಂಟಕ್ಕೆ ಕೈ ಹಾಕುವುದು, ಸೊಂಟ ಹಿಡಿಯುವುದನ್ನು ಮಾಡುತ್ತಾರೆ. ಇಂತಹ ಕೃತ್ಯಗಳು ನಮ್ಮ ಬದುಕಿನಲ್ಲಿ ನಿತ್ಯದ ದೃಶ್ಯವಾಗಿವೆ” ಎಂದು ಪ್ರತಿದಿನ ತಾನು ಎದುರಿಸುತ್ತಿರುವ ಸಾಮಾಜಿಕ ಮತ್ತು ಆರ್ಥಿಕ ಕಿರುಕುಳದ ಬಗ್ಗೆ ಅನಾಮಧೇಯತೆಯ ಷರತ್ತುಗಳ ಮೇಲೆ ಮಾತನಾಡಿದ ನೃತ್ಯಗಾತಿಯೊಬ್ಬರು ಹೇಳುತ್ತಾರೆ .
ಈಗ ಸಾಮಾಜಿಕ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ದೀಪ್ಶಿಕಾ ಅವರ ಪಾಲಿಗೆ ನೃತ್ಯಗಾತಿಯರನ್ನು ಭೇಟಿಯಾಗುವ, ವಿಚಾರಿಸುವ ಮತ್ತು ಸಂಭಾಷಣೆ ನಡೆಸುವ ಪ್ರಕ್ರಿಯೆಯು ಕಲಿಕೆಯಾಗಿದೆ: "ಈ ಅನುಭವವು [ದಾಖಲೀಕರಣ] ನನ್ನ ಬರವಣಿಗೆಯ ಪ್ರಯಾಣದಲ್ಲಿ ಮಹತ್ವದ ಮೈಲಿಗಲ್ಲನ್ನು ಸೂಚಿಸುತ್ತದೆ, ಮತ್ತು ಮುಖ್ಯವಾದ ಕಥೆಗಳನ್ನು ಹಂಚಿಕೊಳ್ಳುವುದನ್ನು ಮುಂದುವರಿಸಲು ನನಗೆ ಸ್ಫೂರ್ತಿ ನೀಡಿದೆ... ಪರಿಯ ಧ್ಯೇಯಕ್ಕೆ ಹೆಚ್ಚಿನ ಕೊಡುಗೆ ನೀಡುವ ಭರವಸೆ ಇದೆ" ಎಂದು ಅವರು ನಮಗೆ ಬರೆದಿದ್ದಾರೆ.
ಇದರೊಂದಿಗೆ ಪರಿ ಎಜುಕೇಷನ್ ಗ್ರಾಮೀಣ ಪ್ರದೇಶಗಳಲ್ಲಿನ ಶಾಲೆಗಳು ಮತ್ತು ವಿದ್ಯಾರ್ಥಿಗಳಿಗೆ ಮನೆಯ ಸಮೀಪ ಮತ್ತು ಅವರ ಸ್ಥಳೀಯ ಭಾಷೆಯಲ್ಲಿ ಸಮಸ್ಯೆಗಳನ್ನು ವರದಿ ಮಾಡಲು ಸಹಾಯ ಮಾಡುತ್ತದೆ. ಉದಾಹರಣೆಗೆ, ಒಡಿಶಾದ ಜುರುಡಿ ಗ್ರಾಮದ ಸಂತೆಯ ಕುರಿತು ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಗುಂಪು ವರದಿ ಮಾಡಿದೆ. ಗುಂಪು ಈ ವಾರದ ಮಾರುಕಟ್ಟೆಗೆ ಹಲವಾರು ಬಾರಿ ಭೇಟಿ ನೀಡಿ, ವರದಿಗಾಗಿ ಖರೀದಿದಾರರು ಮತ್ತು ಮಾರಾಟಗಾರರನ್ನು ಸಂದರ್ಶಿಸಿದೆ.
ವರದಿಗಾರರಾದ ಅನನ್ಯಾ ಟೋಪ್ನೋ, ರೋಹಿತ್ ಗಾಗ್ರಾಯಿ, ಆಕಾಶ್ ಏಕಾ ಮತ್ತು ಪಲ್ಲಬಿ ಲುಗುನ್ ತಮ್ಮ ವರದಿಗಾರಿಕೆಯ ಅನುಭವವನ್ನು ಪರಿಯೊಡನೆ ಹಂಚಿಕೊಂಡಿದ್ದು ಹೀಗೆ, “ನಾವು ಈ ರೀತಿಯ ಸಂಶೋಧನೆ ಮಾಡುತ್ತಿರುವುದು ಇದೇ ಮೊದಲು. ಸಂತೆಯಲ್ಲಿ ತರಕಾರಿ ಮಾರುವವರೊಂದಿಗೆ ಚೌಕಾಸಿ ಮಾಡುವವರನ್ನು ನೋಡಿದ್ದೇವೆ, ಆದರೆ ತರಕಾರಿಗಳನ್ನು ಬೆಳೆಯುವುದು ಎಷ್ಟು ಕಷ್ಟ ಎನ್ನುವುದು ನಮಗೆ ಗೊತ್ತು. ಜನರು ರೈತರೊಂದಿಗೆ ಬೆಲೆಯ ವಿಷಯದಲ್ಲಿ ಏಕೆ ಜಗಳವಾಡುತ್ತಾರೆ ಎನ್ನುವುದು ನಮಗೆ ಬಗೆಹರಿಯದ ಪ್ರಶ್ನೆಯಾಗಿತ್ತು."
ಗ್ರಾಮೀಣ ಪ್ರದೇಶಕ್ಕೆ ಹೋಗಲಾಗದ ವಿದ್ಯಾರ್ಥಿಗಳು ನಗರ ಪ್ರದೇಶಗಳಲ್ಲೇ ಜನರ ಬದುಕನ್ನು ದಾಖಲಿಸಿದ್ದಾರೆ. ತಿರುವನಂತಪುರದ ಗುಜರಿ ವಸ್ತುಗಳನ್ನು ಹೆಕ್ಕುವ ಸಾರಮ್ಮನವರ ಕುರಿತಾದ ವರದಿ ಅವುಗಳಲ್ಲಿ ಒಂದು. ಈ ವರದಿಯಲ್ಲಿ ಸಾರಮ್ಮ "ನನ್ನ ಬಾಲ್ಯದಲ್ಲಿ ನಾನು ತೀವ್ರ ಬಡತನವನ್ನು ಎದುರಿಸಿದ್ದರಿಂದ ಯಾರೂ ಹಸಿವಿನಿಂದ ಇರಬಾರದು ಎಂಬ ನಿಯಮವನ್ನು ನಾನು ಕಟ್ಟುನಿಟ್ಟಾಗಿ ಪಾಲಿಸುತ್ತೇನೆ" ಎಂದು ಹೇಳಿಕೊಂಡಿದ್ದಾರೆ.
ಈ ವರದಿಯನ್ನು ಬರೆದವರು ಆಯಿಷಾ ಜಾಯ್ಸ್. ಅದಕ್ಕೆ ಬಂದ ಪ್ರತಿಕ್ರಿಯೆಗಳಲ್ಲಿ ಹಲವರು ಸಾರಮ್ಮನಿಗೆ ಸಹಾಯ ಮಾಡಲು ಮುಂದೆ ಬಂದರು. ಈ ವರದಿ ಸಾವಿರಾರು ಲೈಕ್ಸ್ ಮತ್ತು ಕಮೆಂಟ್ಸ್ ಪಡೆದಿತ್ತು. ಈ ವರದಿಯಲ್ಲಿ ನಿಮ್ಮ ಮಗಳು ಏಕೆ ಇದೇ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಕೇಳಿದ ಪ್ರಶ್ನೆಗೆ ಸಾರಮ್ಮ, “ದಲಿತರಿಗೆ ಯಾರು ಕೆಲಸ ಕೊಡುತ್ತಾರೆ?” ಎಂದು ಕೇಳಿದ್ದಾರೆ. “ಜನರು ಇನ್ನೊಬ್ಬರ ಜೊತೆ ಬೆರೆಯುವ ಮೊದಲು ಅವರು ಯಾರೆನ್ನುವುದನ್ನು ಪರಿಶೀಲಿಸುತ್ತಾರೆ. ನಾವು ಎಷ್ಟು ಬುದ್ಧಿವಂತಿಕೆಯಿಂದ ಇದ್ದರೂ, ಏನೇ ಕೆಲಸ ಮಾಡಿದರೂ ಇದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ವರದಿ ಮಾಡಿದ್ದ ಆಯಿಷಾ ಅವರ ಬಳಿ ಹೇಳಿದ್ದರು.
ಸಂದರ್ಶನ ತಂತ್ರಗಳು, ಸಂದರ್ಶಕರಿಂದ ಮಾಹಿತಿಯುತ ಸಮ್ಮತಿಯನ್ನು ಪಡೆಯುವುದು ಮತ್ತು ಓದುಗರನ್ನು ತೊಡಗಿಸಿಕೊಳ್ಳುವಂತೆ ಮಾಡಬಲ್ಲ ಇತರ ವಿವರಗಳನ್ನು ಸೆರೆಹಿಡಿಯುವ ಅಗತ್ಯತೆಯ ಬಗ್ಗೆಯೂ ನಾವು ಅವರಿಗೆ ತರಬೇತಿ ನೀಡುತ್ತೇವೆ. ಮುಖ್ಯವಾಗಿ, ವಿದ್ಯಾರ್ಥಿಗಳು ಈ ಬರಹಗಳು ವೈಯಕ್ತಿಕ ಬ್ಲಾಗ್ ಆಗುವುದರ ಬದಲು ವಸ್ತುನಿಷ್ಠ ವರದಿಯ ತುಣುಕುಗಳಾಗಿ ಕಾಣುವಂತೆ ಈ ಕಥೆಗಳನ್ನು ಹೇಗೆ ಬರೆಯುವುದು ಮತ್ತು ರಚಿಸುವುದು ಎಂಬುದನ್ನು ಸಹ ಕಲಿಯುತ್ತಾರೆ.
ಪತ್ರಿಕೋದ್ಯಮ ಎನ್ನುವುದು ಅನೇಕ ಮೂಲಗಳು ಮತ್ತು ಅಂಕಿ-ಅಂಶಗಳಿಂದ ಬೆಂಬಲಿತವಾದ ದೀರ್ಘ-ರೂಪದ ತನಿಖಾ ತುಣುಕುಗಳೊಂದಿಗೆ ಸಂಬಂಧ ಹೊಂದಿದ್ದರೂ, ಜನರ ಬದುಕಿನ ಸರಳ ವಿವರಗಳನ್ನು ಬರೆಯಲು ನಾವು ನಮ್ಮ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುತ್ತೇವೆ. ಈ ವಿವರಗಳು ವ್ಯಕ್ತಿಗಳ ದೈನಂದಿನ ಬದುಕಿನ ಅನುಭವಗಳು, ಅವರ ಕೆಲಸದ ಸ್ವರೂಪ, ಅವರು ಕೆಲಸ ಮಾಡುವ ಸಮಯ, ಅವರು ಪಡೆಯುವ ಸಂತೋಷ, ಅವರು ಎದುರಿಸುತ್ತಿರುವ ಹೋರಾಟಗಳು, ಅಡೆತಡೆಗಳ ಎದುರಿನಲ್ಲಿ ಅವರ ಸ್ಥಿತಿಸ್ಥಾಪಕತ್ವ, ಅವರ ಜೀವನದ ಆರ್ಥಿಕತೆ ಮತ್ತು ಅವರ ಮಕ್ಕಳ ಬಗ್ಗೆ ಅವರು ಹೊಂದಿರುವ ಆಕಾಂಕ್ಷೆಗಳನ್ನು ದಾಖಲಿಸುತ್ತವೆ.
ಪರಿ ಎಜುಕೇಷನ್ ಪ್ರಾಮಾಣಿಕ ಪತ್ರಿಕೋದ್ಯಮದ ದೃಷ್ಟಿಕೋನವನ್ನು ಬಳಸಿಕೊಂಡು ಸಾಮಾಜಿಕ ವಿಷಯಗಳನ್ನು ಗುರುತಿಸಲು ಮತ್ತು ಪ್ರಶಂಸಿಸುವತ್ತ ಯುವಜನರನ್ನು ಸೆಳೆಯುವ ನಮ್ಮ ಪ್ರಯತ್ನವಾಗಿದೆ. ಜನರು ಮತ್ತು ಅವರ ಕಥೆಗಳನ್ನು ಮುಖ್ಯವಾಗಿ ಗಮನದಲ್ಲಿಟ್ಟುಕೊಳ್ಳುವ ಮೂಲಕ, ವಿದ್ಯಾರ್ಥಿಗಳು ಮಾನವೀಯ ಸ್ಪರ್ಶವನ್ನು ಪತ್ರಿಕೋದ್ಯಮಕ್ಕೆ ಮತ್ತು ತಮ್ಮ ತರಗತಿಗಳಿಗೆ ಮರಳಿ ತರುತ್ತಾರೆ.
ನಿಮ್ಮ ಸಂಸ್ಥೆಯೊಂದಿಗೂ ಪರಿ ಕೆಲಸ ಮಾಡಬೇಕೆನ್ನುವುದು ನಿಮ್ಮ ಬಯಕೆಯಾಗಿದ್ದಲ್ಲಿ, ದಯವಿಟ್ಟು [email protected] ಬರೆಯಿರಿ.
ಈ ಲೇಖನದಲ್ಲಿನ ಫೀಚರ್ ಚಿತ್ರವನ್ನು ಪರಿಯ ಫೋಟೋ ಸಂಪಾದಕರಾದ ಬಿನೈಫರ್ ಭರೂಚಾ ಸೆರೆಹಿಡಿದಿದ್ದಾರೆ.
ಅನುವಾದ: ಶಂಕರ. ಎನ್. ಕೆಂಚನೂರು