ಮೀನುಗಾರಿಕೆ ಉದ್ಯಮದಲ್ಲಿ, ಅದರಲ್ಲೂ ತಮಿಳುನಾಡಿನ ಕರಾವಳಿಯ ಸದಾ ಕ್ರಿಯಾಶೀಲವಾಗಿರುವ ಮೀನುಗಾರಿಕೆ ಬಂದರು ಕಡಲೂರ್‌ನ ಬೆಚ್ಚಗಿನ ವಾತಾವರಣದಲ್ಲಿ ಐಸ್ ಮಾರಾಟಗಾರರು ನಿರ್ಣಾಯಕ ಪಾತ್ರವನ್ನು ವಹಿಸುತ್ತಾರೆ. ನಗರದ ಓಲ್ಡ್ ಟೌನ್ ಬಂದರಿನಲ್ಲಿ ಬೃಹತ್ ಕಂಪನಿಗಳು ದೊಡ್ಡ ಮೀನು ವ್ಯಾಪಾರಿಗಳಿಗೆ ಮತ್ತು ಯಾಂತ್ರೀಕೃತ ಬೋಟುಗಳಿಗೆ ಬೃಹತ್ ಪ್ರಮಾಣದಲ್ಲಿ ಐಸ್ ಪೂರೈಸುತ್ತವೆ.
ತನ್ನದೇ ಆದ ವಿಶಿಷ್ಟ ಹೆಗ್ಗುರುತನ್ನು ಬೆಳೆಸಿಕೊಂಡಿರುವ ಕವಿತಾ ಅವರು ಮೀನುಗಾರರಿಗೆ ಮತ್ತು ಮಹಿಳಾ ಮೀನು ವ್ಯಾಪಾರಿಗಳಿಗೆ ಐಸ್ ಮಾರುವ ಓರ್ವ ಐಸ್ ಮಾರಾಟಗಾರ್ತಿ. ಅವರು ದೊಡ್ಡ ದೊಡ್ಡ ಐಸ್ ಬ್ಲಾಕ್‌ಗಳನ್ನು ಪ್ರತೀ ಬ್ಲಾಕ್‌ಗೆ 800 ರುಪಾಯಿಯಂತೆ ಖರೀದಿಸಿ ಅವುಗಳನ್ನು ಎಂಟು ಸಣ್ಣ ಬ್ಲಾಕ್‌ಗಳಾಗಿ ಕತ್ತರಿಸುತ್ತಾರೆ. ಪ್ರತಿ ಬ್ಲಾಕನ್ನೂ 100 ರುಪಾಯಿಗೆ ಮಾರುತ್ತಾರೆ. ಈ ಕೆಲಸಕ್ಕೆ ಸಾಕಷ್ಟು ದೈಹಿಕ ಶ್ರಮದ ಅಗತ್ಯವಿದೆ. ಕವಿತಾ ಅವರು 600 ರುಪಾಯಿ ಸಂಬಳ ಮತ್ತು ಎರಡು ಹೊತ್ತು ಊಟ ಕೊಟ್ಟು ಓರ್ವ ಪುರುಷ ಕೂಲಿ ಕಾರ್ಮಿಕನನ್ನು ಕೆಲಸಕ್ಕೆ ಇಟ್ಟುಕೊಂಡಿದ್ದಾರೆ.
"ಸಣ್ಣ ಬ್ಲಾಕ್‌ಗಳನ್ನು ಅಗತ್ಯವಿರುವ ಮಹಿಳೆಯರಿಗೆ ಸಾಗಿಸಲು ನಾನು ಸಹಾಯ ಮಾಡುತ್ತೇನೆ," ಎಂದು 41 ವರ್ಷದ ವ್ಯಾಪಾರಿ ಹೇಳುತ್ತಾರೆ. "ಇದು ತುಂಬಾ ಕಷ್ಟದ ಕೆಲಸ. ಬದುಕಲು ಬೇಕಾದಷ್ಟನ್ನು ಮಾತ್ರ ಸಂಪಾದಿಸುತ್ತೇವೆ. ನಾನೂ ಹಣ ಉಳಿಯತಾಯ ಮಾಡಬೇಕು, ಆದರೆ ದೊಡ್ಡ ಕಂಪನಿಗಳೊಂದಿಗೆ ಸ್ಪರ್ಧಿಸಲು ನಮಗೆ ಸಾಧ್ಯವಿಲ್ಲ.”
ಕವಿತಾ 2017ರಲ್ಲಿ ಐಸ್ ಮಾರಾಟವನ್ನು ಪ್ರಾರಂಭಿಸಿದರು. “ನನ್ನ ಮಾವ ಅಮೃತಲಿಂಗಂ ಅವರ ಆರೋಗ್ಯ ಕೈಕೊಟ್ಟ ಮೇಲೆ ನಾನು ಅವರ ಐಸ್ ಮಾರಾಟದ ವ್ಯಾಪಾರಕ್ಕೆ ಸೇರಿಕೊಂಡೆ. ನನ್ನ ಪತಿಗೆ ಇದರಲ್ಲಿ ಆಸಕ್ತಿ ಇರಲಿಲ್ಲ ಮತ್ತು ನನ್ನ ಬಾವ ವಿದೇಶಕ್ಕೆ ಹೋದರು,” ಎಂದು ಕವಿತಾ ಹೇಳುತ್ತಾರೆ. ಓದಿಕೊಂಡಿರುವ ಕವಿತಾ ಅವರಿಗೆ ವ್ಯಾಪಾರ ನಿರ್ವಹಿಸಲು ಬೇಕಾದ ಅಗತ್ಯ ಕೌಶಲಗಳಿವೆ.
ಕವಿತಾ ಅವರಿಗೆ ಐದು ಜನ ಅಕ್ಕಂದಿರು. ಸ್ವಯಂ-ತರಬೇತಿ ಪಡೆದ ಮೆಕ್ಯಾನಿಕ್ ಆಗಿದ್ದ ಕವಿತಾ ಅವರ ತಂದೆ ಅವರು ಸುಮಾರು 14 ವರ್ಷದವರಾಗಿದ್ದಾಗ ಅನಾರೋಗ್ಯಕ್ಕೆ ಒಳಗಾದರು. ಆಗ 9 ನೇ ತರಗತಿಯಲ್ಲಿ ಓದುತ್ತಿದ್ದ ಕವಿತಾ ಶಾಲೆಯನ್ನು ಬಿಟ್ಟು ತನ್ನ ತಾಯಿಯೊಂದಿಗೆ ಭತ್ತದ ನಾಟಿ ಮತ್ತು ಕಳೆ ಕೀಳುವ ಕೃಷಿ ಕೂಲಿ ಕೆಲಸಕ್ಕೆ ಹೋಗಲು ಪ್ರಾರಂಭಿಸಿದರು.
ಕಲಾವಿದ ಮತ್ತು ವರ್ಣಚಿತ್ರಕಾರರಾದ ಅನ್ಬು ರಾಜ್ ಅವರನ್ನು ವಿವಾಹವಾದಾಗ ಕವಿತಾ ಅವರಿಗೆ 23 ವರ್ಷ. ದಂಪತಿಗಳು ತಮ್ಮ ಮಕ್ಕಳಾದ 17 ವರ್ಷದ ವೆಂಕಟೇಸನ್ ಮತ್ತು 15 ವರ್ಷದ ತಂಗ ಮಿತ್ರ ಜೊತೆ ಕಡಲೂರು ಓಲ್ಡ್ ಟೌನ್ ಬಂದರಿನ ಸಮೀಪದ ಸಂಡ್ರೋರ್ಪಾಳ್ಯಂನಲ್ಲಿ ವಾಸಿಸುತ್ತಾರೆ.
ಅವರ ಮಾವ 75 ವರ್ಷ ಪ್ರಾಯದ ಅಮೃತಲಿಂಗಂ 20 ವರ್ಷಗಳ ಹಿಂದೆ ಬಂದರಿನಲ್ಲಿ ಐಸನ್ನು ಮಾರಾಟ ಮಾಡಲು ಪ್ರಾರಂಭಿಸಿದರು. ಆ ಸಮಯದಲ್ಲಿ ಬೇರೆ ಯಾರೂ ಸಣ್ಣ ಬ್ಲಾಕುಗಳಲ್ಲಿ ಐಸನ್ನು ಮಾರುತ್ತಿರಲಿಲ್ಲ, ಐಸನ್ನು ವ್ಯಾಪಾರಿಗಳಿಗೆ ಮಾತ್ರ ದೊಡ್ಡ ಪ್ರಮಾಣದಲ್ಲಿ ಮಾರಾಟ ಮಾಡಲಾಗುತ್ತಿತ್ತು. ಅಮೃತಲಿಂಗಂ ಅವರಿಗೆ ಬೃಹತ್ ಪ್ರಮಾಣದಲ್ಲಿ ಐಸ್ ಸರಬರಾಜು ಮಾಡಲು ಬಂಡವಾಳದ ಕೊರತೆಯಿತ್ತು. ಆದರ ಬದಲಿಗೆ ಅವರು ಸಣ್ಣಪ್ರಮಾಣದ ಮಾರಾಟಗಾರರಿಗೆ ಐಸ್ ಮಾರಾಟ ಮಾಡುವ ಒಂದು ದಾರಿಯನ್ನು ಕಂಡುಕೊಂಡರು.
"ದೊಡ್ಡ ವ್ಯಾಪಾರಿಗಳು ಐಸ್ ಕಾರ್ಖಾನೆಗಳು, ಲೋಡ್ ಮಾಡುವವರು, ಸಾರಿಗೆ ವ್ಯವಸ್ಥೆ ಮತ್ತು ಮಾರಾಟಗಾರರನ್ನು ಹೊಂದಿದ್ದಾರೆ" ಎಂದು ಕವಿತಾ ಹೇಳುತ್ತಾರೆ. ಅವರಲ್ಲಿರುವ ಸ್ವಂತ ಸಣ್ಣ ಪುಟ್ಟ ಸಂಪನ್ಮೂಲಗಳೂ 20 ಚದರ ಅಡಿಯ ಅಂಗಡಿಗೆ ಸೀಮಿತವಾಗಿವೆ. ಇದಕ್ಕೆ ಅವರು ತಿಂಗಳಿಗೆ 1,000 ರುಪಾಯಿ ಬಾಡಿಗೆ ನೀಡಬೇಕು. ಅವರು ಇಲ್ಲೇ ಐಸ್ ತಂದು ಮಾರಾಟಕ್ಕೆ ಬೇಕಾದಂತೆ ಸಣ್ಣ ತುಂಡುಗಳಾಗಿ ಕತ್ತರಿಸುತ್ತಾರೆ.
"ದೊಡ್ಡ ಐಸ್ ವ್ಯಾಪಾರಿಗಳಲ್ಲಿ ಪೈಪೋಟಿ ಹೆಚ್ಚುತ್ತಿದೆ, ಆದರೆ ನಾನು ಹೀಗೇ ಮುಂದುವರಿಯಬೇಕಾಗಿದೆ" ಎಂದು ಕವಿತಾ ಹೇಳುತ್ತಾರೆ.
ಮೀನಿನ ಐಟಂಗಳ ಸಂಸ್ಕರಣೆ, ಸಂಗ್ರಹಣೆ, ವಿತರಣೆ ಮತ್ತು ಮಾರುಕಟ್ಟೆ- ಹೇಗೆ ವಿವಿಧ ಹಂತಗಳಲ್ಲಿ ಐಸ್ ನ ಅಗತ್ಯವಿದೆ. ಸೆಂಟ್ರಲ್ ಮೆರೈನ್ ಫಿಶರೀಸ್ ರಿಸರ್ಚ್ ಇನ್‌ಸ್ಟಿಟ್ಯೂಟ್ ಹೊರತಂದಿರುವ ಸಮುದ್ರ ಮೀನುಗಾರಿಕೆ ಗಣತಿ-2016 ರ ಪ್ರಕಾರ, ಮೀನುಗಾರಿಕೆ ವಲಯ ಮೀನಿನ ಮಾರಾಟ, ಬಲೆ ತಯಾರಿಕೆ ಮತ್ತು ರಿಪೇರಿ, ಕ್ಯೂರಿಂಗ್, ಸಂಸ್ಕರಣೆ ಮತ್ತು ದೊರಗು ಸುಲಿಯುವುದು ಇವೆಲ್ಲವನ್ನೂ ಒಳಗೊಂಡಿದೆ. ಕೆಲಸಗಾರರನ್ನು 'ಕಾರ್ಮಿಕರು' ಮತ್ತು 'ಇತರರು' ಎಂದು ವರ್ಗೀಕರಿಸಲಾಗಿದೆ. ಎರಡನೆಯದರಲ್ಲಿ ಹರಾಜಿನಲ್ಲಿ ಕೆಲಸ ಮಾಡುವವರು, ಮಂಜುಗಡ್ಡೆ ಒಡೆಯುವವರು, ಬಿವಾಲ್ವ್, ಚಿಪ್ಪುಗಳು, ಕಡಲಕಳೆ, ಅಲಂಕಾರಿಕ ಮೀನುಗಳನ್ನು ಸಂಗ್ರಹಿಸುವವರು ಸೇರಿದ್ದಾರೆ.
ತಮಿಳುನಾಡಿನಲ್ಲಿ 2,700 ಮಹಿಳೆಯರು ಮತ್ತು 2,221 ಪುರುಷರನ್ನು 'ಇತರರು' ಎಂದು ವರ್ಗೀಕರಿಸಲಾಗಿದೆ. ಆದರೆ ಕಡಲೂರು ಜಿಲ್ಲೆಯಲ್ಲಿ 404 ಮಹಿಳೆಯರು ಮತ್ತು 35 ಪುರುಷರನ್ನು ಇತರರು ಎಂದು ಉಲ್ಲೇಖಿಸಲಾಗಿದೆ. ಇವರ ಮುಕ್ಕಾಲು ಭಾಗ ಕಡಲೂರು ಓಲ್ಡ್ ಟೌನ್ ಬಂದರಿನ ಸಮೀಪವಿರುವ ಹಳ್ಳಿಗಳಲ್ಲಿ ಕೇಂದ್ರೀಕೃತವಾಗಿದೆ. ಐಸ್-ಸಂಬಂಧಿತ ಕೆಲಸದಲ್ಲಿ ತೊಡಗಿರುವವರು ಸಾಮಾನ್ಯವಾಗಿ ಐಸನ್ನು ಇಳಿಸುವ ಮತ್ತು ಪುಡಿಮಾಡುವ, ಪೆಟ್ಟಿಗೆಗಳಲ್ಲಿ ಐಸ್ ಜೊತೆಗೆ ಮೀನುಗಳನ್ನು ಪ್ಯಾಕ್ ಮಾಡುವ ಮತ್ತು ಅವುಗಳನ್ನು ವಾಹನಗಳಿಗೆ ಲೋಡ್ ಮಾಡುವ ಕೆಲಸ ಮಾಡುತ್ತಾರೆ.
ಕವಿತಾ ಅವರು ಹತ್ತಿರದ ಸ್ಟೇಟ್ ಇಂಡಸ್ಟ್ರೀಸ್ ಪ್ರಮೋಷನ್ ಕಾರ್ಪೊರೇಷನ್ ಆಫ್ ತಮಿಳುನಾಡು ಲಿಮಿಟೆಡ್ (SIPCOT) ಕೈಗಾರಿಕಾ ಎಸ್ಟೇಟ್‌ನಲ್ಲಿರುವ ಎರಡು ಕಂಪನಿಗಳಿಂದ ಮಂಜುಗಡ್ಡೆಯನ್ನು ಖರೀದಿಸುತ್ತಾರೆ. ಅದನ್ನು ಅವರು ಸಣ್ಣ ಪ್ರಮಾಣದ ಮಾರಾಟಗಾರರು ಮತ್ತು ತಲೆಯಲ್ಲಿ ಹೊತ್ತು ಮಾರುವವರಿಗೆ ಮಾರುತ್ತಾರೆ.
ಕವಿತಾ ಅವರ ಎತ್ತರದ ನಿಲುವು ಮತ್ತು ತೆಳ್ಳಗಿನ ದೈಹಿಕ ರಚನೆ ಅವರ ದೈಹಿಕ ಶ್ರಮಕ್ಕೆ ಅಡ್ಡಿಯನ್ನು ಉಂಟು ಮಾಡುತ್ತದೆ. "ಬಂದರಿನಲ್ಲಿರುವ ನಮ್ಮ ಅಂಗಡಿಯಿಂದ ಮಹಿಳಾ ಮೀನು ಮಾರಾಟಗಾರರು ಈಗ ಕುಳಿತುಕೊಳ್ಳುವ ಸೇತುವೆಯ ಬಳಿಗೆ ಐಸ್ ಬ್ಲಾಕುಗಳನ್ನು ತಲೆಯಲ್ಲಿ ಹೊತ್ತು ತರುವುದು ಕಷ್ಟದ ಕೆಲಸ" ಎಂದು ಅವರು ಹೇಳುತ್ತಾರೆ. ಅಂಗಡಿಯಿಂದ ಆಸುಪಾಸಿನ ಸ್ಥಳಗಳಿಗೆ ಐಸ್ ಬ್ಲಾಕ್‌ಗಳನ್ನು ಸಾಗಿಸಲು ಪ್ರತಿ ಟ್ರಿಪ್ಪಿಗೆ ಬಾಡಿಗೆಯ ಮೋಟಾರ್ ಸೈಕಲ್ ವ್ಯಾನ್‌ಗೆ 100 ರೂಪಾಯಿ ಕೊಡಬೇಕು. ಪ್ರತಿ ದಿನ ಐಸ್ ಬ್ರೇಕಿಂಗ್ ಮಿಷನ್ನಿಗೆ ಕವಿತಾ ಅವರು 200 ರೂಪಾಯಿ ಮೌಲ್ಯದ ಡೀಸೆಲ್ ಹಾಕಬೇಕು.
ವ್ಯವಹಾರವನ್ನು ನಡೆಸುವುದು ದುಬಾರಿಯಾಗಿ ಹೋಗಿದೆ. ಕವಿತಾ 21,000 ರೂಪಾಯಿ ಕೊಟ್ಟು 210 ಬ್ಲಾಕ್ ಐಸ್ ಖರೀದಿಸಬೇಕು ಮತ್ತು ಕೂಲಿ, ಇಂಧನ, ಬಾಡಿಗೆ ಮತ್ತು ಸಾರಿಗೆಗೆ ಹೆಚ್ಚುವರಿ ವಾರದ ಶುಲ್ಕವನ್ನು ಭರಿಸಬೇಕು. ಇದರಿಂದ ಅವರ ಒಟ್ಟು ವೆಚ್ಚ 26,000 ರೂಪಾಯಿ ಆಗುತ್ತದೆ. ಅವರ ಆದಾಯ 29,000-31,500 ರೂಪಾಯಿ. ಅವರ ವಾರದ ಲಾಭ 3,000-3,500 ರೂಪಾಯಿ. ಆದಲ್ಲದೇ, ಇದು ಕವಿತಾ ಮತ್ತು ಅವರ ಪತಿ ಅನ್ಬು ರಾಜ್ ಅವರು ಜೊತೆಯಾಗಿ ಮಾಡುವ ಸಂಪಾದನೆ.
ಕವಿತಾ ಅವರು ಮೀನುಗಾರ್ತಿಯಲ್ಲದ ಕಾರಣ ಅವರಿಗೆ ಮೀನುಗಾರ ಮಹಿಳೆಯರ ಸಹಕಾರ ಸಂಘಗಳಲ್ಲಿ ಸದಸ್ಯತ್ವ ಸಿಕ್ಕಿಲ್ಲ. ಸರ್ಕಾರದ ಕಲ್ಯಾಣ ಯೋಜನೆ ಗಳನ್ನು ಪಡೆಯಲು ಅವರಿಗೆ ಈ ಸದಸ್ಯತ್ವ ಬೇಕು. ಇವರು ಅತ್ಯಂತ ಹಿಂದುಳಿದ ಜಾತಿ (ಎಂಬಿಸಿ) ಎಂದು ಪರಿಗಣಿಸಿರುವ ವನ್ನಿಯಾರ್ ಸಮುದಾಯಕ್ಕೆ ಸೇರಿದವರು. ಇದು ಮೀನುಗಾರರ ಜಾತಿಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿಲ್ಲ .
ಪಾಲಿಸಿಗಳು ಮೀನುಗಾರಿಕೆ ವಲಯದಲ್ಲಿ ಅಂಚಿನಲ್ಲಿರುವ ಕವಿತಾ ಅವರಂತಹ ಮಹಿಳೆಯರನ್ನು ಹೆಚ್ಚು ಉಲ್ಲೇಖಿಸುವುದಿಲ್ಲ. ಉದಾಹರಣೆಗೆ, ತಮಿಳುನಾಡು ಮೀನುಗಾರಿಕೆ ಮತ್ತು ಇತರ ಸಂಬಂಧಿತ ಚಟುವಟಿಕೆಗಳಲ್ಲಿ ತೊಡಗಿರುವ ಮೀನುಗಾರ ಮತ್ತು ಕಾರ್ಮಿಕರ (ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ) ಕಾಯಿದೆ, 2007 ರ ಪ್ರಕಾರ ಕವಿತಾ ಅವರ ಕೆಲಸವನ್ನು 'ಬೀಚ್ ವರ್ಕರ್' ಎಂದು ವರ್ಗೀಕರಿಸಲಾಗಿದೆ. ಇದರಲ್ಲಿ ಐಸ್ ಇಳಿಸುವುದು ಮತ್ತು ಪುಡಿ ಮಾಡುವುದು, ಬಾಕ್ಸ್‌ಗಳಲ್ಲಿ ಮೀನುಗಳನ್ನು ಪ್ಯಾಕಿಂಗ್ ಮಾಡುವುದು ಮತ್ತು ಸಾಗಣೆಗಾಗಿ ಲೋಡ್ ಮಾಡುವುದು ಸೇರಿದೆ. ಆದರೆ ಈ ರೀತಿ ವರ್ಗೀಕರಿಸಿದರೂ ಅವರಿಗೆ ಏನೂ ದಕ್ಕಿಲ್ಲ.
*****
ಕವಿತಾ ಮತ್ತು 42 ವರ್ಷ ಪ್ರಾಯದ ಅವರ ಪತಿ ಅನ್ಬು ರಾಜ್ ಅವರು ಬೆಳಿಗ್ಗೆ 3 ಗಂಟೆಗೆ ಬಂದರಿಗೆ ಹೊರಟು ಐಸ್ ಮಾರಲು ಪ್ರಾರಂಭಿಸುತ್ತಾರೆ. "ಬೆಳಿಗ್ಗೆ 3- 6 ಗಂಟೆಯ ನಡುವೆ" ಹೆಚ್ಚು ಐಸ್ ಮಾರಾಟವಾಗುತ್ತದೆ. ಆ ಹೊತ್ತಿನಲ್ಲಿ ಮೀನು ಖರೀದಿಸಲು ಬೇರೆ ಬೇರೆ ರಾಜ್ಯಗಳಿಂದ ವ್ಯಾಪಾರಿಗಳು ಬರುತ್ತಾರೆ. ಹೆಚ್ಚಿನ ಮೀನುಗಾರರು ಈ ಸಮಯದಲ್ಲಿ ತಾವು ಹಿಡಿದ ಮೀನುಗಳನ್ನು ಬೋಟ್‌ನಿಂದ ಇಳಿಸುತ್ತಾರೆ, ಆಗ ಅದನ್ನು ಸಂರಕ್ಷಿಸಲು ಐಸ್ ಬೇಕಾಗುತ್ತದೆ.
ಬೆಳಿಗ್ಗೆ 6 ಗಂಟೆಗೆ, ಮಕ್ಕಳು ಶಾಲೆಗೆ ಹೊರಡುವ ಮೊದಲು ಅಡುಗೆ ಮಾಡಲು ಮನೆಗೆ ಹಿಂತುರುಗುವ ಕವಿತಾ ಅವರಿಗೆ ಅವರ 65 ವರ್ಷ ವಯಸ್ಸಿನ ಅತ್ತೆ ಸೀತಾ ಸ್ವಲ್ಪ ವಿರಾಮವನ್ನು ನೀಡುತ್ತಾರೆ. ಬೆಳಿಗ್ಗೆ 10 ಗಂಟೆಗೆ ಕವಿತಾ ಐಸ್ ಮಾರಲು ಬಂದರಿಗೆ ಮರಳುತ್ತಾರೆ. ಬಂದರಿನಲ್ಲಿರುವ ಅಂಗಡಿಗೆ ಅವರ ಮನೆಯಿಂದ ಸೈಕಲ್ಲಿನಲ್ಲಿ ಕೇವಲ ಐದು ನಿಮಿಷಗಳಲ್ಲಿ ತಲುಪುತ್ತಾರೆ. ಆದರೆ, ಬಂದರಿನಲ್ಲಿ ಶೌಚಾಲಯ ಮತ್ತು ತೊಳೆಯುವ ಸೌಲಭ್ಯಗಳಿಲ್ಲದೇ ಇರುವುದು ಒಂದು ಸಮಸ್ಯೆಯಾಗಿದೆ.
ಕುಟುಂಬದಲ್ಲಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವವರು ಸೀತಾ. “ಇವರೇ ಐಸ್ ಬ್ರೇಕಿಂಗ್ ಯಂತ್ರವನ್ನು ಖರೀದಿಸಲು ಖಾಸಗಿ ಫೈನಾನ್ಸ್ ಕಂಪನಿಯಿಂದ 50,000 ರುಪಾಯಿ ಸಾಲ ಪಡೆದದ್ದು,” ಎಂದು ಕವಿತಾ ಹೇಳುತ್ತಾರೆ.
"ನಮ್ಮ ಸಾಲದ ಮೇಲಿನ ಬಡ್ಡಿ ಎಷ್ಟಾಗಿದೆ ಎಂದು ನನಗೆ ಗೊತ್ತಿಲ್ಲ, ನನ್ನ ಅತ್ತೆ ಎಲ್ಲವನ್ನೂ ನಿರ್ವಹಿಸುತ್ತಾರೆ. ಅವರೇ ಎಲ್ಲಾ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ," ಎಂದು ಹೇಳುತ್ತಾರೆ ಕವಿತಾ.
ಆದರೆ ಕವಿತಾ ಅವರ ವ್ಯವಹಾರ ಜ್ಞಾನ ಚೆನ್ನಾಗಿದೆ. ಕ್ರೆಡಿಟ್ನಲ್ಲಿ ಮಾರಾಟ ಮಾಡುವಾಗ ಅವರು ತಕ್ಷಣವೇ ವ್ಯವಹಾರವನ್ನು ಗಮನಿಸುತ್ತಾರೆ. ಅವರು ಐಸ್ ಮಾರಾಟ ಮತ್ತು ಖರೀದಿಯ ಮೇಲೆ ಸದಾ ನಿಗಾ ಇಡುತ್ತಾರೆ. ಆದರೆ ತನ್ನ ಎಲ್ಲಾ ಆದಾಯವನ್ನು ಅತ್ತೆಯ ಕೈಗೆ ನೀಡುತ್ತಾರೆ.
ತನ್ನ ಎಲ್ಲಾ ಅಗತ್ಯಗಳನ್ನು ಮನೆಯಲ್ಲಿ ಪೂರೈಸುವುದರಿಂದ ಕವಿತಾ ಯಾವುದೇ ತಕರಾರು ಎತ್ತುವುದಿಲ್ಲ. "ನಾನು ಆದಾಯ ತರುತ್ತೇನೆ, ನಾನು ಹಣದ ವ್ಯವಹಾರ ಮಾಡದೇ ಇದ್ದರೂ ನನಗೆ ಮನೆಯಲ್ಲಿ ಗೌರವ ಸಿಗುತ್ತದೆ," ಎಂದು ಅವರು ಹೇಳುತ್ತಾರೆ. ಬಂದರಿನಿಂದ ಸುಮಾರು 2 ಕಿ.ಮೀ ದೂರದಲ್ಲಿರುವ ಮೂರು ಕೋಣೆಗಳ ಮನೆಯಲ್ಲಿ ಈ ಕುಟುಂಬ ವಾಸಿಸುತ್ತಿದೆ.
"ನಾವು ಕೂಡು ಕುಟುಂಬವಾಗಿರುವುದರಿಂದ ಎಲ್ಲರೂ ಪರಸ್ಪರ ಇನ್ನೊಬ್ಬರ ಬೆಂಬಲಕ್ಕೆ ನಿಲ್ಲುತ್ತೇವೆ," ಎಂದು ಅವರು ವಿವರಿಸುತ್ತಾರೆ. ಅವರ ಮಕ್ಕಳ ಶಾಲಾ ಶುಲ್ಕವನ್ನು ಮೆಕ್ಯಾನಿಕಲ್ ಎಂಜಿನಿಯರಿಂಗ್ ಓದಿ ಸಿಂಗಾಪುರದಲ್ಲಿ ಕೆಲಸ ಮಾಡುತ್ತಿರುವ ಅವರ ಸೋದರ ಮಾವ ಅರುಳ್ ರಾಜ್ ಭರಿಸುತ್ತಾರೆ.
ಅವರ ಅತ್ತೆ ಮಾವನಿಗೆ ವಯಸ್ಸಾದಂತೆ ಆರೋಗ್ಯ ಸಮಸ್ಯೆಗಳೂ ಹೆಚ್ಚುತ್ತಿವೆ. ಹೀಗಾಗಿ ಕವಿತಾ ಅವರು ಐಸ್ ವ್ಯಾಪಾರದ ಜೊತೆ ಜೊತೆಗೆ ಕುಟುಂಬದ ಹೆಚ್ಚಿನ ಜವಾಬ್ದಾರಿಗಳನ್ನೂ ವಹಿಸಿಕೊಳ್ಳುತ್ತಿದ್ದಾರೆ.
ಅನುವಾದ: ಚರಣ್ ಐವರ್ನಾಡು