ಅದು ಬೆಳಗಿನ ಜಾವದ ಮೂರು ಗಂಟೆಯ ಸಮಯ. ನಂದಿನಿ ಕಿತ್ತಳೆ ಬಣ್ಣದ ಟೆಂಟಿನ ಹೊರಗೆ ಕುಳಿತು ತನ್ನ ಗೆಳತಿ ಹಿಡಿದಿದ್ದ ಮೊಬೈಲ್ ಟಾರ್ಚ್ ಬೆಳಕಿನಲ್ಲಿ ಮುಖಕ್ಕೆ ಮೇಕಪ್ ಹಚ್ಚಿಕೊಳ್ಳುತ್ತಿದ್ದರು.
ಸರಳವಾದ ಕಾಟನ್ ಸೀರೆ ಉಟ್ಟಿದ್ದ ಈ 18 ವರ್ಷದ ಯುವತಿ ಇನ್ನು ಕೆಲವೇ ಗಂಟೆಗಳಲ್ಲಿ ನಡೆಯಲಿರುವ ತನ್ನ ಮದುವೆಗೆ ಸಿದ್ಧವಾಗುತ್ತಿದ್ದರು.
ಅದರ ಹಿಂದಿನ ದಿನ ಆಕೆ ಮತ್ತು ಆಕೆಯ ಭಾವಿ ಪತಿ ಜಯರಾಮ್ (21) ತಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಬಂಗಲಮೇಡು (ಅಧಿಕೃತವಾಗಿ ಚೆರುಕ್ಕನೂರ್ ಇರುಳರ್ ಕಾಲೋನಿ ಎಂದು ಕರೆಯಲಾಗುತ್ತದೆ) ವಿನಿಂದ ಮಾಮಲ್ಲಪುರಕ್ಕೆ ಬಂದಿದ್ದರು. ತಮಿಳುನಾಡಿನ ತಿರುವಳ್ಳೂರು ಜಿಲ್ಲೆಯ ಈ ಗುಂಪು, ಚೆನ್ನೈನ ದಕ್ಷಿಣದ ಕಡಲತೀರದಲ್ಲಿ ಸಣ್ಣ ಡೇರೆಗಳನ್ನು ಹಾಕಿ ತಂಗಿರುವ ನೂರಾರು ಇರುಳ ಕುಟುಂಬಗಳಲ್ಲಿ ಒಂದು.
ಪ್ರತಿ ವರ್ಷದ ಮಾರ್ಚ್ ತಿಂಗಳಿನಲ್ಲಿ ಕರಾವಳಿ ತಮಿಳುನಾಡಿನ ಸಂಕ್ಷಿಪ್ತ ಚಳಿಗಾಲವು ಬೇಸಿಗೆಗೆ ದಾರಿ ಮಾಡಿಕೊಡುತ್ತಿದ್ದಂತೆ, ಮಾಮಲ್ಲಪುರಂನ (ಹಿಂದೆ ಮಹಾಬಲಿಪುರಂ ಎಂದು ಕರೆಯಲಾಗುತ್ತಿತ್ತು) ಕಡಲ ತೀರದ ಚಿನ್ನದ ಬಣ್ಣದ ಮರಳು ಹಲವು ಬಣ್ಣಗಳೊಂದಿಗೆ ಕಂಗೊಳಿಸತೊಡಗುತ್ತದೆ. ಇಡೀ ಕಡಲತೀರ ತೆಳುವಾದ ಸೀರೆಗಳು ಮತ್ತು ಟಾರ್ಪಾಲಿನ್ ಬಳಸಿ ಮಾಡಿದ ಆವರಣಗಳು ಮತ್ತು ಡೇರೆಗಳ ದೊಡ್ಡ ಜಾಲವಾಗಿ ರೂಪಾಂತರಗೊಳ್ಳುತ್ತದೆ. ಇದಕ್ಕೆ ಹತ್ತಿರದಲ್ಲೇ ಲಭ್ಯವಿರುವ ಮರದ ಕೊಂಬೆಗಳನ್ನು ಕಡಿದು ಬಳಸಿಕೊಳ್ಳಲಾಗುತ್ತದೆ.
ಈ ಪ್ರದೇಶದ ಜನಪ್ರಿಯ ಕಡಲತೀರವಾದ ಇಲ್ಲಿ ವರ್ಷವಿಡೀ ಪ್ರವಾಸಿಗರ ಕಲವರವ ಕೇಳುತ್ತಿರುತ್ತದೆ. ಆದರೆ ಈ ಸಮಯದಲ್ಲಿ ಮಾಸಿ ಮಗಂ ಆಚರಿಸಲು ಬರುವ ಇರುಳಿಗರು ಇಲ್ಲಿನ ಗದ್ದಲಕ್ಕೆ ಬೇರೆಯದೇ ರೂಪವನ್ನು ನೀಡುತ್ತಾರೆ. ಇರುಳರನ್ನು ವಿಶೇಷ ದುರ್ಬಲ ಬುಡಕಟ್ಟು ಗುಂಪು ಎಂದು ಗುರುತಿಸಲಾಗಿದೆ (ಪಿವಿಟಿಜಿ) - ಅಂದಾಜು ಜನಸಂಖ್ಯೆ ಸುಮಾರು 2 ಲಕ್ಷ (ಭಾರತದ ಪರಿಶಿಷ್ಟ ಪಂಗಡಗಳ ಸಂಖ್ಯಾಶಾಸ್ತ್ರೀಯ ವಿವರ, 2013 ). ಅವರು ತಮಿಳುನಾಡಿನಾದ್ಯಂತ ಚದುರಿದಂತೆ ಸಣ್ಣ ಗುಂಪುಗಳಲ್ಲಿ ಪ್ರತ್ಯೇಕ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ.
ಬುಡಕಟ್ಟು ಜನಾಂಗದವರು ಪೂಜಿಸುವ ಏಳು ಕನ್ಯಾ ದೇವತೆಗಳಲ್ಲಿ ಒಬ್ಬಳಾದ ಕನ್ನಿಯಮ್ಮ ದೇವಿಗೆ ಪ್ರಾರ್ಥನೆ ಸಲ್ಲಿಸಲು ಇರುಳರ ಗುಂಪುಗಳು ತಮಿಳು ತಿಂಗಳ ಮಾಸಿಯಲ್ಲಿ (ಫೆಬ್ರವರಿ-ಮಾರ್ಚ್) ಮಾಮಲ್ಲಪುರಂಗೆ ಆಗಮಿಸುತ್ತವೆ. ಮಾಗಮ್ ಎಂಬುದು ಹಿಂದೂ ಜ್ಯೋತಿಷ್ಯ ಶಾಸ್ತ್ರದಲ್ಲಿ ಒಂದು ನಕ್ಷತ್ರದ ಹೆಸರು.
“ಅಮ್ಮ ಕೋಪಗೊಂಡು ಕಡಲಿಗೆ ಹೋಗುತ್ತಾಳೆ. ನಾವು ಅವಳ ಮನವೊಲಿಸಿ ಮನೆಗೆ ಮರಳುವಂತೆ ಪ್ರಾರ್ಥಿಸಬೇಕು. ಆಗ ಅವಳ ಕೋಪ ಕಡಿಮೆಯಾಗುತ್ತದೆ” ಎಂದು ಜಯರಾಂ ಅವರ ಅಮ್ಮನ ಅಮ್ಮ ವಿ.ಸರೋಜಾ ಹೇಳುತ್ತಾರೆ.
ಇರುಳರು ಇಲ್ಲಿನ ತಮ್ಮ ನಾಲ್ಕರಿಂದ ಐದು ದಿನಗಳ ಅಲ್ಪಾವಧಿಯ ವಾಸ್ತವ್ಯದಲ್ಲಿ, ಹಿನ್ನೀರಿನಲ್ಲಿ ಮೀನು ಹಿಡಿಯುವುದು ಮತ್ತು ಹತ್ತಿರದ ಪೊದೆಗಳಲ್ಲಿ ಬಸವನಹುಳು, ಇಲಿ ಅಥವಾ ಪಕ್ಷಿಗಳನ್ನು ಬೇಟೆಯಾಡುವ ಮೂಲಕ ತಮ್ಮ ಆಹಾರವನ್ನು ಪೂರೈಸಿಕೊಳ್ಳುತ್ತಾರೆ.
ಬೇಟೆಯಾಡುವುದು, ತಿನ್ನಬಹುದಾದ ಸೊಪ್ಪುಗಳನ್ನು ಹುಡುಕುವುದು ಮತ್ತು ಹತ್ತಿರದ ಕಾಡುಗಳಿಂದ ಉರುವಲು ಮತ್ತು ಔಷಧೀಯ ಗಿಡಮೂಲಿಕೆಗಳನ್ನು ಸಂಗ್ರಹಿಸುವುದು ಸಾಂಪ್ರದಾಯಿಕ ಇರುಳರ್ ಜೀವನಶೈಲಿಯ ದೊಡ್ಡ ಭಾಗವಾಗಿದೆ. (ಓದಿ: ಬಂಗಲಮೇಡುವಿನಲ್ಲಿ ನಿಧಿಯ ಹುಡುಕಾಟ ).
ಅರಣ್ಯ ಪ್ರದೇಶಗಳು ಕಟ್ಟಡಗಳಂತಹ ನಿರ್ಮಾಣಗಳು ಮತ್ತು ಹೊಲಗಳಾಗಿ ಮಾರ್ಪಾಡುಗುತ್ತಿರುವುದು ಹಾಗೂ ಅವರ ನೆಲೆಗಳ ಸುತ್ತಲಿನ ಕಾಡು ಮತ್ತು ಕೆರೆಗಳಿಗೆ ಪ್ರವೇಶ ಸಾಧ್ಯತೆ ಕಡಿಮೆಯಾಗಿರುವುದರಿಂದಾಗಿ ಇರುಳು ಈಗ ಬಹುತೇಕ ಹೊಲಗಳು, ನಿರ್ಮಾಣ ಸ್ಥಳಗಳು, ಇಟ್ಟಿಗೆ ಗೂಡುಗಳು ಮತ್ತು ಮನರೇಗಾ ರೀತಿಯ ದಿನಗೂಲಿ ಕೆಲಸದ ಮೇಲೆ ಅವಲಂಬಿತರಾಗಿದ್ದಾರೆ. (ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ, ಇದು ಗ್ರಾಮೀಣ ಕುಟುಂಬಗಳಿಗೆ ವರ್ಷದಲ್ಲಿ 100 ದಿನಗಳ ಉದ್ಯೋಗವನ್ನು ಖಾತರಿಪಡಿಸುತ್ತದೆ). ಅವರಲ್ಲಿ ಕೆಲವರಿಗೆ ಹಾವು ಕಡಿತಕ್ಕೆ ಔಷಧಿ ತಯಾರಿಕೆಗಾಗಿ ಹಾವು ಹಿಡಿದು ವಿಷ ನಿರೋಧಕ ಔಷಧಿ ತಯಾರಿಸುವವರಿಗೆ ಸರಬರಾಜು ಮಾಡುವ ಪರವಾನಿಗೆ ದೊರಕಿದೆ. ಆದರೆ ಈ ಕೆಲಸ ಲಭ್ಯತೆ ಹಂಗಾಮಿ ಮತ್ತು.
ಅಲಮೇಲು ಚೆನ್ನೈ ನಿರ್ಮಾಣಗೊಳ್ಳುತ್ತಿರುವ ಉಪನಗರವಾದ ಮನಪಕ್ಕಂನ ಯಾತ್ರಾರ್ಥಿಯಾಗಿದ್ದು, ಅಲ್ಲಿ ಅವರು ಕುಪ್ಪ ಮೇಡು (ಕಸದ ರಾಶಿ) ಬಳಿ ವಾಸಿಸುತ್ತಿದ್ದಾರೆ. 45 ವರ್ಷದ ಈ ದಿನಗೂಲಿ ಮಹಿಳೆ ಪ್ರತಿ ವರ್ಷ 55 ಕಿಲೋಮೀಟರ್ ಪ್ರಯಾಣಿಸಿ ಅಮ್ಮನಿಗೆ ಪ್ರಾರ್ಥನೆ ಸಲ್ಲಿಸುತ್ತಾರೆ. “ಸುತ್ತ ನೋಡಿ ಒಮ್ಮೆ” ಎನ್ನುತ್ತಾ ಅಲ್ಲಿದ್ದ ಆವರಣಗಳನ್ನು ತೋರಿಸುತ್ತಾ, “ನಾವು ಹಿಂದಿನಿಂದಲೂ ಹೀಗೆಯೇ ಬದುಕಿದವರು. ನೆಲದ ಮೇಲೆ ಇದ್ದವರು. ಅಲ್ಲಿ ಹಾವು, ಹಲ್ಲಿ ಏನಿದ್ದರೂ ನಮ್ಮ ವಾಸ ಅಲ್ಲಿಯೇ. ಇದಕ್ಕಾಗಿಯೇ ನಾವು ಅಮ್ಮನಿಗೆ ತರೈ (ನೆಲ) ಮೇಲೆಯೇ ನಮ್ಮ ಅರ್ಪಣೆಗಳನ್ನು ಇರಿಸುತ್ತೇವೆ.”
ಸೂರ್ಯೋದಯಕ್ಕೂ ಕೆಲವು ಗಂಟೆಗಳ ಮೊದಲೇ ಪ್ರಾರ್ಥನೆ ಆರಂಭಗೊಳ್ಳುತ್ತದೆ. ಬೇಗ ಎದ್ದವರು ಅಲ್ಲಿನ ಟೆಂಟುಗಳು ಮತ್ತು ಮಲಗಿರುವ ಜನರ ಹೊರ ಚಾಚಿದ ಕಾಲುಗಳ ನಡುವೆ ತಿಂಗಳ ಬೆಳಕಿನಲ್ಲಿ ದಾರಿ ಮಾಡಿಕೊಂಡು ಮುಂದೆ ಸಾಗುತ್ತಾರೆ. ಪ್ರತಿ ಕುಟುಂಬವೂ ತಮ್ಮ ಅರ್ಪಣೆಯನ್ನು ಸಲ್ಲಿಸುವ ಸಲುವಾಗಿ ಸ್ಥಳವೊಂದನ್ನು ಸಿದ್ಧಪಡಿಸುತ್ತದೆ.
“ಮರಳಿನಿಂದ ಏಳು ಮೆಟ್ಟಿಲುಗಳನ್ನು ತಯಾರಿಸುತ್ತೇವೆ” ಎನ್ನುತ್ತಾರೆ ಅಲಮೇಲು. ಪ್ರತಿ ಮೆಟ್ಟಿಲಿನ ಮೇಲೂ ದೇವರಿಗೆಂದು ಅರ್ಪಣೆಗಳನ್ನು ಇರಿಸಲಾಗುತ್ತದೆ. ಇದರಲ್ಲಿ ಹೂವು, ವೀಳ್ಯದೆಲೆ, ತೆಂಗಿಕಾಯಿ, ಮಂಡಕ್ಕಿ, ಮತ್ತು ಬೆಲ್ಲ ಬೆರೆಸಿದ ಅಕ್ಕಿ ಕಡುಬಿನಂತಹ ವಸ್ತುಗಳು ಸೇರಿರುತ್ತವೆ. ಸಮುದ್ರದ ಅಲೆ ತಾವು ತಯಾರಿಸಿದ ಮೆಟ್ಟಿಲನ್ನು ಸೋಕಿದರೆ ದೇವಿ ತಮ್ಮನ್ನು ಆಶೀರ್ವದಿಸಿದಳು ಎಂದು ಇರುಳರು ನಂಬುತ್ತಾರೆ.
“ಅಢತ್ತಿ ಕುಡುತ್ತ ಯೆತ್ತುಕುವ [ನೀವು ಆದೇಶಿಸಿದರೆ ಅವಳು ಸ್ವೀಕರಿಸುತ್ತಾಳೆ]” ಎನ್ನುತ್ತಾರೆ ಅಲಮೇಲು. ದೇವರಿಗೆ ಆಜ್ಞೆ ಮಾಡುವುದು ಸ್ವಲ್ಪ ವಿಚಿತ್ರವೆನ್ನಿಸಬಹುದು ಆದರೆ ಇರುಳರು ಮತ್ತು ಅವರ ದೇವರ ನಡುವೆ ಇರುವ ಸಂಬಂಧವೇ ಅಂತಹದ್ದು. “ಇದು ನಿಮ್ಮ ಅಮ್ಮನನ್ನು ನೀವು ಕರೆದಂತೆ. ಅಲ್ಲಿ ಎಲ್ಲ ಸ್ವಾತಂತ್ರ್ಯವೂ ಇರುತ್ತದೆ” ಎಂದು ವಿವರಿಸುತ್ತಾರೆ ಇರುಳ ಸಮುದಾಯದ ಕಾರ್ಯಕರ್ತರಾಗಿರುವ ಮಣಿಗಂಡನ್.
ಪೂಜೆಯ ಸಮಯದಲ್ಲಿ ದೇವಿ ಕೆಲವು ಜನರನ್ನು ಜೊತೆಗೆ ಹೊಂದಿರುತ್ತಾಳೆನ್ನುವುದು ಇರುಳರ ನಂಬಿಕೆ. ಅನೇಕ ಭಕ್ತರು ಸಾಂಪ್ರದಾಯಿಕವಾಗಿ ಹಳದಿ ಅಥವಾ ಕಿತ್ತಳೆ ಬಣ್ಣದ ಬಟ್ಟೆಗಳನ್ನು ಧರಿಸುತ್ತಾರೆ, ಇವರಲ್ಲಿ ಕನ್ನಿಯಮ್ಮನ ಬಳಿ ಇರುವವರು ಎಂದು ನಂಬಲಾದವರೂ ಇರುತ್ತಾರೆ. ಜೊತೆಗೆ ಕೆಲವು ಗಂಡಸರು ಸಹ ಸೀರೆಯುಟ್ಟು, ಹೂವು ಮುಡಿದುಕೊಳ್ಳುತ್ತಾರೆ.
ತಿರುತ್ತಣಿಯ ಮಣಿಗಂಡನ್ ಅವರು ಇರುಳ ಸಮುದಾಯದಲ್ಲಿನ ಸಾಮಾಜಿಕ ಕಾರ್ಯಕರ್ತ. ಅವರು ಹೇಳುವಂತೆ, “ನಮ್ಮಲ್ಲಿ ಪುರೋಹಿತರು ಇಲ್ಲ. ಅಮ್ಮ ಚೈತನ್ಯವನ್ನು ಸ್ವೀಕರಿಸಲು ನಿರ್ಧರಿಸಿದ ಯಾರು ಬೇಕಿದ್ದರೂ ಪುರೋಹಿತರಾಗಬಹುದು.” ಮಣಿಗಂಡನ್ ಅವರು 2023ರ ನವೆಂಬರ್ ತಿಂಗಳಿನಲ್ಲಿ ಮೃತರಾದರು. ಅವರು ಬದುಕಿದ್ದ ಸಮಯದಲ್ಲಿ ಈ ಮಾಹಿತಿಯನ್ನು ಪರಿಗೆ ತಿಳಿಸಿದ್ದರು.
ನಂದಿನಿ ಮತ್ತು ಜಯರಾಮ್ ಮದುವೆಯು ಬೆಳಗ್ಗೆ (ಮಾರ್ಚ್ 7, 2023), ದೇವಿಯು ಆಹಾವನೆಯಾದ ಇಬ್ಬರು ಮಹಿಳೆಯರು ದಂಪತಿಗಳನ್ನು ಆಶೀರ್ವದಿಸುವುದರೊಂದಿಗೆ ಸರಳವಾಗಿ ಮುಗಿಯಿತು. ಹೀಗೆ ಕಡಲತೀರದ ಉದ್ದಕ್ಕೂ ಪುರೋಹಿತರು ಮದುವೆ ಕಾರ್ಯಗಳನ್ನು ನಡೆಸುವುದರ ಜೊತೆಗೆ, ಮಕ್ಕಳ ನಾಮಕರಣ ಮುಗಿಸಿ ಅವರಿಗೆ ಆಶೀರ್ವದಿಸುವುದನ್ನು ಮಾಡುತ್ತಿದ್ದರು. ಅವರು ಭಕ್ತರಿಗೆ ಅರುಳ್ ವಾಕ್ ಅಥವಾ ದೇವರ ನುಡಿಯನ್ನು ಜನರಿಗೆ ತಿಳಿಸುತ್ತಿದ್ದರು.
ನೀರನ್ನು ತಮ್ಮ ಅಮ್ಮನ್ ಎಂದು ಪರಿಗಣಿಸುವ ಇರುಳರು ಅವಳನ್ನು ಪೂಜಿಸುವ ಸಲುವಾಗಿ ಮನೆಗೆ ಕೊಂಡೊಯ್ಯುತ್ತಾರೆ. ಇದಕ್ಕಾಗಿ ಅವರು ಸಮುದ್ರದಿಂದ ನೀರನ್ನು ಪ್ಲಾಸ್ಟಿಕ್ ಬಾಟಲಿಗಳಲ್ಲಿ ಒಯ್ಯುತ್ತಾರೆ, ಅದನ್ನು ತಮ್ಮ ಮನೆಯ ಸುತ್ತಲೂ ಸಿಂಪಡಿಸುತ್ತಾರೆ ಮತ್ತು ಪ್ರಯಾಣಿಸಲು ಸಾಧ್ಯವಾಗದವರಿಗೆ ತೀರ್ಥವಾಗಿ ನೀಡುತ್ತಾರೆ.
ಸಮುದ್ರದ ಗಾಳಿಯ ನಡುವೆ ದೇವಿಯ ಆಶೀರ್ವಾದ ಪಡೆದ ಇರುಳರು ತಮ್ಮ ಟೆಂಟುಗಳನ್ನು ಕಟ್ಟಲು ಶುರುಮಾಡುತ್ತಾರೆ. ನವವಿವಾಹಿತರಾದ ನಂದಿನಿ ಮತ್ತು ಜಯರಾಮ್ ಸಂತೋಷದಿಂದ್ದರು. ಮದುವೆಯ ನೆನಪಿಗಾಗಿ ಅವರು 2024ರಲ್ಲೂ ಇಲ್ಲಿಗೆ ಬರುವ ಯೋಜನೆ ಹಾಕಿಕೊಂಡಿದ್ದಾರೆ. "ಅವರು ಕಡಲತೀರದಲ್ಲಿ ಅಡುಗೆ ಮಾಡುತ್ತಾರೆ, ಸಮುದ್ರ ಸ್ನಾನ ಮಾಡುತ್ತಾರೆ ಮತ್ತು ಮಹಾಬಲಿಪುರಂನಲ್ಲಿ ಕೆಲವು ದಿನಗಳನ್ನು ಸಂತೋಷದಿಂದ ಕಳೆಯಲಿದ್ದಾರೆ" ಎಂದು ಸರೋಜಾ ಹೇಳುತ್ತಾರೆ.
ಅನುವಾದಕರು: ಶಂಕರ ಎನ್ ಕೆಂಚನೂರು