ಕೃಷ್ಣಾಜಿ ಭರಿತ್‌ ಎನ್ನುವ ಈ ಊರಿನಲ್ಲಿ ಕೆಲಸ ಬಾರದ ಕೈಗಳೇ ಇಲ್ಲ.

ಇಲ್ಲಿ ಪ್ರತಿದಿನ ಮಧಾಹ್ನ ಮತ್ತು ರಾತ್ರಿಯ ಊಟದ ಸಮಯಕ್ಕಿಂತ ಗಂಟೆಗಳ ಮುನ್ನ, ದೂರ ದೂರದಿಂದ ಬರುವ ರೈಲುಗಳು ಜಲಗಾಂವ್ ರೈಲು ನಿಲ್ದಾಣ ತಲುಪುವ ಮೊದಲೇ, ಸುಮಾರು 300 ಕಿಲೋಗ್ರಾಂಗಳಷ್ಟು ಬದನೆ ಅಥವಾ ಬಿಳಿಬದನೆ ಭರಿತ್ ಬೇಯಿಸಿ ಬಡಿಸಲಾಗುತ್ತದೆ, ಪ್ಯಾಕ್ ಮಾಡಿ ಬೇಕಾದವರಿಗೆ ಕಳುಹಿಸಲಾಗುತ್ತದೆ. ಇದು ಜಲ್‌ಗಾಂವ್ ನಗರದ ಹಳೆಯ ಬಿ ಜೆ ಮಾರ್ಕೆಟ್ ಪ್ರದೇಶದಲ್ಲಿರುವ ಒಂದು ಸಣ್ಣ ಹೊಟೇಲು. ಕೈಗಾರಿಕೋದ್ಯಮಿಗಳು, ಕಾರ್ಮಿಕರು, ಭಾವೀ ಸಂಸದರಿಂದ ಹಿಡಿದು ದಣಿದಿರುವ ಪಕ್ಷದ ಕಾರ್ಯಕರ್ತರವರೆಗೆ ಎಲ್ಲರೂ ಇದರ ಗ್ರಾಹಕರು.

ಬಿಡುವಿಲ್ಲದ ವಾರದ ದಿನದ ಸಂಜೆ ಹೊತ್ತು ರಾತ್ರಿಯ ಊಟಕ್ಕೆ ತಯಾರಿ ನಡೆಯುತ್ತಿದೆ. ಕೃಷ್ಣಾಜಿ ಭರಿತ್‌ನೊಳಗೆ ಶುಚಿಗೊಳಿಸುವ, ಕತ್ತರಿಸುವ, ಅರೆಯುವ, ಸಿಪ್ಪೆಸುಲಿಯುವ, ಹುರಿಯುವ, ಬೇಯಿಸುವ, ಬೆರೆಸುವ, ಬಡಿಸುವ ಮತ್ತು ಪ್ಯಾಕ್‌ ಮಾಡುವ ಕೆಲಸಗಳು ನಡೆಯುತ್ತಿವೆ. ಹಳೆಯ ಸಿಂಗಲ್-ಸ್ಕ್ರೀನ್‌ ಸಿನೇಮಾ ನೋಡಲು ಬಾಕ್ಸ್‌ ಆಫೀಸಿನ ಹೊರಗೆ ಜನ ನಿಂತಿರುವಂತೆ, ಹೋಟೇಲಿನ ಹೊರಗೆ ಇರುವ ಸ್ಟೀಲಿನ ಮೂರು ಬೇಲಿಗಳ ಉದ್ದಕ್ಕೂ ಜನರು ಸಾಲಾಗಿ ನಿಂತಿದ್ದಾರೆ.

ಇಲ್ಲಿನ ಮುಖ್ಯ ಪಾತ್ರಗಳೆಂದರೆ 14 ಮಂದಿ ಮಹಿಳೆಯರು.

PHOTO • Courtesy: District Information Officer, Jalgaon

ಜಲಗಾಂವ್‌ನ ಜಿಲ್ಲಾಧಿಕಾರಿ ಆಯುಷ್ ಪ್ರಸಾದ್ ಅವರು 2024ರ ಏಪ್ರಿಲ್ ತಿಂಗಳ ಕೊನೆಯ ವಾರ ಕೃಷ್ಣಾಜಿ ಭರಿತ್‌ನೊಳಗೆ ಚುನಾವಣಾ ಜಾಗೃತಿಯ ವೀಡಿಯೊವೊಂದನ್ನು ಚಿತ್ರೀಕರಿಸಿದ್ದರು. ಈ ವೀಡಿಯೊವನ್ನು ಲಕ್ಷಾಂತರ ಜನರು ಡೌನ್‌ಲೋಡ್ ಮಾಡಿದ್ದಾರೆ, ಅನೇಕ ಬಾರಿ ವೀಕ್ಷಿಸಿದ್ದಾರೆ ಎಂದು ಜಿಲ್ಲಾ ಮಾಹಿತಿ ಅಧಿಕಾರಿ ತಿಳಿಸುತ್ತಾರೆ

ಈ ಮಹಿಳೆಯರೇ ಈ ದೊಡ್ಡಮಟ್ಟದ ಅಡುಗೆ ತಯಾರಿಯ ಬೆನ್ನೆಲುಬು. ಪ್ರತಿದಿನ ಮೂರು ಕ್ವಿಂಟಾಲ್ ಬದನೆಕಾಯಿಯನ್ನು ಬದನೆಯ ಭರಿತ್ ತಯಾರಿಸಲು ಬೇಯಿಸುತ್ತಾರೆ. ಇದನ್ನು ದೇಶದ ಬೇರೆ ಕಡೆಗಳಲ್ಲಿ ಬೈಂಗನ್ ಕಾ ಭರ್ತಾ ಎಂದು ಕರೆಯುತ್ತಾರೆ. ಜಲ್‌ಗಾಂವ್ ಜಿಲ್ಲಾಡಳಿತವು ಈ ಬ್ಯುಸಿ ಔಟ್‌ಲೆಟ್‌ನಲ್ಲಿ ಚುನಾವಣಾ ಜಾಗೃತಿ ವೀಡಿಯೊವನ್ನು ಚಿತ್ರೀಕರಿಸಿದ ಮೇಲೆ, ಇದು ವ್ಯಾಪಕ ಪ್ರಚಾರವನ್ನು ಪಡೆದುಕೊಂಡಿತು.

ಮೇ 13 ರಂದು ಜಲಗಾಂವ್ ಸಂಸದೀಯ ಕ್ಷೇತ್ರದ ಚುನಾವಣೆಯಲ್ಲಿ ಮಹಿಳಾ ಮತದಾರರ ಸಂಖ್ಯೆಯನ್ನು ಹೆಚ್ಚಿಸಲು ಈ ವೀಡಿಯೋವನ್ನು ಮಾಡಲಾಗಿತ್ತು. ಇದರಲ್ಲಿ ಕೃಷ್ಣಾಜಿ ಭರಿತ್‌ನ ಮಹಿಳೆಯರು ತಮ್ಮ ಹಕ್ಕುಗಳ ಬಗ್ಗೆ, ತಮ್ಮ ಹಕ್ಕು ಚಲಾಯಿಸುವ ಪ್ರಕ್ರಿಯೆಯನ್ನು ಆ ದಿನ ತಾವು ಕಲಿತ ಬಗ್ಗೆ ಮಾತನಾಡಿದ್ದಾರೆ.

"ಮತಯಂತ್ರದ ಮುಂದೆ ನಿಂತಾಗ, ನಮ್ಮ ಬೆರಳುಗಳಿಗೆ ಶಾಯಿಯ ಗುರುತು ಹಾಕಿದಾಗ, ಆ ಒಂದು ಕ್ಷಣದಲ್ಲಿ ನಾವು ನಿಜವಾಗಿಯೂ ಸ್ವತಂತ್ರರಾಗುತ್ತೇವೆ ಎಂಬುದನ್ನು ನಾನು ಜಿಲ್ಲಾಧಿಕಾರಿಯವರಿಂದ ಕಲಿತಿದ್ದೇನೆ," ಎಂದು ಮೀರಾಬಾಯಿ ನರಲ್ ಕೊಂಡೆ ಹೇಳುತ್ತಾರೆ. ಅವರ ಕುಟುಂಬ ಒಂದು ಸಣ್ಣ ಕ್ಷೌರದ ಅಂಗಡಿಯನ್ನು ನಡೆಸುತ್ತದೆ. ಹೊಟೇಲಿನಲ್ಲಿ ಕೆಲಸ ಮಾಡಿ ಅವರಿಗೆ ಬರುವ ಸಂಬಳವೂ ಮನೆಯ ಆದಾಯದ ಮೂಲಗಳಲ್ಲಿ ಒಂದು. "ನಮ್ಮ ಪತಿ, ತಂದೆ-ತಾಯಿ, ಬಾಸ್ ಅಥವಾ ಲೀಡರ್‌ನನ್ನು ಕೇಳದೆಯೇ ನಾವು ಯಂತ್ರದ ಮುಂದೆ ನಮಗೆ ಬೇಕಾದವರನ್ನು ಆಯ್ಕೆ ಮಾಡಬಹುದು," ಎಂದು ಅವರು ಹೇಳುತ್ತಾರೆ.

ಅಕ್ಟೋಬರ್‌ನಿಂದ ಫೆಬ್ರವರಿ ವರೆಗಿನ ಸೀಸನ್‌ನಲ್ಲಿ ಕೃಷ್ಣಾಜಿ ಭರಿತ್‌ನ ಅಡುಗೆಮನೆಯಲ್ಲಿ 500 ಕಿಲೋಗಳಿಂತಲೂ ಹೆಚ್ಚು ಬದನೆಯ ಭರಿತ್‌ ತಯಾರಾಗುತ್ತದೆ. ಆ ಸಮಯದಲ್ಲಿ ಒಳ್ಳೆಯ ಚಳಿಗಾಲದ ಬಿಳಿಬದನೆಗಳು ಸ್ಥಳೀಯ ಮಾರುಕಟ್ಟೆಗಳಲ್ಲಿ ತುಂಬಿರುತ್ತವೆ. ರುಬ್ಬಿ ಹುರಿದ ಮೆಣಸಿನಕಾಯಿ, ಕೊತ್ತಂಬರಿ, ಹುರಿದ ಕಡಲೆಕಾಯಿ, ಬೆಳ್ಳುಳ್ಳಿ ಮತ್ತು ತೆಂಗಿನಕಾಯಿಯ ರುಚಿ ಗ್ರಾಹಕರನ್ನು ಆಕರ್ಷಿಸುತ್ತದೆ ಎಂದು ಅಡುಗೆ ಮಾಡುವ ಮಹಿಳೆಯರು ಹೇಳುತ್ತಾರೆ. ಅಲ್ಲದೇ, ಇದು ಕೈಗೆಟುಕುವ ದರದಲ್ಲಿ ಸಿಗುತ್ತದೆ. 300 ರುಪಾಯಿಗೆ ಒಂದು ಕೆಜಿ‌, ಅದಕ್ಕೂ ಹೆಚ್ಚಿನ ಭರಿತ್‌ನ್ನು ಖರೀದಿಸಿ ಮನೆಗೆ ಕೊಂಡೊಯ್ಯಬಹುದು.

10 x 15 ಅಡಿಯ ಈ ಅಡಿಗೆಮನೆಯಲ್ಲಿರುವ ನಾಲ್ಕು ಸ್ಟವ್‌ಟಾಪ್‌ಗಳಲ್ಲಿ ಕೆಲಸ ನಡೆಯುತ್ತಿರುವಾಗ, ಇನ್ನೊಂದು ಒಲೆಯಲ್ಲಿ ಹುರಿದ ಬೇಳೆ, ಪನೀರ್-ಮಟರ್ ಮತ್ತು ಇತರ ಸಸ್ಯಾಹಾರಿ ಖಾದ್ಯ ಸೇರಿದಂತೆ ಒಟ್ಟು 34 ಐಟಂಗಳು ತಯಾರಾಗುತ್ತವೆ. ಏನೇ ಆದರೂ, ಈ ಎಲ್ಲಾ ಐಟಂಗಳಿಗೆ ಕಿರೀಟಪ್ರಾಯವೆಂದರೆ ಭರಿತ್ ಮತ್ತು ಕಡಲೆ ಹಿಟ್ಟನ್ನು ಹುರಿದು ಮಾಡಿದ ಶೇವ್ ಭಾಜಿ.

PHOTO • Kavitha Iyer
PHOTO • Kavitha Iyer

ಎಡ: ಕೃಷ್ಣ ಭರಿತ್‌ ಸ್ಥಳೀಯ ರೈತರಿಂದ ಮತ್ತು ಮಾರುಕಟ್ಟೆಗಳಿಂದ ಒಳ್ಳೆಯ ಗುಣಮಟ್ಟದ ಬದನೆಗಳನ್ನು ಖರೀದಿಸಿ ಪ್ರತಿದಿನ 3 ರಿಂದ 5 ಕ್ವಿಂಟಾಲ್ ಬದನೆ ಭರಿತ್ ತಯಾರಿಸುತ್ತದೆ. ಬಲ: 7:30 ರ ಸುಮಾರಿಗೆ ರಾತ್ರಿಯ ಊಟಕ್ಕಾಗಿ ಪಲ್ಯಗಳು ಮತ್ತು ಭರಿತ್‌ ತಯಾರಿಸಲು ಬೇಕಾದ ಈರುಳ್ಳಿ

PHOTO • Kavitha Iyer
PHOTO • Kavitha Iyer

ಎಡಕ್ಕೆ: ಬಟಾಣಿ, ಮಸಾಲೆಗಳು, ಕಾಟೇಜ್ ಚೀಸ್‌ ಮತ್ತು ಆಗಷ್ಟೇ ಬೇಯಿಸಿದ ಬೇಳೆಯ ಎರಡು ಕ್ಯಾನ್‌ಗಳು ಕೃಷ್ಣಾಜಿ ಭರಿತ್‌ನ ಸಣ್ಣ ಅಡುಗೆಮನೆಯೊಳಗಿರುವ ನಾಲ್ಕು ಸ್ಟವ್‌ಟಾಪ್‌ಗಳಲ್ಲಿ ಒಂದರ ಪಕ್ಕ ಒಂದು ಕುಳಿತುಕೊಂಡಿವೆ. ಬಲ: ರಜಿಯಾ ಪಟೇಲ್ ಅವರು ಒಣಗಿದ ತೆಂಗಿನಕಾಯಿಯನ್ನು ಪುಡಿಮಾಡಿ ಪೇಸ್ಟ್‌ ಮಾಡುವ ಮೊದಲು ಸಣ್ಣ ಸಣ್ಣ ತುಂಡುಗಳಾಗಿ ಕತ್ತರಿಸುತ್ತಾರೆ. ಅವರು ದಿನಕ್ಕೆ 40 ತೆಂಗಿನಕಾಯಿಗಳನ್ನು ಹೀಗೆ ಕತ್ತರಿಸುತ್ತಾರೆ

ಖರೀದಿಸುವ ಸಾಮರ್ಥ್ಯ ಮತ್ತು ಜೀವನ ವೆಚ್ಚದ ಬಗ್ಗೆ ಮಾತನಾಡುತ್ತಿದ್ದಂತೆ, ಈ ಮಹಿಳೆಯರೇನು ನಾಚಿಕೆಪಟ್ಟುಕೊಳ್ಳಲಿಲ್ಲ. 46 ವರ್ಷದ ಪುಷ್ಪಾ ರಾವ್ಸಾಹೇಬ್ ಪಾಟೀಲ್ ಅವರಿಗೆ ಅಡುಗೆ ಮಾಡಲು ಪ್ರಧಾನ ಮಂತ್ರಿ ಉಜ್ವಲ ಯೋಜನೆ ಯಡಿ ಸಿಗುವ ಸಬ್ಸಿಡಿ ಸಹಿತ ಗ್ಯಾಸ್‌ ಸಿಲಿಂಡರ್ ಇನ್ನೂ ಸಿಕ್ಕಿಲ್ಲ .ಅದಕ್ಕೆ ಬೇಕಾದ ದಾಖಲೆಗಳಲ್ಲಿ ಏನೋ ಸಮಸ್ಯೆ ಇದೆ ಎಂದು ಅವರು ಹೇಳುತ್ತಾರೆ.

60 ವರ್ಷ ದಾಟಿರುವ ಉಷಾಬಾಯಿ ರಾಮಾ ಸುತಾರ ಅವರಿಗೆ ವಾಸಿಸಲು ಮನೆಯೇ ಇಲ್ಲ. "ಲೋಕನ್ನ ಮೂಲಭೂತ ಸುವಿಧಾ ಮಿಲಯಾಲ ಹವ್ಯೆತ್, ನಹಿ [ಜನರಿಗೆ ಮೂಲಭೂತ ಸೌಕರ್ಯಗಳು ಸಿಗಬೇಕು, ಸರಿಯಲ್ವಾ]? ಪ್ರತಿಯೊಬ್ಬ ನಾಗರಿಕನಿಗೂ ವಾಸಿಸಲು ಮನೆ ಬೇಕು," ಎಂದು ಹಲವು ವರ್ಷಗಳ ಹಿಂದೆ ಪತಿಯನ್ನು ಕಳೆದುಕೊಂಡು ತಮ್ಮ ಹುಟ್ಟೂರಿಗೆ ಮರಳಿರುವ ವಿಧವೆ ಉಷಾಬಾಯಿ ಹೇಳುತ್ತಾರೆ.

ಹೆಚ್ಚಿನ ಮಹಿಳೆಯರು ಬಾಡಿಗೆ ಮನೆಗಳಲ್ಲಿ ವಾಸ ಮಾಡುತ್ತಾರೆ. 55 ವರ್ಷದ ರಜಿಯಾ ಪಟೇಲ್ ಅವರು ತಿಂಗಳಿಗೆ 3,500 ರುಪಾಯಿ ಕೊಟ್ಟು ಒಂದು ಬಾಡಿಗೆ ಮನೆಯಲ್ಲಿ ಇದ್ದಾರೆ. ಅವರ ತಿಂಗಳ ಆದಾಯದ ಮೂರನೇ ಒಂದು ಭಾಗ ಬಾಡಿಗೆಗೆ ಹೋಗುತ್ತದೆ. "ಪ್ರತೀ ಚುನಾವಣೆಯಲ್ಲೂ, ನಾವು ಮೆಹಂಗೈ [ಹಣದುಬ್ಬರ] ಬಗ್ಗೆ ಭರವಸೆಗಳನ್ನು ಕೇಳುತ್ತಲೇ ಬಂದಿದ್ದೇವೆ. ಚುನಾವಣೆ ಮುಗಿದ ಮೇಲೆ ಎಲ್ಲಾ ವಸ್ತುಗಳ ಬೆಲೆ ಏರುತ್ತಲೇ ಹೋಗುತ್ತವೆ," ಎಂದು ಅವರು ಹೇಳುತ್ತಾರೆ.

ಮಹಿಳೆಯರು ಸ್ವತಂತ್ರವಾಗಿ ಬದುಕಲು ಈ ಕೆಲಸವನ್ನು ಮಾಡುತ್ತಾರೆ, ಅವರಲ್ಲಿ ಬೇರೆ ದಾರಿಯಿಲ್ಲ ಎಂದು ಮಹಿಳೆಯರು ಹೇಳುತ್ತಾರೆ. 21 ವರ್ಷಗಳಿಂದ ಸುತಾರ್, 20 ವರ್ಷಗಳಿಂದ ಸಂಗೀತಾ ನಾರಾಯಣ ಶಿಂಧೆ, 17 ವರ್ಷಗಳಿಂದ ಮಾಲುಬಾಯಿ ದೇವಿದಾಸ್ ಮಹಾಲೆ ಮತ್ತು 14 ವರ್ಷಗಳಿಂದ ಉಷಾ ಭೀಮರಾವ್ ಧಂಗರ್- ಹೀಗೆ ಅನೇಕ ಮಹಿಳೆಯರು ಇಲ್ಲಿ ತುಂಬಾ ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ.

ಅವರ ದಿನ ಅಡುಗೆಗೆ 40ರಿಂದ 50 ಕಿಲೋಗಳಷ್ಟು ಬದನೆಗಳನ್ನು ಸಿದ್ಧ ಪಡಿಸುವುದರೊಂದಿಗೆ ಆರಂಭವಾಗುತ್ತದೆ. ಬದನೆಕಾಯಿಗಳನ್ನು ಹಬೆಯಲ್ಲಿ ಬೇಯಿಸಿ, ಹುರಿದ, ಸಿಪ್ಪೆ ಸುಲಿದು, ಒಳಗಿನ ತಿರುಳನ್ನು ಎಚ್ಚರಿಕೆಯಿಂದ ಹೊರತೆಗೆಯುತ್ತಾರೆ, ನಂತರ ಕೈಯಿಂದ ಕಿವುಚುತ್ತಾರೆ. ಕಿಲೋ ಲೆಕ್ಕದಲ್ಲಿ ಹಸಿರು ಮೆಣಸಿನಕಾಯಿಯನ್ನು ಬೆಳ್ಳುಳ್ಳಿ ಮತ್ತು ಕಡಲೆಕಾಯಿಯೊಂದಿಗೆ ಜಜ್ಜಿ ಥೇಚಾ (ಚಟ್ನಿ) ಮಾಡುತ್ತಾರೆ. ನಂತರ ಈರುಳ್ಳಿ ಮತ್ತು ಬದನೆಕಾಯಿಯನ್ನು, ಮೊದಲೇ ನುಣ್ಣಗೆ ಕತ್ತರಿಸಿ ಇಟ್ಟಿದ್ದ ಕೊತ್ತಂಬರಿ ಸೊಪ್ಪನ್ನು ಈ ಚಟ್ನಿಯ ಜೊತೆಗೆ ಬಿಸಿ ಎಣ್ಣೆಯಲ್ಲಿ ಬೆರೆಸುತ್ತಾರೆ. ಪ್ರತಿದಿನ ಹೆಂಗಸರು ಕೆಲ ಡಜನ್ ಕಿಲೋಗಳಷ್ಟು ಈರುಳ್ಳಿಯನ್ನು ಕತ್ತರಿಸುತ್ತಾರೆ.

PHOTO • Kavitha Iyer
PHOTO • Kavitha Iyer

ಎಡ: ಮಹಿಳೆಯರು ಪ್ರತಿದಿನ ಸುಮಾರು 2,000 ಪೋಲಿಗಳು ಅಥವಾ ಚಪಾತಿಗಳನ್ನು ಹಾಗೂ ಹೆಚ್ಚುವರಿಯಾಗಿ ಬಾಜ್ರಾದಿಂದ (ಸಜ್ಜೆ) 1,500 ಭಕ್ರಿಗಳನ್ನು (ರೊಟ್ಟಿ) ತಯಾರಿಸುತ್ತಾರೆ. ಬಲ: ಕೃಷ್ಣಾಜಿ ಭರಿತ್‌ನ 'ಪಾರ್ಸೆಲ್ ಡೆಲಿವರಿ' ಕಿಟಕಿಯ ಹೊರಗೆ ಕಾಯುತ್ತಿರುವ ಪ್ಲಾಸ್ಟಿಕ್ ಚೀಲಗಳು

ಕೃಷ್ಣಾಜಿ ಭರಿತ್‌ ಆಹಾರವನ್ನು ಕೇವಲ ಸ್ಥಳೀಯರು ಮಾತ್ರ ಮೆಚ್ಚಿಲ್ಲ, ದೂರ ದೂರದ ಪಟ್ಟಣಗಳು ​​ಮತ್ತು ತಹಸಿಲ್‌ಗಳ ಜನರೂ ಇಲ್ಲಿಗೆ ಬರುತ್ತಾರೆ. ಹೊಟೇಲಿನ ಒಳಗಿರುವ ಒಂಬತ್ತು ಪ್ಲಾಸ್ಟಿಕ್ ಟೇಬಲ್‌ಗಳಲ್ಲಿ ರಾತ್ರಿ ಊಟ ಮಾಡುತ್ತಿರುವರವಲ್ಲಿ ಕೆಲವರು 25 ಕಿಲೋ ಮೀಟರ್ ನಿಂದ 50 ಕಿಲೋ ಮೀಟರ್ ದೂರದಲ್ಲಿರುವ ಪಚೋರಾ ಮತ್ತು ಭೂಸಾವಲ್‌ನಿಂದ ಬಂದಿದ್ದಾರೆ.

ಡೊಂಬಿವಲಿ, ಥಾಣೆ, ಪುಣೆ ಮತ್ತು ನಾಸಿಕ್ ಸೇರಿದಂತೆ 450 ಕಿಲೋ ಮೀಟರ್ ದೂರದ ಸ್ಥಳಗಳಿಗೆ ಕೃಷ್ಣಾಜಿ ಭರಿತ್ ಪ್ರತಿದಿನ ರೈಲಿನಲ್ಲಿ 1,000 ಪಾರ್ಸೆಲ್‌ಗಳನ್ನು ಕಳುಹಿಸುತ್ತದೆ.

ಈ ಹೊಟೇಲನ್ನು 2003ರಲ್ಲಿ ಅಶೋಕ್ ಮೋತಿರಾಮ್ ಭೋಲೆ ಸ್ಥಾಪಿಸಿದರು. ಕೃಷ್ಣಾಜಿ ಭರಿತ್‌ನ ಮಾಲೀಕರಿಗೆ ಸ್ಥಳೀಯ ಧಾರ್ಮಿಕ ಗುರುವೊಬ್ಬರು ಸಸ್ಯಾಹಾರಿ ಊಟವನ್ನು ಮಾರಾಟ ಮಾಡಿದರೆ ಒಳ್ಳೆಯ ಲಾಭ ಬರುತ್ತದೆ ಎಂದು ಹೇಳಿದರು. ಹಾಗಾಗಿ ಹೊಟೇಲಿಗೆ ಆ ಗುರುವಿನ ಹೆಸರನ್ನೇ ಇಡಲಾಗಿದೆ. ಇಲ್ಲಿ ಸಿಗುವ ಭರಿತ್ ಒಂದು ಸಾಂಪ್ರದಾಯಿಕವಾಗಿ ಮನೆಯಲ್ಲಿ ತಯಾರಿಸುವ ಅಧಿಕೃತ ಖಾದ್ಯವಾಗಿದ್ದು, ಇದನ್ನು ಲೇವಾ ಪಾಟೀಲ್ ಸಮುದಾಯದವರು ಚೆನ್ನಾಗಿ ತಯಾರಿಸುತ್ತಾರೆ ಎಂದು ವ್ಯವಸ್ಥಾಪಕ ದೇವೇಂದ್ರ ಕಿಶೋರ್ ಭೋಲೆ ಹೇಳುತ್ತಾರೆ.

ಉತ್ತರ ಮಹಾರಾಷ್ಟ್ರದ ಖಂಡೇಶ್ ಪ್ರದೇಶದಲ್ಲಿ ಸಾಮಾಜಿಕವಾಗಿ-ರಾಜಕೀಯವಾಗಿ ಪ್ರಮುಖ ಸಮುದಾಯವಾಗಿರುವ ಲೇವಾ-ಪಾಟೀಲ್‌, ತನ್ನದೇ ಆದ ಉಪಭಾಷೆಗಳು, ಆಹಾರ ಪದ್ಧತಿ ಮತ್ತು ಸಾಂಸ್ಕೃತಿಕ ವೈಶಿಷ್ಟ್ಯತೆಯನ್ನು ಹೊಂದಿರುವ ಕೃಷಿಕ ಸಮುದಾಯವಾಗಿದೆ.

ಬದನೆಕಾಯಿ ಪಲ್ಯದ ಪರಿಮಳ ಹೊಟೇಲಿನ ತುಂಬಾ ತುಂಬಿದಂತೆ, ವ್ಯಾಪಿಸುತ್ತಿದ್ದಂತೆ, ಹೆಂಗಸರು ಊಟಕ್ಕಾಗಿ ಪೋಲಿ ಮತ್ತು ಭಕ್ರಿಗಳನ್ನು ತರುತ್ತಾರೆ. ಮಹಿಳೆಯರು ಪ್ರತಿದಿನ ಸುಮಾರು 2,000 ಪೋಳಿಗಳನ್ನು (ಚಪಾತಿ, ಗೋಧಿಯಿಂದ ಮಾಡಿದ ಹೋಳಿಗೆ) ಮತ್ತು ಸುಮಾರು 1,500 ಭಕ್ರಿಗಳನ್ನು (ರಾಗಿಯಿಂದ, ಸಾಮಾನ್ಯವಾಗಿ ಕೃಷ್ಣಾಜಿ ಭರಿತ್‌ನಲ್ಲಿ ಬಜ್ರಾ ಅಥವಾ ಸಜ್ಜೆಯಿಂದ ಮಾಡಿದ ರೊಟ್ಟಿ) ತಯಾರಿಸುತ್ತಾರೆ.

ಊಟದ ಸಮಯವಾಗುತ್ತಿದೆ, ಮಹಿಳೆಯರು ಕೆಲಸವನ್ನು ಮುಗಿಸುತ್ತಿದ್ದಾರೆ, ಇಲ್ಲಿ ಒಬ್ಬರಿಗೆ ಒಂದು ಭರಿತ್‌ ಮಾತ್ರ ಪಾರ್ಸೆಲ್ ನೀಡಲಾಗುತ್ತದೆ.

ಅನುವಾದ: ಚರಣ್‌ ಐವರ್ನಾಡು

Kavitha Iyer

Kavitha Iyer has been a journalist for 20 years. She is the author of ‘Landscapes Of Loss: The Story Of An Indian Drought’ (HarperCollins, 2021).

Other stories by Kavitha Iyer
Editor : Priti David

Priti David is the Executive Editor of PARI. She writes on forests, Adivasis and livelihoods. Priti also leads the Education section of PARI and works with schools and colleges to bring rural issues into the classroom and curriculum.

Other stories by Priti David
Translator : Charan Aivarnad

Charan Aivarnad is a poet and a writer. He can be reached at: [email protected]

Other stories by Charan Aivarnad