ಇಸವಿ 2000ದ ನಂತರದ ದಿನಗಳಲ್ಲಿ ಮುಖ್ಯವಾಹಿನಿ ಮಾಧ್ಯಮಗಳಲ್ಲಿ ಮಾಡಲು ಸಿಗುತ್ತಿದ್ದ ಕೆಲಸಗಳೆಂದರೆ ವಿಸ್ಕಿ ಪೇರಿಂಗ್‌, ಸಾಕು ಪ್ರಾಣಿಗಳ ಮದುವೆಯಂತಹ ವಿಷಯಗಳ ಕುರಿತು ಲೇಖನ ಬರೆಯುವುದು. ಇಲ್ಲಿ ನಿಮಗೆ ಜನ ಸಾಮಾನ್ಯರ ಬದುಕಿನ ಸಮಸ್ಯೆಗಳ ಕುರಿತು ಬರೆಯಲು ಅವಕಾಶಗಳೇ ಇಲ್ಲ. ನೀವು ನಿಮ್ಮ ಆದರ್ಶಗಳಿಗೆ ಕಟ್ಟುಬಿದ್ದಿರೆಂದರೆ ನಿಮ್ಮ ಪಾಲಿಗೆ ʼಜೋಲಾವಾಲಾʼ ಎನ್ನುವ ಹಣೆಪಟ್ಟಿ ಸಿದ್ಧವಾಗುತ್ತದೆ (ಜೋಲಾವಾಲ ಎನ್ನುವುದು ಉತ್ತರ ಭಾರತದಲ್ಲಿ ಕಮ್ಯೂನಿಸ್ಟ್‌ ಕಾರ್ಯಕರ್ತರಿಗೆ ಬಳಸುವ ಲೇವಡಿ ಪದ).

ಸೆಂಟರ್ ಫಾರ್ ಮೀಡಿಯಾ ಸ್ಟಡೀಸ್ 2014ರಲ್ಲಿ ನಡೆಸಿದ ಅಧ್ಯಯನದ ಪ್ರಕಾರ, ದೇಶದ ಶೇಕಡಾ 69 ಭಾಗ ಗ್ರಾಮೀಣ ಪ್ರದೇಶ – ಇಲ್ಲಿನ 80.33 ಕೋಟಿ ಜನರು ಸುಮಾರು 800 ಭಾಷೆಗಳನ್ನು ಮಾತನಾಡುತ್ತಾರೆ – ಆದರೆ ಮಾಧ್ಯಮಗಳಲ್ಲಿ ಈ ಪ್ರದೇಶಗಳಿಗೆ ಮುಖಪುಟದಲ್ಲಿ  ಸಿಕ್ಕಿರುವ ಸ್ಥಳ ಕೇವಲ 0.67 ಪ್ರತಿಶತ. ರಾಷ್ಟ್ರೀಯ ದಿನಪತ್ರಿಕೆಗಳ ಮುಖ್ಯ ಪುಟದಲ್ಲಿ ಬರುವ ಸುದ್ದಿ ವರದಿಗಳಲ್ಲಿ ಶೇಕಡಾ 66ರಷ್ಟು ವರದಿಗಳು ದಿಲ್ಲಿ ಮೂಲದ ವರದಿಗಳಾಗಿರುತ್ತವೆ.

“ನನ್ನ 35 ವರ್ಷಗಳ ಪತ್ರಿಕೋದ್ಯಮದ ಅನುಭವದಲ್ಲಿ ಹೇಳುವುದಾದರೆ ಒಂದೇ ಒಂದು ದಿನಪತ್ರಿಕೆಯಾಗಲೀ, ಟಿವಿ ವಾಹಿನಿಯಾಗಲೀ ಓರ್ವ ಪೂರ್ಣಕಾಲಿಕ ಕೃಷಿಕ, ಕಾರ್ಮಿಕರು ಮತ್ತು ಇತರ ಪ್ರಮುಖ ಸಾಮಜಿಕ ಕ್ಷೇತ್ರಗಳ ಕುರಿತ ವರದಿಗಾರರನ್ನು ಹೊಂದಿರುವುದನ್ನು ನಾನು ನೋಡಿಲ್ಲ. ಅವರ ಬಳಿ ಬಾಲಿವುಡ್‌, ಶ್ರೀಮಂತರ ಸಮಾರಂಭಗಳು, ವ್ಯವಹಾರಗಳ ಕುರಿತು ವರದಿ ಮಾಡಲು ಪೂರ್ಣಕಾಲಿಕ ವರದಿಗಾರರಿರುತ್ತಾರೆ. ಆದರೆ ಕೃಷಿ ಮತ್ತು ಕಾರ್ಮಿಕರಿಗೆ ಸಂಬಂಧಿಸಿದಂತೆ ವರದಿ ಮಾಡಲು ವರದಿಗಾರರಿರುವುದಿಲ್ಲ. ಈ ಹಿನ್ನೆಲೆಯಲ್ಲಿಯೇ ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾ (ಪರಿ) ಕಲ್ಪನೆ ಹುಟ್ಟಿಕೊಂಡಿತು" ಎಂದು ಪರಿಯ ಸ್ಥಾಪಕ-ಸಂಪಾದಕ, ಪ್ರಸಿದ್ಧ ಪತ್ರಕರ್ತ ಪಾಲಗುಮ್ಮಿ ಸಾಯಿನಾಥ್ ಹೇಳುತ್ತಾರೆ. 43 ವರ್ಷಗಳ ಗ್ರಾಮೀಣ ವರದಿಗಾರಿಕೆಯ ಅನುಭವವನ್ನು ಹೊಂದಿರುವ ಅವರು 60ಕ್ಕೂ ಹೆಚ್ಚು ಪತ್ರಿಕೋದ್ಯಮ ಸಂಬಂಧಿ ಪ್ರಶಸ್ತಿಗಳನ್ನು ಪಡೆದಿದ್ದಾರೆ.

ಪರಿ ಎನ್ನುವುದು ಒಂದು ಬಹುಮಾಧ್ಯಮ ಭಂಡಾರ. ಇದು ಜನಸಾಮಾನ್ಯರ ದೈನಂದಿನ ಬದುಕಿನ ಕುರಿತ ಒಂದು ಜೀವಂತ ಜರ್ನಲ್‌ ಮತ್ತು ಆರ್ಕೈವ್.‌ ಕೌಂಟರ್‌ ಮೀಡಿಯಾ ಟ್ರಸ್ಟ್‌ ಆರಂಭಿಸಿದ ಈ ಆರ್ಕೈವ್‌ 2014ರಲ್ಲಿ ಹತ್ತು-ಹನ್ನೆರಡು ಜನರ ತಂಡದೊಂದಿಗೆ ಆರಂಭಗೊಂಡಿತು. ಗ್ರಾಮೀಣ ಪತ್ರಿಕೋದ್ಯಮ ಗುರಿಯೊಂದಿಗೆ ಆರಂಭಗೊಂಡ ಈ ಬಹುಮಾಧ್ಯಮ ವೇದಿಕೆಯು ಇಂದು ಗ್ರಾಮೀಣ ಭಾರತದ ಬಗೆಗಿನ ಅಧಿಕೃತ ವರದಿಗಳು ಮತ್ತು ಅಪರೂಪದ ದಾಖಲೆಗಳ ಆನ್ಲೈನ್ ಗ್ರಂಥಾಲಯ, ಗ್ರಾಮೀಣ ಜೀವನ ಮತ್ತು ಅದರ ಬಗ್ಗೆ ಕಲೆಗಳು ಮತ್ತು ಶಿಕ್ಷಣ ಉಪಕ್ರಮವನ್ನು ಒಳಗೊಂಡಿದೆ. ಪರಿ ಮೂಲ ಕ್ಷೇತ್ರ ವರದಿಗಳನ್ನು ಪಠ್ಯ, ಛಾಯಾಚಿತ್ರಗಳು, ಚಿತ್ರಗಳು, ಆಡಿಯೋ, ವೀಡಿಯೊಗಳು ಮತ್ತು ಸಾಕ್ಷ್ಯಚಿತ್ರಗಳ ರೂಪದಲ್ಲಿ ರಚಿಸುತ್ತದೆ. ಅವು ಸಾಮಾನ್ಯ ಭಾರತೀಯರ ಜೀವನವನ್ನು ಒಳಗೊಂಡಿರುತ್ತವೆ ಮತ್ತು ಶ್ರಮ, ಜೀವನೋಪಾಯ, ಕರಕುಶಲತೆ, ಬಿಕ್ಕಟ್ಟು, ಕಥೆಗಳು, ಹಾಡುಗಳು ಮತ್ತು ಹೆಚ್ಚಿನವುಗಳನ್ನು ಒಳಗೊಳ್ಳುತ್ತವೆ.

PHOTO • Sanket Jain
PHOTO • Nithesh Mattu

ಪರಿ ಸಂಸ್ಕೃತಿಯ ಸಂಗ್ರಹಗಾರವೂ ಹೌದು: ಸ್ಥಳೀಯ ಸಲಕರಣೆಗಳನ್ನು ಬಳಸಿ ತಯಾರಿಸಿದ ತನ್ನ ಶೆಹನಾಯಿಯೊಂದಿಗೆ ಬೆಳಗಾವಿಯ ನಾರಾಯಣ ದೇಸಾಯಿ (ಎಡ), ಮತ್ತು ಕರಾವಳಿ ಕರ್ನಾಟಕದ ಪಿಲಿ ವೇಷ ಜಾನಪದ ನೃತ್ಯ (ಬಲ)

PHOTO • Sweta Daga
PHOTO • P. Sainath

ಅರುಣಾಚಲ ಪ್ರದೇಶದ ಬಿದಿರಿನ ಬುಟ್ಟಿ ಹೆಣೆಯುವ ಮಾಕೊ ಲಿಂಗಿ (ಎಡ) ಮತ್ತು ಪಿ.ಸಾಯಿನಾಥ್ ಅವರ 'ವಿಸಿಬಲ್ ವರ್ಕ್, ಇನ್ವಿಸಿಬಲ್ ವುಮೆನ್: ಎ ಲೈಫ್ ಟೈಮ್ ಬೆಂಡಿಂಗ್' ಸರಣಿಯು ಗ್ರಾಮೀಣ ಭಾರತದಾದ್ಯಂತ ಇರುವ ಕಾರ್ಮಿಕರ ಬದುಕಿನ ಚಿತ್ರಣವನ್ನು ನೀಡುತ್ತದೆ

ಪರಿಯ ಪರಿಕಲ್ಪನೆಯ ಬೀಜಗಳು ಸಾಯಿನಾಥ್‌ ಅವರ ತರಗತಿಗಳಲ್ಲಿ ಮೊಳೆತವು. ಅಲ್ಲಿ ಅವರು 35 ವರ್ಷಗಳ ಕಾಲ ವರದಿಗಾರಿಕೆಯಲ್ಲಿ ಇರಬೇಕಾದ ನೈತಿಕತೆಯ ಕುರಿತ ಭದ್ರ ಅಡಿಪಾಯದ ತರಬೇತಿಯೊಂದಿಗೆ 2,000ಕ್ಕೂ ಹೆಚ್ಚು ಪತ್ರಕರ್ತರಿಗೆ ಪಾಠ ಮಾಡಿದ್ದಾರೆ.  ಇದು ನನ್ನನ್ನೂ ಒಳಗೊಂಡಂತೆ ಮಹತ್ವಾಕಾಂಕ್ಷಿ ಪತ್ರಕರ್ತರಿಗೆ ಅಸಮಾನತೆಗಳು ಮತ್ತು ಅನ್ಯಾಯಗಳನ್ನು ಸಂದರ್ಭೋಚಿತಗೊಳಿಸಲು ಮತ್ತು ವೃತ್ತಿಪರ ಜಗತ್ತಿನಲ್ಲಿ ನಮ್ಮ ಆತ್ಮಸಾಕ್ಷಿಯನ್ನು ಕಡೆಗಣಿಸದೆ ವರದಿಗಾರಿಕೆ ಮಾಡುವುದು ಹೇಗೆನ್ನುವುದನ್ನು ಕಲಿಸಿತು.

"ವರ್ಷಗಳಿಂದ ಸ್ಥಿರವಾಗಿ ಉಳಿದಿರುವ ಒಂದು ವಿಷಯ - ನಮ್ಮನ್ನು ಪರಿಗೆ ಸೆಳೆದ ಆದರ್ಶವಾದ, ಗ್ರಾಮೀಣ ಭಾರತದ ಜೀವನದ ಹೃದಯಸ್ಪರ್ಶಿ ಕಥೆಗಳು" ಎಂದು ಪರಿ ವ್ಯವಸ್ಥಾಪಕ ಸಂಪಾದಕರಾದ ನಮಿತಾ ವಾಯ್ಕರ್ ಹೇಳುತ್ತಾರೆ. ಸ್ವಾತಂತ್ರ್ಯ ಪ್ರಿಯ ಪತ್ರಕರ್ತರಿಗೆ ಪರಿ ಮುಖ್ಯವಾಹಿನಿ ಪತ್ರಿಕೋದ್ಯಮದ ಕಲುಷಿತ ವಾತಾವರಣದಿಂದ ಬಿಡುಗಡೆ ನೀಡುವ 'ಆಮ್ಲಜನಕ ಪೂರೈಕೆ' ಆಗಿ ಮಾರ್ಪಟ್ಟಿದೆ.

ಮರೆತು ಹೋದುದರ ಆರ್ಕೈವಿಂಗ್

ಪರಿಯ ಎಲ್ಲಾ ಕಥೆಗಳು ಒಂದು ನಿರ್ದಿಷ್ಟ ಕಾಲಘಟ್ಟದಲ್ಲಿ ನೆಲೆಗೊಂಡಿವೆ - ಕೊನೆಗೂ, ನಾವು ಪತ್ರಕರ್ತರು - ಆದರೆ ಅವು ಸ್ಥಳ-ಸಮಯವನ್ನು ಮೀರುವ ಸಾಮರ್ಥ್ಯವನ್ನು ಹೊಂದಿವೆ. ಏಕೆಂದರೆ ಇದು ಕೇವಲ ಸುದ್ದಿ ವೆಬ್ಸೈಟ್ ಅಲ್ಲ, ಇದು ಆರ್ಕೈವ್. ಸಾಯಿನಾಥ್ ಹೇಳುತ್ತಾರೆ, "ಇಂದಿನಿಂದ 25 ಅಥವಾ 50 ವರ್ಷಗಳ ನಂತರ, ಗ್ರಾಮೀಣ ಭಾರತದಲ್ಲಿ ಜನರು ಹೇಗೆ ಬದುಕುತ್ತಿದ್ದರು ಎಂಬುದನ್ನು ತಿಳಿಯಲು ನಮ್ಮ ಬಳಿ ಪರಿಯ ಡೇಟಾಬೇಸ್ ಹೊರತುಪಡಿಸಿ ಬೇರೇನೂ ಇರುವುದಿಲ್ಲ."

ಜುಲೈ 2023ರಲ್ಲಿ, ಮುಖ್ಯವಾಹಿನಿಯ ಮಾಧ್ಯಮಗಳು ದೆಹಲಿಯ ಪ್ರವಾಹದ ದೃಶ್ಯಗಳಲ್ಲಿ ಮುಳುಗಿರುವಾಗ, ನಾವು ಬಿಟ್ಟುಹೋಗಿರುವ ವಿಷಯಗಳ ಬಗ್ಗೆ ಬರೆಯುತ್ತಿದ್ದೆವು - ತಮ್ಮ ಮನೆಗಳನ್ನು ಪುನರ್ನಿರ್ಮಿಸಲು ಮತ್ತು ಸ್ಥಳಾಂತರಗೊಂಡ ರೈತರ ಜೀವನೋಪಾಯ ಹುಡುಕುವ ಹೋರಾಟ. ಸಾಮಾನ್ಯ ಜನರ ಸಾಮಾನ್ಯ ಜೀವನ - ಅದರ ಎಲ್ಲಾ ಸಂಕೀರ್ಣತೆಗಳು ಮತ್ತು ಮಿಶ್ರ ಭಾವನೆಗಳು - ನಮ್ಮ ಸುದ್ದಿ ಸಂಗ್ರಹಣೆಯ ಕೇಂದ್ರವಾಗಿತ್ತು. ಇದು ಅಜ್ಞಾತ ದೂರದ ದೇಶದ ಅಪರಿಚಿತರ ಕಥೆಯಲ್ಲ. ಕೆಲವೇ ತಲೆಮಾರುಗಳ ಹಿಂದೆ, ಪ್ರತಿ ನಗರದ ಭಾರತೀಯ ಕುಟುಂಬವು ಹಳ್ಳಿಯಲ್ಲಿ ವಾಸಿಸುತ್ತಿತ್ತು. ಪರಿಯ ಉದ್ದೇಶವು ಅದರ ಸುದ್ದಿ ವಿಷಯ ಮತ್ತು ಓದುಗರ ನಡುವೆ ಅನುಭೂತಿಯ ಸೇತುವೆಯನ್ನು ನಿರ್ಮಿಸುವುದು - ಇಂಗ್ಲಿಷ್ ಮಾತನಾಡುವ ನಗರ ಭಾರತೀಯರು ಗ್ರಾಮಾಂತರ ಪ್ರದೇಶದಲ್ಲಿ ಹೇಗೆ ಬದುಕುತ್ತಿದ್ದಾರೆನ್ನುವುದನ್ನು ತಿಳಿದುಕೊಳ್ಳುವ ಹಾಗೆ ಮಾಡುವುದುದು; ಹಿಂದಿಯನ್ನು ಓದಬಲ್ಲ ರೈತನಿಗೆ ದೇಶದ ಇತರ ಭಾಗಗಳ ರೈತರು ಏನು ಮಾಡುತ್ತಿದ್ದಾರೆ, ಹೇಗಿದ್ದಾರೆ ಎಂದು ತಿಳಿಯುತ್ತದೆ; ಪಠ್ಯಪುಸ್ತಕಗಳಲ್ಲಿ ಬಿಟ್ಟುಹೋಗಿರುವ ಅಜ್ಞಾತರ ಇತಿಹಾಸವನ್ನು ಪರಿ ಮಕ್ಕಳಿಗೆ ತಿಳಿಸುತ್ತದೆ; ಅಳಿವಿನಂಚಿನಲ್ಲಿರುವ ಕೈಕಸುಬುಗಳು ಮತ್ತು ಜೀವನೋಪಾಯಗಳ ಬಗ್ಗೆ ಸಂಶೋಧಕರು ಮಾಹಿತಿಯ ಸಂಪತ್ತನ್ನು ಪಡೆಯುತ್ತಿದ್ದಾರೆ.

ಪರಿಗೆ ಬರೆಯುತ್ತಾ, ಅಭಿವೃದ್ಧಿಯ ದೊಡ್ಡ ಪ್ರಮಾಣದ ಪ್ರಕ್ರಿಯೆಗಳನ್ನು ಕೇವಲ ವಾಸ್ತವಾಂಶಗಳಾಗಿ ನೋಡುವ ಬದಲು, ಸ್ಥಳೀಯ ಮಟ್ಟದಲ್ಲಿ, ಒಳಗಿನಿಂದ, ಸೂಕ್ತ ಸನ್ನಿವೇಶದಲ್ಲಿ ಓದುವುದು ಹೇಗೆ ಎಂದು ನಾನು ಕಲಿತಿದ್ದೇನೆ. ನಾನು ಹುಟ್ಟಿ ಬೆಳೆದದ್ದು ಹೊಸದೆಹಲಿಯಲ್ಲಿ. ಆದರೆ ಪರಿಯಲ್ಲಿ ಕೆಲಸ ಮಾಡುವಾಗ ಮತ್ತು ಭಾರತದಾದ್ಯಂತ ಹವಾಮಾನ ಬದಲಾವಣೆಯ ಸರಣಿಗಾಗಿ ಸಂಶೋಧನೆ ಮಾಡುತ್ತಿರುವಾಗ, ಕೇವಲ 40 ವರ್ಷಗಳ ಹಿಂದೆ, ಆಮೆಗಳು ಮತ್ತು ಗಂಗಾ ಡಾಲ್ಫಿನ್‌ಗಳು ನನ್ನ ಮನೆಯಿಂದ ಕೇವಲ ಮೂರು ಕಿಲೋಮೀಟರ್ ದೂರದಲ್ಲಿರುವ ಯಮುನಾ ನದಿಯಲ್ಲಿ ಆಡುತ್ತಿದ್ದವು ಎನ್ನುವುದನ್ನು ನಾನು ಮೊದಲ ಬಾರಿ ತಿಳಿದುಕೊಂಡೆ. ನಾನು ದೆಹಲಿ ಗೆಜೆಟಿಯರ್ (1912) ಅಗೆದು, ಯಮುನಾ ನದಿ ತಟದ ಕೊನೆಯ ರೈತರು ಮತ್ತು ಮೀನುಗಾರರನ್ನು ಸಂದರ್ಶಿಸಿದೆ ಮತ್ತು ಭವಿಷ್ಯವನ್ನು ಪ್ರಶ್ನಿಸಲು ಭೂತ ಮತ್ತು ವರ್ತಮಾನದ ನಡುವಿನ ಸಂಬಂಧಗಳನ್ನು ಆಯ್ದು ಹೊರತಂದೆ. ಸಾಂಕ್ರಾಮಿಕ ಪಿಡುಗಿನ ನಂತರ, ಅಭಿವೃದ್ಧಿ ಕೆಲಸಗಳಿಗಾಗಿ ಈ ಜನರನ್ನು ಹೊರಹಾಕುವ ಬಗ್ಗೆ ಮತ್ತು 2023ರ ಪ್ರವಾಹದಿಂದ ಉಂಟಾದ ವಿನಾಶದ ಬಗ್ಗೆ ವರದಿ ಮಾಡಲು ನಾನು ಹಿಂತಿರುಗಿದೆ. ಈ ರೀತಿಯಾಗಿ ಕೆಲಸ ಮಾಡಿದ ಪರಿಣಾಮವಾಗಿ ಈ ವಿಷಯದಲ್ಲಿ ನಾನು ಅಭಿವೃದ್ಧಿಪಡಿಸಿಕೊಂಡ ಜ್ಞಾನ ಮತ್ತು ಕೌಶಲಗಳು ಮುಖ್ಯವಾಹಿನಿಯ ಮಾಧ್ಯಮಗಳ ಪ್ರೀತಿಯ 'ಪ್ಯಾರಾಚೂಟ್ ವರದಿಗಾರಿಕೆ' (ಅಂದರೆ, ಜನರೊಂದಿಗೆ ಸಂವಹನ ನಡೆಸದೆ ವಿಪತ್ತನ್ನು ವರದಿ ಮಾಡಲು ಧಾವಿಸುವುದು) ಮಾಡದಂತೆ ನನ್ನನ್ನು ಬೆಳೆಸಿವೆ. ಇದು ಓರ್ವ ಪತ್ರಕರ್ತೆಯಾಗಿ ನನ್ನ ಕಲಿಕೆಯನ್ನು ವಿಸ್ತರಿಸುತ್ತದೆ, ಈ ವಿಷಯಗಳ ಬಗ್ಗೆ ಮಾತನಾಡಲು ಒಂದಷ್ಟು ವಿಶ್ವಾಸವನ್ನು ಮೂಡಿಸುತ್ತದೆ ಮತ್ತು ಸೂಕ್ತ ವೇದಿಕೆಗಳು ಮತ್ತು ಚರ್ಚೆಗಳಲ್ಲಿ ಈ ವಿಷಯಗಳ ಬಗ್ಗೆ ಮಾತನಾಡುವ ಸಾಮರ್ಥ್ಯವನ್ನು ನೀಡುತ್ತದೆ - ಆ ಮೂಲಕ ವಿಷಯಗಳನ್ನು ಇನ್ನಷ್ಟು ವಿಶಾಲವಾಗಿ ನೋಡಲು ಸಾಧ್ಯವಾಗುತ್ತದೆ.

PHOTO • People's Archive of Rural India
PHOTO • Shalini Singh

ದೆಹಲಿಯ ಯಮುನಾ ನದಿಯ ಕುರಿತು ಶಾಲಿನಿ ಸಿಂಗ್ ಅವರ ವರದಿಗಳು ಪ್ರಾಥಮಿಕವಾಗಿ ಹವಾಮಾನ ಬದಲಾವಣೆಯ ವಿಜ್ಞಾನದ ಕುರಿತಾಗಿವೆ, ಆದರೆ ಈ ವರದಿಗಳು ಹವಾಮಾನ ಬದಲಾವಣೆಯಿಂದ ಪೀಡಿತರಾದ ಜನರ ಧ್ವನಿಯನ್ನು ಬಲವಾಗಿ ಧ್ವನಿಸುತ್ತವೆ

ಪರಿಯ ವರದಿಗಳಲ್ಲಿ ಬರುವ ಜನರು ವಿವಿಧ ಹಂತಗಳಲ್ಲಿ ಮತ್ತು ಪದರಗಳಲ್ಲಿ ಆರ್ಥಿಕ ಮತ್ತು ಸಾಮಾಜಿಕ ಆಘಾತವನ್ನು ಅನುಭವಿಸುವವರು. ಈ ಜನರ ಬದುಕಿ ಕುರಿತು ಆಲಿಸಬೇಕಿರುವುದು ಮನುಷ್ಯರಾದವರ ಕರ್ತವ್ಯ. ಪರಿಯ ವರದಿಗಳಲ್ಲಿ ಈ ಜನರೇ ತಮ್ಮ ಕತೆಗಳನ್ನು ಹೇಳುತ್ತಾರೆ. ನಾನು ಯಮುನಾ ನದಿ ದಡದ ರೈತರೊಂದಿಗೆ ಮಾತನಾಡಿ ಅವರ ಕುರಿತಾಗಿ ಮಾಡಿದ್ದ ವರದಿಯ ಹಿಂದಿ ಅವತರಣಿಕೆಯನ್ನು ಅವರೊಂದಿಗೆ ಹಂಚಿಕೊಂಡಿದ್ದೆ. ಅವರ ಪ್ರತಿಕ್ರಿಯೆಯನ್ನೂ ಪಡೆದಿದ್ದೆ. ನಾವು ಪತ್ರಕರ್ತರು ಮತ್ತು ನಾವು ಅವರ ಕತೆಗಳನ್ನು ಬರೆಯುತ್ತೇವೆ ಎನ್ನುವ ಕಾರಣಕ್ಕೆ ಜನರು ನಮಗೆ ಋಣಿಯಾಗಿರಬೇಕಿಲ್ಲ; ಜನರು ನಮ್ಮೊಡನೆ ಅವರ ಬದುಕಿನ ಕುರಿತು ತೆರೆದುಕೊಳ್ಳಬೇಕೆಂದರೆ ಮೊದಲು ನಾವು ಅವರ ವಿಶ್ವಾಸವನ್ನು ಗೆಲ್ಲಬೇಕು.

ಪತ್ರಿಕೋದ್ಯಮದಂತೆ ಕಲೆಗೂ ಸಾಮಾಜಿಕ ಕ್ಷೇತ್ರದ ಮೇಲೆ ಬೆಳಕು ಚೆಲ್ಲುವ, ಸಂವಾದಕ್ಕೆ ಅವಕಾಶಗಳನ್ನು ಸೃಷ್ಟಿಸುವ ಶಕ್ತಿಯಿದೆ. ಇದೇ ಆಲೋಚನೆಯೊಂದಿಗೆ ಪರಿ ಸೃಜನಶೀಲ ಬರವಣಿಗೆಗೆ ಒತ್ತು ನೀಡುತ್ತದೆ. "ಕೆಲವೊಮ್ಮೆ ಕಾವ್ಯವು ಸತ್ಯವನ್ನು ಹೇಳಬಹುದಾದ ಏಕೈಕ ತಾಣವಾಗಿ ಒದಗಿಬರುತ್ತದೆ." ಪರಿ ಯಾವಾಗಲೂ ಸರಳ, ಆಳವಾದ, ಅಸಾಂಪ್ರದಾಯಿಕ ಕಾವ್ಯಗಳಿಗೆ ಸ್ಥಾನವನ್ನು ಹೊಂದಿದೆ, ಅವುಗಳಲ್ಲಿ ಹೆಚ್ಚಿನವು ಗ್ರಾಮೀಣ ಭಾರತದ ಕೇಂದ್ರದಿಂದ ಬಂದಿವೆ ಮತ್ತು ಅನೇಕ ಭಾಷೆಗಳಲ್ಲಿ ವ್ಯಕ್ತವಾಗಿವೆ"ಎಂದು ಪರಿಯ ಕಾವ್ಯ ವಿಭಾಗದ ಸಂಪಾದಕರಾದ ಪ್ರತಿಷ್ಠಾ ಪಾಂಡ್ಯ ಹೇಳುತ್ತಾರೆ. ಓರ್ವ ಪತ್ರಕರ್ತೆಯಾಗಿ, ನಾನು ಹೇಳಲು ಬಯಸಿದ ಕಥೆಯನ್ನು ಸರಾಸರಿ ವರದಿಯ ಭಾಷೆಯಲ್ಲಿ ಹೇಳಲು ನನಗೆ ಸಾಧ್ಯವಿಲ್ಲವೆನ್ನಿಸಿದಾಗ ಕಾವ್ಯದ ಮೊರೆ ಹೋಗುತ್ತೇನೆ.

ಜನರೇ ಕಟ್ಟಿ ಬೆಳೆಸಿದ ಉತ್ತಮ ಮಾಧ್ಯಮ

ಪತ್ರಿಕೋದ್ಯಮವು ಪ್ರಜಾಪ್ರಭುತ್ವಕ್ಕೆ ಪೂರ್ವಾಪೇಕ್ಷಿತವಾದುದು; ಸತ್ಯಶೋಧನೆ, ಸಂಪಾದನೆಯ ಮಾನದಂಡಗಳನ್ನು ಕಾಪಾಡಿಕೊಳ್ಳುವುದು ಮತ್ತು ಅಧಿಕಾರಕ್ಕೆ ವಿರುದ್ಧವಾಗಿ ಸತ್ಯವನ್ನು ಹೇಳುವುದು ಅವರ ಧರ್ಮವಾಗಿದೆ - ಇವೆಲ್ಲವೂ ಪತ್ರಿಕೋದ್ಯಮ ಪ್ರಕ್ರಿಯೆಯೊಂದಿಗೆ ಬೇರ್ಪಡಿಸಲಾಗದ ಸಂಬಂಧವನ್ನು ಹೊಂದಿವೆ. ಆದರೆ ಸಾಮಾಜಿಕ ಮಾಧ್ಯಮ ಮತ್ತು ಪತ್ರಿಕೋದ್ಯಮದ ಹೊಸ ರೂಪಗಳ ಮಧ್ಯೆ, ಈ ಮೂಲ ತತ್ವಗಳು ಕಣ್ಮರೆಯಾಗಲಿವೆ. ಸಣ್ಣ ಸುದ್ದಿ ಸಂಸ್ಥೆಗಳು ಮತ್ತು ಸ್ವತಂತ್ರ ಪತ್ರಕರ್ತರು ಈಗ ತಮ್ಮ ಧ್ವನಿಯನ್ನು ತಲುಪಿಸಲು ಯೂಟ್ಯೂಬ್‌ ರೀತಿಯ ವೇದಿಕೆಗಳನ್ನು ಹೊಂದಿದ್ದಾರೆ, ಆದರೆ ಗ್ರೌಂಡ್‌ ರಿಪೋರ್ಟ್, ಪ್ರೇಕ್ಷಕ ವೃಂದವನ್ನು ಬೆಳೆಸಿಕೊಳ್ಳುವುದು ಮತ್ತು ಯೋಗ್ಯ ಆದಾಯವನ್ನು ಗಳಿಸುವ ಪ್ರಯೋಜನಗಳನ್ನು ಹೊಂದಿಸಿಕೊಳ್ಳಲು ಇನ್ನೂ ಅನೇಕರಿಗೆ ಸಾಧ್ಯವಾಗಿಲ್ಲ.

"ಪರಿ ಮತ್ತು ಅದರ ಪತ್ರಕರ್ತರು ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭವನ್ನು ರಕ್ಷಿಸುತ್ತಿದ್ದಾರೆ ಮಿರಾತ್-ಉಲ್-ಅಕ್ಬರ್ (ಬ್ರಿಟಿಷ್ ಸರ್ಕಾರದ ನೀತಿಗಳನ್ನು ಟೀಕಿಸಿದ, ಸಮಾಜ ಸುಧಾರಕ ರಾಜಾ ರಾಮ್ ಮೋಹನ್ ರಾಯ್ ಸ್ಥಾಪಿಸಿದ ಪತ್ರಿಕೆ), ಕೇಸರಿ (1881ರಲ್ಲಿ ಸ್ವಾತಂತ್ರ್ಯ ಹೋರಾಟಗಾರ ಬಾಲ ಗಂಗಾಧರ ತಿಲಕ್ ಸ್ಥಾಪಿಸಿದ ನಿಯತಕಾಲಿಕ) ಮತ್ತು ಸ್ವಾತಂತ್ರ್ಯ ಹೋರಾಟದ ಸಮಯದ ಇತರ ನಿಯತಕಾಲಿಕಗಳ ಪರಂಪರೆಯನ್ನು ನಾವು ಮುಂದುವರೆಸುತ್ತಿದ್ದೇವೆ. ಆದರೆ ನಮ್ಮ ಹಣಕಾಸು ಪರಿಸ್ಥಿತಿ ಅಷ್ಟೇನೂ ಪ್ರಬಲವಾಗಿಲ್ಲ, ನಮ್ಮ ಉದ್ಯೋಗಗಳ ಜೊತೆಗೆ ನಾವು ಇತರೆಡೆ ಸಣ್ಣಪುಟ್ಟ ಕೆಲಸಗಳನ್ನು ಮಾಡಿ ಸಂಪಾದನೆಯನ್ನು ಸರಿದೂಗಿಸಿಕೊಳ್ಳುತ್ತಿದ್ದೇವೆ"ಎಂದು ಪರಿಯ ಟೆಕ್ ಸಂಪಾದಕ ಸಿದ್ಧಾರ್ಥ್ ಅಡೇಲ್ಕರ್ ಹೇಳುತ್ತಾರೆ.

PHOTO • Sanskriti Talwar
PHOTO • M. Palani Kumar

ಕೃಷಿ ಸುದ್ದಿಯೆಂದರೆ ಅದು ಕೇವಲ ಕೃಷಿಗೆ ಸಂಬಂಧಿಸಿದ್ದಲ್ಲ. ಶ್ರೀ ಮುಕ್ತಸರ್ ಸಾಹಿಬ್ ಜಿಲ್ಲೆಯಲ್ಲಿ (ಎಡಕ್ಕೆ), ಭೂರಹಿತ ದಲಿತ ಕೃಷಿ ಕಾರ್ಮಿಕರ ಮಕ್ಕಳು ಚಿಕ್ಕ ವಯಸ್ಸಿನಿಂದಲೇ ಹೊಲಗಳಲ್ಲಿ ಕೆಲಸ ಮಾಡಲು ಪ್ರಾರಂಭಿಸುತ್ತಾರೆ. ಪರಿ ಅನೇಕ ವೈವಿಧ್ಯಮಯ ವೃತ್ತಿಗಳು ಮತ್ತು ಜೀವನೋಪಾಯದ ಮಾರ್ಗಗಳ ಬಗ್ಗೆ ವರದಿಗಳನ್ನು ಮತ್ತು ಫೋಟೊಗಳನ್ನು ಪ್ರಕಟಿಸುತ್ತದೆ. ಚೆನ್ನೈನ ಬಕಿಂಗ್‌ ಹ್ಯಾಮ್ ಕಾಲುವೆಯಲ್ಲಿ ಗೋವಿಂದಮ್ಮ (ಬಲ) ಏಡಿಗಳನ್ನು ಹುಡುಕುತ್ತಾ ಸಾಗುತ್ತಿದ್ದಾರೆ

PHOTO • Ritayan Mukherjee
PHOTO • Shrirang Swarge

ಜೀವನೋಪಾಯಕ್ಕಾಗಿ ಭೂಮಿಯನ್ನು ಅವಲಂಬಿಸಿರುವ ಸಮುದಾಯಗಳು ಹವಾಮಾನ ಬದಲಾವಣೆ ಮತ್ತು ಸರ್ಕಾರದ ತಾರತಮ್ಯದ ನೀತಿಗಳ ವಿರುದ್ಧ ಹೋರಾಡುತ್ತಿವೆ. ಚಾಂಗ್ಪಾ ಜನರು (ಎಡ), ಲದಾಖ್‌ನಲ್ಲಿ ಕಾಶ್ಮೀರಿ ಬಟ್ಟೆ ತಯಾರಕರು ಮತ್ತು ಮುಂಬೈನ ಆದಿವಾಸಿಗಳು ಅರಣ್ಯ ಹಕ್ಕುಗಳಿಗಾಗಿ ಒತ್ತಾಯಿಸಿ ಮೆರವಣಿಗೆ ನಡೆಸುತ್ತಿದ್ದಾರೆ

ಲಾಭೋದ್ದೇಶರಹಿತ ಪತ್ರಿಕೋದ್ಯಮ ವೇದಿಕೆಯಾಗಿ, ಪರಿ ಸಾರ್ವಜನಿಕ ದೇಣಿಗೆಗಳು, ಪ್ರತಿಷ್ಠಾನಗಳಿಂದ ಯೋಜನಾಧಾರಿತ ನಿಧಿಗಳು, ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ನಿಧಿಗಳು (ಸಿಎಸ್ಆರ್), ಟ್ರಸ್ಟಿಗಳ ಸ್ವಂತ ನಿಧಿಗಳು ಮತ್ತು ತಂತ್ರಜ್ಞಾನ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿನ ಸ್ವಯಂಸೇವಕರನ್ನು ಆಧರಿಸಿದೆ. ಪರಿಗೆ ದೊರಕಿದ 65 ಪತ್ರಿಕೋದ್ಯಮ ಪ್ರಶಸ್ತಿಗಳಿಂದ ನಮಗೆ ಕನಿಷ್ಠ 5 ಲಕ್ಷ ರೂ. ದೊರಕಿದೆ. ಮುಖ್ಯವಾಹಿನಿಯ ಮಾಧ್ಯಮಗಳು ಹೆಚ್ಚು ಜಾಹೀರಾತು ಕೇಂದ್ರಿತವಾಗುತ್ತಿದ್ದಂತೆ ಹೆಚ್ಚು ಹೆಚ್ಚು ಆಡಳಿತ ಪಕ್ಷಕ್ಕೆ ತಲೆಬಾಗುವುದನ್ನು ಮುಂದುವರಿಸುತ್ತದೆ, ಆದರೆ ಸುದ್ದಿಯ ಗುಣಮಟ್ಟದ ಮೇಲೆ ಪರಿಣಾಮ ಬೀರುವ ಜಾಹೀರಾತುಗಳನ್ನು ಸ್ವೀಕರಿಸುವುದರಿಂದ ಪರಿ ದೂರವಿದೆ. ತಾತ್ವಿಕವಾಗಿ, ಪರಿ ಸಂಪೂರ್ಣವಾಗಿ ಸಾರ್ವಜನಿಕ ದೇಣಿಗೆಗಳಿಂದ ಧನಸಹಾಯ ಪಡೆಯಬೇಕು, ಮತ್ತು ಈ ಮೂಲಕ ನಾವು ನಮ್ಮ ಓದುಗರಿಗೆ ಮಾತ್ರ ಉತ್ತರದಾಯಿಯಾಗಿರಬೇಕು ಎನ್ನುವುದು ನಮ್ಮ ನಿಲುವು.

ನಮ್ಮ ಎಲ್ಲಾ ವಿಷಯ ವಸ್ತುಗಳು ಕ್ರಿಯೇಟಿವ್ ಕಾಮನ್ಸ್ ಪರವಾನಗಿಯಿಂದ ಆವರಿಸಲ್ಪಟ್ಟಿದೆ; ಅಂದರೆ, ಯಾವುದಕ್ಕೂ ಹಣ ನೀಡಬೇಕಿಲ್ಲ ಮತ್ತು ಯಾವುದೇ ಪಠ್ಯ, ಚಿತ್ರ ಇತ್ಯಾದಿಗಳನ್ನು ಸೂಕ್ತವಾದ ಕ್ರೆಡಿಟ್‌ನೊಂದಿಗೆ ಉಚಿತವಾಗಿ ಮರುಪ್ರಕಟಿಸಬಹುದು. ಪ್ರತಿ ವರದಿಯನ್ನು ಪರಿಯ ಭಾಷಾಂತರ ವಿಭಾಗ 'ಪರಿಭಾಷಾ' ಇಂಗ್ಲಿಷ್ ಸೇರಿದಂತೆ 15 ಭಾರತೀಯ ಭಾಷೆಗಳಿಗೆ ಅನುವಾದಿಸುತ್ತದೆ. “ಭಾಷೆಯು ವೈವಿಧ್ಯತೆಯ ವಾಹಕವಾಗಿದೆ. ನಾನು ಅನುವಾದವನ್ನು ಸಾಮಾಜಿಕ ನ್ಯಾಯದ ದೃಷ್ಟಿಕೋನದಿಂದ ನೋಡುತ್ತೇನೆ. ಭಾರತ ಬಹುಭಾಷಾ ಪ್ರದೇಶವಾಗಿದೆ. ಅನುವಾದದ ಮೂಲಕ ಜ್ಞಾನವನ್ನು ಹರಡುವುದು ನಮ್ಮ ಜವಾಬ್ದಾರಿಯಾಗಿದೆ. ಪರಿಯ ಅನುವಾದ ಯೋಜನೆಯ ಆಧಾರವು ಭಾಷೆಯ ಪ್ರಜಾಪ್ರಭುತ್ವೀಕರಣವಾಗಿದೆ. ಇದು ಯಾವುದೋ ಒಂದು ನಿರ್ದಿಷ್ಟ ಭಾಷೆ ಇಲ್ಲಿನ ಸಂಕೀರ್ಣ ಮತ್ತು ವೈವಿಧ್ಯಮಯ ಬೌಗೋಳಿಕತೆಯನ್ನು ಆಳುವುದರಲ್ಲಿ ನಮಗೆ ನಂಬಿಕೆಯಿಲ್ಲ” ಎಂದು ಪರಿಬಾಷಾ ಸಂಪಾದಕರಾದ ಸ್ಮಿತಾ ಖಾಟೋರ್ ಹೇಳುತ್ತಾರೆ.

ಎಲ್ಲಾ ವಯಸ್ಸಿನ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಸ್ವಯಂ ನಿರ್ಮಿತ ಶೈಕ್ಷಣಿಕ ಸಾಮಗ್ರಿಗಳ ಸಂಗ್ರಹವನ್ನು ನಿರ್ಮಿಸುವುದು ಪರಿಯ ಮತ್ತೊಂದು ಗುರಿಯಾಗಿದೆ. ಪರಿಯ ಶಿಕ್ಷಣ ವಿಭಾಗವು ನಗರ ಪ್ರದೇಶಗಳಲ್ಲಿನ ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳೊಂದಿಗೆ ನಿಯಮಿತವಾಗಿ ಸಂವಾದ ನಡೆಸುತ್ತದೆ, ನಿಜವಾದ ಜಾಗತಿಕ ಪ್ರಜೆಯಾಗುವುದೆಂದರೆ ವಿದೇಶಿ ಭಾಷೆಯನ್ನು ಕರಗತ ಮಾಡಿಕೊಳ್ಳುವುದು ಮತ್ತು ಪ್ರಪಂಚದ ಘಟನೆಗಳ ಬಗ್ಗೆ ತಿಳಿದುಕೊಳ್ಳುವುದು ಮಾತ್ರವಲ್ಲ, ಮನೆಯಿಂದ 30-50-100 ಕಿಮೀ ಒಳಗೆ ವಾಸಿಸುವ ಜನರ ಕುರಿತು ತಿಳಿಯುವುದು ಎಂದು ಕಲಿಸಲು ಪ್ರಯತ್ನಿಸುತ್ತದೆ. ಮತ್ತೊಂದು ಭಾರತೀಯ ಭಾಷೆ ಮಾತನಾಡುವ ಜನರು ವಾಸ್ತವದ ನ್ಯಾಯಯುತ ತಿಳುವಳಿಕೆಯನ್ನು ಹೊಂದಿರಬೇಕು. “ವಿದ್ಯಾರ್ಥಿ ವರದಿಗಳನ್ನು [ಪರಿಯಲ್ಲಿ ಪ್ರಕಟವಾದ] ಪರಿಯ ಶೈಕ್ಷಣಿಕ ನೀತಿಯ ಸಾಕಾರವಾಗಿ ನಾವು ನೋಡುತ್ತೇವೆ, ಇದು ಅನುಭವದ ಜ್ಞಾನದಲ್ಲಿ ನೆಲೆಗೊಂಡಿದೆ, ಸಮಾಜ ಸುಧಾರಣೆಯನ್ನು ಪ್ರಶ್ನಿಸಲು ಮಕ್ಕಳಿಗೆ ಕಲಿಸುತ್ತದೆ, ಯೋಚಿಸಲು ಅವರಿಗೆ ಕಲಿಸುತ್ತದೆ: ಜನರು ಏಕೆ ವಲಸೆ ಹೋಗಬೇಕು? ಚಹಾ ತೋಟದ ಮಹಿಳಾ ಕಾರ್ಮಿಕರಿಗೆ ಏಕೆ ಹತ್ತಿರದಲ್ಲೇ ಶೌಚಾಲಯ ಸೌಲಭ್ಯವಿಲ್ಲ? ಹದಿಹರೆಯದವರೊಬ್ಬರು ಪ್ರಶ್ನಿಸಿದಂತೆ, ಉತ್ತರಾಖಂಡದಲ್ಲಿ ಆಕೆಯ ಸಂಬಂಧಿಕರು ಮತ್ತು ನೆರೆಹೊರೆಯವರು ಮುಟ್ಟಿನ ಸಮಯದಲ್ಲಿ ಏಕೆ 'ಅಶುದ್ಧರು' ಎಂದು ಪರಿಗಣಿಸುತ್ತಾರೆ? ಅವರು ತಮ್ಮ ತರಗತಿಯ ಹುಡುಗರನ್ನು ಈ ಪ್ರವೃತ್ತಿಯನ್ನು ನೀವೂ ಅನುಸರಿಸುತ್ತೀರಾ ಎಂದು ಕೇಳಿದರು” ಎಂದು ಪರಿಯ ಕಾರ್ಯನಿರ್ವಾಹಕ ಸಂಪಾದಕರಾದ ಪ್ರೀತಿ ಡೇವಿಡ್ ಹೇಳಿದರು.

ಗ್ರಾಮೀಣ ಭಾರತವು ಜನರು, ಭಾಷೆಗಳು, ಜೀವನೋಪಾಯಗಳು, ಕಲಾ ಪ್ರಕಾರಗಳು ಮತ್ತು ಹೆಚ್ಚಿನವುಗಳ ಬಹು ಬಣ್ಣದ, ಬಹು ಆಯಾಮದ ಕಥೆಗಳಿಂದ ತುಂಬಿದೆ. ಪರಿ ನಮ್ಮ 'ಭವಿಷ್ಯದ ಪಠ್ಯಪುಸ್ತಕ'ವಾಗಿದ್ದು, ಅಲ್ಲಿ ನಿರಂತರವಾಗಿ ಬದಲಾಗುತ್ತಿರುವ, ಅಳಿವಿನಂಚಿನಲ್ಲಿರುವ ಈ ಕಥೆಗಳನ್ನು ದಾಖಲಿಸಲಾಗುತ್ತಿದೆ, ಸಂಗ್ರಹಿಸಲಾಗುತ್ತಿದೆ, ವಿವಿಧ ಭಾಷೆಗಳಿಗೆ ಅನುವಾದಿಸಲಾಗುತ್ತಿದೆ ಮತ್ತು ಗ್ರಾಮೀಣ ಪತ್ರಿಕೋದ್ಯಮವನ್ನು ಶಾಲಾ ಮತ್ತು ಕಾಲೇಜು ತರಗತಿಗಳಿಗೆ ತಲುಪಿಸಲಾಗುತ್ತಿದೆ. ಒಂದು ದಿನ ಭಾರತದ 95 ಐತಿಹಾಸಿಕ ಪ್ರದೇಶಗಳಲ್ಲಿ ಕನಿಷ್ಠ ಒಬ್ಬ ಪರಿ ರಿಸರ್ಚ್ ಫೆಲೋ ಅನ್ನು ಹೊಂದುವುದು ಪರಿಯ ಗುರಿಯಾಗಿದೆ, ಇದು "ಈ ದೇಶದ ನಿಜವಾದ ಹೃದಯ ಮತ್ತು ಆತ್ಮವಾಗಿರುವ ಸಾಮಾನ್ಯ ಜನರ ಜೀವನವನ್ನು" ದಾಖಲಿಸುತ್ತದೆ ಎಂದು ಅಡೇಲ್ಕರ್ ಹೇಳುತ್ತಾರೆ. ಏಕೆಂದರೆ ನಮ್ಮ 'ಪರಿʼವಾರದಲ್ಲಿ ಪತ್ರಿಕೋದ್ಯಮವು ಕೇವಲ ಒಂದು ವೃತ್ತಿಯಲ್ಲ. ಅವರ ಮಾನವೀಯತೆಯನ್ನು ಜೀವಂತವಾಗಿಡುವ ಒಂದು ಆಚರಣೆ.

ಈ ಲೇಖನವನ್ನು ಮೊದಲು ಡಾರ್ಕ್ ಅಂಡ್ ಲೈಟ್ ಬರೆಯಿಸಿತು ಮತ್ತು ಮೊದಲು ಡಿಸೆಂಬರ್ 2023ರಲ್ಲಿ ಅವರ ವೆಬ್ಸೈಟಿನಲ್ಲಿ ಪ್ರಕಟಿಸಲಾಯಿತು.

ಅನುವಾದ: ಶಂಕರ. ಎನ್. ಕೆಂಚನೂರು

Shalini Singh

শালিনী সিং পারি-র পরিচালনের দায়িত্বে থাকা কাউন্টারমিডিয়া ট্রাস্টের প্রতিষ্ঠাতা অছি-সদস্য। দিল্লি-ভিত্তিক এই সাংবাদিক ২০১৭-২০১৮ সালে হার্ভার্ড বিশ্ববিদ্যালয়ে নিম্যান ফেলো ফর জার্নালিজম ছিলেন। তিনি পরিবেশ, লিঙ্গ এবং সংস্কৃতি নিয়ে লেখালিখি করেন।

Other stories by শালিনী সিং
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru