ನಾವು ಜೀಪಿನಿಂದ ಇಳಿದ ಕೂಡಲೇ ಕಾನ್ಸ್ಟೆಬಲ್ಗಳು ಭಯಭೀತರಾಗಿ ಕೋಟೆಯಂತಹ ರಾಜವೊಮಂಗಿ ಪೊಲೀಸ್ ಠಾಣೆ ಒಳಗೆ ತಮ್ಮ ಸ್ಥಾನಗಳಲ್ಲಿ ನಿಂತರು. ನಿಲ್ದಾಣವೇ ಪೊಲೀಸ್ ಕಣ್ಗಾವಲಿನಲ್ಲಿದೆ. ವಿಶೇಷ ಸಶಸ್ತ್ರ ಪಡೆ ಪೊಲೀಸರು ಇದನ್ನು ಸುತ್ತುವರೆದಿದ್ದಾರೆ. ನಮ್ಮಲ್ಲಿ ಕ್ಯಾಮೆರಾಗಳು ಮಾತ್ರ ಇರುವುದನ್ನು ನೋಡಿದರೂ, ಅವರ ಉದ್ವೇಗ ಕಡಿಮೆಯಾಗಲಿಲ್ಲ. ಪೂರ್ವ ಗೋದಾವರಿಯ ಈ ಭಾಗದಲ್ಲಿ ಪೊಲೀಸ್ ಠಾಣೆಯ ಫೋಟೊ ತೆಗೆಯುವುದನ್ನು ನಿಷೇಧಿಸಲಾಗಿದೆ.
ಒಳ ಕಾರಿಡಾರ್ನ ಭದ್ರತೆಯಲ್ಲಿ ಪೋಸ್ಟ್ ಮಾಡಲಾಗಿದ್ದ ಹೆಡ್ ಕಾನ್ಸ್ಟೆಬಲ್ ಒಬ್ಬರು ನಾವು ಯಾರೆಂದು ತಿಳಿಯಲು ಬಯಸಿದ್ದರು. ಪತ್ರಕರ್ತರೇ? ವಾತಾವರಣ ಸ್ವಲ್ಪ ತಿಳಿಯಾಯಿತು. "ನಿಮ್ಮ ಸ್ಟೇಷನ್ ಮೇಲೆ 75 ವರ್ಷಗಳ ಹಿಂದೆ ದಾಳಿ ಮಾಡಲಾಗಿದೆ. ನೀವು ಪ್ರತಿಕ್ರಿಯೆ ನೀಡುವಲ್ಲಿ ನೀವು ತಡಮಾಡಿದಿರಲ್ಲವೆ?" ಎಂದು ನಾನು ಕೇಳಿದೆ.
“ಯಾರಿಗ್ಗೊತ್ತು?, ಅಂತಹದೇ ದಾಳಿ ಮತ್ತೆ ಇಂದು ಮಧ್ಯಾಹ್ನ ಮತ್ತೆ ನಡೆಯಬಹುದು” ಎಂದು ವೇದಾಂತಿಯಂತೆ ಹೇಳಿದರು.
ಆಂಧ್ರಪ್ರದೇಶದ ಈ ಬುಡಕಟ್ಟು ಪ್ರದೇಶವನ್ನು "ಏಜೆನ್ಸಿ" ಪ್ರದೇಶ ಎಂದು ಕರೆಯಲಾಗುತ್ತದೆ. ಆಗಸ್ಟ್ 1922ರಲ್ಲಿ ಇಲ್ಲಿನ ಜನರು ದಂಗೆಯೆದ್ದರು. ಆರಂಭದಲ್ಲಿ ಸ್ಥಳೀಯ ಆಕ್ರೋಶದಿಂದ ಆರಂಭಗೊಂಡ ಇದು, ನಂತರ ವ್ಯಾಪಕವಾದ ರಾಜಕೀಯ ಸ್ವರೂಪವನ್ನು ಪಡೆದುಕೊಂಡಿತು. ಬುಡಕಟ್ಟು ಸಮುದಾಯದವರಲ್ಲದ, ಅಲ್ಲೂರಿ ರಾಮಚಂದ್ರ ರಾಜು (ಸೀತಾರಾಮ ರಾಜು ಎನ್ನುವುದು ಅವರ ಜನಪ್ರಿಯ ಹೆಸರು) ಮನ್ಯಂ ದಂಗೆಯಲ್ಲಿ ಬೆಟ್ಟದ ಬುಡಕಟ್ಟು ಜನರನ್ನು ಮುನ್ನಡೆಸಿದರು. ಸ್ಥಳೀಯ ಜನರು ಈ ಹೆಸರಿನಿಂದ ಈ ದಂಗೆಯನ್ನು ನೆನಪಿಸಿಕೊಳ್ಳುತ್ತಾರೆ. ಇಲ್ಲಿ, ಜನರು ಕೇವಲ ಸಮಸ್ಯೆಗಳಿಗೆ ಪರಿಹಾರಗಳನ್ನು ಬಯಸಲಿಲ್ಲ. 1922ರ ಹೊತ್ತಿಗೆ, ಅವರು ರಾಜ್ (ಬ್ರಿಟಿಷ್ ಸರ್ಕಾರ) ಅನ್ನು ಉರುಳಿಸಲು ಹೋರಾಡಲು ಪ್ರಾರಂಭಿಸಿದರು. ಏಜೆನ್ಸಿ ಪ್ರದೇಶದ ಹಲವಾರು ಪೊಲೀಸ್ ಠಾಣೆಗಳ ಮೇಲೆ ದಂಗೆಕೋರರು ದಾಳಿಮಾಡಿದರು, ಅದರಲ್ಲಿ ರಾಜವೊಮ್ಮಂಗಿ ಪೊಲೀಸ್ ಠಾಣೆಯೂ ಒಂದು.
ಈ ಪ್ರದೇಶದ ಜನರು ಯಾವ ಕಾರಣಗಳಿಗಾಗಿ ಬ್ರಿಟಿಷರ ವಿರುದ್ಧ ಹೋರಾಡಿದರೋ ಅವುಗಳಲ್ಲಿ ಅನೇಕ ಸಮಸ್ಯೆಗಳು, 75 ವರ್ಷಗಳ ನಂತರವೂ ಅಸ್ತಿತ್ವದಲ್ಲಿದೆ.








