1947ರ ರಕ್ತಸಿಕ್ತ ವಿಭಜನೆ ಕೆತ್ತಿದ ಎರಡು ದೇಶಗಳ ನಡುವಿನ ಗಡಿಯನ್ನು ಗುರುತಿಸುವ ರಾಡ್‌ಕ್ಲಿಫ್ ರೇಖೆಯು ಪಂಜಾಬನ್ನು ಎರಡು ಭಾಗಗಳಾಗಿ ವಿಭಜಿಸುತ್ತದೆ. ಆ ಪ್ರದೇಶದ ಭೌಗೋಳಿಕತೆಯ ಜೊತೆಗೆ, ಗಡಿ ಆಯೋಗಗಳ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಬ್ರಿಟಿಷ್ ವಕೀಲರ ಹೆಸರಿನ ಈ ರೇಖೆಯು ಪಂಜಾಬಿ ಭಾಷೆಯ ಎರಡು ಲಿಪಿಗಳನ್ನು ಸಹ ವಿಭಜಿಸುತ್ತದೆ. "ವಿಭಜನೆಯು ಸಾಹಿತ್ಯ ಮತ್ತು ಪಂಜಾಬಿ ಭಾಷೆಯ ಎರಡೂ ಲಿಪಿಗಳಿಗೆ ಹಸಿ ಗಾಯವನ್ನುಂಟುಮಾಡಿದೆ" ಎಂದು ರಾಜ್ಯದ ಲುಧಿಯಾನ ಜಿಲ್ಲೆಯ ಪಾಯಲ್ ತೆಹ್ಸಿಲ್‌ನ ಕಟಾಹ್ರಿ ಗ್ರಾಮದ ಕಿರ್ಪಾಲ್ ಸಿಂಗ್ ಪನ್ನು ಹೇಳಿದರು.

ಪನ್ನು ಅವರು 90 ವರ್ಷದ ಮಾಜಿ ಸೈನಿಕರಾಗಿದ್ದು, ವಿಭಜನೆ ಮಾಡಿದ ಈ ನಿರ್ದಿಷ್ಟ ಗಾಯಕ್ಕೆ ಮುಲಾಮು ಹಚ್ಚಲು ತಮ್ಮ ಜೀವನದ ಮೂರು ದಶಕಗಳನ್ನು ಮುಡಿಪಾಗಿಟ್ಟಿದ್ದಾರೆ. ಗಡಿ ಭದ್ರತಾ ಪಡೆಯಲ್ಲಿ (ಬಿಎಸ್ಎಫ್) ನಿವೃತ್ತ ಡೆಪ್ಯುಟಿ ಕಮಾಂಡೆಂಟ್ ಆಗಿರುವ ಪನ್ನು ಅವರು ಗುರು ಗ್ರಂಥ ಸಾಹಿಬ್, ಮಹಾನ್ ಕೋಶ್ (ಪಂಜಾಬಿನ ಅತ್ಯಂತ ಪೂಜ್ಯ ವಿಶ್ವಕೋಶಗಳಲ್ಲಿ ಒಂದಾಗಿದೆ) ಮತ್ತು ಇತರ ಸಾಹಿತ್ಯ ಕೃತಿಗಳನ್ನು ಗುರುಮುಖಿಯಿಂದ ಶಾಮುಖಿಗೆ ಹಾಗೂ ಶಾಮುಖಿಯಿಂದ ಗುರುಮುಖಿಗೆ ಲಿಪ್ಯಂತರಗೊಳಿಸಿದ್ದಾರೆ.

ಉರ್ದುವಿನಂತೆ ಬಲದಿಂದ ಎಡಕ್ಕೆ ಬರೆಯಲಾಗುವ ಶಾಮುಖಿಯನ್ನು 1947ರಿಂದ ಭಾರತೀಯ ಪಂಜಾಬಿಯಲ್ಲಿ ಬಳಸಲಾಗಿಲ್ಲ. 1995-1996ರಲ್ಲಿ, ಪನ್ನು ಕಂಪ್ಯೂಟರ್ ಪ್ರೋಗ್ರಾಂ ಒಂದನ್ನು ಅಭಿವೃದ್ಧಿಪಡಿಸಿದರು, ಅದು ಗುರು ಗ್ರಂಥ ಸಾಹಿಬ್ ಪಠ್ಯವನ್ನು ಗುರುಮುಖಿಯಿಂದ ಶಾಮುಖಿಗೆ ಮತ್ತು ಪ್ರತಿಯಾಗಿ ಪರಿವರ್ತಿಸುತ್ತಿತ್ತು.

ವಿಭಜನೆಗೂ ಮೊದಲು, ಉರ್ದು ಭಾಷಿಕರು ಶಾಮುಖಿಯಲ್ಲಿ ಬರೆದ ಪಂಜಾಬಿಯನ್ನು ಓದಲು ಸಾಧ್ಯವಾಗುತ್ತದೆ. ಪಾಕಿಸ್ತಾನ ರಚನೆಯಾಗುವ ಮೊದಲು, ಹೆಚ್ಚಿನ ಸಾಹಿತ್ಯ ಕೃತಿಗಳು ಮತ್ತು ಅಧಿಕೃತ ನ್ಯಾಯಾಲಯದ ದಾಖಲೆಗಳು ಶಾಮುಖಿಯಲ್ಲಿದ್ದವು. ಹಿಂದಿನ ಅವಿಭಜಿತ ಪ್ರಾಂತ್ಯದ ಸಾಂಪ್ರದಾಯಿಕ ಕಥೆ ಹೇಳುವ ಕಲಾ ಪ್ರಕಾರವಾದ ಕಿಸ್ಸಾ ಕೂಡ ಶಾಮುಖಿಯನ್ನು ಮಾತ್ರ ಬಳಸುತ್ತಿತ್ತು.

ಎಡದಿಂದ ಬಲಕ್ಕೆ ಬರೆಯಲಾಗುವ ಮತ್ತು ದೇವನಾಗರಿ ಲಿಪಿಗೆ ಸ್ವಲ್ಪ ಹೋಲಿಕೆಯನ್ನು ಹೊಂದಿರುವ ಗುರುಮುಖಿಯನ್ನು ಪಾಕಿಸ್ತಾನದ ಪಂಜಾಬಿನಲ್ಲಿ ಬಳಸಲಾಗುವುದಿಲ್ಲ. ಇದರ ಪರಿಣಾಮವಾಗಿ, ಗುರುಮುಖಿಯನ್ನು ಓದಲು ಸಾಧ್ಯವಾಗದ ಪಂಜಾಬಿ ಮಾತನಾಡುವ ಪಾಕಿಸ್ತಾನಿಗಳ ನಂತರದ ತಲೆಮಾರುಗಳು ತಮ್ಮ ಸಾಹಿತ್ಯದಿಂದ ದೂರವುಳಿದವು. ಅವಿಭಜಿತ ಪಂಜಾಬಿನ ಮಹಾನ್ ಸಾಹಿತ್ಯ ಕೃತಿಗಳನ್ನು ತಮಗೆ ಗೊತ್ತಿದ್ದ ಶಾಮುಖಿ ಲಿಪಿಯಲ್ಲಿ ಬಂದ ಮೇಲಷ್ಟೇ ಅವರು ಓದಲು ಸಾಧ್ಯವಾಯಿತು.

Left: Shri Guru Granth Sahib in Shahmukhi and Gurmukhi.
PHOTO • Courtesy: Kirpal Singh Pannu
Right: Kirpal Singh Pannu giving a lecture at Punjabi University, Patiala
PHOTO • Courtesy: Kirpal Singh Pannu

ಎಡ: ಶಾಮುಖಿ ಮತ್ತು ಗುರುಮುಖಿಯಲ್ಲಿ ಶ್ರೀ ಗುರು ಗ್ರಂಥ ಸಾಹಿಬ್. ಬಲ: ಪಟಿಯಾಲಾದ ಪಂಜಾಬಿ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸ ನೀಡುತ್ತಿರುವ ಕೃಪಾಲ್ ಸಿಂಗ್ ಪನ್ನು

ಪಟಿಯಾಲ ಮೂಲದ ಭಾಷಾ ತಜ್ಞ ಮತ್ತು ಫ್ರೆಂಚ್ ಶಿಕ್ಷಕ 68 ವರ್ಷದ ಭೋಜ್ ರಾಜ್ ಅವರು ಶಾಮುಖಿಯನ್ನು ಸಹ ಓದಬಲ್ಲರು. "1947ರ ಮೊದಲು, ಶಾಮುಖಿ ಮತ್ತು ಗುರುಮುಖಿ ಎರಡೂ ಬಳಕೆಯಲ್ಲಿದ್ದವು, ಆದರೆ ಗುರುಮುಖಿ ಹೆಚ್ಚಾಗಿ ಗುರುದ್ವಾರಗಳಿಗೆ (ಸಿಖ್ ಪೂಜಾ ಸ್ಥಳಗಳು) ಸೀಮಿತವಾಗಿತ್ತು" ಎಂದು ಅವರು ಹೇಳಿದರು. ರಾಜ್ ಅವರ ಪ್ರಕಾರ, ಸ್ವಾತಂತ್ರ್ಯ ಪೂರ್ವದ ವರ್ಷಗಳಲ್ಲಿ, ಪಂಜಾಬಿ ಭಾಷಾ ಪರೀಕ್ಷೆಗಳನ್ನು ತೆಗೆದುಕೊಳ್ಳುವ ವಿದ್ಯಾರ್ಥಿಗಳು ಶಾಮುಖಿಯಲ್ಲಿ ಬರೆಯಬೇಕೆಂದು ನಿರೀಕ್ಷಿಸಲಾಗಿತ್ತು.

"ಹಿಂದೂ ಧಾರ್ಮಿಕ ಗ್ರಂಥಗಳಾದ ರಾಮಾಯಣ ಮತ್ತು ಮಹಾಭಾರತವನ್ನು ಸಹ ಪರ್ಸೊ-ಅರೇಬಿಕ್ ಲಿಪಿಯಲ್ಲಿ ಬರೆಯಲಾಗಿತ್ತು" ಎಂದು ರಾಜ್ ಹೇಳಿದರು. ಪಂಜಾಬನ್ನು ವಿಭಜಿಸಿದಂತೆ, ಭಾಷೆಯೂ ಒಡೆದುಹೋಯಿತು, ಶಾಮುಖಿ ಪಶ್ಚಿಮ ಪಂಜಾಬಿಗೆ ವಲಸೆ ಹೋಗಿ, ಪಾಕಿಸ್ತಾನಿಯಾಯಿತು, ಮತ್ತು ಗುರುಮುಖಿ ಭಾರತದಲ್ಲಿ ಏಕಾಂಗಿಯಾಗಿ ಉಳಿಯಿತು.

ಪಂಜಾಬಿ ಸಂಸ್ಕೃತಿ, ಭಾಷೆ, ಸಾಹಿತ್ಯ ಮತ್ತು ಇತಿಹಾಸದ ಪ್ರಮುಖ ಅಂಶವನ್ನು ಕಳೆದುಕೊಳ್ಳುವ ಬಗ್ಗೆ ದಶಕದ ಆತಂಕವನ್ನು ನಿವಾರಿಸುವ ಮಾರ್ಗವಾಗಿ ಪನ್ನು ಅವರ ಯೋಜನೆ ತಯಾರಾಯಿತು.

"ಪೂರ್ವ ಪಂಜಾಬ್ (ಭಾರತದ ಭಾಗ) ದ ಬರಹಗಾರರು ಮತ್ತು ಕವಿಗಳು ತಮ್ಮ ಕೃತಿಗಳನ್ನು ಪಶ್ಚಿಮ ಪಂಜಾಬ್ (ಪಾಕಿಸ್ತಾನದ ಭಾಗ) ನಲ್ಲಿ ಓದಬೇಕೆಂದು ಬಯಸಿದ್ದರು" ಎಂದು ಪನ್ನು ಹೇಳಿದರು. ಕೆನಡಾದ ಟೊರೊಂಟೊದಲ್ಲಿ ಅವರು ಭಾಗವಹಿಸುವ ಸಾಹಿತ್ಯ ಸಭೆಗಳಲ್ಲಿ, ಪಾಕಿಸ್ತಾನಿ ಪಂಜಾಬಿಗಳು ಮತ್ತು ಇತರ ರಾಷ್ಟ್ರಗಳ ಪಂಜಾಬಿಗಳು ಈ ನಷ್ಟದ ಬಗ್ಗೆ ದುಃಖಿಸುತ್ತಿದ್ದರು.

ಅಂತಹ ಒಂದು ಸಭೆಯಲ್ಲಿ, ಓದುಗರು ಮತ್ತು ವಿದ್ವಾಂಸರು ಪರಸ್ಪರರ ಸಾಹಿತ್ಯವನ್ನು ಓದುವ ಆಸೆಯನ್ನು ವ್ಯಕ್ತಪಡಿಸಿದರು. "ಎರಡೂ ಕಡೆಯವರು ಎರಡೂ ಲಿಪಿಗಳನ್ನು ಕಲಿತಿದ್ದರೆ ಮಾತ್ರ ಅದು ಸಾಧ್ಯವಿತ್ತು" ಎಂದು ಪನ್ನು ಹೇಳಿದರು. "ಆದಾಗ್ಯೂ, ಅದನ್ನು ಮಾಡುವುದಕ್ಕಿಂತ ಹೇಳುವುದು ಸುಲಭವಾಗಿತ್ತು."

ಪರಿಸ್ಥಿತಿಯನ್ನು ಪರಿಹರಿಸುವ ಏಕೈಕ ಮಾರ್ಗವೆಂದರೆ ಪ್ರಮುಖ ಸಾಹಿತ್ಯ ಕೃತಿಗಳನ್ನು ಅವು ಲಭ್ಯವಿಲ್ಲದ ಲಿಪಿಗೆ ಭಾಷಾಂತರಿಸುವುದು. ಈ ನಿಟ್ಟಿನಲ್ಲಿ ಪನ್ನು ಅವರಿಗೆ ಒಂದು ಆಲೋಚನೆ ಹುಟ್ಟಿತು.

ಅಂತಿಮವಾಗಿ, ಪನ್ನು ಅವರ ಕಂಪ್ಯೂಟರ್ ಪ್ರೋಗ್ರಾಂ ಪಾಕಿಸ್ತಾನದ ಓದುಗರಿಗೆ ಸಿಖ್ ಧರ್ಮದ ಪವಿತ್ರ ಗ್ರಂಥವಾದ ಗುರು ಗ್ರಂಥ ಸಾಹಿಬ್ ಗ್ರಂಥವನ್ನು ಶಾಮುಖಿಯಲ್ಲಿ ಓದಲು ಅನುವು ಮಾಡಿಕೊಟ್ಟಿತು. ಇದೇ ಕಾರ್ಯಕ್ರಮವು ಉರ್ದು ಅಥವಾ ಶಾಮುಖಿಯಿಂದ ಗುರುಮುಖಿಗೆ ಲಭ್ಯವಿರುವ ಪಾಕಿಸ್ತಾನದ ಪುಸ್ತಕಗಳು ಮತ್ತು ಪಠ್ಯಗಳನ್ನು ಲಿಪ್ಯಂತರಗೊಳಿಸುತ್ತದೆ.

Pages of the Shri Guru Granth Sahib in Shahmukhi and Gurmukhi
PHOTO • Courtesy: Kirpal Singh Pannu

ಶಾಮುಖಿ ಮತ್ತು ಗುರುಮುಖಿಯಲ್ಲಿರುವ ಶ್ರೀ ಗುರು ಗ್ರಂಥ ಸಾಹಿಬ್ ನ ಅಂಗಗಳು

*****

1988ರಲ್ಲಿ ನಿವೃತ್ತಿಯ ನಂತರ, ಪನ್ನು ಕೆನಡಾಕ್ಕೆ ಹೋದರು ಮತ್ತು ಅಲ್ಲಿ ಅವರು ಕಂಪ್ಯೂಟರ್ ಬಳಕೆಯನ್ನು ಕಲಿತರು.

ಕೆನಡಾದ ಗಮನಾರ್ಹ ಜನಸಂಖ್ಯೆಯಾಗಿರುವ ಅಲ್ಲಿನ ಪಂಜಾಬಿಗಳು ತಮ್ಮ ತಾಯ್ನಾಡಿನ ಸುದ್ದಿಗಳನ್ನು ಓದಲು ಉತ್ಸುಕರಾಗಿದ್ದರು. ಅಜಿತ್ ಮತ್ತು ಪಂಜಾಬಿ ಟ್ರಿಬ್ಯೂನ್ ನಂತಹ ಪಂಜಾಬಿ ದಿನಪತ್ರಿಕೆಗಳನ್ನು ಭಾರತದಿಂದ ಕೆನಡಾಕ್ಕೆ ವಿಮಾನದ ಮೂಲಕ ಕಳುಹಿಸಲಾಗುತ್ತಿತ್ತು.

ಟೊರೊಂಟೊದಲ್ಲಿ ಇತರ ಪತ್ರಿಕೆಗಳನ್ನು ತಯಾರಿಸಲು ಈ ಮತ್ತು ಇತರ ಪತ್ರಿಕೆಗಳ ಕಟಿಂಗ್‌ಗಳನ್ನು ಬಳಸಲಾಗುತ್ತಿತ್ತು ಎಂದು ಪನ್ನು ಹೇಳಿದರು. ಈ ವೃತ್ತಪತ್ರಿಕೆಗಳು ವಿವಿಧ ಪ್ರಕಾಶನಗಳ ಕಟಿಂಗ್‌ಗಳ ಕೊಲಾಜಿನಂತೆ ಇದ್ದುದರಿಂದ, ಅವು ಅನೇಕ ಫಾಂಟ್ ಗಳನ್ನು ಹೊಂದಿದ್ದವು.

ಅಂತಹದ್ದೇ ಒಂದು ದಿನಪತ್ರಿಕೆ ಹಮ್ ದರ್ದ್ ವೀಕ್ಲಿಯಲ್ಲಿ ಪನ್ನು ನಂತರ ಕೆಲಸ ಮಾಡುತ್ತಿದ್ದರು. 1993ರಲ್ಲಿ, ಅದರ ಸಂಪಾದಕರು ತಮ್ಮ ಪತ್ರಿಕೆಯನ್ನು ಒಂದೇ ಲಿಪಿಯಲ್ಲಿ ತಯಾರಿಸಲು ನಿರ್ಧರಿಸಿದರು.

"ಫಾಂಟ್ (ಲಿಪಿ) ಗಳು ಬರಲಾರಂಭಿಸಿದ್ದವು, ಮತ್ತು ಕಂಪ್ಯೂಟರುಗಳ ಬಳಕೆಯೂ ಆಗ ಸಾಧ್ಯವಾಗಿತ್ತು. ನಾನು ಮೊದಲು ಪರಿವರ್ತಿಸಿದ್ದು ಗುರುಮುಖಿಯ ಒಂದು ಲಿಪಿಯಿಂದ ಇನ್ನೊಂದಕ್ಕೆ" ಎಂದು ಪನ್ನು ಹೇಳಿದರು.

ಅನಂತಪುರ ಫಾಂಟ್ ನಲ್ಲಿರುವ ಹಮ್ ದರ್ದ್ ವೀಕ್ಲಿಯ ಮೊದಲ ಟೈಪ್ಡ್ ಪ್ರತಿಯನ್ನು ತೊಂಬತ್ತರ ದಶಕದ ಆರಂಭದಲ್ಲಿ ಟೊರೊಂಟೊದಲ್ಲಿನ ಅವರ ನಿವಾಸದಿಂದ ಬಿಡುಗಡೆ ಮಾಡಲಾಯಿತು. ನಂತರ, 1992ರಲ್ಲಿ ಟೊರೊಂಟೊದಲ್ಲಿ ಪ್ರಾರಂಭವಾದ ಪಂಜಾಬಿ ಬರಹಗಾರರ ಸಂಘಟನೆಯಾದ ಪಂಜಾಬಿ ಕಲ್ಮನ್ ದಾ ಕಾಫ್ಲಾ (ಪಂಜಾಬಿ ಬರಹಗಾರರ ಸಂಘ) ಸಭೆಯಲ್ಲಿ, ಸದಸ್ಯರು ಗುರುಮುಖಿ-ಶಾಮುಖಿ ಪರಿವರ್ತನೆ ಅಗತ್ಯವೆಂದು ನಿರ್ಧರಿಸಿದರು.

Left: The Punjabi script as seen on a computer in January 2011.
PHOTO • Courtesy: Kirpal Singh Pannu
Kirpal Singh Pannu honoured by Punjabi Press Club of Canada for services to Punjabi press in creating Gurmukhi fonts. The font conversion programmes helped make way for a Punjabi Technical Dictionary on the computer
PHOTO • Courtesy: Kirpal Singh Pannu

ಎಡ: ಜನವರಿ 2011ರಲ್ಲಿ ಕಂಪ್ಯೂಟರಿನಲ್ಲಿ ನೋಡಿದಂತೆ ಪಂಜಾಬಿ ಲಿಪಿ. ಬಲ: ಗುರುಮುಖಿ ಫಾಂಟುಗಳನ್ನು ರಚಿಸುವಲ್ಲಿ ಪಂಜಾಬಿ ಮುದ್ರಣಾಲಯಕ್ಕೆ ಸಲ್ಲಿಸಿದ ಸೇವೆಗಾಗಿ ಕಿರ್ಪಾಲ್ ಸಿಂಗ್ ಪನ್ನು ಅವರನ್ನು ಪಂಜಾಬಿ ಪ್ರೆಸ್ ಕ್ಲಬ್ ಆಫ್ ಕೆನಡಾ ಗೌರವಿಸಿದೆ. ಫಾಂಟ್ ಪರಿವರ್ತನೆ ಪ್ರೋಗ್ರಾಂಗಳು ಕಂಪ್ಯೂಟರಿನಲ್ಲಿ ಪಂಜಾಬಿ ತಾಂತ್ರಿಕ ನಿಘಂಟಿಗೆ ದಾರಿ ಮಾಡಿಕೊಡಲು ಸಹಾಯ ಮಾಡಿದವು

ಅಂದು ಕಂಪ್ಯೂಟರನ್ನು ಸಲೀಸಾಗಿ ಬಳಸಬಲ್ಲ ಕೆಲವೇ ಕೆಲವರಲ್ಲಿ ಪನ್ನು ಕೂಡ ಒಬ್ಬರಾಗಿದ್ದರು, ಮತ್ತು ಈ ಫಲಿತಾಂಶವನ್ನು ಸಾಧಿಸುವ ಜವಾಬ್ದಾರಿಯನ್ನು ಅವರಿಗೆ ನೀಡಲಾಯಿತು. 1996ರಲ್ಲಿ, ಉತ್ತರ ಅಮೆರಿಕಾದ ಅಕಾಡೆಮಿ ಆಫ್ ಪಂಜಾಬ್ ಅಥವಾ ಪಂಜಾಬಿ ಸಾಹಿತ್ಯಕ್ಕೆ ಸಮರ್ಪಿತವಾದ ಮತ್ತೊಂದು ಸಂಸ್ಥೆಯಾದ ಎಪಿಎನ್ಎ ಸಂಸ್ಥಾ ಒಂದು ಸಮ್ಮೇಳನವನ್ನು ನಡೆಸಿತು, ಅಲ್ಲಿ ಅತ್ಯಂತ ಪ್ರಸಿದ್ಧ ಪಂಜಾಬಿ ಕವಿಗಳಲ್ಲಿ ಒಬ್ಬರಾದ ನವತೇಜ್ ಭಾರತಿ ಅವರು ಘೋಷಿಸಿದರು: “ಕಿರ್ಪಾಲ್ ಸಿಂಗ್ ಪನ್ನು ಪ್ರೋಗ್ರಾಂ ವಿನ್ಯಾಸಗೊಳಿಸುತ್ತಿದ್ದಾರೆ. ಕಿ ತುಸ್ಸಿ ಇಕ್ ಕ್ಲಿಕ್ ಕರೋಗೆ ಗುರುಮುಖಿ ತೋನ್ ಶಾಮುಖಿ ಹೋ ಜಾವೂಗಾ, ಇಕ್ ಕ್ಲಿಕ್ ಕರೋಗೆ ತೆ ಶಾಮುಖಿ ತೋನ್ ಗುರುಮುಖಿ ಹೋ ಜಾವೂಗಾ [ನೀವು ಕೇವಲ ಒಂದು ಕ್ಲಿಕ್‌ನಲ್ಲಿ ಪಠ್ಯವನ್ನು ಶಾಮುಖಿಯಿಂದ ಗುರುಮುಖಿಗೆ ಮತ್ತು ಪ್ರತಿಯಾಗಿ ಪರಿವರ್ತಿಸಬಹುದು]."

ಆರಂಭದಲ್ಲಿ, ಅವರು ಕತ್ತಲೆಯಲ್ಲಿ ಗುಂಡು ಹಾರಿಸುತ್ತಿದ್ದಾರೆಂದು ಜನರು ಭಾವಿಸಿದರು ಎಂದು ಈ ಸೈನಿಕ ಹೇಳಿದರು.  ಆದರೆ ಕೆಲವು ಆರಂಭಿಕ ತಾಂತ್ರಿಕ ತೊಂದರೆಗಳ ನಂತರ, ಅವರು ಪ್ರಗತಿ ಸಾಧಿಸಲು ಸಾಧ್ಯವಾಯಿತು.

"ಉತ್ಸಾಹದಿಂದ, ನಾನು ಅದನ್ನು ಉರ್ದು ಮತ್ತು ಶಾಮುಖಿ ತಿಳಿದಿರುವ ಸಾಹಿತಿ ಜಾವೇದ್ ಬೂಟಾ ಅವರಿಗೆ ತೋರಿಸಲು ಹೋದೆ" ಎಂದು ಅವರು ಹೇಳಿದರು.

ಶಾಮುಖಿಗೆ ಪನ್ನು ಬಳಸಿದ ಫಾಂಟ್ ಗೋಡೆಯ ಕಾಂಕ್ರೀಟ್ ಬ್ಲಾಕ್ ಗಳ ಸರಣಿಯಂತೆ ಚಪ್ಪಟೆಯಾಗಿದೆಯೆಂದು ಎಂದು ಬೂಟಾ ಗಮನಸೆಳೆದರು. ಇದು ಕುಫಿ (ಅರೇಬಿಕ್ ಭಾಷೆಯ ಫಾಂಟ್) ನಂತಹದ್ದು, ಇದನ್ನು ಯಾವುದೇ ಉರ್ದು ಓದುಗರು ಸ್ವೀಕರಿಸುವುದಿಲ್ಲ ಮತ್ತು ಒಣಗಿದ ಮರದ ಮೇಲೆ ಎಲೆಯಿಲ್ಲದ ಕೊಂಬೆಯಂತೆ ಕಾಣುವ ನಸ್ತಲೀಕ್ ಫಾಂಟನ್ನು ಉರ್ದು ಮತ್ತು ಶಾಮುಖಿಯಲ್ಲಿ ಸ್ವೀಕರಿಸಲಾಗಿದೆ ಎಂದು ಅವರು ಪನ್ನು ಅವರಿಗೆ ತಿಳಿಸಿದರು.

ಪನ್ನು ನಿರಾಶೆಯಿಂದ ಹಿಂದಿರುಗಿದರು. ನಂತರ, ಅವರ ಮಕ್ಕಳು ಮತ್ತು ಅವರ ಮಕ್ಕಳ ಸ್ನೇಹಿತರು ಅವರಿಗೆ ಸಹಾಯ ಮಾಡಿದರು. ಅವರು ತಜ್ಞರೊಂದಿಗೆ ಸಮಾಲೋಚಿಸಿದರು ಮತ್ತು ಗ್ರಂಥಾಲಯಗಳಿಗೆ ಭೇಟಿ ನೀಡಿದರು. ಬೂಟಾ ಮತ್ತು ಅವರ ಕುಟುಂಬ ಕೂಡ ಸಹಾಯ ಮಾಡಿತು. ಅಂತಿಮವಾಗಿ, ಪನ್ನು ನೂರಿ ನಸ್ತಲೀಕ್ ಎಂಬ ಫಾಂಟ್ ಒಂದನ್ನು ಕಂಡುಹಿಡಿದರು.

Left: Pannu with his sons, roughly 20 years ago. The elder son (striped tie), Narwantpal Singh Pannu is an electrical engineer; Rajwantpal Singh Pannu (yellow tie), is the second son and a computer programmer; Harwantpal Singh Pannu, is the youngest and also a computer engineer.
PHOTO • Courtesy: Kirpal Singh Pannu
Right: At the presentation of a keyboard in 2005 to prominent Punjabi Sufi singer
PHOTO • Courtesy: Kirpal Singh Pannu

ಎಡ: ಪನ್ನು ತನ್ನ ಮಕ್ಕಳೊಂದಿಗೆ, ಸರಿಸುಮಾರು 20 ವರ್ಷಗಳ ಹಿಂದೆ. ಹಿರಿಯ ಮಗ ನರ್ವಂತ್ ಪಾಲ್ ಸಿಂಗ್ ಪನ್ನು ಎಲೆಕ್ಟ್ರಿಕಲ್ ಎಂಜಿನಿಯರ್; ರಾಜ್ವಂತ್ಪಾಲ್ ಸಿಂಗ್ ಪನ್ನು (ಹಳದಿ ಟೈ), ಎರಡನೇ ಮಗ ಮತ್ತು ಕಂಪ್ಯೂಟರ್ ಪ್ರೋಗ್ರಾಮರ್; ಹರ್ವಂತ್ ಪಾಲ್ ಸಿಂಗ್ ಪನ್ನು ಅತ್ಯಂತ ಕಿರಿಯ ಮತ್ತು ಕಂಪ್ಯೂಟರ್ ಎಂಜಿನಿಯರ್ ಕೂಡ ಆಗಿದ್ದಾರೆ. ಬಲ: 2005ರಲ್ಲಿ ಪ್ರಮುಖ ಪಂಜಾಬಿ ಸೂಫಿ ಗಾಯಕನೆದುರು ಕೀಬೋರ್ಡ್ ಪ್ರಸ್ತುತಪಡಿಸುವಾಗ

ಈ ಹೊತ್ತಿಗೆ, ಅವರು ಫಾಂಟ್‌ಗಳ ಬಗ್ಗೆ ಗಮನಾರ್ಹ ಜ್ಞಾನವನ್ನು ಗಳಿಸಿದ್ದರು, ಮತ್ತು ನೂರಿ ನಸ್ತಲೀಕ್ ಲಿಪಿಯನ್ನು ಅವರ ಅಗತ್ಯಗಳಿಗೆ ಅನುಗುಣವಾಗಿ ರೂಪಿಸಲು ಸಾಧ್ಯವಾಯಿತು. "ನಾನು ಇದನ್ನು ಗುರುಮುಖಿಗೆ ಸಮಾನಾಂತರವಾಗಿ ಸಿದ್ಧಪಡಿಸಿದ್ದೆ.ಇಲ್ಲಿ ಮತ್ತೊಂದು ಪ್ರಮುಖ ಸಮಸ್ಯೆ ಉಳಿದಿತ್ತು. ನಾವು ಅದನ್ನು ಬಲದಿಂದ ಎಡಕ್ಕೆ ಬರೆಯಲು ಇನ್ನೂ ಬಲಕ್ಕೆ ತರಬೇಕಾಗಿತ್ತು. ಹೀಗಾಗಿ, ಕಂಬಕ್ಕೆ ಕಟ್ಟಿದ ಪ್ರಾಣಿಯನ್ನು ಎಳೆಯುವಂತೆ, ನಾನು ಪ್ರತಿ ಅಕ್ಷರವನ್ನು ಎಡದಿಂದ ಬಲಕ್ಕೆ ಎಳೆಯುತ್ತಿದ್ದೆ" ಎಂದು ಪನ್ನು ಹೇಳಿದರು.

ಲಿಪ್ಯಂತರಕ್ಕೆ ಮೂಲ ಮತ್ತು ಟಾರ್ಗೆಟ್ ಲಿಪಿಗಳಲ್ಲಿ ಹೊಂದಾಣಿಕೆಯ ಉಚ್ಚಾರಣೆಯ ಅಗತ್ಯವಿರುತ್ತದೆ, ಆದರೆ ಈ ಪ್ರತಿಯೊಂದು ಲಿಪಿಗಳು ಇನ್ನೊಂದರಲ್ಲಿ ಸಮಾನ ಅಕ್ಷರವಿಲ್ಲದ ಕೆಲವು ಶಬ್ದಗಳನ್ನು ಹೊಂದಿದ್ದವು. ಒಂದು ಉದಾಹರಣೆಯೆಂದರೆ ಶಾಮುಖಿ ಅಕ್ಷರ ನೂನ್‌ ن - ಇದು ಮೌನ ಅನುನಾಸಿಕದ ಕಾರ್ಯವನ್ನು ನಿರ್ವಹಿಸುತ್ತದೆ ಮತ್ತು ಗುರುಮುಖಿಯಲ್ಲಿ ಈ ಅಕ್ಷರವಿಲ್ಲ. ಅಂತಹ ಪ್ರತಿಯೊಂದು ಶಬ್ದಕ್ಕೂ, ಪನ್ನು ಅಸ್ತಿತ್ವದಲ್ಲಿರುವ ಅಕ್ಷರಕ್ಕೆ ಕೆಲವು ಅಂಶಗಳನ್ನು ಸೇರಿಸುವ ಮೂಲಕ ಹೊಸ ಅಕ್ಷರವನ್ನು ರಚಿಸಿದರು.

ಪನ್ನು ಈಗ ಗುರುಮುಖಿಯಲ್ಲಿ 30ಕ್ಕೂ ಹೆಚ್ಚು ಫಾಂಟ್‌ಗಳಲ್ಲಿ ಕೆಲಸ ಮಾಡಬಲ್ಲರು ಮತ್ತು ಅವರು ಶಾಮುಖಿಗೆ ಮೂರು ಅಥವಾ ನಾಲ್ಕು ಫಾಂಟ್‌ಗಳನ್ನು ಹೊಂದಿದ್ದಾರೆ.

*****

ಪನ್ನು ರೈತಾಪಿ ಕುಟುಂಬಕ್ಕೆ ಸೇರಿದವರು. ಕುಟುಂಬವು ಕಟಾಹ್ರಿಯಲ್ಲಿ 10 ಎಕರೆ ಭೂಮಿಯನ್ನು ಹೊಂದಿದೆ; ಪನ್ನು ಅವರ ಮೂವರು ಪುತ್ರರು ಎಂಜಿನಿಯರ್ ಗಳಾಗಿದ್ದು, ಕೆನಡಾದಲ್ಲಿ ವಾಸಿಸುತ್ತಿದ್ದಾರೆ.

1958ರಲ್ಲಿ, ಅವರು ಹಿಂದಿನ ಪಟಿಯಾಲಾ ರಾಜ್ಯ ಮತ್ತು ಪೂರ್ವ ಪಂಜಾಬ್ ಸ್ಟೇಟ್ಸ್ ಯೂನಿಯನ್ (ಪಿಇಪಿಎಸ್‌ಯು) ನ ಸಶಸ್ತ್ರ ಪೊಲೀಸ್‌ ಪಡೆಗೆ ಸೇರಿದರು. ಪಟಿಯಾಲಾದ ಕಿಲಾ ಬಹದ್ದೂರ್‌ಗಢದಲ್ಲಿ ಸೀನಿಯರ್ ಗ್ರೇಡ್ ಕಾನ್ಸ್ಟೇಬಲ್ ಆಗಿ ಸೇರಿಕೊಂಡರು. 1962ರ ಯುದ್ಧದ ಸಮಯದಲ್ಲಿ, ಪನ್ನು ಅವರನ್ನು ಗುರುದಾಸ್ಪುರದ ಡೇರಾ ಬಾಬಾ ನಾನಕ್‌ ಎನ್ನುವಲ್ಲಿ ಹೆಡ್ ಕಾನ್ಸ್ಟೇಬಲ್ ಆಗಿ ನೇಮಿಸಲಾಯಿತು. ಆ ಸಮಯದಲ್ಲಿ, ರಾಡ್ಕ್ಲಿಫ್ ರೇಖೆಯನ್ನು ಪಂಜಾಬ್ ಸಶಸ್ತ್ರ ಪಡೆ ಪೊಲೀಸರು (ಪಿಎಪಿ) ಕಾವಲು ಕಾಯುತ್ತಿದ್ದರು.

1965ರಲ್ಲಿ, ಪಿಎಪಿ ಬಿಎಸ್ಎಫ್‌ ಪಡೆಯಲ್ಲಿ ವಿಲೀನಗೊಂಡಿತು ಮತ್ತು ಅವರನ್ನು ಆಗಿನ ಪಂಜಾಬಿನ ಭಾಗವಾಗಿದ್ದ ಲಾಹೌಲ್ ಮತ್ತು ಸ್ಪಿಟಿಯಲ್ಲಿ ನೇಮಿಸಲಾಯಿತು. ಅವರು ಲೋಕೋಪಯೋಗಿ ಇಲಾಖೆಯೊಂದಿಗೆ ಬಿಎಸ್ಎಫ್ ಸೇತುವೆ ನಿರ್ಮಾಣ ಕಾರ್ಯದಲ್ಲಿ ಕೆಲಸ ಮಾಡಿದರು, ನಂತರ ಸಬ್-ಇನ್ಸ್ಪೆಕ್ಟರ್ ಆಗಿ ಬಡ್ತಿ ಪಡೆದರು ಮತ್ತು ಅದರ ನಂತರ ಬಿಎಸ್ಎಫ್ ಸಹಾಯಕ ಕಮಾಂಡೆಂಟ್ ಆಗಿ ಬಡ್ತಿ ಪಡೆದರು.

Left: Pannu in uniform in picture taken at Kalyani in West Bengal, in 1984.
PHOTO • Courtesy: Kirpal Singh Pannu
He retired as Deputy Commandant in 1988 from Gurdaspur, Punjab, serving largely in the Border Security Force (BSF) in Jammu and Kashmir . With his wife, Patwant (right) in 2009
PHOTO • Courtesy: Kirpal Singh Pannu

ಎಡ: 1984ರಲ್ಲಿ ಪಶ್ಚಿಮ ಬಂಗಾಳದ ಕಲ್ಯಾಣಿಯ ಬಳಿ ಸಮವಸ್ತ್ರದಲ್ಲಿರುವ ಪನ್ನು. ಅವರು 1988ರಲ್ಲಿ ಪಂಜಾಬಿನ ಗುರುದಾಸ್ಪುರದಿಂದ ಡೆಪ್ಯುಟಿ ಕಮಾಂಡೆಂಟ್ ಆಗಿ ನಿವೃತ್ತರಾದರು, ಜಮ್ಮು ಮತ್ತು ಕಾಶ್ಮೀರದ ಗಡಿ ಭದ್ರತಾ ಪಡೆ (ಬಿಎಸ್ಎಫ್) ಯಲ್ಲಿ ಸೇವೆ ಸಲ್ಲಿಸಿದರು. 2009ರಲ್ಲಿ ಪತ್ನಿ ಪಟ್ವಂತ್ (ಬಲ) ಅವರೊಂದಿಗೆ

ಸಾಹಿತ್ಯ ಮತ್ತು ಕಾವ್ಯದ ಮೇಲಿನ ಅವರ ಪ್ರೀತಿಯು ಅವರ ಚಿಂತನೆಯ ಸ್ವಾತಂತ್ರ್ಯದಿಂದ ಮತ್ತು ಮನೆಯಿಂದ ದೂರವಿದ್ದು ಗಡಿಗಳಲ್ಲಿ ಕಳೆದ ಜೀವನದಿಂದ ಹುಟ್ಟಿಕೊಂಡಿದೆ ಎಂದು ಅವರು ಹೇಳುತ್ತಾರೆ. ಅವರು ತನ್ನ ಹೆಂಡತಿಗಾಗಿ ಬರೆದ ಒಂದು ಪದ್ಯವನ್ನು ಓದಿದರು:

"ಪಲ್ ಭೀ ಸಹಾ ನಾ ಜಾಯೆ ರೆ ತೇರಿ ಜುದಾಯಿ ಏ ಸಚ್ ಅಯ್

ಪರ್ ಇದ್ದಾ ಜುದಾಯಿಯಾನ್ ವಿಚ್ ಹಿ ಯೆ ಬೀತ್ ಜಾನಿ ಹೈ ಜಿಂದಗಿ ."

ನಿನಗಾಗಿ ಹಂಬಲಿಸದ ಒಂದು ಕ್ಷಣವೂ ನನ್ನ ಬದುಕಿನಲ್ಲಿಲ್ಲ

ಸದಾ ಹಂಬಲಿಸುತ್ತಲೇ ಬದುಕುವುದು ನನ್ನ ಹಣೆಬರಹವಾಗಿ ಹೋಯಿತು!

ಖೇಮ್ ಕರಣ್‌ ಎನ್ನುವಲ್ಲಿ ಬಿಎಸ್ಎಫ್ ಕಂಪನಿ ಕಮಾಂಡೆಂಟ್ ಆಗಿ ನೇಮಕಗೊಂಡಿದ್ದ ಅವರು ಮತ್ತು ಅವರ ಪಾಕಿಸ್ತಾನಿ ಸಹವರ್ತಿ ಇಕ್ಬಾಲ್ ಖಾನ್ ಒಂದು ಸಂಪ್ರದಾಯವನ್ನು ಹೊಂದಿದ್ದರು. "ಆ ದಿನಗಳಲ್ಲಿ, ಗಡಿಯ ಎರಡೂ ಬದಿಗಳ ಜನರು ಗಡಿಗೆ ಭೇಟಿ ನೀಡುತ್ತಿದ್ದರು. ಪಾಕಿಸ್ತಾನಿ ಅತಿಥಿಗಳಿಗೆ ಚಹಾವನ್ನು ನೀಡುವ ಜವಾಬ್ದಾರಿ ನನ್ನ ಮೇಲಿತ್ತು ಮತ್ತು ಭಾರತೀಯ ಅತಿಥಿಗಳು ಅವರ ಚಹಾ ಆತಿಥ್ಯವನ್ನು ಪಡೆದು ಹೋಗುವುದನ್ನು ಅವರು ಖಚಿತಪಡಿಸಿಕೊಳ್ಳುತ್ತಿದ್ದರು. ಕೆಲವು ಕಪ್ ಚಹಾ ನಾಲಿಗೆಯನ್ನು ಸಿಹಿಗೊಳಿಸುತ್ತದೆ ಮತ್ತು ಹೃದಯವನ್ನು ಮೃದುಗೊಳಿಸುತ್ತದೆ" ಎಂದು ಅವರು ಹೇಳಿದರು.

ಅಂತಿಮವಾಗಿ ಪನ್ನು ತನ್ನ ಗುರುಮುಖಿಯಿಂದ ಶಾಮುಖಿ ಲಿಪಿಯ ಪರಿವರ್ತನೆಯನ್ನು ತನ್ನನ್ನು ಪಂಜಾಬಿ ಸಾಹಿತ್ಯಕ್ಕೆ ಸಮರ್ಪಿಸಿಕೊಂಡ ನರವಿಜ್ಞಾನಿ ಡಾ.ಕುಲ್ಬೀರ್ ಸಿಂಗ್ ತಿಂಡ್ ಅವರಿಗೆ ತೋರಿಸಿದರು ಮತ್ತು ನಂತರ ಅವರು ತಮ್ಮ ವೆಬ್ಸೈಟ್ ಶ್ರೀ ಗ್ರಂಥ್ ಡಾಟ್ ಆರ್ಗ್‌ ತಾಣದಲ್ಲಿ ಪನ್ನು ಅವರ ಲಿಪ್ಯಂತರವನ್ನು ಅಪ್ಲೋಡ್ ಮಾಡಿದರು. "ಇದು ಅನೇಕ ವರ್ಷಗಳಿಂದ ಅಲ್ಲಿತ್ತು" ಎಂದು ಪನ್ನು ಹೇಳಿದರು.

2000 ಇಸವಿಯಲ್ಲಿ, ಮತ್ತೊಬ್ಬ ಸಾಹಿತ್ಯ ಪ್ರತಿಭೆ ಡಾ.ಗುರ್ಬಚನ್ ಸಿಂಗ್ ಅವರು ಶ್ರೀ ಗುರು ಗ್ರಂಥ ಸಾಹಿಬ್‌ನ ಅರೇಬಿಕ್ ಆವೃತ್ತಿಯಲ್ಲಿ ಪರ್ಷಿಯನ್ ಅಕ್ಷರಗಳನ್ನು ಬಳಸಿದರು. ಇದಕ್ಕೆ ಅವರು ಪನ್ನು ವಿನ್ಯಾಸಗೊಳಿಸಿದ ಪ್ರೋಗ್ರಾಂ ಬಳಸಿದರು.

Left: The cover page of Computran Da Dhanantar (Expert on Computers) by Kirpal Singh Pannu, edited by Sarvan Singh.
PHOTO • Courtesy: Kirpal Singh Pannu
Right: More pages of the Shri Guru Granth Sahib in both scripts
PHOTO • Courtesy: Kirpal Singh Pannu

ಎಡ: ಕೃಪಾಲ್ ಸಿಂಗ್ ಪನ್ನು ಅವರ ಕಂಪ್ಯೂಟ್ರನ್ ದಾ ಧನಾಂತರ್ (ಕಂಪ್ಯೂಟರ್ ತಜ್ಞ) ಮುಖಅಂಗ, ಸರ್ವನ್ ಸಿಂಗ್ ಸಂಪಾದಿಸಿದ್ದಾರೆ. ಬಲ: ಎರಡೂ ಲಿಪಿಗಳಲ್ಲಿ ಶ್ರೀ ಗುರು ಗ್ರಂಥ ಸಾಹಿಬ್‌ನ ಇನ್ನಷ್ಟು ಅಂಗಗಳು

ಪನ್ನು ನಂತರ ಪಂಜಾಬಿನ ಅತ್ಯಂತ ಗೌರವಾನ್ವಿತ ವಿಶ್ವಕೋಶಗಳಲ್ಲಿ ಒಂದಾದ ಮಹಾನ್ ಕೋಶ್ ಅನ್ನು ಲಿಪ್ಯಂತರ ಮಾಡುವಲ್ಲಿ ಕೆಲಸ ಮಾಡಿದರು, ಇದನ್ನು ಭಾಯ್ ಕಾನ್ ಸಿಂಗ್ ನಾಭಾ ಅವರು 14 ವರ್ಷಗಳಿಂದ ಸಂಕಲಿಸಿದ್ದರು, ಮುಖ್ಯವಾಗಿ ಗುರುಮುಖಿಯಲ್ಲಿ ಬರೆಯಲಾಗಿತ್ತು.

ಅವರು 1,000 ಅಂಗಗಳ ಕವನ ಸಂಕಲನ ಹೀರ್ ವಾರಿಸ್ ಕೆ ಶೆರೋನ್ ಕಾ ಹವಾಲಾವನ್ನು ಗುರುಮುಖಿಗೆ ಲಿಪ್ಯಂತರ ಮಾಡಿದರು.

1947ರ ಮೊದಲು ಭಾರತದ ಗುರುದಾಸ್ಪುರ ಜಿಲ್ಲೆಯ ಭಾಗವಾಗಿದ್ದ ಪಾಕಿಸ್ತಾನದ ಶಕರ್ಗಢ್ ತಹಸಿಲ್ನ ವರದಿಗಾರ್ತಿ 27 ವರ್ಷದ ಸಬಾ ಚೌಧರಿ, ಈ ಪ್ರದೇಶದ ಹೊಸ ಪೀಳಿಗೆಗೆ ಪಂಜಾಬಿ ತಿಳಿದಿಲ್ಲ, ಏಕೆಂದರೆ ಪಾಕಿಸ್ತಾನದಲ್ಲಿ ಉರ್ದು ಮಾತನಾಡಲು ಸೂಚಿಸಲಾಗಿದೆ. "ಶಾಲಾ ಕೋರ್ಸುಗಳಲ್ಲಿ ಪಂಜಾಬಿಯನ್ನು ಕಲಿಸಲಾಗುವುದಿಲ್ಲ" ಎಂದು ಹೇಳಿದರು. "ಇಲ್ಲಿನ ಜನರಿಗೆ ಗುರುಮುಖಿ ಗೊತ್ತಿಲ್ಲ, ನನಗೂ ಗೊತ್ತಿಲ್ಲ. ನಮ್ಮ ಹಿಂದಿನ ತಲೆಮಾರುಗಳಿಗೆ ಮಾತ್ರ ಇದು ಪರಿಚಿತವಾಗಿತ್ತು."

ಈ ಪ್ರಯಾಣವು ಸದಾ ಆಹ್ಲಾದಕರವಾಗಿರಲಿಲ್ಲ. 2013ರಲ್ಲಿ, ಕಂಪ್ಯೂಟರ್ ಸೈನ್ಸ್ ಪ್ರೊಫೆಸರ್ ಒಬ್ಬರು ಲಿಪ್ಯಂತರದ ಕೆಲಸವನ್ನು ತಮ್ಮದೆಂದು ಪ್ರತಿಪಾದಿಸಿದರು, ಇದರಿಂದಾಗಿ ಪನ್ನು ಅವರ ಹೇಳಿಕೆಗಳನ್ನು ನಿರಾಕರಿಸುವ ಪುಸ್ತಕವನ್ನು ಬರೆದರು. ಪನ್ನು ಮಾನನಷ್ಟ ಮೊಕದ್ದಮೆಯನ್ನು ಎದುರಿಸಿದರು; ಕೆಳಹಂತದ ನ್ಯಾಯಾಲಯವು ಪನ್ನು ಪರವಾಗಿ ತೀರ್ಪು ನೀಡಿದ ನಂತರ ಈ ಪ್ರಕರಣದ ಮೇಲ್ಮನವಿ ನ್ಯಾಯಾಲಯದಲ್ಲಿ ಬಾಕಿ ಉಳಿದಿದೆ.

ವಿಭಜನೆಯ ಉಂಟುಮಾಡಿದ ಗಾಯಗಳಲ್ಲಿ ಒಂದನ್ನು ಗುಣಪಡಿಸಲು ಮಾಡಿದ ಕೆಲಸಗಳ ಕುರಿತು ಹೆಮ್ಮೆ ಹೊಂದಿರುವುದರಲ್ಲಿ ಅರ್ಥವಿದೆ. ಅದಕ್ಕಾಗಿ ಅವರು ಹಲವು ವರ್ಷಗಳ ಕಾಲ ದುಡಿದಿದ್ದಾರೆ ಪಂಜಾಬಿ ಭಾಷೆಯ ಸೂರ್ಯ ಮತ್ತು ಚಂದ್ರರಂತಿರುವ ಈ ಎರಡು ಲಿಪಿಗಳು ಗಡಿಯುದ್ದಕ್ಕೂ ಹೊಳೆಯುತ್ತಲೇ ಇರುತ್ತವೆ. ಕಿರ್ಪಾಲ್ ಸಿಂಗ್ ಪನ್ನು ಪ್ರೀತಿ ಮತ್ತು ಹಂಬಲದ ಈ ಎರಡೂ ಲಿಪಿಗಳ ನಡುವೆ ಸೇತುವೆಯಾದ ನಾಯಕನಾಗಿ ಜನರ ನೆನಪಿನಲ್ಲಿರುತ್ತಾರೆ.

ಅನುವಾದ: ಶಂಕರ. ಎನ್. ಕೆಂಚನೂರು

Amir Malik

عامر ملک ایک آزاد صحافی، اور ۲۰۲۲ کے پاری فیلو ہیں۔

کے ذریعہ دیگر اسٹوریز Amir Malik
Editor : Kavitha Iyer

کویتا ایئر گزشتہ ۲۰ سالوں سے صحافت کر رہی ہیں۔ انہوں نے ’لینڈ اسکیپ آف لاس: دی اسٹوری آف این انڈین‘ نامی کتاب بھی لکھی ہے، جو ’ہارپر کولنس‘ پبلی کیشن سے سال ۲۰۲۱ میں شائع ہوئی ہے۔

کے ذریعہ دیگر اسٹوریز Kavitha Iyer
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

کے ذریعہ دیگر اسٹوریز Shankar N. Kenchanuru