"ನಾವು ನಮ್ಮ ಟ್ರ್ಯಾಕ್ಟರನ್ನು ತ್ರಿವರ್ಣದಿಂದ ಅಲಂಕರಿಸಿದ್ದೇವೆ ಏಕೆಂದರೆ ನಾವು ನಮ್ಮ ರಾಷ್ಟ್ರವನ್ನು ಪ್ರೀತಿಸುತ್ತೇವೆ" ಎಂದು ಶಂಶೇರ್ ಸಿಂಗ್ ಹೇಳುತ್ತಾರೆ. ಅವರ ಟ್ರ್ಯಾಕ್ಟರ್ ಅನ್ನು ಭಾರತೀಯ ಧ್ವಜದ ಬಣ್ಣಗಳಲ್ಲಿ ರಿಬ್ಬನ್, ಬಲೂನ್‌ಗಳು ಮತ್ತು ಹೂವುಗಳಿಂದ ಅಲಂಕರಿಸಲಾಗಿದೆ. "ಕೃಷಿ ನಮ್ಮ ತಾಯಿನಾಡಿನಂತೆಯೇ ನಮಗೆ ಪ್ರಿಯವಾದುದು" ಎಂದು ಅವರು ಹೇಳುತ್ತಾರೆ. “ನಾವು ಭೂಮಿಯನ್ನು ತಿಂಗಳುಗಟ್ಟಲೆ ಕೃಷಿ ಮಾಡುತ್ತೇವೆ, ನಮ್ಮ ತಾಯಂದಿರು ನಮ್ಮನ್ನು ನೋಡಿಕೊಳ್ಳುವ ಹಾಗೆ ನಾವು ಬೆಳೆಗಳನ್ನು ನೋಡಿಕೊಳ್ಳುತ್ತೇವೆ. ಈ ಉದ್ದೇಶವನ್ನು ಗಮನದಲ್ಲಿಟ್ಟುಕೊಂಡು ನಾವು ನಮ್ಮ ಟ್ರಾಕ್ಟರನ್ನು ತಾಯಿ ನೆಲದಂತೆ ಅಲಂಕರಿಸಿದ್ದೇವೆ.”

ದೆಹಲಿಯ ಪ್ರತಿಭಟನಾ ಸ್ಥಳಗಳಲ್ಲಿ ಮತ್ತು ಸುತ್ತಮುತ್ತಲಿನ ರೈತರು ತಮ್ಮ ಟ್ರಾಕ್ಟರುಗಳನ್ನು ವಿವಿಧ ವಿಷಯಗಳಲ್ಲಿ ಸಿದ್ಧಪಡಿಸುತ್ತಿದ್ದಾರೆ. ಈ ರ‍್ಯಾಲಿಯನ್ನು ವಿವಿಧ ರಾಜ್ಯಗಳು ಮತ್ತು ಥೀಮ್‌ಗಳನ್ನು ಪ್ರತಿನಿಧಿಸುವ ಫ್ಲೋಟ್‌ಗಳೊಂದಿಗೆ ರಾಜಧಾನಿಯಲ್ಲಿ ವಾರ್ಷಿಕ ಗಣರಾಜ್ಯೋತ್ಸವದ ಮೆರವಣಿಗೆಯಂತೆ ವರ್ಣರಂಜಿತ ಮತ್ತು ಅರ್ಥಪೂರ್ಣವಾಗಿಸಲು ಅವರು ಬಯಸುತ್ತಾರೆ. ಹೂವುಗಳು, ಧ್ವಜಗಳು ಮತ್ತು ಟ್ಯಾಬ್ಲೋಗಳಿಂದ ಅಲಂಕೃತಗೊಂಡ ಟ್ರಾಕ್ಟರುಗಳು ಹೊಸ ನೋಟವನ್ನು ಪಡೆದಿವೆ. ರೈತರು ಮತ್ತು ಕೃಷಿ-ಒಕ್ಕೂಟದಿಂದ ನೇಮಕಗೊಂಡ ತಂಡಗಳು ಕಳೆದ ಕೆಲವು ದಿನಗಳಿಂದ ಜನವರಿ 26ಕ್ಕೆ ಸಮಯಕ್ಕೆ ಸರಿಯಾಗಿ ಸಿದ್ಧಗೊಳ್ಳಲು ತಯಾರಿ ನಡೆಸಿವೆ.

"ಗೌರಿ ನಂಗಲ್‌ನಲ್ಲಿರುವ ನನ್ನ ಮನೆಯಿಂದ [ಟ್ರ್ಯಾಕ್ಟರ್] ಓಡಿಸಿಕೊಂಡು ಬರಲು ಎರಡು ದಿನಗಳು ಬೇಕಾಯಿತು" ಎಂದು 53 ವರ್ಷದ ಶಂಶೇರ್ ಹೇಳುತ್ತಾರೆ. ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ರೈತರ ಬೇಡಿಕೆಗಳನ್ನು ಪುನರುಚ್ಚರಿಸುವ ಮೆರವಣಿಗೆಯಲ್ಲಿ ಭಾಗವಹಿಸಲು ಅವರು ಹರಿಯಾಣ-ದೆಹಲಿ ಗಡಿಯಲ್ಲಿರುವ ಟಿಕ್ರಿಗೆ ಪಂಜಾಬ್‌ನ ಅಮೃತಸರ ಜಿಲ್ಲೆಯ ಈ ಊರಿನ ಇತರ 20 ರೈತರೊಂದಿಗೆ ಬಂದಿದ್ದಾರೆ.

PHOTO • Shivangi Saxena

ಮೇಲಿನ ಸಾಲು: ಬಲ್ಜೀತ್ ಸಿಂಗ್, ಮೊಮ್ಮಗ ನಿಶಾಂತ್ ಜೊತೆ ಸೇರಿ ಗಣರಾಜ್ಯೋತ್ಸವದ ಮೆರವಣಿಗೆಗಾಗಿ ತನ್ನ ಟ್ರ್ಯಾಕ್ಟರ್ ಅನ್ನು ಅಲಂಕರಿಸಿದರು. ಕೆಳಗಿನ ಸಾಲು: ಕೃಷಿಯನ್ನು ಪ್ರತಿನಿಧಿಸಲು ಬಲ್ಜಿಂದರ್ ಸಿಂಗ್ ತಮ್ಮ ಕಾರಿಗೆ ಹಸಿರು ಬಣ್ಣ ಬಳಿದಿದ್ದಾರೆ

ಸಿಂಘು ಮತ್ತು ದೆಹಲಿಯ ಸುತ್ತಮುತ್ತಲಿನ ಇತರ ಪ್ರತಿಭಟನಾ ಸ್ಥಳಗಳಲ್ಲಿ, ಲಕ್ಷಾಂತರ ಕೃಷಿಕರು ವಿರೋಧ ವ್ಯಕ್ತಪಡಿಸುತ್ತಿರುವ ಈ ಕಾನೂನುಗಳನ್ನು ಕೇಂದ್ರ ಸರ್ಕಾರವು ಮೊದಲು ಜೂನ್ 5, 2020ರಂದು ಸುಗ್ರೀವಾಜ್ಞೆಗಳಾಗಿ ಹೊರಡಿಸಿ, ನಂತರ ಸೆಪ್ಟೆಂಬರ್ 14ರಂದು ಸಂಸತ್ತಿನಲ್ಲಿ ಕೃಷಿ ಮಸೂದೆಗಳಾಗಿ ಪರಿಚಯಿಸಿ ಅದೇ ತಿಂಗಳ 20ರೊಳಗೆ ಕಾಯಿದೆಗಳನ್ನಾಗಿ ಆತುರದಿಂದ ಜಾರಿಗೆ ತಂದಿದೆ. ಆ ಕಾನೂನುಗಳೆಂದರೆ: ರೈತ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರೋತ್ಸಾಹ ಮತ್ತು ನೆರವು) ಕಾಯ್ದೆ, 2020 ; ರೈತರ (ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ 2020ರ ಒಪ್ಪಂದ ಮಸೂದೆ ; ಮತ್ತು ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆ, 2020.

ರೈತರು ಈ ಮಮೂರು ಕಾನೂನುಗಳನ್ನು ದೊಡ್ಡ ಕಾರ್ಪೊರೇಟ್‌ಗಳು ತಮ್ಮ ಗರಿಷ್ಠ ಶಕ್ತಿಯನ್ನು ರೈತರು ಮತ್ತು ಕೃಷಿಯ ಕಡೆಗೆ ಬಳಸಿಕೊಳ್ಳುವ ವೇದಿಕೆಯಾಗಿ ನೋಡುತ್ತಾರೆ. ಈ ಕಾನೂನುಗಳು ಕನಿಷ್ಟ ಬೆಂಬಲ ಬೆಲೆ (ಎಂಎಸ್‌ಪಿ), ಕೃಷಿ ಉತ್ಪಾದನೆ (ಇಳುವರಿ) ಮಾರುಕಟ್ಟೆ ಸಮಿತಿಗಳು (ಎಪಿಎಂಸಿ), ಮತ್ತು ಸರ್ಕಾರಿ ಖರೀದಿ ಸೇರಿದಂತೆ ರೈತರಿಗೆ ನೀಡುವ ಪ್ರಮುಖ ಬೆಂಬಲ ರೂಪಗಳನ್ನು ಹಾಳುಗೆಡವುತ್ತವೆ. ಈ ಕಾನೂನುಗಳು ಪ್ರತಿ ಭಾರತೀಯರ ಮೇಲೆ ಪರಿಣಾಮ ಬೀರಲಿರುವುದರಿಂದಲೂ ಅವುಗಳನ್ನು ಟೀಕಿಸಲಾಗುತ್ತಿದೆ. ದೇಶದ ಎಲ್ಲಾ ನಾಗರಿಕರ ಕಾನೂನು ನೆರವು ಪಡೆಯುವ ಹಕ್ಕನ್ನು ಈ ಕಾನೂನುಗಳು ಕಸಿದುಕೊಳ್ಳುತ್ತವೆ, ಇದು ಭಾರತದ ಸಂವಿಧಾನದ 32ನೇ ವಿಧಿಯನ್ನು ದುರ್ಬಲಗೊಳಿಸುತ್ತದೆ.

ಬಲ್ಜೀತ್ ಸಿಂಗ್ ತಮ್ಮ ಟ್ರ್ಯಾಕ್ಟರನ್ನು ಉದ್ದನೆಯ ವರ್ಣರಂಜಿತ ಹೂಮಾಲೆ ಮತ್ತು ಭಾರತೀಯ ಧ್ವಜದಿಂದ ಅಲಂಕರಿಸಿದ್ದಾರೆ. ರೋಹ್ಟಕ್ ಜಿಲ್ಲೆಯ ಖೇರಿ ಸಾಧ್ ಗ್ರಾಮದಿಂದ ತಮ್ಮ 14 ವರ್ಷದ ಮೊಮ್ಮಗ ನಿಶಾಂತ್ ಜೊತೆ ಪ್ರತಿಭಟನೆಯಲ್ಲಿ ಭಾಗವಹಿಸಲು ಟ್ರ್ಯಾಕ್ಟರ್‌ ಓಡಿಸಿಕೊಂಡು ಬಂದರು. ಅವರು ತಮ್ಮ ಮೊಮ್ಮಗ ಮತ್ತು ಅವರು ಗೌರವದ ಸೂಚಕವಾಗಿ ಹರಿಯಾಣದ ಸಾಂಪ್ರದಾಯಿಕ ಉಡುಪನ್ನು ಧರಿಸಲಿದ್ದಾರೆ ಮತ್ತು ಅವರ ರಾಜ್ಯದ ಇತರ ರೈತರನ್ನು ತಾವು ಪ್ರತಿನಿಧಿಸುವುದಾಗಿ ಅವರು ಹೇಳುತ್ತಾರೆ.

PHOTO • Shivangi Saxena

ರ‍್ಯಾಲಿಗಾಗಿ ಅನೇಕ ಕಲಾವಿದರು ಪೋಸ್ಟರ್‌ಗಳು, ಬ್ಯಾನರ್‌ಗಳು ಮತ್ತು ಹೋರ್ಡಿಂಗ್‌ಗಳನ್ನು ಮಾಡಿದರು. ಭಾರತೀಯ ಕಿಸಾನ್ ಯೂನಿಯನ್ ವಕ್ತಾರರು ಹೀಗೆ ಹೇಳುತ್ತಾರೆ: 'ಸಾಮಾಜಿಕ ದುಷ್ಕೃತ್ಯಗಳ ಬಗ್ಗೆ ಜಾಗೃತಿ ಮೂಡಿಸಲು ನಾವು ರೈತರ ಪ್ರತಿಭಟನೆಯ ಈ ವೇದಿಕೆಯನ್ನು ಬಳಸುತ್ತಿದ್ದೇವೆ '

"ಪ್ರತಿಭಟನೆಯಲ್ಲಿ ಭಾಗವಹಿಸಲೆಂದೇ ನಾನು ಇತ್ತೀಚೆಗೆ ಮಹೀಂದ್ರಾ ಟ್ರ್ಯಾಕ್ಟರ್ ಖರೀದಿಸಿದೆ. ನಾನು ಇದಕ್ಕಾಗಿ ನನ್ನ ಸ್ವಂತ ಹಣವನ್ನು ಬಳಸಿದ್ದೇನೆ. ನಾವು ಯಾರಿಂದಲೂ ಹಣ ಪಡೆಯುವುದಿಲ್ಲ ಎಂದು ಸರ್ಕಾರಕ್ಕೆ ತೋರಿಸುವುದಕ್ಕಾಗಿ ಇದು. ನಮ್ಮ ಹಣವನ್ನು ನಾವೇ ಸಂಪಾದಿಸಿದ್ದೇವೆ” ಎಂದು 57 ವರ್ಷದ ರೈತ ಹೇಳುತ್ತಾರೆ.

ಕಾರುಗಳು ಸಹ ಮೆರವಣಿಗೆಯಲ್ಲಿ ಸೇರಲಿವೆ. 27 ವರ್ಷದ ಬಲ್ಜಿಂದರ್ ಸಿಂಗ್ ಅವರು ‘ಕಿಸಾನ್ ಗಣರಾಜ್ಯೋತ್ಸವ ಮೆರವಣಿಗೆಯಲ್ಲಿ’ ಭಾಗವಹಿಸಲು ಪಂಜಾಬ್‌ನ ಮೊಗಾ ಜಿಲ್ಲೆಯ ಮೊಗಾ ಪಟ್ಟಣದಿಂದ ಬಂದಿದ್ದಾರೆಂದು ಹೇಳುತ್ತಾರೆ. ಅವರು ತಮ್ಮ ಇನ್ನೋವಾವನ್ನು 350 ಕಿಲೋಮೀಟರ್ ದೂರದಿಂದ ಟಿಕ್ರಿಗೆ ಓಡಿಸಿಕೊಂಡು ಬಂದರು. ಬಲ್ಜಿಂದರ್ ಒಬ್ಬ ಕಲಾವಿದ ಮತ್ತು ಕೃಷಿಯನ್ನು ಪ್ರತಿನಿಧಿಸಲು ಕಾರಿನ ಹೊರಭಾಗವನ್ನು ಹಸಿರು ಬಣ್ಣದಲ್ಲಿ ಚಿತ್ರಿಸಿದ್ದಾರೆ. ಕಾರಿನ ಹಿಂಭಾಗದಲ್ಲಿ ಅವರು ‘ಪಂಜಾಬ್ ವೆಡ್ಸ್ ದೆಹಲಿ’ ಎಂಬ ಘೋಷಣೆಯನ್ನುಬರೆದಿದ್ದಾರೆ. ಅವರು ವಿವರಿಸುತ್ತಾರೆ: "ಇದರರ್ಥ ನಾವು, ಪಂಜಾಬ್‌ನ ಜನರು ದೆಹಲಿಯ ಕೈ ಗೆದ್ದ ನಂತರವೇ ಹೋಗುತ್ತೇವೆ." ಅವರ ನಾಯಕ ಸ್ವಾತಂತ್ರ್ಯ ಹೋರಾಟಗಾರರಾದ ಭಗತ್ ಸಿಂಗ್, ಎಂದು ಅವರು ಹೇಳುತ್ತಾರೆ.

ರ‍್ಯಾಲಿಯ ತಯಾರಿಯಾಗಿ, ಇತರ ಅನೇಕ ಕಲಾವಿದರು ಪೋಸ್ಟರ್‌ಗಳು, ಬ್ಯಾನರ್‌ಗಳು ಮತ್ತು ಹೋರ್ಡಿಂಗ್‌ಗಳನ್ನು ತಯಾರಿಸಿದ್ದಾರೆ. ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ಕಲಾವಿದರ ಪಟ್ಟಿಯನ್ನು ವಿಕಾಸ್ (ಅವರು ಈ ಹೆಸರನ್ನು ಮಾತ್ರ ಬಳಸಲು ಬಯಸುತ್ತಾರೆ) ರಚಿಸಿದ್ದಾರೆ ಎಂದು ಬಿಕೆಯು (ಉಗ್ರಾಹನ್) ಮಾಧ್ಯಮ ವಕ್ತಾರರು ಹೇಳುತ್ತಾರೆ, “ನಾವು ರೈತರ ಪ್ರತಿಭಟನೆಯ ಈ ವೇದಿಕೆಯನ್ನು ದಲಿತರ ವಿರುದ್ಧದ ದೌರ್ಜನ್ಯ ಮತ್ತು ವಲಸೆ ಬಿಕ್ಕಟ್ಟಿನಂತಹ ದುರಂತಗಳ ಕುರಿತು ಸಾಮಾಜಿಕ ಜಾಗೃತಿ ಮೂಡಿಸಲು ಬಳಸುತ್ತಿದ್ದೇವೆ. ನಮ್ಮ ಗುರುಗಳ ಬೋಧನೆಗಳೊಂದಿಗೆ ನಾವು ದೊಡ್ಡ ಹೋರ್ಡಿಂಗ್‌ಗಳನ್ನು ಮಾಡುತ್ತಿದ್ದೇವೆ ಮತ್ತು ಇವುಗಳನ್ನು ಪೂರ್ಣಗೊಳಿಸಲು ಹಗಲು ರಾತ್ರಿ ಶ್ರಮಿಸುತ್ತಿದ್ದೇವೆ.”

ಹೀಗೆ, ಜನವರಿ 26ರ ಬೆಳಿಗ್ಗೆ, ಟ್ರಾಕ್ಟರುಗಳು, ಕಾರುಗಳು ಮತ್ತು ಜನರು ಈ ಅಭೂತಪೂರ್ವ ಮೆರವಣಿಗೆಗೆ ಹೊರಟಿದ್ದಾರೆ - ಪ್ರತಿಭಟನಾಕಾರರು ಖಂಡಿತವಾಗಿಯೂ ತಮ್ಮ ಗಮ್ಯಸ್ಥಾನವಾದ ಮಸೂದೆಗಳ ರದ್ದುಪಡಿಸುವಿಕೆಯನ್ನು ತಲುಪುತ್ತೇವೆನ್ನುವ ವಿಶ್ವಾಸದಲ್ಲಿದ್ದಾರೆ.

ಅನುವಾದ - ಶಂಕರ ಎನ್. ಕೆಂಚನೂರು

Shivangi Saxena

شیوانگی سکسینہ نئی دہلی کے مہاراجہ اگرسین انسٹی ٹیوٹ آف مینجمنٹ اسٹڈیز میں صحافت اور ذرائع ابلاغ کی تیسرے سال کی طالبہ ہیں۔

کے ذریعہ دیگر اسٹوریز Shivangi Saxena
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

کے ذریعہ دیگر اسٹوریز Shankar N. Kenchanuru