ನಾನು ಜಾಮ್ ನಗರ ಜಿಲ್ಲೆಯ ಲಾಲ್ಪುರ್ ತಾಲ್ಲೂಕಿನ ಸಿಂಗಚ್ ಗ್ರಾಮದ ರಾಬರಿ ಕುಟುಂಬದಿಂದ ಬಂದವಳು. ಬರವಣಿಗೆ ನನ್ನ ಪಾಲಿಗೆ ಹೊಸದು, ಇದು ಕೊರೊನಾ ಸಮಯದಲ್ಲಿ ನಾನು ರೂಢಿಸಿಕೊಂಡ ಆಸಕ್ತಿ. ಗ್ರಾಮೀಣ ಸಮುದಾಯಗಳೊಂದಿಗೆ ಕೆಲಸ ಮಾಡುವ ಸರ್ಕಾರೇತರ ಸಂಸ್ಥೆಯೊಂದಿಗೆ ಸಮುದಾಯ ಸಂಘಟಕಿಯಾಗಿ ನಾನು ಕೆಲಸ ಮಾಡುತ್ತೇನೆ. ನಾನು ದರೂಶಿಕ್ಷಣದ ಮೂಲಕ ಗುಜರಾತಿ ವಿಷಯದಲ್ಲಿ ಪದವಿಯನ್ನು ಓದುತ್ತಿದ್ದೇನೆ. ಕಳೆದ 9 ತಿಂಗಳಿನಿಂದ ನನ್ನ ಸಮುದಾಯದ ಜನರಲ್ಲಿ ಶಿಕ್ಷಣದ ಬಗ್ಗೆ ಜಾಗೃತಿ ಮತ್ತು ಆಸಕ್ತಿಯನ್ನು ಬೆಳೆಸಲು ಪ್ರಯತ್ನಿಸುತ್ತಿದ್ದೆ. ಮುಂದುವರಿಯಬಹುದೇ ಎಂದು ನನಗೆ ಖಚಿತವಿಲ್ಲ. ನನ್ನ ಸಮುದಾಯದಲ್ಲಿ ಮಹಿಳೆಯರಲ್ಲಿ ಶಿಕ್ಷಣದ ಮಟ್ಟವು ಆತಂಕಕಾರಿಯಾಗಿ ಕಡಿಮೆಯಿದೆ. ನೀವು ಇಲ್ಲಿ ಕೆಲವೇ ಕೆಲವು ವಿದ್ಯಾವಂತ ಮಹಿಳೆಯರನ್ನು ಕಾಣಬಹುದು.

ನಾವು ಮೂಲತಃ, ಚರಣ್, ಭರ್ವಾಡ್, ಅಹಿರ್ ಮುಂತಾದ ಇತರ ಸಮುದಾಯಗಳೊಂದಿಗೆ ಕುರಿ ಸಾಕಾಣಿಕೆಯಲ್ಲಿ ತೊಡಗಿರುವ ಗ್ರಾಮೀಣ ಸಮುದಾಯಗಳಾಗಿದ್ದೆವು. ನಮ್ಮಲ್ಲಿ ಅನೇಕರು ಈಗ ನಮ್ಮ ಸಾಂಪ್ರದಾಯಿಕ ಉದ್ಯೋಗಗಳನ್ನು ತ್ಯಜಿಸಿದ್ದಾರೆ ಮತ್ತು ದೊಡ್ಡ ಕಂಪನಿಗಳಲ್ಲಿ ಅಥವಾ ಹೊಲಗಳಲ್ಲಿ ದಿನಗೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. ಕಾರ್ಖಾನೆಗಳು ಮತ್ತು ಹೊಲಗಳಲ್ಲಿ ಕಾರ್ಮಿಕರಾಗಿ ದುಡಿಯುವ ಮಹಿಳೆಯರಿದ್ದಾರೆ. ಸಮಾಜವು ಈ ಮಹಿಳೆಯರನ್ನು ಮತ್ತು ಅವರ ಕೆಲಸವನ್ನು ಸ್ವೀಕರಿಸುತ್ತದೆ, ಆದರೆ ನನ್ನಂತೆ ಏಕಾಂಗಿಯಾಗಿ ಕೆಲಸ ಮಾಡುವವರಿಗೆ ಸಾಮಾಜಿಕ ಅನುಮೋದನೆಯನ್ನು ಪಡೆಯಲು ಕಷ್ಟವಾಗುತ್ತದೆ.

ಕವಿಯ ಕವಿತೆಯಲ್ಲಿ ದಂಪತಿಗಳ ನಡುವಿನ ಕಾಲ್ಪನಿಕ ಸಂಭಾಷಣೆಯು ಹಿನ್ನೆಲೆಯಲ್ಲಿ ಪ್ರತಿಧ್ವನಿಸುತ್ತದೆ:

ಭರತ್: ನೋಡು, ನಿನ್ನ ಕೆಲಸ ಅಥವಾ ವೃತ್ತಿಜೀವನ ಒಂದು ವಿಷಯವೇ, ಆದರೆ ನನ್ನ ತಂದೆತಾಯಿಗಳು... ಅವರಿಗೆ ಒಳ್ಳೆಯ ಸೇವೆ ನೀಡಬೇಕು. ನಾನು ಇಂದು ಏನಾಗಿದ್ದೇನೆಯೋ ಹಾಗೆ ಆಗುವುದಕ್ಕೆ ಸಹಾಯ ಮಾಡಲು ಅವರು ಎಷ್ಟು ಕಷ್ಟಪಟ್ಟಿದ್ದಾರೆಂದು ನಿಂಗೆ ಗೊತ್ತಿಲ್ಲ.

ಜಸ್ಮಿ ತಾ: ಓಹ್!‌ ಹೌದಪ್ಪ ಇಂತಹ ವಿಷಯಗಳು ನನಗೆ ಗೊತ್ತಾಗಲ್ಲ. ಯಾಕಂದ್ರೆ ನಮ್ಮಪ್ಪ ಅಮ್ಮ ನನ್ನನ್ನ ನಾನು ಓದಿ, ಕಲಿತು ಎಲ್ಲಾ ಆದ ಮೇಲೆ ಹುಟ್ಸಿದ್ರು ನೋಡು!

ಭರತ್:‌ ಅದ್ಯಾಕೆ ಹಾಗೆ ಚುಚ್ಚಿ ಮಾತಾಡ್ತೀಯ? ನಾನು ಹೇಳ್ತಿರೋದು ಏನಂದ್ರೆ ದುಡಿಯೋದಕ್ಕೆ ನಾನಿದ್ದೀನಿ, ನೀನು ಮನೆಯನ್ನ ನೋಡ್ಕಂಡು ಆರಾಮಾಗಿರು ಅಂತ. ಅದ್ಕಿಂತ ಹೆಚ್ಗೆ ಏನ್‌ ಬೇಕು ನಿಂಗೆ?

ಜಸ್ಮಿತಾ: ಹೌದಪ್ಪ! ನಂಗಿನ್ನೇನು ಬೇಕು. ನಾನೊಂದು ನಿರ್ಜೀವ ವಸ್ತು ನೋಡು. ವಸ್ತುವಿಗೆ ಆಸೆಗಳೆಲ್ಲಿರುತ್ತೆ ಅಲ್ವಾ? ನಾನು ಸಂತೋಷವಾಗಿ ಮನೆ ಕೆಲಸ ಮಾಡ್ತೀನಿ, ತಿಂಗ್ಳ ಕೊನೇಲಿ ನಿನ್ನ ಮುಂದೆ ಕೈ ಚಾಚಿ ನಿಂತ್ಕೊತೀನಿ… ಆಗ ನೀನು ಸಿಟ್ಟು ಮಾಡ್ಕೊತೀಯ… ಆಗ ಚೆನ್ನಾಗಿರತ್ತೆ. ನಾನು ಅದನ್ನೂ ಸಹಿಸ್ಕೋತಿನಿ. ಯಾಕಂದ್ರೆ ನೀನು ಕೆಲಸ ಮಾಡೋನು, ನಾನು ಮನೇಲಿರೋಳು.

ಭರತ್: ನೋಡು ಸಿಲ್ಲಿಯಾಗಿ ಮಾತಾಡ್ಬೇಡ. ನೀನು ಈ ಕುಟುಂಬದ ಗೌರವ. ನಿನ್ನನ್ನ ಹೊರಗೆ ತಿರುಗಾಡೋದಕ್ಕೆ ಬಿಡೋಕಾಗಲ್ಲ ನಾನು.

ಜಸ್ಮಿತಾ: ಹೌದು, ಹೌದು, ನಾನು ಮರೆತೇಬಿಟ್ಟಿದ್ದೆ. ನೀನು ಹೇಳಿದ್ದು ಸರಿ, ಹೊರಗೆ ಕೆಲಸ ಮಾಡೋ ಹೆಣ್ಣು ಮಕ್ಕಳು ನಾಚಿಕೆಗೆಟ್ಟವರು, ಕ್ಯಾರೆಕ್ಟರ್‌ ಇಲ್ಲದವರು.

ಇದು ವಾಸ್ತವ. ನಮ್ಮ ಬಾಧ್ಯತೆಗಳನ್ನು ನಮಗೆ ನೆನಪಿಸಲು ಪ್ರತಿಯೊಬ್ಬರೂ ಸಿದ್ಧರಿದ್ದಾರೆ. ಅವಳು ಏನು ಮಾಡಬೇಕು ಎಂದು ಹೇಳಲು ಅವರು ಸದಾ ಉತ್ಸುಕರಾಗಿರುತ್ತಾರೆ. ಆದರೆ ಆಕೆಗೆ ಏನು ಬೇಕೆನ್ನುವುದನ್ನು ಯಾರೂ ಕೇಳಿಸಿಕೊಳ್ಳಲು ಯಾರೂ ತಯಾರಿರುವುದಿಲ್ಲ...

ಜಿಗ್ನಾ ರಾಬರಿಯವರ ದನಿಯಲ್ಲಿ ಕವಿತೆಯ ಗುಜರಾತಿ ಅವತರಣಿಕೆಯನ್ನು ಆಲಿಸಿ

ಪ್ರತಿಷ್ಠಾ ಪಾಂಡ್ಯ ಅವರ ದನಿಯಲ್ಲಿ ಕವಿತೆಯ ಇಂಗ್ಲಿಷ್‌ ಅವತರಣಿಕೆಯನ್ನು ಆಲಿಸಿ

ಹಕ್ಕುಗಳು

ಎಲ್ಲೋ ಕಳೆದು ಹೋಗಿದೆ
ನನ್ನ ಹಕ್ಕುಗಳ ಪಟ್ಟಿ

ನನ್ನ ಬಾಧ್ಯತೆಗಳು ಸದಾ ಕಣ್ಣ ಮುಂದಿರುತ್ತವೆ
ನನ್ನ ಹಕ್ಕುಗಳೇ ಕಾಣುತ್ತಿಲ್ಲ
ಹುಡುಕಬೇಕಿದೆ ಅವುಗಳನ್ನು

ಅತ್ಯಂತ ನಿಷ್ಟೆಯಿಂದ ನಿರ್ವಹಿಸಿದ್ದೇನೆ
ನನ್ನ ಹೊಣೆಗಾರಿಕೆಗಳನ್ನು.
ನನ್ನ ಹಕ್ಕುಗಳನ್ನೂ ಪಡೆಯಲು ಬಿಡಿ ನನಗೆ

ಅದು ಮಾಡು, ಇದು ಮಾಡು ಎನ್ನುತ್ತೀರಿ
ಆಗೊಮ್ಮೆ, ಈಗೊಮ್ಮೆಯಾದರೂ ಕೇಳಿ
ನನಗೆ ಏನು ಮಾಡಬೇಕೆನ್ನಿಸುತ್ತದೆ ಎನ್ನುವುದನ್ನು.

ನೀನು ಅದು ಮಾಡಬಾರದು, ನೀನು ಇದು ಮಾಡಬಾರದು
ಎಂದು ಉಪದೇಶ ಕೊಡುತ್ತಲೇ ಇರುತ್ತೀರಿ
ಅಪರೂಪಕ್ಕೊಮ್ಮೆಯಾದರೂ ಹೇಳಿ
ನಿನಗಿಷ್ಟ ಬಂದಂತೆ ಮಾಡೆಂದು.

ಮನೆಯ ನಾಲ್ಕು ಗೋಡೆಗಳು
ನಿಮಗಿಂತಲೂ ಹೆಚ್ಚು ಚಿರಪರಿಚಿತ ನನಗೆ
ಆಕಾಶದೆಡೆ ಗರಿಬಿಚ್ಚುವ ಆಶೆಯಿದೆ ನನಗೆ
ಒಮ್ಮೆಯಾದರೂ ಹಾರಲು ಬಿಡಿ.

ಕಾಲಾಂತರದಿಂದ ಕೂಡಿಟ್ಟಿದ್ದೀರಿ ಹೆಣ್ಣನ್ನು
ಈಗಲಾದರೂ ಉಸಿರಾಡಲಿ ಅವಳು
ಕೊಂಚ ನಿಮ್ಮ ಬಿಗಿಮುಷ್ಟಿ ಸಡಿಲಿಸಿ.

ಬೇಕೆನಿಸಿದ ಬಟ್ಟೆ ತೊಡುವುದು,
ಬೇಕೆಂದಲ್ಲಿಗೆ ಹೋಗುವುದು
ಸ್ವಾತಂತ್ರ್ಯವೆಂದರೆ ಇಷ್ಟೇ ಅಲ್ಲ
ಒಮ್ಮೆಯಾದರೂ ಕೇಳಿ ನೋಡಿ ನನ್ನ ಬಳಿ
ನಿನ್ನ ಆಸೆಯೇನೆಂದು
ನಿನ್ನ ಬದುಕಿನ ಗುರಿಯೇನೆಂದು.

ಅನುವಾದ: ಶಂಕರ ಎನ್. ಕೆಂಚನೂರು

Poem and Text : Jigna Rabari

جِگنا رباری، سہجیون سے وابستہ ایک سماجی کارکن ہیں اور گجرات کے دوارکا اور جام نگر ضلعوں میں اور اس کے آس پاس کے علاقوں میں کام کرتی ہیں۔ وہ اپنی برادری کی اُن چند تعلیم یافتہ عورتوں میں سے ہیں جو زمینی کام کر رہی ہیں اور تجربات کو قلم بند کر رہی ہیں۔

کے ذریعہ دیگر اسٹوریز Jigna Rabari
Painting : Labani Jangi

لابنی جنگی مغربی بنگال کے ندیا ضلع سے ہیں اور سال ۲۰۲۰ سے پاری کی فیلو ہیں۔ وہ ایک ماہر پینٹر بھی ہیں، اور انہوں نے اس کی کوئی باقاعدہ تربیت نہیں حاصل کی ہے۔ وہ ’سنٹر فار اسٹڈیز اِن سوشل سائنسز‘، کولکاتا سے مزدوروں کی ہجرت کے ایشو پر پی ایچ ڈی لکھ رہی ہیں۔

کے ذریعہ دیگر اسٹوریز Labani Jangi
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

کے ذریعہ دیگر اسٹوریز Shankar N. Kenchanuru