ಕಳೆದ ಮೂರು ವರ್ಷಗಳಲ್ಲಿ ನೀವು ಎಷ್ಟು ಆಸ್ಪತ್ರೆಯಲ್ಲಿ ತೋರಿಸಿಕೊಂಡಿದ್ದೀರಿ?

ಈ ಪ್ರಶ್ನೆಯನ್ನು ಕೇಳುತ್ತಿದ್ದ ಹಾಗೆ ಸುಶೀಲಾ ದೇವಿ ಮತ್ತು ಅವರ ಪತಿ ಮನೋಜ್ ಕುಮಾರ್ ಅವರ ಮುಖದಲ್ಲಿ ನಿರಾಶೆ ಮತ್ತು ಆಯಾಸದ ಮೋಡ ಕವಿಯುತ್ತದೆ. ಜೂನ್ 2017ರಲ್ಲಿ ಬಂಡಿಕುಯಿ ನಗರದ ಮಧುರ್ ಆಸ್ಪತ್ರೆಯಲ್ಲಿ ಸುಶೀಲಾರಿಗೆ ಮೊದಲ ಬಾರಿಗೆ ಸಂತಾನ ಹರಣ ಚಿಕಿತ್ಸೆ ನಡೆಸಿದ ನಂತರ ಅವರಿಬ್ಬರಿಗೂ (ಅವರ ಹೆಸರುಗಳನ್ನು ಇಲ್ಲಿ ಬದಲಾಯಿಸಲಾಗಿದೆ) ತಾವು ಅಲೆದ ಆಸ್ಪತ್ರೆಗಳು ಎಷ್ಟೆನ್ನುವುದು, ಪಡೆದ ಚಿಕಿತ್ಸೆಗಳು ಯಾವುವು ಯಾವುದೆನ್ನುವದು  ನೆನಪಿಲ್ಲ.

ಮದುವೆಯಾದ 10 ವರ್ಷಗಳಲ್ಲಿ ಮೂರು ಹೆಣ್ಣು ಮಕ್ಕಳ ನಂತರ ಒಬ್ಬ ಮಗ ನಾಲ್ಕನೇ ಮಗುವಾಗಿ ಜನಿಸಿದನು, ತಮ್ಮ ಮಗನ ಜನನದ ಒಂದು ವರ್ಷದ ನಂತರ, ದಂಪತಿಗಳು ತಮ್ಮ ಕುಟುಂಬ ಮತ್ತು ಜೀವನವನ್ನು ಉತ್ತಮವಾಗಿ ನಿರ್ವಹಿಸುವ ಆಶಯದೊಂದಿಗೆ 27 ವರ್ಷದ ಸುಶೀಲಾರಿಗೆ ಟ್ಯೂಬಲ್ ಲಿಗೇಷನ್‌ (ಸಂತಾನ ಶಕ್ತಿ ಹರಣ ಚಿಕಿತ್ಸೆ) ನಿರ್ಧರಿಸಿದರು. ರಾಜಸ್ಥಾನದ ದೌಸಾ ತಹಸಿಲ್‌ನಲ್ಲಿರುವ ಅವರ ಹಳ್ಳಿ ಧನಿ ಜಮಾ, ಧನಿ ಜಮಾದಿಂದ ಕೇವಲ ಮೂರು ಕಿಲೋಮೀಟರ್ ದೂರದಲ್ಲಿರುವ ಕುಂಡಲ್ ಗ್ರಾಮದಲ್ಲಿ ಸರ್ಕಾರಿ ಸಾರ್ವಜನಿಕ ಆರೋಗ್ಯ ಕೇಂದ್ರ (ಪಿಎಚ್‌ಸಿ) ಇದ್ದರೂ ತಮ್ಮ ಹಳ್ಳಿಯಿಂದ 20 ಕಿಲೋಮೀಟರ್ ದೂರದಲ್ಲಿರುವ ಬಂಡಿಕುಯಿಯ ಖಾಸಗಿ ಆಸ್ಪತ್ರೆಯನ್ನೇ ಅವರು ಚಿಕಿತ್ಸೆಗಾಗಿ ಆದ್ಯತೆಯಾಗಿ ಆಯ್ದುಕೊಂಡರು.

“[ಸರ್ಕಾರಿ] ಆರೋಗ್ಯ ಕೇಂದ್ರಗಳಲ್ಲಿ ಸಂತಾನ ಶಕ್ತಿ ಹರಣ ಶಿಬಿರಗಳು ಹೆಚ್ಚಾಗಿ ಚಳಿಗಾಲದ ತಿಂಗಳುಗಳಲ್ಲಿ ನಡೆಯುತ್ತವೆ. ಆ ಸಮಯದಲ್ಲಿ ಗಾಯವು ವೇಗವಾಗಿ ಗುಣವಾಗುವುದರಿಂದ ಮಹಿಳೆಯರು ಚಳಿಯ ತಿಂಗಳುಗಳಲ್ಲಿ ಸಂತಾನ ಶಕ್ತಿ ಹರಣ ಚಿಕಿತ್ಸೆಗೆ ಒಳಗಾಗಲು ಬಯಸುತ್ತಾರೆ. ಬೇಸಿಗೆಯ ತಿಂಗಳುಗಳಲ್ಲಿ ಅವರು ಶಸ್ತ್ರಚಿಕಿತ್ಸೆ ಬಯಸಿದರೆ, ನಾವು ಅವರನ್ನು ದೌಸಾ ಮತ್ತು ಬಂಡಿಕುಯಿಯಲ್ಲಿನ ಖಾಸಗಿ ಆಸ್ಪತ್ರೆಗಳಿಗೆ ಕರೆದೊಯ್ಯುತ್ತೇವೆ ”ಎಂದು ಮಾನ್ಯತೆ ಪಡೆದ ಸಾಮಾಜಿಕ ಆರೋಗ್ಯ ಕಾರ್ಯಕರ್ತೆ (ಆಶಾ) 31 ವರ್ಷದ ಸುನೀತಾ ದೇವಿ ಹೇಳುತ್ತಾರೆ. ಅವರು ಈ ದಂಪತಿಗಳೊಂದಿಗೆ 25 ಹಾಸಿಗೆಗಳ ಸಾಮಾನ್ಯ ಆಸ್ಪತ್ರೆಯಾದ ಮಧುರ್ ಆಸ್ಪತ್ರೆಗೆ ಹೋದರು. ಆಸ್ಪತ್ರೆಯನ್ನು ರಾಜ್ಯ ಕುಟುಂಬ ಕಲ್ಯಾಣ ಯೋಜನೆಯಡಿ ನೋಂದಾಯಿಸಲಾಗಿರುವುದರಿಂದ ಇಲ್ಲಿ ಸಂತಾನ ಶಕ್ತಿ ಹರಣ ಚಿಕಿತ್ಸೆಗಾಗಿ ಸುಶೀಲಾರಿಂದ ಯಾವುದೇ ಹಣವನ್ನು ಪಡೆಯಲಿಲ್ಲ. ಬದಲಾಗಿ, ಅವರಿಗೆ 1,400 ರೂ.ಗಳ ಪ್ರೋತ್ಸಾಹ ಧನವನ್ನು ನೀಡಲಾಯಿತು.

ಶಸ್ತ್ರಚಿಕಿತ್ಸೆಯ ಕೆಲವು ದಿನಗಳ ನಂತರ, ಸುಶೀಲಾ ಮುಟ್ಟಾದರು, ಮತ್ತು ಅದರೊಂದಿಗೆ ಅವರ ಮುಂದಿನ ಮೂರು ವರ್ಷಗಳ ಕಾಲದ ಬಳಲಿಕೆ ಮತ್ತು ಕಡು ಯಾತನೆಯ ನೋವಿನಿಂದ ಕೂಡಿದ ದಿನಗಳೂ ಪ್ರಾರಂಭವಾದವು.

“ಮೊದಮೊದಲು ನೋವು ಪ್ರಾರಂಭವಾದಾಗ, ನಾನು ಅವಳಿಗೆ ಮನೆಯಲ್ಲಿಯೇ ನೋವು ನಿವಾರಕಗಳನ್ನು ನೀಡಿದೆ. ಇದು ಒಂದಿಷ್ಟು ಆರಾಮ ನೀಡಿತು. ಆದರೆ ಪ್ರತಿ ತಿಂಗಳೂ ಮುಟ್ಟಾದಾಗ ಅವಳು ನೋವಿನಿಂದ ಅಳುತ್ತಿದ್ದಳು ”ಎಂದು 29 ವರ್ಷದ ಮನೋಜ್ ಹೇಳುತ್ತಾರೆ.

"ನೋವು ಹೆಚ್ಚುತ್ತಲೇ ಇತ್ತು ಮತ್ತು ಅತಿಯಾದ ರಕ್ತಸ್ರಾವದಿಂದಾಗಿ ನನಗೆ ವಾಕರಿಕೆ ಬರಲಾರಂಭಿಸಿತು. ನಾನು ಯಾವಾಗಲೂ ದುರ್ಬಲಳಾಗಿರುತ್ತಿದ್ದೆ ”ಎಂದು 8ನೇ ತರಗತಿಯವರೆಗೆ ಓದಿರುವ ಗೃಹಿಣಿ ಸುಶೀಲಾ ಹೇಳುತ್ತಾರೆ.

ಇದು ಮೂರು ತಿಂಗಳ ಕಾಲ ಹೀಗೆ ಮುಂದುವರಿದಾಗ, ಗಂಡ ಮತ್ತು ಹೆಂಡತಿ ಹಿಂಜರಿಕೆಯಿಂದಲೇ ಕುಂಡಲ್‌ನ ಪಿಎಚ್‌ಸಿಗೆ ಹೋದರು.

Susheela and Manoj from Dhani Jama village have been caught in a web of hospitals, tests and diagnoses since Susheela's nasbandi
PHOTO • Sanskriti Talwar
Susheela and Manoj from Dhani Jama village have been caught in a web of hospitals, tests and diagnoses since Susheela's nasbandi
PHOTO • Sanskriti Talwar

ಧನಿ ಜಮಾ ಗ್ರಾಮದ ಸುಶೀಲಾ ಮತ್ತು ಮನೋಜ್ ಅವರು ಸುಶೀಲಾ ಅವರ ನಸ್‌ಬಂಧಿಯ ಕಾರಣದಿಂದಾಗಿ ಆಸ್ಪತ್ರೆಗಳು, ಪರೀಕ್ಷೆಗಳು ಮತ್ತು ರೋಗನಿರ್ಣಯಗಳ ಬಲೆಯಲ್ಲಿ ಸಿಕ್ಕಿಬಿದ್ದಿದ್ದಾರೆ

"ವಹಾಂ ಝ್ಯಾದಾತರ್‌ ಸ್ಟ್ಯಾಫ್‌ ಹೋತಾ ಕಂಹಾ ಹೈ(ಅಲ್ಲಿ ಹೆಚ್ಚು ಸಿಬ್ಬಂದಿ ಇಲ್ಲ)" ಎಂದು ಮನೋಜ್‌ ಹೇಳುತ್ತಾರೆ.  ಪಿಎಚ್‌ಸಿಯಲ್ಲಿ ಸುಶೀಲಾರನ್ನು ಪರೀಕ್ಷೆ ಕೂಡ ಮಾಡದೆ ಒಂದಿಷ್ಟುನೋವು ನಿವಾರಕ ಮಾತ್ರೆಗಳನ್ನು ಕೊಟ್ಟು ಕಳಿಸಿದರು ಎಂದು ನಮ್ಮೊಡನೆ ಹೇಳುತ್ತಾರೆ.

ಅಷ್ಟು ಹೊತ್ತಿಗಾಗಲೇ ಈ ನೋವು ಅವರ ವೈವಾಹಿಕ ಜೀವನದ ಮೇಲೂ ಪರಿಣಾಮ ಬೀರಿತ್ತು. ಸಂತಾನ ಶಕ್ತಿ ಹರಣ ಚಿಕಿತ್ಸೆ ಮಾಡಿದ ಐದು ತಿಂಗಳ ನಂತರ, ಸುಶೀಲಾ ಬಂಡಿಕುಯಿ ಮಧುರ್ ಆಸ್ಪತ್ರೆಗೆ ವೈದ್ಯರನ್ನು ಕಾಣಲು ಹೋದರು.

ಕಿಬ್ಬೊಟ್ಟೆಯ ಸೋನೋಗ್ರಫಿ ಸೇರಿದಂತೆ ಸತತ ಹಲವಾರು ಪರೀಕ್ಷೆಗಳ ನಂತರ, ಡಿಂಬನಾಳದಲ್ಲಿ ಸೋಂಕು ಉಂಟಾಗಿದೆ ಎಂದು ವೈದ್ಯರು ವರದಿ ಮಾಡಿದರು, ಇದಕ್ಕೆ ಮೂರು ತಿಂಗಳವರೆಗೆ ಚಿಕಿತ್ಸೆಯನ್ನು ಸೂಚಿಸಿದರು.

"ನನ್ನ ಹೆಂಡತಿಗೆ ಸೋಂಕು ಹೇಗೆ ತಗುಲಿತು?" ನೀವು ಶಸ್ತ್ರಚಿಕಿತ್ಸೆ ಸರಿಯಾಗಿ ಮಾಡಲಿಲ್ಲವೇ? " ಮನೋಜ್ ಕೋಪದಿಂದ ವೈದ್ಯರನ್ನು ಕೇಳಿದಾಗ ವೈದ್ಯರು ನೀಡಿದ ಪ್ರತಿಕ್ರಿಯೆಯನ್ನು ದಂಪತಿಗಳು ಈಗಲೂ ನೆನಪಿಸಿಕೊಳ್ಳುತ್ತಾರೆ: "ಹಮ್ನೇ ಅಪ್ನಾ ಕಾಮ್ ಸಹಿ ಕಿಯಾ ಹೈ, ಯೆ ತುಮ್ಹಾರಿ ಕಿಸ್ಮತ್ ಹೈ (ನಾವು ನಮ್ಮ ಕೆಲಸವನ್ನು ಸರಿಯಾಗಿ ಮಾಡಿದ್ದೇವೆ, ಇದು ನಿಮ್ಮ ದುರಾದೃಷ್ಟ)" ಎಂದು ಹೇಳಿ ವೈದ್ಯರು ಅಲ್ಲಿಂದ ಹೊರಟುಹೋದರು.

ಮುಂದಿನ ಮೂರು ತಿಂಗಳ ತನಕ, ಪ್ರತಿ 10 ದಿನಗಳಿಗೊಮ್ಮೆ ಗಂಡ, ಹೆಂಡತಿ ತಮ್ಮ ಮೋಟಾರುಬೈಕಿನಲ್ಲಿ ಬೆಳಿಗ್ಗೆ 10 ಗಂಟೆಗೆ ಮಧುರ್ ಆಸ್ಪತ್ರೆಯನ್ನು ತಲುಪುತ್ತಿದ್ದರು. ಇಡೀ ದಿನ ತಪಾಸಣೆ, ಪರೀಕ್ಷೆಗಳು ಮತ್ತು ನಿಗದಿತ ಔಷಧಿಗಳ ಖರೀದಿಯಲ್ಲಿ ಕಳೆದುಹೋಗುತ್ತಿತ್ತು. ಇದರಿಂದಾಗಿ ಮನೋಜ್ ತನ್ನ ಕೆಲಸವನ್ನು ತೊರೆಯಬೇಕಾಯಿತು, ಮತ್ತು ಅವರ ಮೂವರು ಹೆಣ್ಣುಮಕ್ಕಳು (ಈಗ ಒಂಬತ್ತು, ಏಳು ಮತ್ತು ಐದು ವರ್ಷ) ಮತ್ತು ಮಗ (ಈಗ ನಾಲ್ಕು ವರ್ಷ), ಧನಿ ಜಾಮಾದಲ್ಲಿ ಅಜ್ಜ-ಅಜ್ಜಿಯರೊಂದಿಗೆ ವಾಸಿಸುತ್ತಿದ್ದರು. ಅವರು ಪ್ರತಿ ಆಸ್ಪತ್ರೆಯ ಭೇಟಿಗೆ 2,000ದಿಂದ 3,000 ರೂಪಾಯಿಗಳನ್ನು ಖರ್ಚು ಮಾಡಬೇಕಾಗಿತ್ತು.

ಮೂರು ತಿಂಗಳು ಚಿಕಿತ್ಸೆ ಪಡೆಯುವ ಹೊತ್ತಿಗೆ, ಮನೋಜ್ ತನ್ನ ಸಂಬಂಧಿಕರಿಂದ 50,000 ರೂಗಳನ್ನು ಸಾಲವಾಗಿ ಪಡೆದಿದ್ದರು. ಬಿಎ ಪದವಿ ಪಡೆದಿದ್ದರೂ, ಮನೋಜ್‌ ಅವರಿಗೆ ಸಿಗಬಹುದಾದ ಏಕೈಕ ಕೆಲಸವೆಂದರೆ ಬೇಲ್ದಾರಿ (ನಿರ್ಮಾಣ ಸ್ಥಳಗಳಲ್ಲಿ ಅಥವಾ ಹೊಲಗಳಲ್ಲಿ ಕೂಲಿ ಕೆಲಸ ಮಾಡುವುದು) ಮಾಡುವುದು, ನಿಯಮಿತ ಕೆಲಸ ಸಿಕ್ಕರೆ ಅದರಿಂದ ತಿಂಗಳಿಗೆ ಸುಮಾರು 10,000 ರೂ ಸಂಪಾದಿಸುತ್ತಾರೆ. ಒಂದೆಡೆ ಸುಶೀಲಾ ಅವರ ಸ್ಥಿತಿಯಲ್ಲಿ ಯಾವುದೇ ಸುಧಾರಣೆ ಕಂಡುಬಂದಿಲ್ಲ, ಮತ್ತೊಂದೆಡೆ ಕುಟುಂಬದ ಸಾಲ ಹೆಚ್ಚುತ್ತಿತ್ತು ಮತ್ತು ಆದಾಯವಿಲ್ಲದೆ ಸಾಲ ಹೆಚ್ಚುತ್ತಿತ್ತು ಒಟ್ಟಿನಲ್ಲಿ ಜೀವನದ ಮುಂದಿನ ದಾರಿ ಮಸುಕಾಗುತ್ತಿತ್ತು ಎಂದು ಸುಶೀಲಾ ಹೇಳುತ್ತಾರೆ.

"ಮುಟ್ಟಿನ ಸಮಯದಲ್ಲಿ ನಾನು ನೋವಿನಿಂದ ಕುಸಿಯುತ್ತಿದ್ದೆ, ಅಥವಾ ನಂತರದ ದಿನಗಳಲ್ಲಿ ಕೆಲಸ ಮಾಡಲು ಸಾಧ್ಯವಾಗದಷ್ಟು ದುರ್ಬಲಳಾಗಿರುತ್ತಿದ್ದೆ" ಎಂದು ಅವರು ಹೇಳುತ್ತಾರೆ.

ನವೆಂಬರ್ 2018ರಲ್ಲಿ ಮನೋಜ್ ತನ್ನ ಹೆಂಡತಿಯನ್ನು ಗ್ರಾಮದಿಂದ 20 ಕಿ.ಮೀ ದೂರದಲ್ಲಿನ ಜಿಲ್ಲಾ ಕೇಂದ್ರವಾದ ದೌಸಾದಲ್ಲಿರುವ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲು ನಿರ್ಧರಿಸಿದರು. ತಾಯಂದಿರ ಆರೋಗ್ಯ ಸೇವೆಗಳಿಗಾಗಿ ಪ್ರತ್ಯೇಕ ವಿಭಾಗವನ್ನು ಹೊಂದಿರುವ 250 ಹಾಸಿಗೆಗಳ ಈ ಆಸ್ಪತ್ರೆಗೆ ಅವರು ಹೋದ ದಿನ, ಆಸ್ಪತ್ರೆಯ ಕಾರಿಡಾರ್‌ನಲ್ಲಿ ರೋಗಿಗಳ ದೀರ್ಘ ಸರತಿಯಿತ್ತು.

“ನನ್ನ ಇಡೀ ದಿನ ಸಾಲಿನಲ್ಲಿ ನಿಂತು ಕಳೆದುಹೋಗುತ್ತಿತ್ತು. ಆದರೆ ನನ್ನಲ್ಲಿ ಅಸಹನೆ ಮೂಡಿತ್ತು. ಆ ಕಾರಣದಿಂದ ನಾವು ಅಲ್ಲಿಂದ ದೌಸಾದ ಖಾಸಗಿ ಆಸ್ಪತ್ರೆಗೆ ಹೋಗಲು ನಿರ್ಧರಿಸಿದೆವು ”ಎಂದು ಮನೋಜ್ ಹೇಳುತ್ತಾರೆ. ಎಂದಿಗೂ ಮುಗಿಯದ ಆಸ್ಪತ್ರೆ ಭೇಟಿಗಳು ಮತ್ತು ಪರೀಕ್ಷೆಗಳ ಮತ್ತೊಂದು ಸುಳಿಯಲ್ಲಿ ಅವರು ಸಿಕ್ಕಿಹಾಕಿಕೊಳ್ಳಲಿದ್ದೇವೆ ಮತ್ತು ಅಲ್ಲಿಯೂ ಸ್ಪಷ್ಟ ರೋಗನಿರ್ಣಯವಾಗವುದಿಲ್ಲ ಎನ್ನುವದರ ಸುಳಿವೂ ಅವರಿಗಿರಲಿಲ್ಲ.

Susheela first got a nasbandi at Madhur Hospital, Bandikui town, in June 2017
PHOTO • Sanskriti Talwar

ಸುಶೀಲಾ ಅವರು ಮೊದಲು ಜೂನ್ 2017ರಲ್ಲಿ ಬಂಡಿಕುಯಿ ಪಟ್ಟಣದ ಮಧುರ್ ಆಸ್ಪತ್ರೆಯಲ್ಲಿ ಸಂತಾನ ಶಕ್ತಿ ಹರಣ ಚಿಕಿತ್ಸೆ ಪಡೆದರು

ದೌಸಾದ ರಾಜಧಾನಿ ಆಸ್ಪತ್ರೆ ಮತ್ತು ಮೆಟರ್ನಿಟಿ ಹೋಮ್‌ನಲ್ಲಿ, ಜಿಲ್ಲಾ ಆಸ್ಪತ್ರೆಯ ಸರತಿಯಲ್ಲಿ ನಿಂತಿದ್ದ ಒಬ್ಬರು ಹೇಳುವಂತೆ, ಸುಶೀಲಾ ಅವರ ಹಳೆಯ ಸೋನೋಗ್ರಫಿ ವರದಿಯನ್ನು ತಿರಸ್ಕರಿಸಲಾಯಿತು ಮತ್ತು ಹೊಸದಾಗಿ ಮಾಡಿಸುವಂತೆ ಹೇಳಲಾಯಿತು.

ಮುಂದೆ ಏನು ಮಾಡಬೇಕೆಂಬುದರ ಬಗ್ಗೆ ಗೊಂದಲದಲ್ಲಿದ್ದ ಮನೋಜ್ ಗ್ರಾಮದಲ್ಲಿರುವವರೊಂದಿಗೆ ಸಮಾಲೋಚಿಸಿ ಕೆಲವು ವಾರಗಳ ನಂತರ ಸುಶೀಲಾರನ್ನು ದೌಸಾದ ಖಂಡೇಲ್‌ವಾಲ್ ನರ್ಸಿಂಗ್ ಹೋಂಗೆ ಕರೆದೊಯ್ದರು. ಇಲ್ಲಿ ಮತ್ತೊಂದು ಸೋನೋಗ್ರಫಿ ಮಾಡಲಾಯಿತು ಮತ್ತು ಸುಶೀಲಾ ಅವರಿಗೆ ಡಿಂಬ ನಾಳದಲ್ಲಿ ಊತವಿದೆ ಎಂದು ವರದಿ ತೋರಿಸಿತು. ಮತ್ತೊಮ್ಮೆ ಇನ್ನೊಂದು ಸುತ್ತಿನ ಔಷಧಿಯನ್ನು ನೀಡಲಾಯಿತು.

“ಖಾಸಗಿ ಆಸ್ಪತ್ರೆಗಳಲ್ಲಿ ಕೆಲಸ ಮಾಡುವ ಜನರಿಗೆ ವೈದ್ಯಕೀಯ ಪ್ರಕ್ರಿಯೆಗಳ ಬಗ್ಗೆ ಹಳ್ಳಿಯ ಜನರಿಗೆ ಏನೂ ಅರ್ಥವಾಗುವುದಿಲ್ಲ ಎನ್ನುವುದು ತಿಳಿದಿದೆ. ಅವರು ಹೇಳುವದನ್ನು ಜನರು ಸುಮ್ಮನೆ ಸ್ವೀಕರಿಸುತ್ತಾರೆ ಎಂದು ಅವರಿಗೂ ಗೊತ್ತು,”ಎಂದು ಮನೋಜ್ ಹೇಳುತ್ತಾರೆ, ಮತ್ತು ಅವರು ಮೂರನೇ ಖಾಸಗಿ ಆಸ್ಪತ್ರೆಯಾದ ದೌಸಾದ ಶ್ರೀ ಕೃಷ್ಣ ಆಸ್ಪತ್ರೆಗೆ ಹೇಗೆ ತಲುಪಿದರು ಎಂಬ ಬಗ್ಗೆ ಈಗ ಸಾಕಷ್ಟು ಗೊಂದಲವಿದೆ, ಅಲ್ಲಿ ವೈದ್ಯರು ಬೇರೆಯದೇ ವಿಷಯ ಹೇಳಿದರು. ಪರೀಕ್ಷೆ ಮತ್ತು ಹೊಸ ಸೋನೋಗ್ರಫಿಯ ನಂತರ ಸುಶೀಲಾರ ಕರುಳಿನಲ್ಲಿ ಸ್ವಲ್ಪ ಊತವಿದೆ ಎಂದು ಹೇಳಿದರು.

"ಡಿಂಬ ನಾಳದಲ್ಲಿ ಊತವಿದೆಯೆಂದು ಒಂದು ಆಸ್ಪತ್ರೆ ಹೇಳುತ್ತದೆ, ಇನ್ನೊಂದು ಸೋಂಕು ಇದೆಯೆಂದು ಹೇಳುತ್ತದೆ, ಮತ್ತೆ ಮೂರನೇ ಆಸ್ಪತ್ರೆ ನನ್ನ ಕರುಳಿನ ಬಗ್ಗೆ ಮಾತನಾಡುತ್ತದೆ. ಪ್ರತಿ ಆಸ್ಪತ್ರೆಯು ತನ್ನದೇ ಆದ ಔಷಧಿಗಳನ್ನು ಶಿಫಾರಸು ಮಾಡಿದೆ. ನಾವು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಪ್ರಯಾಣಿಸುತ್ತಾ ಹುಚ್ಚರಾಗಿದ್ದರೂ, ಯಾರು ಸತ್ಯವನ್ನು ಹೇಳುತ್ತಿದ್ದಾರೆ ಮತ್ತು ಏನಾಗುತ್ತಿದೆ ಎಂದು ಖಚಿತವಾಗಿಲ್ಲ”ಎಂದು ಸುಶೀಲಾ ಬೇಸರದಿಂದ ಹೇಳುತ್ತಾರೆ. ಅವರು ಪ್ರತಿ ಆಸ್ಪತ್ರೆಯಿಂದಲೂ ಅವರು ಸೂಚಿಸಿದ ಚಿಕಿತ್ಸೆಯನ್ನು ಪಡೆದರು, ಆದರೆ ಯಾವುದೂ ಅವರ ರೋಗಲಕ್ಷಣಗಳನ್ನು ನಿವಾರಿಸಲಿಲ್ಲ.

ದೌಸಾದ ಈ ಮೂರು ಖಾಸಗಿ ಆಸ್ಪತ್ರೆಗಳಿಗೆ ಭೇಟಿ ನೀಡಿದ್ದರ ಪರಿಣಾಮವೆಂದರೆ ಮನೋಜ್ ಅವರ ಸಾಲದ ಮೊತ್ತಕ್ಕೆ ಮತ್ತೊಂದು ರೂ. 25,000 ಸೇರಿದ್ದು.

ಜೈಪುರದಲ್ಲಿ ವಾಸವಾಗಿದ್ದ ದೂರದ ಸಂಬಂಧಿ ಸೇರಿದಂತೆ ಕುಟುಂಬದ ಪ್ರತಿಯೊಬ್ಬರೂ ತಮ್ಮ ಗ್ರಾಮದಿಂದ 76 ಕಿಲೋಮೀಟರ್ ದೂರದಲ್ಲಿರುವ ರಾಜ್ಯ ರಾಜಧಾನಿಯಲ್ಲಿ ಉತ್ತಮ ಆಸ್ಪತ್ರೆಗೆ ತೋರಿಸುವುದು ಉತ್ತಮ ಎಂದು ಸಲಹೆ ನೀಡಿದರು.

ಮತ್ತೊಮ್ಮೆ, ದಂಪತಿಗಳು ತಮ್ಮ ಬಳಿ ಇಲ್ಲದ ಹಣವನ್ನು ಖರ್ಚು ಮಾಡಿ, ಜೈಪುರಕ್ಕೆಂದು ಹೊರಟರು, ಅಲ್ಲಿ ಡಾ. ಸರ್ದಾರ್ ಸಿಂಗ್ ಸ್ಮಾರಕ ಆಸ್ಪತ್ರೆಯಲ್ಲಿ, ಮತ್ತೊಂದು ಸೋನೋಗ್ರಫಿ ಮಾಡಿದಾಗ ಸುಶೀಲಾ ಅವರ ಗರ್ಭಕೋಶದಲ್ಲಿ  'ಗಡ್ಡೆ' ಬೆಳೆದಿದೆ ಎಂದು ತಿಳಿದುಬಂದಿದೆ.

"ಈ ಗಡ್ಡೆ ಬೆಳೆಯುತ್ತಲೇ ಇರುತ್ತದೆ ಇದಕ್ಕಾಗಿ ಗರ್ಭಕೋಶ ತೆಗೆಸುವ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕು ಎಂದು ವೈದ್ಯರು ಸ್ಪಷ್ಟವಾಗಿ ಹೇಳಿದರು” ಸುಶೀಲಾ ನಮಗೆ ಹೇಳುತ್ತಾರೆ.

Illustration: Labani Jangi

ಚಿತ್ರ: ಲಬಾನಿ ಜಂಗಿ

ಐದು ಖಾಸಗಿ ಆಸ್ಪತ್ರೆಗಳಲ್ಲಿ ಮೂರು ಆಸ್ಪತ್ರೆಗಳು (ರಾಜಸ್ಥಾನದ ಬಂಡಿಕುಯಿ ಪಟ್ಟಣದ) ಒದಗಿಸಿದ ಮಾಹಿತಿಯ ಪ್ರಕಾರ, 2010ರ ಏಪ್ರಿಲ್ ಮತ್ತು ಅಕ್ಟೋಬರ್ ನಡುವೆ ಶಸ್ತ್ರಚಿಕಿತ್ಸೆಗೆ ಒಳಗಾದ 385 ಮಹಿಳೆಯರಲ್ಲಿ 286 ಮಹಿಳೆಯರು ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ ಎಂದು ಆರ್‌ಟಿಐ ಬಹಿರಂಗಪಡಿಸಿದೆ. ... ಅವರಲ್ಲಿ ಹೆಚ್ಚಿನವರು 30 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಮತ್ತು ಅತ್ಯಂತ ಕಿರಿಯ ವಯಸ್ಸಿನವರೆಂದರೆ ಕೇವಲ 18 ವರ್ಷ.

ಹೀಗೆ ಕೊನೆಗೂ, 30 ತಿಂಗಳುಗಳ ಕಾಲ ಕನಿಷ್ಠ ಎಂಟು ಆಸ್ಪತ್ರೆಗಳಿಗೆ ಭೇಟಿ ನೀಡಿದ ನಂತರ, ಸುಶೀಲಾ ತಮ್ಮ ಗರ್ಭಕೋಶವನ್ನು ತೆಗೆಸಿಕೊಳ್ಳಲು 27 ಡಿಸೆಂಬರ್ 2019ರಂದು ದೌಸಾದಲ್ಲಿರುವ ಮತ್ತೊಂದು ಆಸ್ಪತ್ರೆಯಾದ ಶುಭಿ ಪಲ್ಸ್ ಆಸ್ಪತ್ರೆ ಮತ್ತು ಆಘಾತ ಕೇಂದ್ರದಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಲಾಯಿತು. ಮನೋಜ್ ಈ ಶಸ್ತ್ರಚಿಕಿತ್ಸೆಗೆ 20,000 ರೂ ಮತ್ತು ನಂತರದ ಔಷಧಿಗಳಿಗಾಗಿ 10,000 ರೂಪಾಯಿಗಳನ್ನು ಖರ್ಚು ಮಾಡಿದರು.

ನೋವು ಮತ್ತು ಸಾಲದ ಸುಳಿಯಿಂದ ತಪ್ಪಿಸಿಕೊಳ್ಳುವುದಕ್ಕೆ ಗರ್ಭಕೋಶ ತೆಗೆಸುವುದೊಂದೇ ದಾರಿಯಾಗಿದ್ದರಿಂದ ದಂಪತಿಗಳು ಇದಕ್ಕೆ ಬಲವಂತವಾಗಿ ಒಪ್ಪಬೇಕಾಯಿತು.

ಮನೋಜ್ ಮತ್ತು ಸುಶೀಲಾ ಅವರ ಸಂಕಷ್ಟದ ಕಥೆಯನ್ನು ಅಖಿಲ ಭಾರತ ಗ್ರಾಹಕ ಪಂಚಾಯತ್‌ನ ವಕೀಲರಾದ ದುರ್ಗಾ ಪ್ರಸಾದ್ ಸೈನಿ ಅವರಿಗೆ ವಿವರಿಸಿದೆವು, ಇವರು ಬಾಂಡಿಕುಯಿಯ ಐದು ಖಾಸಗಿ ಆಸ್ಪತ್ರೆಗಳಲ್ಲಿ ಗರ್ಭಕೋಶದ ಶಸ್ತ್ರಚಿಕಿತ್ಸೆಯ ಸಂಖ್ಯೆಯನ್ನು ತಿಳಿದುಕೊಳ್ಳಲು 2010ರ ನವೆಂಬರ್‌ನಲ್ಲಿ ಮಾಹಿತಿ ಹಕ್ಕಿನಡಿಯಲ್ಲಿ (ಆರ್‌ಟಿಐ) ಅರ್ಜಿ ಸಲ್ಲಿಸಿದ್ದರು.

ಅಲ್ಲಿನ ಐದು ಖಾಸಗಿ ಆಸ್ಪತ್ರೆಗಳ ಪೈಕಿ ಮೂರರಿಂದ ಪಡೆದ ಮಾಹಿತಿಯ ಪ್ರಕಾರ, 2010ರ ಏಪ್ರಿಲ್‌ನಿಂದ ಅಕ್ಟೋಬರ್‌ವರೆಗೆ 385 ಮಹಿಳೆಯರು ಆ ಆಸ್ಪತ್ರೆಗಳಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು, ಅದರಲ್ಲಿ 286 ಮಹಿಳೆಯರ ಗರ್ಭಕೋಶವನ್ನು ತೆಗೆದುಹಾಕಲಾಗಿದೆ ಎಂದು ಆರ್‌ಟಿಐ ಬಹಿರಂಗಪಡಿಸಿದೆ. ಮಾಹಿತಿ ಕೇಳಲ್ಪಟ್ಟ ಸಾಮಾನ್ಯ ಆಸ್ಪತ್ರೆಗಳಲ್ಲಿ ಮಧುರ್ ಆಸ್ಪತ್ರೆ (ಸುಶೀಲಾ ಅವರ ಸಂತಾನ ಶಕ್ತಿ ಹರಣ ಚಿಕಿತ್ಸೆ ನಡೆಸಿದ ಆಸ್ಪತ್ರೆ), ಮದನ್ ನರ್ಸಿಂಗ್ ಹೋಮ್, ಬಾಲಾಜಿ ಆಸ್ಪತ್ರೆ, ವಿಜಯ್ ಆಸ್ಪತ್ರೆ ಮತ್ತು ಕಟ್ಟಾ ಆಸ್ಪತ್ರೆ ಸೇರಿವೆ. ಹಿಸ್ಟೆರೆಕ್ಟಮಿಗೆ ಒಳಗಾದ ಮಹಿಳೆಯರಲ್ಲಿ ಹೆಚ್ಚಿನವರು 30 ವರ್ಷದೊಳಗಿನವರು, ಮತ್ತು ಅತಿ ಕಿರಿಯರಿಗೆ ಕೇವಲ 18 ವರ್ಷ. ಹೆಚ್ಚಿನ ಮಹಿಳೆಯರು ಜಿಲ್ಲೆಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯಗಳಾದ ಬೈರ್ವಾ, ಗುಜ್ಜರ್ ಮತ್ತು ಮಾಲಿಗೆ ಸೇರಿದವರು. ಮನೋಜ್ ಮತ್ತು ಸುಶೀಲಾ ಬೈರ್ವಾ ಸಮುದಾಯಕ್ಕೆ ಸೇರಿದವರಾಗಿದ್ದು, ಅವರ ಗ್ರಾಮ  ಧನಿ ಜಮಾದ ಜನಸಂಖ್ಯೆಯ ಶೇಕಡಾ 97ರಷ್ಟು ಪರಿಶಿಷ್ಟ ಜಾತಿಗೆ ಸೇರಿದವರು.

"ನಾವು ಹೆಣ್ಣು ಭ್ರೂಣ ಹತ್ಯೆಯ ಸಮಸ್ಯೆಯ ಕುರಿತು ಚರ್ಚೆ ನಡೆಸುತ್ತಿದ್ದಾಗ ʼಪಾರ್ ಕೊಖ್ ಹೈ ಕಹಾನ್ʼ (ಒಬ್ಬರು ಅದೇನೋ ಸರಿ ಆದರೆ ಗರ್ಭ ಯಾರಲ್ಲಿದೆ ಈಗ?) ಎಂದು ಕೇಳಿದಾಗ ಇಲ್ಲಿ ಏನೋ ತಪ್ಪು ನಡೆಯುತ್ತಿದೆಯೆನ್ನುವ ಅನುಮಾನ ಮೂಡಿತು" ಎಂದು ಸೈನಿ ಹೇಳುತ್ತಾರೆ.

“[ಹೆಚ್ಚಿನ ಸಂಖ್ಯೆಯ ಅನಗತ್ಯ ಗರ್ಭಕೋಶ ತೆಗೆಸುವ ಶಸ್ತ್ರ ಚಿಕಿತ್ಸೆ] ವೈದ್ಯರು, ಪಿಎಚ್‌ಸಿ ಸಿಬ್ಬಂದಿ ಮತ್ತು ಆಶಾ ಕಾರ್ಮಿಕರ ನಡುವಿನ ಸಂಬಂಧದ ಪರಿಣಾಮವಾಗಿದೆ ಎಂದು ನಾವು ನಂಬಿದ್ದೇವೆ. ಆದರೆ ನಾವು ಅದನ್ನು ಸಾಬೀತುಪಡಿಸಲು ಸಾಧ್ಯವಾಗಲಿಲ್ಲ,” ಸೈನಿ ಹೇಳುತ್ತಾರೆ. ರಾಜಸ್ಥಾನ, ಬಿಹಾರ ಮತ್ತು ಛತ್ತೀಸ್‌ಢದ ಖಾಸಗಿ ಆಸ್ಪತ್ರೆಗಳಲ್ಲಿ ಲಾಭಕ್ಕಾಗಿ "ಹಿಸ್ಟೆರೆಕ್ಟಮಿ ಹಗರಣ"ದ ವಿರುದ್ಧದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯಲ್ಲಿ (ಪಿಐಎಲ್) ಬಂಡಿಕುಯಿಯಲ್ಲಿ ಕಂಡು ಬಂದಿದ್ದನ್ನೂ ಸೇರಿಸಲಾಗಿದೆ. ರಾಜಸ್ಥಾನ ಮೂಲದ ಲಾಭರಹಿತ ಸಂಸ್ಥೆಯಾದ ಪ್ರಯಾಸ್ ಸಂಸ್ಥಾಪಕ ಡಾ. ನರೇಂದ್ರ ಗುಪ್ತಾ ಸುಪ್ರೀಂ ಕೋರ್ಟ್‌ನಲ್ಲಿ ಪಿಐಎಲ್ ಸಲ್ಲಿಸಿದ್ದರು. ಅರ್ಜಿಯು ಶಸ್ತ್ರಚಿಕಿತ್ಸೆಗೆ ಒಳಗಾದ ಮಹಿಳೆಯರಿಗೆ ಪರಿಹಾರ, ಜೊತೆಗೆ ಸರಕಾರದ ನೀತಿಯಲ್ಲಿ ಸೂಕ್ತ ಬದಲಾವಣೆಗಳಿಗಾಗಿಯೂ ಕೋರಿಕೆಯನ್ನು ಇಟ್ಟಿತ್ತು.

"ಬಿಹಾರ, ಛತ್ತೀಸ್‌ಗಢ ಮತ್ತು ರಾಜಸ್ಥಾನದಲ್ಲಿ ಸಂದರ್ಶನ ನೀಡಿದ ಅನೇಕ ಮಹಿಳೆಯರಿಗೆ ಅವರಿಗೆ ಪರಿಸ್ಥಿತಿ ತುಂಬಾ ಗಂಭೀರವಾಗಿದೆ ಮತ್ತು ಶಸ್ತ್ರಚಿಕಿತ್ಸೆಯ ತುರ್ತಿದೆ ಎಂದು ನಂಬುವಂತೆ ದಾರಿ ತಪ್ಪಿಸಲಾಗಿದೆ" ಎಂದು ಪಿಐಎಲ್ ತಿಳಿಸಿದೆ. "ವೈದ್ಯರ ಸಲಹೆಯನ್ನು ಪಾಲಿಸದಿದ್ದರೆ ಅವರಿಗೆ ಕ್ಯಾನ್ಸರ್ ಬರಬಹುದು ಎಂದು ನಂಬುವಂತೆ ಮಾಡಲಾಯಿತು." ಎನ್ನಲಾಗಿದೆ.

'We believed it [the unnecessary hysterectomies] was the result of a nexus...But we couldn’t prove it', said advocate Durga Prasad Saini
PHOTO • Sanskriti Talwar

ಇದು [ಅನಗತ್ಯ ಹಿಸ್ಟೆರೆಕ್ಟಮಿಗಳು] ಒಂದು ಮೋಸದ ಜಾಲದ ಪರಿಣಾಮ ಎಂದು ನಾವು ನಂಬಿದ್ದೆವು ... ಆದರೆ ನಾವು ಅದನ್ನು ಸಾಬೀತುಪಡಿಸಲು ಸಾಧ್ಯವಾಗಲಿಲ್ಲ 'ಎಂದು ವಕೀಲ ದುರ್ಗಾ ಪ್ರಸಾದ್ ಸೈನಿ ಹೇಳಿದರು

ಗರ್ಭಕಂಠದ ಅಪಾಯಗಳು ಮತ್ತು ದೀರ್ಘಕಾಲೀನ ಅಡ್ಡಪರಿಣಾಮಗಳನ್ನು ಒಳಗೊಂಡಂತೆ ಅಗತ್ಯ ಮಾಹಿತಿಯನ್ನು ಹೆಚ್ಚಾಗಿ ಮಹಿಳೆಯರಿಗೆ ನೀಡಲಾಗುವುದಿಲ್ಲ ಎಂದು ಅರ್ಜಿಯಲ್ಲಿ ಹೇಳಲಾಗಿದೆ, ಶಸ್ತ್ರಚಿಕಿತ್ಸೆಗೆ ಒಳ ಹೋಗುವ ಮೊದಲು ತಿಳುವಳಿಕೆಯ ಒಪ್ಪಿಗೆ ಸಹಿಯನ್ನು ತೆಗೆದುಕೊಳ್ಳಲಾಗಿದೆಯೇ ಎಂಬ ಅನುಮಾನವೂ ಉಂಟಾಗುತ್ತದೆ.

ಮಾಧ್ಯಮ ವರದಿಗಳ ಪ್ರಕಾರ, ಖಾಸಗಿ ಆಸ್ಪತ್ರೆಗಳು ಮತ್ತು ವೈದ್ಯರು ಆರೋಪಗಳನ್ನು ತಳ್ಳಿಹಾಕಿ, ಅಗತ್ಯವಿದ್ದಾಗ ಮಾತ್ರ ಶಸ್ತ್ರಚಿಕಿತ್ಸೆ ನಡೆಸಲಾಗಿದೆ ಎಂದು ಹೇಳಿದ್ದಾರೆ.

"ದೌಸಾ ಜಿಲ್ಲೆಯ ಖಾಸಗಿ ಆಸ್ಪತ್ರೆಗಳು ಈಗ ಹಿಸ್ಟರೆಕ್ಟಮಿಯನ್ನು ಅಗತ್ಯವಿದ್ದಾಗ ಮಾತ್ರ ಮಾಡುತ್ತಿವೆ. ಆದರೆ ಹಿಂದೆ ಈ ರೀತಿಯಿರಲಿಲ್ಲ. ಇದು ಪರೀಕ್ಷೀಸುತ್ತಿರಲಿಲ್ಲ ಮತ್ತು ತುಂಬ ಹೆಚ್ಚಿನ ಸಂಖ್ಯೆಯಲ್ಲಿತ್ತು.ಹಳ್ಳಿಯ ಜನರಿಗೆ ಮೋಸ ಮಾಡಲಾಗುತ್ತಿತ್ತು. ಋತುಸ್ರಾವಕ್ಕೆ ಸಂಬಂಧಿಸಿದ ಯಾವುದೇ ತೊಂದರೆ ಇರುವ ಮಹಿಳೆಯರಿಗೆ ಹೊಟ್ಟೆಯಲ್ಲಿ  ಸಮಸ್ಯೆ ಇದ್ದಲ್ಲಿ ಅವರನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಕಳುಹಿಸಲಾಗುತ್ತಿತ್ತು ಮತ್ತು ಅಂತಿಮವಾಗಿ ಅವರಿಗೆ ಗರ್ಭಕೋಶವನ್ನು ತೆಗೆಸುವಂತೆ ಹೇಳಲಾಗುತ್ತಿತ್ತು.” ಎಂದು ಸೈನಿಹೇಳುತ್ತಾರೆ

ಡಾ. ಗುಪ್ತಾ ಅವರ ಅರ್ಜಿಯು 2015-16ರ ಅವಧಿಯಲ್ಲಿ ನಡೆಸಿದ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ (ಎನ್‌ಎಫ್‌ಎಚ್‌ಎಸ್ -4) ನಾಲ್ಕನೇ ಸುತ್ತಿನಲ್ಲಿ ಹಿಸ್ಟೆರಕ್ಟಮಿಯನ್ನು ಸೇರಿಸಲು ಸರ್ಕಾರವನ್ನು ಪ್ರೇರೇಪಿಸಿತು, ಈ ಸಮೀಕ್ಷೆಯು ಭಾರತದಲ್ಲಿ 15ರಿಂದ 49 ವರ್ಷದೊಳಗಿನ 3.2ರಷ್ಟು ಮಹಿಳೆಯರು ಹಿಸ್ಟೆರಕ್ಟಮಿಗೆ ಒಳಗಾಗಿದ್ದಾರೆನ್ನುವ ಮಾಹಿತಿಯನ್ನು ಬಹಿರಂಗಪಡಿಸಿದೆ. ಈ ಪ್ರಕ್ರಿಯೆಗಳಲ್ಲಿ ಶೇಕಡಾ 67ಕ್ಕಿಂತ ಹೆಚ್ಚು ಖಾಸಗಿ ಆರೋಗ್ಯ ಸೇವಾ ಕ್ಷೇತ್ರದಲ್ಲಿ ನಡೆದಿವೆ. ರಾಜಸ್ಥಾನದಲ್ಲಿ, 15ರಿಂದ 49 ವರ್ಷದೊಳಗಿನ 2.3ರಷ್ಟು ಮಹಿಳೆಯರು ಹಿಸ್ಟೆರಕ್ಟಮಿ ಹೊಂದಿದ್ದಾರೆ ಎಂದು ಎನ್‌ಎಫ್‌ಎಚ್‌ಎಸ್ -4 ತಿಳಿಸಿದೆ.

ಗರ್ಭಕೋಶ ತೆಗೆದ ನಂತರ ( ಹಿಸ್ಟೆರೆಕ್ಟಮಿ ) ಪ್ರಯಾಸ್‌ನ ಸತ್ಯ-ಶೋಧನಾ ತಂಡಗಳು ಸಂಪರ್ಕಿಸಿದ ಅನೇಕ ಮಹಿಳೆಯರು ಶಸ್ತ್ರಚಿಕಿತ್ಸೆಯ ನಂತರವೂ ರೋಗಲಕ್ಷಣಗಳು ಮುಂದುವರೆದಿದೆ ಎಂದು ಹೇಳಿದ್ದಾರೆ. ಹಿಸ್ಟೆರೆಕ್ಟಮಿಯ ಎರಡು ತಿಂಗಳ ನಂತರ, ನಾವು ಸುಶೀಲಾರನ್ನು ಅವರ ಮನೆಯಲ್ಲಿ ಭೇಟಿಯಾದಾಗ, ಅವರು ಬಕೆಟ್ ಎತ್ತುವ ಮತ್ತು ಇತರ ಮನೆಕೆಲಸಗಳನ್ನು ಮಾಡುತ್ತಿದ್ದಳು, ಆದರೂ ಶಸ್ತ್ರಚಿಕಿತ್ಸೆಯಿಂದ ಕೆಲವು ಗಾಯಗಳು ಇನ್ನೂ ಹಸಿಯಾಗಿದ್ದವು ಅವರಿಗೆ ಎಚ್ಚರಿಕೆಯಿಂದ ಇರುವಂತೆ ಹೇಳಿದೆವು. ಮನೋಜ್ ಅವರು ಕೆಲಸಕ್ಕೆ ಮರಳಿದ್ದರು ಮತ್ತು ಅವರ ಸಂಪಾದನೆಯ ಅರ್ಧದಷ್ಟು ಭಾಗವು ಅವರ ಸರಿಸುಮಾರು ರೂ. 1 ಲಕ್ಷದಷ್ಟಿರುವ ಸಾಲ ತೀರಿಸಲು ಹೋಗುತ್ತಿದೆ. ನಿರಂತರ ಆರೋಗ್ಯ ಸಮಸ್ಯೆಗಳನ್ನು ನಿಭಾಯಿಸಲು ಅವರು ಲೇವಾದೇವಿದಾರರು ಮತ್ತು ಸಂಬಂಧಿಕರಿಂದ ಸಾಲ ಪಡೆದಿದ್ದಾರೆ.ಜೊತೆಗೆ ಸುಶೀಲಾ ಅವರ ಆಭರಣಗಳನ್ನು ರೂ. 20-30,000ಕ್ಕೆ ಇದೇ ಕಾರಣದಿಂದ ಮಾರಲಾಗಿದೆ.

ಕಳೆದ ಮೂರು ವರ್ಷಗಳ ಘಟನೆಗಳಿಂದ ಇನ್ನೂ ತತ್ತರಿಸುತ್ತಿರುವ ಈ ದಂಪತಿಗಳಿಗೆ ದೀರ್ಘಕಾಲದ ನೋವು ಮತ್ತು ರಕ್ತಸ್ರಾವಕ್ಕೆ ನಿಜವಾದ ಕಾರಣವೇನೆಂದು ಈಗಲೂ ಖಚಿತವಾಗಿಲ್ಲ, ಮತ್ತು ಅವರ ಗರ್ಭಕೋಶ ತೆಗೆದುಹಾಕುವುದು ಕೊನೆಯದಾಗಿ ಸರಿಯಾದ ಚಿಕಿತ್ಸೆಯೋ ಅಥವಾ ಇಲ್ಲವೋ ಎನ್ನವುದು ಕೂಡ ತಿಳಿದಿಲ್ಲ. ಇಲ್ಲಿಯವರೆಗೆ ಸುಶೀಲಾ ಅವರಿಗೆ ನೋವು ಮರುಕಳಿಸಲಿಲ್ಲ ಎನ್ನವುದೇ ಅವರಿಗೆ ನಿರಾಳತೆಯನ್ನು ತಂದುಕೊಡುವ ವಿಷಯವಾಗಿದೆ.

"ಪೈಸಾ ಲಗಾತೆ ಲಗಾತೆ ಆದ್ಮಿ ಥಕ್ ಜಾಯೆ ತೋಹ್ ಆಖೀರ್ ಮೇ ಯಹಿ ಕರ್ ಸಕ್ತ ಹೈ" ಎಂದು ಮನೋಜ್ ಹೇಳುತ್ತಾರೆ - ಹಣವನ್ನು ಖರ್ಚು ಮಾಡಿ ಮಾಡಿ ಸಾಕದಾಗ ಕೊನೆಯಲ್ಲಿ ನಿಮಗೆ ಉಳಿಯುವುದು ನೀವು ಮಾಡಿದ್ದು ಸರಿ ಎನ್ನುವ ಭರವಸೆ ಮಾತ್ರ.

ಕವರ್ ಚಿತ್ರ: ಮೂಲತಃ ಪಶ್ಚಿಮ ಬಂಗಾಳದ ನಾದಿಯಾ ಜಿಲ್ಲೆಯ ಒಂದು ಸಣ್ಣ ಪಟ್ಟಣದಿಂದ ಬಂದ ಲಬಾನಿ ಜಂಗಿ, ಕೋಲ್ಕತ್ತಾದ ಸಾಮಾಜಿಕ ವಿಜ್ಞಾನ ಅಧ್ಯಯನ ಕೇಂದ್ರದಲ್ಲಿ ಬಂಗಾಳಿ ಕಾರ್ಮಿಕರ ವಲಸೆಯ ಕುರಿತು ಪಿಎಚ್‌ಡಿ ಮಾಡುತ್ತಿದ್ದಾರೆ. ಚಿತ್ರ ಬಿಡಿಸುವುದನ್ನು ಯಾರ ಸಹಾಯವಿಲ್ಲದೆ ಕಲಿತಿದ್ದಾರೆ ಮತ್ತು ಅವರಿಗೆ ಪ್ರಯಾಣವೆಂದರೆ ಪ್ರೀತಿ.

ಗ್ರಾಮೀಣ ಭಾರತದ ಹದಿಹರೆಯದ ಬಾಲಕಿಯರು ಮತ್ತು ಯುವತಿಯರ ಬಗ್ಗೆ PARI ಮತ್ತು ಕೌಂಟರ್‌ ಮೀಡಿಯಾ ಟ್ರಸ್ಟ್‌ನ ಬೆಂಬಲಿತ ರಾಷ್ಟ್ರವ್ಯಾಪಿ ವರದಿ ಮಾಡುವ ಯೋಜನೆಯು ಮಹತ್ವದ ಆದರೆ ಸಮಾಜದ ಅಂಚಿನಲ್ಲಿರುವ ಗುಂಪುಗಳ ಪರಿಸ್ಥಿತಿಯನ್ನು ಅನ್ವೇಷಿಸಲು, ಸಾಮಾನ್ಯ ಜನರ ಮಾತುಗಳು ಮತ್ತು ಜೀವಂತ ಅನುಭವಗಳ ಮೂಲಕ ತಿಳಿಯುವ ಉದ್ದೇಶವನ್ನು ಹೊಂದಿದೆ. ಇದು ಪಾಪ್ಯುಲೇಷನ್‌ ಆಫ್‌ ಇಂಡಿಯಾದ ಬೆಂಬಲವನ್ನು ಹೊಂದಿದೆ.

ಈ ಲೇಖನವನ್ನು ಮರುಪ್ರಕಟಿಸುವ ಆಸಕ್ತಿಯಿದೆಯೇ? ಇದಕ್ಕಾಗಿ ಈ ಇ-ಮೈಲ್ ವಿಳಾಸವನ್ನು ಸಂಪರ್ಕಿಸಿ: [email protected] ಒಂದು ಪ್ರತಿಯನ್ನು [email protected] . ಈ ವಿಳಾಸಕ್ಕೆ ಕಳಿಸಿ

ಅನುವಾದ: ಶಂಕರ ಎನ್. ಕೆಂಚನೂರು

انوبھا بھونسلے ۲۰۱۵ کی پاری فیلو، ایک آزاد صحافی، آئی سی ایف جے نائٹ فیلو، اور ‘Mother, Where’s My Country?’ کی مصنفہ ہیں، یہ کتاب بحران زدہ منی پور کی تاریخ اور مسلح افواج کو حاصل خصوصی اختیارات کے قانون (ایفسپا) کے اثرات کے بارے میں ہے۔

کے ذریعہ دیگر اسٹوریز Anubha Bhonsle
Sanskriti Talwar

سنسکرتی تلوار، نئی دہلی میں مقیم ایک آزاد صحافی ہیں اور سال ۲۰۲۳ کی پاری ایم ایم ایف فیلو ہیں۔

کے ذریعہ دیگر اسٹوریز Sanskriti Talwar
Illustration : Labani Jangi

لابنی جنگی مغربی بنگال کے ندیا ضلع سے ہیں اور سال ۲۰۲۰ سے پاری کی فیلو ہیں۔ وہ ایک ماہر پینٹر بھی ہیں، اور انہوں نے اس کی کوئی باقاعدہ تربیت نہیں حاصل کی ہے۔ وہ ’سنٹر فار اسٹڈیز اِن سوشل سائنسز‘، کولکاتا سے مزدوروں کی ہجرت کے ایشو پر پی ایچ ڈی لکھ رہی ہیں۔

کے ذریعہ دیگر اسٹوریز Labani Jangi
Series Editor : Sharmila Joshi

شرمیلا جوشی پیپلز آرکائیو آف رورل انڈیا کی سابق ایڈیٹوریل چیف ہیں، ساتھ ہی وہ ایک قلم کار، محقق اور عارضی ٹیچر بھی ہیں۔

کے ذریعہ دیگر اسٹوریز شرمیلا جوشی
Translator : Shankar N Kenchanuru

Shankar N. Kenchanuru is a poet and freelance translator. He can be reached at [email protected].

کے ذریعہ دیگر اسٹوریز Shankar N Kenchanuru