ದಿನಕರ್ ಐವಳೆಯವರ ಪಾಲಿಗೆ ಇದು ನೀರವ ವರ್ಷವಾಗಿತ್ತು, ಅವರ ಕೊಳಲುಗಳು ಯಾವುದೇ ಮಾಧುರ್ಯವನ್ನು ಹುಟ್ಟಿಸದೆ ತಿಂಗಳುಗಳನ್ನು ಕಳೆದಿವೆ. ಇಟ್ಟಿಗೆ ಮತ್ತು ಮಣ್ಣಿನ ಮನೆಯೊಳಗಿನ ತನ್ನ ಕಾರ್ಯಾಗಾರದಲ್ಲಿ ಕುಳಿತು ಅವರು ಹೇಳುತ್ತಾರೆ, “ಈ ವಾದ್ಯವನ್ನು ನೇರವಾಗಿ ಬಾಯಿಯಿಂದ ನುಡಿಸಲಾಗುತ್ತದೆ. ಕರೋನಾ ಅವಧಿಯಲ್ಲಿ ಈ ಸಂಪರ್ಕ ಅಪಾಯಕಾರಿ.”
ಅವರ ಪಕ್ಕದಲ್ಲಿ ಹಳೆಯ ಮರದ ಪೆಟ್ಟಿಗೆಯಿತ್ತು, ಅದರಲ್ಲಿ ಕೆಲಸದ ಸಲಕರಣೆಗಳು ತುಂಬಿದ್ದವು. ಒಂದು ಮೂಲೆಯಲ್ಲಿ ಅಚ್ಚುಕಟ್ಟಾಗಿ ಇಟ್ಟಿರುವ ಅವುಗಳನ್ನು ಒಂದು ವರ್ಷದ ಹಿಂದಿನಂತೆ ಬಳಸಿದ್ದರೆ, ಹಸಿ ಹಳದಿ ಬಿದಿರಿನ ಕಡ್ಡಿಗಳಿಂದ ಕೊಳಲು ತಯಾರಿಸಲು ಒಂದು ಗಂಟೆಗಿಂತ ಕಡಿಮೆ ಸಮಯ ತೆಗೆದುಕೊಳ್ಳುತ್ತದೆ.
ಆದರೆ, 74 ವರ್ಷದ ದಿನಕರ್ ನಮ್ಮ ಸಂಭಾಷಣೆಯ ಸಮಯದಲ್ಲಿ ನಿರ್ಜೀವ ಬಿದಿರಿನತ್ತ ನೋಡುತ್ತಾರೆ. ಮಾರ್ಚ್ 2020ರಲ್ಲಿ ಲಾಕ್‌ಡೌನ್ ಪ್ರಾರಂಭವಾದಾಗಿನಿಂದ ಅವರ ಕೆಲಸವು ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಅವರು ತಮ್ಮ ಬದುಕಿನ ಸುಮಾರು 150,000 ಗಂಟೆಗಳನ್ನು ಕರಕುಶಲತೆಗೆ ಮೀಸಲಿಟ್ಟರು ಮತ್ತು ಐದು ದಶಕಗಳಿಗಿಂತಲೂ ಹೆಚ್ಚು ಕಾಲ ದಿನಕ್ಕೆ 10 ಗಂಟೆಗಳ ಕಾಲ ಕೆಲಸ ಮಾಡಿದರು, ಎಂದರೆ ವರ್ಷಕ್ಕೆ 250ರಿಂದ 270 ದಿನಗಳು.
ಅವರು 19ನೇ ವಯಸ್ಸಿನಲ್ಲಿ ಕೊಳಲು ಮಾಡಲು ಪ್ರಾರಂಭಿಸಿದರು, ಅಂದಿನಿಂದ ಐವಳೆ ಇಂತಹ ದೀರ್ಘ ವಿರಾಮವನ್ನು ತೆಗೆದುಕೊಂಡಿರಲಿಲ್ಲ. ಮಹಾರಾಷ್ಟ್ರ ಮತ್ತು ಕರ್ನಾಟಕದ ವಿವಿಧ ಜಾತ್ರೆಗಳಲ್ಲಿ ಕೊಳಲುಗಳನ್ನು ಮಾರಾಟ ಮಾಡಲು ಅವರು ಸಾಮಾನ್ಯವಾಗಿ ಹಿಂದಿನ ವರ್ಷಗಳಲ್ಲಿ ಹೋದಂತೆ ಈ ವರ್ಷ ನೂರಾರು ಕಿಲೋಮೀಟರ್‌ಗಳನ್ನು ಪ್ರಯಾಣಿಸಲಿಲ್ಲ. ಜಾತ್ರೆಯಂತಹ ದೊಡ್ಡ ಸಮಾರಂಭಗಳಿಗೆ ಇನ್ನೂ ಅವಕಾಶ ನೀಡಿಲ್ಲ.
ಲಾಕ್‌ಡೌನ್‌ಗೆ ಮುಂಚೆಯೇ, ದಿನಕರ್ ಐವಳೆ ಅವರ ಕುಟುಂಬವು ಅವರ ಗ್ರಾಮ ಕೊಡೋಲಿಯಲ್ಲಿ ಕೊಳಲು ತಯಾರಕರಾಗಿದ್ದರು. ಇವರು ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿರುವ ಹೋಳರ್ ಸಮುದಾಯಕ್ಕೆ ಸೇರಿದವರು. ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಪನ್ಹಾಲಾ ತಾಲೂಕಿನಲ್ಲಿರುವ ಈ ಗ್ರಾಮವು ಸುಮಾರು 29,000 ಜನಸಂಖ್ಯೆಯನ್ನು ಹೊಂದಿದೆ (ಜನಗಣತಿ 2011).
ಹಿಂದೆ, ಅವರ ಸಮುದಾಯದ ಪುರುಷರು, ಸಾಂಪ್ರದಾಯಿಕವಾಗಿ ಶೆಹನಾಯ್ ಮತ್ತು ದಫ್ಡಾ ವಾದಕರು, ಧಾರ್ಮಿಕ ಅಥವಾ ಸಾಮಾಜಿಕ ಕಾರ್ಯಗಳಲ್ಲಿ ಪ್ರದರ್ಶನ ನೀಡುತ್ತಿದ್ದರು ಮತ್ತು ಹಳ್ಳಿಯಿಂದ ಹಳ್ಳಿಗೆ ಪ್ರಯಾಣಿಸುತ್ತಿದ್ದರು. ಅವರು ತಮ್ಮದೇ ತಂಡವೊಂದನ್ನು ಸಹ ರಚಿಸಿದ್ದರು ಮತ್ತು 1962ರಲ್ಲಿ ತಂಡಕ್ಕೆ ಸೇರಿದ 14-15 ಸಂಗೀತಗಾರರಲ್ಲಿ ದಿನಕರ್ ಒಬ್ಬರು. ಆಗ 16 ವರ್ಷ ವಯಸ್ಸಿನವರಾಗಿದ್ದ ಅವರು 8ನೇ ತರಗತಿಯಲ್ಲಿದ್ದಾಗ ಶಾಲೆಯನ್ನು ತೊರೆದ ನಂತರ, ಅವರ ತಂದೆ ದಿವಂಗತ ಬಾಬುರಾವ್ ಅವರೊಂದಿಗೆ ಕಾರ್ಯಕ್ರಮಗಳಿಗೆ ಹಾಜರಾಗಲು ಪ್ರಾರಂಭಿಸಿದರು. ನಂತರ ಅವರು ಎರಡು ಬ್ಯಾಂಡ್‌ಗಳಲ್ಲಿ ಪ್ರದರ್ಶನ ನೀಡಿದರು, ಒಂದು ಅವರ ಸ್ವಂತ ಹಳ್ಳಿಯಿಂದ ಮತ್ತು ಇನ್ನೊಂದು ಪಕ್ಕದ ಹಳ್ಳಿಯಿಂದ; ಎರಡರ ಹೆಸರೂ 'ಹನುಮಾನ್' ಬ್ಯಾಂಡ್.
ಐವಳೆ ಹೆಮ್ಮೆಯಿಂದ ಹೇಳುತ್ತಾರೆ, “ನನ್ನ ತಂದೆಯಂತೆ, ನಾನು ಬ್ಯಾಂಡ್‌ನಲ್ಲಿ 38 ವರ್ಷಗಳ ಕಾಲ ಕ್ಲಾರಿಯೊನೆಟ್ ಮತ್ತು ಕೊಳಲು ನುಡಿಸಿದ್ದೇನೆ.” ಅವರು ಈ ಪರಂಪರೆಯನ್ನು ಸ್ಪಷ್ಟವಾಗಿ ವಿವರಿಸುತ್ತಾರೆ: “ವಜಂತ್ರಿ ಚಾ ಮುಲ್ಗಾ ಜಾರ್ ರಾಡ್ಲಾ ತರ್ ತು ಸ್ವರಾಚ್ ರಡ್ನಾ [ತಂಡದಲ್ಲಿರುವ ಮಗು ಅತ್ತರೂ ಅದು ರಾಗದಿಂದ ಕೂಡಿರುತ್ತಿತ್ತು]. ಅವರು ಕೊಳಲು ಮತ್ತು ಶೆಹನಾಯಿಯನ್ನು ಅಷ್ಟೇ ಸುಲಭವಾಗಿ ಮತ್ತು ಕೌಶದದಿಂದ ನುಡಿಸುತ್ತಿದ್ದರು.
ಆದಾಗ್ಯೂ, ಬ್ಯಾಂಡ್ ನುಡಿಸುವುದರಿಂದ ಬರುವ ಆದಾಯವು ತುಂಬಾ ಕಡಿಮೆಯಿತ್ತು ಮತ್ತು ಎಂದಿಗೂ ನಿಯಮಿತವಾಗಿರಲಿಲ್ಲ. "14-15 ಜನರ ಗುಂಪಿಗೆ ಮೂರು ದಿನದ ಕಾರ್ಯಕ್ರಮಕ್ಕೆ ಒಟ್ಟು 60 ರೂಪಾಯಿಗಳು ಸಿಗುತ್ತಿತ್ತು" ಎಂದು ಅವರು ನೆನಪಿಸಿಕೊಳ್ಳುತ್ತಾರೆ. ಬ್ಯಾಂಡ್‌ನೊಂದಿಗೆ ಮೂರು ದಿನಗಳ ಕೆಲಸಕ್ಕೆ ಅವರು ಕೇವಲ 4 ರೂ. ಸಿಗುತ್ತಿತ್ತು. ಆದರೆ, ಅದು ಬದುಕು ನಡೆಸಲು ಸಾಲದಿದ್ದಾಗ, ಅವರು ಕೆಲವು ಇತರ ಕೌಶಲಗಳನ್ನು ಕಲಿಯಲು ಪ್ರಯತ್ನಿಸಿದರು.
ಅವರು ಕೊಳಲು ತಯಾರಿಸಲು ಹೇಗೆ ಪ್ರಾರಂಭಿಸಿದರು ಎಂಬುದನ್ನು ವಿವರಿಸುತ್ತಾ, “ಬೇರೆ ಆಯ್ಕೆ ಇರಲಿಲ್ಲ. ನನ್ನ ಕುಟುಂಬವನ್ನು ನಾನು ಹೇಗೆ ನೋಡಿಕೊಳ್ಳಲಿ? ಕೂಲಿ ಸಾಕಾಗಲಿಲ್ಲ. 1960ರ ದಶಕದಲ್ಲಿ, ಕೃಷಿ ಕೂಲಿಯಾಗಿ 10 ಗಂಟೆಗಳ ಕಾಲ ಕೆಲಸ ಮಾಡಿದ ಅವರು ಕೇವಲ 10 ಅಣೆಗಳನ್ನು ದಿನಗೂಲಿಯಾಗಿ ಪಡೆದರು (1 ಆಣೆಯು ಒಂದು ರೂಪಾಯಿಯ 1/16 ನೇ ಭಾಗ). ಅವರು ಸುಮಾರು ಎರಡು ದಶಕಗಳ ಕಾಲ ಕೂಲಿಯಾಗಿ ಕೆಲಸ ಮಾಡಿದರು, "ನನಗೆ ದಿನಕ್ಕೆ ಎರಡು ಹೊತ್ತು ಊಟವನ್ನು ನೀಡುವಂತಹ" ಕೆಲಸ ಹುಡುಕಿಕೊಳ್ಳುವ ತನಕ ಈ ಕೆಲಸ ಮಾಡಿದೆನೆಂದು ದಿನಕರ್ ಹೇಳುತ್ತಾರೆ.
ಅವರು 20 ಕಿಮೀ ದೂರದಲ್ಲಿರುವ ಸವರ್ಡೆ ಗ್ರಾಮದ ಕಡೆಗೆ ತೋರಿಸಿದರು, ಅಲ್ಲಿ ಅವರ ಮಾವ ದಿವಂಗತ ದಾಜಿರಾಮ್ ದೇಸಾಯಿ ಅವರಿಗೆ ಬಿದಿರಿನಿಂದ ಕೊಳಲು ಮಾಡುವ ಕೌಶಲವನ್ನು ಕಲಿಸಲು ಪ್ರಾರಂಭಿಸಿದರು. ಅವರು ಸಾಂದರ್ಭಿಕವಾಗಿ ಪ್ರವಾಸ ಹೋಗುವುದು ಮತ್ತು ಬ್ಯಾಂಡ್ ನುಡಿಸುವುದನ್ನು ಮುಂದುವರೆಸಿದರು. (2000 ರಲ್ಲಿ, ಅವರ ಪತ್ನಿ ತಾರಾಬಾಯಿ ಕೊರೊನರಿ ಬೈಪಾಸ್ ಶಸ್ತ್ರಚಿಕಿತ್ಸೆಗೆ ಒಳಗಾದಾಗ ಅವರ ಪ್ರಯಾಣವು ಸ್ಥಗಿತಗೊಂಡಿತು ಮತ್ತು ಅವರನ್ನು ನೋಡಿಕೊಳ್ಳಲು ಮನೆಯಲ್ಲಿಯೇ ಇರಬೇಕಾಯಿತು. ತಾರಾಬಾಯಿ 2019ರಲ್ಲಿ ನಿಧನರಾದರು.)
ಅವರ 52 ವರ್ಷದ ಮಗ ಸುರೇಂದ್ರ ಕೂಡ ತನ್ನ ತಂದೆಯಿಂದ ಕೊಳಲು ಮಾಡುವ ಜ್ಞಾನವನ್ನು ಪಡೆದಿದ್ದಾರೆ. (ದಿನಕರ್ ಮತ್ತು ತಾರಾಬಾಯಿಯವರ ಇಬ್ಬರು ಹೆಣ್ಣುಮಕ್ಕಳು ಮದುವೆಯಾಗಿದ್ದಾರೆ ಮತ್ತು ಒಬ್ಬರು ತೀರಿಕೊಂಡಿದ್ದಾರೆ). ಸುರೇಂದ್ರ ಅವರು 13ನೇ ವಯಸ್ಸಿನಲ್ಲಿ ಕೊಳಲು ಮಾರಾಟ ಮಾಡಲು ಪ್ರಾರಂಭಿಸಿದರು, ಮತ್ತು ಅವರು 16 ವರ್ಷದವರಾಗಿದ್ದಾಗ, ಅವರು ತಮ್ಮ ತಂದೆಯಂತೆ 10ನೇ ತರಗತಿಯನ್ನು ಬಿಟ್ಟು ಪೂರ್ಣ ಸಮಯ ಕೆಲಸ ಮಾಡಿದರು. ಅವರು ಹೇಳುತ್ತಾರೆ, "ಆರಂಭದಲ್ಲಿ, ನಾನು [ಬೀದಿಗಳಲ್ಲಿ ಕೊಳಲುಗಳನ್ನು ಮಾರಲು] ಹಿಂಜರಿಯುತ್ತಿದ್ದೆ ಮತ್ತು ನಾಚಿಕೆಪಡುತ್ತಿದ್ದೆ." ಆದರೆ ದಿನಕರ್ ಹೇಳುತ್ತಾರೆ, "ನೀವು ನಿಮ್ಮ ಕುಟುಂಬವನ್ನು ಪೋಷಿಸಬೇಕಿರುವಾಗ, ಯಾವುದಕ್ಕೂ ಹಿಂಜರಿಯುವುದಿಲ್ಲ."
ಕಳೆದ ವರ್ಷ ಲಾಕ್‌ಡೌನ್ ಪ್ರಾರಂಭವಾಗುವವರೆಗೂ, ಸುರೇಂದ್ರ ನಿಯಮಿತವಾಗಿ ತನ್ನ ತಂದೆಯೊಂದಿಗೆ ಪುಣೆ ಮತ್ತು ಮುಂಬೈನಂತಹ ನಗರಗಳ ವಿವಿಧ ಸ್ಥಳಗಳಿಗೆ ಕೊಳಲುಗಳನ್ನು ಮಾರಾಟ ಮಾಡಲು ಪ್ರಯಾಣಿಸುತ್ತಿದ್ದರು. ಆದರೆ ಮಾರ್ಚ್ ಮತ್ತು ಅಕ್ಟೋಬರ್ 2020ರ ನಡುವೆ, ಅವರು ಮತ್ತು ದಿನಕರ್ ಒಂದೇ ಒಂದು ಕೊಳಲನ್ನು ಮಾರಾಟ ಮಾಡಲು ಸಾಧ್ಯವಾಗಲಿಲ್ಲ. ನವೆಂಬರ್‌ನಲ್ಲಿ ಅವರು ಪಡೆದ ಏಕೈಕ ಆದೇಶವೆಂದರೆ, ಅವರ ಹಳ್ಳಿಯಿಂದ ಸುಮಾರು 55 ಕಿಮೀ ದೂರದಲ್ಲಿರುವ ಸಾಂಗ್ಲಿ ನಗರದ ವ್ಯಾಪಾರಿಯೊಬ್ಬರು ವಿವಿಧ ಗಾತ್ರದ ಐದು ಡಜನ್ ಕೊಳಲುಗಳನ್ನು ತಯಾರಿಸಲು ಹೇಳಿದ್ದು (ಅವರು ಸುಮಾರು 2.5 ಅಡಿ ಉದ್ದದ ತನಕ ಮಾಡುತ್ತಾರೆ). 60 ಕೊಳಲುಗಳನ್ನು 1500 ರೂ.ಗೆ ಮಾರಿದರು. ಯಾವುದೇ ಮಾರಾಟ ಅಥವಾ ಗಳಿಕೆಯಿಲ್ಲದ ಆ ತಿಂಗಳುಗಳಲ್ಲಿ, ಕುಟುಂಬವು ನಗರಗಳಲ್ಲಿ ಕೆಲಸ ಮಾಡುವ ತಮ್ಮ ಮಕ್ಕಳು ಮತ್ತು ಮೊಮ್ಮಕ್ಕಳು ಕಳುಹಿಸುವ ಹಣವನ್ನು ಅವಲಂಬಿಸಿತ್ತು.
ನವೆಂಬರ್ ನಂತರವೂ ವ್ಯಾಪಾರ ವಹಿವಾಟು ನಡೆಯಲಿಲ್ಲ.ದಿನಕರ್ ಮತ್ತು ಸುರೇಂದ್ರ ಒಂದು ವರ್ಷದ ಹಿಂದೆ ಸಾಂಗ್ಲಿ ಜಿಲ್ಲೆಯ ಔದುಂಬರ್ ಗ್ರಾಮಕ್ಕೆ ಫೆಬ್ರವರಿ 21, 2020ರಂದು ಕೊನೆಯ ಜಾತ್ರೆಗೆ ಹೋಗಿದ್ದರು. ಸುರೇಂದ್ರ ಹೇಳುತ್ತಾರೆ, "ಯಾವುದೇ ಜಾತ್ರೆಯಲ್ಲಿ, ನಾವು ಸುಮಾರು 2-2.5 ಸಕಲ್ (1 ಸಕಲ್ = 12 ಡಜನ್ = 144) ಕೊಳಲುಗಳನ್ನು ಸುಲಭವಾಗಿ ಮಾರಾಟ ಮಾಡಬಹುದು." ಐವಳೆ, ಯಾವುದೇ ಜಾತ್ರೆ ಬಂದರೂ ಮಾರಲೆಂದು, ಈಗಾಗಲೇ 500ಕ್ಕೂ ಹೆಚ್ಚು ಕೊಳಲುಗಳನ್ನು ತಯಾರಿಸಿಟ್ಟಿದ್ದಾರೆ.
ಪ್ರತಿ ವರ್ಷ, ಅವರು ಪಶ್ಚಿಮ ಮಹಾರಾಷ್ಟ್ರ ಮತ್ತು ಉತ್ತರ ಕರ್ನಾಟಕದ ಹಳ್ಳಿಗಳಲ್ಲಿ 70ಕ್ಕೂ ಹೆಚ್ಚು ಜಾತ್ರೆಗಳನ್ನು ಸುತ್ತುತ್ತಿದ್ದರು. ದಿನಕರ್ ಹೇಳುತ್ತಾರೆ, “ನಾವು ಸ್ಟ್ಯಾಂಡ್‌ನಲ್ಲಿ ಕನಿಷ್ಠ 50 ಕೊಳಲುಗಳನ್ನು ನೇತುಹಾಕುತ್ತೇವೆ ಮತ್ತು ನಮ್ಮ ಕೊಳಲು ನುಡಿಸುತ್ತೇವೆ. ಅದರ ಮಾಧುರ್ಯವು ಜನರನ್ನು ಆಕರ್ಷಿಸಿಬೇಕು, ಆಗ ಮಾತ್ರ ಅವರು ಕೊಳಲನ್ನು ಖರೀದಿಸುತ್ತಾರೆ."
ಈ ಕೊಳಲುಗಳನ್ನು ತಯಾರಿಸಲು, ಅವರು ಕೊಲ್ಹಾಪುರ ಜಿಲ್ಲೆಯ ಅಜ್ರಾ ಮತ್ತು ಚಂದಗಢ ತಾಲೂಕುಗಳ ಮಾರುಕಟ್ಟೆಗಳಿಂದ ಉತ್ತಮ ಗುಣಮಟ್ಟದ ಬಿದಿರನ್ನು ತರುತ್ತಾರೆ. ಒಂದು ಶೇಂಡಾ (ಅಂದಾಜು 8 ರಿಂದ 9 ಅಡಿ ಎತ್ತರ) ಪ್ರಸ್ತುತ 25 ರೂ. ಬೆಲೆಯಿದೆ. ದಿನಕರ್ ಹೇಳುತ್ತಾರೆ, “1965 ರಲ್ಲಿ ನಾನು ಕೊಳಲು ಮಾಡಲು ಪ್ರಾರಂಭಿಸಿದಾಗ 50 ಪೈಸೆ ಇತ್ತು. ಒಂದು ಶೇಂಡಾದಿಂದ ನಾವು ಸುಲಭವಾಗಿ 7-8 ಕೊಳಲುಗಳನ್ನು ತಯಾರಿಸಬಹುದು.”
ಫಿಪಲ್ ಕೊಳಲನ್ನು (ಇದು ಲಂಬವಾಗಿರುತ್ತದೆ) ಮಾಡಲು, ಅವರು ಕಚ್ಚಾ ಬಿದಿರಿನ ಕೋಲನ್ನು ಅಗತ್ಯವಿರುವ ಉದ್ದಕ್ಕೆ ಕತ್ತರಿಸಿದ ನಂತರ ಬಿದಿರಿನ ಟೊಳ್ಳು ಮಾಡಲು ಲೋಹದ ಕಂಬಿಯನ್ನು ತ್ವರಿತವಾಗಿ ಬಳಸುತ್ತಾರೆ; ಸಣ್ಣದೊಂದು ತಪ್ಪು ಕೂಡ ಕೊಳಲಿನ ಕಳಪೆ ಗುಣಮಟ್ಟಕ್ಕೆ ಕಾರಣವಾಗಬಹುದು, ಅಂತಹ ಕೊಳಲು ಸಾಧಾರಣ ಮಾಧುರ್ಯವನ್ನು ಉತ್ಪಾದಿಸುತ್ತದೆ. ಇವರು 15ಕ್ಕೂ ಹೆಚ್ಚು ಗಾತ್ರದ ಕೊಳಲುಗಳನ್ನು ತಯಾರಿಸುತ್ತಾರೆ.
ಕೊಳಲು ತಯಾರಿಸುವ ಮೊದಲು, ದಿನಕರ್ ಒಂದು ಕಿಲೋಗ್ರಾಂ ತೇಗದ ಮರವನ್ನು ಆಯತಾಕಾರದ ಸಣ್ಣ ತುಂಡುಗಳಾಗಿ ಕತ್ತರಿಸುತ್ತಾರೆ, ಇದನ್ನು ಮರಾಠಿಯಲ್ಲಿ ಖುಟ್ಟಾಯ (ಬೆಣೆ ಅಥವಾ ಫಿಪ್ಪಲ್ ಪ್ಲಗ್) ಎಂದು ಕರೆಯಲಾಗುತ್ತದೆ. ಬಿದಿರನ್ನು ಸ್ವಚ್ಛಗೊಳಿಸಿದ ನಂತರ, ತೇಗದ ಬೆಣೆಯನ್ನು ಸುತ್ತಿಗೆಯನ್ನು ಬಳಸಿ ಊದುವ ರಂಧ್ರಕ್ಕೆ ಸೇರಿಸಲಾಗುತ್ತದೆ, ಇದರಿಂದ ಉಸಿರಾಡುವ ಗಾಳಿಯು ಹೊರಬರುವುದಿಲ್ಲ.
ದಿನಕರರ ಪತ್ನಿ ತಾರಾಬಾಯಿ ಕೂಡ ಕೊಳಲು ತಯಾರಿಸುತ್ತಿದ್ದರು. ʼಅವಳು ವಿಶೇಷವಾಗಿ ಖುಟ್ಯಾ ಮಾಡುವುದರಲ್ಲಿ ನಿಪುಣಳಾಗಿದ್ದಳು. ಅವಳು ಮಾಡಿದ ಈ ಖುಟ್ಯಾವನ್ನು ಜ್ಞಾಪಕಾರ್ಥವಾಗಿ ಉಳಿಸಿಕೊಂಡಿದ್ದೇನೆ’ ಎಂದು ಕಣ್ಣೀರು ಹಾಕುತ್ತಾ ಹೇಳುತ್ತಾರೆ.
ತೇಗದ ಕಡ್ಡಿಗಳನ್ನು ಕೊಳಲಿನಲ್ಲಿ ಸ್ವರ ಹೊರಡಿಸುವ ರಂಧ್ರಗಳನ್ನು ಮಾಡಲು ಬಳಸಲಾಗುತ್ತದೆ, ಇದು ಅಳತೆ ಗುರುತುಗಳನ್ನು ಹೊಂದಿರುತ್ತದೆ. ಈ ಕೆಲಸವನ್ನು ಸರಿಯಾಗಿ ಮಾಡಲು ದಿನಕರ್ ಅಂತಹ 15 ಕೋಲುಗಳನ್ನು ಹೊಂದಿದ್ದಾರೆ. ಅವನು ಮತ್ತು ಸುರೇಂದ್ರ ಸುಮಾರು 30 ಕಿಲೋಮೀಟರ್ ದೂರದಲ್ಲಿರುವ ಕೊಲ್ಹಾಪುರ ನಗರದಲ್ಲಿ ಕಾರ್ಯಾಗಾರಗಳಿಗೆ ಹೋಗುತ್ತಾರೆ, ಅಲ್ಲಿ ನುರಿತ ಹಾರ್ಮೋನಿಯಂ ತಯಾರಕರು ಈ ಅಳತೆಗಳನ್ನು ಗುರುತಿಸುತ್ತಾರೆ.
ಅದರ ನಂತರ, ಸಾಂಪ್ರದಾಯಿಕ ಸಾಧನಗಳನ್ನು ಬಳಸಿಕೊಂಡು ಗುರುತಿಸಲಾದ ರಂಧ್ರಗಳನ್ನು ಕೈಯಿಂದ ತಯಾರಿಸಲಾಗುತ್ತದೆ. ಊದುವ ರಂಧ್ರದ ಬಳಿ ಅಥವಾ ಕೊಳಲಿನ ಉತ್ತರದ ತುದಿಯಲ್ಲಿ ಎಚ್ಚರಿಕೆಯಿಂದ ಮಸೂದ್ (ಬಾಯಿ) ತಯಾರಿಸುತ್ತಿರುವ ದಿನಕರ್ ಹೇಳುತ್ತಾರೆ, “ಡ್ರಿಲ್ ಯಂತ್ರವು ಇಡೀ ಕೊಳಲನ್ನು ಒಡೆಯುತ್ತದೆ, ಆದ್ದರಿಂದ ನಾವು ಯಾವುದೇ ಯಂತ್ರವನ್ನು ಬಳಸುವುದಿಲ್ಲ. ಮಸೂದ್ ಕೊಳಲಿನ ಮೂಗಿನಂತೆ ಕಾರ್ಯನಿರ್ವಹಿಸುತ್ತದೆ. ಇದು ಗಾಳಿಯ ಪ್ರಸರಣಕ್ಕೆ ಸಹಾಯ ಮಾಡುತ್ತದೆ."
ನಂತರ ಅವರು ಬಿದಿರಿನಲ್ಲಿ ನಿಖರವಾಗಿ ರಂಧ್ರಗಳನ್ನು ಮಾಡಲು ಕನಿಷ್ಠ ಆರು ಕಬ್ಬಿಣದ ಸರಳುಗಳನ್ನು (ಮರಾಠಿಯಲ್ಲಿ ಗಜ್) ಬಿಸಿಮಾಡುತ್ತಾರೆ. ದಿನಕರ್ ಹೇಳುತ್ತಾರೆ, “ಸಾಮಾನ್ಯವಾಗಿ, ನಾವು ಒಂದು ಬಾರಿಗೆ ಕನಿಷ್ಠ 50 ಕೊಳಲುಗಳನ್ನು ತೆಗೆದುಕೊಂಡು ಮೂರು ಗಂಟೆಗಳಲ್ಲಿ ಪ್ರಕ್ರಿಯೆಯನ್ನು ಪೂರ್ಣಗೊಳಿಸುತ್ತೇವೆ.” ಮುಂಜಾನೆ, ಅವರು ರಾಡ್ ಮತ್ತು ನೀರನ್ನು (ಸ್ನಾನಕ್ಕಾಗಿ) ಒಂದೇ ಚೂಲಿ (ಒಲೆ)ಯಲ್ಲಿ ಕಾಯಿಸುತ್ತಾರೆ. “ನಾವು ಎರಡೂ ಕಾರ್ಯಗಳನ್ನು ಸಾಧಿಸಬಹುದು," ಅವರು ಹೇಳುತ್ತಾರೆ.
ಸ್ವರ ಹೊರಡಿಸುವ ರಂಧ್ರ ಮಾಡಿದ ನಂತರ, ಅವರು ಸ್ಯಾಂಡ್ ಪೇಪರ್ ಬಳಸಿ ಕೊಳಲಿಗೆ ಹೊಳಪು ನೀಡುತ್ತಾರೆ. ಈಗ ಬೆಣೆಯ ಹೆಚ್ಚುವರಿ ಭಾಗವನ್ನು ಅದರ ಆಕಾರಕ್ಕೆ ಕತ್ತರಿಸಲಾಗುತ್ತದೆ. ಕೊಳಲು ಮತ್ತು ಅದರ ಬಾಯಿಯ ಉತ್ತರದ ತುದಿಯ ನಡುವೆ ಊದುವ ಗಾಳಿಗೆ ಸಣ್ಣ ಮಾರ್ಗವನ್ನು ರಚಿಸಲು ಇದು ಸಹಾಯ ಮಾಡುತ್ತದೆ.
ಈ ಶ್ರಮದಾಯಕ ಪ್ರಕ್ರಿಯೆಯನ್ನು ದಿನಕರ್ ವಿವರಿಸುತ್ತಾರೆ, “ಬಿದಿರಿನ ಪ್ರತಿಯೊಂದು ತುಂಡು ನಮ್ಮ ಕೈಯಿಂದ ಕನಿಷ್ಠ 50 ಬಾರಿ ಹಾದುಹೋಗುತ್ತದೆ. ಕೊಳಲು ಸರಳವಾಗಿ ಕಾಣುತ್ತದೆ, ಆದರೆ ಅದನ್ನು ಮಾಡುವುದು ಸುಲಭವಲ್ಲ.”
ಸುರೇಂದ್ರ ಅವರ ಪತ್ನಿ 40 ವರ್ಷ ವಯಸ್ಸಿನ ಸರಿತಾ ಅವರು ಕೂಡ ಗುರುತಿಸಲಾದ ಗುಂಡಿಗಳನ್ನು ಕೊರೆಯುವುದು, ಕಂಬಿಗಳನ್ನು ಬಿಸಿ ಮಾಡುವುದು, ತೇಗದ ಮರವನ್ನು ಕತ್ತರಿಸುವುದು ಮತ್ತು ಖುಟ್ಯಾಗಳನ್ನು ಮಾಡುವ ಕೆಲಸವನ್ನು ಮಾಡುತ್ತಾರೆ. ಅವರು ಹೇಳುತ್ತಾರೆ, “ನಮಗೆ, ಈ ಕೌಶಲವು ದೇವರ ಕೊಡುಗೆಯಾಗಿದೆ. ನಾವು ಅದನ್ನು ಕಲಿಯಬೇಕಾಗಿಲ್ಲ. ”
ಲಾಕ್‌ಡೌನ್‌ಗೆ ಮುನ್ನ, ದಿನಕರ್ ಮತ್ತು ಸುರೇಂದ್ರ ಜಾತ್ರೆಗಳಲ್ಲಿ ಸಾಮಾನ್ಯವಾಗಿ ದೊಡ್ಡ ಕೊಳಲುಗಳನ್ನು (ಸಂಗೀತಗಾರರು ಬಳಸುತ್ತಾರೆ) 70ರಿಂದ 80 ರೂಗಳಿಗೆ ಮತ್ತು ಚಿಕ್ಕ ಕೊಳಲುಗಳನ್ನು 20-25 ರೂಗಳಿಗೆ ಮಾರಾಟ ಮಾಡುತ್ತಿದ್ದರು. ಮಿಶ್ರ ಗಾತ್ರದ ಹನ್ನೆರಡು ಕೊಳಲುಗಳಿಗೆ ವರ್ಷದ ಹಿಂದಿನವರೆಗೂ 300ರಿಂದ 350 ರೂಪಾಯಿ ಸಿಗುತ್ತಿತ್ತು.
ಐವಳೆ ಬದಿಯಿಂದ ಊದುವ ಕೊಳಲನ್ನು ಸಹ ತಯಾರಿಸುತ್ತಾರೆ, ಇದನ್ನು ಬಾಯಿ ಅಥವಾ ತುಟಿಗಳ ಮೇಲೆ ಅಡ್ಡಲಾಗಿ ನುಡಿಸಲಾಗುತ್ತದೆ, ಇದನ್ನು ನೆಲಕ್ಕೆ ಸಮಾನಾಂತರವಾಗಿ ನುಡಿಸಲಾಗುತ್ತದೆ. ದಿನಕರ್ ಹೇಳುತ್ತಾರೆ, “ನಾವು ಅದನ್ನು ಕೃಷ್ಣ ಕೊಳಲು ಎಂದು ಕರೆಯುತ್ತೇವೆ. ಜನರು ಅದನ್ನು ತಮ್ಮ ಮನೆಯ ಹೊರಗೆ ನೇತುಹಾಕುತ್ತಾರೆ, ಏಕೆಂದರೆ ಇದು ಒಳ್ಳೆಯ ಶಕುನವೆಂದು ಪರಿಗಣಿಸಲಾಗಿದೆ. ಪ್ರತಿ ಕೃಷ್ಣ ಕೊಳಲು ಕನಿಷ್ಠ 100 ರೂಪಾಯಿಗೆ ಮಾರಾಟವಾಗುತ್ತದೆ ಮತ್ತು ನಗರಗಳಲ್ಲಿ ಹೆಚ್ಚಿನ ಬೇಡಿಕೆಯಿದೆ." ಲಾಕ್‌ಡೌನ್ ಪೂರ್ವದ ಸಮಯವನ್ನು ಉಲ್ಲೇಖಿಸಿ, ದಿನಕರ್ ಹೇಳುತ್ತಾರೆ, ಕೊಳಲುಗಳನ್ನು ಮಾರಾಟ ಮಾಡುವ ಮೂಲಕ ಪಡೆಯುವ ಹಣವು ಅವರ ಶ್ರಮಕ್ಕೆ ಅಷ್ಟೇನೂ ಸರಿದೂಗುವುದಿಲ್ಲ, "ಆದಾಗ್ಯೂ, ಇದರಿಂದ ಒಂದಷ್ಟು ಹಣ ದೊರೆಯುತ್ತದೆ."
ಐದು ದಶಕಗಳಿಂದ ಕೊಳಲುಗಳನ್ನು ತಯಾರಿಸುತ್ತಿರುವ ಈ ನಾಜೂಕಿನ ಹಾಗೂ ಉತ್ತಮ ಕೆಲಸ ದಿನಕರ್ ಅವರ ಕಣ್ಣಿಗೆ ಕಷ್ಟ ನೀಡಿದೆ. ಕೆಲ ವರ್ಷಗಳ ಹಿಂದೆ ಅವರಿಗೆ ಕಣ್ಣಿನ ಪೊರೆ ಕಾಣಿಸಿಕೊಂಡಿತ್ತು. ಅವರು 2011 ಮತ್ತು 2014ರಲ್ಲಿ ಮಾಡಿದ ಎರಡು ಶಸ್ತ್ರಚಿಕಿತ್ಸೆಗಳನ್ನು ಉಲ್ಲೇಖಿಸಿ, "ಈಗ ನಾನು ಸ್ಪಷ್ಟವಾಗಿ ನೋಡಬಲ್ಲೆ. ಆದರೆ ಈ ಕೆಲಸವು ಬೆನ್ನಿನಲ್ಲಿ ಸಾಕಷ್ಟು ನೋವನ್ನು ಉಂಟುಮಾಡುತ್ತದೆ."
ಯಾರಾದರೂ ಅವರನ್ನು ʼನಿಮ್ಮ ಬದುಕಿನಲ್ಲಿ ಏನು ಸಾಧನೆ ಮಾಡಿದ್ದೀರಿ?ʼ ಎಂದು ಕೇಳಿದರೆ ಅದಕ್ಕೆ ಉತ್ತರವಾಗಿ ದಿನಕರ್ ಹೇಳುತ್ತಾರೆ, “ಈ ಕೊಳಲು ತಯಾರಿಸುವ ಕೆಲಸದಿಂದಲೇ ನನ್ನ ಎಲ್ಲಾ ಮಕ್ಕಳು ಮತ್ತು ಮೊಮ್ಮಕ್ಕಳು ಓದಲು ಸಾಧ್ಯವಾಯಿತು ಮತ್ತು ಜೀವನದಲ್ಲಿ ಪ್ರಗತಿ ಸಾಧಿಸಬಹುದು ಎಂದು ನಾನು ಅವರಿಗೆ ಹೆಮ್ಮೆಯಿಂದ ಹೇಳಬಲ್ಲೆ; ನಾನು ಅವರನ್ನು ಸರಿಯಾದ ಹಾದಿಯಲ್ಲಿ ನಡೆಸಿದ್ದೇನೆ. ಈ ಕಲೆ ನಮಗೆ ಎಲ್ಲವನ್ನೂ ನೀಡಿದೆ.”
2000ನೇ ಇಸವಿಯಿಂದ ದಿನಕರ್ ಇತರರಿಗೂ ಕೊಳಲು ನುಡಿಸುವುದನ್ನು ಹೇಳಿಕೊಡುತ್ತಿದ್ದು, ಕೊಡೋಳಿ ಗ್ರಾಮದಲ್ಲಿ 'ಉಸ್ತಾದ್' ಎಂದೇ ಖ್ಯಾತರಾಗಿದ್ದಾರೆ. ಅವರ ವಿದ್ಯಾರ್ಥಿಗಳಲ್ಲಿ ವೈದ್ಯರು, ಶಿಕ್ಷಕರು, ರೈತರು ಮತ್ತು ಹತ್ತಿರದ ಪಟ್ಟಣಗಳು ಮತ್ತು ಹಳ್ಳಿಗಳ ವ್ಯಾಪಾರಿಗಳು ಸೇರಿದ್ದಾರೆ. ಇಲ್ಲಿಯವರೆಗೆ ಅವರಿಂದ ಕಲಿತ ಕನಿಷ್ಠ 50 ವಿದ್ಯಾರ್ಥಿಗಳು ಇದ್ದಾರೆ ಎಂದು ಅವರು ಅಂದಾಜಿಸಿದ್ದಾರೆ. ಅವರು ಕಲಿಸಲು ಯಾವುದೇ ಶುಲ್ಕವನ್ನು ವಿಧಿಸುವುದಿಲ್ಲ. "ಜನರು ನನ್ನ ಹೆಸರನ್ನು ನೆನಪಿಸಿಕೊಂಡರೆ ಸಾಕು" ಎಂದು ಅವರು ಹೇಳುತ್ತಾರೆ.
ಲಾಕ್‌ಡೌನ್ ಮತ್ತು ನಂತರದ ಪರಿಸ್ಥಿತಿಯು ಅವರ ವ್ಯವಹಾರದ ಮೇಲೆ ಸಾಕಷ್ಟು ಪರಿಣಾಮ ಬೀರಿದ್ದರೂ, ಮುಂದೆ ಕೊಳಲುಗಳಿಗೆ ಬೇಡಿಕೆ ಹೆಚ್ಚಾಗುತ್ತದೆ ಎಂದು ದಿನಕರ್ ವಿಶ್ವಾಸ ವ್ಯಕ್ತಪಡಿಸುತ್ತಾರೆ. ಯುವ ಪೀಳಿಗೆಯ ಆಕಾಂಕ್ಷೆಗಳು ವಿಭಿನ್ನವಾಗಿವೆ ಎಂದು ಅವರು ತಿಳಿದಿದ್ದಾರೆ ಮತ್ತು ಕೆಲವರು ಮಾತ್ರ ಕೊಳಲು ಮಾಡುವ ಕಲೆಯನ್ನು ಕಲಿಯಲು ಬಯಸುತ್ತಾರೆ. ಅವರು ಹೇಳುತ್ತಾರೆ, “ನೀವು ಸಾಕಷ್ಟು ಹಣವನ್ನು [ಅದರಿಂದ] ಗಳಿಸಬಹುದು, ಆದರೆ ಈಗ ಯಾರು ಕಷ್ಟಪಟ್ಟು ಕೆಲಸ ಮಾಡಲು ಬಯಸುತ್ತಾರೆ? ಕಲಿಯುವ ಉತ್ಸಾಹವಿದ್ದಾಗ, ಒಬ್ಬ ಸಮಯವನ್ನು ಹೊಂದಿಸಿಕೊಳ್ಳಬಲ್ಲ. ಇದು ಕಲೆಗಾಗಿ ನಿಮಗಿರುವ ತುಡಿತವನ್ನು ಅವಲಂಬಿಸಿರುತ್ತದೆ.”
74ರ ಹರೆಯದಲ್ಲೂ ಅದೇ ಇಚ್ಛಾಶಕ್ತಿ ದಿನಕರ್‌ನಲ್ಲಿ ಉಳಿದುಕೊಂಡಿದ್ದು, ಇಂದಿಗೂ ಕೊಳಲು ವಾದನವನ್ನು ಮುಂದುವರೆಸಿದ್ದಾರೆ. ಆದರೆ, ಈಗ ಕೊಳಲು ನುಡಿಸುವಾಗ ಕೆಲವೊಮ್ಮೆ ಉಸಿರುಗಟ್ಟುವಿಕೆ ಕಾಣಿಸಿಕೊಳ್ಳುತ್ತದೆ. "ನಾನು ಬದುಕಿರುವವರೆಗೂ, ಈ ಕೌಶಲ [ಕೊಳಲು ತಯಾರಿಸುವುದು ಮತ್ತು ನುಡಿಸುವುದು] ಸಹ ಉಳಿಯುತ್ತದೆ" ಎಂದು ಅವರು ಹೇಳುತ್ತಾರೆ.
ಅನುವಾದ: ಶಂಕರ. ಎನ್. ಕೆಂಚನೂರು