ಕಾಲಿನ ಕೆಳಗೆ ಹಸಿರು ಹುಲ್ಲು, ಮೇಲೆ ತೆರೆದ ಆಕಾಶ, ಸುತ್ತಲೂ ಸೊಂಪಾದ ಮರಗಳು ಮತ್ತು ಕಾಡಿನ ಮೂಲಕ ಹರಿಯುವ ಶಾಂತವಾದ ನೀರಿನ ಪ್ರವಾಹ - ಇದು ಗ್ರಾಮೀಣ ಮಹಾರಾಷ್ಟ್ರದ ಎಲ್ಲಿಯಾದರೂ ಕಾಣಬಹುದಾದ ಸಾಮಾನ್ಯ ದೃಶ್ಯ.

ಸ್ವಲ್ಪ ಇರಿ, ಗೀತಾ ಏನೋ ಹೇಳುತ್ತಿದ್ದಾರೆ ಕೇಳಿ. ಹರಿಯುವ ತೊರೆಯತ್ತ ಬೆರಳು ತೋರಿಸುತ್ತಾ ಅವರು ಹೇಳುತ್ತಾರೆ: “ನಾವು ಮಹಿಳೆಯರು ಎಡಕ್ಕೆ ಹೋಗುತ್ತೇವೆ, ಪುರುಷರು ಬಲಕ್ಕೆ.” ಇದು ಅವರು ತಮ್ಮ ವಸ್ತಿಯಲ್ಲಿ ಮಾಡಿಕೊಂಡಿರುವ ಬಯಲು ಶೌಚಾಲಯದ ವ್ಯವಸ್ಥೆ.

“ಮಳೆ ಬಂದಾಗ ನಾವು ಕೊಡೆ ಹಿಡಿದು ಅಂಗಾಲು ಮುಳುಗುವ ನೀರಿನಲ್ಲಿ ಕೂರಬೇಕು. ಇನ್ನು ಮುಟ್ಟಿನ ಸಮಯದಲ್ಲಿ ನಮ್ಮ ಪರಿಸ್ಥಿತಿ ಹೇಗಿರುತ್ತದೆಯೆನ್ನುವುದರ ಕುರಿತು ನಾನು ಏನು ಹೇಳಲಿ ನಿಮಗೆ?” ಎಂದು ಕೇಳುತ್ತಾರೆ 40 ವರ್ಷದ ಗೀತಾ.

ಪುಣೆ ಜಿಲ್ಲೆಯ ಶಿರೂರು ತಾಲ್ಲೂಕಿನ ಕುರುಲಿ ಗ್ರಾಮದ ಹೊರವಲಯದಲ್ಲಿರುವ ಅವರ 50 ಕುಟುಂಬಗಳ ಕಾಲೋನಿಯಲ್ಲಿ ಭಿಲ್ ಮತ್ತು ಪಾರ್ಧಿ ಕುಟುಂಬಗಳು ವಾಸಿಸುತ್ತಿವೆ. ಮಹಾರಾಷ್ಟ್ರದಲ್ಲಿ ಪರಿಶಿಷ್ಟ ಪಂಗಡಗಳೆಂದು ವರ್ಗೀಕರಿಸಲಾದ ಈ ಎರಡು ಸಮುದಾಯಗಳು ರಾಜ್ಯದ ಅತ್ಯಂತ ಬಡ ಮತ್ತು ಅತ್ಯಂತ ಅಂಚಿನಲ್ಲಿರುವ ಸಮುದಾಯಗಳಲ್ಲಿ ಸೇರಿವೆ.

ಭಿಲ್ ಸಮುದಾಯದವರಾದ ಗೀತಾ, ಬಯಲಿನಲ್ಲಿ ಶೌಚಕ್ಕೆ ಹೋಗುವದರಲ್ಲಿ ಇರುವ ಅನಾನುಕೂಲತೆಯ ಬಗ್ಗೆ ಮುಕ್ತವಾಗಿ ಮಾತನಾಡುತ್ತಾರೆ. "ನಾವು ಕುಳಿತಲ್ಲಿ ಹುಲ್ಲು ಚುಚ್ಚಿ ನೋಯಿಸುತ್ತದೆ, ಮತ್ತು ಸೊಳ್ಳೆಗಳು ಕಚ್ಚುತ್ತವೆ... ಜೊತೆಗೆ ಹಾವು ಕಚ್ಚುವ ಭಯವಂತೂ ಯಾವಾಗಲೂ ಇದ್ದೇ ಇರುತ್ತದೆ."

ಕಾಲೋನಿ ನಿವಾಸಿಗಳು ಪ್ರತಿ ಹಂತದಲ್ಲೂ ಸವಾಲುಗಳನ್ನು ಎದುರಿಸುತ್ತಾರೆ - ವಿಶೇಷವಾಗಿ ಮಹಿಳೆಯರು, ಕಾಡಿಗೆ ಹೋಗುವ ದಾರಿಯಲ್ಲಿ ದಾಳಿಗೊಳಗಾಗುವ ಭಯವೂ ಅವುಗಳಲ್ಲಿ ಒಂದು.

The stream where residents of the Bhil and Pardhi vasti near Kuruli village go to relieve themselves.
PHOTO • Jyoti Shinoli
The tree that was planted by Vithabai
PHOTO • Jyoti Shinoli

ಎಡಕ್ಕೆ: ಕುರುಲಿ ಗ್ರಾಮದ ಬಳಿಯ ಭಿಲ್ ಮತ್ತು ಪಾರ್ಧಿ ವಸ್ತಿಯ ನಿವಾಸಿಗಳು ದೈನಂದಿನ ಶೌಚಕ್ಕೆ ಅವಲಂಬಿಸಿರುವ ತೊರೆ. ಬಲಕ್ಕೆ: ವಿಠಾಬಾಯಿ ನೆಟ್ಟ ಮರ

"ನಾವು ಬೆಳಿಗ್ಗೆ ನಾಲ್ಕು ಗಂಟೆಗೆ ಗುಂಪುಗಳಲ್ಲಿ ಹೋಗುತ್ತೇವೆ, ಆದರೆ ಯಾರಾದರೂ ಬಂದು ದಾಳಿ ಮಾಡಿದರೆ ಏನಾಗಬಹುದು ಎಂದು ನಾವು ಹೆದರುತ್ತಲೇ ಇರುತ್ತೇವೆ..." ಎಂದು ಭಿಲ್ ಎಂಬ 22 ವರ್ಷದ ಸ್ವಾತಿ ಹೇಳುತ್ತಾರೆ.

ಗ್ರಾಮದಿಂದ ಎರಡು ಕಿಲೋಮೀಟರ್ ದೂರದಲ್ಲಿರುವ ಅವರ ಕಾಲೋನಿ ಕುರುಲಿ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಬರುತ್ತದೆ. ಆದರೆ ಸ್ಥಳೀಯ ಸಂಸ್ಥೆಗೆ ಹಲವಾರು ಮನವಿಗಳು ಮತ್ತು ಅರ್ಜಿಗಳನ್ನು ಸಲ್ಲಿಸಿದ  ಹೊರತಾಗಿಯೂ, ಕಾಲೋನಿಗೆ ಇನ್ನೂ ವಿದ್ಯುತ್, ಕುಡಿಯುವ ನೀರು ಮತ್ತು ಶೌಚಾಲಯಗಳ ಸೌಲಭ್ಯಗಳು ಲಭ್ಯವಾಗಿಲ್ಲ. "ಅವರು [ಪಂಚಾಯತ್] ಎಂದಿಗೂ ನಮ್ಮ ಅಹವಾಲುಗಳನ್ನು ಕೇಳುವುದಿಲ್ಲ," ಎಂದು 60ರ ದಶಕದ ಉತ್ತರಾರ್ಧದಲ್ಲಿರುವ ವಿಠಾಬಾಯಿ ಹೇಳುತ್ತಾರೆ.

ಈ ಪ್ರತ್ಯೇಕ ಕಾಲೋನಿಯ ಸಂತ್ರಸ್ತ ನಿವಾಸಿಗಳು ಶೌಚಾಲಯ ಸೌಲಭ್ಯವಿಲ್ಲದ ರಾಜ್ಯದ ಪರಿಶಿಷ್ಟ ಪಂಗಡದ ಶೇಕಡಾ 39ರಷ್ಟು ಜನರಲ್ಲಿ ಸೇರಿದ್ದಾರೆ. ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ 2019-21 ( NFHS -5 ) ಪ್ರಕಾರ, ಗ್ರಾಮೀಣ ಮಹಾರಾಷ್ಟ್ರದ ಶೇಕಡಾ 23ರಷ್ಟು ಕುಟುಂಬಗಳು "ಯಾವುದೇ ನೈರ್ಮಲ್ಯ ಸೌಲಭ್ಯವನ್ನು ಬಳಸುವುದಿಲ್ಲ; ಅವರು ತೆರೆದ ಸ್ಥಳಗಳು ಅಥವಾ ಹೊಲಗಳನ್ನು ಬಳಸುತ್ತಾರೆ."

ಆದರೆ ಸ್ವಚ್ಛ ಭಾರತ್ ಮಿಷನ್ (ಗ್ರಾಮೀಣ್) ನಾಟಕೀಯವಾಗಿ " SBM (G) 100 ಪ್ರತಿಶತ ಗ್ರಾಮೀಣ ನೈರ್ಮಲ್ಯ ವ್ಯಾಪ್ತಿಯ ಅಸಾಧ್ಯವಾದ ಕಾರ್ಯವನ್ನು ಸಾಧಿಸಿದೆ ಮತ್ತು ಹಂತ 1 (2014-19)ರಲ್ಲಿ ಕಾಲಮಿತಿಯೊಳಗೆ ಭಾರತವನ್ನು ಬಯಲು ಬಹಿರ್ದೆಸೆ ಮುಕ್ತ ದೇಶವಾಗಿ ಪರಿವರ್ತಿಸಿದೆ," ಎಂದು ಘೋಷಿಸಿದೆ.

ವಿಠಾಬಾಯಿ ತನ್ನ ಜೀವನದ ಬಹುಭಾಗವನ್ನು ಕಳೆದ ಕುರುಲಿಯ ಹೊರವಲಯದಲ್ಲಿರುವ ಕಾಲೋನಿಯಲ್ಲಿನ ಒಂದು ಮರವನ್ನು ತೋರಿಸಿ ಹೇಳುತ್ತಾರೆ, "ಈ ಮರವನ್ನು ನೆಟ್ಟಿದ್ದು ನಾನೇ. ಈಗ ನೀವು ನನ್ನ ವಯಸ್ಸನ್ನು ಲೆಕ್ಕಹಾಕಿ. ಹಾಗೂ ಆ ಮೂಲಕ ಶೌಚಾಲಯಕ್ಕೆ ಹೋಗಲು ನಾನು ಅಲ್ಲಿಗೆ (ಕಾಡಿಗೆ) ಎಷ್ಟು ವರ್ಷಗಳಿಂದ ಹೋಗುತ್ತಿದ್ದೇನೆಂದು ಲೆಕ್ಕಹಾಕಿ."

ಅನುವಾದ: ಶಂಕರ. ಎನ್. ಕೆಂಚನೂರು

Jyoti Shinoli

جیوتی شنولی پیپلز آرکائیو آف رورل انڈیا کی ایک رپورٹر ہیں؛ وہ پہلے ’می مراٹھی‘ اور ’مہاراشٹر۱‘ جیسے نیوز چینلوں کے ساتھ کام کر چکی ہیں۔

کے ذریعہ دیگر اسٹوریز جیوتی شنولی
Editor : Vinutha Mallya

ونوتا مالیہ، پیپلز آرکائیو آف رورل انڈیا کے لیے بطور کنسلٹنگ ایڈیٹر کام کرتی ہیں۔ وہ جنوری سے دسمبر ۲۰۲۲ تک پاری کی ایڈیٹوریل چیف رہ چکی ہیں۔

کے ذریعہ دیگر اسٹوریز Vinutha Mallya
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

کے ذریعہ دیگر اسٹوریز Shankar N. Kenchanuru