ಪುಣೆಯ ಮುಲ್ಶಿ ತಾಲ್ಲೂಕಿನವರಾದ ತಾರಾ ಉಭೆ ಗ್ರೈಂಡ್‌ಮಿಲ್ ಸಾಂಗ್ ಪ್ರಾಜೆಕ್ಟಿನ ಆರಂಭದ ಕುರಿತು ಮಾತನಾಡಿದ್ದಾರೆ. ಅವರು ಊರಿನ ಸೂಲಗಿತ್ತಿಯ ಪ್ರಾಮುಖ್ಯತೆಯ ಕುರಿತು ಕೆಲವು ಹಾಡುಗಳನ್ನು ಹಾಡುವುದರ ಜೊತೆಗೆ ಅವರು ಹೊಂದಿದ್ದ ವಿಶೇಷ ಜ್ಞಾನವು ಕಣ್ಮರೆಯಾಗುತ್ತಿರುವುದರ ಕುರಿತಾಗಿಯೂ ಹಾಡಿದ್ದಾರೆ
"ಹೆಣ್ಣು ಎಂದರೇನು? ಅವಳು ಆಟಿಕೆಯೇ ಅಥವಾ ವಸ್ತುವೇ? ಅವಳು ಜೀವಂತ ಜೀವಿಯಾಗಿದ್ದರೆ, ನಾವು ಅವಳ ಜೀವನದ ಬಗ್ಗೆ ಯೋಚಿಸಬೇಕಲ್ಲವೇ? ಆದರೆ ದೀರ್ಘಕಾಲದವರೆಗೆ, ಮಹಿಳೆಯ ಬದುಕನ್ನು ಮಾನವ ಅಸ್ತಿತ್ವವೆಂದು ಪರಿಗಣಿಸಲಾಗಿಲ್ಲ. ಕೆಲವರು ಮಹಿಳೆಯರನ್ನು 'ಚುಲಿಚಿ ರಾಖ್' (ಅಡಿಗೆ ಒಲೆಯ ಬೂದಿ) ಅಥವಾ 'ಕಂಡ್ಯಾಚಿ ಪಾಟ್' (ವಸಂತಕಾಲದ ಈರುಳ್ಳಿಯ ಹಸಿರು ಕಾಂಡಗಳು) ಎಂದು ಕರೆಯುತ್ತಾರೆ. ಒಬ್ಬ ಮಹಿಳೆಯನ್ನು ನಾವು ಮಾನವ ಜೀವಿ ಎಂದು ಪರಿಗಣಿಸುತ್ತೇವೆಯೇ?"
ತಾರಾ ಉಭೆಯವರ ಪ್ರಶ್ನೆಗಳು ಅವರ ತೀಕ್ಷ್ಣ ಕಣ್ಣುಗಳಂತೆ ಕೇಳುಗರನ್ನು ಯೋಚಿಸುವಂತೆ ಮಾಡುತ್ತವೆ. ನಾವು ಅವರನ್ನು ಫೆಬ್ರವರಿ 2022ರಲ್ಲಿ ಪುಣೆ ನಗರದಿಂದ ಸುಮಾರು 40 ಕಿಮೀ ದೂರದಲ್ಲಿರುವ ಕೊಲವಡೆ ಗ್ರಾಮದ ಖಡಕವಾಡಿಯಲ್ಲಿನ ಅವರ ಮನೆಯಲ್ಲಿ ಭೇಟಿಯಾದೆವು. ಪುಣೆ ಜಿಲ್ಲೆಯ ಗುಡ್ಡಗಾಡು ಪ್ರದೇಶಗಳಲ್ಲಿ ಬಡವರ ನಡುವೆ ಕೆಲಸ ಮಾಡುವ ಸಂಸ್ಥೆಯಾದ ಗರೀಬ್ ಡೋಂಗ್ರಿ ಸಂಘಟನೆಯ ಸದಸ್ಯರಾಗಿ ಮುಲ್ಶಿಯ ಹಳ್ಳಿಗಳಲ್ಲಿ ತಳಮಟ್ಟದ ನಾಯಕರಾಗಿ ಅವರು ಮಾಡಿದ ಕೆಲಸದ ಕುರಿತು ನಮಗೆ ತಿಳಿಸಿದರು. ಅವರು ಗ್ರೈಂಡ್‌ಮಿಲ್ ಸಾಂಗ್ ಪ್ರಾಜೆಕ್ಟ್‌ನ ಪ್ರಾರಂಭ ಮತ್ತು ಅದರ ಆರಂಭಿಕ ದಿನಗಳ ಬಗ್ಗೆ ಮಾತನಾಡಿದರು, ಅವರು ಮತ್ತು ಇತರರು ಅದಕ್ಕಾಗಿ ಹಾಡುಗಳನ್ನು ಸಂಗ್ರಹಿಸಿದ್ದರು.
ಗರೀಬ್ ಡೋಂಗ್ರಿ ಸಂಸ್ಥೆ (ಜಿಡಿಎಸ್)ಯನ್ನು 1975ರಲ್ಲಿ ಸಾಮಾಜಿಕ ವಿಜ್ಞಾನಿಗಳಾದ ಹೇಮಾ ರಾಯ್ಕರ್ ಮತ್ತು ಗೈ ಪೊಯಿಟ್ವಿನ್ ಸ್ಥಾಪಿಸಿದರು. ತಾರಾಬಾಯಿ ಮತ್ತು ಕೊಲವಡೆ ಮತ್ತು ಇತರ ಗ್ರಾಮಗಳ ಕೆಲವು ಮಹಿಳೆಯರು 1980ರ ದಶಕದ ಮಧ್ಯಭಾಗದಲ್ಲಿ ಅವರನ್ನು ಭೇಟಿಯಾದರು ಮತ್ತು ಶೀಘ್ರದಲ್ಲೇ ಸಂಘಟನೆಯನ್ನು ಸೇರಿದರು. ಆ ದಿನಗಳಲ್ಲಿ ಮುಲ್ಶಿಯ ಗ್ರಾಮಗಳಿಗೆ ಪೈಪ್‌ಲೈನ್ ನೀರು, ವಿದ್ಯುತ್, ಪಕ್ಕಾ ರಸ್ತೆಯಂತಹ ಮೂಲ ಸೌಕರ್ಯಗಳಿರಲಿಲ್ಲ. ತಾರಾಬಾಯಿ ಮತ್ತು ಇತರ ಜಿಡಿಎಸ್ ಸದಸ್ಯರ ನೇತೃತ್ವದಲ್ಲಿ ಮಹಿಳಾ ಗುಂಪುಗಳು ಪ್ರತಿಭಟನಾ ಮೋರ್ಚಾಗಳನ್ನು ನಡೆಸುವ ಮೂಲಕ ಈ ಸಮಸ್ಯೆಗಳನ್ನು ಪರಿಹರಿಸಿದರು ಮತ್ತು ರಾಜಕೀಯ ಮುಖಂಡರು ಈ ಸಮಸ್ಯೆಗಳ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಅವರು ತೊಡೆದುಹಾಕಲು ನಿರ್ಧರಿಸಿದ ಮತ್ತೊಂದು ಆತಂಕವೆಂದರೆ ಹಳ್ಳಿಯ ಪುರುಷರ ಮದ್ಯದ ಚಟ. “ಅವರು ಕ್ಯಾನ್‌ಗಳು ಮತ್ತು ದೊಡ್ಡ ಡ್ರಮ್‌ಗಳಲ್ಲಿ ಮದ್ಯವನ್ನು ತುಂಬಿಸಿ ತರುತ್ತಿದ್ದರು. ನಾವು ಅವರನ್ನು ದಾರಿಯಲ್ಲಿ ನಿಲ್ಲಿಸಿ ಆ ಪಿಪಾಯಿಗಳನ್ನು ಒಡೆದುಹಾಕಿದ್ದೆವು," ಎಂದು ತಾರಾಬಾಯಿ ಹೇಳಿದರು. “ಶಾಲೆಯ ಹಿಂಬಾಗ ಕೆಲವು ಮದ್ಯದ ಅಂಗಡಿಗಳಿದ್ದವು. ನಾವು ಅಲ್ಲಿಗೆ ಮೋರ್ಚಾ ತೆಗೆದುಕೊಂಡು ಹೋಗಿ ಆ ಅಂಗಡಿಗಳನ್ನು ನಾಶಪಡಿಸಿದೆವು."
ಅವರು ತಮ್ಮ ಗ್ರಾಮದ ದಲಿತ ಬಡಾವಣೆಯಾದ ಹರಿಜನ ವಸ್ತಿಯ ಜನರ ಮೇಲಿನ ಜಾತಿ ತಾರತಮ್ಯ ಮತ್ತು ಅಸ್ಪೃಶ್ಯತೆ ಆಚರಣೆಯ ಸಮಸ್ಯೆಯನ್ನು ಸಹ ಪ್ರಸ್ತಾಪಿಸಿದರು. ಮತ್ತೊಬ್ಬ ಜಿಡಿಎಸ್ ಸದಸ್ಯೆ ಮತ್ತು ಗ್ರೈಂಡ್‌ಮಿಲ್ ಗಾಯಕಿ ಲೀಲಾಬಾಯಿ ಕಾಂಬಳೆ ತನ್ನ ಮನೆಯಲ್ಲಿ ಅಡುಗೆ ಕೆಲಸ ಮಾಡಲು ನೇಮಿಸಿಕೊಂಡ ಬಗ್ಗೆ ತಾರಾಬಾಯಿ ಹೇಳುತ್ತಾರೆ. ಆಗ ತಾರಾಬಾಯಿ ಅವರ ಹೊಸ ಮನೆ ನಿರ್ಮಾಣವಾಗುತ್ತಿದ್ದು, ಮರಾಠಾ ಸಮುದಾಯಕ್ಕೆ ಸೇರಿದ ಕಟ್ಟಡ ಕಾರ್ಮಿಕರು ಲೀಲಾಬಾಯಿ ಅವರು ಬೇಯಿಸಿದ ಆಹಾರವನ್ನು ತಿನ್ನಲು ನಿರಾಕರಿಸಿದರು. ಆದರೆ ಕಾಲಕ್ರಮೇಣ ತಾರಾಬಾಯಿಯ ಒತ್ತಾಯ ಫಲಿಸಿತು. ಅವರು ತನ್ನ ಹಿಂಜರಿಕೆಯನ್ನು ಬಿಟ್ಟು ಲೀಲಾಬಾಯಿ ಅಡುಗೆ ಮಾಡಿದ ಆಹಾರವನ್ನು ತಿಂದರು. ದಲಿತರು ಇಂದಿಗೂ ಹರಿಜನ ಬಸ್ತಿಯಲ್ಲಿ ವಾಸಿಸುತ್ತಿದ್ದಾರೆ. ಸಮಾನತೆಗಾಗಿ ಅವರ ಹೋರಾಟ ಇಂದಿಗೂ ಮುಂದುವರಿದಿದೆ.
ಈ ಯಾವುದೇ ಚಟುವಟಿಕೆಗಳು ಮಹಿಳೆಯರ ಪಾಲಿಗೆ ಸುಲಭವಾಗಿರಲಿಲ್ಲ. 80ರ ದಶಕದಲ್ಲಿ, ಹಳ್ಳಿಯ ಮಹಿಳೆಯರಿಗೆ - ಅವರಲ್ಲಿ ಹೆಚ್ಚಿನವರು ಮರಾಠರು - ತಮ್ಮ ಮನೆಗಳಿಂದ ಹೊರಬರಲು ಅನುಮತಿಯಿರಲಿಲ್ಲ.
ತಾರಾಬಾಯಿ ಅವರ ಪತಿ ಸದಾಶಿವ್ ಮುಂಬೈನ ಜವಳಿ ಗಿರಣಿಯಲ್ಲಿ ಕೆಲಸ ಮಾಡುತ್ತಿದ್ದರು. ಕಾರ್ಮಿಕರ ಮುಷ್ಕರದ ನಂತರ ಅವರು ಕೆಲಸ ಮಾಡುತ್ತಿದ್ದ ಗಿರಣಿ ಮುಚ್ಚಿಹೋದ ಕಾರಣ ಮನೆಗೆ ಹಿಂದಿರುಗಿದಾಗ, ಸದಾಶಿವ ಅವರ ಹಿರಿಯ ಸಹೋದರ ಮತ್ತು ಅವರ ಹೆಂಡತಿ ಅವರಿಗೆ ಮತ್ತು ತಾರಾಬಾಯಿಗೆ ಕುಟುಂಬದ ಮನೆಯನ್ನು ತೊರೆಯುವಂತೆ ಹೇಳಿದರು. ಅವರು ತಾರಾಬಾಯಿಯವರ ಸಾಮಾಜಿಕ ಚಟುವಟಿಕೆಯನ್ನು ವಿರೋಧಿಸುತ್ತಿದ್ದರು. ನಂತರ ದಂಪತಿಗಳು ತಮ್ಮ ಬದುಕನ್ನು ಸ್ಥಿರಗೊಳಿಸಲು ಕೆಲವು ವರ್ಷಗಳ ಕಾಲ ಕಾರ್ಮಿಕರಾಗಿ ಕೆಲಸ ಮಾಡಿದರು. ಅವರು ಈಗ ಒಂದು ಎಕರೆ ಕೃಷಿ ಭೂಮಿಯನ್ನು ಹೊಂದಿದ್ದಾರೆ, ಅಲ್ಲಿ ಭತ್ತ, ರಾಗಿ ಮತ್ತು ಗೋಧಿಯನ್ನು ಬೆಳೆಯುತ್ತಾರೆ. ಅವರ ಮೂವರು ಪುತ್ರರು ತಮ್ಮ ಕುಟುಂಬಗಳೊಂದಿಗೆ ಪುಣೆಯಲ್ಲಿ ವಾಸಿಸುತ್ತಿದ್ದಾರೆ.
ತಾರಾ ಉಭೆ ಮತ್ತು ಲೀಲಾ ಕಾಂಬಳೆ, ಮತ್ತು ಕುಸುಮ್ ಸೋನಾವನೆ ಮತ್ತು ನಂದಗಾಂವ್‌ನ ಇನ್ನೂ ಕೆಲವರು ಸೇರಿದಂತೆ ಕೊಲವಾಡೆಯ ಮಹಿಳೆಯರ ಗುಂಪು, ಜಿಡಿಎಸ್ ಅಡಿಯಲ್ಲಿ ಜನರನ್ನು ಸಂಘಟಿಸುವಲ್ಲಿ ಹೇಮಾ ರಾಯ್ಕರ್ ಮತ್ತು ಗೈ ಪೊಯಿಟ್ವಿನ್ ಅವರಿಂದ ತರಬೇತಿ ಪಡೆಯಲು ಪುಣೆ ನಗರಕ್ಕೆ ಹೋದರು. "ನಾವು ಎದುರಿಸುತ್ತಿರುವ ದೈನಂದಿನ ಸವಾಲುಗಳ ಬಗ್ಗೆ ಅವರೊಂದಿಗೆ ಮಾತನಾಡಿದಾಗ ಇತರ ಗ್ರಾಮಗಳ ಮಹಿಳೆಯರು ನಮ್ಮೊಂದಿಗೆ ಸೇರಿಕೊಳ್ಳಲಾರಂಭಿಸಿದರು" ಎಂದು ತಾರಾಬಾಯಿ ಹೇಳಿದರು, ಅವರು ತಮ್ಮ ಊರು ಸೇರಿದಂತೆ ಸುಮಾರು 18 ಹಳ್ಳಿಗಳಲ್ಲಿ ಇದೇ ರೀತಿಯ ಚಟುವಟಿಕೆಗಳನ್ನು ನಡೆಸಿದರು. ಅವರು ಮತ್ತು ಇತರರು ಮಹಿಳೆಯರನ್ನು ಮಾತನಾಡುವಂತೆ ಮುಕ್ತವಾಗಿಸುವ ಅತ್ಯುತ್ತಮ ಮಾರ್ಗವೆಂದರೆ ಬೀಸುಕಲ್ಲಿನ ಪದಗಳನ್ನು ಹಾಡುವುದು ಎಂದು ಕಂಡುಕೊಂಡರು. "ಪ್ರತಿಯೊಬ್ಬ ಮಹಿಳೆಗೂ ಹಂಚಿಕೊಳ್ಳಲು ತನ್ನದೇ ನೋವುಗಳಿದ್ದವು, ಆದರೆ ಅವಳಿಗೆ ಯಾರ ಮೇಲಾದರೂ ವಿಶ್ವಾಸವಿಡಲು ಸ್ವಾತಂತ್ರ್ಯ ಮತ್ತು ಸ್ಥಳಾವಕಾಶದ ಅಗತ್ಯವಿತ್ತು. ಅವಳು ಪ್ರತಿದಿನ ಬೆಳಿಗ್ಗೆ ಕೆಲಸ ಮಾಡುತ್ತಿದ್ದ ಬೀಸುಕಲ್ಲೇ ಆ ಯಾರೋ ಆಗಿದ್ದರು."
*****
ಬೀಸುಕಲ್ಲೆನ್ನುವುದು
ಬೆಟ್ಟವಿಳಿದು ಬಂದ ಪುಣ್ಯಪುರುಷ
ನನ್ನ ಮಾತು ಕೇಳು
ಮಗಳೇ, ನಿನ್ನ ಹೃದಯವ ಅವನಿಗೊಪ್ಪಿಸು
ಗ್ರೈಂಡ್ ಮಿಲ್ ಸಾಂಗ್ಸ್ ಪ್ರಾಜೆಕ್ಟ್ (ಜಿಎಸ್‌ಪಿ) 1980ರ ದಶಕದಲ್ಲಿ ಮುಲ್ಶಿಯಲ್ಲಿ ಪ್ರಾರಂಭವಾಯಿತು ಮತ್ತು ನಂತರ ಮಹಾರಾಷ್ಟ್ರದ ಇತರ ಭಾಗಗಳಿಗೆ ಹರಡಿತು, ಇಂದಿಗೆ ಇದು 1,100ಕ್ಕೂ ಹೆಚ್ಚು ಹಳ್ಳಿಗಳನ್ನು ಒಳಗೊಂಡಿದೆ. ತಂಡವು ಹಲವು ವರ್ಷಗಳಲ್ಲಿ 110,000ಕ್ಕೂ ಹೆಚ್ಚು ಹಾಡುಗಳನ್ನು ಸಂಗ್ರಹಿಸಿದೆ.
ಮಾರ್ಚ್ 1997ರಲ್ಲಿ, ಬೀಸುಕಲ್ಲಿನ ಪದ ಹಾಡುವ ಮಹಿಳೆಯರ ಒಂದು ಗುಂಪು ಪುಣೆಯ ಶಿರೂರು ತಾಲ್ಲೂಕಿನ ಪಬಲ್ ಗ್ರಾಮದಲ್ಲಿ ಸಭೆ ಸೇರಿ, ತಾವು ಎದುರಿಸಿ ನಿಲ್ಲಬೇಕಿರುವ ಅನೇಕ ಸಮಸ್ಯೆಗಳನ್ನು ಚರ್ಚಿಸಿತು. ಅಲ್ಲಿ ಅವರು ತಮ್ಮ ಪ್ರಮುಖ ಕಾಳಜಿಗಳಲ್ಲೊಂದಾದ ಗ್ರಾಮೀಣ ಪ್ರದೇಶದ ಸೂಲಗಿತ್ತಿಯರ ಬಗ್ಗೆ ಮಾತನಾಡಿದರು. ಆಸ್ಪತ್ರೆಗಳಿಗೆ ಸುಲಭ ಪ್ರವೇಶವಿಲ್ಲದ ಕಾರಣ ಮತ್ತು ತುರ್ತು ಸಂದರ್ಭಗಳಲ್ಲಿ ವೈದ್ಯಕೀಯ ಸಹಾಯದ ಕೊರತೆಯಿಂದಾಗಿ, ಹೆರಿಗೆಯ ಸಮಯದಲ್ಲಿ ಬೆಂಬಲದ ಅಗತ್ಯವಿರುವ ಗರ್ಭಿಣಿ ಮಹಿಳೆಯ ಪಾಲಿಗೆ ಸೂಲಗಿತ್ತಿಯ ಸಹಾಯವೆನ್ನುವುದು ಆಶೀರ್ವಾದವಾಗಿತ್ತು.
ಸೂಲಗಿತ್ತಿಯು ಈ ಕೆಲಸವನ್ನು ಇತರ ಸೂಲಗಿತ್ತಿಯರನ್ನು ನೋಡಿ ಕಲಿಯುತ್ತಾಳೆ - ಸಾಮಾನ್ಯವಾಗಿ ಅವಳ ತಾಯಿ, ಚಿಕ್ಕಮ್ಮ ಅಥವಾ ಅಜ್ಜಿಯರಿಂದ. ಈ ಮಹಿಳೆಯರ ಜ್ಞಾನ ಮತ್ತು ಅನುಭವಕ್ಕೆ ಯಾವುದೇ ಅರ್ಹ ವೈದ್ಯರು ಸಾಟಿಯಾಗಲು ಸಾಧ್ಯವಿಲ್ಲ ಎಂದು ತಾರಾಬಾಯಿ ಹೇಳಿದರು. ಆದ್ದರಿಂದ ಅವರು ಮತ್ತು ಕೆಲವರು ಸೂಲಗಿತ್ತಿಯ ಪಾತ್ರ ಮತ್ತು ಅವರ ಪರಿಣತಿಯ ಬಗ್ಗೆ ಹಲವಾರು ಓವಿ (ಲಾವಣಿ)ಗಳನ್ನು ಬರೆದರು. ಕಾಲಕ್ರಮೇಣ ತಾರಾಬಾಯಿಯವರ ನೆನಪಿನಿಂದ ಹಾಡುಗಳು ಮಾಯವಾದವು. ಜಿಡಿಎಸ್‌ನ ಸದಸ್ಯರೂ ಆಗಿರುವ ಪರಿ ಜಿಎಸ್‌ಪಿ ತಂಡದ ಜಿತೇಂದ್ರ ಮೇದ್ ಮತ್ತು ತಾರಾಬಾಯಿ ಅವರ ನೆರೆಹೊರೆಯವರು ಮತ್ತು ಗಾಯಕಿ ಮುಕ್ತಾಬಾಯಿ ಉಭೆ ಅವರು ಸಾಹಿತ್ಯವನ್ನು ಓದಿ ಹಾಡನ್ನು ನೆನಪಿಸಿಕೊಳ್ಳಲು ಸಹಾಯ ಮಾಡಿದರು.
ಗ್ರೈಂಡ್‌ಮಿಲ್ ಸಾಂಗ್ ಪ್ರಾಜೆಕ್ಟ್‌ನ ಈ ಕಂತಿನಲ್ಲಿ ಅಂತಹ ಹನ್ನೊಂದು ಹಾಡುಗಳನ್ನು ಪ್ರಸ್ತುತಪಡಿಸಲಾಗಿದೆ. ಆಸ್ಪತ್ರೆಯಂತಹ ಮೂಲಸೌಕರ್ಯಗಳ ಅನುಪಸ್ಥಿತಿಯಲ್ಲಿ, ಸೂಲಗಿತ್ತಿಯರು ಮಗುವಿಗೆ ಜನ್ಮ ನೀಡಲು ಅಗತ್ಯವಾದ ಕೌಶಲ್ಯಗಳನ್ನು ಹೇಗೆ ಕಲಿತರು ಎಂಬುದರ ಕುರಿತು ಅವರು ನಮಗೆ ಹೇಳುತ್ತಾರೆ. ಆದರೆ ಅವರ ಕೆಲಸ ಮತ್ತು ಅವರು ಸಂಗ್ರಹಿಸಿದ ಜ್ಞಾನವನ್ನು ಆಧುನಿಕ ವೈದ್ಯಕೀಯ ವ್ಯವಸ್ಥೆಯು ಮೌಲ್ಯೀಕರಿಸಲಿಲ್ಲ.
ಈ ಹಾಡುಗಳ ಗಾಯಕಿ ಸೂಲಗಿತ್ತಿ ತನ್ನ ಪಾತ್ರದಲ್ಲಿ ಪರಿಪೂರ್ಣಳು ಎಂದು ಹೇಳುತ್ತಾರೆ. ಅವಳ ಕೈಗಳು ಎಷ್ಟು ಕೌಶಲದಿಂದ ಕೂಡಿದ್ದವೆಂದರೆ ಅವಳು "ಕೆಸರಿನಲ್ಲಿ ಸಿಲುಕಿದ ಹಸುವನ್ನು" ನಿಧಾನವಾಗಿ ಹೊರತೆಗೆಯಬಲ್ಲಳು. ಹಳ್ಳಿಯಲ್ಲಿ ಆಸ್ಪತ್ರೆಯ ಕೊರತೆಯಿದ್ದರೆ ಸೂಲಗಿತ್ತಿ ಹೆರಿಗೆಯನ್ನು ಸುಲಭವಾಗಿ ನಡೆಸಬಲ್ಲಳು, "ಕಡಿವಾಣವು ಎತ್ತಿನಗಾಡಿಗೆ ಮೆಲ್ಲನೆ ಮಾರ್ಗದರ್ಶನ ನೀಡುವಂತೆ". ಇಲ್ಲಿನ ರೂಪಕಗಳು ಒಂದೆಡೆ ಗ್ರಾಮೀಣ ಬದುಕನ್ನು ಅಭಿವ್ಯಕ್ತಗೊಳಿಸಿದರೂ ಸಾಮಾಜಿಕ ವಾಸ್ತವದ ಬಗ್ಗೆಯೂ ಅಭಿಪ್ರಾಯ ವ್ಯಕ್ತಪಡಿಸುತ್ತವೆ. ವಿಶ್ವವಿದ್ಯಾನಿಲಯದಲ್ಲಿ ಮೆಡಿಸಿನ್ ಓದಲು ವೈದ್ಯರು ಹಣ ಕಟ್ಟುತ್ತಾರೆ, ಆದರೆ ಸೂಲಗಿತ್ತಿ ಇತರ ಮಹಿಳೆಯರನ್ನು ನೋಡಿ ಕಲಿಯುತ್ತಾಳೆ ಮತ್ತು ಅವರ ಅನುಭವದ ಮೂಲಕ ಪರಿಣಿತಳಾಗುತ್ತಾಳೆ ಎಂದು ಗಾಯಕಿ ಅವರ ಹೆಚ್ಚುಗಾರಿಕೆಯನ್ನು ಎತ್ತಿ ತೋರಿಸುತ್ತಾರೆ.
ಕೊನೆಯ ಓವಿಯಲ್ಲಿ, ತಾರಾಬಾಯಿ ಸಹಾಯ ಮಾಡಲು ಕರೆದ ಕ್ಷಣವೇ ಎಲ್ಲ ಕೆಲಸಗಳನ್ನು ಬದಿಗಿಟ್ಟು ಓಡಿಬರುವ ಸೂಲಗಿತ್ತಿಯ ಬಗ್ಗೆ ಹಾಡುತ್ತಾರೆ - ಸೂಲಗಿತ್ತಿ ಗ್ರಾಮೀಣ ಮಹಿಳೆಯರಿಗೆ ದೇವರಿದ್ದಂತೆ, ಮತ್ತು ಅವಳ ಕೌಶಲಗಳೆಂದರೆ ತಾಯಿಯ ಗರ್ಭದಿಂದ ಮಗುವನ್ನು ಹೆರಿಗೆ ಮಾಡಿಸುವ ಮತ್ತು ಅದನ್ನು ಈ ಜಗತ್ತಿಗೆ ತರುವ "ಚಿನ್ನದ ಕೀಲಿಗಳು".
ಬೀಸುಕಲ್ಲೆನ್ನುವುದು
ಬೆಟ್ಟವಿಳಿದು ಬಂದ ಪುಣ್ಯಪುರುಷ
ನನ್ನ ಮಾತು ಕೇಳು
ಮಗಳೇ, ನಿನ್ನ ಹೃದಯವ ಅವನಿಗೊಪ್ಪಿಸು
ಸೂಲಗಿತ್ತಿ ಹೊಂದಿರುವಳು
ಜ್ಞಾನದ ಗಣಿ
ವೈದ್ಯ ಲೋಕ ಕಂಡೂ
ಕಾಣದಿಂತಿರುವುದು ಇದನು
ಎಲ್ಲಿಂದ ಗಳಿಸುತ್ತಾಳೆ
ಸೂಲಗಿತ್ತಿ ತನ್ನ ಜ್ಞಾನವನ್ನು?
ಬೆಟ್ಟ ಕಣಿವೆಗಳಲ್ಲಿ
ಹೆರಿಗೆಗಳ ಮಾಡಿಸುವುದರ ಮೂಲಕ
ಬೆಟ್ಟದ ಮೇಲಿದೆ
ನನ್ನೂರು, ಅಲ್ಲಿಲ್ಲ ಯಾವುದೇ ವೈದ್ಯರು
ಸೂಲಗಿತ್ತಿಯ
ಜ್ಞಾನವೇ ನಮ್ಮ ಪಾಲಿಗೆ ದೇವರು
ಸೂಲಗಿತ್ತಿ,
ನನ್ನ ತಾಯಿಯಂತವಳು, ಅನುಭವಗಳ ಗಣಿ
ವಿಶ್ವವಿದ್ಯಾಲಯಗಳ
ಮೆಟ್ಟಿಲು ಹತ್ತಿದವಳಲ್ಲ ಕಲಿಯಲೆಂದು
ನನ್ನ ಮೊದಲ ಹೆರಿಗೆ
ಬಹಳ ಕಷ್ಟವಾಗಲಿದೆ ನನಗೆ
ಎಕ್ಕದ ಗಿಡದಡಿಯಲ್ಲಿ
ನನ್ನ ಕಾಲುಂಗರವನ್ನು ಅಡಮಾನವಿಡಿ
ವೈದ್ಯರು ಜ್ಞಾನ
ಪಡೆಯುತ್ತಾರೆ ಹಣವನ್ನು ವೆಚ್ಚ
ಮಾಡಿ
ಸೂಲಗಿತ್ತಿ ಗಳಿಸುತ್ತಾಳೆ
ತನ್ನ ಜ್ಞಾನವನ್ನು ತನ್ನ ಅನುಭವಗಳಿಂದಲೇ
ಸಾಮಾನ್ಯಳೆಂದುಕೊಳ್ಳಬೇಡಿ
ಸೂಲಗಿತ್ತಿಯರನ್ನು
ತನ್ನ ಬೆರಳಿನಿಂದಲೇ
ಹೊರಗೆಳೆಯಬಲ್ಲಳು
ಕೆಸರಿನಲ್ಲಿ
ಸಿಕ್ಕ ದನವನ್ನು
ಸೂಲಗಿತ್ತಿಯ
ಬಳಿಯಿದೆ ಸಾವಿರ ವರ್ಷಗಳ ಜ್ಞಾನ ಸಂಪತ್ತು
ನನ್ನ ಒಂಬತ್ತು
ತಿಂಗಳ ಮಗಳಿಗೆ ಹೆರಿಗೆ ಮಾಡಿಸಿದ್ದಳು ಒಂದೇ ದಿನದಲ್ಲಿ
ಓ ಹೆಣ್ಣೇ! ಬೆಟ್ಟ
ಗುಡ್ಡಗಳ ನನ್ನ ಊರಿನಲ್ಲಿಲ್ಲ ಯಾವುದೇ ಸವಲತ್ತು
ನನ್ನ ಸೂಲಗಿತ್ತಿ
ಉಪಯೋಗಿಸಿದಳು ತನ್ನ ಬೆರಳುಗಳನ್ನೇ
ಮೆಲ್ಲನೆ ಸರಿದಾರಿಯಲ್ಲಿ
ನಡೆಸುವ ಕಡಿವಾಣದಂತೆ
ಓ ಹೆಣ್ಣೇ, ದೇವರು
ಎಲ್ಲಿ ಓಡುತ್ತಿದ್ದಾನೆ ಅವಸರದಲ್ಲಿ?
ಚಿನ್ನದ ಕೀಲಿಗಳೊಡನೆ,
ಗರ್ಭಿಣಿಯರಿಗೆ ಹೆರಿಗೆ ಮಾಡಿಸಲು ಹೋಗುತ್ತಿದ್ದಾನೆ
ಪ್ರದರ್ಶಕರು/ ಗಾಯಕರು : ಮುಕ್ತಾಬಾಯಿ ಉಭೆ
ಗ್ರಾಮ : ಕೊಲವಡೆ
ಹಳ್ಳಿ : ಖಡಕವಾಡಿ
ತಾಲೂಕು : ಮುಲ್ಶಿ
ಜಿಲ್ಲೆ : ಪುಣೆ
ಜಾತಿ : ಮರಾಠರು
ವಯಸ್ಸು : 65
ಮಕ್ಕಳು : ಮೂವರು ಹೆಣ್ಣುಮಕ್ಕಳು ಮತ್ತು ಒಬ್ಬ ಮಗ
ಉದ್ಯೋಗ : ಬೇಸಾಯ
ಪ್ರದರ್ಶಕರು/ಗಾಯಕರು : ಲೀಲಾಬಾಯಿ ಕಾಂಬಳೆ
ಗ್ರಾಮ : ಕೊಲವಡೆ
ತಾಲೂಕು : ಮುಲ್ಶಿ
ಜಿಲ್ಲೆ : ಪುಣೆ
ಜಾತಿ : ನವ ಬೌದ್ಧ
ವಯಸ್ಸು : 62
ಮಕ್ಕಳು : ಮೂವರು ಗಂಡು ಮಕ್ಕಳು
ಉದ್ಯೋಗ : ಗೇಣಿ ರೈತ
ಪ್ರದರ್ಶಕರು/ಗಾಯಕರು : ತಾರಾಬಾಯಿ ಉಭೆ
ಗ್ರಾಮ : ಕೊಲವಡೆ
ಊರು : ಕೊಲವಡೆ
ತಾಲೂಕು : ಮುಲ್ಶಿ
ಜಿಲ್ಲೆ : ಪುಣೆ
ಜಾತಿ : ಮರಾಠರು
ವಯಸ್ಸು : 61
ಮಕ್ಕಳು : ಮೂವರು ಗಂಡು ಮಕ್ಕಳು
ಉದ್ಯೋಗ : ಬೇಸಾಯ
ದಿನಾಂಕ : ಈ ಹಾಡುಗಳನ್ನು ಫೆಬ್ರವರಿ 20, 2022ರಂದು ರೆಕಾರ್ಡ್ ಮಾಡಲಾಗಿದೆ
ಪೋಸ್ಟರ್: ಊರ್ಜಾ
ಹೇಮಾ ರಾಯಿರ್ಕರ್ ಮತ್ತು ಗೈ ಪೊಯಿಟೆವಿನ್ ಸ್ಥಾಪಿಸಿದ ಮೂಲ ಗ್ರಿಂಡ್ ಮಿಲ್ ಸಾಂಗ್ಸ್ ಪ್ರಾಜೆಕ್ಟ್ ಬಗ್ಗೆ ಇಲ್ಲಿ ಓದಿ.
ಅನುವಾದ: ಶಂಕರ ಎನ್. ಕೆಂಚನೂರು