"ಕಿತ್ಕಿತ್ [ಕಂಟುಬಿಲ್ಲೆ], ಲಟ್ಟು [ಬುಗುರಿ] ಮತ್ತು ತಾಸ್ ಖೇಲಾ [ಕಾರ್ಡುಗಳ ಆಟ]" ಎಂದು ಅಹ್ಮದ್ ಹೇಳುತ್ತಾನೆ. ಸುಮಾರು 10 ವರ್ಷದ ಹುಡುಗ ತನ್ನನ್ನು ತಾನೇ ತಿದ್ದಿಕೊಳ್ಳುತ್ತಾ, "ನಾನು ಕಂಟಾಬಿಲ್ಲೇ ಆಡಲ್ಲ, ಅಲ್ಲಾರಖಾ ಆಡ್ತಾನೆ," ಎಂದು ಸ್ಪಷ್ಟಪಡಿಸುತ್ತಾನೆ.

ತನ್ನ ಒಂದು ವರ್ಷದ ಹಿರಿಯತನವನ್ನು ಸ್ಥಾಪಿಸಲು ಮತ್ತು ತನ್ನ ಆಟವಾಡುವ ಉತ್ತಮ ಸಾಮರ್ಥ್ಯವನ್ನು ಸಾಬೀತುಪಡಿಸಲು, ಅಹಮದ್‌ ಮುಂದುವರೆದು, “ನನಗೆ ಈ ಹೆಣ್ಣುಮಕ್ಕಳ ಆಟ ಇಷ್ಟ ಆಗೋಲ್ಲ. ನಾನು ಸ್ಕೂಲ್‌ ಗ್ರೌಂಡಲ್ಲಿ ಬ್ಯಾಟ್‌ ಬಾಲ್‌ [ಕ್ರಿಕೆಟ್]‌ ಆಟ ಆಡ್ತೀನಿ. ಈಗ ಶಾಲೆ ಮುಚ್ಚಿವೆ, ಆದ್ರೆ ನಾವು ಗೋಡೆ ಹಾರಿ ಹೋಗಿ ಆಡ್ತೀವಿ!”

ಈ ಸೋದರಸಂಬಂಧಿಗಳು ಆಶ್ರಮಪಾಡಾ ಪ್ರದೇಶದ ಬಾಣಿಪೀಠ್‌ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು. ಅಲ್ಲಾರಖಾ 3 ನೇ ತರಗತಿಯಲ್ಲಿ ಓದುತ್ತಿದ್ದರೆ, ಅಹ್ಮದ್ 4ನೇ ತರಗತಿಯಲ್ಲಿದ್ದಾನೆ.

ಅದು 2021ರ ಡಿಸೆಂಬರ್‌ ತಿಂಗಳ ಆರಂಭಿಕ ದಿನಗಳು. ನಾವು ಪಶ್ಚಿಮ ಬಂಗಾಳದ ಬೆಲ್ಡಂಗಾದಲ್ಲಿ ಇದ್ದೆವು. ಅಲ್ಲಿ ಜೀವನೋಪಾಯಕ್ಕಾಗಿ ಬೀಡಿ ಕಟ್ಟುವ ಮಹಿಳೆಯರನ್ನು ಮಾತನಾಡಿಸುವುದು ನಮ್ಮ ಉದ್ದೇಶವಾಗಿತ್ತು.

ನಾವೊಂದು ಒಂಟಿ ಮಾವಿನ ಮರದ ಬಳಿ ನಿಂತಿದ್ದೆವು. ಅದೊಂದು ಸ್ಮಶಾನದ ನಡುವೆ ಹಾದು ಹೋಗುವ ಹಳೆಯ ರಸ್ತೆಯಾಗಿತ್ತು. ಅದರ ಪಕ್ಕದಲ್ಲೇ ಆ ಮರವಿತ್ತು. ದೂರದಲ್ಲಿ ಹಳದಿ ಬಣ್ಣದ ಸಾಸಿವೆ ಹೊಲಗಳು ಕಾಣುತ್ತಿದ್ದವು. ಇದು ಪೂರ್ಣ ಮೌನ ಮತ್ತು ಶಾಂತಿಯಿಂದ ಕೂಡಿದ ಸ್ಥಳವಾಗಿತ್ತು. ಅದು ಮನುಷ್ಯ ದೇಹಗಳು ಬದುಕಿನ ಗದ್ದಲ ಮುಗಿಸಿ ಶಾಶ್ವತ ನಿದ್ರೆಯಲ್ಲಿ ತೊಡಗಿದ ಸ್ಥಳವಾಗಿತ್ತು. ಇಂತಹದ್ದೊಂದು ಪ್ರಶಾಂತ ಸ್ಥಳದಲ್ಲಿ ನಿಂತಿದ್ದ ಮರವೂ ಸಂತನಂತೆ ಸುಮ್ಮನೆ ನಿಂತಿತ್ತು. ವಸಂತ ಕಾಲವಲ್ಲದ ಕಾರಣ ಹಣ್ಣು ತಿನ್ನಲು ಬರುವ ಹಕ್ಕಿಗಳೂ ಅಲ್ಲಿ ಇರಲಿಲ್ಲ.

ಈ ಮೌನದ ವಾತಾವರಣವನ್ನು ಕಲಕುವಂತೆ ಅಲ್ಲೊಂದು ಓಡುವ ಸದ್ದು ಕೇಳಿಬಂದಿತು. ಅಹ್ಮದ್‌ ಮತ್ತು ಅಲ್ಲಾರಖಾ ಅಲ್ಲಿ ಕಾಣಿಸಿಕೊಂಡರು. ಹಾರುತ್ತಾ, ನೆಗಯುತ್ತಾ, ಜಿಗಿಯುತ್ತಾ ಬರುತ್ತಿದ್ದ ಅವರಿಗೆ ನಮ್ಮ ಉಪಸ್ಥಿತಿಯ ಕುರಿತು ಅರಿವಿರಲಿಲ್ಲ.

Ahmad (left) and Allarakha (right) are cousins and students at the Banipith Primary School in Ashrampara
PHOTO • Smita Khator
Ahmad (left) and Allarakha (right) are cousins and students at the Banipith Primary School in Ashrampara
PHOTO • Smita Khator

ಅಹ್ಮದ್ (ಎಡ) ಮತ್ತು ಅಲ್ಲಾರಖಾ (ಬಲ) ಸೋದರಸಂಬಂಧಿಗಳು ಮತ್ತು ಆಶ್ರಮಪಾಡಾದ ಬಾಣಿಪೀಠ್ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು

Climbing up this mango tree is a favourite game and they come here every day
PHOTO • Smita Khator

ಈ ಮಾವಿನ ಮರವನ್ನು ಹತ್ತುವುದು ಅವರ ನೆಚ್ಚಿನ ಆಟ ಮತ್ತು ಅವರು ಪ್ರತಿದಿನ ಇಲ್ಲಿಗೆ ಬರುತ್ತಾರೆ

ಮರದ ಬಳಿ ಬಂದ ಹುಡುಗರು ತಮ್ಮ ಎತ್ತರ ಅಳೆಯತೊಡಗಿದರು. ಇದು ಅವರ ದೈನಂದಿನ ಚಟುವಟಿಕೆಯೆನ್ನುವುದನ್ನು ಆ ಮರದಲ್ಲಿದ್ದ ಅವರ ಎತ್ತರದ ಗುರುತುಗಳೇ ಹೇಳುತ್ತಿದ್ದವು.

“ನಿನ್ನೆಗಿಂತ ಎತ್ತರ ಆಗಿದ್ದೀರಾ?” ಎಂದು ಅವರಿಬ್ಬರನ್ನು ಕೇಳಿದೆ. ಅವರಲ್ಲಿ ಚಿಕ್ಕವನಾದ ಅಲ್ಲಾರಖಾ ಮುರಿದ ಹಲ್ಲಿನ ಬಾಯಿ ತೆರೆದು ನಗುತ್ತಾ, “ಆಗ್ದಿದ್ರೆ ಏನಂತೆ? ನಾವು ಸ್ಟ್ರಾಂಗ್‌ ಇದ್ದೀವಿ!” ಎನ್ನುತ್ತಾ ಅದನ್ನು ಸಾಕ್ಷೀಕರಿಸಲು ತನ್ನ ಮುರಿದ ಹಲ್ಲನ್ನು ತೋರಿಸುತ್ತ, “ನನ್ನ ಹಾಲು ಹಲ್ಲನ್ನ ಇಲಿ ಕಚ್ಕೊಂಡು ಹೋಗಿದೆ. ಇನ್ನು ನನಗೆ ಅಹಮದ್‌ ತರಹದ್ದೇ ಗಟ್ಟಿ ಹಲ್ಲು ಬರುತ್ತದೆ," ಎಂದ.

ಅವನಿಗಿಂತ ಒಂದು ವರ್ಷವಷ್ಟೇ ದೊಡ್ಡವನಾದ ಅಹ್ಮದ್‌, ತನ್ನ ಬಾಯಿ ತುಂಬಾ ಇರುವ ಹಲ್ಲನ್ನು ತೋರಿಸುತ್ತಾ, “ನನ್ನ ಎಲ್ಲಾ ದೂಧೆರ್‌ ದಾಂತ್‌ [ಹಾಲು ಹಲ್ಲು] ಉದುರಿ ಹೋಗಿವೆ. ಈಗ ನಾನು ದೊಡ್ಡ ಹುಡುಗ. ಮುಂದಿನ ವರ್ಷ ನಾನು ದೊಡ್ಡ ಶಾಲೆಗೆ ಹೋಗ್ತೀನಿ.”

ತಮ್ಮ ಶಕ್ತಿಯ ಬಗ್ಗೆ ಮತ್ತಷ್ಟು ಪುರಾವೆಯಾಗಿ ಅವರು ಅಳಿಲು-ತರಹದ ಚುರುಕುತನದಿಂದ ಮರವನ್ನು ಹತ್ತುತ್ತಾರೆ. ಕಣ್ರೆಪ್ಪೆ ಮುಚ್ಚಿ ತೆರೆಯುವಷ್ಟರಲ್ಲಿ ಇಬ್ಬರೂ ಮಧ್ಯದ ಕೊಂಬೆಗಳನ್ನು ತಲುಪಿ, ತಮ್ಮ ಸಣ್ಣ ಕಾಲುಗಳನ್ನು ಇಳಿಬಿಟ್ಟು ಕುಳಿತಿದ್ದರು.

"ಇದು ನಮ್ಮ ನೆಚ್ಚಿನ ಆಟ" ಎಂದು ಅಹ್ಮದ್ ಸಂತೋಷದಿಂದ ಹೇಳುತ್ತಾನೆ. "ಶಾಲೆ ನಡೆಯುವಾಗ ಶಾಲೆ ಮುಗಿದ ಮೇಲೆ ಈ ಆಟ ಆಡ್ತಿದ್ವಿ" ಎಂದು ಅಲ್ಲಾರಖಾ ಹೇಳುತ್ತಾನೆ. ಹುಡುಗರು ಪ್ರಾಥಮಿಕ ವಿಭಾಗದಲ್ಲಿದ್ದಾರೆ ಮತ್ತು ಇನ್ನೂ ಶಾಲೆಗೆ ಮರಳಿಲ್ಲ. ಕೋವಿಡ್ -19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ, ಮಾರ್ಚ್ 25, 2020ರಿಂದ ಶಿಕ್ಷಣ ಸಂಸ್ಥೆಗಳನ್ನು ದೀರ್ಘಕಾಲದವರೆಗೆ ಮುಚ್ಚಲಾಯಿತು. ಶಾಲೆಗಳು ಪುನರಾರಂಭಗೊಂಡಿದ್ದರೂ, 2021ರ ಡಿಸೆಂಬರಿನಲ್ಲಿ ಉನ್ನತ ತರಗತಿಯ ವಿದ್ಯಾರ್ಥಿಗಳು ಮಾತ್ರ ಹಾಜರಾಗುತ್ತಿದ್ದರು.

"ನಾನು ನನ್ನ ಸ್ನೇಹಿತರನ್ನು ಮಿಸ್‌ ಮಾಡ್ಕೊತ್ತಿದ್ದೀನಿ," ಎಂದು ಅಹ್ಮದ್ ಹೇಳುತ್ತಾನೆ. "ನಾವು ಬೇಸಿಗೆಯಲ್ಲಿ ಈ ಮರವನ್ನು ಏರಿ ಮಾವಿನ ಕಾಯಿಗಳನ್ನು ಕದಿಯುತ್ತಿದ್ದೆವು." ಹುಡುಗರು ಶಾಲೆ ನಡೆಯುತ್ತಿರುವಾಗ ಪಡೆದ ಸೋಯಾ ತುಂಡುಗಳು ಮತ್ತು ಮೊಟ್ಟೆಗಳನ್ನು ಸಹ ಕಳೇದುಕೊಳ್ಳುತ್ತಿದ್ದಾರೆ. ಈಗ ಅವರ ತಾಯಂದಿರು ತಿಂಗಳಿಗೊಮ್ಮೆ ಮಧ್ಯಾಹ್ನದ ಊಟವನ್ನು [ಕಿಟ್] ಸಂಗ್ರಹಿಸಲು ಶಾಲೆಗೆ ಹೋಗುತ್ತಾರೆ, ಎಂದು ಅಲ್ಲಾರಖಾ ಹೇಳುತ್ತಾನೆ. ಕಿಟ್ ಅಕ್ಕಿ, ಮಸೂರ್ ದಾಲ್, ಆಲೂಗಡ್ಡೆ ಮತ್ತು ಸಾಬೂನು ಒಳಗೊಂಡಿದೆ.

The boys are collecting mango leaves for their 10 goats
PHOTO • Smita Khator

ಹುಡುಗರು ತಮ್ಮ 10 ಆಡುಗಳಿಗಾಗಿ ಮಾವಿನ ಎಲೆಗಳನ್ನು ಸಂಗ್ರಹಿಸುತ್ತಿದ್ದಾರೆ

'You grown up people ask too many questions,' says Ahmad as they leave down the path they came
PHOTO • Smita Khator

ʼದೊಡ್ಡೋರು ಸಿಕ್ಕಾಪಟ್ಟೆ ಪ್ರಶ್ನೆ ಕೇಳ್ತೀರಿ,ʼ ಎಂದ ಅಹ್ಮದ್‌ ಸಹೋದರನೊಡನೆ ಮನೆಯ ದಾರಿ ಹಿಡಿದ

"ನಾವು ಮನೆಯಲ್ಲಿ ಓದ್ತೀವಿ, ನಮ್ಮ ಅಮ್ಮಂದಿರು ನಮಗೆ ಕಲಿಸುತ್ತಾರೆ. ನಾನು ದಿನಕ್ಕೆ ಎರಡು ಬಾರಿ ಓದುತ್ತೇನೆ ಮತ್ತು ಬರೆಯುತ್ತೇನೆ" ಎಂದು ಅಹ್ಮದ್ ಹೇಳುತ್ತಾನೆ.

"ಆದರೆ ನಿನ್ನಮ್ಮ ನೀನು ತುಂಬಾ ತುಂಟ, ಅವರ ಮಾತನ್ನು ಕೇಳಲ್ಲ ಅಂದ್ರು," ಎಂದು ನಾನಂದೆ.

"ನಾವು ತುಂಬಾ ಚಿಕ್ಕವರು, ನೋಡಿ... ಅಮ್ಮಿಗೆ [ತಾಯಿಗೆ] ಅರ್ಥವಾಗುವುದಿಲ್ಲ," ಎಂದು ಅಲ್ಲಾರಖಾ ಹೇಳಿದ. ಅವರ ತಾಯಂದಿರು ಮುಂಜಾನೆಯಿಂದ ಮಧ್ಯರಾತ್ರಿಯವರೆಗೆ ಮನೆಕೆಲಸಗಳಲ್ಲಿ ನಿರತರಾಗಿರುತ್ತಾರೆ, ತಮ್ಮ ಕುಟುಂಬಗಳನ್ನು ಪೋಷಿಸಲು ನಡುವೆ ಬೀಡಿ ಕಟ್ಟುತ್ತಾರೆ; ಅವರ ಅಪ್ಪಂದಿರು ದೂರದ ರಾಜ್ಯಗಳಲ್ಲಿ ನಿರ್ಮಾಣ ಯೋಜನೆಗಳಲ್ಲಿ ವಲಸೆ ಕಾರ್ಮಿಕರಾಗಿ ಕೆಲಸ ಮಾಡುತ್ತಾರೆ. "ಅಪ್ಪ [ತಂದೆ] ಮನೆಗೆ ಬಂದಾಗ, ನಾವು ಅವರ ಮೊಬೈಲ್ ತೆಗೆದುಕೊಂಡು ಆಟಗಳನ್ನು ಆಡುತ್ತೇವೆ, ಅದಕ್ಕಾಗಿಯೇ ಅಮ್ಮಿಗೆ ಕೋಪ ಬರುತ್ತದೆ," ಎಂದು ಅಲ್ಲಾರಖಾ ಹೇಳುತ್ತಾನೆ.

ಅವರು ಫೋನ್ ನಲ್ಲಿ ಆಡುವ ಆಟಗಳು ಸದ್ದು ಮತ್ತು ಗದ್ದಲದಿಂದ ಕೂಡಿರುತ್ತವೆ: "ಫ್ರೀ-ಫೈರ್. ಕಾರ್ಯಾಚರಣೆ ಮತ್ತು ಬಂದೂಕು ಕಾಳಗದಿಂದ ತುಂಬಿದೆ." ಅವರ ತಾಯಂದಿರು ಗದರಿಸಿದಾಗ, ಅವರು ಟೆರೇಸ್ ಅಥವಾ ಮನೆಯಿಂದ ಹೊರಗೆ ಫೋನ್‌ ಜೊತೆ ಓಡಿ ತಪ್ಪಿಸಿಕೊಳ್ಳುತ್ತಾರೆ.

ನಾವು ಮಾತನಾಡುತ್ತಿರುವಾಗ, ಇಬ್ಬರೂ ಹುಡುಗರು ಎಲೆಗಳನ್ನು ಸಂಗ್ರಹಿಸುತ್ತಾ ಕೊಂಬೆಗಳ ನಡುವೆ ಚಲಿಸುತ್ತಾರೆ ಮತ್ತು ಒಂದೇ ಒಂದು ಎಲೆಯೂ ಸಹ ವ್ಯರ್ಥವಾಗದಂತೆ ನೋಡಿಕೊಳ್ಳುತ್ತಿದ್ದರು. ಅಹ್ಮದ್‌ ಆ ಎಲೆಗಳನ್ನು ಏಕೆ ಕೀಳುತ್ತಿದ್ದೇವೆಂದು ನಮಗೆ ತಿಳಿಸಿದ: "ಇವು ನಮ್ಮ ಆಡುಗಳಿಗಾಗಿ. ನಮ್ಮಲ್ಲಿ 10 ಇವೆ. ಅವು ಈ ಎಲೆಗಳನ್ನು ತಿನ್ನಲು ಇಷ್ಟಪಡುತ್ತವೆ. ನಮ್ಮ ಅಮ್ಮಿಯರು ಅವುಗಳನ್ನು ಮೇಯಿಸಲು ಕರೆದೊಯ್ಯುತ್ತಾರೆ."

ಸ್ವಲ್ಪ ಹೊತ್ತಿನಲ್ಲೇ ಮರದಿಂದ ಇಳಿದ ಅವರ ಮರದ ಅಗಲ ಬುಡವನ್ನು ತಲುಪಿ ಎಲೆಯೊಡನೆ ಕೆಳಗೆ ನೆಲಕ್ಕೆ ಜಿಗಿದರು. “ನೀವು ದೊಡ್ಡವರು ತುಂಬಾ ಪ್ರಶ್ನೆ ಕೇಳ್ತೀರಿ. ನಮಗೆ ತಡವಾಯ್ತು,” ಎಂದು ಅಹ್ಮದ್‌ ನಮ್ಮ ಮೇಲೆ ಹುಸಿ ಕೋಪ ತೋರಿಸಿದ. ನಂತರ ಇಬ್ಬರೂ ಹುಡುಗರು ನಡೆಯಲು ಆರಂಭಿಸಿದರು. ಒಂದಷ್ಟು ದೂರ ಹೋದ ನಂತರ ತಮ್ಮನ್ನು ಇತ್ತ ಕರೆದುಕೊಂಡು ಬಂದ ಅದೇ ಧೂಳಿನ ದಾರಿಯಲ್ಲಿ ಜಿಗಿಯುತ್ತಾ ನಡೆಯತೊಡಗಿದರು.

ಅನುವಾದ: ಶಂಕರ. ಎನ್. ಕೆಂಚನೂರು

Smita Khator

اسمِتا کھٹور، پیپلز آرکائیو آف رورل انڈیا (پاری) کے لیے ’ٹرانسلیشنز ایڈیٹر‘ کے طور پر کام کرتی ہیں۔ وہ مترجم (بنگالی) بھی ہیں، اور زبان اور آرکائیو کی دنیا میں طویل عرصے سے سرگرم ہیں۔ وہ بنیادی طور پر مغربی بنگال کے مرشد آباد ضلع سے تعلق رکھتی ہیں اور فی الحال کولکاتا میں رہتی ہیں، اور خواتین اور محنت و مزدوری سے متعلق امور پر لکھتی ہیں۔

کے ذریعہ دیگر اسٹوریز اسمیتا کھٹور
Editor : Priti David

پریتی ڈیوڈ، پاری کی ایگزیکٹو ایڈیٹر ہیں۔ وہ جنگلات، آدیواسیوں اور معاش جیسے موضوعات پر لکھتی ہیں۔ پریتی، پاری کے ’ایجوکیشن‘ والے حصہ کی سربراہ بھی ہیں اور دیہی علاقوں کے مسائل کو کلاس روم اور نصاب تک پہنچانے کے لیے اسکولوں اور کالجوں کے ساتھ مل کر کام کرتی ہیں۔

کے ذریعہ دیگر اسٹوریز Priti David
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

کے ذریعہ دیگر اسٹوریز Shankar N. Kenchanuru