ಜಾರ್ಖಂಡ್ ರಾಜ್ಯದ ಬೊರೊಟಿಕಾದಲ್ಲಿನ ಸಂಕೀರ್ಣ ಗರ್ಭಧಾರಣೆ ಹೊಂದಿರುವ ಮಹಿಳೆಯೊಬ್ಬರು ಕೇವಲ ವೈದ್ಯರನ್ನು ನೋಡಲು ರಾಜ್ಯದ ಗಡಿ ದಾಟಬೇಕಾದ ಪರಿಸ್ಥಿತಿಯಿದೆ.
ಇದು ಅವರೊಬ್ಬರ ಕತೆಯಲ್ಲ – ನೀವು ಓರ್ವ ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಮಹಿಳೆಯಾಗಿದ್ದಲ್ಲಿ ಅಲ್ಲಿ ಸ್ತ್ರೀರೋಗ ತಜ್ಞರನ್ನು ಅಥವಾ ಶಸ್ತ್ರಚಿಕಿತ್ಸಕರನ್ನು ಹತ್ತಿರದಲ್ಲಿ ಹುಡುಕುವುದು ಸುಲಭದ ಕೆಲಸವಲ್ಲ. ಈ ಪ್ರದೇಶಗಳಲ್ಲಿನ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ (CHCs) ಲಭ್ಯವಿರುವ ಮೂಲಸೌಕರ್ಯಗಳಲ್ಲಿ ಅಗತ್ಯವಿರುವ ಪ್ರಸೂತಿ ತಜ್ಞರ ಸಂಖ್ಯೆಯಲ್ಲಿ ಶೇಕಡಾ 74.2ರಷ್ಟು ಕೊರತೆಯಿದೆ.
ಒಂದು ವೇಳೆ ನೀವು ಯುವ ತಾಯಿಯಾಗಿದ್ದು, ನಿಮ್ಮ ಮಗುವು ಅನಾರೋಗ್ಯಕ್ಕೆ ಒಳಗಾಗಿದ್ದಲ್ಲಿ CHCಯಲ್ಲಿ ಮಕ್ಕಳ ತಜ್ಞರನ್ನು ಕಾಣುವುದು ಕೂಡಾ ಸುಲಭ ಸಾಧ್ಯವಲ್ಲ. ಏಕೆಂದರೆ ಇಲ್ಲಿ ಫಿಸಿಷಿಯನ್ಸ್ ಮತ್ತು ಮಕ್ಕಳ ತಜ್ಞರ 80 ಪ್ರತಿಶತದಷ್ಟು ಹುದ್ದೆಗಳು ಭರ್ತಿಯಾಗಿಲ್ಲ.
2021-22ರ ಗ್ರಾಮೀಣ ಆರೋಗ್ಯ ಅಂಕಿಅಂಶಗಳ ವರದಿಯಿಂದ ನಾವು ಈ ಮಾಹಿತಿಗಳನ್ನು ತಿಳಿದುಕೊಂಡಿದ್ದೇವೆ. ಇವು ಮತ್ತು ಇತರ ಪ್ರಮುಖ ವರದಿಗಳು, ಸಂಶೋಧನಾ ಪ್ರಬಂಧಗಳು ಮತ್ತು ಹಾರ್ಡ್ ಡೇಟಾ, ಕಾನೂನುಗಳು ಮತ್ತು ಸಂಪ್ರದಾಯಗಳು ಪರಿ ಹೆಲ್ತ್ ಆರ್ಕೈವ್ ವಿಭಾಗದಲ್ಲಿ ಲಭ್ಯವಿವೆ ಮತ್ತು ಭಾರತದಲ್ಲಿ ಮಹಿಳೆಯರ ಆರೋಗ್ಯದ ಸ್ಥಿತಿಯನ್ನು ವಿವರಿಸಲು ಮತ್ತು ಉತ್ತಮವಾಗಿ ಅರ್ಥಮಾಡಿಕೊಳ್ಳಲು ನಿರ್ಣಾಯಕ ಆಕರಗಳಾಗಿ ಕೆಲಸ ಮಾಡುತ್ತವೆ.
ಈ ವಿಭಾಗವು ವಿಶೇಷವಾಗಿ ಗ್ರಾಮೀಣ ಭಾರತದಲ್ಲಿನ ಮಹಿಳೆಯರ ಆರೋಗ್ಯದ ಅನಿಶ್ಚಿತ ಸ್ವರೂಪದ ಮೇಲೆ ಬೆಳಕು ಚೆಲ್ಲುತ್ತದೆ. ಸಂತಾನೋತ್ಪತ್ತಿ ಆರೋಗ್ಯದಿಂದ ಹಿಡಿದು ಲೈಂಗಿಕ ಹಿಂಸಾಚಾರದವರೆಗೆ, ಮಾನಸಿಕ ಆರೋಗ್ಯದಿಂದ ಕೋವಿಡ್ -19 ಸಾಂಕ್ರಾಮಿಕ ರೋಗದ ಪರಿಣಾಮದವರೆಗೆ, ಪರಿ ಹೆಲ್ತ್ ಆರ್ಕೈವ್ ಮಹಿಳೆಯರ ಆರೋಗ್ಯದ ಹಲವಾರು ಅಂಶಗಳನ್ನು ಒಳಗೊಂಡಿದ್ದು 'ಜನಸಾಮಾನ್ಯರ ದೈನಂದಿನ ಜೀವನವನ್ನು' PARIಯ ಉದ್ದೇಶವನ್ನು ಇನ್ನಷ್ಟು ಅರ್ಥಪೂರ್ಣಗೊಳಿಸುತ್ತದೆ.









