ಏಪ್ರಿಲ್ 5 ರಂದು ನಾವು ಹೃದಯ್ ಪರಭು ಅವರನ್ನು ಭೇಟಿ ಮಾಡಿದಾಗ "ಇಟ್ಟಿಗೆ ಗೂಡಿನಲ್ಲಿ ಯಾವುದೇ ಲಾಕ್ ಡೌನ್ ಇಲ್ಲ. ನಾವು ಎಂದಿನಂತೆ ಪ್ರತಿದಿನ ಕೆಲಸ ಮಾಡುತ್ತಿದ್ದೇವೆ. ಆದರೆ ಈಗ ಆಗಿರುವ ಏಕೈಕ ಬದಲಾವಣೆಯೆಂದರೆ, ಪ್ರತಿವಾರ ನಡೆಯುವ ಊರಿನ ಸಂತೆ ಮುಚ್ಚಿರುತ್ತದೆ, ಆದ್ದರಿಂದ ನಮ್ಮ ಮಾಲೀಕರು ನೀಡುವ ವಾರದ ಭತ್ಯೆಯಲ್ಲಿ ಎಲ್ಲ ಆಹಾರ ಧಾನ್ಯಗಳು ಮತ್ತು ಅಗತ್ಯ ವಸ್ತುಗಳನ್ನು ಖರೀದಿಸುವಲ್ಲಿ ನಾವು ಸಾಕಷ್ಟು ತೊಂದರೆಗಳನ್ನು ಎದುರಿಸುತ್ತಿದ್ದೇವೆ" ಎಂದು ಹೇಳಿದರು.

ಹೃದಯ್ ಈಗ ಕಳೆದ ಮೂರು ವರ್ಷಗಳಿಂದ ತೆಲಂಗಾಣದ ಇಟ್ಟಿಗೆ ಗೂಡುಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಸಾಲದ ಹೊರೆಯಿರುವ ಕಾರಣ ಅನಿವಾರ್ಯವಾಗಿ ಅವರು ಈ ಕೆಲಸ ಮಾಡಬೇಕಾಗಿದೆ. ಪ್ರತಿ ವರ್ಷ ಅವರು ಕೆಲಸದ ನಿಮಿತ್ತ ತಮ್ಮ ಪತ್ನಿಯನ್ನು ಒಡಿಶಾದ ಬಾಲಂಗೀರ್ ಜಿಲ್ಲೆಯ ತುರೆಕೆಲಾ ತಾಲ್ಲೂಕಿನಲ್ಲಿರುವ ತಮ್ಮ ಗ್ರಾಮ ಖುತುಲುಮುಂಡಾದಲ್ಲಿ ಬಿಟ್ಟು ಬರುತ್ತಾರೆ. "ನಾನು ನನ್ನ ಹಳ್ಳಿಯಲ್ಲಿ ಲೋಹಕಾರ್(ಕಮ್ಮಾರಿಕೆ) ಕೆಲಸ ಮಾಡುತ್ತಿದ್ದೆ, ಅದರಿಂದ ಚೆನ್ನಾಗಿ ಸಂಪಾದಿಸುತ್ತಿದ್ದೆ, ಆದರೆ ಮನೆ ಕಟ್ಟಿದ ನಂತರ ಸಾಲದ ಸುಳಿಗೆ ಸಿಲುಕಿದ್ದೇನೆ. ಇದರ ಜೊತೆಗೆ ಸರ್ಕಾರವು ನೋಟು ಬಂದಿ (ನೋಟು ಅಮಾನ್ಯೀಕರಣ)ಯನ್ನು ಜಾರಿಗೆ ತಂದಿತು, ಹೀಗಾಗಿ ನನಗೆ ನಮ್ಮ ಊರಿನಲ್ಲಿ ಅಷ್ಟೇನೂ ಕೆಲಸವೂ ಇರಲಿಲ್ಲ, ಒಂದೆಡೆಗೆ ನನ್ನ ಸಾಲವು ಕೂಡ ಹೆಚ್ಚುತ್ತಾ ಬಂದಿತು. ಹೀಗಾಗಿ ನಾನು ಇಟ್ಟಿಗೆಗಳನ್ನು ತಯಾರಿಸಲು ಇಲ್ಲಿಗೆ ಅನಿವಾರ್ಯವಾಗಿ ಬರಬೇಕಾಯಿತು. ಈಗ ಇಟ್ಟಿಗೆ ಗೂಡಿನಲ್ಲಿ ಕೆಲಸ ಮಾಡುವ ಬಹುತೇಕ ಕಾರ್ಮಿಕರು ಸಹ ಸಾಲದ ಹೊರೆಯಲ್ಲಿದ್ದಾರೆ " ಎಂದು ಅವರು ತಮ್ಮ ಅರೆಬರೆ ಹಿಂದಿಯಲ್ಲಿ ವಿವರಿಸುತ್ತಿದ್ದರು.

ಮಾರ್ಚ್ 25ರಂದು ಸರ್ಕಾರ ವಿಧಿಸಿದ ಅನಿರೀಕ್ಷಿತ ಲಾಕ್‌ಡೌನ್‌ ಹೃದಯ್ ಕೆಲಸ ಮಾಡುತ್ತಿದ್ದ ಸಂಗಾರೆಡ್ಡಿ ಜಿಲ್ಲೆಯ ಜಿನ್ನಾರಂ ಮಂಡಲದ ಗಡ್ಡಿಪೋಥರಂ ಗ್ರಾಮದಲ್ಲಿನ ಕಾರ್ಮಿಕರಲ್ಲಿ ಒಂದು ರೀತಿಯ ಗೊಂದಲ ಮತ್ತು ಅನಿಶ್ಚಿತತೆಯನ್ನು ಸೃಷ್ಟಿಸಿದೆ. "ಪ್ರತಿ ಶುಕ್ರವಾರ, ನಾವು ಇಲ್ಲಿಂದ ಮೂರು ಕಿಲೋಮೀಟರ್ ದೂರದಲ್ಲಿರುವ ಗ್ರಾಮೀಣ ಸಂತೆಗೆ ಹೋಗುತ್ತಿದ್ದೆವು, ನಮಗೆ ಸಿಗುವ ವಾರದ ಭತ್ಯೆಯಲ್ಲಿ ತರಕಾರಿಗಳು ಮತ್ತು ಆಹಾರ ಧಾನ್ಯಗಳನ್ನು ಖರೀದಿಸುತ್ತಿದ್ದೆವು. ಕೆಲವು ಪುರುಷರು ಮದ್ಯವನ್ನೂ ಖರೀದಿಸುತ್ತಿದ್ದರು. ಆದರೆ ಈಗ ಲಾಕ್ ಡೌನ್‌ನಿಂದಾಗಿ ಮಾರುಕಟ್ಟೆ ಮುಚ್ಚಿರುವುದರಿಂದ ಎಲ್ಲವೂ ಸ್ಥಗಿತಗೊಂಡಿದೆ" ಎಂದು ಅದೇ ಗೂಡುಗಳಲ್ಲಿ ಕೆಲಸ ಮಾಡುವ ಹೃದಯ್ ಅವರ ದೂರದ ಸಂಬಂಧಿ ಜೋಯಂತಿ ಪರಭು ಹೇಳುತ್ತಾರೆ.

ಲಾಕ್‌ಡೌನ್ ಪ್ರಾರಂಭವಾದ ಎರಡು ದಿನಗಳ ನಂತರ ಕಾರ್ಮಿಕರು ಶುಕ್ರವಾರದ ಸಂತೆಯಿಂದ ಕೆಲವು ಆಹಾರ ಪದಾರ್ಥಗಳನ್ನು ಖರೀದಿಸುವಲ್ಲಿ ಯಶಸ್ವಿಯಾಗಿದ್ದರು ಸಹಿತ ಮುಂದಿನ ಶುಕ್ರವಾರದಂದು ಸಂತೆ ಸ್ಥಗಿತಗೊಂಡಿದ್ದರಿಂದ ಅವರು ತೊಂದರೆಗೆ ಸಿಕ್ಕಿಹಾಕಿಕೊಂಡಿದ್ದಾರೆ. " ಈಗ ಅವರಿಗೆ ಆಹಾರವನ್ನು ಸಂಗ್ರಹಿಸುವುದು ಕಷ್ಟಕರವಾಗಿದೆ. ಅಂಗಡಿಗಳನ್ನು ಹುಡುಕುತ್ತಾ ನಾವು ಹಳ್ಳಿಗಳಲ್ಲಿ ಸಾಗುತ್ತಿದ್ದಾಗ ನಮಗೆ ತೆಲುಗು ಭಾಷೆ ಬರದಿರುವುದರಿಂದಾಗಿ ನಮ್ಮನ್ನು ಪೊಲೀಸರು ತಡೆಹಿಡಿದರು" ಎಂದು ಹೃದಯ್ ಹೇಳಿದರು.

PHOTO • Varsha Bhargavi

ಗದ್ದೀಪೋಥರಂನ ಇಟ್ಟಿಗೆ ಗೂಡುಗಳಲ್ಲಿ ಹೃದಯ್ ಪರಭು (ಮೇಲಿನ ಚಿತ್ರದ ಎಡಭಾಗದಲ್ಲಿ ಬಿಳಿ ಶರ್ಟ್ ಧರಿಸಿರುವವರು) ಮತ್ತು ಇತರ ಕಾರ್ಮಿಕರು. ಲಾಕ್ ಡೌನ್ ಸಮಯದಲ್ಲಿ ತೆಲಂಗಾಣದ ಅನೇಕ ಭಾಗಗಳಲ್ಲಿ ಇಟ್ಟಿಗೆ ಗೂಡುಗಳು ಕಾರ್ಯನಿರ್ವಹಿಸುತ್ತಿವೆ.

ಮಾರ್ಚ್ 25ರಂದು ಸರ್ಕಾರ ವಿಧಿಸಿರುವ ಲಾಕ್ ಡೌನ್ ಹೊರತಾಗಿಯೂ ತೆಲಂಗಾಣದ ಬಹುತೇಕ ಭಾಗಗಳಲ್ಲಿ ಇಟ್ಟಿಗೆ ಗೂಡುಗಳು ಕಾರ್ಯನಿರ್ವಹಿಸುತ್ತಿವೆ. 2019ರ ಕೊನೆಯಲ್ಲಿ ಇಟ್ಟಿಗೆಗೂಡು ತಲುಪುವ ಮೊದಲೇ ಅಲ್ಲಿನ ಕಾರ್ಮಿಕರಿಗೆ ವೇತನ ದೊರೆತಿತ್ತು."ನಮ್ಮಲ್ಲಿ ಪ್ರತಿಯೊಬ್ಬರೂ ಇಟ್ಟಿಗೆ ಗೂಡಿನ ಕೆಲಸಕ್ಕೆ ಬರುವ ಮೊದಲು ಮುಂಗಡವಾಗಿ 35,000 ರೂಗಳನ್ನು ಪಡೆದಿದ್ದೇವೆ" ಎಂದು ಜೋಯಂತಿ ಹೇಳುತ್ತಾರೆ. ಅವರ ಜೊತೆಗೆ ಇತರ ಕುಟುಂಬಗಳಿಗೂ ಸಹಿತ ವಾರಕ್ಕೆ 400 ರೂ. ಗಳಂತೆ ಊಟದ ಭತ್ಯೆ ದೊರೆತಿದೆ. (ಆದಾಗ್ಯೂ, ಇದು ಪ್ರತಿ ವ್ಯಕ್ತಿಗೆ ಎಂದು ಕಾರ್ಮಿಕರು ಹೇಳುತ್ತಲೇ ಬಂದಿದ್ದಾರೆ. ಆದರೆ, ಅತ್ಯಂತ ಶೋಷಣೆಯ ಆಗರವಾಗಿರುವ ಇಟ್ಟಿಗೆ ಗೂಡಿನ ಕೈಗಾರಿಕೆಗಳಲ್ಲಿ ಅದರ ಮಾಲೀಕರು ಮತ್ತು ಮಂಡಲ್ ಕಂದಾಯ ಅಧಿಕಾರಿಗಳು ನಡೆಸುವ ಮಾತುಕತೆ ವೇಳೆ ಮಾಲೀಕರು ತಮ್ಮನ್ನು ಯಾವಾಗಲೂ ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ ಕಾರ್ಮಿಕರು ಎಂದು ಹೇಳಿರುವುದು ಇದಕ್ಕೆ ಪ್ರಮುಖ ಕಾರಣ ಎನ್ನಲಾಗುತ್ತದೆ..!.)

ಕಾರ್ಮಿಕರು ತಮ್ಮ ಏಳು ತಿಂಗಳ  ಕೆಲಸದ ಅವಧಿಯಲ್ಲಿ ಪ್ರತಿ ಕುಟುಂಬದ ತಂಡಕ್ಕೆ ನಿಗದಿಪಡಿಸಿರುವ 3,000- 4,000 ಇಟ್ಟಿಗೆಗಳ ದೈನಂದಿನ ಗುರಿಯನ್ನು ತಲುಪಬೇಕು. ಒಡಿಶಾದಿಂದ ಕಾರ್ಮಿಕರು ಆಗಮಿಸಿದ ನಂತರ, ಪ್ರತಿ ವರ್ಷ ನವೆಂಬರ್ ಕೊನೆಯಲ್ಲಿ ಅಥವಾ ಡಿಸೆಂಬರ್ ಆರಂಭದಲ್ಲಿ ಇಟ್ಟಿಗೆ ಗೂಡುಗಳ ಕೆಲಸ ಪ್ರಾರಂಭವಾಗುತ್ತದೆ. ಇದು ಮೇ ಅಂತ್ಯ ಅಥವಾ ಜೂನ್ ಆರಂಭದವರೆಗೆ ಮುಂದುವರಿಯುತ್ತದೆ.

ಗದ್ದಿಪೋಥರಂನಲ್ಲಿರುವ ಇಟ್ಟಿಗೆ ಗೂಡಿನಲ್ಲಿ ಬಹುತೇಕ ಎಲ್ಲ ಕಾರ್ಮಿಕರು ಒಡಿಶಾದಿಂದ ಬಂದವರಾಗಿದ್ದಾರೆ. ಅವರಲ್ಲಿ ಹಲವರು ಹೃದಯ್ ಮತ್ತು ಜೋಯಂತಿಯವರಂತೆ ಲುಹುರಾ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಈ ಸಮುದಾಯವನ್ನು ಆ ರಾಜ್ಯದಲ್ಲಿನ ಒಬಿಸಿ ಪಟ್ಟಿಯಲ್ಲಿ ಸೇರಿಸಲಾಗಿದೆ. ಸಾಮಾನ್ಯವಾಗಿ ಸರ್ದಾರ್ ಅಥವಾ ಗುತ್ತಿಗೆದಾರ ಪ್ರತಿ ಋತುವಿನಲ್ಲಿ ಸುಮಾರು 1,000 ಕಾರ್ಮಿಕರ ಗುಂಪನ್ನು ತೆಲಂಗಾಣದ ವಿವಿಧ ಇಟ್ಟಿಗೆ ಗೂಡುಗಳಿಗೆ ಕರೆತರುತ್ತಾರೆ. "ಒಡಿಶಾದಾದ್ಯಂತ ಹಳ್ಳಿಗಳಿಗೆ ಭೇಟಿ ನೀಡಿ, ನಮ್ಮಂತಹ ಕಾರ್ಮಿಕರನ್ನು ಒಟ್ಟುಗೂಡಿಸುವ ಅನೇಕ ಗುತ್ತಿಗೆದಾರರು ಇದ್ದಾರೆ. ನಾನು ಇಲ್ಲಿಗೆ ಸಣ್ಣ ಗುತ್ತಿಗೆದಾರರ ಮೂಲಕ ಬಂದೆ. ಒಂದು ವೇಳೆ ದೊಡ್ಡ ಗುತ್ತಿಗೆದಾರರಾದರೆ ಅವರು 2,000 ಕಾರ್ಮಿಕರನ್ನು ಸಹ ಇಲ್ಲಿಗೆ ಕರೆ ತರಬಹುದು" ಎನ್ನುತ್ತಾರೆ ಹೃದಯ್.

ಈ ಬಾರಿ ಹೃದಯ್ ತಮ್ಮ ಹದಿಹರೆಯದ ಮಗಳನ್ನು ತಮ್ಮೊಟ್ಟಿಗೆ ಕೆಲಸ ಮಾಡಲು ಕರೆತಂದಿದ್ದಾರೆ. "ಕಿರ್ಮಾನಿಗೆ 16 ಅಥವಾ 17 ವರ್ಷ ವಯಸ್ಸಾಗಿರಬಹುದು. ಅವಳು ಈಗ ಶಾಲೆಗೆ ಹೋಗುವುದನ್ನು ಬಿಟ್ಟಿದ್ದಾಳೆ, ಆದ್ದರಿಂದ ಅವಳು ನನ್ನೊಂದಿಗೆ ಇಲ್ಲಿ ಕೆಲಸಕ್ಕೆ ಬಂದಿದ್ದಾಳೆ. ಹೆಚ್ಚುವರಿ ಜೋಡಿಯ ಶ್ರಮ ಇದ್ದರೆ, ಇಟ್ಟಿಗೆಗಳನ್ನು ತಯಾರಿಸುವುದಕ್ಕೆ ಇನ್ನೂ ಅನುಕೂಲವಾಗುತ್ತದೆ, ಮತ್ತು ಮೇಲಾಗಿ ಆಕೆಯ ಮದುವೆಗೂ ಸಹ ನಮಗೆ ಹಣ ಬೇಕಾಗುತ್ತದೆ " ಎಂದು 55 ವರ್ಷದ ತಂದೆ ಹೃದಯ್ ಹೇಳುತ್ತಾರೆ. ಈಗ, ಕರೋನ ವೈರಸ್ ಮತ್ತು ಲಾಕ್ಡೌನ್ ಅನಿರ್ದಿಷ್ಟವಾಗಿ ಮುಂದುವರೆಯುವ ಭೀತಿಯಿಂದಾಗಿ ತಮ್ಮ ಹಳ್ಳಿಗೆ ಹಿಂತಿರುಗಲು ಅವರು ಇನ್ನೂ ಹೆಚ್ಚು ಕಾಯುವುದಿಲ್ಲ ಎನ್ನುತ್ತಾರೆ.

The kiln workers' makeshift huts – around 75 families from Balangir district are staying at the kiln where Hruday works
PHOTO • Varsha Bhargavi
The kiln workers' makeshift huts – around 75 families from Balangir district are staying at the kiln where Hruday works
PHOTO • Varsha Bhargavi

ಇಟ್ಟಿಗೆ ಗೂಡಿನ ಕಾರ್ಮಿಕರ ತಾತ್ಕಾಲಿಕ ಗುಡಿಸಲುಗಳು - ಬಾಲಂಗೀರ್ ಜಿಲ್ಲೆಯ ಸುಮಾರು 75 ಕುಟುಂಬಗಳು ಹೃದಯ್ ಕೆಲಸ ಮಾಡುವ ಇಟ್ಟಿಗೆ ಗೂಡುಗಳಲ್ಲಿ ತಂಗಿದ್ದಾರೆ.

ಸದ್ಯಕ್ಕೆ ಸುಮಾರು 4,800 ಒಡಿಸ್ಸಾದ ವಲಸೆ ಕಾರ್ಮಿಕರು ಸಂಗಾರೆಡ್ಡಿ ಜಿಲ್ಲೆಯ ಜಿನ್ನಾರಂ ಮತ್ತು ಗುಮ್ಮಡಿದಾಲ ಮಂಡಲಗಳಲ್ಲಿರುವ 46 ಇಟ್ಟಿಗೆ ಗೂಡುಗಳಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ರಾಜ್ಯ ಸರ್ಕಾರದ ಸ್ಥಳೀಯ ಶಿಕ್ಷಣ ಕಚೇರಿಯ ಮೂಲವೊಂದು ತಿಳಿಸಿದೆ. ಮತ್ತು 7 ರಿಂದ 14 ವರ್ಷದೊಳಗಿನ 316 ಮಕ್ಕಳು, ವಲಸೆ ಮಕ್ಕಳಿಗೆ ಶಿಕ್ಷಣ ಇಲಾಖೆ ನಡೆಸುತ್ತಿರುವ ಕಾರ್ಯಸ್ಥಳದಲ್ಲಿನ ಶಾಲೆಗಳಿಗೆ ಹಾಜರಾಗುತ್ತಾರೆ, ಅವರು ಇಟ್ಟಿಗೆ ಗೂಡಿನ ಆವರಣದಲ್ಲಿ ವಾಸಿಸುತ್ತಿದ್ದಾರೆ. (ಆರು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಸಂಖ್ಯೆ ಬಗ್ಗೆ ತಿಳಿದಿಲ್ಲ.) ಹೃದಯ್ ಮತ್ತು ಕಿರ್ಮಾನಿ ಕೆಲಸ ಮಾಡುವ ಇಟ್ಟಿಗೆ ಗೂಡಿನಲ್ಲಿ ಒಟ್ಟು 75 ಕುಟುಂಬಗಳಿವೆ, ಇದರಲ್ಲಿ 130 ಜನ ವಯಸ್ಕರು ಮತ್ತು 7ರಿಂದ 14 ವಯಸ್ಸಿನವರೆಗಿನ 24 ಮಕ್ಕಳು ಮತ್ತು ಕಿರಿಯ ಮಕ್ಕಳು ಇದರಲ್ಲಿ ಸೇರಿದ್ದಾರೆ, ಇವರೆಲ್ಲರೂ ಸಹಿತ ಬಾಲಾಂಗಿರ್ ಜಿಲ್ಲೆಯಿಂದ ಬಂದವರಾಗಿದ್ದಾರೆ.

"ನಾವು ಬೆಳಗ್ಗೆ 3ರಿಂದ ಇಟ್ಟಿಗೆಗಳನ್ನು ತಯಾರಿಸಲು ಪ್ರಾರಂಭಿಸುತ್ತೇವೆ ಮತ್ತು ಬೆಳಿಗ್ಗೆ 10-11ರೊಳಗೆ ಎಲ್ಲ ಕೆಲಸವನ್ನು ಮುಗಿಸುತ್ತೇವೆ. ಬೆಳಿಗಿನ ಶಿಫ್ಟ್ ಮುಗಿದ ನಂತರ ನಾವು ವಿಶ್ರಾಂತಿಯನ್ನು ತೆಗೆದುಕೊಳ್ಳುತ್ತೇವೆ. ಇನ್ನೊಂದೆಡೆಗೆ ಮಹಿಳೆಯರು ಕಟ್ಟಿಗೆಗಳ ಸಂಗ್ರಹ, ಅಡುಗೆ ಕೆಲಸ, ಮಕ್ಕಳನ್ನು ಸ್ನಾನ ಮಾಡಿಸುವ ಕೆಲಸದಲ್ಲಿ ತಲ್ಲೀನರಾಗುತ್ತಾರೆ. ತದನಂತರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಅವರು ಊಟಕ್ಕೆ ಹೋಗುತ್ತಾರೆ, ನಂತರ ಒಂದೆರಡು ಗಂಟೆಗಳ ಕಾಲ ವಿಶ್ರಾಂತಿ ಪಡೆಯುತ್ತಾರೆ" ಎಂದು 31 ವರ್ಷದ ಜೋಯಂತಿ ಹೇಳುತ್ತಾರೆ. ಅವರು ಮೂರು ಮಕ್ಕಳ ತಾಯಿಯಾಗಿದ್ದು, ಅವರು ಕೂಡ ಪತಿ ಮಾಡುವಷ್ಟೇ ಗಂಟೆಗಳ ಕೆಲಸವನ್ನು ಇಟ್ಟಿಗೆ ಗೂಡಿನಲ್ಲಿ ಮಾಡುತ್ತಾರೆ. "ನಾಲ್ಕು ವ್ಯಕ್ತಿಗಳು ತಂಡವಾಗಿ ಕೆಲಸ ಮಾಡುತ್ತೇವೆ. ಮತ್ತೆ ಸಂಜೆ 4 ಗಂಟೆಗೆ ನಾವು ಕೆಲಸವನ್ನು ಪ್ರಾರಂಭಿಸುತ್ತೇವೆ. ಸರಿ ಸುಮಾರು ರಾತ್ರಿ 10ರವರೆಗೆ ಇಟ್ಟಿಗೆಗಳನ್ನು ತಯಾರಿಸುವುದನ್ನು ಮುಂದುವರಿಸುತ್ತೇವೆ. ನಾವೆಲ್ಲ ಊಟ ಮಾಡುವಷ್ಟರಲ್ಲಿ ಆಗಲೇ ಮಧ್ಯರಾತ್ರಿ ಅಥವಾ ಬೆಳಗ್ಗೆ  1 ಗಂಟೆಯಾಗಿರುತ್ತದೆ" ಎಂದು ಹೇಳಿದರು.

ಜೋಯಂತಿ 14 - 15 ವರ್ಷದವರಿದ್ದಾಗ ಮದುವೆಯಾಗಿದ್ದರು, ಅವರಿಗೆ ತಮ್ಮ ನಿಖರ ವಯಸ್ಸಿನ ನೆನಪಿಲ್ಲ. ಏಪ್ರಿಲ್ 5ರಂದು ನಾವು ಅವರನ್ನು ಭೇಟಿಯಾದಾಗ, ಅವರು ತಮ್ಮ ಎರಡು ವರ್ಷದ ಮಗ ಬೊಸಾಂತ್‌ನನ್ನು ಹಿಡಿದಿಟ್ಟುಕೊಂಡಿದ್ದರು ಮತ್ತು ತನ್ನ ಆರು ವರ್ಷದ ಮಗಳು ಅಂಜೋಲಿಯು ಟಾಲ್ಕಮ್ ಪೌಡರ್ ಬಾಟಲಿಯನ್ನು ಖಾಲಿ ಮಾಡುವುದನ್ನು ತಡೆಯಲು ಪ್ರಯತ್ನಿಸುತ್ತಿದ್ದರು, ಅದರೊಂದಿಗೆ ಆಕೆ ಫೋಟೋಗೆ ಪೋಸ್ ನೀಡಲು ಮುಖಕ್ಕೆ ಪೌಡರ್ ಬಳಿದುಕೊಳ್ಳುತ್ತಿದ್ದಳು. ಜೋಯಂತಿಯ 11 ವರ್ಷದ ಹಿರಿಯ ಮಗ ಹತ್ತಿರದ ಇಟ್ಟಿಗೆ ಗೂಡು ಇರುವ ಕಾರ್ಯ ಸ್ಥಳದಲ್ಲಿನ ಶಾಲೆಯಲ್ಲಿ ಅಧ್ಯಯನ ಮಾಡುತ್ತಾನೆ, ಆದರೆ ಲಾಕ್ ಡೌನ್ ನಿಂದಾಗಿ ಈಗ ಶಾಲೆಯನ್ನು ಈಗ ಮುಚ್ಚಲಾಗಿದೆ. ಸ್ವತಃ ಜೋಯಂತಿ ಶಾಲೆಗೆ ಹೋಗಿಲ್ಲ;  ಅವರು ನಮಗೆ ತಮ್ಮ ವಯಸ್ಸನ್ನು ಹೇಳಲು, ತಮ್ಮ ಆಧಾರ್ ಕಾರ್ಡ್ ನ್ನು ತೋರಿಸುತ್ತಾರೆ.

ಜೋಯಂತಿಯ ಗಂಡನ ಕುಟುಂಬವು ಖುತುಲುಮುಂಡಾದಲ್ಲಿ ಎರಡು ಎಕರೆ ಭೂಮಿಯನ್ನು ಹೊಂದಿದೆ. "ಕೇವಲ ಒಂದು ಎಕರೆ ಮಾತ್ರ ಕೃಷಿ ಮಾಡಬಹುದಾಗಿದೆ. ನಾವು ಹತ್ತಿಯನ್ನು ಬೆಳೆಯುತ್ತೇವೆ, ಏಕೆಂದರೆ ಬೀಜಗಳಿಂದ ಕೀಟನಾಶಕಗಳವರೆಗೆ ಎಲ್ಲವನ್ನೂ ಬೀಜದ ಏಜೆಂಟರು ನಮ್ಮ ಮನೆ ಬಾಗಿಲಿಗೆ ತರುತ್ತಾರೆ. ಕೊಯ್ಲು ಮಾಡಿದ ಹತ್ತಿಯನ್ನು ನಮ್ಮಿಂದ ಖರೀದಿಸಲು ಮತ್ತೆ ಅವರು ಬರುತ್ತಾರೆ. ಮಳೆ ಬಂದಾಗ ಜೂನ್‌ನಲ್ಲಿ ಬಿತ್ತನೆ ಮಾಡಲು ಪ್ರಾರಂಭಿಸುತ್ತೇವೆ ಮತ್ತು ನವೆಂಬರ್ ಕೊನೆಯಲ್ಲಿ ಅಥವಾ ಡಿಸೆಂಬರ್ ಆರಂಭದಲ್ಲಿ ಹತ್ತಿಯನ್ನು ಕೊಯ್ಲು ಮಾಡುತ್ತೇವೆ. ಅವರು ನಮಗೆ ಕೊಯ್ಲು ಮಾಡಿದ ಹತ್ತಿಗೆ ಪ್ರತಿ ವರ್ಷ 10,000 ರೂ.ಗಳನ್ನು ನೀಡುತ್ತಾರೆ" ಎಂದು ಅವರು ಹೇಳಿದರು.

Left: Joyanti Parabhue (standing) with other workers. Right: Kirmani (in blue), Joyanti, Anjoli and Bosanth (in background), in the cooking area of Joyanti's hut
PHOTO • Varsha Bhargavi
Left: Joyanti Parabhue (standing) with other workers. Right: Kirmani (in blue), Joyanti, Anjoli and Bosanth (in background), in the cooking area of Joyanti's hut
PHOTO • Varsha Bhargavi

ಎಡಕ್ಕೆ: ಇತರ ಕೆಲಸಗಾರರೊಂದಿಗೆ ಜಯಂತಿ ಪರಭು (ನಿಂತಿರುವವರು ). ಬಲಕ್ಕೆ: ಕಿರ್ಮಾನಿ (ನೀಲಿ ಬಣ್ಣದ ಬಟ್ಟೆ ಧರಿಸಿರುವವರು), ಜೋಯಂತಿ, ಅಂಜೋಲಿ ಮತ್ತು ಬೊಸಾಂತ್ (ಹಿಂದುಗಡೆ), ಜೋಯಂತಿಯ ಗುಡಿಸಲಿನ ಅಡುಗೆ ಮಾಡುವ ಸ್ಥಳದಲ್ಲಿ ಕುಳಿತಿದ್ದಾರೆ.

ಕಂಪೆನಿಗಳಿಗೆ ಮಾರಾಟವಾದ ಹತ್ತಿಯನ್ನು ಅವರ ಹಳ್ಳಿಯಲ್ಲಿ ಖರೀದಿದಾರರಾಗಲಿ ಅಥವಾ ಇನ್ನ್ಯಾರೆ ಆಗಲಿ ತೂಗುವುದಿಲ್ಲ. "ಅವರು ನಮಗೆ ಬೀಜಗಳು, ಕೀಟನಾಶಕಗಳನ್ನು ನೀಡುವುದಲ್ಲದೆ ಹತ್ತಿಯನ್ನು ಸಹ ಖರೀದಿಸುವುದರಿಂದ ನಮಗೆ ಸಂತಸವಾಗಿದೆ. ನಮ್ಮಂತಹ ದೊಡ್ಡ ಕುಟುಂಬಕ್ಕೆ 10,000 ರೂ ಏತಕ್ಕೂ ಸಾಕಾಗುವುದಿಲ್ಲ. ನಾವು ಪ್ರತಿ ವರ್ಷ ಹತ್ತಿಯನ್ನು ಕೊಯ್ಲು ಮಾಡಿದ ನಂತರ ಈ ಇಟ್ಟಿಗೆ ಗೂಡು ಕೆಲಸಕ್ಕೆ ಬರುತ್ತಿದ್ದೇವೆ" ಎಂದು ಜೊಯಂತಿ ಹೇಳುತ್ತಾರೆ.

ಇಟ್ಟಿಗೆ ಗೂಡುಗಳಲ್ಲಿ ಸಾಮಾನ್ಯವಾಗಿ ಕಾರ್ಮಿಕರು ತುಂಡಾದ ಮತ್ತು ಹಾನಿಗೊಳಗಾದ ಇಟ್ಟಿಗೆಗಳ ರಾಶಿಗಳಿಂದ ನಿರ್ಮಿಸಿರುವ ತಾತ್ಕಾಲಿಕ ಗುಡಿಸಲುಗಳಲ್ಲಿ ವಾಸಿಸುತ್ತಾರೆ. ಕೆಲವೇ ಕೆಲವು ಗುಡಿಸಲುಗಳಲ್ಲಿ ಮಣ್ಣಿನ ಗಾರೆಯಿದೆ. ಇಟ್ಟಿಗೆ ಗೂಡಿನ ಮಾಲೀಕರು ಕುಡಿಯುವ ನೀರನ್ನು ಒದಗಿಸುವ ನೀರಿನ ಶುದ್ಧೀಕರಣ ಯಂತ್ರವನ್ನು ಸ್ಥಾಪಿಸಿದ್ದಾರೆ. ಇದು ಕಾರ್ಯಸ್ಥಳದಲ್ಲಿರುವ ಏಕೈಕ ಸೌಲಭ್ಯವಾಗಿದೆ.

27 ವರ್ಷದ ಗೀತಾ ಸೇನ್, ತನ್ನ ಮಗುವನ್ನು ತನ್ನ ತೋಳುಗಳಲ್ಲಿ ಹಿಡಿದಿಟ್ಟುಕೊಂಡು, ಇಟ್ಟಿಗೆ ಗೂಡುಗಳ ಹಿಂದಿನ ತೆರೆದ ಪ್ರದೇಶವನ್ನು ನಮಗೆ ತೋರಿಸುತ್ತಾ. "ನಾವು ಅಲ್ಲಿರುವ ಮೈದಾನದಲ್ಲಿ ನಮ್ಮ ಶುಚಿ ಕಾರ್ಯವನ್ನು ಕೈಗೊಳ್ಳುತ್ತೇವೆ. ಸ್ನಾನ ಮಾಡಲು ಮತ್ತು ಬಟ್ಟೆ ಒಗೆಯಲು ನಾವು ಇಲ್ಲಿಯವರೆಗೆ ನೀರನ್ನು ಸಾಗಿಸಬೇಕು. ಪುರುಷರಾದರೆ ಎಲ್ಲಿಯಾದರೂ ಸ್ನಾನ ಮಾಡಬಹುದು. ಆದರೆ ನಾವು ಮಹಿಳೆಯರು ಇಲ್ಲಿಯೇ ಸ್ನಾನ ಮಾಡಬೇಕು" ಎಂದು ಅವರು ಒಂದು ಸಣ್ಣ ಪ್ರದೇಶವನ್ನು ತೋರಿಸಿದರು. ಅಲ್ಲಿ ನಾಲ್ಕು ಕಲ್ಲಿನ ಚಪ್ಪಡಿಗಳು, ಕೆಲವು ಒಡೆದಿರುವ ಪ್ಲಾಸ್ಟಿಕ್ ಬಿಂದಿಗೆಗಳು ಅರ್ಧದಷ್ಟು ರಾಡಿ ನೀರಿನಿಂದ ತುಂಬಿತ್ತು, ಮತ್ತು ಪ್ಲಾಸ್ಟಿಕ್ ಶೀಟ್ ಕವರ್ ಗೆ ಕೋಲುಗಳನ್ನು ಆಸರೆಯಾಗಿ ಕೊಡಲಾಗಿದೆ. "ನಮ್ಮಲ್ಲಿ ಒಬ್ಬರು ಕಾವಲುಗಾರರಾಗಿದ್ದರೆ, ಇನ್ನೊಬ್ಬರು ಸ್ನಾನ ಮಾಡುತ್ತಾರೆ. ನಾವು ಇಟ್ಟಿಗೆ ಗೂಡಿನ ಬಳಿ ಇರುವ ಶೇಖರಣಾ ತೊಟ್ಟಿಯಿಂದ ನೀರನ್ನು ಒಯ್ಯುತ್ತೇವೆ" ಎಂದು ಅವರು ಹೇಳುತ್ತಾರೆ.

ಬೆಳಗಿನ ಸ್ನಾನದ ನಂತರ ನೀರು ಸಂಗ್ರಹವಾಗಿದ್ದ ಸ್ಥಳದ ಬಳಿ ಇನ್ನೂ ಕೆಲವು ಮಹಿಳೆಯರು ಶಿಶುಗಳು ಮತ್ತು ಮಕ್ಕಳೊಂದಿಗೆ ಬಂದರು, ಅವರೆಲ್ಲರೂ ಮನೆಗೆ ಹೋಗಬೇಕೆಂದು ಬಯಸುತ್ತಾರೆ. "ಲಾಕ್ ಡೌನ್ ನಂತರ ನಾವೆಲ್ಲರೂ ಒಡಿಶಾಗೆ ಹಿಂತಿರುಗಬೇಕಾ?" ಎಂದು ಗೀತಾ ಹಿಂಜರಿಕೆಯಿಂದ ಪ್ರಶ್ನಿಸುತ್ತಾರೆ.

PHOTO • Varsha Bhargavi

ಮಕ್ಕಳೊಂದಿಗೆ ಕೆಲವು ಮಹಿಳೆಯರು ನಾವು ಇದ್ದ ಸ್ಥಳದಲ್ಲಿ ಒಗ್ಗೂಡಿದರು, ಅವರೆಲ್ಲರೂ ಮನೆಗೆ ಹೋಗಲು ಬಯಸುತ್ತಾರೆ. ಬಲ: ಇಟ್ಟಿಗೆ ಗೂಡುಗಳಲ್ಲಿ ಸ್ನಾನ ಮಾಡುವ ಪ್ರದೇಶ, ಇದು ಯಾವುದೇ ಸೌಕರ್ಯಗಳನ್ನು ಹೊಂದಿಲ್ಲ.

ಮಾರ್ಚ್ 30ರಂದು ಏಪ್ರಿಲ್ 14ರಂದು ಕೊನೆಗೊಳ್ಳಬೇಕಿದ್ದ ಲಾಕ್‌ಡೌನ್ ಪರಿಹಾರ ಕ್ರಮಗಳ ಭಾಗವಾಗಿ ಪ್ರತಿ ವಲಸೆ ಕಾರ್ಮಿಕರಿಗೆ ತೆಲಂಗಾಣ ಸರ್ಕಾರ 12 ಕೆಜಿ ಅಕ್ಕಿ ಮತ್ತು 500 ರೂ ನೀಡಲು ಆದೇಶಿಸಿತ್ತು. ಆದರೆ, ಇದು ಏಪ್ರಿಲ್ 5ರವರೆಗೆ ಗದ್ದಿಪೋಥರಂನ ವಲಸೆ ಕಾರ್ಮಿಕರ ಕುಟುಂಬಗಳನ್ನು ತಲುಪಲಿಲ್ಲ. ಮತ್ತು ಗ್ರಾಮೀಣ ಸಂತೆಯಿಂದಲೂ ಕುಟುಂಬಗಳಿಗೆ ಏನನ್ನೂ ಖರೀದಿಸಲು ಸಾಧ್ಯವಾಗಲಿಲ್ಲ. ಸ್ವಯಂ ಸೇವಕರು ಕುಟುಂಬಗಳಿಗೆ ಎರಡು ವಾರಗಳ ಅಗತ್ಯ ಆಹಾರ ಪದಾರ್ಥಗಳೊಂದಿಗೆ 75 ಪಡಿತರ ಕಿಟ್‌ಗಳನ್ನು (ಖಾಸಗಿ ಕಂಪನಿಯ ಕೊಡುಗೆ) ವಿತರಿಸಿದಾಗ ಆಗಲೇ ಅವರು ಒಂದು ದಿನ ಹಸಿವಿನಿಂದ ಬಳಲುತ್ತಿದ್ದರು.

ಸಂಗಾರೆಡ್ಡಿಯಲ್ಲಿನ ಜಿಲ್ಲಾಡಳಿತಕ್ಕೆ ಕಾರ್ಮಿಕರ ಪರಿಸ್ಥಿತಿಯ ಬಗ್ಗೆ ತಿಳಿದ ನಂತರ, ಜಿಲ್ಲಾಧಿಕಾರಿಗಳು ಅಕ್ಕಿ ಮತ್ತು ಹಣವನ್ನು ಏಪ್ರಿಲ್ 5ರಂದು ಕಾರ್ಮಿಕರಿಗೆ ಕಳುಹಿಸಿದರು. ಆದರೆ ಅದನ್ನು ಪ್ರತಿ ಕುಟುಂಬಕ್ಕೆ ವಿತರಿಸಲಾಯಿತೇ ಹೊರತು ಪ್ರತಿಯೊಬ್ಬ ವ್ಯಕ್ತಿಗೆ ಅಲ್ಲ. ನಾವು ಮಾತನಾಡಿಸಿದ ಅನೇಕ ವಲಸೆ ಕಾರ್ಮಿಕರು ಅವರು ಪರಿಹಾರ ವಿತರಣೆ ರೇಖೆಯ ಕೆಳಭಾಗದಲ್ಲಿದ್ದಾರೆ, ರಾಜ್ಯದಲ್ಲಿ ಪಡಿತರ ಚೀಟಿ ಹೊಂದಿರುವವರ ಕೆಳಗೆ ಇದ್ದಾರೆ ಎಂದು ಹೇಳಬಹುದು. ಕಾರ್ಮಿಕರು ಈಗ ತಮಗೆ ಬರುವ ಭತ್ಯೆಯಲ್ಲಿಯೇ ಬೆಳಗ್ಗೆ 11 ಗಂಟೆಯವರೆಗೆ ತೆರೆದಿರುವ ಗ್ರಾಮದಲ್ಲಿನ ಅಂಗಡಿಗಳಿಂದ ಕೆಲವು ವಸ್ತುಗಳನ್ನು ಖರೀದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇವರೆಲ್ಲರೂ ಈಗ ಮನೆಗೆ ಹಿಂತಿರುಗಲು ಹತಾಶರಾಗಿ ಕಾಯುತ್ತಿದ್ದಾರೆ. "ಕರೋನಾ ನಮ್ಮ ಬಳಿಗೆ ಬರುವುದನ್ನು ಕಾಯುತ್ತಾ ನಾವು ಇಲ್ಲಿಯೇ ಇರಬೇಕೆಂದು ನೀವು ಬಯಸುತ್ತೀರಾ?"  ಎಂದು ಹೃದಯ್ ಆಕ್ರೋಶದಿಂದ ಪ್ರಶ್ನಿಸುತ್ತಾರೆ.” ಒಂದು ವೇಳೆ ಸಾವು ಅನಿವಾರ್ಯವಾದರೆ, ನಾವೆಲ್ಲರೂ ನಮ್ಮ ಕುಟುಂಬ ಸದಸ್ಯರ ಮಧ್ಯೆ ನಮ್ಮ ತಾಯ್ನಾಡಿನಲ್ಲಿ ಸಾಯುತ್ತೇವೆ." ಎಂದು ಹತಾಶೆಯಿಂದ ಹೇಳುತ್ತಾರೆ.

ಅನುವಾದ - ಎನ್ . ಮಂಜುನಾಥ್

Varsha Bhargavi

ବର୍ଷା ଭାର୍ଗବୀ ହେଉଛନ୍ତି ତେଲେଙ୍ଗାନାରେ ରହୁଥିବା ଜଣେ ଶ୍ରମିକ ଓ ପିଲାଙ୍କ ଅଧିକାର ପାଇଁ ଲଢୁଥିବା ସାମାଜିକ କର୍ମୀ ଓ ଲିଙ୍ଗଗତ ସଚେତନତା ପ୍ରଶିକ୍ଷକ ।

ଏହାଙ୍କ ଲିଖିତ ଅନ୍ୟ ବିଷୟଗୁଡିକ Varsha Bhargavi
Translator : N. Manjunath