"ಏ ಕಿಸೆ ಹೋರ್ ನು ಜಿತಾ ರಹೇ ನೆ, ಸಾಡೆ ಆಗ್ಗೆ ಕೋಯಿ ಹೋರ್ ಕುಡಿ ನಹೀ ಸಿ [ಅವರು ಬೇರೆಯವರು ಗೆಲ್ಲುವಂತೆ ಮಾಡುತ್ತಿದ್ದಾರೆ, ನಮ್ಮ ಮುಂದೆ ಬೇರೆ ಯಾವುದೇ ಹುಡುಗಿ ಇರಲಿಲ್ಲ]." ಅಥ್ಲೀಟ್‌ಗಳಾದ ಜಸ್ಪಾಲ್, ರಮದೀಪ್ ಮತ್ತು ಸ್ನೇಹಿತರು ಒಂದೇ ದನಿಯಲ್ಲಿ ತಮ್ಮ ಕೋಚ್‌ಗೆ ದೂರು ನೀಡುತ್ತಿದ್ದಾರೆ. ಚಂಡೀಗಢದಲ್ಲಿ ನಡೆಯುತ್ತಿರುವ ಮ್ಯಾರಥಾನ್‌ನಲ್ಲಿ ಭಾಗವಹಿಸಲು 200 ಕಿಲೋಮೀಟರ್ ಪ್ರಯಾಣಿಸಿ ಬಂದಿರುವ ಅಮೃತ್‌ಸರ್ ಜಿಲ್ಲೆಯ ಒಂದು ಡಜನ್ ಯುವ ಓಟಗಾರರಲ್ಲಿನ ಉದ್ವಿಗ್ನತೆ ಎದ್ದು ಕಾಣುತ್ತಿತ್ತು.

ಇದೆಲ್ಲವೂ ನಡೆಯುತ್ತಿಂತೆ ಐದು ಕಿಲೋಮೀಟರ್ ಓಟದಲ್ಲಿ ದ್ವಿತೀಯ ಬಹುಮಾನ ಪಡೆದಿರುವ ಜಸ್ಪಾಲ್ ಕೌರ್ ಹೆಸರನ್ನು ವೇದಿಕೆಯಲ್ಲಿ ಕೂಗಲಾಗುತ್ತಿತ್ತು. ಜಸ್ಪಾಲ್ ಅವರಿಗೆ ತಾನು ರನ್ನರ್ ಅಪ್ ಅಲ್ಲ, ವಿಜೇತೆಯೆಂಬುದು ತಿಳಿದಿದೆ, ಏಕೆಂದರೆ ಅವರು ಕೊನೆಯ ಗೆರೆಯವರೆಗೂ ತಲುಪಿದ್ದರು. ಆದರೆ ವಿಜೇತರಿಗೆ ನೀಡಲಾಗುವ 5,000 ರುಪಾಯಿಯ ನಗದು ಬಹುಮಾನವನ್ನು ಬೇರೆಯವರ ಹೆಸರಿಗೆ ಘೋಷಿಸಲಾಗುತ್ತಿದೆ.

ವೇದಿಕೆಗೆ ಹೋಗಿ ಎರಡನೇ ಬಹುಮಾನವನ್ನು ಸ್ವೀಕರಿಸಲು ಜಸ್ಪಾಲ್ ನಿರಾಕರಿಸಿದರು. ಇದರ ಬದಲಿಗೆ ಅವರು ಮತ್ತು ಅವರ ಕೋಚ್‌ ವೇದಿಕೆಯ ಮೇಲೆ ಮತ್ತು ಕೆಳಗೆ ಓಡಾಡುತ್ತಿದ್ದರು.‌ ಅಲ್ಲಿರುವ ಪ್ರತಿಯೊಬ್ಬರ ಬಳಿ ಹೋಗಿ ಸಂಘಟಕರ ನಿರ್ಧಾರವನ್ನು ಪ್ರಶ್ನಿಸುತ್ತಿದ್ದರು, ಅವರ ಕಥೆಯನ್ನು ವಿವರಿಸುತ್ತಿದ್ದರು ಮತ್ತು ತಮಗಾದ ಅನ್ಯಾಯವನ್ನು ಪರಿಹರಿಸಲು ನೆರವನ್ನು ಕೋರುತ್ತಿದ್ದರು. ಕೊನೆಯಲ್ಲಿ ಕೋಚ್‌ನ ಬೇಡಿಕೆಯ ಮೇರೆಗೆ ಜಸ್ಪಾಲ್ ದ್ವಿತೀಯ ಬಹುಮಾನವನ್ನು ಸ್ವೀಕರಿಸುತ್ತಾರೆ, 3,100 ರುಪಾಯಿ ಎಂದು ಬರೆಯಲಾಗಿದ್ದ ಒಂದು ದೊಡ್ಡ ಫೋಮ್ ಬೋರ್ಡ್ ಚೆಕ್ ತೆಗೆದುಕೊಳ್ಳುತ್ತಾರೆ.

ಒಂದು ತಿಂಗಳ ನಂತರ, ಅಂದರೆ 2023ರ ಏಪ್ರಿಲ್‌ ತಿಂಗಳಲ್ಲಿ ಅಚ್ಚರಿಯೆಂಬಂತೆ ಜಸ್ಪಾಲ್ ಅವರ ಬ್ಯಾಂಕ್ ಖಾತೆಗೆ 5 ಸಾವಿರ‌ ರುಪಾಯಿ ಜಮೆಯಾಗಿತ್ತು. ಈ ಬಗ್ಗೆ ಜಸ್ಪಾಲ್‌ರವರಿಗೆ ಏನನ್ನೂ ಹೇಳಲಾಗಿರಲಿಲ್ಲ ಮತ್ತು ಯಾವುದೇ ಸ್ಥಳೀಯ ಪತ್ರಿಕೆಗಳೂ ಈ ಕುರಿತು ವರದಿ ಮಾಡಿರಲಿಲ್ಲ. ರುನಿಝೆನ್ ಟೈಮಿಂಗ್ ಸಿಸ್ಟಮ್ಸ್‌ನ ಫಲಿತಾಂಶದ ವೆಬ್‌ಸೈಟ್‌ನಲ್ಲಿ ಅವರ ಹೆಸರನ್ನು 23.07 ನಿಮಿಷಗಳ ಗನ್‌ಟೈಮ್ (ರೇಸ್ ಸಮಯ) ನೊಂದಿಗೆ 5-ಕಿಲೋಮೀಟರ್ ಓಟದ ಲೀಡರ್‌ಬೋರ್ಡ್‌ನಲ್ಲಿ ವಿಜೇತೆ ಎಂದು ಪ್ರಕಟಿಸಲಾಗಿತ್ತು. ಆದರೆ ಆ ವರ್ಷದ ಬಹುಮಾನ ವಿತರಣೆ ಮಾಡುವ ಫೋಟೋಗಳಲ್ಲಿ ಇವರು ಇರಲಿಲ್ಲ. ಜಸ್ಪಾಲ್ ಮಾತ್ರ ಪದಕಗಳೊಂದಿಗೆ ಆ ದೈತ್ಯಾಕಾರದ ಚೆಕ್ಕನ್ನು ತಮ್ಮೊಂದಿಗೇ ಇಟ್ಟುಕೊಂಡಿದ್ದಾರೆ.

2024ರಲ್ಲಿ ಮುಂದೆ ನಡೆಯಲಿರುವ ಮ್ಯಾರಥಾನ್‌ಗೆ ಹುಡುಗಿಯರನ್ನು ಸಿದ್ಧಗೊಳಿಸಲಾಗುತ್ತಿತ್ತು. ವೀಡಿಯೊವನ್ನು ಪರಿಶೀಲನೆ ನಡೆಸಿ ಆ ವರ್ಷದ ಓಟದಲ್ಲಿ ಜಸ್ಪಾಲ್‌ರವರ ಪ್ರತಿಸ್ಪರ್ಧಿಯನ್ನು ಅವರು ಅನರ್ಹಗೊಳಿಸಿರುವ ವಿಚಾರ ಸಂಘಟಕರಿಂದ ಈ ವರದಿಗಾರರಿಗೆ ತಿಳಿಯಿತು. ಪ್ರತಿಭಟಿಸುವ ಹುಡುಗಿಯರೇ ಸರಿ ಎಂಬುದು ಅವರಿಗೆ ಮನವರಿಕೆಯಾಗಿದೆ. ರೇಸ್ ಬಿಬ್‌ನಲ್ಲಿ ಕೆಲ ಮೋಸದಾಟಗಳು ನಡೆದಿವೆ. ಇದು ಜಸ್ಪಾಲ್‌ರವರಿಗೆ ಬಂದಿರುವ ನಗದು ಬಹುಮಾನದ ಹಿಂದಿನ ಮರ್ಮವನ್ನು ತಿಳಿಸುತ್ತದೆ.

ಜಸ್ಪಾಲ್ ಅವರಿಗೆ ಬಹುಮಾನದಲ್ಲಿ ಬರುವ ಹಣ ತುಂಬಾ ಮುಖ್ಯ. ಹಣವನ್ನು ಉಳಿಸಿದರೆ ಮಾತ್ರ ಮತ್ತೆ ಕಾಲೇಜಿಗೆ ಹೋಗಬಹುದು. ಜಸ್ಪಾಲ್ ಎರಡು ವರ್ಷಗಳ ಹಿಂದೆ ಖಾಸಗಿ ವಿಶ್ವವಿದ್ಯಾನಿಲಯದಲ್ಲಿ ಆನ್‌ಲೈನ್ ಬಿಎ (ಆರ್ಟ್ಸ್) ಕೋರ್ಸಿಗೆ ಸೇರಿಕೊಂಡಿದ್ದರು. "ಆದರೆ ಮೊದಲ ಸೆಮಿಸ್ಟರ್ ನಂತರ ಓದನ್ನು ಮುಂದುವರಿಯಲು ಸಾಧ್ಯವಾಗಲಿಲ್ಲ," ಎಂದು ಅವರು ಹೇಳುತ್ತಾರೆ. “ನಾನು ಪರೀಕ್ಷೆ ಬರೆಯಬೇಕಾದರೆ ಪ್ರತಿ ಸೆಮಿಸ್ಟರ್‌ಗೆ ಸುಮಾರು 15,000 ರೂಪಾಯಿಗಳನ್ನು ಕೊಡಬೇಕಾಗಿತ್ತು. ಮೊದಲ ಸೆಮಿಸ್ಟರ್‌ನಲ್ಲಿ ನಾನು ಪ್ರಶಸ್ತಿಯಿಂದ ಬಂದ ಹಣದಲ್ಲಿ [ಗ್ರಾಮದ ಜನಪ್ರತಿನಿಧಿಗಳು ಮತ್ತು ರಾಷ್ಟ್ರೀಯ ವಿಜೇತರ ಶಾಲೆ ಕೊಟ್ಟಿದ್ದ] ಫೀಸನ್ನು ಪಾವತಿಸಿದೆ. ಆದರೆ ಆ ನಂತರ ನನ್ನಲ್ಲಿ ಹಣವಿಲ್ಲದೆ ಮತ್ತೊಂದು ಸೆಮಿಸ್ಟರನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ,” ಎಂದು ಅವರು ಹೇಳುತ್ತಾರೆ.

22 ವರ್ಷ ಹರೆಯ ಜಸ್ಪಾಲ್ ತಮ್ಮ ಇಡೀ ಕುಟುಂಬದಲ್ಲೇ ಕಾಲೇಜಿಗೆ ಹೋಗುವ ಮೊದಲ ತಲೆಮಾರಿನವರು. ಪಂಜಾಬ್‌ನಲ್ಲಿ ಅತ್ಯಂತ ಹಿಂದುಳಿದ ಪರಿಶಿಷ್ಟ ಜಾತಿ ಎಂದು ಪರಿಗಣಿಸಲ್ಪಟ್ಟಿರುವ ಮಜಾಬಿ ಸಿಖ್ ಸಮುದಾಯಕ್ಕೆ ಸೇರಿದವರು. ಕಾಲೇಜಿಗೆ ಹೋಗುವ ತಮ್ಮ ಹಳ್ಳಿಯ ಕೆಲವೇ ಕೆಲವು ಮಜಾಬಿ ಮಹಿಳೆಯರಲ್ಲಿ ಇವರೂ ಒಬ್ಬರು. ಜಸ್ಪಾಲ್ ಅವರ ತಾಯಿ, 47 ವರ್ಷ ಪ್ರಾಯದ ಬಲ್ಜಿಂದರ್ ಕೌರ್ 5 ನೇ ತರಗತಿಯವರೆಗೆ ಓದಿದ್ದಾರೆ. ಇವರ ತಂದೆ 50 ವರ್ಷ ಪ್ರಾಯದ ಬಾಲ್ಕರ್ ಸಿಂಗ್ ಶಾಲೆಯ ಮುಖವನ್ನೇ ನೋಡಿಲ್ಲ. ಜಸ್ಪಾಲ್‌ ಅವರ ಅಣ್ಣ, 24 ವರ್ಷ ಪ್ರಾಯದ ಅಮೃತಪಾಲ್ ಸಿಂಗ್ 12 ನೇ ತರಗತಿಯ ನಂತರ ಓದನ್ನು ಬಿಟ್ಟು ತಮ್ಮ ಹಳ್ಳಿ ಕೊಹಾಲಿಯ ಸುತ್ತಮುತ್ತ ಕಟ್ಟಡ ಕಾರ್ಮಿಕರಾಗಿ ಕೆಲಸ ಮಾಡುವ ತಮ್ಮ ತಂದೆಗೆ ಸಹಾಯ ಮಾಡುತ್ತಿದ್ದಾರೆ. ಇವರ ತಮ್ಮ, 17 ವರ್ಷ ಪ್ರಾಯದ ಆಕಾಶದೀಪ್ ಸಿಂಗ್ 12 ನೇ ತರಗತಿಯನ್ನು ಮುಗಿಸಿದ್ದಾನೆ.

PHOTO • Arshdeep Arshi
PHOTO • Arshdeep Arshi

ಜಸ್ಪಾಲ್ (ಎಡ) ಅತ್ಯಮೂಲ್ಯವಾದ ಪ್ರಶಸ್ತಿಗಳನ್ನು ಈ ಲೋಹದ ಬೀರುವಿನಲ್ಲಿ ಸುರಕ್ಷಿತವಾಗಿ ತೆಗೆದಿಡುತ್ತಾರೆ. ತಮ್ಮ ಕುಟುಂಬದೊಂದಿಗೆ ಜಸ್ಪಾಲ್ (ಬಲ)

ಈಗ ಅಣ್ಣನ ಹೆಂಡತಿ ಮತ್ತು ಮಗುವೂ ಇರುವ ಇವರ ಕುಟುಂಬದ ಆದಾಯ ಇಬ್ಬರು ಗಂಡಸರ ಉದ್ಯೋಗದ ಮೇಲೆ ನಿಂತಿದೆ. ಆ ಕೆಲಸಗಳೂ ನಿರೀಕ್ಷೆಯಂತೆ ಸಿಗುವುದಿಲ್ಲ. ಕೈಯಲ್ಲಿ ಕೆಲಸವಿದ್ದರೆ ಎಲ್ಲವೂ ಚೆನ್ನಾಗಿರುತ್ತದೆ. ಇವರು ತಿಂಗಳಿಗೆ 9,000-10,000 ರುಪಾಯಿ ಸಂಪಾದನೆ ಮಾಡುತ್ತಾರೆ.

ಜಸ್ಪಾಲ್ ಅವರಿಗೆ ಬಹುಮಾನದಲ್ಲಿ ಬರುವ ಹಣ ಪ್ರವೇಶ ಶುಲ್ಕ ಮತ್ತು ಸ್ಪರ್ಧೆಗಳಿಗೆ ಹೋಗುವ ಪ್ರಯಾಣ ವೆಚ್ಚ, ಮತ್ತು ಶಿಕ್ಷಣದಂತಹ ಕೆಲವು ಸ್ವಂತ ವೆಚ್ಚಗಳಿಗೆ ಸರಿಯಾಗುತ್ತದೆ. "ರೇಸ್‌ಗಳಿಗೆ ಹೆಸರು ಕೊಡುವಾಗ ನಮಗೆ ಟೀ-ಶರ್ಟ್‌ಗಳು ಸಿಗುತ್ತವೆ, ಆದರೆ ಶಾರ್ಟ್ಸ್, ಟ್ರ್ಯಾಕ್‌ಸೂಟ್ ಪ್ಯಾಂಟ್‌ಗಳು ಮತ್ತು ಶೂಗಳಿಗೆ ನಾವು ನಮ್ಮ ಅಪ್ಪ-ಅಮ್ಮನಿಂದ ಹಣ ಕೇಳಬೇಕಾಗುತ್ತದೆ," ಎಂದು ಮೈದಾನದಲ್ಲಿ ಕ್ರೀಡಾ ಬಟ್ಟೆಗಳನ್ನು ಧರಿಸುತ್ತಾ ಅಭ್ಯಾಸಕ್ಕೆ ತಯಾರಾಗುತ್ತಿರುವ ಜಸ್ಪಾಲ್ ಹೇಳುತ್ತಾರೆ.

ನಮ್ಮ ಸುತ್ತ ಯುವ ಅಥ್ಲೀಟ್‌ಗಳು ವಾರ್ಮ್‌-ಅಪ್ ಮಾಡುತ್ತಿರುವುದು, ನಿಧಾನವಾಗಿ ಮೈದಾನದ ಸುತ್ತ ಓಡುತ್ತಿರುವುದು, ಮತ್ತು ಕೆಲವರು ದೈನಂದಿನ ತರಬೇತಿಗಾಗಿ ತಮ್ಮ ಕೋಚ್ ರಾಜಿಂದರ್ ಸಿಂಗ್ ಸುತ್ತಲೂ ಸೇರಿರುವುದನ್ನು ನೋಡಬಹುದು. ಇವರೆಲ್ಲರೂ ಬೇರೆ ಬೇರೆ ಊರುಗಳಿಂದ ಬಂದವರು. ಜಸ್ಪಾಲ್ 400 ಮತ್ತು 800 ಮೀಟರ್, ಮತ್ತು 5-ಕಿಮೀ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದಾರೆ. ಕಳೆದ ಏಳು ವರ್ಷಗಳಲ್ಲಿ ಅನೇಕ ಬಹುಮಾನಗಳು, ಪದಕಗಳನ್ನು ಗೆದ್ದಿದ್ದಾರೆ. ತನ್ನ ಸ್ವಂತ ಗ್ರಾಮದ ಅನೇಕರಿಗೆ ಜಸ್ಪಾಲ್ ಸ್ಫೂರ್ತಿಯಾಗಿದ್ದಾರೆ. ಅವರ ಪದಕಗಳು, ಪ್ರಮಾಣಪತ್ರಗಳು ಮತ್ತು ನಗದು ಬಹುಮಾನಗಳು ಬಡ ಕುಟುಂಬದ ಅನೇಕರು ತಮ್ಮ ಮಕ್ಕಳನ್ನು ತರಬೇತಿಗೆ ಸೇರಿಸುವಂತೆ ಪ್ರೇರಣೆ ನೀಡಿದೆ.

ಆದರೆ ಇಲ್ಲಿಯವರೆಗೆ ತಾವು ಗೆದ್ದ ಹಣದಿಂದ ತಮ್ಮ ಕುಟುಂಬಕ್ಕೆ ಯಾವುದೇ ಸಹಾಯ ಮಾಡಲು ಜಸ್ಪಾಲ್‌ರವರಿಗೆ ಆಗಲಿಲ್ಲ. 2024ರ ಫೆಬ್ರವರಿಯಿಂದ ಜಸ್ಪಾಲ್ ಅವರು ಅಮೃತ್‌ಸರ್ ಬಳಿಯ ಗೋಶಾಲೆಯೊಂದರಲ್ಲಿ ಎಕೌಂಟ್ ಕೀಪಿಂಗ್‌ ಕೆಲಸ ಮಾಡುತ್ತಿದ್ದಾರೆ. ಈ ಕೆಲಸಕ್ಕೆ ತಿಂಗಳಿಗೆ 8,000 ರುಪಾಯಿ ಸಂಬಳ ಸಿಗುತ್ತದೆ. “ನನ್ನ ಕುಟುಂಬದ ಆದಾಯಕ್ಕೆ ನನ್ನಿಂದಾದಷ್ಟು ನೆರವು ನೀಡಲು ನಾನು ಈ ಉದ್ಯೋಗವನ್ನು ಕೈಗೆತ್ತಿಕೊಂಡೆ. ಆದರೆ ಈಗ ನನಗೆ ಓದಲು ಕೂಡ ಸಮಯವೂ ಸಿಗುತ್ತಿಲ್ಲ,” ಎನ್ನುತ್ತಾರೆ ಅವರು.

ಮನೆಯ ಜವಾಬ್ದಾರಿಗಳ ಜೊತೆಗೆ ಈ ಹೊಸ ಕೆಲಸದ ಸಂಬಳವೂ ತನ್ನ ಸೆಮಿಸ್ಟರ್ ಶುಲ್ಕವನ್ನು ಭರಿಸಲು ಸಾಕಾಗುವುದಿಲ್ಲ ಎಂಬುದು ಅವರಿಗೆ ತಿಳಿದಿದೆ.

2024 ಮಾರ್ಚ್‌ನಲ್ಲಿ ಅವರು ಮತ್ತೊಮ್ಮೆ ಚಂಡೀಗಢದಲ್ಲಿ ನಡೆಯುವ 10-ಕಿಮೀ ಓಟದ ಸ್ಪರ್ಧೆಯಲ್ಲಿ ಓಡಲು ನಿರ್ಧರಿಸಿದರು. ಈ ಬಾರಿ ಅವರು ಎರಡನೇ ರನ್ನರ್ ಅಪ್ ಆಗಿ, ₹11,000 ನಗದು ಬಹುಮಾನವನ್ನು ಗೆದ್ದಿದ್ದಾರೆ.

*****

ರಾಜಿಂದರ್ ಸಿಂಗ್ ಛೀನಾ (60) ಹರ್ಸೆ ಛೀನಾ ಗ್ರಾಮದಲ್ಲಿ ಉಚಿತವಾಗಿ ತರಬೇತಿ ಪಡೆಯುತ್ತಿರುವ ಸುಮಾರು 70 ಕ್ರೀಡಾಪಟುಗಳ ಗುಂಪಿನ 'ಸ್ಟಾರ್' ಕ್ರೀಡಾಳು. ಇವರು 1500 ಮೀಟರ್ ಓಟದಲ್ಲಿ ಅಂತಾರಾಷ್ಟ್ರೀಯ ಅಥ್ಲೀಟ್. ಈಗ ಒಂದು ದಶಕಕ್ಕೂ ಹೆಚ್ಚು ಕಾಲದಿಂದ ಅಂಚಿಗೆ ತಳ್ಳಲ್ಪಟ್ಟಿರುವ ಸಮುದಾಯಗಳ ಯುವಕ ಯುವತಿಯರಿಗೆ ತರಬೇತಿ ನೀಡುತ್ತಿದ್ದಾರೆ.

PHOTO • Arshdeep Arshi
PHOTO • Arshdeep Arshi

ಪಂಜಾಬ್‌ನ ಅಮೃತ್‌ಸರ್‌ನ ಹರ್ಸೆ ಛೀನಾ ಗ್ರಾಮದ ತರಬೇತಿ ಮೈದಾನದಲ್ಲಿರುವ ಜಸ್ಪಾಲ್ (ಎಡ) ಮತ್ತು ಮನ್‌ಪ್ರೀತ್ (ಬಲ)

PHOTO • Arshdeep Arshi
PHOTO • Arshdeep Arshi

ತಮ್ಮ ಅಥ್ಲೀಟ್‌ಗಳ ತಂಡದೊಂದಿಗೆ ರಾಜಿಂದರ್ ಸಿಂಗ್ ಛೀನಾ. (ಎಡ). ಈ ಕೋಚ್ ತಮ್ಮ ಆಯುರ್ವೇದ ಔಷಧಿ ಅಂಗಡಿಯಲ್ಲಿ ಹಗಲಿನ ಹೊತ್ತು ಕೆಲವು ಗಂಟೆಗಳ ಕಾಲ ರೋಗಿಗಳ ಜೊತೆಗೆ ಇರುತ್ತಾರೆ

ಪಂಜಾಬ್‌ನ ಗ್ರಾಮೀಣ ಭಾಗದ ಯುವಜನತೆ ವ್ಯಾಪಕವಾದ ಮಾದಕ ದ್ರವ್ಯ ಸೇವನೆಯ ಚಟಕ್ಕೆ ಬಲಿಯಾಗಿರುವ ಬಗ್ಗೆ ಚಂಡೀಗಢದ ಹಿರಿಯ ಅಧಿಕಾರಿಯೊಬ್ಬರು ಮಾತನಾಡುತ್ತಾರೆ. ಅವರು ಈ ಕ್ರೀಡಾಪಟುವನ್ನು 2003 ರಲ್ಲಿ ಚಿಕ್ಕ ಮಕ್ಕಳಿಗೆ ತರಬೇತಿ ನೀಡುವಂತೆ ಮಾಡಿದರು. "ನಾನು ಮಕ್ಕಳನ್ನು ಮೊದಲ ಬಾರಿಗೆ ಈ ಮೈದಾನಕ್ಕೆ ಕರೆತಂದಿದ್ದೇನೆ," ಎಂದು ಅಮೃತ್‌ಸರ್‌ನ ಹರ್ಸೆ ಛೀನಾ ಗ್ರಾಮದಲ್ಲಿರುವ ಕಾಮ್ರೇಡ್ ಆಚಾರ್ ಸಿಂಗ್ ಛೀನಾ ಸರ್ಕಾರಿ ಹಿರಿಯ ಮಾಧ್ಯಮಿಕ ಸ್ಮಾರ್ಟ್ ಶಾಲೆಯ ಆಟದ ಮೈದಾನದ ಬಗ್ಗೆ ಹೇಳುತ್ತಾರೆ. “ಕೂಲಿಕಾರರ ಮಕ್ಕಳು, ಅಂಚಿನಲ್ಲಿರುವ ಸಮುದಾಯಗಳ ಮಕ್ಕಳು ಸೇರಿದಂತೆ ಶಾಲೆಗೆ ಬಾರದ ಮಕ್ಕಳನ್ನು‌ ನಾನು ಶಾಲೆಗೆ ಸೇರಿಸಿದೆ, ಅವರಿಗೆ ತರಬೇತಿ ನೀಡಲು ಆರಂಭಿಸಿದೆ. ಹೀಗೆ ಅದು ನಿಧಾನವಾಗಿ ಬೆಳೆಯಿತು,” ಎಂದು ಅವರು ಹೇಳುತ್ತಾರೆ.

“ಸರ್ಕಾರಿ ಶಾಲೆಗಳಲ್ಲಿ ಈಗ ಅಂಚಿನಲ್ಲಿರುವ ಸಮುದಾಯಗಳ ಅನೇಕ ಮಕ್ಕಳಿದ್ದಾರೆ. ಅವರು ಕಠಿಣ ಪರಿಶ್ರಮಿಗಳೂ, ಬಲಶಾಲಿಗಳು. ರಾಜ್ಯ ಮಟ್ಟಕ್ಕಾದರೂ ಹೋಗಲೇ ಬೇಕು ಎಂದುಕೊಂಡು ತಂಡಗಳನ್ನು ಕಟ್ಟತೊಡಗಿದೆ. ಗುರುದ್ವಾರದಲ್ಲಿ ಸೇವೆ ಸಲ್ಲಿಸಲು ನನಗೆ ಸಮಯವಿರಲಿಲ್ಲ. ಸಾಧ್ಯವಾದರೆ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯ ಮಾಡಬೇಕೆನ್ನುವುದು ನನ್ನ ಅಭಿಪ್ರಾಯ” ಎಂದು ರಾಜಿಂದರ್ ಹೇಳುತ್ತಾರೆ.

“ನಮ್ಮಲ್ಲಿ ತರಬೇತಿ ಪಡುವ ಕನಿಷ್ಠ 70 ಕ್ರೀಡಾಪಟುಗಳು ಇದ್ದಾರೆ. ನನ್ನ ಕೆಲವು ಕ್ರೀಡಾಪಟುಗಳು ಚೆನ್ನಾಗಿ ಕೆಲಸ ಮಾಡುತ್ತಾರೆ. ಉತ್ತಮ ಉದ್ಯೋಗಗಳನ್ನು ಪಡೆದುಕೊಂಡಿದ್ದಾರೆ. ಕೆಲವರು ಪ್ರೊ ಕಬಡ್ಡಿ ಲೀಗ್‌ನಲ್ಲಿದ್ದಾರೆ,” ಎಂದು ಛೀನಾ ಹೆಮ್ಮೆಯಿಂದ ಹೇಳುತ್ತಾರೆ. “ನಾವು ಯಾರಿಂದಲೂ ಸಹಾಯ ಪಡೆಯುವುದಿಲ್ಲ. ಜನರು ಭೇಟಿ ಕೊಡುತ್ತಾರೆ, ಮಕ್ಕಳನ್ನು ಗೌರವಿಸುತ್ತಾರೆ, ಸಹಾಯ ಮಾಡುವ ಭರವಸೆ ನೀಡುತ್ತಾರೆ. ಆದರೆ ಅದರಿಂದ ಏನೂ ಸಿಗುವುದಿಲ್ಲ. ನಾವು ನಮ್ಮ ಕೈಯಲ್ಲಾದಷ್ಟು ಏನು ಮಾಡಬಹುದೋ ಅದನ್ನು ಮಾಡುತ್ತೇವೆ,” ಎಂದು ಅವರು ಹೇಳುತ್ತಾರೆ.

ಬಿಎಎಂಎಸ್ ಪದವಿಯನ್ನು ಪಡೆದಿರುವ ಅವರು, ಅಮೃತ್‌ಸರ್ ಬಳಿಯ ರಾಮ್ ತೀರಥ್‌ನ‌ಲ್ಲಿ ತಮ್ಮದೇ ಆದ ಕ್ಲಿನಿಕ್ ಒಂದನ್ನು ನಡೆಸುತ್ತಿದ್ದಾರೆ. ಅದರಿಂದ ಬರುವ ಆದಾಯ ತಮ್ಮ ಮನೆ ಮತ್ತು ಮೈದಾನದ ಖರ್ಚಿಗೆ ಸಾಕಾಗುತ್ತದೆ ಎನ್ನುತ್ತಾರೆ. "ನಾನು ತಿಂಗಳಿಗೆ ಸುಮಾರು 7,000-8,000 ರೂಪಾಯಿಗಳನ್ನು ಹರ್ಡಲ್ಸ್‌, ವೆಯಿಟ್‌ಗಳು, ಮೈದಾನಕ್ಕೆ ಗೆರೆ ಹಾಕಲು ಬೇಕಾದ ಸುಣ್ಣ ಮೊದಲಾದ ಉಪಕರಣಗಳಿಗಾಗಿ ಖರ್ಚು ಮಾಡುತ್ತೇನೆ," ಎನ್ನುವ ಇವರ ಮೂವರೂ ಮಕ್ಕಳು ಬೆಳೆದು ನಿಂತಿದ್ದಾರೆ ಮತ್ತು ಉದ್ಯೋಗ ಮಾಡುತ್ತಿದ್ದಾರೆ. ಕಾಲಕಾಲಕ್ಕೆ ಅವರೂ ಏನಾದರೂ ನೆರವು ನೀಡುತ್ತಾರೆ.

“ಯಾವುದೇ ಮಕ್ಕಳು ಡ್ರಗ್ಸ್‌ಗೆ ಬಲಿಯಾಗುವುದು ನನಗೆ ಬೇಕಿಲ್ಲ. ಅವರು ಏನಾದರೂ ಸಾಧಿಸಲು ಗ್ರೌಂಡ್‌ಗೆ ಬರಬೇಕು.”

ಕೋಚ್ ರಾಜಿಂದರ್ ಸಿಂಗ್ ಮತ್ತು ಪಂಜಾಬ್‌ನ ಯುವ ಮಹಿಳಾ ಅಥ್ಲೀಟ್‌ಗಳ ತಂಡ ತಮ್ಮ ಪಯಣದ ಬಗ್ಗೆ ಮಾತನಾಡುತ್ತಾರೆ

ವಿಡಿಯೋ ನೋಡಿ: 'ಪಂಜಾಬ್‌ನ ಗ್ರಾಮೀಣ ಭಾಗದ ಮಹಿಳಾ ಕ್ರೀಡಾಪಟುಗಳ ಹೋರಾಟ'

*****

ಇಷ್ಟಾದರೂ ಸುಮಾರು 10 ಕಿಲೋಮೀಟರ್ ದೂರದಲ್ಲಿರುವ ಕೊಹಾಲಿ ಗ್ರಾಮದ ಯುವತಿ ಜಸ್ಪಾಲ್‌ಗೆ ಮೈದಾನಕ್ಕೆ ಬರುವುದು ಕಷ್ಟವಾಗಿದೆ. "ನನಗೆ ಇಷ್ಟು ದೂರ ಬರುವುದು ಒಂದು ದೊಡ್ಡ ಹೋರಾಟ. ನಮ್ಮ ಗ್ರಾಮ ಆ ಗ್ರೌಂಡ್‌ನಿಂದ ತುಂಬಾ ದೂರದಲ್ಲಿದೆ,” ಎಂದು ಹಳ್ಳಿಯ ಹೊರವಲಯದಲ್ಲಿರುವ ತಮ್ಮ ಎರಡು ಕೋಣೆಗಳ ಇಟ್ಟಿಗೆ ಮನೆಯ ಮುಂದೆ ಕುಳಿತುಕೊಂಡು ಜಸ್ಪಾಲ್ ಹೇಳುತ್ತಾರೆ. "ಯಾವ ದಾರಿಯಿಂದ ಹೋದರೂ ಗ್ರೌಂಡ್‌ ತಲುಪಲು ನನಗೆ ಸುಮಾರು 45 ನಿಮಿಷಗಳು ಬೇಕಾಗುತ್ತದೆ. ನಾನು ಪ್ರತಿ ದಿನ ಮುಂಜಾನೆ 3:30 ಕ್ಕೆ ಎದ್ದೇಳುತ್ತೇನೆ. 4:30 ಕ್ಕೆ ಮೈದಾನದಲ್ಲಿ ಇರುತ್ತೇನೆ. ನನ್ನ ಹೆತ್ತವರು ನಾನು ಜಾಗರೂಕತೆಯಿಂದ ಇರುವಂತೆ ಹೇಳುತ್ತಾರೆ, ಆದರೆ ಎಂದಿಗೂ ಅನ್‌ಸೇಫ್‌ ಎಂದು ನಂಗೆ ಅನ್ನಿಸಲಿಲ್ಲ. ಹುಡುಗರು ಪೆಹಲ್ವಾನಿ [ಕುಸ್ತಿ] ಅಭ್ಯಾಸ ಮಾಡುವ ಅಖಾರಾ ಇಲ್ಲೇ ಹತ್ತಿರದಲ್ಲಿದೆ. ಅವರ ಕಾರಣದಿಂದಾಗಿ, ರಸ್ತೆ ಜನಸಂಚಾರ ಇರುತ್ತದೆ. ನಾವು ಎರಡು ಗಂಟೆಗಳ ಕಾಲ ಅಭ್ಯಾಸ ಮಾಡುತ್ತೇವೆ ಮತ್ತು ನಾನು ಸುಮಾರು 7:30 ಗಂಟೆಗೆ ಮನೆಗೆ ವಾಪಾಸ್ ಹೋಗುತ್ತೇನೆ." ಎಂದು ಜಸ್ಪಾಲ್ ಹೇಳುತ್ತಾರೆ.

ಎರಡು ವರ್ಷಗಳ ಹಿಂದೆ ಇವರು ತಮ್ಮ ತಂದೆಯ ಸೆಕೆಂಡ್ ಹ್ಯಾಂಡ್ ಬೈಕ್ ಓಡಿಸಲು ಕಲಿತರು. ಆ ದಿನದಿಂದ ಆಗಾಗ ಮೋಟಾರುಬೈಕಿನಲ್ಲಿ ತರಬೇತಿ ನಡೆಯುವ ಮೈದಾನಕ್ಕೆ ಹೋಗುತ್ತಾರೆ. ಆಗ ಕೇವಲ 10 ನಿಮಿಷಗಳಲ್ಲಿ ಮೈದಾನ ತಲುಪಬಹುದು. ಆದರೆ ಅನೇಕ ಬಾರಿ ಮನೆಯಲ್ಲಿರುವ ಪುರುಷರಿಗೆ ಬೈಕು ಬೇಕಾದಾಗ, ಜಸ್ಪಾಲ್ ತರಬೇತಿಯನ್ನು ಅರ್ಧಕ್ಕೆ ಬಿಟ್ಟು ಮನೆಗೆ ಮರಳಬೇಕಾಗುತ್ತದೆ. ಅಂತಹ ಸಂದರ್ಭದಲ್ಲಿ ಕೆಲವು ತರಬೇತಿಗಳು ಅವರ ಕೈತಪ್ಪುತ್ತದೆ.

"ಸರ್ಕಾರಿ ಅಥವಾ ಖಾಸಗಿ ಬಸ್ ಸೇವೆ ಇಲ್ಲದ ಕೆಲವು ಹಳ್ಳಿಗಳು ಇನ್ನೂ ಇದ್ದಾವೆ. ಯುವ ಕ್ರೀಡಾಪಟುಗಳು ಮೈದಾನಕ್ಕೆ ಬರಲು ಹೆಣಗಾಡುತ್ತಾರೆ. ಅವರಲ್ಲಿ ಅನೇಕರು ತಮ್ಮ ಓದಿನ ಕಷ್ಟವನ್ನೂ ಅನುಭವಿಸುತ್ತಾರೆ,” ಎಂದು ಕೋಚ್ ಹೇಳುತ್ತಾರೆ. ಹತ್ತಿರದಲ್ಲಿ ಕಾಲೇಜು ಇಲ್ಲದಿರುವುದು ಕೂಡ ಈ ಹಳ್ಳಿಗಳಲ್ಲಿ ಅನೇಕ ಹುಡುಗಿಯರು 12 ನೇ ತರಗತಿಯ ನಂತರ ಕಾಲೇಜು ಬಿಡಲು ಇರುವ ಒಂದು ಕಾರಣವಾಗಿದೆ. ಜಸ್ಪಾಲ್‌ ಅವರಿಗೆ ಹತ್ತಿರದ ಬಸ್ ನಿಲ್ದಾಣವು ಗ್ರಾಮದ ಇನ್ನೊಂದು ಬದಿಯಲ್ಲಿದೆ. ಸರಿಯಾದ ಸಮಯಕ್ಕೆ ಗ್ರೌಂಡಿಗೆ ಬರಲು ಬಸ್ಸುಗಳು ಇಲ್ಲದಿರುವುದು ಮತ್ತೊಂದು ಸಮಸ್ಯೆಯಾಗಿದೆ ಎಂದು ಅವರು ವಿವರಿಸುತ್ತಾರೆ.

ಅದೇ ಗ್ರಾಮದ ಮತ್ತೋರ್ವ ಯುವ ಅಥ್ಲೀಟ್ ರಮಣದೀಪ್ ಕೌರ್ ಕೂಡ ತರಬೇತಿಗೆ ಬರಲು ದಿನಕ್ಕೆ ಎರಡು ಬಾರಿ ಹತ್ತು ಕಿಲೋ ಮೀಟರ್‌ ಪ್ರಯಾಣಿಸುತ್ತಾರೆ . “ಕೆಲವೊಮ್ಮೆ ನಾನು ಐದು ಕಿಲೋಮೀಟರ್ ನಡೆದು, ನಂತರ ಚೈನ್‌ಪುರ ಗ್ರಾಮದ ಇನ್ನೊಬ್ಬ ಹುಡುಗಿ ಕೋಮಲ್‌ಪ್ರೀತ್ ಅವರ ಜೊತೆಗೆ ಸ್ಕೂಟಿಯಲ್ಲಿ [ಗೇರ್‌ಲೆಸ್ ಬೈಕ್] ಮೈದಾನಕ್ಕೆ ಹೋಗುತ್ತೇನೆ. ತರಬೇತಿಯ ನಂತರ ನಾನು ಮತ್ತೆ ಐದು ಕಿಲೋ ಮೀಟರ್‌ ನಡೆದು ಬರುತ್ತೇನೆ,” ಎಂದು ಅವರು ವಿವರಿಸುತ್ತಾರೆ.

"ಡರ್ರ್ ತನ್ ಲಗ್ದಾ ಇಕಲ್ಲೇ ಆಂಡೆ-ಜಾಂಡೆ, ಪರ್ ಕಿಸೆ ಕೋಲ್ ಟೈಮ್ ನಹಿ ನಲ್ ಜನ್ ಔನ್ ಲೇಯಿ [ನನಗೆ ಕತ್ತಲೆಯಲ್ಲಿ ಒಂಟಿಯಾಗಿ ನಡೆಯಲು ಭಯವಾಗುತ್ತದೆ, ಆದರೆ ಮನೆಯಲ್ಲಿರುವ ಯಾರಿಗೂ ನನ್ನೊಂದಿಗೆ ಪ್ರತಿದಿನ ಬರಲು ಸಮಯವಿಲ್ಲ]" ಎಂದು ಹೇಳುತ್ತಾರೆ ರಮಣದೀಪ್. ತರಬೇತಿ ಮತ್ತು ಅದರ ನಂತರದ ಹೆಚ್ಚುವರಿ 20 ಕಿಲೋ ಮೀಟರ್ ನಡಿಗೆ ಅವರಿಗೆ ದೊಡ್ಡ ಹೊರೆಯಾಗಿದೆ. "ನಾನು ಯಾವಾಗಲೂ ಆಯಾಸಗೊಂಡೇ ಇರುತ್ತೇನೆ," ಎಂದು ಅವರು ಹೇಳುತ್ತಾರೆ.

PHOTO • Arshdeep Arshi
PHOTO • Arshdeep Arshi

ಎಡ: ಎರಡು ವರ್ಷಗಳ ಹಿಂದೆ ಮೋಟಾರ್ ಸೈಕಲ್ ಓಡಿಸುವುದನ್ನು ಜಸ್ಪಾಲ್ ಕಲಿತರು. ಆಗಾಗ ಮೈದಾನಕ್ಕೆ ಗಾಡಿಯನ್ನು ತೆಗೆದುಕೊಂಡು ಹೋಗುತ್ತಾರೆ. ಬಲ: ತಮ್ಮ ತಾಯಿ ಮತ್ತು ಸಹೋದರಿಯರೊಂದಿಗೆ ತನ್ನ ಮನೆಯಲ್ಲಿರುವ, ಈ ಹಿಂದೆ ತಾವು ಗೆದ್ದ ಟ್ರೋಫಿಗಳೊಂದಿಗೆ ರಮಣದೀಪ್ ಕೌರ್ (ಕಪ್ಪು ಟೀ ಶರ್ಟ್)

PHOTO • Arshdeep Arshi
PHOTO • Arshdeep Arshi

ರಮಣದೀಪ್ ಅವರು ಪ್ರಶಸ್ತಿಯಲ್ಲಿ ಬಂದ ಹಣದಿಂದ ರನ್ನಿಂಗ್ ಶೂಗಳನ್ನು ಖರೀದಿಸಿದ್ದಾರೆ

ಇದಲ್ಲದೆ, ಇವರ ದಿನ ಓಟದ ಪ್ರಾಕ್ಟೀಸ್‌ನೊಂದಿಗೆ ಮುಗಿಯುವುದಿಲ್ಲ. 21 ವರ್ಷ ವಯಸ್ಸಿನ ಈ ಯುವತಿ ತಮ್ಮ ಮನೆಯಲ್ಲಿಯೂ ಕೆಲಸದಲ್ಲಿ ಸಹಾಯ ಮಾಡಬೇಕು, ಮನೆಯಲ್ಲಿರುವ ಹಸು ಮತ್ತು ಎಮ್ಮೆಯನ್ನು ನೋಡಿಕೊಳ್ಳಬೇಕು. 3-4 ಅಡಿ ಅಗಲದ ಇಟ್ಟಿಗೆಯ ರಸ್ತೆಯ ಆಚೆಗೆ ಇರುವ ಇವರ ಮನೆಯ ಮುಂದೆಯೇ ಒಂದು ಸಣ್ಣ ಜಾಗದಲ್ಲಿ ತಮ್ಮ ದನಗಳನ್ನು ಸಾಕುತ್ತಾರೆ.

ರಮಣದೀಪ್ ಮಜಾಬಿ ಸಿಖ್ ಸಮುದಾಯಕ್ಕೆ ಸೇರಿದವರು. ಕೂಲಿ ಕೆಲಸ ಮಾಡುವ ಇಬ್ಬರು ಸಹೋದರರ ಸಂಪಾದನೆಯ ಮೇಲೆ ಹತ್ತು ಜನ ಸದಸ್ಯರು ಇರುವ ಇವರ ಕುಟುಂಬ ಬದುಕುತ್ತಿದೆ. "ಅವರು ಹೆಚ್ಚಾಗಿ ಮರಗೆಲಸ ಅಥವಾ ಬೇರೆ ಏನೇನೋ ಕೆಲಸಗಳನ್ನು ಮಾಡುತ್ತಾರೆ. ಅವರಿಗೆ ಕೆಲಸ ಸಿಕ್ಕಿದರೆ, ಇಬ್ಬರೂ ದಿನಕ್ಕೆ ಸುಮಾರು 350 ರುಪಾಯಿ ಗಳಿಸಬಹುದು,” ಎಂದು ಅವರು ಹೇಳುತ್ತಾರೆ.

2022 ರಲ್ಲಿ 12 ನೇ ತರಗತಿಯನ್ನು ಮುಗಿಸಿದ ನಂತರ, ತಮ್ಮ ತಂದೆ ತೀರಿಕೊಂಡ ಕಾರಣ ಇವರು ತಮ್ಮ ಓದನ್ನು ನಿಲ್ಲಿಸಿದರು. "ನಮಗೆ ಅದನ್ನು ಮುಂದುವರಿಸಲು ಸಾಧ್ಯವಾಗಲಿಲ್ಲ," ಎಂದು ಅವರು ವಿಷಾದದಿಂದ ಹೇಳುತ್ತಾರೆ, ಹಳ್ಳಿಯ ಕೊನೆಯ ತುದಿಯಲ್ಲಿರುವ ಬಿರುಕು ಬಿಟ್ಟ ಗೋಡೆಗಳ ತಮ್ಮ ಎರಡು ಕೋಣೆಗಳ ಮನೆಯಲ್ಲಿ ಇವರು ಕುಳಿತುಕೊಂಡಿದ್ದಾರೆ. "ನನ್ನ ತಾಯಿ ನನಗೆ ಸ್ಪೋರ್ಟ್ಸ್‌ಗೆ ಬೇಕಾದ ಉಡುಪುಗಳನ್ನು ಖರೀದಿಸುತ್ತಾರೆ, ಅವರಿಗೆ 1,500 ರೂಪಾಯಿಗಳ ವಿಧವಾ ಪಿಂಚಣಿ ಬರುತ್ತದೆ," ಎಂದು ರಮಣದೀಪ್ ಹೇಳುತ್ತಾರೆ.

“ಕ್ಯಾಶ್‌ ಫ್ರೈಸ್ ಜೀತ್‌ ಕೆ ಶೂಸ್ ಲಾಯೆ ಸಿ 3100 ದಿ, ಹ ಟುಟ್ಟ್ ಗಯೆ, ಫೆರ್ ಕೊಯಿ ರೇಸ್ ಜೀತ್ತುಂಗಿ ತೆ ಶೂಸ್ ಲಾವುಂಗಿ [ನಾನು ಓಟದಲ್ಲಿ ಬಹುಮಾನವಾಗಿ ಬಂದ 3,100 ರುಪಾಯಿಯಲ್ಲಿ ಈ ಶೂಗಳನ್ನು ಖರೀದಿಸಿದೆ, ಇವುಗಳು ಈಗ ಹರಿದು ಹೋಗಿವೆ, ನಾನು ಮತ್ತೆ ಓಟದಲ್ಲಿ ಗೆಲ್ಲುತ್ತೇನೆ ಮತ್ತು ಶೂಗಳನ್ನು ಖರೀದಿಸುತ್ತೇನೆ]," ಎನ್ನುತ್ತಾ ಸದ್ಯ ಬಳಸುತ್ತಿರುವ ತಮ್ಮ ಹಾಳಾಗಿರುವ ಬೂಟುಗಳನ್ನು ತೋರಿಸುತ್ತಾರೆ. ಶೂಗಳು ಇದ್ದರೂ ಇಲ್ಲದಿದ್ದರೂ, ತಾನು ಸದ್ಯ ಇರುವ ಸ್ಥಾನಕ್ಕಿಂತ ಒಳ್ಳೆಯ ಸ್ಥಾನವನ್ನು ಪಡೆಯಲು ಓಟವನ್ನು ಮಾತ್ರ ನಿಲ್ಲಿಸಿಲ್ಲ.

"ನಾನು ಪೊಲೀಸ್ ಪಡೆಯಲ್ಲಿ ಉದ್ಯೋಗ ಪಡೆಯಲು ಓಡುತ್ತಿದ್ದೇನೆ," ಎಂದು ರಮಣದೀಪ್ ಹೇಳುತ್ತಾರೆ.

ಚೈನ್‌ಪುರದ ಕೋಮಲ್‌ಪ್ರೀತ್ ಕೌರ್ (15), ಕೊಹಾಲಿ ಗ್ರಾಮದ ಗುರುಕಿರ್‌ಪಾಲ್ ಸಿಂಗ್ (15), ರಾಣೇವಾಲಿ ಗ್ರಾಮದ ಮನ್‌ಪ್ರೀತ್ ಕೌರ್ (20) ಮತ್ತು ಸೈನ್‌ಸ್ರಾ ಕಲಾನ್ ಗ್ರಾಮದ ಮಮತಾ (20). ಇವರೆಲ್ಲರೂ ಕೋಚ್ ಛೀನಾ ಅವರ ಬಳಿ ತರಬೇತಿ ಪಡೆಯಲು ಬರುತ್ತಾರೆ. ಈ ಯುವ ಕ್ರೀಡಾಪಳುಗಳ ಸಾಮಾಜಿಕ ಸ್ಥಾನಮಾನ ಏನೇ ಇದ್ದರೂ, ಪ್ರತಿಯೊಬ್ಬರಿಗೂ ಸರ್ಕಾರಿ ಉದ್ಯೋಗವೆಂದರೆ ಇಡೀ ಕುಟುಂಬಕ್ಕೆ ಆರ್ಥಿಕ ಭದ್ರತೆ ಇದ್ದಂತೆ. ಆದರೆ ಈ ಉದ್ಯೋಗಗಳಿಗೆ ಇರುವ ಪ್ರವೇಶ ಪರೀಕ್ಷೆಗಳು ಮತ್ತೊಂದು ರೀತಿಯ ಅಡಚಣೆಯಾಗಿದೆ.

PHOTO • Arshdeep Arshi
PHOTO • Arshdeep Arshi

ತರಬೇತಿಯ ಸಮಯದಲ್ಲಿ ಮೈದಾನದಲ್ಲಿರುವ ಕೋಮಲ್‌ಪ್ರೀತ್ ಮತ್ತು ಮನ್‌ಪ್ರೀತ್

PHOTO • Arshdeep Arshi
PHOTO • Arshdeep Arshi

ಎಡ: ತಾವು ಗೆದ್ದಿರುವ ಬಹುಮಾನಗಳನ್ನು ತೋರಿಸುತ್ತಿರುವ ಯುವ ಅಥ್ಲೀಟ್ ಗುರುಕಿರ್ಪಾಲ್ ಸಿಂಗ್. ಬಲ: ಯುವ ಕ್ರೀಡಾಪಟುಗಳಿಗೆ ತರಬೇತಿ ನೀಡುತ್ತಿರುವ ಕೋಚ್ ಛೀನಾ

ವಿಶೇಷವಾದ ಶೇಕಡಾ ಮೂರು ಕೋಟಾ ಯೋಜನೆಯನ್ನು ಪಡೆಯಲು ಕ್ರೀಡಾಪಟುಗಳು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಚಾಂಪಿಯನ್‌ಶಿಪ್ ಟ್ರೋಫಿಗಳನ್ನು ಗೆಲ್ಲುವುದು ಅವಶ್ಯಕ, ಆದರೆ ಇದಕ್ಕೆ ವಿವಿಧ ರೀತಿಯ ಸಂಪನ್ಮೂಲಗಳೂ ಬೇಕು. ಅವು ಇಲ್ಲದೇ ಇದ್ದರೂ ಹುಡುಗಿಯರು ಕಷ್ಟಪಟ್ಟು ಕೆಲಸ ಮಾಡುತ್ತಾರೆ ಮತ್ತು ರಾಜ್ಯದಾದ್ಯಂತ ವಿವಿಧ ಮ್ಯಾರಥಾನ್‌ಗಳಲ್ಲಿ 5 ಮತ್ತು 10 ಕಿಲೋ ಮೀಟರ್ ಓಟವನ್ನು ಓಡುತ್ತಾರೆ.‌ ಅವುಗಳಲ್ಲಿ ಅವರು ಗೆಲ್ಲುವ ಬಹುಮಾನಗಳು ಮತ್ತು ಪದಕಗಳು ಅವರ ಕನಸಾಗಿರುವ ಪೊಲೀಸ್ ಉದ್ಯೋಗ ಸಿಗಲು ಎದುರಿಸಬೇಕಾದ ದೈಹಿಕ ಸಾಮರ್ಥ್ಯ ಪರೀಕ್ಷೆಗಳ ಸಂದರ್ಭದಲ್ಲಿ ಅವರಿಗೆ ಉಪಯೋಗವಾಗುತ್ತವೆ.

ಈ ಉದ್ಯೋಗಗಳಲ್ಲಿ ಮಜಾಬಿ ಸಿಖ್ಖರಿಗೆ ಮೀಸಲಾತಿ ಸಹ ಇದೆ. 2024 ರ ರಾಜ್ಯ ನೇಮಕಾತಿ ಡ್ರೈವಿನಲ್ಲಿ ಪಂಜಾಬ್ ಪೋಲೀಸ್‌ ಇಲಾಖೆಯಲ್ಲಿ ಕಾನ್ಸ್‌ಟೇಬಲ್‌ ಹುದ್ದೆಗಳಿಗಾಗಿ ನೀಡಲಾಗಿದ್ದ ಜಾಹೀರಾತಿನಲ್ಲಿ ಒಟ್ಟು 1,746 ಖಾಲಿ ಹುದ್ದೆಗಳಲ್ಲಿ 180 ಹುದ್ದೆಗಳನ್ನು ಈ ಎಸ್‌ಸಿ ಸಮುದಾಯಕ್ಕೆ ಮೀಸಲಿಡಲಾಗಿದೆ. 180 ಸ್ಥಾನಗಳಲ್ಲಿ 72 ಹುದ್ದೆಗಳು ಅದೇ ಸಮುದಾಯದ ಮಹಿಳೆಯರಿಗೆ ಮೀಸಲಾಗಿದೆ.

2022 ರ ಭಾರತ ನ್ಯಾಯ ವರದಿ ಯು ಪ್ರತೀ ರಾಜ್ಯದಲ್ಲಿ ಪ್ರಮುಖ ನ್ಯಾಯ ವಿತರಣಾ ಕಾರ್ಯವಿಧಾನಗಳಾದ ಪೋಲೀಸ್, ನ್ಯಾಯಾಂಗ, ಕಾರಾಗೃಹಗಳು ಮತ್ತು ಕಾನೂನು ನೆರವು- ಇವುಗಳಲ್ಲಿ ಆಗಿರುವ ಪ್ರಗತಿಯನ್ನು ಮೌಲ್ಯಮಾಪನ ಮಾಡುತ್ತದೆ ಮತ್ತು ಶ್ರೇಣೀಕರಿಸುತ್ತದೆ. ಇದು 2019 ಮತ್ತು 2022 ರ ನಡುವೆ ಪಂಜಾಬ್ ರಾಜ್ಯ 4 ರಿಂದ 12 ನೇ ಸ್ಥಾನಕ್ಕೆ ಎಂಟು ಸ್ಥಾನಗಳನ್ನು ಕಳೆದುಕೊಂಡಿದೆ ಎಂದು ತೋರಿಸುತ್ತದೆ. "ಯಾವುದೇ ಜಾತಿಯಾಗಲಿ ಅಥವಾ ಲಿಂಗವಾಗಲಿ, ಎಲ್ಲೆಡೆ ಸೇರ್ಪಡೆಯ ಕೊರತೆಯಿದೆ. ಪರಿಹಾರ ಕಂಡುಕೊಳ್ಳುವಲ್ಲಿಯೂ ಏನೂ ಪ್ರಗತಿಯಾಗಿಲ್ಲ. ದಶಕಗಳಿಂದ ನಡೆಯುತ್ತಿರುವ ಬಿಸಿ ಚರ್ಚೆಯ ಹೊರತಾಗಿಯೂ, ಕೆಲವು ರಾಜ್ಯಗಳು ಒಂದಲ್ಲದಿದ್ದರೆ ಇನ್ನೊಂದು ಕೆಟಗರಿಯಲ್ಲಿ ಪ್ರಗತಿ ಕಾಣಬಹುದು. ಯಾವುದೇ ರಾಜ್ಯ ಈ ಮೂರೂ ಕೋಟಾಗಳಲ್ಲಿ ಪ್ರಗತಿ ಕಾಣಲು ಸಾಧ್ಯವಿಲ್ಲ. ಮಹಿಳೆಯರು ಸಮಾನತೆಯ ಹತ್ತಿರವೂ ಇಲ್ಲ. 2007ರ ಜನವರಿಯಿಂದ 2022ರ ಜನವರಿವರೆಗೆ ಹದಿನೈದು ವರ್ಷಗಳಲ್ಲಿ, ಪೊಲೀಸ್‌ ಇಲಾಖೆಯಲ್ಲಿ ಮಹಿಳಾ ಸಿಬ್ಬಂದಿಯ ಪಾಲು ಶೇ.3.3ರಿಂದ ಶೇ.11.8ಕ್ಕೆ ಹೋಗಿದೆ. 2022ರಲ್ಲಿ ಪಂಜಾಬ್‌ನಲ್ಲಿ ಮಹಿಳೆಯರ ಆ ಸಂಖ್ಯೆ ಶೇ.9.9ರಷ್ಟಿದೆ.

ಜಸ್ಪಾಲ್ ಮತ್ತು ರಮಣದೀಪ್ ಇಬ್ಬರೂ ಕಳೆದ ವರ್ಷದಿಂದ ಪಂಜಾಬ್ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗೆ ಅರ್ಜಿ ಸಲ್ಲಿಸುತ್ತಲೇ ಇದ್ದಾರೆ. 2023 ರಲ್ಲಿ ಇಬ್ಬರೂ ಪಂಜಾಬಿಯಲ್ಲಿ ಲಿಖಿತ ಪರೀಕ್ಷೆ ಬರೆದಿದ್ದರು, ಆದರೆ ತೇರ್ಗಡೆಯಾಗಲಿಲ್ಲ. "ನಾನು ಮನೆಯಲ್ಲಿಯೇ ಇದ್ದು ಲಿಖಿತ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದೇನೆ," ಎಂದು ರಮಣದೀಪ್ ಹೇಳುತ್ತಾರೆ.

ನೇಮಕಾತಿ ಡ್ರೈವ್‌ಗಾಗಿ ನೀಡಲಾದ 2024 ರ ಜಾಹೀರಾತಿನಲ್ಲಿ ಮೂರು ಹಂತದ ಆಯ್ಕೆ ಪ್ರಕ್ರಿಯೆಗಳನ್ನು ನೀಡಲಾಗಿದೆ. ಅದರಲ್ಲಿ ಕಂಪ್ಯೂಟರ್ ಆಧಾರಿತ ಪರೀಕ್ಷೆಯನ್ನು ಮೊದಲನೆಯ ಹಂತ ಎಂದು ಉಲ್ಲೇಖಿಸಲಾಗಿದೆ. ಪರಿಶಿಷ್ಟ ಜಾತಿ ಮತ್ತು ಹಿಂದುಳಿದ ವರ್ಗದ ಅಭ್ಯರ್ಥಿಗಳು ಎರಡನೇ ಸುತ್ತಿನ ದೈಹಿಕ ಪರೀಕ್ಷೆ ಮತ್ತು ದೈಹಿಕ ಮಾಪನ ಪರೀಕ್ಷೆಗೆ ಅರ್ಹರಾಗಲು ಕನಿಷ್ಠ ಶೇಕಡಾ 35 ಅಂಕಗಳನ್ನು ಪಡೆದಿರಬೇಕು. ದೈಹಿಕ ಪರೀಕ್ಷೆಗಳಲ್ಲಿ ಓಟ, ಉದ್ದ ಜಿಗಿತ, ಎತ್ತರ ಜಿಗಿತ, ದೇಹದ ತೂಕ ಮತ್ತು ಎತ್ತರವೂ ಸೇರಿವೆ.

PHOTO • Courtesy: NMIMS, Chandigarh
PHOTO • Courtesy: NMIMS, Chandigarh

ಚಂಡೀಗಢದ ಎನ್‌ಎಂಐಎಂಎಸ್ ಆಯೋಜಿಸಿರುವ ಮ್ಯಾರಥಾನ್‌ನಲ್ಲಿ ರಮಣದೀಪ್ (ಎಡ) ಮತ್ತು ಜಸ್ಪಾಲ್ (ಬಲ)

ರಮಣದೀಪ್ ಅವರ ತಾಯಿ ತಮ್ಮ ಮಗಳ ಕ್ರೀಡಾ ಪ್ರದರ್ಶನದ ಬಗ್ಗೆ ಆತಂಕಕ್ಕೆ ಒಳಗಾಗಿದ್ದಾರೆ. ಏಕೆಂದರೆ ಅವರಿಗೆ ತಮ್ಮ ಮಗಳು ಹೆಚ್ಚು ತಿನ್ನುವುದಿಲ್ಲ ಎಂಬ ಚಿಂತೆ. ಯುವ ಕ್ರೀಡಾಪಟುಗಳಿಗೆ ಬೇಕಾದ ಪೌಷ್ಟಿಕಾಂಶ ಮತ್ತು ಶಕ್ತಿಯನ್ನು ಕೊಡುವ ತರಕಾರಿಗಳು, ಹಣ್ಣುಗಳು, ಬೀನ್ಸ್, ಕಾಳುಗಳು, ಧಾನ್ಯಗಳು, ಮಾಂಸ, ಮೀನು ಮತ್ತು ಹಾಲಿನ ಉತ್ಪನ್ನಗಳಂತಹ ವೈವಿಧ್ಯಮಯ ಆಹಾರವನ್ನು ಸೇವಿಸುವಂತೆ ಪೌಷ್ಟಿಕಾಂಶದ ಕುರಿತಾದ ಅಥ್ಲೆಟಿಕ್ಸ್ ಫೆಡರೇಶನ್ ಆಫ್ ಇಂಡಿಯಾದ ಮಾರ್ಗದರ್ಶಿ ಪುಸ್ತಕ ಶಿಫಾರಸು ಮಾಡುತ್ತದೆ. ಇದರ ಬಗ್ಗೆ ಇವರಿಗೆ ಹೆಚ್ಚು ತಿಳಿದಿಲ್ಲ. ಅವರು ಇವುಗಳಲ್ಲಿ ಹೆಚ್ಚಿನ ಆಹಾರವನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ. ತಿಂಗಳಿಗೊಮ್ಮೆ ಮಾಂಸ ತಿನ್ನುತ್ತಾರೆ. “ಡಯಟ್ ನಹೀ ಮಿಲ್ಡಿ, ಬಾಸ್ ರೋಟಿ ಜಾ ಜೋ ವಿ ಘರೆ ಮಿಲ್ ಜಾಂದಾ [ನಮಗೆ ಸರಿಯಾದ ಆಹಾರ ಸಿಗುತ್ತಿಲ್ಲ; ಚಪಾತಿ ಅಥವಾ ಮನೆಯಲ್ಲಿ ಮಾಡಿದ ಏನೇ ಆದರೂ],” ಎನ್ನುತ್ತಾರೆ ರಮಣದೀಪ್. "ನಾವು ಮನೆಯಲ್ಲಿ ಬೇಯಿಸಿದ ಮತ್ತು ನೆನೆಸಿದ ಕಡಲೆಯನ್ನು ತಿನ್ನುತ್ತೇವೆ," ಎಂದು ಜಸ್ಪಾಲ್ ಹೇಳುತ್ತಾರೆ.

ಈ ವರ್ಷ ಜಾಹೀರಾತಿನಲ್ಲಿ ಹೇಳಲಾಗಿರುವ ಕಂಪ್ಯೂಟರ್ ಆಧಾರಿತ ಪರೀಕ್ಷೆಯ ಬಗ್ಗೆ ಯಾವುದೇ ಯುವತಿಯರಿಗೆ ತಿಳಿದಿಲ್ಲ. "ಕಳೆದ ವರ್ಷ ಪಂಜಾಬಿಯಲ್ಲಿ ಲಿಖಿತ ಪರೀಕ್ಷೆ ಇತ್ತು, ಕಂಪ್ಯೂಟರ್ ಆಧಾರಿತ ಪರೀಕ್ಷೆ ಇರಲಿಲ್ಲ," ಎಂದು ಜಸ್ಪಾಲ್ ತಮ್ಮ ಹಿಂದಿನ ಅನುಭವವನ್ನು ನೆನಪಿಸಿಕೊಳ್ಳುತ್ತಾರೆ. "ನಮ್ಮಲ್ಲಿ ಕಂಪ್ಯೂಟರ್‌ಗಳು ಇರಲಿಲ್ಲ," ಎನ್ನುತ್ತಾರೆ ಅವರು. ಕಳೆದ ವರ್ಷ ಜಸ್ಪಾಲ್ ಲಿಖಿತ ಪರೀಕ್ಷೆಯಲ್ಲಿ ತೇರ್ಗಡೆಯಾಗಲು 3,000 ರುಪಾಯಿ ಕೊಟ್ಟು ಎರಡು ತಿಂಗಳ ಕಾಲ ಕೋಚಿಂಗ್‌ ತೆಗೆದುಕೊಂಡಿದ್ದರು.

ಈ ವರ್ಷದ ಸುತ್ತೋಲೆಯ ಪ್ರಕಾರ ಮೊದಲ ಸುತ್ತಿನಲ್ಲಿ ಪಂಜಾಬಿ ಭಾಷೆಯ ಅರ್ಹತಾ ಪರೀಕ್ಷೆಯ ಜೊತೆಗೆ ಇನ್ನೊಂದು ಪೇಪರ್‌ ಇರುತ್ತದೆ. ಇದರಲ್ಲಿ ಅಭ್ಯರ್ಥಿಯ ಸಾಮಾನ್ಯ ಜ್ಞಾನ, ಪರಿಮಾಣಾತ್ಮಕ ಸಾಮರ್ಥ್ಯ ಮತ್ತು ಸಂಖ್ಯಾತ್ಮಕ ಕೌಶಲ್ಯಗಳು, ಮಾನಸಿಕ ಸಾಮರ್ಥ್ಯ, ಲಾಜಿಕಲ್ ರೀಸನಿಂಗ್, ಇಂಗ್ಲಿಷ್ ಭಾಷಾ ಕೌಶಲ್ಯಗಳು, ಪಂಜಾಬಿ ಭಾಷಾ ಕೌಶಲ್ಯ ಮತ್ತು ಡಿಜಿಟಲ್ ಸಾಕ್ಷರತೆ ಹಾಗೂ ಆ ಬಗೆಗಿನ ಅರಿವಿನ ಮೌಲ್ಯಮಾಪನ ಮಾಡಲಾಗುತ್ತದೆ.

"ಫಿಸಿಕಲ್‌ ಟೆಸ್ಟ್ ರಿಟನ್ ಟೆಸ್ಟ್ ಕ್ಲಿಯರ್ ಹೋನ್ ತೊ ಬಾದ್ ಲೈಂಡೆ ನೆ, ರಿಟನ್‌ ಟೆಸ್ಟ್ ಹಿ ಕ್ಲಿಯರ್ ನಹೀ ಸಿ ಹೋಯಾ ಇಸ್ ಕರ್ಕೆ ಫಿಸಿಕಲ್ ಟೆಸ್ಟ್ ತಕ್ ಪೋನ್ಚೆ ಹೈ ನಹೀ [ನೀವು ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣರಾದ ನಂತರ ದೈಹಿಕ ಪರೀಕ್ಷೆಯನ್ನು ಎದುರಿಸಬೇಕಾಗುತ್ತದೆ, ನೀವು ಲಿಖಿತ ಪರೀಕ್ಷೆಯನ್ನು ಪಾಸ್‌ ಮಾಡಲು ಸಾಧ್ಯವಾಗದೇ ಇದ್ದಾಗ, ದೈಹಿಕ ಪರೀಕ್ಷೆಯ ಪ್ರಶ್ನೆ ಎಲ್ಲಿ ಬರುತ್ತದೆ?" ಜಸ್ಪಾಲ್ ಹೇಳುತ್ತಾರೆ.

“ನನ್ನ ಬಳಿ ಕಳೆದ ವರ್ಷದ ಪುಸ್ತಕಗಳಿವೆ. ಈ ವರ್ಷವೂ ನಾನು [ಪೊಲೀಸ್ ಹುದ್ದೆಗಳಿಗೆ] ಅರ್ಜಿ ಹಾಕಿದ್ದೇನೆ,” ಎಂದು ರಮಣದೀಪ್ ಹೇಳುತ್ತಾರೆ. "ನೋಡೋಣ ಏನಾಗುತ್ತದೆ ಎಂದು," ಎನ್ನುವಾಗ ಅನುಮಾನವೂ ಮತ್ತು ಭರವಸೆಯೂ ತುಂಬಿದ ಅವರ ದನಿಯಲ್ಲಿ ನಡುಕ ಕಾಣುತ್ತದೆ.

ಅನುವಾದ: ಚರಣ್‌ ಐವರ್ನಾಡು

Arshdeep Arshi

अर्शदीप अर्शी चंदिगड स्थित मुक्त पत्रकार आणि अनुवादक असून तिने न्यूज १८ पंजाब आणि हिंदुस्तान टाइम्ससोबत काम केलं आहे. पतियाळाच्या पंजाबी युनिवर्सिटीमधून अर्शदीपने इंग्रजी विषयात एम फिल केले आहे.

यांचे इतर लिखाण Arshdeep Arshi
Editor : Pratishtha Pandya

प्रतिष्ठा पांड्या पारीमध्ये वरिष्ठ संपादक असून त्या पारीवरील सर्जक लेखन विभागाचं काम पाहतात. त्या पारीभाषासोबत गुजराती भाषेत अनुवाद आणि संपादनाचं कामही करतात. त्या गुजराती आणि इंग्रजी कवयीत्री असून त्यांचं बरंच साहित्य प्रकाशित झालं आहे.

यांचे इतर लिखाण Pratishtha Pandya
Translator : Charan Aivarnad

Charan Aivarnad is a poet and a writer. He can be reached at: [email protected]

यांचे इतर लिखाण Charan Aivarnad