“ಚಟ್ನಿ, ಚಟ್ನಿ ಫ್ರೈ”
ಅಅರುಣಾಚಲ ಪ್ರದೇಶದ ಪಟ್‌ಕಯ್ ಪರ್ವತಗಳ ತಪ್ಪಲಿನಲ್ಲಿರುವ ಕನುಬರಿಯಲ್ಲಿನ ಕೆಂಪು ಇರುವೆಗಳಿಂದ ಉತ್ತಮ ಚಟ್ನಿಯನ್ನು ತಯಾರಿಸಬಹುದು. ಜುಲೈ ಮಾಸದ ಮಳೆಗಾಲದ ತೇವದಿಂದ ಕೂಡಿದ ಮುಂಜಾನೆಯ ವಾರದ ಸಂತೆಯಲ್ಲಿ ಎಲೆಗಳ ಹಾಸಿನ ಮೇಲಿಟ್ಟ ಮಿರುಗುವ ಹಿಡಿಯಷ್ಟು ಕೆಂಪು ಇರುವೆಗಳನ್ನು 20 ರೂ.ಗಳಿಗೆ ಮಾರಲಾಗುತ್ತದೆ.
ಕನುಬರಿಯ ನಿವಾಸಿಯಾದ ಪೊಬಿನ್ ಕುರ್ಮಿ, “ನಾನಾ ಬಗೆಯ ಇರುವೆಗಳಿವೆ. ಕಪ್ಪು ಇರುವೆಗಳಿಗಳಿಗಿಂತ (ಕೆಂಪು ಇರುವೆಗಳನ್ನು ಹಿಡಿಯುವುದು ಹೆಚ್ಚು ಸುಲಭವಾದ ಕಾರಣ, ಅವಕ್ಕೆ ಹೆಚ್ಚಿನ ಆದ್ಯತೆಯಿದೆ. ಅವು ಕಚ್ಚಿದರೆ ಹೆಚ್ಚು ತೊಂದರೆಯಾಗುವುದಿಲ್ಲ. ಮಾವು ಹಾಗೂ ಹಲಸಿನ ಮರದಲ್ಲಿ ಅವು ದೊರೆಯುತ್ತವೆ” ಎಂದು ತಿಳಿಸಿದರು. ಏಷಿಯನ್ ನೇಕಾರ ಇರುವೆಗಳು ಎಂದು ಸಹ ಕರೆಯಲಾಗುವ Oecophylla smaragdinaಗಳು ಅರುಣಾಚಲ ಪ್ರದೇಶದಲ್ಲಿ ಕಂಡುಬರುತ್ತವೆ.
ಕೆಲವು ವಾರಗಳವರೆಗೆ ನಾನು ಉಪಾಧ್ಯಾಯನಾಗಿದ್ದ ಮಹಾಬೋಧಿ ಶಾಲೆಯ ವಿದ್ಯಾರ್ಥಿಗಳಾದ ಹತ್ತು ವರ್ಷದ ನಯನ್‌ಶಿಲ ಮತ್ತು ಒಂಬತ್ತು ವರ್ಷದ ಸ್ಯಾಮ್, ನನಗೆ ಇರುವೆಗಳನ್ನು ಹಿಡಿಯುವ ಪ್ರಕ್ರಿಯೆಗಳನ್ನು ಹೀಗೆ ವಿವರಿಸಿದರು: “ಮರದ ಕೊಂಬೆಯ ಮೇಲೆ ಇರುವೆಗಳ ಗೂಡುಗಳನ್ನು ಗುರುತಿಸಿದ ನಂತರ ಅದನ್ನು ಕತ್ತರಿಸಿ ಕುದಿಯುವ ನೀರಿನಲ್ಲಿಡಬೇಕು. ಆ ಸತ್ತ ಇರುವೆಗಳನ್ನು ಎಲೆಗಳು ಮತ್ತು ಮಣ್ಣಿನಿಂದ ಬೇರ್ಪಡಿಸಿ, ಒಣಗಿಸಲಾಗುತ್ತದೆ.” ನಂತರ ಚಟ್ನಿಯನ್ನು ತಯಾರಿಸಲು ಅವನ್ನು ಹುರಿಯಬಹುದು. ಚಟ್ನಿಯ ರುಚಿ ಸ್ವಲ್ಪ ಹುಳಿ.
ಇದು, ಅರುಣಾಚಲ ಪ್ರದೇಶದ ಲಾಂಗ್‌ಡಿಂಗ್ ಜಿಲ್ಲೆಯ ಕನುಬರಿ ವಲಯದಲ್ಲಿನ ಗುರುವಾರದ ವಾರದ ಸಂತೆ. ಕನುಬರಿ ನಿವಾಸಿಗಳಿಗೆ ಲಭ್ಯವಿರುವ ಮತ್ತೊಂದು ದೊಡ್ಡ ಮಾರುಕಟ್ಟೆಯು ೭೦ ಕಿ.ಮೀ. ದೂರದಲ್ಲಿರುವ ಕಾರಣ, ಸ್ಥಳೀಯರು ತಮ್ಮ ದಿನನಿತ್ಯದ ಅವಶ್ಯಕತೆಗಳ ಖರೀದಿಗೆ ಇದಕ್ಕೇ ಆದ್ಯತೆ ನೀಡುತ್ತಾರೆ. ಅಸ್ಸಾಂನ ಗಡಿಯು ಸಹ ಒಂದು ಕಿ.ಮೀ.ಗಿಂತಲೂ ಕಡಿಮೆ ದೂರದಲ್ಲಿದ್ದು, ಪಕ್ಕದ ರಾಜ್ಯದ ಜನರು ಸಹ ತನ್ನ ಉತ್ಪನ್ನಗಳ ಮಾರಾಟಕ್ಕೆ ಮತ್ತು ಖರೀದಿಗಾಗಿ ಈ ಮಾರುಕಟ್ಟೆಗೆ ಭೇಟಿ ನೀಡುತ್ತಾರೆ.
ಊರಿನ ಮಹಾಬೋಧಿ ಶಾಲೆಯ ಉಪಾಧ್ಯಾಯರಾದ ಶ್ರೀ. ಚಿತ್ರ, ಚಿಕ್ಕವರಿದ್ದಾಗಿನಿಂದಲೂ ಅಂದರೆ 1985ರಿಂದಲೂ ಮಾರುಕಟ್ಟೆಗೆ ಹೋಗುತ್ತಿದ್ದುದನ್ನು ಹೀಗೆ ನೆನಪಿಸಿಕೊಳ್ಳುತ್ತಾರೆ: “ಆಗ ಮಾರುತ್ತಿದ್ದ ವಸ್ತುಗಳನ್ನು ಜನರ ಜಮೀನುಗಳಲ್ಲಿ ಯಾವುದೇ ರಾಸಾಯನಿಕಗಳಿಲ್ಲದೆ, ಅವುಗಳ ನೈಜ ರೂಪದಲ್ಲಿ ಬೆಳೆಯಲಾಗುತ್ತಿತ್ತು.”
ಮಾರುಕಟ್ಟೆ ಪ್ರದೇಶಕ್ಕೆ ಸಾಗುವ ಚಿಕ್ಕ ರಸ್ತೆಯಲ್ಲಿ ಸಾಲುಗಟ್ಟಿದ್ದ ಚಮ್ಮಾರರು ಮಳೆಯ ನಡುವೆಯೂ ಶೂ, ಚಪ್ಪಲಿ ಮತ್ತು ಛತ್ರಿಗಳ ರಿಪೇರಿಯಲ್ಲಿ ಮಗ್ನರಾಗಿದ್ದರು. ಇವರು ತರಕಾರಿ ಮತ್ತು ಹಣ್ಣು ಹಾಗೂ ಮೀನು ಮತ್ತು ಮಾಂಸ ಇತ್ಯಾದಿಗಳನ್ನು ಮಾರುವವರ ಪಕ್ಕದಲ್ಲಿ ಕುಳಿತಿದ್ದರು.
ಮಾರುಕಟ್ಟೆಯ ಪ್ರತಿಯೊಂದು ಮೂಲೆಯಲ್ಲೂ ತಂಬಾಕಿನ ಅಂಗಡಿಗಳಿವೆ. ಅಸ್ಸಾಮಿನ ಛರೈಡಿಯೊ ಜಿಲ್ಲೆಯ ತಂಬಾಕಿನ ಮಾರಾಟಗಾರರಾದ ಜಯತೊ ಬಶಿನ್, ವಿವಿಧ ಬಗೆಯ ಒಣಗಿದ ತಂಬಾಕನ್ನು ನನಗೆ ತೋರಿಸುತ್ತಾ ಹೀಗೆಂದರು: “ಕಂದು ಬಣ್ಣದ ತಂಬಾಕನ್ನು ಸಾಮಾನ್ಯವಾಗಿ ಸುಣ್ಣದ ಜೊತೆಗೆ ಮತ್ತು ಕಪ್ಪು ಬಣ್ಣದ್ದನ್ನು ಬಿಹಾರದಿಂದ ತಂದ ವೀಳ್ಯದೆಲೆ ಜೊತೆಗೆ ಅಗಿಯುತ್ತಾರೆ.”
ದೇಶದ ಇತರೆ ಭಾಗಗಳಿಂದ ತಂದ ಆಲೂಗೆಡ್ಡೆ, ಟೊಮ್ಯಾಟೊ ಮತ್ತು ಈರುಳ್ಳಿಯಂತಹ ವಾಡಿಕೆಯ ಉತ್ಪನ್ನಗಳೊಂದಿಗೆ, ಅನೇಕ ಸ್ಥಳೀಯ ತರಕಾರಿಗಳು ಇಲ್ಲಿ ಸಿಗುತ್ತವೆ: ಜರೀಗಿಡಗಳು, ಕೆಸುವಿನ ಗೆಡ್ಡೆ, ಕಳಲೆ, ಬಾಳೆಯ ದಿಂಡುಗಳು, ಬೆಳ್ಳುಳ್ಳಿ, ಹಸಿರು ಮತ್ತು ಕಪ್ಪು ಮೆಣಸು, ಸೌತೆಕಾಯಿ ಮತ್ತು ಸುಪ್ರಸಿದ್ಧ ಕಿಂಗ್ ಚಿಲಿ (King chilli).
ಅಸ್ಸಾಂನ ಸಪೆಖಟಿ ಮತ್ತು ಸೊನಾರಿಯಕ್ಕೆ ಹತ್ತಿರವಿರುವ ಪ್ರದೇಶಗಳ ಮಾರಾಟಗಾರರು. ವಸ್ತುಗಳನ್ನು ದೊಡ್ಡ ಪ್ರಮಾಣದಲ್ಲಿ ಮಾರುತ್ತಾರೆ. ಸ್ಥಳೀಯ ರೈತರು ಚಿಕ್ಕ ಮಾರಾಟಗಾರರು. ತೆರೆದ ಜಾಗಗಳಲ್ಲಿ ಅಥವಾ ತಗಡಿನ ಛಾವಣಿಯ ನೆರಳಿನಲ್ಲಿ ಕುಳಿತು ಟಾರ್ಪಾಲಿನ್ ಅಥವಾ ಸೇರಿಸಿ ಹೊಲಿದ ಗೊಬ್ಬರದ ಹಳೆಯ ಚೀಲಗಳ ಮೇಲೆ ಅವರು ತಮ್ಮ ಸಾಮಾನುಗಳನ್ನು ಸಾಲಾಗಿ ಜೋಡಿಸುತ್ತಾರೆ. ಸ್ಥಳೀಯ ತರಕಾರಿಗಳು ತ್ವರಿತವಾಗಿ ಮಾರಾಟವಾಗುತ್ತವೆ.
“ರುಚಿಕರವಾಗಿದ್ದು ಮತ್ತು ಬೆಲೆಯು ಕಡಿಮೆಯಿರುವ ಕಾರಣ ಹಂದಿಯ ಮಾಂಸವು ಮೆಚ್ಚಿನ ಮಾಂಸಗಳಲ್ಲಿ ಒಂದೆನಿಸಿದೆ” ಎನ್ನುತ್ತಾರೆ, ಮಾರುಕಟ್ಟೆಗೆ ನನ್ನ ಜೊತೆ ತೆರಳಿದ 26ರ ವಯಸ್ಸಿನ ಪೊಮ್ಸೆನ್ ಲಬ್ರಮ್. ಹಂದಿ ಮಾಂಸ, ಬಾತುಕೋಳಿ, ಪ್ರಾನ್ಸ್ (ಕಡಲ ಜಂತು) ಮತ್ತು ಏಡಿಗಳನ್ನು ಒಳಗೊಂಡಂತೆ, ತಾಜಾ ಹಾಗೂ ಒಣಗಿಸಿದ ಮಾಂಸ ಮತ್ತು ಮೀನು ಮಾರುಕಟ್ಟೆಯಲ್ಲಿ ಹೇರಳವಾಗಿ ದೊರೆಯುತ್ತವೆ.
ಹೆಬ್ಬೆರಳ ಗಾತ್ರದ ಮಿರುಗುವ ಕೆಂಪು ಮೆಣಸಿಕಾಯಿಯು ಅಂದರೆ, ಲಾಂಗ್‌ಡಿಂಗ್‌ನಲ್ಲಿ ವಾಸಿಸುವ ವಾಂಛೊ ಬುಡಕಟ್ಟಿನ ಭಾಷೆಯಲ್ಲಿ ಬೊಂಗನ್ ಹಿಂಗ್ಬು ಎಂಬುದಾಗಿಯೂ, ಅಸ್ಸಾಮಿ ಭಾಷೆಯಲ್ಲಿ ಭೂತ್ ಜೊಲೊಕಿಯ ಎಂಬ ಹೆಸರಿನಿಂದಲೂ ಕರೆಯುವ ಘೋಸ್ಟ್ ಪೆಪರ್ ಅಥವಾ ಕಿಂಗ್ ಚಿಲಿಗಳ ರಾಶಿಯು ಎಲ್ಲರ ಗಮನವನ್ನು ಸೆಳೆಯುವಂತಿತ್ತು. ಒಂದೊಮ್ಮೆ, ಪ್ರಪಂಚದ ಅತ್ಯಂತ ಖಾರದ ಮೆಣಸಿನಕಾಯಿಯೆಂದು ಪರಿಗಣಿಸಿದ್ದು, ಭಾರತದಲ್ಲಿ ಈಗಲೂ ಅತ್ಯಂತ ಖಾರದ ಮೇಣಸಿನಕಾಯಿಯೆಂದು ಹೆಸರಾಗಿರುವ ಇವನ್ನು ದೊಡ್ಡ ರಾಶಿಗಳಾಗಿ ಅಥವಾ 6-8 ಮೆಣಸಿನಕಾಯಿಗಳ ಚಿಕ್ಕ ಗೊಂಚಲುಗಳಾಗಿ ಅಣಿಗೊಳಿಸಲಾಗುತ್ತದೆ.
“ನಾವು ಡಿಸೆಂಬರ್-ಜನವರಿಯಲ್ಲಿ ಮೆಣಸಿನಕಾಯಿಗಳ ಸಸಿಗಳನ್ನು ನೆಡುತ್ತೇವೆ. 3-4 ತಿಂಗಳಲ್ಲಿ ಅವು ಫಸಲನ್ನು ನೀಡಲಾರಂಭಿಸುತ್ತವೆ” ಎಂಬುದಾಗಿ ಅಸ್ಸಾಮಿನ ಛರೈಡಿಯೊ ಜಿಲ್ಲೆಯ ಬಸಂತ್ ಗೊಗೊಯ್ ಮಾಹಿತಿಯಿತ್ತರು.
ರೈತ ಗೊಗೊಯ್, ತಮ್ಮ 11-12 ಬಿಘ (1.5 ಹೆಕ್ಟೇರ್) ಜಮೀನಿನ ಒಂದು ಬಿಘ ಜಾಗದಲ್ಲಿ ಕಿಂಗ್ ಚಿಲಿಗಳನ್ನು ಬೆಳೆಯುತ್ತಾರೆ. “ಗಿಡದ ಕಟುತೆ (pungency) ಮತ್ತು ಖಾರದಿಂದಾಗಿ ಪ್ರಾಣಿಗಳು ಫಸಲಿಗೆ ಹಾನಿಮಾಡುವುದಿಲ್ಲ. “ಆದರೆ ಮಳೆಯೇ ಹೆಚ್ಚಿನ ಹಾನಿಯನ್ನು ಉಂಟುಮಾಡುತ್ತದೆ.” ಭಾರೀ ಮಳೆಯಲ್ಲಿ ಆಗತಾನೇ ಅರಳಿದ ಹೂವುಗಳು ಕೊಚ್ಚಿಕೊಂಡು ಹೋಗುತ್ತವೆ. ಇದು ಫಸಲಿನ ಮೇಲೆ ಪರಿಣಾಮ ಬೀರುತ್ತದೆ” ಎನ್ನುತ್ತಾರವರು.
ಬಸಂತ್ ಅವರು “ವಿವಿಧ ರೀತಿಯ ಕಿಂಗ್ ಚಿಲಿಗಳಿವೆ. ನಾಗಾಲ್ಯಾಂಡ್‌ನವು ಹೆಚ್ಚು ಖಾರವಾಗಿರುತ್ತವೆ. ನಾವು ಬೆಳೆಯುವ ಮೆಣಸಿನಕಾಯಿಯ ಘಾಟು ಕಡಿಮೆಯಾಗಿದೆ. ನಮ್ಮ ಬಾಲ್ಯದಲ್ಲಿ ಅದು ಹೆಚ್ಚು ಖಾರವಾಗಿರುತ್ತಿತ್ತು” ಎನ್ನುತ್ತಾರೆ. ವಾರಕ್ಕೆರಡು ಬಾರಿ ಇವರು ಮೆಣಸಿನಕಾಯಿಗಳನ್ನು ಕಿತ್ತು, 6-8 ಕಾಯಿಗಳಿಗೆ 20 ರೂ.ಗಳಂತೆ ಮಾರುತ್ತಾರೆ. ಇದರಿಂದ ಅವರಿಗೆ ಪ್ರತಿ ವಾರಕ್ಕೆ ಸುಮಾರು 300ರಿಂದ 500 ರೂ.ಗಳು ದೊರೆಯುತ್ತವೆ.”
ಬಸಂತ್ ಅವರು ತಮ್ಮ ಜಮೀನಿನಲ್ಲಿ ಚಹ, ಅಡಕೆ, ಮರಸೇಬು, ಹೀರೆಕಾಯಿ, ಮಡಹಾಗಲ, ಅಸ್ಸಾಂ ನಿಂಬೆ ಮುಂತಾದ ಇತರೆ ಕೆಲವ ಬೆಳೆಗಳನ್ನು ಸಹ ಬೆಳೆಯುತ್ತಾರೆ. ಇವರು ಪ್ರತಿ ಗುರುವಾರ ಅಸ್ಸಾಂನ ಬೊಕ ಪೊಥರ್ ಎಂಬ ತಮ್ಮ ಹಳ್ಳಿಯಿಂದ ಕನುಬರಿಗೆ ಸೈಕಲ್‌ನಲ್ಲಿ 10 ಕಿ.ಮೀ. ಹಾದಿಯನ್ನು ಕ್ರಮಿಸುತ್ತಾರೆ. ಮುಂಜಾನೆ 5 ಗಂಟೆಗೆ ಮನೆಯಿಂದ ಹೊರಡುವ ಇವರು ಸುಮಾರು ಒಂದು ಗಂಟೆಯ ಅವಧಿಯಲ್ಲಿ ಮಾರುಕಟ್ಟೆಗೆ ತಲುಪುತ್ತಾರೆ. ತಮ್ಮ ಚಿಕ್ಕ ಅಂಗಡಿಯನ್ನು ವ್ಯವಸ್ಥೆಗೊಳಿಸಿ, ತಮ್ಮೆಲ್ಲ ಉತ್ಪನ್ನಗಳ ಬಿಕರಿಗೆ ಮಧ್ಯಾಹ್ನ ಒಂದೂವರೆಯವರೆಗೆ ಕಾಯುವ ಇವರು ನಂತರ ಮನೆಗೆ ಮರಳುತ್ತಾರೆ.
ಛರೈಡಿಯೊದಲ್ಲಿನ ತನ್ನ ಮನೆಗೆ ಹತ್ತಿರದ ಚಿಕ್ಕ ಮಾರುಕಟ್ಟೆ, ಖೆರ್‌ಬರಿಯ ಭಾನುವಾರದ ಸಂತೆಯಲ್ಲಿ ಸಹ ರೈತನು ತನ್ನ ಉತ್ಪನ್ನಗಳನ್ನು ಮಾರುತ್ತಾನೆ. ಆದರೆ ಆತನು ವಿಶೇಷವಾಗಿ ಕನುಬರಿ ಮಾರುಕಟ್ಟೆಗೆ ಬರುವುದನ್ನು ಇಷ್ಟಪಡುತ್ತಾನೆ.
“ನನಗೆ ಬುದ್ಧಿ ತಿಳಿದಾಗಿನಿಂದಲೂ ಇಲ್ಲಿಗೆ ಬರುತ್ತಿದ್ದೇನೆ. ಒಂದು ಬಾರಿಯಾದರೂ ಬರದಿದ್ದಲ್ಲಿ ನನಗೆ ಕಸಿವಿಸಿಯೆನಿಸುತ್ತದೆ” ಎಂದರವರು.
ಅನುವಾದ: ಶೈಲಜಾ ಜಿ.ಪಿ.