“ಇಲ್ಲಿ ವಾಸನೆ ಬರುತ್ತೆ, ಗಲೀಜು ಮಾಡ್ತೀರಿ, ಎಲ್ಲಿ ನೋಡಿದ್ರೂ ಕಸ ಇರುತ್ತೆ ಎಂದು ಅವರು ಹೇಳುತ್ತಾರೆ” ಸಾಲುಗಟ್ಟಿ ನಿಂತಿರುವ ಮೀನು ಪೆಟ್ಟಿಗೆಗಳು ಮತ್ತು ಮಾರಾಟಗಾರರನ್ನು ತೋರಿಸುತ್ತಾ ಎನ್ ಗೀತಾ ಹೇಳುತ್ತಾರೆ. “ಆದರೆ ಏನು ಮಾಡುವುದು? ಈ ಕಸ, ಈ ವಾಸನೆಯಲ್ಲೇ ನಮ್ಮ ಬದುಕಿದೆ. ನಮ್ಮ ಸಂಪಾದನೆ ಇದರಿಂದ ನಡೆಯಬೇಕು. ಇದನ್ನೆಲ್ಲ ಬಿಟ್ಟು ಎಲ್ಲಿಗೆ ಹೋಗುವುದು?” ಎಂದು ಎಂದು 42 ವರ್ಷದ ಈ ಮಹಿಳೆ ಕೇಳುತ್ತಾರೆ.

ನಾವು ನೊಚ್ಚಿಕುಪ್ಪಂ ಪ್ರದೇಶದಲ್ಲಿನ ತಾತ್ಕಾಲಿಕ ಮೀನು ಮಾರುಕಟ್ಟೆಯ ಬಳಿ ಇದ್ದೆವು. ಇದು ಮರೀನಾ ಬೀಚ್‌ ಉದ್ದಕ್ಕೂ ಸುಮಾರು 2.5 ಕಿ.ಮೀ ಪ್ರದೇಶದಲ್ಲಿ ಹರಡಿಕೊಂಡಿದೆ. ಇಲ್ಲಿ ಮೀನು ಮಾರಾಟಗಾರ ಮಹಿಳೆ ʼಅವರುʼ ಎಂದು ಹೇಳುತ್ತಿರುವುದು ನಗರದ ಸೌಂದರ್ಯೀಕರಣದ ಹೆಸರಿನಲ್ಲಿ ಮಾರಾಟಗಾರರು ಇಲ್ಲಿಂದ ಹೋಗುವುದನ್ನು ನೋಡಲು ಬಯಸುವ ಗಣ್ಯ ಶಾಸಕರು ಮತ್ತು ಸರ್ಕಾರಿ ಅಧಿಕಾರಿಗಳು. ಗೀತಾ ಅವರಂತಹ ಮೀನುಗಾರರ ಪಾಲಿಗೆ ನೊಚ್ಚಿಕುಪ್ಪಂ ಎನ್ನುವುದು ಅವರ ಊರು. ಸುನಾಮಿ ಮತ್ತು ಚಂಡಮಾರುತಗಳ ನಡುವೆಯೂ ಅವರು ಇಲ್ಲಿ ಬಾಳಿ ಬದುಕಿದ್ದಾರೆ.

ಮಾರುಕಟ್ಟೆಯ ಗಜಿಬಿಜಿ ಆರಂಭವಾಗುವ ಮೊದಲೇ ಗೀತಾ ತನ್ನ ಅಂಗಡಿಯನ್ನು ಸಜ್ಜುಗೊಳಿಸುವಲ್ಲಿ ನಿರತರಾಗಿದ್ದರು. ಮೊದಲಿಗೆ ಕೆಲವು ಕ್ರೇಟುಗಳನ್ನು ಕವುಚಿ ಇಟ್ಟು ಅದರ ಮೇಲೆ ಹಲಗೆಯೊಂದನ್ನಿಟ್ಟು ಆ ಹಲಗೆಯ ಮೇಲೆ ನೀರು ಚಿಮುಕಿಸುತ್ತಾರೆ. ಅದರ ಮೇಲೆ ಇನ್ನೊಂದು ಪ್ಲಾಸ್ಟಿಕ್‌ ಬೋರ್ಡ್‌ ಇರಿಸುತ್ತಾರೆ. ಮಧ್ಯಾಹ್ನ 2 ಗಂಟೆಯವರೆಗೆ ವ್ಯಾಪಾರ ಮಾಡುವ ಅವರು, ಎರಡು ದಶಕಗಳ ಹಿಂದೆ ಮದುವೆಯಾದಾಗಿನಿಂದ ಈ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದಾರೆ.

ಆದರೆ ಸುಮಾರು ಒಂದು ವರ್ಷದ ಹಿಂದೆ, ಏಪ್ರಿಲ್ 11, 2023 ರಂದು, ಅವರಿಗೆ ಮತ್ತು ಇಲ್ಲಿನ ಲೂಪ್‌ ರಸ್ತೆಯಲ್ಲಿ ವ್ಯಾಪಾರ ಮಾಡುತ್ತಿರುವ ಇತರ ಮುನ್ನೂರು ಮೀನು ಮಾರಾಟಗಾರರಿಗೆ ಗ್ರೇಟರ್ ಚೆನ್ನೈ ಕಾರ್ಪೊರೇಷನ್ (ಜಿಸಿಸಿ) ಈ ಸ್ಥಳವನ್ನು ತೆರವುಗೊಳಿಸುವಂತೆ ಸೂಚಿಸಿ ನೋಟಿಸ್‌ ನೀಡಿದೆ. ಒಂದು ವಾರದೊಳಗೆ ರಸ್ತೆಯನ್ನು ತೆರವುಗೊಳಿಸುವಂತೆ ಹೈಕೋರ್ಟ್ ನೀಡಿದ ಆದೇಶದ ಹಿನ್ನೆಲೆಯಲ್ಲಿ ಈ ಕ್ರಮವನ್ನು ಕೈಗೊಳ್ಳಲಾಗಿತ್ತು.

"ಗ್ರೇಟರ್ ಚೆನ್ನೈ ಕಾರ್ಪೊರೇಷನ್ ಸರಿಯಾದ ಕಾನೂನು ಪ್ರಕ್ರಿಯೆಯನ್ನು ಅನುಸರಿಸುವ ಮೂಲಕ ಲೂಪ್ ರಸ್ತೆಯಲ್ಲಿನ ಪ್ರತಿಯೊಂದು ಅತಿಕ್ರಮಣವನ್ನು (ಮೀನು ಮಾರಾಟಗಾರರು, ಅಂಗಡಿಗಳು, ನಿಲ್ಲಿಸಿರುವ ವಾಹನಗಳು) ತೆರವುಗೊಳಿಸಬೇಕು. ಇಡೀ ರಸ್ತೆ ಭಾಗ ಮತ್ತು ಪಾದಚಾರಿ ಮಾರ್ಗವನ್ನು ಅತಿಕ್ರಮಣದಿಂದ ಮುಕ್ತವಾಗಿಸಿ ಮುಕ್ತ ಸಂಚಾರ ಮತ್ತು ಪಾದಚಾರಿಗಳ ಮುಕ್ತ ಸಂಚಾರಕ್ಕೆ ಅನುವು ಮಾಡಿಕೊಡಬೇಕು. ಈ ನಿಟ್ಟಿನಲ್ಲಿ ಪೊಲೀಸರು ಪಾಲಿಕೆಗೆ ಸಹಾಯ ಮಾಡಬೇಕು" ಎಂದು ನ್ಯಾಯಾಲಯದ ಆದೇಶದಲ್ಲಿ ತಿಳಿಸಲಾಗಿದೆ.

PHOTO • Abhishek Gerald
PHOTO • Manini Bansal

ಎಡ: ನೊಚ್ಚಿಕುಪ್ಪಂ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಲಭ್ಯವಿರುವ ಗೀತಾ ಅವರ ಅಂಗಡಿಯಲ್ಲಿನ ಬಂಗುಡೆ, ಜಲೇಬಿ, ರಾಣಿ ಮೀನುಗಳು. ಬಲ: ನೊಚ್ಚಿಕುಪ್ಪಂ ಮಾರುಕಟ್ಟೆಯಲ್ಲಿ ಮೀನುಗಾರರು ತಮ್ಮ ಅಂದಿನ ಬೇಟೆಯನ್ನು ವಿಂಗಡಿಸುತ್ತಿರುವುದು

PHOTO • Abhishek Gerald
PHOTO • Manini Bansal

ಎಡ: ಆವರಣದ ಒಳಗಿನಿಂದ ಹೊಸ ಮಾರುಕಟ್ಟೆಯ ಒಂದು ಭಾಗ, ಮಧ್ಯದಲ್ಲಿ ಕಾರ್ ಪಾರ್ಕಿಂಗ್ ಪ್ರದೇಶ ಬಲ: ನೊಚ್ಚಿಕುಪ್ಪಂ ವಿಭಾಗದಲ್ಲಿ ನಿಲ್ಲಿಸಲಾಗುವ 200 ಚಿಲ್ಲರೆ ದೋಣಿಗಳಲ್ಲಿ ಕೆಲವು

ಹಾಗೆ ನೋಡಿದರೆ ಪೂರ್ವಕುಡಿ ಸಮುದಾಯಕ್ಕೆ ಸೇರಿದ ಈ ಮೀನುಗಾರರೇ ಇಲ್ಲಿನ ಮೂಲ ನಿವಾಸಿಗಳು. ಐತಿಹಾಸಿಕವಾಗಿ ಅವರಿಗೆ ಸೇರಿದ ನೆಲವನ್ನು ನಿಜವಾದ ಅರ್ಥದಲ್ಲಿ ಅತಿಕ್ರಮಿಸುತ್ತಿರುವುದು ನಗರ.

ಚೆನ್ನೈ ನಗರವನ್ನು (ಅಥವಾ ಮದ್ರಾಸ್) ನಿರ್ಮಿಸುವುದಕ್ಕೂ ಬಹಳ ಹಿಂದೆಯೇ, ಈ ಕರಾವಳಿಯು ಸಮುದ್ರದ ಪಕ್ಕದಲ್ಲಿ ಸಣ್ಣ ಪ್ರಮಾಣದಲ್ಲಿ ಕಟ್ಟುಮಾರಮ್ (ಕ್ಯಾಟಮಾರನ್) ವಾಸವಿದ್ದರು. ಈ ಮೀನುಗಾರರು ಅರ್ಧ ಬೆಳಕಿನಲ್ಲಿ ತಾಳ್ಮೆಯಿಂದ ಕುಳಿತು, ಗಾಳಿಯನ್ನು ಅನುಭವಿಸುತ್ತಿದ್ದರು, ಗಾಳಿಯ ವಾಸನೆಯನ್ನು ಗಮನಿಸುತ್ತಿದ್ದರು, ಚೆನ್ನೈ ಕರಾವಳಿಯಲ್ಲಿ ಋತುಮಾನಕ್ಕನುಗುಣವಾಗಿ ಉಕ್ಕಿ ಹರಿಯುವ ಕಾವೇರಿ ಮತ್ತು ಕೊಲ್ಲಿಡಂ ನದಿಗಳಿಂದ ಹೂಳು ತುಂಬಿದ ಪ್ರವಾಹದ ಚಿಹ್ನೆಗಳಿಗಾಗಿ ಎದುರು ನೋಡುತ್ತಿದ್ದರು. ಈ ಪ್ರವಾಹವು ಒಮ್ಮೆ ಹೇರಳವಾಗಿ ಮೀನುಗಳನ್ನು ತರುತ್ತಿತ್ತು. ಇಂದು ಮೀನು ಹೇರಳವಾಗಿ ಸಿಗುವುದಿಲ್ಲ, ಆದರೆ ಚೆನ್ನೈ ನಗರದ ಮೀನುಗಾರರು ಈಗಲೂ ಕಡಲತೀರದಲ್ಲಿ ಮಾರಾಟ ಮಾಡುತ್ತಾರೆ.

"ಇಂದಿಗೂ, ಮೀನುಗಾರರು ವಂಡ-ತಣ್ಣಿಗಾಗಿ ಕಾಯುತ್ತಾರೆ, ಆದರೆ ನಗರದ ಮರಳು ಮತ್ತು ಕಾಂಕ್ರೀಟ್ ಚೆನ್ನೈ ಒಂದು ಕಾಲದಲ್ಲಿ ಮೀನುಗಾರಿಕೆ ಕುಪ್ಪಂಗಳ (ಮೀನುಗಾರರ ಕುಗ್ರಾಮ) ಸಂಗ್ರಹವಾಗಿತ್ತು ಎಂಬ ನೆನಪನ್ನು ಅಳಿಸಿಹಾಕಿದೆ" ಎಂದು ನೊಚ್ಚಿಕುಪ್ಪಂ ಮಾರುಕಟ್ಟೆಯಿಂದ ನದಿಗೆ ಅಡ್ಡಲಾಗಿ ಇರುವ ಉರೂರ್ ಓಲ್ಕಾಟ್ ಕುಪ್ಪಂ ಗ್ರಾಮದ ಮೀನುಗಾರ ಎಸ್. ಪಾಳಯಂ. "ಜನರಿಗೆ ಅದು ನೆನಪಿದೆಯೇ?"

ಕಡಲತೀರದ ಮಾರುಕಟ್ಟೆ ಮೀನುಗಾರರ ಪಾಲಿಗೆ ಜೀವನಾಡಿ. ಮೀನು ಮಾರುಕಟ್ಟೆಯ ಸ್ಥಳಾಂತರ ಜಿಸಿಸಿ ಮತ್ತು ಇತರ ನಗರವಾಸಿಗಳಿಗೆ ಒಂದು ಸಣ್ಣ ಅನಾನುಕೂಲದಂತೆ ಕಾಣಿಸಬಹುದು ಆದರೆ ನೊಚ್ಚಿಕುಪ್ಪಂ ಮಾರುಕಟ್ಟೆಯಲ್ಲಿ ಮೀನು ಮಾರುವವರ ಪಾಲಿಗೆ ಇದು ಅವರ ಜೀವನೋಪಾಯ ಮತ್ತು ಗುರುತಿನ ಪ್ರಶ್ನೆ.

*****

ಮರೀನಾ ಬೀಚಿಗೆ ಸಂಬಂಧಿಸಿದ ಯುದ್ಧ ಬಹಳ ಹಳೆಯದು.

ಮರೀನಾ ಕಡಲತೀರವನ್ನು ಸುಂದರಗೊಳಿಸುವಲ್ಲಿ ಬ್ರಿಟಿಷರಿಂದ ಹಿಡಿದು ನಂತರದ ಸರ್ಕಾರಗಳ ತನಕ ಎಲ್ಲರ ಬಳಿಯೂ ಒಂದೊಂದು ಕತೆಯಿದೆ. ಉದ್ದವಾದ ವಾಯುವಿಹಾರ ಸ್ಥಳ, ಗಡಿ ಹುಲ್ಲುಹಾಸು, ಅಚ್ಚುಕಟ್ಟಾಗಿ ನಿರ್ವಹಿಸಲ್ಪಟ್ಟ ಮರಗಳು, ಸ್ವಚ್ಛವಾದ ನಡಿಗೆ ಮಾರ್ಗಗಳು, ಸ್ಮಾರ್ಟ್ ಕಿಯೋಸ್ಕ್, ರ್ಯಾಂಪ್‌ ಇತ್ಯಾದಿ.

PHOTO • Manini Bansal
PHOTO • Manini Bansal

ಎಡ: ನೊಚ್ಚಿಕುಪ್ಪಂ ಲೂಪ್ ರಸ್ತೆಯಲ್ಲಿ ಗಸ್ತು ಕರ್ತವ್ಯದಲ್ಲಿದ್ದ ಪೊಲೀಸರು. ಬಲ: ನೊಚ್ಚಿಕುಪ್ಪಂ ಮಾರುಕಟ್ಟೆಯಲ್ಲಿ ಮಾರಾಟಕ್ಕಿರುವ ತಾಜಾ ಸಮುದ್ರ ಸೀಗಡಿ

PHOTO • Manini Bansal
PHOTO • Sriganesh Raman

ಎಡ: ನೊಚ್ಚಿಕುಪ್ಪಂನಲ್ಲಿ ಬಲೆಗಳನ್ನು ಸಂಗ್ರಹಿಸಲು ಮತ್ತು ಮನರಂಜನೆಗಾಗಿ ಮೀನುಗಾರರು ಬಳಸುವ ತಾತ್ಕಾಲಿಕ ಡೇರೆಗಳು ಮತ್ತು ಶೆಡ್ಡುಗಳು. ಬಲ: ಮರೀನಾ ಕಡಲ ತೀರದಲ್ಲಿ ಮೀನುಗಾರರು ತಮ್ಮ ಬಲೆಗಳಿಂದ ಮೀನುಗಳನ್ನು ತೆಗೆದುಹಾಕುತ್ತಿದ್ದಾರೆ

ಈ ಬಾರಿ ಲೂಪ್ ರಸ್ತೆಯಲ್ಲಿ ಉಂಟಾಗಿರುವ ಸಂಚಾರ ಅವ್ಯವಸ್ಥೆಯನ್ನು ಗಮನದಲ್ಲಿಟ್ಟುಕೊಂಡು ನ್ಯಾಯಾಲಯವೇ ಸುಮೋಟೋ ಅರ್ಜಿಯ ಮೂಲಕ ಮೀನುಗಾರ ಸಮುದಾಯದ ವಿರುದ್ಧ ಕ್ರಮ ಕೈಗೊಂಡಿದೆ. ಮದ್ರಾಸ್ ಹೈಕೋರ್ಟ್ ನ್ಯಾಯಾಧೀಶರು ತಮ್ಮ ದೈನಂದಿನ ಪ್ರಯಾಣಕ್ಕಾಗಿ ಈ ರಸ್ತೆಯನ್ನು ಬಳಸುತ್ತಾರೆ. ದಟ್ಟಣೆಯ ಸಮಯದಲ್ಲಿ ಅವ್ಯವಸ್ಥೆಗೆ ಕಾರಣವಾಗುತ್ತಿದ್ದ ಮೀನು ಅಂಗಡಿಗಳನ್ನು ರಸ್ತೆಯ ಬದಿಯಿಂದ ತೆರವುಗೊಳಿಸುವಂತೆ ಆದೇಶ ನೀಡಲಾಯಿತು.

ಏಪ್ರಿಲ್ 12ರಂದು ಜಿಸಿಸಿ ಮತ್ತು ಪೊಲೀಸ್ ಅಧಿಕಾರಿಗಳು ಲೂಪ್ ರಸ್ತೆಯ ಪಶ್ಚಿಮ ಭಾಗದಲ್ಲಿನ ಮೀನು ಅಂಗಡಿಗಳನ್ನು ನೆಲಸಮ ಮಾಡಲು ಪ್ರಾರಂಭಿಸಿದಾಗ, ಈ ಪ್ರದೇಶದ ಮೀನುಗಾರ ಸಮುದಾಯವು ಒಂದು ಸುತ್ತಿನ ಸಾಮೂಹಿಕ ಪ್ರತಿಭಟನೆಯನ್ನು ಹಮ್ಮಿಕೊಂಡಿತು. ಆಧುನಿಕ ಮೀನು ಮಾರುಕಟ್ಟೆ ಪೂರ್ಣಗೊಳ್ಳುವವರೆಗೆ ಲೂಪ್ ರಸ್ತೆಯಲ್ಲಿ ಮೀನುಗಾರರನ್ನು ನಿಯಂತ್ರಿಸುವುದಾಗಿ ಜಿಸಿಸಿ ನ್ಯಾಯಾಲಯಕ್ಕೆ ಭರವಸೆ ನೀಡಿದ ನಂತರ ಪ್ರತಿಭಟನೆಯನ್ನು ಸ್ಥಗಿತಗೊಳಿಸಲಾಯಿತು. ಈ ಪ್ರದೇಶದಲ್ಲಿ ಈಗ ಪೊಲೀಸರ ಗಮನಾರ್ಹ ಉಪಸ್ಥಿತಿ ಕಾಣುತ್ತದೆ.

"ನ್ಯಾಯಾಧೀಶರಾಗಿರಲಿ ಅಥವಾ ಚೆನ್ನೈ ಕಾರ್ಪೊರೇಷನ್ ಆಗಿರಲಿ, ಅವರೆಲ್ಲರೂ ಸರ್ಕಾರದ ಭಾಗವೇ ಅಲ್ಲವೇ? ಹಾಗಾದರೆ ಸರ್ಕಾರ ಇದನ್ನು ಏಕೆ ಮಾಡುತ್ತಿದೆ? ಒಂದೆಡೆ ಅವರು ನಮ್ಮನ್ನು ಕರಾವಳಿಯ ಸಂಕೇತ ಎನ್ನುತ್ತಾರೆ ಮತ್ತು ಮತ್ತೊಂದೆಡೆ, ನಮ್ಮನ್ನು ನಮ್ಮ ಜೀವನೋಪಾಯದಿಂದ ದೂರ ಮಾಡಲು ಬಯಸುತ್ತಾರೆ" ಎಂದು ಸ್ಥಳೀಯ ಮೀನು ಮಾರಾಟಗಾರರಾದ 52 ವರ್ಷದ ಎಸ್ ಸರೋಜಾ ಹೇಳುತ್ತಾರೆ.

ಕಡಲತೀರದಿಂದ ಹೊರ ಹೋಗುವ ರಸ್ತೆಯ ಇನ್ನೊಂದು ಬದಿಯಲ್ಲಿ ಸರ್ಕಾರವು ಮಂಜೂರು ಮಾಡಿದ ನೊಚ್ಚಿಕುಪ್ಪಂ ವಸತಿ ಸಂಕೀರ್ಣದ (2009-2015ರ ನಡುವೆ) ಭಿತ್ತಿಚಿತ್ರದ ಕುರಿತು ಅವರು ಮಾತನಾಡುತ್ತಿದ್ದಾರೆ. ಮಾರ್ಚ್ 2023ರಲ್ಲಿ, ಸೇಂಟ್ + ಆರ್ಟ್ ಮತ್ತು ಏಷ್ಯನ್ ಪೇಂಟ್ಸ್ ಎಂಬ ಎನ್‌ಜಿಒ ತಮಿಳುನಾಡು ನಗರ ವಸತಿ ಅಭಿವೃದ್ಧಿ ಮಂಡಳಿಯ ಸಮುದಾಯದ ನಿವಾಸಕ್ಕೆ 'ಫೇಸ್ ಲಿಫ್ಟ್' ನೀಡಲು ಉಪಕ್ರಮ ಕೈಗೊಂಡಿತು. ಇದಕ್ಕಾಗಿ ನೇಪಾಳ, ಒಡಿಶಾ, ಕೇರಳ, ರಷ್ಯಾ ಮತ್ತು ಮೆಕ್ಸಿಕೊದ ಕಲಾವಿದರನ್ನು ನೊಚ್ಚಿಕುಪ್ಪಂನ 24 ವಸತಿಗಳ ಗೋಡೆಗಳ ಮೇಲೆ ಭಿತ್ತಿಚಿತ್ರಗಳನ್ನು ಬಿಡಿಸಲು ಆಹ್ವಾನಿಸಿದರು.

“ಅವರು ನಮ್ಮ ಬದುಕನ್ನು ಗೋಡೆಗಳ ಮೇಲೆ ಚಿತ್ರ ಬರೆಸುತ್ತಾರೆ. ನಮ್ಮನ್ನು ಆ ಪ್ರದೇಶದಿಂದ ಓಡಿಸಲು ನೋಡುತ್ತಾರೆ” ಎಂದು ಗೀತಾ ಕಟ್ಟಡಗಳನ್ನು ನೋಡುತ್ತಾ ಹೇಳುತ್ತಾರೆ. ಈ ʼಉಚಿತ ವಸತಿʼ ಉಚಿತವಲ್ಲ ಎನ್ನುವುದು ಕೂಡಾ ಅವರ ಅನುಭವಕ್ಕೆ ಬಂದಿದೆ. “ಅಪಾರ್ಟ್‌ಮೆಂಟ್‌ ಪಡೆಯಲು 5 ಲಕ್ಷ ಕೊಡುವಂತೆ ಒಬ್ಬ ಏಜೆಂಟ್‌ ನನ್ನ ಬಳಿ ಕೇಳಿದ್ದ” ಎಂದು ನೊಚಿಕುಪ್ಪಂನ ಅನುಭವಿ ಮೀನುಗಾರ 47 ವರ್ಷದ ಪಿ. ಕಣ್ಣದಾಸನ್‌ ಹೇಳುತ್ತಾರೆ. “ನಾವು ಹಣ ಕೊಡದೆ ಹೋಗಿದ್ದರೆ ಮನೆಯನ್ನು ಇನ್ಯಾರಿಗೋ ಹಂಚುತ್ತಿದ್ದರು” ಎಂದು ಅವರ 47 ವರ್ಷದ ಸ್ನೇಹಿತ ಅರಸು ಹೇಳುತ್ತಾರೆ.

ಚೆನ್ನೈ ಬೆಳೆಯುತ್ತಿರುವ ನಗರ ಪ್ರದೇಶವಾಗಿ ರೂಪಾಂತರ ಹೊಂದುತ್ತಿರುವಾಗ ಮೀನುಗಾರರ ವಾಸಸ್ಥಳಗಳು ಮತ್ತು ಕಡಲತೀರದ ಮೂಲಕ ಹಾದುಹೋಗುವ ಲೂಪ್ ರಸ್ತೆಯ ನಿರ್ಮಾಣವು ಮೀನುಗಾರರು ನಗರಪಾಲಿಕೆಯೊಂದಿಗಿನ ಹಲವು ಜಗಳಗಳಿಗೆ ಸಾಕ್ಷಿಯಾಗಿದೆ.

PHOTO • Manini Bansal
PHOTO • Manini Bansal

ಎಡ: ನೊಚ್ಚಿಕುಪ್ಪಂನಲ್ಲಿ ಕಣ್ಣದಾಸನ್. ಬಲ: ಅರಸು (ಬಿಳಿ ಗಡ್ಡ) ಮತ್ತು ಅವರ ಮಗ ನಿತೀಶ್ (ಕಂದು ಟೀ ಶರ್ಟ್) ಮಾರುಕಟ್ಟೆಯಲ್ಲಿ ಛತ್ರಿಯ ನೆರಳಿನಡಿ ನಿತೀಶ್ ತನ್ನ ಅಜ್ಜಿಯೊಂದಿಗೆ ಕ್ಯಾಮೆರಾಗೆ ಪೋಸ್ ನೀಡುತ್ತಾರೆ

PHOTO • Sriganesh Raman
PHOTO • Sriganesh Raman

ಎಡ: ರಂಜಿತ್ ನೊಚಿಕುಪ್ಪಂ ಮಾರುಕಟ್ಟೆಯಲ್ಲಿ ಮೀನು ಮಾರಾಟ ಮಾಡುತ್ತಿರುವುದು. ಬಲ: ಮೀನುಗಾರರಿಗೆ ಸರ್ಕಾರ ಮಂಜೂರು ಮಾಡಿದ ವಸತಿ ಸಂಕೀರ್ಣದ ಮೇಲಿನ ಭಿತ್ತಿಚಿತ್ರಗಳು

ಇಲ್ಲಿನ ಮೀನುಗಾರರು ತಾವು ಈ ಕುಪ್ಪಂಗೆ ಸೇರಿದವರು ಎಂದು ಪರಿಗಣಿಸುತ್ತಾರೆ. “ಗಂಡಸರು ಕಡಲಿನಲ್ಲಿ ಮತ್ತು ತೀರದಲ್ಲಿ ಕೆಲಸ ಮಾಡುತ್ತಾರೆ ಆದರೆ ಮಹಿಳೆಯರು ಮನೆಯಿಂದ ದೂರ ಕೆಲಸ ಮಾಡುವುದಾದರೆ ಕುಪ್ಪಂಗೆ ಏನು ಅರ್ಥವಿರುತ್ತದೆ?” 60 ವರ್ಷದ ಪಾಲಯಂ ಕೇಳುತ್ತಾರೆ. “ಹೀಗಾದರೆ ಪರಸ್ಪರ ದೂರಾಗುವುದರ ಜೊತೆಗೆ ಸಮುದ್ರದೊಂದಿಗಿನ ನಮ್ಮ ಸಂಬಂಧವೂ ದೂರಾಗುತ್ತದೆ. ಇಲ್ಲಿನ ಬಹಳಷ್ಟು ಕುಟುಂಬಗಳಿಗೆ ಪರಸ್ಪರ ಮಾತನಾಡಲು ಸಮಯ ಸಿಕ್ಕುವುದೇ ಗಂಡಸರ ದೋಣಿಯಿಂದ ಮೀನನ್ನು ಮಹಿಳೆಯರ ಅಂಗಡಿಗೆ ವರ್ಗಾಯಿಸುವಾಗ. ಇದಕ್ಕೆ ಕಾರಣವೆಂದರೆ ಗಂಡಸರು ರಾತ್ರಿ ಹೊತ್ತು ಮೀನು ಹಿಡಿಯಲು ಹೋಗಿ ಹಗಲಿನಲ್ಲಿ ಮಲಗುತ್ತಾರೆ. ಆ ಸಮಯದಲ್ಲಿ ಮಹಿಳೆಯರು ಮೀನು ಮಾರಲು ಮಾರುಕಟ್ಟೆಯಲ್ಲಿರುತ್ತಾರೆ.

ಇಲ್ಲಿಗೆ ವಾಕಿಂಗ್‌ ಮತ್ತು ಜಾಗಿಂಗ್‌ ಸಲುವಾಗಿ ಬರುವವರು ಸಹ ಈ ಜಾಗ ಸಾಂಪ್ರದಾಯಿಕವಾಗಿ ಮೀನುಗಾರರಿಗೆ ಸೇರಿದ್ದು ಎನ್ನುತ್ತಾರೆ. “ಬೆಳಗಿನ ಹೊತ್ತು ಇಲ್ಲಿಗೆ ಜನರು ದೊಡ್ಡ ಸಂಖ್ಯೆಯಲ್ಲಿ ಬರುತ್ತಾರೆ” ಎನ್ನುತ್ತಾರೆ 52 ವರ್ಷದ ಚಿಟ್ಟಿಬಾಬು. ಇವರು ಮರೀನಾ ತೀರದ ನಿಯಮಿತ ನಡಿಗೆದಾರ. “ಅವರು ವಿಶೇಷವಾಗಿ ಮೀನು ಖರೀದಿಸಲೆಂದೇ ಇಲ್ಲಿಗೆ ಬರುತ್ತಾರೆ… ಇದು ಅವರ [ಮೀನುಗಾರರ] ಪೂರ್ವಜರಿಂದ ಬಳುವಳಿಯಾಗಿ ಬಂದ ವ್ಯಾಪಾರ. [ಮತ್ತು] ಅವರು ಇಲ್ಲಿ ಬಹಳ ಹಿಂದಿನಿಂದಲೂ ಇದ್ದಾರೆ. ಅವರನ್ನು ಇಲ್ಲಿಂದ ಹೋಗುವಂತೆ ಹೇಳುವುದರಲ್ಲಿ ಯಾವುದೇ ಅರ್ಥವಿಲ್ಲ” ಎಂದು ಅವರು ಹೇಳುತ್ತಾರೆ.

ನೊಚ್ಚಿಕುಪ್ಪಂನ ಮೀನುಗಾರರಾದ ರಂಜಿತ್‌ ಕುಮಾರ್‌ (29) ಕೂಡಾ ಇದನ್ನು ಒಪ್ಪುತ್ತಾರೆ. “ಬೇರೆ ಬೇರೆ ಜನರು ಒಂದೇ ಸ್ಥಳವನ್ನು ಅವರ ಅಗತ್ಯಕ್ಕೆ ತಕ್ಕಂತೆ ಬಳಸಬಹುದು. ಉದಾಹರಣೆಗೆ, ನಡಿಗೆದಾರರು ಬೆಳಿಗ್ಗೆ 6-8 ತನಕ ಇರುತ್ತಾರೆ. ಆ ಸಮಯದಲ್ಲಿ ನಾವು ಕಡಲಿಗೆ ಹೋಗಿರುತ್ತೇವೆ. ನಾವು ಹಿಂತಿರುಗಿ, ಮಹಿಳೆಯರು ಅಂಗಡಿಗಳನ್ನು ಹಾಕುವ ಹೊತ್ತಿಗೆ ನಡಿಗೆಗೆ ಬಂದವರು ಹೋಗಿರುತ್ತಾರೆ. ನಮ್ಮ ಮತ್ತು ನಡಿಗೆದಾರರ ನಡುವೆ ಯಾವುದೇ ತಕರಾರಿಲ್ಲ. ಅಧಿಕಾರಿಗಳಷ್ಟೇ ಸಮಸ್ಯೆಯನ್ನು ಸೃಷ್ಟಿಸುತ್ತಾರೆ” ಎಂದು ಅವರು ಹೇಳುತ್ತಾರೆ.

*****

ಈ ಮಾರುಕಟ್ಟೆಯಲ್ಲಿ ವಿವಿಧ ಬಗೆಯ ಮೀನುಗಳು ಲಭ್ಯವಿವೆ. ಮೇಲ್ಮಟ್ಟದ ನೀರಿನಲ್ಲಿ ಸಿಗುವ ಗೋರಿ ಮೀನು (ಜರ್ಬುವಾ ಟರ್ಬೈನ್ ಪ್ರೊಪಿಯಾನ್), ಗುರುಕ (ಡೆವೆಕ್ಸಿಮೆಂಟಮ್ ಇನ್ಸಿಡೇಟರ್) ರೀತಿಯ ಮೀನುಗಳು ಇಲ್ಲಿ ಕೇಜಿಗೆ 200-300 ರೂಪಾಯಿಯಂತೆ ಇಲ್ಲಿ ಲಭ್ಯ. ಈ ಮೀನುಗಳನ್ನು ಊರಿನ 20 ಕಿಲೋಮೀಟರ್‌ ವ್ಯಾಪ್ತಿಯೊಳಗೆ ಹಿಡಿಯಲಾಗುತ್ತದೆ. ಮಾರುಕಟ್ಟೆಯ ಇನ್ನೊಂದು ಬದಿಯಲ್ಲಿ ಮಾರಾಟವಾಗುವ ಅಂಜಲ್‌ (ಸ್ಕೋಂಬೆರೊಮೊರಸ್ ಕಮರ್ಸನ್) ರೀತಿಯ ದೊಡ್ಡ ಮತ್ತು ಹೆಚ್ಚಿನ ಮೌಲ್ಯದ ಪ್ರಭೇದಗಳು ಸಾಮಾನ್ಯವಾಗಿ ಕಿಲೋ ಒಂದಕ್ಕೆ 900-1000 ರೂ.ಗೆ ಮಾರಾಟ ಮಾಡಲಾಗುತ್ತದೆ ಮತ್ತು ದೊಡ್ಡ ಕೊಕ್ಕರ್‌ ಮೀನುಗಳು ಇಲ್ಲಿ 500-700 ರೂಪಾಯಿಗಳಿಗೆ ಲಭ್ಯವಿವೆ. ಇಲ್ಲಿನ ಮೀನುಗಾರರು ತಾವು ಮಾರಾಟ ಮಾಡುವ ಈ ಪ್ರಭೇದಗಳಿಗೆ ಕೀಚನ್, ಕಾರಪೊಡಿ, ವಂಜರಮ್, ಪಾರೈ ಎನ್ನುವ ಸ್ಥಳೀಯ ಹೆಸರುಗಳನ್ನು ಬಳಸುತ್ತಾರೆ.

ಸೂರ್ಯನ ಬಿಸಿಲಿಗೆ ಮೀನು ಹಾಳಾಗುವ ಮೊದಲೇ ಅದನ್ನು ಮಾರಬೇಕಾದ ಅನಿವಾರ್ಯತೆಯೂ ಈ ವ್ಯವಹಾರದಲ್ಲಿದೆ. ಇಲ್ಲಿಗೆ ಬರುವ ಸೂಕ್ಷ್ಮ ಕಣ್ಣುಗಳ ಗ್ರಾಹಕರು ಕೆಟ್ಟು ಹೋಗಲು ಆರಂಭವಾಗಿರುವ ಮೀನುಗಳನ್ನು ಗುರುತಿಸಿ ಥಟ್ಟನೆ ಪ್ರತ್ಯೇಕಿಸಬಲ್ಲರು.

PHOTO • Manini Bansal
PHOTO • Sriganesh Raman

ಎಡ: ನೊಚ್ಚಿಕುಪ್ಪಂನಲ್ಲಿ ಮೀನು ಮಾರಾಟಗಾರ ಮಹಿಳೆಯೊಬ್ಬರು ತನ್ನ ಮೀನುಗಳನ್ನು ವಿಂಗಡಿಸುತ್ತಿರುವುದು. ಬಲ: ಮೀನುಗಾರ ಮಹಿಳೆಯರು ಮಾರುಕಟ್ಟೆ ರಸ್ತೆಯಲ್ಲಿ ಮೀನುಗಳನ್ನು ಸ್ವಚ್ಛಗೊಳಿಸುತ್ತಿರುವುದು

PHOTO • Abhishek Gerald
PHOTO • Manini Bansal

ಎಡ: ನೊಚ್ಚಿಕುಪ್ಪಂನಲ್ಲಿ ಬಂಗುಡೆ ಮೀನುಗಳನ್ನು ಒಣಹಾಕಿರುವುದು. ಬಲ: ಮಾರಾಟಕ್ಕಿಟ್ಟಿರುವ ಕುರ್ಲಿ, ಹೊಳೆಬೈಗೆ ಇತ್ಯಾದಿ ಮೀನುಗಳ ಪಾಲು

“ಬಹಳಷ್ಟು ಮೀನು ಮಾರದೆ ಹೋದರೆ ಮಕ್ಕಳ ಶಾಲಾ ಶುಲ್ಕವನ್ನು ಯಾರು ಕಟ್ಟುತ್ತಾರೆ?” ಎಂದು ಗೀತಾ ಕೇಳುತ್ತಾರೆ. ಅವರಿಗೆ ಇಬ್ಬರು ಮಕ್ಕಳು. ಒಂದು ಮಗು ಸರ್ಕಾರಿ ಶಾಲೆಗೆ ಹೋಗುತ್ತದೆ ಮತ್ತು ಇನ್ನೊಬ್ಬರು ಕಾಲೇಜಿಗೆ ಹೋಗುತ್ತಾರೆ. “ನಾನು ಪ್ರತಿದಿನ ಗಂಡ ಹಿಡಿದು ತರುವ ಮೀನಿನ ಮೇಲೆಯೇ ಅವಲಂಬಿತಳಾಗಲು ಸಾಧ್ಯವಿಲ್ಲ. ಮುಂಜಾನೆ 2 ಗಂಟೆಗೆ ಎದ್ದು ಕಾಸಿಮೇಡುವಿಗೆ (ನೊಚ್ಚಿಕುಪ್ಪಂನಿಂದ ಉತ್ತರಕ್ಕೆ 10 ಕಿಲೋಮೀಟರ್ ದೂರ) ಹೋಗಿ ಅಲ್ಲಿ ಮೀನು ಖರೀದಿಸಬೇಕು. ಮತ್ತೆ ಸಮಯಕ್ಕೆ ಸರಿಯಾಗಿ ಅಂಗಡಿ ಹಾಕಲು ಇಲ್ಲಿಗೆ ಮರಳಬೇಕು. ಇಷ್ಟು ಮಾಡದೆ ಹೋದರೆ ಸ್ಕೂಲ್‌ ಫೀಸ್‌ ಬಿಡಿ, ಊಟಕ್ಕೂ ಇರುವುದಿಲ್ಲ” ಎಂದು ಅವರು ಹೇಳುತ್ತಾರೆ.

ತಮಿಳುನಾಡಿನಲ್ಲಿ ಸಮುದ್ರ ಮೀನುಗಾರಿಕೆಯಲ್ಲಿ ತೊಡಗಿರುವ 608 ಹಳ್ಳಿಗಳ 10.48 ಲಕ್ಷ ಮೀನುಗಾರರಲ್ಲಿ ಅರ್ಧದಷ್ಟು ಮಹಿಳೆಯರು. ಮತ್ತು ಮುಖ್ಯವಾಗಿ ಕುಗ್ರಾಮದ ಮಹಿಳೆಯರು ತಾತ್ಕಾಲಿಕ ಮಳಿಗೆಗಳನ್ನು ನಡೆಸುತ್ತಾರೆ. ಇವರ ನಿಖರವಾದ ಆದಾಯದ ಅಂಕಿಅಂಶಗಳನ್ನು ಕಂಡುಹಿಡಿಯುವುದು ಕಷ್ಟ, ಆದರೆ ನೊಚ್ಚಿಕುಪ್ಪಂನಲ್ಲಿ ವ್ಯಾಪಾರ ಮಾಡುವ ಮೀನುಗಾರರು ಮತ್ತು ಮಾರಾಟಗಾರರು ದೂರದ, ಸರ್ಕಾರಿ ಅನುಮೋದಿತ ಬಂದರು ಕಾಸಿಮೇಡು ಅಥವಾ ಇತರ ಒಳಾಂಗಣ ಮಾರುಕಟ್ಟೆಗಳಿಗೆ ಹೋಲಿಸಿದರೆ ತುಲನಾತ್ಮಕವಾಗಿ ಉತ್ತಮ ಜೀವನವನ್ನು ನಡೆಸುತ್ತಾರೆ ಎಂದು ಮಹಿಳೆಯರು ಹೇಳುತ್ತಾರೆ.

“ವಾರದ ಕೊನೆಯ ದಿನಗಳಲ್ಲಿ ನಮಗೆ ವ್ಯಾಪಾರ ಚೆನ್ನಾಗಿರುತ್ತದೆ” ಎಂದು ಗೀತಾ ಹೇಳುತ್ತಾರೆ. ಪ್ರತಿ ಮಾರಾಟದಿಂದ ನಾನು ಸರಿಸುಮಾರು 300 ರಿಂದ 500 ರೂಪಾಯಿಗಳನ್ನು ಗಳಿಸುತ್ತೇನೆ. ಆ ದಿನಗಳಲ್ಲಿ ಅಂಗಡಿ ತೆರೆದಾಗಿನಿಂದ (ಬೆಳಿಗ್ಗೆ 8:30 - 9 ಗಂಟೆ) ಮಧ್ಯಾಹ್ನ 1 ಗಂಟೆಯವರೆಗೆ ನಿರಂತರ ವ್ಯಾಪಾರ ಮಾಡುತ್ತೇನೆ. ಆದರೆ ಇಷ್ಟೇ ವ್ಯಾಪಾರ ಮಾಡುತ್ತೇನೆ ಎಂದು ಹೇಳುವುದು ಕಷ್ಟ. ಏಕೆಂದರೆ ನಾನು ಬೆಳಿಗ್ಗೆ ಹೋಗಿ ಮೀನು ಖರೀದಿಸಲು ಖರ್ಚು ಮಾಡಬೇಕಾಗುತ್ತದೆ, ಮತ್ತು ನಾನು ಖರ್ಚು ಮಾಡುವ ಮೊತ್ತವು ಯಾವ ಜಾತಿ ಮತ್ತು ಪ್ರತಿ ದಿನ ನನಗೆ ಸಿಗುವ ಮೀನಿನ ಬೆಲೆಯನ್ನು ಅವಲಂಬಿಸಿ ಬದಲಾಗುತ್ತದೆ."

ಉದ್ದೇಶಿತ ಒಳಾಂಗಣ ಮಾರುಕಟ್ಟೆಗೆ ಸ್ಥಳಾಂತರಗೊಂಡರೆ ಆದಾಯದಲ್ಲಿ ಕುಸಿತ ಕಾಣಬಹುದೆನ್ನುವ ಭಯವು ಅವರೆಲ್ಲರನ್ನೂ ದೊಡ್ಡ ಮಟ್ಟದಲ್ಲಿ ಕಾಡುತ್ತಿದೆ. "ಇಲ್ಲಿ ನಮ್ಮ ಸಂಪಾದನೆಯಿಂದ, ನಮ್ಮ ಮನೆಯನ್ನು ನಡೆಸಲು ಮತ್ತು ಮಕ್ಕಳನ್ನು ನೋಡಿಕೊಳ್ಳಲು ಸಾಧ್ಯವಾಗುತ್ತದೆ" ಎಂದು ಕಡಲತೀರದ ಮೀನುಗಾರ ಮಹಿಳೆ ಹೇಳುತ್ತಾರೆ. "ನನ್ನ ಮಗ ಕೂಡ ಕಾಲೇಜಿಗೆ ಹೋಗುತ್ತಾನೆ! ಮೀನು ಖರೀದಿಸಲು ಯಾರೂ ಬಾರದ ಮಾರುಕಟ್ಟೆಗೆ ನಾವು ಹೋದರೆ ನಾನು ಅವನನ್ನು ಮತ್ತು ನನ್ನ ಇತರ ಮಕ್ಕಳನ್ನು ಕಾಲೇಜಿಗೆ ಸೇರಿಸುವುದು ಹೇಗೆ? ಸರ್ಕಾರ ಅದನ್ನೂ ನೋಡಿಕೊಳ್ಳುತ್ತದೆಯೇ?" ಎಂದು ಅವರು ಪ್ರಶ್ನಿಸಿಸುತ್ತಾರೆ. ಅವರು ಅಸಮಾಧಾನದಲ್ಲಿರುವ ಅವರು ಸರ್ಕಾರದ ಕುರಿತು ದೂರಿ ಮಾತನಾಡುವುದರಿಂದ ಉಂಟಾಗಬಹುದಾದ ಪರಿಣಾಮಗಳ ಕುರಿತು ಭಯಭೀತರಾಗಿದ್ದರು.

ಬೆಸೆಂಟ್ ನಗರ ಬಸ್ ನಿಲ್ದಾಣದ ಬಳಿಯ ಮತ್ತೊಂದು ಒಳಾಂಗಣ ಮೀನು ಮಾರುಕಟ್ಟೆಗೆ ಸ್ಥಳಾಂತರಗೊಳ್ಳುವಂತೆ ಒತ್ತಾಯಿಸಲ್ಪಟ್ಟ ಮಹಿಳೆಯರಲ್ಲಿ ಒಬ್ಬರಾದ 45 ವರ್ಷದ ಆರ್.ಉಮಾ, "ನೊಚ್ಚಿಕುಪ್ಪಂನಲ್ಲಿ 300 ರೂ.ಗೆ ಮಾರಾಟವಾಗುವ ಹುಚ್ಚು ಪಯ್ಯ (ಸ್ಕಾಟೊಫಾಗಸ್ ಆರ್ಗುಸ್) ಮೀನು ಬೆಸೆಂಟ್ ನಗರ ಮಾರುಕಟ್ಟೆಯಲ್ಲಿ 150 ರೂ.ಗಿಂತ ಹೆಚ್ಚು ಬೆಲೆಗೆ ಮಾರಾಟವಾಗುವುದಿಲ್ಲ. ನಾವು ಈ ಮಾರುಕಟ್ಟೆಯಲ್ಲಿ ಬೆಲೆಯನ್ನು ಹೆಚ್ಚಿಸಿದರೆ, ಯಾರೂ ಖರೀದಿಸುವುದಿಲ್ಲ. ಸುತ್ತಲೂ ನೋಡಿ, ಮಾರುಕಟ್ಟೆಯ ಉತ್ಸಾಹವೇ ಇಲ್ಲ, ಮತ್ತು ಮೀನು ಕೆಡತೊಡಗಿದೆ. ಇಲ್ಲಿಗೆ ಯಾರು ಬಂದು ಖರೀದಿಸುತ್ತಾರೆ? ನಾವು ಕಡಲತೀರದಲ್ಲಿ ತಾಜಾ ಮೀನುಗಳನ್ನು ಮಾರಾಟ ಮಾಡಲು ಇಷ್ಟಪಡುತ್ತೇವೆ, ಆದರೆ ಅಧಿಕಾರಿಗಳು ನಮಗೆ ಅದಕ್ಕೆ ಅನುಮತಿಸುವುದಿಲ್ಲ. ಅವರು ನಮ್ಮನ್ನು ಈ ಒಳಾಂಗಣ ಮಾರುಕಟ್ಟೆಗೆ ಸ್ಥಳಾಂತರಿಸಿದ್ದಾರೆ. ಹೀಗಾಗಿ ನಾವೀಗ ಕಡಿಮೆ ಬೆಲೆಗೆ ಮೀನು ಮಾರಿ ಸಣ್ಣ ಸಂಪಾದನೆಯಲ್ಲೇ ಬದುಕಬೇಕು. ನೊಚ್ಚಿಕುಪ್ಪಂನ ಮಹಿಳೆಯರು ಅಲ್ಲಿಂದ ಹೋಗಲು ಯಾಕೆ ಪ್ರತಿಭಟಿಸುತ್ತಿದ್ದಾರೆನ್ನುವುದು ನಮಗೆ ಅರ್ಥವಾಗಿದೆ. ನಾವೂ ಹಾಗೆ ಮಾಡಬೇಕಿತ್ತು.”

PHOTO • Manini Bansal
PHOTO • Manini Bansal

ಎಡಕ್ಕೆ: ಮರೀನಾ ಲೈಟ್ ಹೌಸ್ ಪ್ರದೇಶಕ್ಕೆ ವಾಕಿಂಗ್ ಬರುವ ಚಿಟ್ಟಿಬಾಬು ನಿಯಮಿತವಾಗಿ ಮಾರುಕಟ್ಟೆಗೆ ಬರುತ್ತಾರೆ. ಬಲ: ಹಿರಿಯ ಮೀನುಗಾರ ಕೃಷ್ಣರಾಜ್, ನೊಚ್ಚಿಕುಪ್ಪಂ ಮಾರುಕಟ್ಟೆಯ ಸ್ಥಳಾಂತರದ ಬಗ್ಗೆ ತಮ್ಮ ಬೇಸರವನ್ನು ಹಂಚಿಕೊಳ್ಳುತ್ತಾರೆ

ಕಡಲತೀರದಲ್ಲಿ ಮೀನು ಖರೀದಿಸುವವರೂ ಆಗಿರುವ ಚಿಟ್ಟಿಬಾಬು, "ನೊಚ್ಚಿಕುಪ್ಪಂ ಮಾರುಕಟ್ಟೆಯಲ್ಲಿ ತಾಜಾ ಮೀನುಗಳನ್ನು ಖರೀದಿಸಲು ಹೆಚ್ಚು ಬೆಲೆ ತೆರುತ್ತೇನೆ ಎನ್ನುವುದು ನನಗೆ ತಿಳಿದಿದೆ, ಆದರೆ ಗುಣಮಟ್ಟದ ಬಗ್ಗೆ ನನಗೆ ಭರವಸೆ ಇದ್ದರೆ ಆ ಕುರಿತು ಆಕ್ಷೇಪವಿಲ್ಲ" ಎಂದು ಹೇಳುತ್ತಾರೆ. ನೊಚ್ಚಿಕುಪ್ಪಂನ ಕೊಳಕು ಮತ್ತು ದುರ್ವಾಸನೆಯ ಕುರಿತು ಅವರು ಹೇಳುತ್ತಾರೆ, "ಕೊಯಂಬೇಡು ಮಾರುಕಟ್ಟೆ (ಹಣ್ಣು, ಹೂವು ಮತ್ತು ತರಕಾರಿ ಮಾರುಕಟ್ಟೆ) ಯಾವಾಗಲೂ ಸ್ವಚ್ಛವಾಗಿರುತ್ತದೆಯೇ? ಎಲ್ಲಾ ಮಾರುಕಟ್ಟೆಗಳೂ ಗಲೀಜಾಗಿರುತ್ತವೆ. ಈ ವಿಷಯದಲ್ಲಿ ತೆರೆದ ಮಾರುಕಟ್ಟೆಗಳು ಎಷ್ಟೋ ಉತ್ತಮ."

“ಬೀಚ್‌ ಮಾರ್ಕೆಟ್‌ ವಾಸನೆ ಬರಬಹುದು ಆದರೆ ಸೂರ್ಯನ ಬಿಸಿಲಿಗೆ ಎಲ್ಲವೂ ಒಣಗುತ್ತಿರುತ್ತದೆ. ಹೊತ್ತು ಕಳೆದಂತೆ ಅದೆಲ್ಲ ಹೊರಟುಹೋಗುತ್ತೆ. ಸೂರ್ಯ ಕೊಳೆಯನ್ನು ಸ್ವಚ್ಛಗೊಳಿಸುತ್ತಾನೆ” ಎಂದು ಸರೋಜ ಹೇಳುತ್ತಾರೆ.

“ಕಸದ ಗಾಡಿಗಳು ಮನೆಗೆ ಬಂದು ಕಸವನ್ನು ಕೊಂಡು ಹೋಗುತ್ತವೆ. ಆದರೆ ಮಾರುಕಟ್ಟೆಗೆ ಬರುವುದಿಲ್ಲ” ಎಂದು ನೊಚ್ಚಿಕುಪ್ಪಂನ 75 ವರ್ಷದ ಮೀನುಗಾರ ಕೃಷ್ಣರಾಜ್ ಆರ್ ಹೇಳುತ್ತಾರೆ. "ಅವರು [ಸರ್ಕಾರ] ಈ [ಲೂಪ್ ರೋಡ್ ಮಾರ್ಕೆಟ್] ಸ್ಥಳವನ್ನು ಸಹ ಸ್ವಚ್ಛವಾಗಿಡಬೇಕು."

"ಸರ್ಕಾರವು ತನ್ನ ನಾಗರಿಕರಿಗೆ ಅನೇಕ ನಾಗರಿಕ ಸೇವೆಗಳನ್ನು ನೀಡುತ್ತದೆ, ಆದ್ದರಿಂದ ಈ [ಲೂಪ್] ರಸ್ತೆಯ ಸುತ್ತಮುತ್ತಲಿನ ಪ್ರದೇಶಗಳನ್ನು ಸಹ ಏಕೆ ಸ್ವಚ್ಛಗೊಳಿಸಬಾರದು? ಅವರು [ಸರ್ಕಾರ] ಸ್ವಚ್ಛಗೊಳಿಸುವುದು ನಮಗೆ ಸೇರಿದ್ದು ಬೇರೆ ವಿಷಯಗಳಿಗೆ ಇದು ನಮಗೆ ಸೇರಿದ್ದಲ್ಲ ಎನ್ನುವುದನ್ನು ಸಾಧಿಸುತ್ತಿದ್ದಾರೆಯೇ?" ಎಂದು ಪಾಲಯಂ ಪ್ರಶ್ನಿಸುತ್ತಾರೆ.

"ಸರ್ಕಾರ ಶ್ರೀಮಂತರಿಗೆ ಮಾತ್ರ ಅನುಕೂಲ ಮಾಡಿಕೊಡುತ್ತದೆ. ಅದು ಅವರಿಗಾಗಿ ನಡಿಗೆಯ ಹಾದಿಗಳು, ರೋಪ್‌ ಕಾರ್ ಮತ್ತು ಇತರ ಯೋಜನೆಗಳನ್ನು ನಿರ್ಮಿಸುತ್ತದೆ. ಇದನ್ನೆಲ್ಲ ಮಾಡಲು ಅವರು ಸರ್ಕಾರಕ್ಕೆ ಹಣ ಕೊಡುತ್ತಿರಬಹುದು. ಸರ್ಕಾರ ಈ ಕೆಲಸಗಳನ್ನು ಮಾಡಿಸಲು ಮಧ್ಯವರ್ತಿಗಳಿಗೆ ಹಣ ಕೊಡುತ್ತದೆ.”

PHOTO • Manini Bansal
PHOTO • Manini Bansal

ಎಡ: ನೊಚ್ಚಿಕುಪ್ಪಂ ಕಡಲ ತೀರದಲ್ಲಿ ಮೀನುಗಾರನೊಬ್ಬ ತನ್ನ ತನ್ನ ಬಲೆಯಿಂದ ಬೂತಾಯಿ (ಬೈಗೆ) ಮೀನುಗಳನ್ನು ತೆಗೆಯುತ್ತಿದ್ದಾನೆ. ಬಲ: ಕಣ್ಣದಾಸನ್ ಬಲೆಯಿಂದ ಮಣಂಗು ಜಬ್ಬು ಮೀನುಗಳನ್ನು ಬಿಡಿಸುತ್ತಿದ್ದಾರೆ

“ಮೀನುಗಾರನೊಬ್ಬ ಕಡಲ ತೀರದಲ್ಲಿದ್ದರೆ ಮಾತ್ರ ಬದುಕಬಲ್ಲ. ಅವನನ್ನು ನೀವು ಒಳನಾಡಿಗೆ ದೂಡಿದರೆ ಅವನು ಹೇಗೆ ಬದುಕಲು ಸಾಧ್ಯ? ಆದರೆ ಈ ವಿಷಯವಾಗಿ ಮೀನುಗಾರರು ಪ್ರತಿಭಟಿಸಿದರೆ, ಪ್ರತಿಭಟನಾಕಾರರನ್ನು ಜೈಲಿಗೆ ಹಾಕಲಾಗುತ್ತದೆ. ಮಧ್ಯಮ ವರ್ಗದ ಜನರು ಪ್ರತಿಭಟಿಸಿದರೆ, ಕೆಲವೊಮ್ಮೆ ಸರ್ಕಾರ ಕೇಳುತ್ತದೆ. ನಾವು ಜೈಲಿಗೆ ಹೋದರೆ ನಮ್ಮ ಕುಟುಂಬಗಳನ್ನು ಯಾರು ನೋಡಿಕೊಳ್ಳುತ್ತಾರೆ?" ಎಂದು ಕಣ್ಣದಾಸನ್ ಕೇಳುತ್ತಾರೆ. "ಆದರೆ ಇವೆಲ್ಲವೂ ಮೀನುಗಾರರ ಸಮಸ್ಯೆಗಳು, ಅವರನ್ನು ನಾಗರಿಕರಾಗಿ ನೋಡಲಾಗುವುದಿಲ್ಲ" ಎಂದು ಅವರು ಹೇಳುತ್ತಾರೆ.

“ಈ ಜಾಗ ವಾಸನೆಯೆನ್ನಿಸಿದರೆ ಅವರು ಇಲ್ಲಿಂದ ಹೋಗಲಿ” ಎಂದು ಗೀತಾ ಹೇಳುತ್ತಾರೆ. “ನಮಗೆ ಯಾರದ್ದೂ ಸಹಾಯ ಅಥವಾ ಉಪಕಾರ ಬೇಕಿಲ್ಲ. ಆದರೆ ನಾವು ತೊಂದರೆಗೆ, ಕಿರುಕುಳಕ್ಕೆ ಒಳಗಾಗಲು ಸಿದ್ಧರಿಲ್ಲ. ನಮಗೆ ಹಣ, ಮೀನು ಶೇಖರಣಾ ಪೆಟ್ಟಿಗೆ, ಸಾಲ, ಏನೂ ಬೇಡ. ನಮ್ಮನ್ನು ನಮ್ಮ ಪಾಡಿಗೆ ಇಲ್ಲಿ ಇರಲು ಬಿಟ್ಟರೆ ಅದೇ ದೊಡ್ಡ ಉಪಕಾರ” ಎಂದು ಅವರು ಹೇಳುತ್ತಾರೆ.

"ನೊಚಿಕುಪ್ಪಂನಲ್ಲಿ ಮಾರಾಟವಾಗುವ ಹೆಚ್ಚಿನ ಮೀನುಗಳು ಇಲ್ಲಿನ ದೋಣಿಗಳಿಂದಲೇ ಬರುತ್ತವೆ ಆದರೆ ಕೆಲವೊಮ್ಮೆ ನಾವು ಕಾಸಿಮೇಡುವಿನಿಂದಲೂ ತರುತ್ತೇವೆ" ಎಂದು ಗೀತಾ ಹೇಳುತ್ತಾರೆ. "ಮೀನುಗಳು ಎಲ್ಲಿಂದ ಬರುತ್ತವೆ ಎಂಬುದು ಮುಖ್ಯವಲ್ಲ, ನಾವೆಲ್ಲರೂ ಇಲ್ಲಿ ಮೀನು ವ್ಯಾಪಾರ ಮಾಡುತ್ತೇವೆ. ಯಾವಾಗಲೂ ಒಟ್ಟಿಗೆ ಇರುತ್ತೇವೆ. ನೋಡುವವರಿಗೆ ನಾವು ಕೂಗಾಡುತ್ತೇವೆ ಮತ್ತು ಪರಸ್ಪರ ಜಗಳವಾಡುತ್ತೇವೆ ಎನ್ನಿಸಬಹುದು, ಆದರೆ ಅವು ನಮ್ಮೊಳಗಿನ ಸಣ್ಣಪುಟ್ಟ ತಕರಾರು ಮಾತ್ರ. ಸಮಸ್ಯೆ ಎದುರಾದಾಗ ಪ್ರತಿಭಟಿಸಲು ನಾವು ಸದಾ ಒಗ್ಗಟ್ಟಾಗಿರುತ್ತೇವೆ. ನಮ್ಮ ಕೆಲಸವನ್ನು ಬದಿಗಿಟ್ಟು ನಾವು ಎದುರಿಸುತ್ತಿರುವ ಸಮಸ್ಯೆಗಳಿಗಾಗಿ ಮಾತ್ರವಲ್ಲ, ಇತರ ಮೀನುಗಾರಿಕಾ ಹಳ್ಳಿಗಳು ಎದುರಿಸುತ್ತಿರುವ ಸಮಸ್ಯೆಗಳಿಗೆ ಸಂಬಂಧಿಸಿದ ಪ್ರತಿಭಟನೆಯಲ್ಲಿಯೂ ಸೇರುತ್ತೇವೆ.

ಲೂಪ್ ರಸ್ತೆಯ ಉದ್ದಕ್ಕೂ ಮೂರು ಮೀನುಗಾರಿಕಾ ಕುಪ್ಪಂಗಳಲ್ಲಿನ ಸಮುದಾಯಗಳ ಎಲ್ಲರಿಗೂ ಹೊಸ ಮಾರುಕಟ್ಟೆಯಲ್ಲಿ ಸ್ಟಾಲ್ ಪಡೆಯುವ ಬಗ್ಗೆ ಅನಿಶ್ಚಿತತೆಯಿದೆ. "ಹೊಸ ಮಾರುಕಟ್ಟೆಯಲ್ಲಿ 352 ಮಳಿಗೆಗಳನ್ನು ರಚಿಸಲಾಗುವುದು" ಎಂದು ನೊಚ್ಚಿಕುಪ್ಪಂ ಮೀನುಗಾರಿಕಾ ಸೊಸೈಟಿಯ ಮುಖ್ಯಸ್ಥ ರಂಜಿತ್ ಹೇಳುತ್ತಾರೆ. "ನೊಚ್ಚಿಕುಪ್ಪಂನ ಮಾರಾಟಗಾರರಿಗೆ ಮಾತ್ರ ಅಂಗಡಿಗಳನ್ನು ನೀಡುವುದಾಗಿದ್ದರೆ ಇಲ್ಲಿರುವ ಸ್ಥಳ ಸಾಕಾಗುತ್ತಿತ್ತು. ಆದರೆ ಅಲ್ಲಿನ ಎಲ್ಲಾ ಮಾರಾಟಗಾರರಿಗೂ ಮಾರುಕಟ್ಟೆಯಲ್ಲಿ ಸ್ಥಳ ನಿಗದಿಪಡಿಸಲಾಗುವುದಿಲ್ಲ. ಲೂಪ್‌ ರಸ್ತೆಯ ಉದ್ದಕ್ಕೂ ಇರುವ 3 ಮೀನುಗಾರಿಕಾ ಕುಪ್ಪಂಗಳಿಗೆ ಇಲ್ಲಿ ಸ್ಥಳಾವಕಾಶ ಕಲ್ಪಿಸಬೇಕಾಗಿದೆ – ನೊಚ್ಚಿಕುಪ್ಪಂನಿಂದ ಪಟ್ಟಿಣಪಕ್ಕಂ ತನಕ ಸಂಪೂರ್ಣ ವಿಸ್ತಾರವು ಸುಮಾರು 500 ಮಾರಾಟಗಾರರನ್ನು ಹೊಂದಿದೆ. 352 ಮಳಿಗೆಗಳನ್ನು ಹಂಚಿಕೆ ಮಾಡಿದ ನಂತರ ಉಳಿದವರು ಎಲ್ಲಿಗೆ ಹೋಗಬೇಕು. ಹೊಸ ಮಾರುಕಟ್ಟೆಯಲ್ಲಿ ಯಾರಿಗೆ ಜಾಗ ಕೊಡಬೇಕು? ಉಳಿದವರ ಗತಿಯೇನು ಎನ್ನುವುದರ ಕುರಿತು ಯಾವುದೇ ಸ್ಪಷ್ಟತೆಯಿಲ್ಲ” ಎಂದು ಅವರು ಹೇಳುತ್ತಾರೆ.

“ನಾನು ಪೋರ್ಟ್‌ ಸೇಂಟ್‌ ಜಾರ್ಜ್‌ [ವಿಧಾನಸಭೆ ಇರುವ ಸ್ಥಳ] ಬಳಿ ಹೋಗಿ ಮೀನು ಮಾರಲು ಕೂರುತ್ತೇನೆ. ಇಡೀ ಕುಪ್ಪಂ ನಮ್ಮ ಕೈಜಾರುತ್ತದೆ. ನಾವು ಅಲ್ಲಿಗೆ ಹೋಗಿ ಪ್ರತಿಭಟಿಸುತ್ತೇವೆ” ಎನ್ನುತ್ತಾರೆ ಅರಸು.

ಕೋರಿಕೆಯ ಮೇರೆಗೆ ಈ ವರದಿಯಲ್ಲಿ ಮಹಿಳೆಯರ ಹೆಸರುಗಳನ್ನು ಬದಲಾಯಿಸಲಾಗಿದೆ.

ಅನುವಾದ: ಶಂಕರ. ಎನ್. ಕೆಂಚನೂರು

Divya Karnad

Divya Karnad is an international award-winning marine geographer and conservationist. She is the co-founder of InSeason Fish. She also loves to write and report.

यांचे इतर लिखाण Divya Karnad
Photographs : Manini Bansal

Manini Bansal is a Bengaluru-based visual communication designer and photographer working in the field of conservation. She also does documentary photography.

यांचे इतर लिखाण Manini Bansal
Photographs : Abhishek Gerald

Abhishek Gerald is a marine biologist based in Chennai. He works on conservation and sustainable seafood with the Foundation for Ecological Research Advocacy and Learning and InSeason Fish.

यांचे इतर लिखाण Abhishek Gerald
Photographs : Sriganesh Raman

Sriganesh Raman is a marketing professional, who loves photography. He is a tennis player, who also writes blogs on a wide variety of topics. His association with Inseason Fish means learning a lot about the environment.

यांचे इतर लिखाण Sriganesh Raman
Editor : Pratishtha Pandya

प्रतिष्ठा पांड्या पारीमध्ये वरिष्ठ संपादक असून त्या पारीवरील सर्जक लेखन विभागाचं काम पाहतात. त्या पारीभाषासोबत गुजराती भाषेत अनुवाद आणि संपादनाचं कामही करतात. त्या गुजराती आणि इंग्रजी कवयीत्री असून त्यांचं बरंच साहित्य प्रकाशित झालं आहे.

यांचे इतर लिखाण Pratishtha Pandya
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

यांचे इतर लिखाण Shankar N. Kenchanuru