"ಕೆಲವೇ ದಿನಗಳ ಹಿಂದೆ ಮಂಡಲ ಹಾವೋಂದು ನನ್ನ ಪಾದದ ಬಳಿ ಬಂದು ದಾಳಿ ಮಾಡಲು ಸಿದ್ಧವಾಗಿತ್ತು. ನಾನು ಸಮಯಕ್ಕೆ ಸರಿಯಾಗಿ ಅದನ್ನು ನೋಡಿದೆ ”ಎಂದು ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಶೆಂದೂರು ಗ್ರಾಮದ ರೈತ ದತ್ತಾತ್ರೇಯ ಕಾಸೋಟೆ ಹೇಳಿದರು. ಅವರು ರಾತ್ರಿ ತಮ್ಮ ಹೊಲಕ್ಕೆ ನೀರು ಹಾಕಲು ಹೋಗುವಾಗ ಈ ಅಪಾಯಕಾರಿ ಹಾವು ಕಾಣಿಸಿಕೊಂಡಿತ್ತು.
ಕರ್ವೀರ ಮತ್ತು ಕಾಗಲ್ ನಂತಹ ವಿದ್ಯುತ್ ಸಂಪರ್ಕ ಸಮರ್ಪಕವಾಗಿ ಇಲ್ಲದ ತಾಲೂಕುಗಳಲ್ಲಿ ಕಾಸೋಟೆಯವರಂತಹ ರೈತರಿಗೆ ರಾತ್ರಿ ಹೋಗಿ ನೀರಿನ ಪಂಪ್‌ಗಳನ್ನು ಚಾಲುಮಾಡುವುದು ನಿತ್ಯ ಬದುಕಿನ ಭಾಗವಾಗಿ ಹೋಗಿದೆ.
ವಿದ್ಯುತ್ ನೀಡುವುದಕ್ಕೆ ಇಲ್ಲಿ ಸರಿಯಾದ ವೇಳಾಪಟ್ಟಿಯೇ ಇಲ್ಲ. ಕೆಲವೊಮ್ಮೆ ರಾತ್ರಿ ಇಲ್ಲವೇ ಹಗಲು ಬೇರೆ ಬೇರೆ ಸಮಯದಲ್ಲಿ ಬರುತ್ತದೆ ಮತ್ತು ಕಡ್ಡಾಯವಾಗಿ ನೀಡಲೇಬೇಕಾದ ಎಂಟು ಗಂಟೆಗಳ ವಿದ್ಯುತ್ ಪೂರೈಕೆಯನ್ನು ಕಡಿತ ಮಾಡುತ್ತಾರೆ ಹಾಗೂ ಆ ನಷ್ಟವನ್ನು ಮುಂದೆ ಭರಿಸುವುದೂ ಇಲ್ಲ.
ಇದರಿಂದ ಹೆಚ್ಚಿನ ನೀರಿನ ಅಗತ್ಯ ಇರುವ ಕಬ್ಬು ಬೆಳೆಗೆ ಸರಿಯಾದ ಸಮಯಕ್ಕೆ ನೀರುಣಿಸಲಾಗದೆ ಬೆಳೆ ಹಾಳಾಗಿ ಹೋಗುತ್ತದೆ. ರೈತರು ತಮ್ಮ ಅಸಹಾಯಕತೆಯನ್ನು ತೋಡಿಕೊಳ್ಳುತ್ತಿದ್ದಾರೆ ಮತ್ತು ತಮ್ಮ ಮಕ್ಕಳು ಜೀವನೋಪಾಯಕ್ಕೆ ಕೃಷಿಯನ್ನು ಆರಿಸಿಕೊಳ್ಳದಂತೆ ತಡೆಯುತ್ತಿದ್ದಾರೆ. ಯುವಕ-ಯುವತಿಯರು ತಿಂಗಳಿಗೆ 7,000-8,000 ರುಪಾಯಿ ಸಂಬಳ ಸಿಗುವ ಪಕ್ಕದ ಮಹಾರಾಷ್ಟ್ರ ಇಂಡಸ್ಟ್ರೀಯಲ್ ಡೆವಲಪ್‌ಮೆಂಟ್ ಕಾರ್ಪೋರೇಷನ್ (ಎಂಐಡಿಸಿ)ಯಲ್ಲಿ ಕೆಲಸ ಮಾಡುತ್ತಾರೆ.
“ಕಷ್ಟ ಅನುಭವಿಸುತ್ತಾ ಎಷ್ಟು ದುಡಿಮೆಯಲ್ಲಿ ತೊಡಗಿಸಿಕೊಂಡರೂ ಕೃಷಿ ಲಾಭದಾಯಕ ಆದಾಯವನ್ನು ಕೊಡುತ್ತಿಲ್ಲ. ಕೈಗಾರಿಕೆಗಳಲ್ಲಿ ದುಡಿದು ಉತ್ತಮ ಸಂಬಳ ಪಡೆಯುವುದೇ ಒಳ್ಳೆಯದು ಎನಿಸುತ್ತಿದೆ’ ಎನ್ನುತ್ತಾರೆ ಕರ್ವೀರದ ಯುವ ಕೃಷಿಕ ಶ್ರೀಕಾಂತ ಚೌಹಾನ್ ಹೇಳುತ್ತಾರೆ.
ಕೊಲ್ಲಾಪುರದ ರೈತರು ಮತ್ತು ಅವರ ಜೀವನೋಪಾಯದ ಮೇಲೆ ವಿದ್ಯುತ್ ಕೊರತೆ ಉಂಟು ಮಾಡಿರುವ ಪರಿಣಾಮಗಳ ಕುರಿತು ಒಂದು ಕಿರುಚಿತ್ರ.
ಅನುವಾದ: ಚರಣ್ ಐವರ್ನಾಡು