ಅವನಿಗೆ ವಿರಾಟ್‌ ಕೊಹ್ಲಿ ಆರಾಧ್ಯ ದೈವ. ಅವಳಿಗೆ ಬಾಬರ್‌ ಆಜಮ್‌ ಎಂದರೆ ಅಚ್ಚುಮೆಚ್ಚು. ಕೊಹ್ಲಿ ಸೆಂಚುರಿ ಹೊಡೆದಾಗಲೆಲ್ಲ ಅವನು ಅದನ್ನು ಅವಳಿಗೆ ತಿಳಿಸುತ್ತಿದ್ದ, ಮತ್ತು ಬಾಬರ್‌ ಚೆನ್ನಾಗಿ ಆಡಿದಾಗಲೆಲ್ಲ ಅವಳು ಅವನನ್ನು ರೇಗಿಸುತ್ತಿದ್ದಳು. ಕ್ರಿಕೆಟ್‌ ಜಗಳವೆನ್ನುವುದು ಆಯೇಷಾ ಮತ್ತು ನೂರುಲ್‌ ಹಸನ್‌ರ ಪ್ರೇಮದ ಭಾಷೆಯಾಗಿತ್ತು. ಅವರ ಪ್ರೇಮ ಯಾವ ಮಟ್ಟಿಗಿತ್ತೆಂದರೆ ಅಕ್ಕಪಕ್ಕದವರು ಅವರಿಬ್ಬರದು ಪ್ರೇಮ ವಿವಾಹವೆಂದು ನಂಬುವಷ್ಟು.

2023ರ ಜೂನ್‌ ತಿಂಗಳಿನಲ್ಲಿ ವಿಶ್ವಕಪ್‌ ಕ್ರಿಕೆಟ್‌ ವೇಳಾಪಟ್ಟಿ ಬಿಡುಗಡೆಯಾದ ಸಮಯದಲ್ಲಿ ಆಯೇಷಾರ ಕಣ್ಣುಗಳು ಬೆಳಗಿದವು. ಭಾರತ ಮತ್ತು ಪಾಕಿಸ್ಥಾನದ ನಡುವಿನ ಪಂದ್ಯವನ್ನು ಅಕ್ಟೋಬರ್‌ 14ರಂದು ಗುಜರಾತಿನ ಅಹ್ಮದಾಬಾದಿನಲ್ಲಿ ಆಯೋಜಿಸಲಾಗಿತ್ತು. “ನಾವು ಸ್ಟೇಡಿಯಮ್ಮಿಗೆ ಹೋಗಿ ಮ್ಯಾಚ್‌ ನೋಡೋಣ ಎಂದು ನೂರುಲ್‌ ಬಳಿ ಹೇಳಿದ್ದೆ” ಎಂದು 30 ವರ್ಷದ ಆಯೇಷಾ ಪಶ್ಚಿಮ ಮಹಾರಾಷ್ಟ್ರದ ರಾಜಾಚೆ ಕುರ್ಲೆಯಲ್ಲಿರುವ ತಮ್ಮ ತವರು ಮನೆಯಲ್ಲಿ ಕುಳಿತು ಹೇಳಿದರು. “ಭಾರತ ಮತ್ತು ಪಾಕಿಸ್ಥಾನ ಆಡುವುದು ಬಹಳ ಅಪರೂಪ. ಅದು ನಮ್ಮಿಬ್ಬರ ನೆಚ್ಚಿನ ಆಟಗಾರರು ಒಂದೇ ಪಂದ್ಯದಲ್ಲಿ ಆಡುವುದನ್ನು ನೋಡಲು ಅಪೂರ್ವ ಅವಕಾಶವಾಗಿತ್ತು.”

30 ವರ್ಷದ ನೂರುಲ್‌ ಹಲವು ಕರೆಗಳನ್ನು ಮಾಡುವ ಮೂಲಕ ಪಂದ್ಯಕ್ಕೆ ಎರಡು ಟಿಕೆಟ್‌ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಇದು ಗಂಡ ಹೆಂಡತಿಗೆ ಸಂಭ್ರಮ ಮೂಡಿಸಿತ್ತು. ಆ ಹೊತ್ತಿಗೆ ಆಯೇಷಾ ಆರು ತಿಂಗಳ ಗರ್ಭಿಣಿ. ಅವರು ಸತಾರಾ ಜಿಲ್ಲೆಯ ಪುಸೆಸಾವಲಿ ಗ್ರಾಮದಿಂದ 750 ಕಿಲೋಮೀಟರ್ ಪ್ರಯಾಣವನ್ನು ನಿಖರವಾಗಿ ಯೋಜಿಸಿದರು. ರೈಲು ಟಿಕೆಟ್ ಗಳನ್ನು ಕಾಯ್ದಿರಿಸಲಾಯಿತು ಮತ್ತು ವಸತಿ ವ್ಯವಸ್ಥೆ ಮಾಡಲಾಯಿತು. ಕಡೆಗೆ ಪಂದ್ಯದ ದಿನವೂ ಬಂದಿತು. ಆದರೆ ಅವರಿಬ್ಬರು ಆ ಪಂದ್ಯವನ್ನು ನೋಡಲು ಹೋಗಲಿಲ್ಲ.

ಅಕ್ಟೋಬರ್‌ 14, 2023ರ ಸೂರ್ಯ ಉದಯಿಸುವ ಹೊತ್ತಿಗೆ ನೂರುಲ್‌ ತೀರಿಕೊಂಡು ಒಂದು ತಿಂಗಳಾಗಿತ್ತು, ಮತ್ತು ಆಯೇಷಾ ದುಃಖದ ಕಡಲಿನಲ್ಲಿ ಮುಳುಗಿದ್ದರು.

*****

ಆಗಸ್ಟ್ 18, 2023 ರಂದು, ಮಹಾರಾಷ್ಟ್ರದ ಸತಾರಾ ನಗರದಿಂದ 60 ಕಿಲೋಮೀಟರ್ ದೂರದಲ್ಲಿರುವ ಪುಸೇಸಾವಲಿ ಎಂಬ ಹಳ್ಳಿಯಲ್ಲಿ ಒಂದು ಸ್ಕ್ರೀನ್‌ ಶಾಟ್‌ ವೈರಲ್‌ ಆಗಿತ್ತು. ಅದರಲ್ಲಿ ಗ್ರಾಮದ ಆದಿಲ್ ಬಗ್ವಾನ್ (25) ಎಂಬ ಮುಸ್ಲಿಂ ಯುವಕ ಇನ್ಸ್ಟಾಗ್ರಾಮ್ ಕಾಮೆಂಟ್‌ ಒಂದರಲ್ಲಿ ಹಿಂದೂ ದೇವರುಗಳನ್ನು ನಿಂದಿಸುತ್ತಿರುವುದು ಕಂಡುಬಂದಿದೆ. ಆದಿಲ್‌ ಇಂದಿಗೂ ಅದು ಮಾರ್ಫಿಂಗ್‌ ಮಾಡಲಾದ ಸ್ಕ್ರೀನ್‌ ಶಾಟ್‌ ಎನ್ನುತ್ತಾರೆ. ಅವರ ಇನ್ಸ್ಟಾಗ್ರಾಮ್‌ನಲ್ಲಿರುವ ಅವರ ಸ್ನೇಹಿತರು ಸಹ ತಾವು ಆ ಕಮೆಂಟ್‌ ನೋಡಿಲ್ಲ ಎಂದೇ ಹೇಳುತ್ತಾರೆ.

ಆದಾಗ್ಯೂ, ಕಾನೂನು ಮತ್ತು ಸುವ್ಯವಸ್ಥೆಗೆ ಯಾವುದೇ ಅಶಾಂತಿ ಉಂಟಾಗದಂತೆ ನೋಡಿಕೊಳ್ಳಲು, ಪುಸೇಸಾವಲಿಯ ಮುಸ್ಲಿಂ ಸಮುದಾಯದ ಹಿರಿಯ ಸದಸ್ಯರು ಅವರನ್ನು ಪೊಲೀಸರ ಬಳಿಗೆ ಕರೆದೊಯ್ದರು ಮತ್ತು ಸ್ಕ್ರೀನ್‌ ಶಾಟ್ ಬಗ್ಗೆ ತನಿಖೆ ನಡೆಸುವಂತೆ ಕೇಳಿಕೊಂಡರು. "ಆದಿಲ್ ತಪ್ಪಿತಸ್ಥನೆಂದು ಕಂಡುಬಂದರೆ, ಅವನಿಗೆ ಶಿಕ್ಷೆಯಾಗಬೇಕು ಮತ್ತು ನಾವು ಅದನ್ನು ಖಂಡಿಸುತ್ತೇವೆ ಎಂದು ನಾವು ಹೇಳಿದ್ದೆವು" ಎಂದು ಪುಸೆಸಾವಲಿ ಗ್ರಾಮದಲ್ಲಿ ಗ್ಯಾರೇಜ್ ನಡೆಸುತ್ತಿರುವ 47 ವರ್ಷದ ಸಿರಾಜ್ ಬಗ್ವಾನ್ ಹೇಳುತ್ತಾರೆ. "ಪೊಲೀಸರು ಆದಿಲ್‌ ಅವರ ಫೋನನ್ನು ವಶಪಡಿಸಿಕೊಂಡು ಅವರ ವಿರುದ್ಧ ಎರಡು ಧರ್ಮಗಳ ನಡುವೆ ದ್ವೇಷವನ್ನು ಹರಡಿದ್ದಕ್ಕಾಗಿ ದೂರು ದಾಖಲಿಸಿಕೊಂಡರು.

'We also said that if Adil is found guilty, he should be punished and we will condemn it,' says Siraj Bagwan, 47, who runs a garage in Pusesavali village
PHOTO • Parth M.N.

"ಆದಿಲ್ ತಪ್ಪಿತಸ್ಥನೆಂದು ಸಾಬೀತಾದರೆ, ಅವನಿಗೆ ಶಿಕ್ಷೆಯಾಗಬೇಕು ಮತ್ತು ನಾವು ಅದನ್ನು ಖಂಡಿಸುತ್ತೇವೆ ಎಂದು ನಾವು ಹೇಳಿದ್ದೆವು" ಎಂದು ಪುಸೆಸಾವಲಿ ಗ್ರಾಮದಲ್ಲಿ ಗ್ಯಾರೇಜ್ ನಡೆಸುತ್ತಿರುವ 47 ವರ್ಷದ ಸಿರಾಜ್ ಬಗ್ವಾನ್ ಹೇಳುತ್ತಾರೆ

ಆದರೂ, ಸತಾರಾದ ಹಿಂದೂ ಬಲಪಂಥೀಯ ಗುಂಪುಗಳ ಆಕ್ರೋಶಿತ ಸದಸ್ಯರು ಮರುದಿನ ಪುಸೇಸಾವಲಿಯಲ್ಲಿ ಮೆರವಣಿಗೆ ನಡೆಸಿ, ಮುಸ್ಲಿಮರ ವಿರುದ್ಧ ಸಾಮೂಹಿಕ ಹಿಂಸಾಚಾರಕ್ಕೆ ಕರೆ ನೀಡಿದರು. ಕಾನೂನು ಮತ್ತು ಸುವ್ಯವಸ್ಥೆಯನ್ನು ತಮ್ಮ ಕೈಯಲ್ಲಿ ತೆಗೆದುಕೊಳ್ಳುವುದಾಗಿ ಅವರು ಬೆದರಿಕೆ ಹಾಕಿದರು.

ಸ್ಕ್ರೀನ್‌ ಶಾಟ್ ಬಗ್ಗೆ ನ್ಯಾಯಯುತ ತನಿಖೆಗಾಗಿ ಸ್ಥಳೀಯ ಪೊಲೀಸ್ ಠಾಣೆಗೆ ಮನವಿ ಮಾಡಿದ್ದ ಸಿರಾಜ್ ಮತ್ತು ಮುಸ್ಲಿಂ ಸಮುದಾಯದ ಇತರ ಹಿರಿಯ ಸದಸ್ಯರು, ಘಟನೆಯೊಂದಿಗೆ ಯಾವುದೇ ಸಂಬಂಧವಿಲ್ಲದ ಪುಸೇಸಾವಲಿಯ ಇತರ ಮುಸ್ಲಿಂ ನಿವಾಸಿಗಳಿಗೆ ಭದ್ರತೆ ನೀಡುವಂತೆ ಮನವಿ ಮಾಡಿದರು. "ಗಲಭೆಯ ಬಲವಾದ ಸಾಧ್ಯತೆ ಇದೆ ಎಂದು ನಾವು ಪೊಲೀಸರಿಗೆ ತಿಳಿಸಿದ್ದೆವು" ಎಂದು ಸಿರಾಜ್ ನೆನಪಿಸಿಕೊಳ್ಳುತ್ತಾರೆ. "ನಾವು ಕೆಲವು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಮನವಿ ಸಲ್ಲಿಸಿದ್ದೆವು."

ಪುಸೇವಲಿ ಔಂಧ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುತ್ತದೆ. ಅಲ್ಲಿನ ಸಹಾಯಕ ಪೊಲೀಸ್ ಇನ್ಸ್ಪೆಕ್ಟರ್ ಗಂಗಾಪ್ರಸಾದ್ ಕೇಂಡ್ರೆ ತಮ್ಮನ್ನು ಗೇಲಿ ಮಾಡಿದ್ದಾಗಿ ಸಿರಾಜ್‌ ಹೇಳುತ್ತಾರೆ. “ಅವರು ನಮ್ಮ ಬಳಿ ಸಾಮಾನ್ಯ ಮನುಷ್ಯರಾದ ಪೈಗಂಬರರನ್ನು ಯಾಕೆ ಅನುಸರಿಸುತ್ತೀರಿ ಎಂದು ಕೇಳಿದರು. ಓರ್ವ ಯೂನಿಫಾರ್ಮ್‌ ಧರಿಸಿದ ಮನುಷ್ಯ ಹೀಗೆ ಮಾತಾಡುವುದನ್ನು ಊಹಿಸಿಕೊಳ್ಳುವುದು ಸಹ ನನ್ನಿಂದ ಸಾಧ್ಯವಿರಲಿಲ್ಲ” ಎಂದು ಅವರು ಅಂದಿನ ಘಟನೆಯನ್ನು ನೆನಪಿಸಿಕೊಳ್ಳುತ್ತಾರೆ.

ಮುಂದಿನ ಎರಡು ವಾರಗಳ ಕಾಲ, ಹಿಂದೂ ಏಕ್ತಾ ಮತ್ತು ಶಿವಪ್ರತಿಷ್ಠಾನ್ ಹಿಂದೂಸ್ತಾನ್ ಎಂಬ ಎರಡು ತೀವ್ರಗಾಮಿ ಬಲಪಂಥೀಯ ಗುಂಪುಗಳ ಸದಸ್ಯರು ಪುಸೇಸಾವಲಿಯಲ್ಲಿ ಕೈಗೆ ಸಿಕ್ಕ ಮುಸ್ಲಿಂ ಗಂಡಸರನ್ನು ಅಡ್ಡಗಟ್ಟಿ 'ಜೈ ಶ್ರೀ ರಾಮ್' ಎಂದು ಕೂಗುವಂತೆ ಒತ್ತಾಯಿಸುತ್ತಿದ್ದರು, ಅವರ ಮನೆಗಳನ್ನು ಸುಟ್ಟುಹಾಕುವುದಾಗಿ ಬೆದರಿಕೆ ಹಾಕುತ್ತಿದ್ದರು. ಈ ಸಮಯದಲ್ಲಿ ಇಡೀ ಊರು ಅಪಾಯದಲ್ಲಿತ್ತು. ಅಲ್ಲಿ ಆತಂಕ ಮನೆ ಮಾಡಿತ್ತು.

ಸೆಪ್ಟೆಂಬರ್ 8ರಂದು, ಮುಜಮ್ಮಿಲ್ ಬಗ್ವಾನ್ (23) ಮತ್ತು ಅಲ್ತಮಾಶ್ ಬಗ್ವಾನ್ (23) ಅವರ ಹೆಸರಿನಲ್ಲಿ ಇದೇ ರೀತಿಯ ಇನ್ನೂ ಎರಡು ಸ್ಕ್ರೀನ್‌ ಶಾಟ್‌ಗಳು ವೈರಲ್ ಆಗಿದ್ದವು. ಇಬ್ಬರೂ ಪುಸೇಸಾವಲಿ ನಿವಾಸಿಗಳಾಗಿದ್ದು, ಆದಿಲ್‌ ಅವರಂತೆಯೇ ಇನ್ಸ್ಟಾಗ್ರಾಮ್ ಪೋಸ್ಟಿನಲ್ಲಿ ಹಿಂದೂ ದೇವರುಗಳನ್ನು ನಿಂದಿಸುತ್ತಿರುವುದು ಕಂಡುಬಂದಿದೆ. ಆದಿಲ್‌ ಅವರಂತಯೇ, ಇಬ್ಬರೂ ಯುವಕರು ಸಹ ಸ್ಕ್ರೀನ್‌ ಶಾಟ್‌ಗಳನ್ನು ಫೋಟೋಶಾಪ್ ಮಾಡಲಾಗಿದೆ ಎಂದು ಹೇಳುತ್ತಾರೆ. ಈ ಪೋಸ್ಟ್ ಹಿಂದೂಗಳ ವಿರುದ್ಧ ಮುಸ್ಲಿಂ ಪುರುಷರು ಮಾಡಿದ ನಿಂದನೆಗಳ ಕೊಲಾಜ್ ಆಗಿತ್ತು.

ಉಗ್ರ ಬಲಪಂಥೀಯ ಗುಂಪುಗಳೇ ಈ ಪೋಸ್ಟರುಗಳನ್ನು ತಯಾರಿಸಿವೆ ಎಂದು ಆರೋಪಿಸಲಾಗಿದೆ.

ಇದೆಲ್ಲ ಆಗಿ ಐದು ತಿಂಗಳಿಗೂ ಹೆಚ್ಚು ಸಮಯ ಕಳೆದಿದೆ, ಮತ್ತು ಪೊಲೀಸರು ಇನ್ನೂ ಈ ಮೂರು ಸ್ಕ್ರೀನ್‌ ಶಾಟ್‌ಗಳ ಸತ್ಯಾಸತ್ಯತೆಯ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ಆದರೆ ಈ ಪ್ರಕರಣ ತಾನು ಮಾಡಬೇಕೆಂದುಕೊಂಡಿದ್ದ ಹಾನಿಯನ್ನು ಮಾಡಿದೆ. ಈಗಾಗಲೇ ಕೋಮು ಉದ್ವಿಗ್ನತೆಯಲ್ಲಿದ್ದ ಗ್ರಾಮದಲ್ಲಿ ಹಿಂಸಾಚಾರ ಹರಡಿತು. ಸೆಪ್ಟಂಬರ್ 9ರಂದು ಪುಸೇಸಾವಲಿಯಲ್ಲಿ ಸ್ಥಳೀಯ ಮುಸ್ಲಿಮರು ಮುಂಜಾಗ್ರತಾ ಕ್ರಮ ಕೈಗೊಳ್ಳಲು ಮಾಡಿದ ಪ್ರಯತ್ನ ಫಲ ನೀಡಲಿಲ್ಲ.

ಸೆಪ್ಟೆಂಬರ್ 10ರಂದು ಸೂರ್ಯಾಸ್ತದ ನಂತರ ನೂರಕ್ಕೂ ಹೆಚ್ಚು ಬಲಪಂಥೀಯ ಹಿಂದೂಗಳ ಗುಂಪು ಗ್ರಾಮಕ್ಕೆ ನುಗ್ಗಿ, ಮುಸ್ಲಿಮರ ಒಡೆತನದ ಅಂಗಡಿಗಳು, ವಾಹನಗಳು ಮತ್ತು ಮನೆಗಳಿಗೆ ಬೆಂಕಿ ಹಚ್ಚಿ ಧ್ವಂಸಗೊಳಿಸಿತು. ಮುಸ್ಲಿಂ ಸಮುದಾಯದ ಸದಸ್ಯರ ಅಂದಾಜಿನ ಪ್ರಕಾರ, 29 ಕುಟುಂಬಗಳನ್ನು ಗುರಿಯಾಗಿಸಲಾಗಿದ್ದು, ಅವರು ಒಟ್ಟು 30 ಲಕ್ಷ ರೂ.ಗಳ ನಷ್ಟವನ್ನು ಅನುಭವಿಸಿದ್ದಾರೆ. ಕೆಲವೇ ನಿಮಿಷಗಳಲ್ಲಿ, ಅವರ ಜೀವನಪರ್ಯಂತದ ಉಳಿತಾಯವು ನೆಲಸಮವಾಯಿತು.

Vehicles parked across the mosque on that fateful day in September were burnt. They continue to remain there
PHOTO • Parth M.N.

ಪುಸೇಸಾವಲಿಯ ಮಸೀದಿಯ ಉದ್ದಕ್ಕೂ ಕಳೆದ ಸೆಪ್ಟಂಬರ್‌ ತಿಂಗಳಿನಲ್ಲಿ ಬೆಂಕಿಗೆ ಅಹುತಿಯಾದ ವಾಹನಗಳು ಅಲ್ಲಿಯೇ ಬಿದ್ದಿದ್ದು ಅವುಗಳನ್ನು ಇನ್ನೂ ವಿಲೇವಾರಿ ಮಾಡಲಾಗಿಲ್ಲ

ಪುಸೇಸಾವಲಿಯಲ್ಲಿ ಇ-ಸೇವಾ ಕೇಂದ್ರವನ್ನು (ಸಾಮಾನ್ಯ ಕಕ್ಷಿದಾರರ ಎಲ್ಲಾ ನ್ಯಾಯಾಲಯ ಸಂಬಂಧಿತ ಅಗತ್ಯಗಳಿಗಾಗಿನ ಏಕ ಗವಾಕ್ಷಿ ಕೇಂದ್ರ) ನಡೆಸುತ್ತಿರುವ 43 ವರ್ಷದ ಅಶ್ಫಾಕ್ ಬಗ್ವಾನ್, ತನ್ನ ಫೋನ್ ಹೊರತೆಗೆದು, ಈ ವರದಿಗಾರರಿಗೆ ನೆಲದ ಮೇಲೆ ಕುಳಿತಿರುವ ದುರ್ಬಲ, ವೃದ್ಧನ ಫೋಟೋವನ್ನು ತೋರಿಸಿದರು. "ಅವರು ನನ್ನ ಕಿಟಕಿಗೆ ಕಲ್ಲು ಹೊಡೆದಾಗ, ಗಾಜು ಒಡೆದು ನನ್ನ ತಂದೆಯ ತಲೆಗೆ ಬಿತ್ತು" ಎಂದು ಅವರು ನೆನಪಿಸಿಕೊಳ್ಳುತ್ತಾರೆ. "ಅದೊಂದು ದುಃಸ್ವಪ್ನವಾಗಿತ್ತು. ಗಾಯವು ತುಂಬಾ ಆಳವಾಗಿತ್ತು, ಅದಕ್ಕೆ ಮನೆಯಲ್ಲಿ ಚಿಕಿತ್ಸೆ ಮಾಡಲು ಸಾಧ್ಯವಾಗಲಿಲ್ಲ."

ಆದರೆ ಅಂದು ಅಶ್ಫಾಕ್‌ ಅವರಿಗೆ ಮನೆಯಿಂದ ಹೊರಬರಲು ಸಾಧ್ಯವಾಗಲಿಲ್ಲ. ಒಂದು ವೇಳೆ ಅವರೇನಾದರೂ ಅಂದು ಹೊರ ಬಂದಿದ್ದರೆ ಅವರಿಗೆ ಹೊಸ ಮದುಮಗ ಹಾಗೂ ಕ್ರಿಕೆಟ್‌ ಪ್ರಿಯ ನೂರುಲ್‌ ಹಸನ್‌ ಬಂದ ಗತಿಯೇ ಬರುತ್ತಿತ್ತು.

*****

ಆ ದಿನ ನೂರುಲ್‌ ಕೆಲಸ ಮುಗಿಸಿ ಮನೆಗೆ ಮರಳುವ ಹೊತ್ತಿಗೆ ಪುಸೇವಲಿಯಲ್ಲಿ ಇನ್ನೂ ಕೋಮು ಬೆಂಕಿ ಹರಡಿರಲಿಲ್ಲ. ಆ ದಿನ ಗಲಭೆ ಮಾಡಲೆಂದು ಹೊರಟ ಗುಂಪಿನ ಕುರಿತು ತಿಳಿಯದಿದ್ದ ನೂರುಲ್‌ ಕೈಕಾಲು ತೊಳೆದುಕೊಂಡು ಸಂಜೆಯ ಪ್ರಾರ್ಥನೆಗೆಂದು ಮಸೀದಿಯತ್ತ ನಡೆದರು. “ಅಂದು ಮನೆಗೆ ಅತಿಥಿಗಳು ಬಂದಿದ್ದ ಕಾರಣ ಮನೆಯಲ್ಲೇ ಪ್ರಾರ್ಥನೆ ಸಲ್ಲಿಸುವಂತೆ ಹೇಳಿದ್ದೆ” ಎಂದು ಆಯೇಷಾ ನೆನಪಿಸಿಕೊಳ್ಳುತ್ತಾರೆ. “ಆದರೆ ಅವರು ಬೇಗನೆ ಬರುತ್ತೇನೆ ಎಂದು ಮಸಿದೀಗೆ ತೆರಳಿದರು.”

ಸುಮಾರು ಒಂದು ಗಂಟೆಯ ನಂತರ ಆಯೇಷಾರಿಗೆ ಫೋನ್‌ ಮಾಡಿದ ನೂರುಲ್‌ ಯಾವುದೇ ಕಾರಣಕ್ಕೂ ಮನೆಯಿಂದ ಹೊರ ಬಾರದಿರಲು ತಿಳಿಸಿದರು. ನೂರುಲ್‌ ಕುರಿತು ಗಾಬರಿಯಾಗಿದ್ದ ಆಯೇಷಾರಿಗೆ ತನ್ನ ಗಂಡ ಮಸೀದಿಯೊಳಗೇ ಇದ್ದಾರೆನ್ನುವ ಸುದ್ದಿ ನೆಮ್ಮದಿ ನೀಡಿತ್ತು. "ಜನಸಮೂಹವು ಪ್ರಾರ್ಥನಾ ಸ್ಥಳದ ಮೇಲೆ ದಾಳಿ ಮಾಡುತ್ತದೆ ಎಂದು ನಾನು ನಿರೀಕ್ಷಿಸಿರಲಿಲ್ಲ" ಎಂದು ಅವರು ಹೇಳುತ್ತಾರೆ. ಇದು ಅಷ್ಟು ದೂರ ಹೋಗುತ್ತದೆ ಎಂದು ನಾನು ಭಾವಿಸಿರಲಿಲ್ಲ. ಅವರು ಮಸೀದಿಯೊಳಗೆ ಸುರಕ್ಷಿತವಾಗಿರುತ್ತಾರೆ ಎಂದು ನಾನು ಭಾವಿಸಿದೆ.”

ಆದರೆ ಅವರ ಎಣಿಕೆ ತಪ್ಪಾಗಿತ್ತು.

ಮುಸ್ಲಿಮರ ಒಡೆತನದ ಆಸ್ತಿಗಳನ್ನು ಧ್ವಂಸಗೊಳಿಸಿ ಬೆಂಕಿ ಹಚ್ಚಿದ ನಂತರ, ಗುಂಪು ಒಳಗಿನಿಂದ ಬೀಗ ಹಾಕಲಾಗಿದ್ದ ಮಸೀದಿಯನ್ನು ಸುತ್ತುವರೆದಿದೆ. ಕೆಲವರು ಹೊರಗೆ ನಿಲ್ಲಿಸಿದ್ದ ವಾಹನಗಳಿಗೆ ಬೆಂಕಿ ಹಚ್ಚಿದರೆ, ಇತರರು ಒಳನುಗ್ಗಲು ಪ್ರಯತ್ನಿಸಿದರು. ಮಸೀದಿಯ ಬಾಗಿಲಿಗೆ ಪ್ರತಿ ಬಾರಿ ಹೊಡೆದಾಗ, ಅಗುಳಿ ಸಡಿಲವಾಗುತ್ತಿತ್ತು. ಕೊನೆಗೆ ಅದು ಬಿಚ್ಚಿಕೊಂಡು ಬಾಗಿ ತೆರೆಯಿತು.

ಕೋಲುಗಳು, ಇಟ್ಟಿಗೆಗಳು ಮತ್ತು ಮಣ್ಣಿನ ಹೆಂಚುಗಳನ್ನು ಬಳಸಿ, ಉದ್ರಿಕ್ತ ಗುಂಪು ಕೆಲವೇ ಕ್ಷಣಗಳ ಹಿಂದೆ ಶಾಂತಿಯುತವಾಗಿ ಸಂಜೆ ಪ್ರಾರ್ಥನೆ ಸಲ್ಲಿಸುತ್ತಿದ್ದ ಮುಸ್ಲಿಮರ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿತು. ಅವರಲ್ಲಿ ಒಬ್ಬ ಹೆಂಚು ತೆಗೆದುಕೊಂಡು ನೂರುಲ್ ಅವರ ತಲೆಗೆ ಹೊಡೆದ, ನಂತರ ಅವರನ್ನು ಥಳಿಸಿ ಕೊಲ್ಲಲಾಯಿತು. ದಾಳಿಯಲ್ಲಿ ಇನ್ನೂ ಹನ್ನೊಂದು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. "ಅವರ ಮೃತ ದೇಹವನ್ನು ನೋಡುವವರೆಗೂ ನನಗೆ ಅದನ್ನು ನಂಬಲು ಸಾಧ್ಯವಾಗಲಿಲ್ಲ" ಎಂದು ಆಯೇಷಾ ಹೇಳುತ್ತಾರೆ.

The mosque in Pusesavali where Nurul Hasan was lynched
PHOTO • Parth M.N.

ನೂರುಲ್ ಹಸನ್ ಕಗ್ಗೊಲೆಗೆ ಈಡಾದ ಸ್ಥಳವಾದ ಪುಸೇಸಾವಲಿಯ ಮಸೀದಿ

“ನೂರುಲ್‌ ಕೊಲೆ ಆರೋಪಿಗಳು ನನಗೆ ಪರಿಚಿತರು. ನನ್ನ ಗಂಡ ಅವರನ್ನು ಭಾಯಿ (ಅಣ್ಣ) ಎಂದು ಕರೆಯುತ್ತಿದ್ದರು. ಅವರನ್ನು ಹಾಗೆ ಹೊಡೆದು ಕೊಲ್ಲುವಾಗ ಅವರಿಗೆ ಒಮ್ಮೆಯೂ ಅದು ನೆನಪಾಗಲಿಲ್ಲವೇ ಎನ್ನಿಸಿ ನನಗೆ ಬೇಸರವಾಯಿತು” ದುಃಖಿತ ಪತ್ನಿ ಹೇಳುತ್ತಾರೆ.

ಈ ರೀತಿಯ ದಾಳಿಯ ವಿರುದ್ಧ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಪುಸೇಸಾವಲಿಯ ಮುಸ್ಲಿಮರು ಹಲವು ದಿನಗಳಿಂದ ಪೊಲೀಸರನ್ನು ಬೇಡಿಕೊಂಡಿದ್ದರು. ಈ ಗುಂಪುಗಳು ಬರುವುದು ಒಂದು ಕಿಲೋಮೀಟರ್‌ ದೂರದಿಂದಲೇ ಕಾಣುತ್ತಿತ್ತು. ಬಹುಶಃ ಅದು ಕಾಣದೇ ಹೋಗಿದ್ದೆಂದರೆ ಸತಾರದ ಪೊಲೀಸರಿಗೆ ಮಾತ್ರ.

*****

ಮಸೀದಿಯ ಮೇಲೆ ಭಯಾನಕ ದಾಳಿ ನಡೆದು ಐದು ತಿಂಗಳು ಕಳೆದಿವೆ. ಆದರೆ ಪುಸೇಸಾವಲಿ ಇಂದಿಗೂ ವಿಭಜಿತ ಮನೆಯಾಗಿ ಉಳಿದಿದೆ: ಹಿಂದೂಗಳು ಮತ್ತು ಮುಸ್ಲಿಮರು ಪರಸ್ಪರ ಬೆರೆಯುವುದನ್ನು ನಿಲ್ಲಿಸಿದ್ದಾರೆ ಮತ್ತು ಈಗ ಒಬ್ಬರನ್ನೊಬ್ಬರು ಅನುಮಾನದಿಂದ ನೋಡುತ್ತಿದ್ದಾರೆ. ಒಂದು ಕಾಲದಲ್ಲಿ ಪರಸ್ಪರರ ಮನೆಗಳಲ್ಲಿ ಊಟ ಮಾಡುತ್ತಿದ್ದ ಜನರು ಈಗ ತಣ್ಣಗಿನ ವ್ಯಾವಹಾರಿಕ ಮಾತುಕತೆಯಲ್ಲಿ ತೊಡಗಿದ್ದಾರೆ. ಹಿಂದೂ ದೇವತೆಗಳ ವಿರುದ್ಧ ಅವಹೇಳನಕಾರಿ ಕಾಮೆಂಟುಳನ್ನು ಪೋಸ್ಟ್ ಮಾಡಿದ ಆರೋಪ ಹೊತ್ತಿರುವ ಪುಸೇಸಾವಲಿಯ ಮೂವರು ಮುಸ್ಲಿಂ ಹುಡುಗರು ತಮ್ಮ ಜೀವಕ್ಕೆ ಹೆದರಿ ಗ್ರಾಮವನ್ನು ತೊರೆದಿದ್ದಾರೆ; ಅವರು ಈಗ ಸಂಬಂಧಿಕರು ಅಥವಾ ಸ್ನೇಹಿತರೊಂದಿಗೆ ವಾಸಿಸುತ್ತಿದ್ದಾರೆ.

“ಭಾರತದಲ್ಲಿ ಸಾಮಾನ್ಯವಾಗಿ ನೀವು ತಪ್ಪಿತಸ್ಥರೆಂದು ಸಾಬೀತಾಗುವವರೆಗೂ ನಿಮ್ಮನ್ನು ನಿರಪರಾಧಿಯಾಗಿ ನೋಡಲಾಗುತ್ತದೆ” ಎನ್ನುತ್ತಾರೆ 23 ವರ್ಷದ ಮುಜಮ್ಮಿಲ್ ಬಗ್ವಾನ್. ತನ್ನ ಊರಿನ ಹೆಸರನ್ನು ತಿಳಿಸುವುದಿಲ್ಲವೆನ್ನುವ ಷರತ್ತಿನೊಂದಿಗೆ ನಮ್ಮೊಂದಿಗೆ ಮಾತನಾಡಿದ ಅವರು “ಆದರೆ ನೀವು ಮುಸ್ಲಿಂ ಆಗಿದ್ದಲ್ಲಿ ನಿರಪರಾಧಿ ಎಂದು ಸಾಬೀತುಪಡಿಸುವ ತನಕ ಆರೋಪಿಯಾಗಿರುತ್ತೀರಿ” ಎಂದು ಹೇಳುತ್ತಾರೆ.

ಸೆಪ್ಟಂಬರ್ 10ರ ರಾತ್ರಿ ಮುಜಮ್ಮಿಲ್ ಕುಟುಂಬದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಪುಸೇಸಾವಲಿಗೆ ಹಿಂದಿರುಗುತ್ತಿದ್ದಾಗ ಸುಮಾರು 30 ಕಿಲೋಮೀಟರ್ ದೂರದಲ್ಲಿ ತಿಂಡಿ ನಿಲ್ಲಲೆಂದು ನಿಂತಿದ್ದರು. ಆಹಾರಕ್ಕಾಗಿ ಕಾಯುತ್ತಿರುವಾಗ, ತನ್ನ ಸಂಪರ್ಕ ಪಟ್ಟಿಯಲ್ಲಿರುವ ಕೆಲವು ಹಿಂದೂ ಸ್ನೇಹಿತರು ಸ್ಟೇಟಸ್ ಹಾಕಿರುವದನ್ನು ನೋಡಲೆಂದು ವಾಟ್ಸಾಪ್ ತೆರೆದರು.

ವಾಟ್ಸಾಪ್‌ ತೆರೆದು ನೋಡಿದ ಮುಜಮ್ಮಿಲ್‌ ಅವರ ಪಾಲಿಗೆ ಆಘಾತ ಕಾದಿತ್ತು. ಅವರಿಗೆ ನಿಂತಲ್ಲೇ ಒಂದು ಕ್ಷಣ ಭೂಮಿ ಅದುರಿದಂತೆ ಭಾಸವಾಯಿತು. ಅವರ ಸ್ನೇಹಿತರೆಲ್ಲರೂ ಮುಜಮ್ಮಿಲ್‌ ಅವರನ್ನು ಖಂಡಿಸುವುದರ ಜೊತೆಗೆ ಅವರು ಮಾಡಿದ್ದಾರೆನ್ನಲಾದ ನಿಂದನಾತ್ಮಕ ಕಮೆಂಟಿನ ಸ್ಕ್ರೀನ್‌ ಶಾಟ್‌ ಹೊಂದಿದ್ದ ಪೋಸ್ಟರ್‌ ಒಂದನ್ನು ಶೇರ್‌ ಮಾಡಿದ್ದರು. “ಇಂತಹ ವಿಷಯವನ್ನು ಪೋಸ್ಟ್‌ ಮಾಡುವ ಮೂಲಕ ನಾನೇ ಯಾಕೆ ತೊಂದರೆಯನ್ನು ಆಹ್ವಾನಿಸಿಕೊಳ್ಳಲಿ?” ಎಂದು ಅವರು ಕೇಳುತ್ತಾರೆ. “ಅದು ಹಿಂಸಾಚಾರವನ್ನು ಪ್ರಚೋದಿಸಲೆಂದು ಫೋಟೊಶಾಪ್‌ ಬಳಸಿ ತಯಾರಿಸಲಾದ ಚಿತ್ರವಾಗಿತ್ತು.”

ಮುಜಮ್ಮಿಲ್ ತಕ್ಷಣವೇ ಸ್ಥಳೀಯ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ ತನ್ನ ಫೋನನ್ನು ಅವರಿಗೆ ಒಪ್ಪಿಸಿದರು. "ಅದನ್ನು ಕೂಲಂಕಷವಾಗಿ ಪರಿಶೀಲಿಸುವಂತೆ ನಾನು ಅವರನ್ನು ವಿನಂತಿಸಿದೆ" ಎಂದು ಅವರು ಹೇಳುತ್ತಾರೆ.

ಇನ್ಸ್ಟಾಗ್ರಾಮ್ ಮಾಲೀಕತ್ವದ ಮೆಟಾ ಕಂಪನಿಯಿಂದ ಪ್ರತಿಕ್ರಿಯೆಗಾಗಿ ಕಾಯುತ್ತಿರುವುದರಿಂದ ಕಾಮೆಂಟುಗಳ ಸತ್ಯಾಸತ್ಯತೆಯನ್ನು ನಿರ್ಧರಿಸಲು ಪೊಲೀಸರಿಗೆ ಸಾಧ್ಯವಾಗಿಲ್ಲ. ಅಗತ್ಯ ವಿವರಗಳನ್ನು ಕಂಪನಿಗೆ ಕಳುಹಿಸಲಾಗಿದೆ, ಅದು ತನ್ನ ಸರ್ವರ್ ಪರಿಶೀಲಿಸಿ ಪ್ರತಿಕ್ರಿಯಿಸಬೇಕಿದೆ ಎಂದು ಸತಾರಾ ಪೊಲೀಸರು ತಿಳಿಸಿದ್ದಾರೆ.

"ಮೆಟಾ ಪ್ರತಿಕ್ರಿಯಿಸಲು ಇಷ್ಟು ಸಮಯ ತೆಗೆದುಕೊಂಡಿರುವುದು ಆಶ್ಚರ್ಯವೇನಲ್ಲ" ಎಂದು ಡಿಜಿಟಲ್ ಎಂಪವರ್ಮೆಂಟ್ ಫೌಂಡೇಶನ್ ಸಂಸ್ಥಾಪಕ ಒಸಾಮಾ ಮಂಜಾರ್ ಹೇಳುತ್ತಾರೆ. "ಇದು ಅವರ ಆದ್ಯತೆಯಲ್ಲ, ಮತ್ತು ಪೊಲೀಸರು ಅದನ್ನು ಪರಿಹರಿಸಲು ಹೆಚ್ಚು ಉತ್ಸುಕರಾಗಿಲ್ಲ. ಈ ಪ್ರಕ್ರಿಯೆಯೇ ಶಿಕ್ಷೆಯಾಗುತ್ತದೆ."

ತಾನು ನಿರಪರಾಧಿ ಎಂದು ಸಾಬೀತಾಗುವವರೆಗೂ ಊರಿಗೆ ಮರಳುವುದಿಲ್ಲ ಎಂದು ಮುಜಮ್ಮಿಲ್ ಹೇಳುತ್ತಾರೆ. ಅವರು ಪ್ರಸ್ತುತ ಪಶ್ಚಿಮ ಮಹಾರಾಷ್ಟ್ರದ ಒಂದೆಡೆ ಅಪಾರ್ಟ್ಮೆಂಟ್ ಒಂದರಲ್ಲಿ ತಿಂಗಳಿಗೆ 2,500 ರೂ.ಗೆ ಬಾಡಿಗೆಗಿದ್ದಾರೆ. ಪ್ರತಿ 15 ದಿನಗಳಿಗೊಮ್ಮೆ ತನ್ನ ಹೆತ್ತವರನ್ನು ಭೇಟಿಯಾಗುತ್ತಾರೆಯಾದರೂ ಅವರ ನಡುವೆ ಹೆಚ್ಚು ಮಾತುಕತೆ ನಡೆಯುವುದಿಲ್ಲ. "ನಾವು ಭೇಟಿಯಾದಾಗಲೆಲ್ಲಾ, ನನ್ನ ಪೋಷಕರು ಕಣ್ಣೀರು ಹಾಕುತ್ತಾರೆ" ಎಂದು ಮುಜಮ್ಮಿಲ್ ಹೇಳುತ್ತಾರೆ. "ನಾನು ಅವರಿಗಾಗಿ ಧೈರ್ಯಶಾಲಿಯಂತೆ ತೋರಿಸಿಕೊಳ್ಳಬೇಕಾಗಿದೆ."

'In India, you are supposed to be innocent until proven guilty,' says Muzammil Bagwan, 23, at an undisclosed location. Bagwan, who is from Pusesavali, was accused of abusing Hindu gods under an Instagram post
PHOTO • Parth M.N.

ʼಭಾರತದಲ್ಲಿ ಸಾಮಾನ್ಯವಾಗಿ ನೀವು ತಪ್ಪಿತಸ್ಥರೆಂದು ಸಾಬೀತಾಗುವವರೆಗೂ ನಿಮ್ಮನ್ನು ನಿರಪರಾಧಿಯಾಗಿ ನೋಡಲಾಗುತ್ತದೆʼ ಎನ್ನುತ್ತಾರೆ 23 ವರ್ಷದ ಮುಜಮ್ಮಿಲ್ ಬಗ್ವಾನ್. ಪ್ರಸ್ತುತ ಅವರು ಅಜ್ಞಾತ ಸ್ಥಳವೊಂದರಲ್ಲಿ ಉಳಿದುಕೊಂಡಿದ್ದಾರೆ. ಪುಸೇಸಾವಲಿ ಮೂಲದ ಬಗ್ವಾನ್ ತನ್ನ ಇನ್ಸ್ಟಾಗ್ರಾಮ್ ಪೋಸ್ಟ್‌ ಒಂದರಲ್ಲಿ ಹಿಂದೂ ದೇವರುಗಳನ್ನು ನಿಂದಿಸಿದ್ದಾರೆ ಎಂದು ಆರೋಪಿಸಲಾಗಿದೆ

ಮುಜಮ್ಮಿಲ್ ದಿನಸಿ ಅಂಗಡಿಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದು, ಅಲ್ಲಿ ಅವರು 8,000 ರೂ.ಗಳ ಸಂಬಳವನ್ನು ಗಳಿಸುತ್ತಾರೆ. ಅದರ ಮೂಲಕ ತಮ್ಮ ಬಾಡಿಗೆ ಮತ್ತು ಖರ್ಚುಗಳನ್ನು ಸರಿದೂಗಿಸುತ್ತಿದ್ದಾರೆ. ಪುಸೇಸಾವಲಿಯಲ್ಲಿ ಅವರು ತಮ್ಮದೇ ಆದ ಯಶಸ್ವಿ ಐಸ್ ಕ್ರೀಮ್ ಪಾರ್ಲರ್ ನಡೆಸುತ್ತಿದ್ದರು. "ಅದು ಬಾಡಿಗೆ ಅಂಗಡಿಯಾಗಿತ್ತು" ಎಂದು ಮುಜಮ್ಮಿಲ್ ಹೇಳುತ್ತಾರೆ. "ಅದರ ಮಾಲೀಕರು ಹಿಂದೂಗಳಾಗಿದ್ದರು. ಘಟನೆಯ ನಂತರ ಅವರು ನನ್ನನ್ನು ಹೊರಹಾಕಿದರು, ಮತ್ತು ನಾನು ನಿರಪರಾಧಿ ಎಂದು ಸಾಬೀತಾದ ನಂತರವಷ್ಟೇ ಮತ್ತೆ ಬಾಡಿಗೆಗೆ ನೀಡುವುದಾಗಿ ಹೇಳಿದರು. ನನ್ನ ಪೋಷಕರು ಈಗ ಜೀವನೋಪಾಯಕ್ಕಾಗಿ ತರಕಾರಿ ಮಾರಾಟ ಮಾಡುತ್ತಿದ್ದಾರೆ. ಆದರೆ ಹಳ್ಳಿಯ ಹಿಂದೂಗಳು ಅವರ ಬಳಿ ಖರೀದಿಸಲು ನಿರಾಕರಿಸುತ್ತಾರೆ."

ಸಣ್ಣ ಮಕ್ಕಳು ಸಹ ಈ ಧ್ರುವೀಕರಣದಿಂದ ಹೊರತಾಗಿಲ್ಲ.

ಒಂದು ಸಂಜೆ, ಅಶ್ಫಾಕ್ ಬಗ್ವಾನ್ ಅವರ ಒಂಬತ್ತು ವರ್ಷದ ಮಗ ಉಜರ್, ಇತರ ಮಕ್ಕಳು ಅವನೊಂದಿಗೆ ಆಡದ ಕಾರಣ ಶಾಲೆಯಿಂದ ನಿರಾಶೆಯಿಂದ ಮನೆಗೆ ಬಂದನು. "ಅವನ ತರಗತಿಯ ಹಿಂದೂ ಮಕ್ಕಳು ಅವನನ್ನು ಆಟಕ್ಕೆ ಸೇರಿಸಿಕೊಳ್ಳಲು ನಿರಾಕರಿಸಿದರು. ಇದಕ್ಕೆ ಕಾರಣ ಅವನು 'ಲಾಂಡ್ಯಾ' ಎನ್ನುವುದು, ಇದು ಮುಸ್ಲಿಂ ಜನರ ವಿರುದ್ಧ ಬಳಸುವ ಅವಹೇಳನಕಾರಿ ಪದವಾಗಿದೆ, ಇದು ಸುನ್ನತಿಯನ್ನು ಸೂಚಿಸುತ್ತದೆ." ಎಂದು ಅಶ್ಫಾಕ್ ಹೇಳುತ್ತಾರೆ, ಮುಸ್ಲಿಮರ ವಿರುದ್ಧ ಬಳಸುವ ಸಾಮಾನ್ಯ ನಿಂದನೆಯನ್ನು ಉಲ್ಲೇಖಿಸಿ. "ನಾನು ಮಕ್ಕಳನ್ನು ದೂಷಿಸುವುದಿಲ್ಲ. ಅವರು ಮನೆಯಲ್ಲಿ ಕೇಳಿದ್ದನ್ನು ಪುನರಾವರ್ತಿಸುತ್ತಾರೆ. ನಮ್ಮ ಹಳ್ಳಿಯಲ್ಲಿ ಈ ವಾತಾವರಣ ಎಂದೂ ಇದ್ದಿರಲಿಲ್ಲ."

ಪ್ರತಿ ಮೂರು ವರ್ಷಗಳಿಗೊಮ್ಮೆ, ಪುಸೇಸಾವಲಿ ಪಾರಾಯಣ ಅಧಿವೇಶನವನ್ನು ಆಯೋಜಿಸುತ್ತದೆ, ಅಲ್ಲಿ ಹಿಂದೂಗಳು ಎಂಟು ದಿನಗಳ ಕಾಲ ಧರ್ಮಗ್ರಂಥಗಳನ್ನು ಪಠಿಸುತ್ತಾರೆ. ಗ್ರಾಮದಲ್ಲಿ ಹಿಂಸಾಚಾರ ಭುಗಿಲೇಳುವ ಒಂದು ತಿಂಗಳ ಮೊದಲು ಆಗಸ್ಟ್ 8ರಂದು ಸ್ಥಳೀಯ ಮುಸ್ಲಿಮರು ಕಾರ್ಯಕ್ರಮದ ಮೊದಲ ದಿನದಂದು ಮೊದಲ ಊಟವನ್ನು ಪ್ರಾಯೋಜಿಸಿದ್ದರು. 1,200 ಹಿಂದೂಗಳಿಗಾಗಿ 150 ಲೀಟರ್ ಶೀರ್ ಕುರ್ಮಾ (ಶಾವಿಗೆ ಪಾಯಸ) ತಯಾರಿಸಲಾಯಿತು.

"ಆ ಊಟಕ್ಕಾಗಿ ನಾವು 80,000 ರೂ.ಗಳನ್ನು ಖರ್ಚು ಮಾಡಿದ್ದೆವು" ಎಂದು ಸಿರಾಜ್ ಹೇಳುತ್ತಾರೆ. "ಇಡೀ ಸಮುದಾಯವು ಇದರಲ್ಲಿ ಭಾಗಿಯಾಗಿತ್ತು. ಏಕೆಂದರೆ ಅದು ನಮ್ಮ ಸಂಸ್ಕೃತಿ. ನಾನು ಅದೇ ಹಣವನ್ನು ಮಸೀದಿಗೆ ಕಬ್ಬಿಣದ ಗೇಟ್ ಮಾಡಿಸಲು ಬಳಸಿದ್ದರೆ, ನಮ್ಮ ಜನರಲ್ಲಿ ಒಬ್ಬರು ಇಂದು ಜೀವಂತವಾಗಿರುತ್ತಿದ್ದರು.”

*****

ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸ್ ಇನ್ಸ್ಪೆಕ್ಟರ್ ದೇವ್ಕರ್ ಅವರ ಪ್ರಕಾರ, ಸೆಪ್ಟೆಂಬರ್ 10ರಂದು ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ 63 ಜನರನ್ನು ಬಂಧಿಸಿ ಚಾರ್ಜ್‌ಶೀಟ್ ಸಲ್ಲಿಸಲಾಗಿದೆ, 34 ಜನರು ಪರಾರಿಯಾಗಿದ್ದಾರೆ ಮತ್ತು 59 ಜನರು ಈಗಾಗಲೇ ಜಾಮೀನು ಪಡೆದಿದ್ದಾರೆ.

“ರಾಹುಲ್ ಕದಮ್ ಮತ್ತು ನಿತಿನ್ ವೀರ್ ಈ ಪ್ರಕರಣದ ಪ್ರಮುಖ ಆರೋಪಿಗಳು” ಎಂದು ಅವರು ಹೇಳಿದರು. "ಅವರಿಬ್ಬರೂ ಹಿಂದೂ ಏಕ್ತಾದೊಂದಿಗೆ ಕೆಲಸ ಮಾಡುತ್ತಾರೆ."

ಪಶ್ಚಿಮ ಮಹಾರಾಷ್ಟ್ರದಲ್ಲಿ ಸಕ್ರಿಯವಾಗಿರುವ ಬಲಪಂಥೀಯ ಸಂಘಟನೆಯಾದ ಹಿಂದೂ ಏಕ್ತಾದ ಹಿರಿಯ ನಾಯಕ ವಿಕ್ರಮ್ ಪಾವಸ್ಕರ್, ಅವರು ಮಹಾರಾಷ್ಟ್ರ ರಾಜ್ಯ ಬಿಜೆಪಿಯ ಉಪಾಧ್ಯಕ್ಷರೂ ಆಗಿದ್ದಾರೆ. ಅವರು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರಿಗೆ ಆಪ್ತರು ಎಂದು ಹೇಳಲಾಗುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿರುವ ಫೋಟೋಗಳನ್ನು ತಮ್ಮ ಸಾಮಾಜಿಕ ಮಾಧ್ಯಮದ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಹಿರಿಯ ಹಿಂದುತ್ವವಾದಿ ನಾಯಕ ವಿನಾಯಕ್ ಪಾವಸ್ಕರ್ ಅವರ ಪುತ್ರ ವಿಕ್ರಮ್ ದ್ವೇಷ ಭಾಷಣಗಳನ್ನು ಮಾಡಿದ ಮತ್ತು ಕೋಮು ಉದ್ವಿಗ್ನತೆಯನ್ನು ಪ್ರಚೋದಿಸಿದ ಇತಿಹಾಸವನ್ನು ಹೊಂದಿದ್ದಾರೆ. ಏಪ್ರಿಲ್ 2023ರಲ್ಲಿ, ಅವರು ಸತಾರಾದಲ್ಲಿ "ಅಕ್ರಮವಾಗಿ ನಿರ್ಮಿಸಲಾದ ಮಸೀದಿ" ಯನ್ನು ನೆಲಸಮಗೊಳಿಸಲು ಆಂದೋಲನವನ್ನು ಮುನ್ನಡೆಸಿದರು.

Saffron flags in the village
PHOTO • Parth M.N.

ಗ್ರಾಮದಲ್ಲಿನ ಕೇಸರಿ ಬಾವುಟಗಳು

2023ರ ಜೂನ್ ತಿಂಗಳಿನಲ್ಲಿ, ಇಸ್ಲಾಂಪುರದಲ್ಲಿ ನಡೆದ ರ್ಯಾಲಿಯಲ್ಲಿ, ಪಾವಾಸ್ಕರ್ ಹಿಂದೂ ಬಲಪಂಥೀಯರ ಸಾಬೀತಾಗದ ಪಿತೂರಿ ಸಿದ್ಧಾಂತವಾದ 'ಲವ್ ಜಿಹಾದ್' ವಿರುದ್ಧ ಹೋರಾಡಲು "ಹಿಂದೂಗಳು ಒಗ್ಗೂಡಬೇಕು" ಎಂದು ಕರೆ ನೀಡಿದರು, ಇದರ ಮೂಲಕ ಮುಸ್ಲಿಂ ಪುರುಷರು ಹಿಂದೂ ಮಹಿಳೆಯರನ್ನು ಆಕರ್ಷಿಸುತ್ತಾರೆ, ಇದರಿಂದಾಗಿ ಅವರು ಮದುವೆಯ ನಂತರ ಇಸ್ಲಾಂಗೆ ಮತಾಂತರವಾಗಬೇಕಾಗುತ್ತದೆ. ಹೀಗೆ ಮದುವೆ ಮಾಡಿಕೊಳ್ಳುವ ಮೂಲಕ ಅವರು ಜನಸಂಖ್ಯಾ ಬೆಳವಣಿಗೆ ಮತ್ತು ಅಂತಿಮವಾಗಿ ಭಾರತದಲ್ಲಿ ಪ್ರಾಬಲ್ಯವನ್ನು ಖಚಿತಪಡಿಸಿಕೊಳ್ಳುತ್ತಾರೆ ಎನ್ನುವುದು ಆರೋಪ. "ನಮ್ಮ ಹೆಣ್ಣುಮಕ್ಕಳು, ನಮ್ಮ ಸಹೋದರಿಯರನ್ನು ಅಪಹರಿಸಿ 'ಲವ್ ಜಿಹಾದ್' ಗಾಗಿ ಬೇಟೆಯಾಡಲಾಗುತ್ತದೆ" ಎಂದು ಅವರು ಹೇಳಿದರು. "ಜಿಹಾದಿಗಳು ಹಿಂದೂ ಧರ್ಮದಲ್ಲಿ ಮಹಿಳೆಯರು ಮತ್ತು ಸಂಪತ್ತನ್ನು ನಾಶಪಡಿಸಲು ಪ್ರಯತ್ನಿಸುತ್ತಿದ್ದಾರೆ. ನಾವೆಲ್ಲರೂ ಅವರಿಗೆ ಬಲವಾದ ಉತ್ತರವನ್ನು ನೀಡಬೇಕು.” ಅವರು ಮುಸ್ಲಿಮರ ವಿರುದ್ಧ ಆರ್ಥಿಕ ಬಹಿಷ್ಕಾರಕ್ಕೆ ಕರೆ ನೀಡಿದರು ಮತ್ತು ಭಾರತ ಹಿಂದೂ ದೇಶವಾಗಬೇಕೆಂದು ಕರೆ ನೀಡಿದರು.

ಹಿಂಸಾಚಾರದ ಪ್ರತ್ಯಕ್ಷದರ್ಶಿಯೊಬ್ಬರ ಪ್ರಕಾರ, ಪುಸೇಸಾವಲಿಯಲ್ಲಿ ಹಲ್ಲೆ ನಡೆಯುವ ಕೆಲವು ದಿನಗಳ ಮೊದಲು ಪವಾಸ್ಕರ್ ಆರೋಪಿಗಳಲ್ಲಿ ಒಬ್ಬರ ಮನೆಯಲ್ಲಿ ಸಭೆ ನಡೆಸಿದ್ದರು. ಗ್ರಾಮದ ಮೇಲೆ ದಾಳಿ ನಡೆಸಿದ ಹಿಂದುತ್ವವಾದಿ ಗುಂಪಿನ ಭಾಗವಾಗಿ ನೂರಕ್ಕೂ ಹೆಚ್ಚು ಅಪರಿಚಿತ ಜನರು ಇದ್ದರು. ಆದರೆ ಅವರಲ್ಲಿ 27 ಮಂದಿ ಗ್ರಾಮದವರು ಮತ್ತು ಅವರಲ್ಲಿ ಕೆಲವರು ಪಾವಸ್ಕರ್ ನಡೆಸಿದ ಸಭೆಯಲ್ಲಿ ಹಾಜರಿದ್ದರು ಎಂದು ಅವರು ಪೊಲೀಸರಿಗೆ ತಿಳಿಸಿದ್ದಾರೆ. ಜನಸಮೂಹವು ಹಳ್ಳಿಯ ಮಸೀದಿಗೆ ನುಗ್ಗಿದಾಗ, ಅವರಲ್ಲಿ ಒಬ್ಬ, "ಈ ರಾತ್ರಿ ಒಬ್ಬ ಲಾಂಡ್ಯಾನನ್ನೂ ಜೀವಂತವಾಗಿ ಬಿಡಬಾರದು. ವಿಕ್ರಮ್ ಪಾವಸ್ಕರ್ ನಮ್ಮ ಬೆನ್ನಿಗೆ ನಿಂತಿದ್ದಾರೆ. ಕರುಣೆ ತೋರಿಸಬೇಡ." ಎಂದಿದ್ದ.

ಆದರೂ ಪೊಲೀಸರು ಆತನನ್ನು ಬಂಧಿಸಿಲ್ಲ. ಸತಾರಾದ ಪೊಲೀಸ್ ವರಿಷ್ಠಾಧಿಕಾರಿ ಸಮೀರ್ ಶೇಖ್ ಈ ನಿರ್ದಿಷ್ಟ ವರದಿಯ ಬಗ್ಗೆ ಈ ವರದಿಗಾರರೊಂದಿಗೆ ಮಾತನಾಡಲು ನಿರಾಕರಿಸಿದರು. "ಅಗತ್ಯ ವಿವರಗಳು ಸಾರ್ವಜನಿಕ ವಲಯದಲ್ಲಿವೆ" ಎಂದು ಅವರು ಹೇಳಿದರು ಮತ್ತು ತನಿಖೆ ಅಥವಾ ಪಾವಸ್ಕರ್ ಪಾತ್ರದ ಬಗ್ಗೆ ಹೆಚ್ಚಿನ ಪ್ರಶ್ನೆಗಳಿಗೆ ಉತ್ತರಿಸುವುದರಿಂದ ತಪ್ಪಿಸಿಕೊಂಡರು.

ಜನವರಿ 2024ರ ಕೊನೆಯ ವಾರದಲ್ಲಿ, ಬಾಂಬೆ ಹೈಕೋರ್ಟ್ ಪವಾಸ್ಕರ್ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿದ್ದಕ್ಕಾಗಿ ಸತಾರಾ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿತು.

*****

ಸತಾರಾ ಪೊಲೀಸರ ನೀರಸ ಪ್ರತಿಕ್ರಿಯೆಯು ಆಯೇಷಾರಿಗೆ ಎಂದಾದರೂ ನ್ಯಾಯ ಸಿಗುತ್ತದೆಯೇ, ನೂರುಲ್ ಕೊಲೆಗಾರರಿಗೆ ಎಂದಾದರೂ ಶಿಕ್ಷೆಯಾಗುತ್ತದೆಯೇ ಮತ್ತು ಮಾಸ್ಟರ್ ಮೈಂಡ್ ಎಂದಾದರೂ ಶಿಕ್ಷೆಗೆ ಗುರಿಯಾಗಬಹುದೇ ಎನ್ನುವ ಪ್ರಶ್ನೆಗಳನ್ನು ಹುಟ್ಟಿಸುತ್ತಿದೆ. ಸ್ವತಃ ವಕೀಲೆಯಾಗಿರುವ ಅವರಿಗೆ ಈ ಪ್ರಕರಣವನ್ನು ಮುಚ್ಚಿ ಹಾಕಲು ಪ್ರಯತ್ನಿಸುತ್ತಿರುವ ಅನುಮಾನವಿದೆ.

"ಹೆಚ್ಚಿನ ಆರೋಪಿಗಳು ಈಗಾಗಲೇ ಜಾಮೀನಿನ ಮೇಲೆ ಹೊರಬಂದಿದ್ದಾರೆ, ಊರಿಲ್ಲಿ ಮುಕ್ತವಾಗಿ ತಿರುಗಾಡುತ್ತಿದ್ದಾರೆ" ಎಂದು ಅವರು ಹೇಳುತ್ತಾರೆ. "ಇದೊಂದು ಕ್ರೂರ ತಮಾಷೆಯಂತೆ ಕಾಣುತ್ತಿದೆ."

ಅವರು ಪುಸೇಸಾವಲಿಯ ಬದಲು ರಜಾಚೆ ಕುರ್ಲೆಯಲ್ಲಿ ತನ್ನ ಹೆತ್ತವರೊಂದಿಗೆ ಹೆಚ್ಚು ಸಮಯ ಕಳೆಯಲು ನಿರ್ಧರಿಸಿದ್ದಾರೆ, ಅಲ್ಲಿ ಅವರಿಗೆ ಅಸುರಕ್ಷಿತ ಭಾವನೆಯನ್ನು ಕಾಡುವುದರ ಜೊತೆಗೆ ಗಂಡ ನೆನಪೂ ಕಾಡುತ್ತದೆ. "ಈ ಊರಿನಿಂದ ಅಲ್ಲಿ ಕೇವಲ ನಾಲ್ಕು ಕಿಲೋಮೀಟರ್ ದೂರ, ಹೀಗಾಗಿ ನಾನು ಎರಡು ಊರುಗಳ ನಡುವೆ ಓಡಾಡಿಕೊಂಡು ಇರಬಲ್ಲೆ" ಎಂದು ಆಯೇಷಾ ಹೇಳುತ್ತಾರೆ. "ಆದರೆ ಈ ಕ್ಷಣಕ್ಕೆ, ನನ್ನ ಜೀವನವನ್ನು ಮತ್ತೆ ಹಳಿಗೆ ತರುವುದು ನನ್ನ ಆದ್ಯತೆ."

Ayesha Hasan, Nurul's wife, in Rajache Kurle village at her parents’ home
PHOTO • Parth M.N.

ನೂರುಲ್ ಅವರ ಪತ್ನಿ ಆಯೇಷಾ ಹಸನ್, ರಜಾಚೆ ಕುರ್ಲೆ ಗ್ರಾಮದಲ್ಲಿನ ತನ್ನ ಹೆತ್ತವರ ಮನೆಯಲ್ಲಿ

ಅವರು ತಮ್ಮ ವಕೀಲಿ ವೃತ್ತಿಯನ್ನು ಪುನರಾರಂಭಿಸಲು ಯೋಚಿಸಿದರು ಆದರೆ ಇದು ಹಳ್ಳಿಯಲ್ಲಿ ಭರವಸೆಯ ವೃತ್ತಿಯಲ್ಲದ ಕಾರಣ ಸದ್ಯಕ್ಕೆ ಆ ಕುರಿತು ಯೋಚಿಸುವುದನ್ನು ಕೈಬಿಟ್ಟಿದ್ದಾರೆ. "ನಾನು ಸತಾರಾ ನಗರ ಅಥವಾ ಪುಣೆಗೆ ಸ್ಥಳಾಂತರಗೊಂಡರೆ ವಕೀಲಿ ವೃತ್ತಿ ಮಾಡಬಹುದು" ಎಂದು ಆಯೇಷಾ ಹೇಳುತ್ತಾರೆ. "ಆದರೆ ನಾನು ನನ್ನ ಹೆತ್ತವರಿಂದ ದೂರವಿರಲು ಬಯಸುವುದಿಲ್ಲ. ಅವರಿಗೆ ಆರೋಗ್ಯ ಸಮಸ್ಯೆಗಳಿವೆ, ಅವರಿಗಾಗಿ ನಾನು ಇಲ್ಲಿರಬೇಕು.”

ಆಯೇಷಾರ ತಾಯಿ, 50 ವರ್ಷದ ಶಮಾ, ಹೈ ಬ್ಲಡ್‌ ಶುಗರ್ ಹೊಂದಿದ್ದಾರೆ ಮತ್ತು 70 ವರ್ಷದ ತಂದೆ ಹನೀಫ್ 2023ರ ಡಿಸೆಂಬರ್ ತಿಂಗಳಿನಲ್ಲಿ ಹೃದಯಾಘಾತಕ್ಕೆ ಒಳಗಾದರು. "ನಾನು ತಂದೆ ತಾಯಿಗೆ ಒಬ್ಬಳೇ ಮಗಳು. ಬೇರೆ ಒಡಹುಟ್ಟಿದವರಿಲ್ಲ" ಎಂದು ಆಯೇಷಾ ಹೇಳುತ್ತಾರೆ. "ಆದರೆ ನೂರುಲ್‌ ಮನೆಯಲ್ಲಿ ಮಗನಿಲ್ಲದ ಕೊರತೆಯನ್ನು ತುಂಬಿದ್ದರು. ಈಗ ಅವರಿಲ್ಲದಿರುವುದನ್ನು ತಂದೆಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನೂರುಲ್‌ ತೀರಿಕೊಂಡ ದಿನದಿಂದ ಅವರು ಅವರಾಗಿ ಉಳಿದಿಲ್ಲ."

ಆಯೇಷಾ ತನ್ನ ಹೆತ್ತವರೊಂದಿಗೆ ಇದ್ದು ಅವರನ್ನು ನೋಡಿಕೊಳ್ಳಲು ನಿರ್ಧರಿಸಿದ್ದರೂ, ಅವರ ಬದುಕಿಗೆ ಅರ್ಥ ನೀಡಬಲ್ಲ ಮತ್ತು ಬದುಕಲು ಕಾರಣವಾಗಬಲ್ಲ ಕೆಲವು ಕೆಲಸಗಳನ್ನು ಮಾಡಬೇಕಿದೆ. ಅವರು ತನ್ನ ಗಂಡನ ಇಚ್ಛೆಯನ್ನು ಪೂರ್ಣಗೊಳಿಸುವ ಗುರಿಯನ್ನು ಹೊಂದಿದ್ದಾರೆ.

ಘಟನೆಗೆ ಕೇವಲ ಐದು ತಿಂಗಳ ಮೊದಲು, ನೂರುಲ್ ಮತ್ತು ಆಯೇಷಾ ತಮ್ಮದೇ ಆದ ನಿರ್ಮಾಣ ಕಂಪನಿಯನ್ನು ಆರಂಭಿಸಿದ್ದರು - ಅಶ್ನೂರ್ ಪ್ರೈವೇಟ್ ಲಿಮಿಟೆಡ್. ನೂರುಲ್‌ ಕೆಲಸ ಹುಡುಕಿ ತಂದರೆ, ಕಾನೂನು ಸಂಬಂಧಿ ವಿಷಯಗಳನ್ನು ನೋಡಿಕೊಳ್ಳುವುದು ಆಯೇಷಾರ ಜವಾಬ್ದಾರಿಯಾಗಿತ್ತು.

ಈಗ ಅವರಿಲ್ಲ, ಆದರೆ ಆಯೇಷಾ ಕಂಪನಿಯನ್ನು ಮುಚ್ಚ ಬಯಸುವುದಿಲ್ಲ. “ನಿರ್ಮಾಣ ಕಾಮಗಾರಿ ಕುರಿತು ನನಗೆ ಹೆಚ್ಚು ತಿಳಿದಿಲ್ಲ” ಎನ್ನುವ ಅವರು “ಅದನ್ನು ಕಲಿತು ಕಂಪನಿ ವ್ಯವಹಾರವನ್ನು ಮುಂದಕ್ಕೆ ಕೊಂಡೊಯ್ಯುತ್ತೇನೆ. ಇದೀಗ ನಾನು ಒಂದಷ್ಟು ಆರ್ಥಿಕ ಬಿಕ್ಕಟ್ಟಿನಲ್ಲಿದ್ದೇನೆ. ಆದರೆ ನಾನು ಸೋಲುವುದಿಲ್ಲ. ಹಣ ಒಟ್ಟುಗೂಡಿಸಿ ಅದನ್ನು ಕಾರ್ಯರೂಪಕ್ಕೆ ತರುತ್ತೇನೆ.”

ಅವರ ಪತಿಯ ಎರಡನೇ ಆಸೆ ಅಷ್ಟು ಕಷ್ಟದ್ದಲ್ಲ.

ನೂರುಲ್‌ ತನ್ನ ಮಗುವಿಗೆ ಕ್ರಿಕೆಟ್‌ ಕಲಿಸಲು ಉತ್ಸುಕರಾಗಿದ್ದರು. ಆದರೆ ಯಾವುದೋ ಒಂದು ಅಕಾಡೆಮಿಯಿಂದಲ್ಲ. ತನ್ನ ಮಗು ವಿರಾಟ್‌ ಕೊಹ್ಲಿ ಕಲಿತಲ್ಲೇ ತನ್ನ ಮಗನೂ ಕಲಿಯಬೇಕೆನ್ನುವುದು ಅವರ ಬಯಕೆಯಾಗಿತ್ತು. ಆಯೇಷಾ ತನ್ನ ಗಂಡನ ಕನಸನ್ನು ನಿಜವಾಗಿಸಲು ಪ್ರಯತ್ನಿಸುತ್ತಿದ್ದಾರೆ. “ಅದನ್ನು ನಾನು ಮಾಡಿಯೇ ತೀರುತ್ತೇನೆ” ಎಂದು ಆಯೇಷಾ ದೃಢವಾಗಿ ಹೇಳುತ್ತಾರೆ.

ಅನುವಾದ: ಶಂಕರ. ಎನ್. ಕೆಂಚನೂರು

Parth M.N.

Parth M.N. is a 2017 PARI Fellow and an independent journalist reporting for various news websites. He loves cricket and travelling.

Other stories by Parth M.N.
Editor : Vishaka George

Vishaka George is Senior Editor at PARI. She reports on livelihoods and environmental issues. Vishaka heads PARI's Social Media functions and works in the Education team to take PARI's stories into the classroom and get students to document issues around them.

Other stories by Vishaka George
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru