ಅವರು ಆ ಬಾವುಟವನ್ನು ಈಗಲೂ ತಹಸಿಲ್ ಕಚೇರಿಯಲ್ಲಿ ಜೋಪಾನ ಮಾಡಿ ಇರಿಸಿದ್ದಾರೆ. 1942ರ ಆಗಸ್ಟ್ 18ರಂದು ಈ ಬಾವುಟವನ್ನು ಹಾರಿಸುವ ಮೂಲಕ ಈ ದಿನ ಉತ್ತರ ಪ್ರದೇಶದ ಗಾಜಿಪುರ ಜಿಲ್ಲೆ ಬ್ರಿಟಿಷ್ ಸರ್ಕಾರದಿಂದ ಸ್ವತಂತ್ರ ಎಂದು ಘೋಷಿಸಿದ್ದರು. ಈ ಘಟನೆಯಲ್ಲಿ ಮುಹಮ್ಮದಾಬಾದ್ನ ತಹಶೀಲ್ದಾರ್ ಆ ಗುಂಪಿನ ಮೇಲೆ ಗುಂಡು ಹಾರಿಸಿದ ಕಾರಣ ಅಂದು ಶೇರ್ಪುರ್ ಗ್ರಾಮದ ಎಂಟು ಮಂದಿ ಮರಣ ಹೊಂದಿದ್ದರು. ಆ ಘಟನೆಯಲ್ಲಿ ಕೊಲ್ಲಲ್ಪಟ್ಟವರಲ್ಲಿ ಹೆಚ್ಚಿನವರು ಕಾಂಗ್ರೆಸ್ಸಿಗರಾಗಿದ್ದರು. ಶಿವಪೂಜನ್ ರಾಯ್ ನೇತೃತ್ವದಲ್ಲಿ ಇವರೆಲ್ಲರೂ ಮಹಮ್ಮದಾಬಾದ್ನ ತಹಸಿಲ್ ಭವನದ ಮೇಲೆ ತ್ರಿವರ್ಣವನ್ನು ಹಾರಿಸಲು ಪ್ರಯತ್ನಿಸುತ್ತಿದ್ದಾಗ ಈ ವ್ಯಕ್ತಿಗಳಿಗೆ ಗುಂಡು ಹಾರಿಸಲಾಯಿತು.
ಈ ಘಟನೆಯು ಜಿಲ್ಲೆಯಲ್ಲಿ ಈಗಾಗಲೇ ಬ್ರಿಟಿಷರ ವಿರುದ್ಧ ಕುದಿಯುತ್ತಿದ್ದ ಆಕ್ರೋಶವನ್ನು ಭುಗಿಲೇಳುವಂತೆ ಮಾಡಿತು, ಈ ಘಟನೆ ಅವರನ್ನು ಮತ್ತಷ್ಟು ಕೆರಳಿಸಿತು. ಆಗಸ್ಟ್ 10ರಂದು ಬ್ರಿಟಿಷರು ಇಲ್ಲಿನ 129 ನಾಯಕರ ವಿರುದ್ಧ ಬಂಧನದ ವಾರಂಟ್ ಹೊರಡಿಸಿದ್ದರು. ಆಗಸ್ಟ್ 19ರ ಹೊತ್ತಿಗೆ, ಸ್ಥಳೀಯ ಜನರು ಬಹುತೇಕ ಸಂಪೂರ್ಣ ಗಾಜೀಪುರವನ್ನು ಆಕ್ರಮಿಸಿಕೊಂಡರು ಮತ್ತು ಮೂರು ದಿನಗಳ ಕಾಲ ಇಲ್ಲಿ ಸರ್ಕಾರವನ್ನು ನಡೆಸಿದರು.
ಬ್ರಿಟಿಷರು ಇದಕ್ಕೆ ಪ್ರತಿಕ್ರಿಯೆಯಾಗಿ ಜಿಲ್ಲಾ ಗೆಜೆಟಿನಲ್ಲಿ ಬರೆದಿರುವಂತೆ "ಇದೊಂದು ಭಯೋತ್ಪಾದಕರ ಆಡಳಿತವಾಗಿತ್ತು." ಶೀಘ್ರದಲ್ಲೇ, "ಹಳ್ಳಿಗಳು ನಾಶವಾದವು, ಲೂಟಿ ಮಾಡಲ್ಪಟ್ಟವು ಮತ್ತು ಅಗ್ನಿಸ್ಪರ್ಶ ಸಂಭವಿಸಿದವು". ಕ್ವಿಟ್ ಇಂಡಿಯಾ ಚಳವಳಿಯ ಪ್ರತಿಭಟನಾಕಾರರನ್ನು ಸೇನೆ ಮತ್ತು ಕುದುರೆ ಮೇಲೇರಿ ಬಂದ ಪೊಲೀಸರು ಚೆಲ್ಲಾಪಿಲ್ಲಿ ಮಾಡಿದರು. ಮುಂದಿನ ಕೆಲವು ದಿನಗಳಲ್ಲಿ ಅವರು ಜಿಲ್ಲೆಯಾದ್ಯಂತ ಸುಮಾರು 150 ಜನರನ್ನು ಗುಂಡಿಕ್ಕಿ ಕೊಂದರು. ಅಧಿಕಾರಿಗಳು ಮತ್ತು ಪೊಲೀಸರು ಇಲ್ಲಿನ ನಾಗರಿಕರಿಂದ 35 ಲಕ್ಷ ರೂಪಾಯಿಗಳನ್ನು ಲೂಟಿ ಮಾಡಿದ್ದಾರೆ ಎಂದು ದಾಖಲೆಗಳು ಹೇಳುತ್ತವೆ. ಸುಮಾರು 74 ಗ್ರಾಮಗಳು ಸುಟ್ಟುಹೋಗಿವೆ. ಗಾಜೀಪುರದ ಜನರ ಮೇಲೆ ಒಟ್ಟಾಗಿ 4.5 ಲಕ್ಷ ರೂ.ಗಳ ದಂಡವನ್ನು ವಿಧಿಸಲಾಗಿತ್ತು, ಅದು ಆ ಸಮಯಕ್ಕೆ ಬಹಳ ದೊಡ್ಡ ಮೊತ್ತವಾಗಿತ್ತು.
ಅಧಿಕಾರಿಗಳು ಶಿಕ್ಷೆಗಾಗಿ ಶೇರ್ಪುರವನ್ನು ಪ್ರತ್ಯೇಕವಾಗಿ ಆಯ್ಕೆ ಮಾಡಿಕೊಂಡರು. ಇಲ್ಲಿನ ಅತ್ಯಂತ ಹಿರಿಯ ದಲಿತರಾದ ಹರಿ ಶರಣ್ ರಾಮ್ ಆ ದಿನ ನೆನಪಿಸಿಕೊಳ್ಳುತ್ತಾರೆ: “ಮನುಷ್ಯರನ್ನು ಬಿಡಿ, ಆ ದಿನ ಹಳ್ಳಿಯಲ್ಲಿ ಒಂದು ಹಕ್ಕಿ ಕೂಡ ಉಳಿದಿರಲಿಲ್ಲ. ಓಡಬಲ್ಲವರು ಓಡಿಹೋದರು. ಲೂಟಿ ಅಡೆತಡೆಯಿಲ್ಲದೆ ಮುಂದುವರಿಯಿತು.” ಆದರೂ, ಅವರಿಗೆ ಗಾಜೀಪುರಕ್ಕೆ ಒಟ್ಟಾರೆಯಾಗಿ ಪಾಠ ಕಲಿಸಲೇಬೇಕಾಗಿತ್ತು. 1850ರ ದಶಕದಲ್ಲಿ ಸ್ಥಳೀಯರು ಇಂಡಿಗೊ ಕೃಷಿಕರ ಮೇಲೆ ದಾಳಿ ಮಾಡಿದಾಗ ಬ್ರಿಟಿಷ್ ವಿರೋಧಿ ದಂಗೆಗಳ ದಾಖಲೆಯನ್ನು ಜಿಲ್ಲೆಯು ಹೊಂದಿತ್ತು. ಈ ಬಾರಿ ಲಾಠಿ ಮತ್ತು ಗುಂಡುಗಳ ಮೂಲಕ ಪಾಠ ಕಲಿಸಿ ಬ್ರಿಟಿಷರು ತಮ್ಮ ಹಳೇ ಬಾಕಿಯನ್ನೂ ತೀರಿಸಿಕೊಂಡರು .






