ದಯಾನಿತಾ ಸಿಂಗ್ 2022ರಲ್ಲಿ ಪರಿಯೊಂದಿಗೆ ಕೈಜೋಡಿಸಿ ದಯಾನಿತಾ ಸಿಂಗ್-ಪರಿ ಡಾಕ್ಯುಮೆಂಟರಿ ಫೋಟೋಗ್ರಫಿ ಪ್ರಶಸ್ತಿಯನ್ನು ಸ್ಥಾಪಿಸಿದರು. ಈ ಮೊದಲ ಪ್ರಶಸ್ತಿಯನ್ನು ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದ ಎಂ. ಪಳನಿ ಕುಮಾರ್ ಗೆದ್ದರು.
ಈ ವರ್ಷದ ದಯಾನಿತಾ ಸಿಂಗ್- ಪರಿ ಡಾಕ್ಯುಮೆಂಟರಿ ಫೋಟೋಗ್ರಫಿ ಪ್ರಶಸ್ತಿಗೆ ಅವರುಪ್ರತಿಭಾವಂತ ಛಾಯಾಗ್ರಾಹಕರಾದ, ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದ ಆಯ್ನಾ ಅವರನ್ನು ಆಯ್ಕೆ ಮಾಡಿದ್ದಾರೆ.
ಆಯ್ನಾ ಫೋಟೊಗ್ರಫಿಯಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದು ವೈಯಕ್ತಿಕ ಕಾರಣಕ್ಕಾಗಿ. ಅವರು ತಾನು ಮರೆಯಬೇಕೆಂದುಕೊಂಡಿದ್ದನ್ನು ಒಂದೆಡೆ ದಾಖಲಿಸಿ ಇಡುವ ಸಲುವಾಗಿ ಇದನ್ನು ಕಲಿತರು. ಮುಂದೆ ಬಂಡಾಯವನ್ನು ಹೇಳುವ ಸಾಧನವಾಗಿ ತೋರುವುದರ ಜೊತೆಗೆ ಕೆಮೆರಾ ಅನೇಕ ಜನರ ಹೇಳಲಾಗದ ಕತೆಗಳನ್ನು ಹೇಳುವುದಕ್ಕೂ ಬಳಸಬಹುದು ಎಂದು ಅವರಿಗೆ ತೋಚಿತು. ಸೆಬಾಸ್ಟಿಯೊ ಸಾಲ್ಗಾಡೊ, ವಿವಿಯನ್ ಮೈಯರ್, ಶಂಕರ್ ಸರ್ಕಾರ್, ಪಳನಿ ಕುಮಾರ್ ಮತ್ತು ಇತರರ ಕೆಲಸಗಳನ್ನು ಕಂಡು ಅವರ ಮನಸ್ಸಿನಲ್ಲಿ ಈ ಸ್ಪಷ್ಟತೆ ಮೂಡಿತು. ಕೋವಿಡ್ -19 ಮಹಾಮಾರಿಯ ಉತ್ತುಂಗದಲ್ಲಿ ಪರಿಯೊಂದಿಗೆ ಕೆಲಸ ಮಾಡುವ ಮೂಲಕ ಅವರೊಳಗಿನ ಈ ಜಾಗೃತಿ ಮತ್ತಷ್ಟು ಬಲಗೊಂಡಿತು.
ಆಯ್ನಾದ ಕೆಮರಾ ಕಣ್ಣು ಕಾಮಾಟಿಪುರದ ಲೈಂಗಿಕ ಕಾರ್ಯಕರ್ತರ ಮತ್ತು ಕೋವಿಡ್-19 ಪಿಡುಗಿನ ಸಮಯದಲ್ಲಿ ಯಾವುದೇ ಆರೋಗ್ಯ ಸಂಬಂಧಿ ಸುರಕ್ಷತೆಗಳಿಲ್ಲದೆ ಅಸಹಾಯಕರಾಗಿದ್ದ ವಲಸೆ ಕಾರ್ಮಿಕರ ಬದುಕನ್ನು ಸೆರೆಹಿಡಿದಿದೆ. ಒಟ್ಟು ಸುಮಾರು 23 ಛಾಯಾಚಿತ್ರ ಕಥೆಗಳ ಮೂಲಕ ಆಯ್ನಾ ನಗರದ ಅವ್ಯವಸ್ಥಿತ ಮೂಲೆಗಳಲ್ಲಿ ಜೀವನ ಸಾಗಿಸುವ ವಿಭಿನ್ನ ಪಾತ್ರಗಳ ಸರಣಿಯನ್ನು ನಮಗೆ ತೋರಿಸಿದ್ದಾರೆ - ಮುಂಬಯಿ ಲೋಕಲ್ ರೈಲಿನಲ್ಲಿ ಬದುಕು ಹುಡುಕುವ ಒಬ್ಬ ರಾಜಸ್ಥಾನಿ ವಲಸೆ ಸಂಗೀತಗಾರ, ನಗರದ ಟ್ಯಾಕ್ಸಿ ಚಾಲಕರು, ಗೇಟ್ವೇ ಆಫ್ ಇಂಡಿಯಾದ ಛಾಯಾಗ್ರಾಹಕರು, ಒಬ್ಬ ಕತ್ತೆ ಹಾಲು ಮಾರಾಟಗಾರ, ಮುಂಬಯಿಯ ರಸ್ತೆಗಳಲ್ಲಿ ತನಗೆ ತಾನೇ ಚಾಟಿಯಲ್ಲಿ ಬಡಿದುಕೊಳ್ಳುತ್ತಾ ಬೇಡುವ ಕರ್ನಾಟಕದ ವಲಸಿಗೆ. ಈ ಕಥೆಗಳಲ್ಲಿ ನಗರಗಳಲ್ಲಿ ವಾಸಿಸುವ ಗ್ರಾಮೀಣ ಜನರ ಪರವಾಗಿ ತೋರಿಸುವ ಸೂಕ್ಷ್ಮತೆ ಮತ್ತು ಸಹಾನುಭೂತಿಯು ಸರಿಸಾಟಿಯಿಲ್ಲದ್ದು.















