15 ವರ್ಷದವನಾಗಿದ್ದಾಗ ವೀರರಾಘವನ್ ಅವರು ತಮಿಳುನಾಡಿನ ಅನುಮಂದೈ ಗ್ರಾಮದ ಮಾರಿಯಮ್ಮನ್ ಕೋಯಿಲ್ನ ಬೀದಿಯಲ್ಲಿ ರಾತ್ರಿಯಿಡೀ ನಿದ್ದೆಗೆಟ್ಟು ನೋಡಿದ ಆ ದೃಶ್ಯಗಳು ಅವರನ್ನು ಮಂತ್ರಮುಗ್ಧಗೊಳಿಸಿದ್ದವು. ಸದ್ಯ ಎಪ್ಪತ್ತರ ಹರೆಯದಲ್ಲಿರುವ ಇವರು, “ಅವರೆಲ್ಲರೂ ಅದ್ದೂರಿಯಾದ ವೇಷಭೂಷಣಗಳನ್ನು ಧರಿಸಿ, ಹೊಳೆಯುವ ಕಿರೀಟಗಳು, ಚಿನ್ನ ಲೇಪಿಸಿದ ಆಭರಣಗಳನ್ನು ತೊಟ್ಟುಕೊಂಡು, ಮುಖಕ್ಕೆ ಸುಂದರಾವಾಗಿ ಬಣ್ಣ ಹಚ್ಚಿ ಮೇಕಪ್ ಮಾಡಿಕೊಂಡಿದ್ದರು. ಹಾಡಿಕೊಂಡು ಕುಣಿಯುತ್ತಿದ್ದರು, ಅಭಿನಯಿಸುತ್ತಿದ್ದರು. ಜನ ಎಲ್ಲಾ ಅವರ ಅಭಿನಯವನ್ನು ಕಣ್ಣು ಬಾಯಿ ಬಿಟ್ಟು ನೋಡುತ್ತಿದ್ದರು. ಪ್ರೇಕ್ಷಕರ ಮಧ್ಯೆ ಕುಳಿತಿದ್ದ ತಾತಂದಿರು ಮತ್ತು ಪಾಟಿಗಳು (ಅಜ್ಜ-ಅಜ್ಜಿಯಂದಿರು) ದೇವರನ್ನು ಪ್ರಾರ್ಥಿಸುವಂತೆ ಕೈಗಳನ್ನು ಮುಗಿದು ನೋಡುತ್ತಿದ್ದರು. ನೋಡಲು ತುಂಬಾ ತಮಾಷೆಯಾಗಿತ್ತು,” ಎಂದು ತಮ್ಮ ಯೌವನದ ದಿನಗಳ ನೆನಪು ಮಾಡಿಕೊಂಡರು.
ಆ ರಾತ್ರಿ ಅವರು ಮೊದಲ ಬಾರಿಗೆ ನೋಡಿದ ಬೀದಿ ನಾಟಕದ ಒಂದು ಪ್ರಕಾರವಾದ “ತೆರುಕೂತ್ತ್” ಆ ಹಿರಿಯ ಕಲಾವಿದನ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ. “ಊಟ ಸೇರಲಿಲ್ಲ, ನಿದ್ದೆ ಬರಲಿಲ್ಲ. ಒಳಗೊಳಗೆ ನನ್ನ ಮನಸು, ‘ನಾನೂ ಅವರೊಂದಿಗೆ ಹೋಗಬೇಕು. ಅವರ ಕೆಲಸವನ್ನು ನಾನೂ ಮಾಡಬೇಕುʼ ಎಂದು ಹೇಳುತ್ತಿತ್ತು,” ಎಂದು ಅವರು ಹೇಳುತ್ತಾರೆ. ಆಗ ಅವರು ಆರನೇ ತರಗತಿಯಲ್ಲಿದ್ದರು, ಆಗಲೇ ಅವರು ತಾವು ಮುಂದೆ ಏನು ಮಾಡಬೇಕು ಎಂಬುದನ್ನು ನಿರ್ಧರಿಸಿದ್ದರು. ಆ ಕಾಲದಲ್ಲಿ ಸಂಗೀತ, ನೃತ್ಯ ಅಥವಾ ಕತೆ ಹೇಳುವುದನ್ನು ಕಲಿಸಲು ಯಾವುದೇ ಔಪಚಾರಿಕ ತರಬೇತಿ ಇಲ್ಲದೇ ಇದ್ದರಿಂದ ಅವರು ಶಾಲೆ ಬಿಟ್ಟು ತೆರುಕೂತ್ತ್ ಮೇಳಕ್ಕೆ ಸೇರಿದರು.
ಕೃಷಿ ಕಾರ್ಮಿಕರಾಗಿದ್ದ ಇವರ ತಂದೆ-ತಾಯಿ ತಮ್ಮ ಮಗನ ಆಸೆಗೆ ಅಡ್ಡಿಬರಲಿಲ್ಲ. ಇವರು ತಮಿಳುನಾಡಿನಲ್ಲಿ ಹಿಂದುಳಿದ ಜಾತಿ ಎಂದು ಪರಿಗಣಿಸಲಾಗಿರುವ ವಣ್ಣಿಯರ್ ಸಮುದಾಯಕ್ಕೆ ಸೇರಿದವರು. “ನಮಗೆ ಹೆಚ್ಚು ಸಂಪಾದನೆಯಾಗುತ್ತಿರಲಿಲ್ಲ, ಆದರೆ ಕಲಿಯುವ ಉತ್ಸಾಹ ಜಾಸ್ತಿ ಇತ್ತು. ಆರಂಭದಲ್ಲಿ ಸಣ್ಣ ಪುಟ್ಟ ಪಾತ್ರಗಳನ್ನು ಕೊಟ್ಟರು,” ಎಂದು ಹೇಳುವ ವೀರರಾಘವನ್ ಅವರಿಗೆ ಮೊದಲ ಬಾರಿಗೆ ಪ್ರಮುಖ ಪಾತ್ರವಾಗಿ ಮಹಾಭಾರತ ಆಧರಿತ ಪ್ರಸಂಗವೊಂದರಲ್ಲಿ ದುರ್ಯೋಧನನ ಪಾತ್ರವನ್ನು ನೀಡಲಾಗಿತ್ತು. ಇದಕ್ಕಾಗಿ ಇವರು ಹಗಲು ರಾತ್ರಿ ಅಭ್ಯಾಸ ಮಾಡಿದ್ದರು. “ನಂಗೆ ಯಾವ ಹಿಂಜರಿಕೆಯೂ ಇರಲಿಲ್ಲ, ತುಂಬಾ ಉತ್ಸುಕನಾಗಿದ್ದೆ,” ಎಂದು ಹೇಳುವಾಗ ಎಷ್ಟು ವರ್ಷಗಳಾದರೂ ಮಾಸದ ಮುಗುಳುನಗೆ ಮತ್ತು ಹೆಮ್ಮೆ ಅವರ ಮುಖದಲ್ಲಿ ಮೂಡಿತು.
ವೀರರಾಘವನ್ ಅವರು ಕೇವಲ ಈ ಕಲೆಯನ್ನು ಮಾತ್ರ ಕಲಿಯಲಿಲ್ಲ, ಅವರು ಇದರಲ್ಲಿ ಪ್ರದರ್ಶನಗೊಳ್ಳುವ ಮಹಾಕಾವ್ಯಗಳನ್ನೂ ಅರ್ಥಮಾಡಿಕೊಳ್ಳುತ್ತಿದ್ದರು. ಒಳ್ಳೆಯ ಓದುಗರಾಗಿರುವ ಇವರು, ನೂಲ್ ಅಗರತಿ, ಪೆರಿಯ ಪುರಾಣಂ ಮತ್ತು ಭಾರತಂನಂತಹ ತಮಿಳಿನ ಕಾವ್ಯಗಳನ್ನು ಓದಿ ತಮ್ಮ ಅರಿವನ್ನು ಬೆಳೆಸಿಕೊಂಡಿದ್ದರು.
ತೊಂಬತ್ತರ ದಶಕದ ವರೆಗೆ ಅವರಿಗೆ ಒಂದು ಪ್ರದರ್ಶನಕ್ಕೆ 5 ರಿಂದ 10 ರುಪಾಯಿ ಸಂಭಾವನೆ ಸಿಗುತ್ತಿತ್ತು. “ಇಡೀ ವರ್ಷ ನಾವು ಪ್ರದರ್ಶನ ನೀಡುತ್ತೇವೆ, ವರ್ಷದ ಸುಮಾರು 250 ದಿನಗಳ ಕಾಲ ಇದನ್ನೇ ಮಾಡುತ್ತೇವೆ,” ಎಂದು ನಗುತ್ತಾ ಅವರು ಹೇಳುತ್ತಾರೆ. ಗ್ರಾಮ ಪಂಚಾಯತ್ ಕೊಡುವ ಹಣ ಮತ್ತು ಊರವರಿಂದ ಸಂಗ್ರಹಿಸಿದ ದೇಣಿಗೆಯಿಂದ ಈ ಪ್ರದರ್ಶನ ನಡೆಸಲಾಗುತ್ತದೆ. “ಪ್ರದರ್ಶನವನ್ನು ಮೆಚ್ಚಿ ಕಲಾರಸಿಕರೂ ದೇವರಿಗೆ ಕಾಣಿಕೆ ಕೊಡುವ ಭಾವದಿಂದಲೇ ನಮಗೆ ಹಣ ಕೊಡುತ್ತಾರೆ,” ಎನ್ನುತ್ತಾರೆ ಅವರು. ಇವರಿಗೆ ಇದರಿಂದ ಹೆಚ್ಚೇನು ಸಂಪಾದನೆಯಾಗುವುದಿಲ್ಲ, ಆದರೆ ಕಲೆಯ ಬಗ್ಗೆ ವಿಪರೀತ ಹುಚ್ಚು.




























