“ಶೋಷಿತ ಜನರನ್ನು ಪ್ರತಿನಿಧಿಸುವುದಾಗಿ ಹೇಳಿಕೊಳ್ಳುವ ಹವಾನಿಯಂತ್ರಿತ ಕೋಣೆಗಳೊಳಗಿನ ಕಲಾ ಪ್ರದರ್ಶನಗಳು ಅಂತಹ ಶೋಷಿತ ಜನರನ್ನೇ ಸ್ವಾಗತಿಸುವುದಿಲ್ಲ. ಒಮ್ಮೆ ದೆಹಲಿಯಲ್ಲಿ ನನ್ನ ಕಲಿಕೆಯ ಭಾಗವಾಗಿ ಒಂದು ಇಂತಹ ಕಲಾ ಪ್ರದರ್ಶನಕ್ಕೆ ಹೋಗಿದ್ದೆ. ಆ ಸಭಾಂಗಣದಲ್ಲಿ ಶೋಷಿತ ಜನರನ್ನು ಪ್ರತಿನಿಧಿಸುವ ಫೋಟೋಗಳು, ಶಿಲ್ಪಗಳು ಮತ್ತು ಚಿತ್ರಗಳು ಇದ್ದವು. ಆದರೆ ಅಲ್ಲಿದ್ದ ವಾತಾವರಣ ನನ್ನಲ್ಲಿ ನೀನು ಇಲ್ಲಿಗೆ ಸೇರಿದವಳಲ್ಲ ಎನ್ನುವ ಭಾವನೆಯನ್ನು ಮತ್ತೆ ಮತ್ತೆ ಹುಟ್ಟಿಸುತ್ತಿತ್ತು” ಎಂದ 22 ವರ್ಷದ ಹೈರುನಿಶಾ ಅವರ ದನಿಯಲ್ಲಿ ಒಂದು ಗಾಂಭೀರ್ಯವಿತ್ತು.
"ನೋಡಿ ಈಗಾಗಲೇ ಸಮಾಜದಿಂದ ಹೊರಗಿಡಲ್ಪಟ್ಟಿರೋ ಹುಡುಗಿಯೊಬ್ಳು ಇಂತಹ ಜಾಗಕ್ಕೆ ಬಂದಾಗ ಅವಳಿಗೆ ಆ ಜಾಗ ತನ್ನದು ಅನ್ನಿಸೋದಾದ್ರೂ ಹೇಗೆ ಹೇಳಿ? ನಾನೇನಾದ್ರೂ ಇಂತಹ ಕಲಾಪ್ರದರ್ಶನ ಏರ್ಪಡಿಸಿದ್ರೆ ಅದು ಬೇರೆ ರೀತಿಯಲ್ಲಿ ಇರುತ್ತೆ. ಒಂದಷ್ಟು ಫೋಟೋಗಳನ್ನು ಗೋಡೆಗೆ ನೇತುಹಾಕಿ ಅದರ ಕುರಿತು ಯಾರೋ ಒಬ್ಬರು ಮಾತಾಡೋದ್ರಲ್ಲಿ ಯಾವ ಅರ್ಥಾನೂ ಇಲ್ಲ. ನಾನು ಆ ಫೋಟೋಗಳಲ್ಲಿ ಇರೋ ಜನರನ್ನ ಅಲ್ಲಿಗೆ ಕರೆಸುತ್ತೇನೆ. ಅವರು ಪ್ರದರ್ಶನಕ್ಕೆ ಬಂದ ಜನರ ಜೊತೆ ಮಾತಾಡೋದಕ್ಕೆ ಸಾಧ್ಯವಾಗುವ ಹಾಗೆ ಮಾಡ್ತೀನಿ. ಆ ಫೋಟೋಗಳು ಬಿಂಬಿಸುವ ವಾತಾವರಣವನ್ನೂ ಪ್ರದರ್ಶನ ನಡೆಯುತ್ತಿರುವ ಸ್ಥಳದ ವಾತಾವರಣವನ್ನು ಜೋಡಿಸುತ್ತೇನೆ" ಎಂದ ಅವರ ಯೋಚನೆಗಳು ಪಟಪಟನೆ ಓಡುತ್ತಿದ್ದವು. ಅವರು ನಿರೂಪಣೆ ಮಾಡುತ್ತಿದ್ದ ಕಾಲೇಜ್ ಕಾರ್ಯಕ್ರಮಕ್ಕೆ ಮರಳಲು 20 ನಿಮಿಷಗಳಷ್ಟೇ ಉಳಿದಿತ್ತು.
ಇದೀಗ ಹೈರುನಿಶಾ ಹೊಸದೆಹಲಿಯ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ಯೂನಿವರ್ಸಿಟಿಯಲ್ಲಿ ಮಾಸ್ ಕಮ್ಯುನಿಕೇಷನ್ ಡಿಗ್ರಿ ಓದುತ್ತಿದ್ದಾರೆ. ಇವರು ಉತ್ತರ ಚೆನೈ ನಗರದ ಮುಸ್ಲಿಂ ಬಾಹುಳ್ಯದ ಏರಿಯಾವೊಂದಕ್ಕೆ ಸೇರಿದವರು. ಹೈರುನಿಶಾ ತನ್ನ ಕುಟುಂಬದಲ್ಲಿ ಶಾಲೆಗೆ ಕಾಲಿಟ್ಟ ಮೊದಲ ಹೆಣ್ಣು. "ಅಲ್ಲಿಂದ ಇಷ್ಟು ದೂರ ಬಂದು ಓದ್ತಿರೋ ಮೊದಲ ವ್ಯಕ್ತಿ ನಾನು. ನಮ್ಮ ಸಮುದಾಯದಲ್ಲಿ ಹೆಣ್ಣುಮಕ್ಕಳನ್ನು ಮನೆಯಲ್ಲೇ ಇರುವಂತೆ ಹೇಳಲಾಗುತ್ತದೆ. ಡಿಗ್ರಿ ಓದೋದಕ್ಕೆಲ್ಲ ಬಿಡೋದಿಲ್ಲ ಅಷ್ಟಾಗಿ. ನಮಗೆ 18 ತುಂಬ್ತಿದ್ದ ಹಾಗೆ ಮದುವೆ ಮಾಡೋದಕ್ಕೆ ಎಲ್ಲ ಕಡೆಯಿಂದ ಒತ್ತಡ ಬರೋದಕ್ಕೆ ಶುರುವಾಯ್ತು. ಆದರೆ ನಾನು ಆ ಜಗತ್ತಿನಿಂದ ತಪ್ಪಿಸಿಕೊಂಡು ಓಡಿಬಂದೆ. ಫೋಟೋಗ್ರಫಿ ನನಗೆ ಹೊರಗೆ ಒಂದು ದೊಡ್ಡ ಜಗತ್ತಿದೆ ಅನ್ನೋದನ್ನು ತೋರಿಸಿತು."
















