"ಅಲುಮಿನಿಯಾ ಪಾತಿರಂ [ಅಲ್ಯೂಮಿನಿಯಂ ಪಾತ್ರೆಗಳು]!
“ನನ್ನ ದೇಹದಲ್ಲಿ ಎಷ್ಟು ಶಕ್ತಿ ಇದೆಯೋ ಅದೆಲ್ಲವನ್ನೂ ಒಟ್ಟುಗೂಡಿಸಿ ಕೂಗುತ್ತೇನೆ. ಸ್ಪೀಕರ್ ಬಳಸುವುದಿಲ್ಲ. ನನ್ನ ಉಸಿರೇ ನನ್ನ ಶಕ್ತಿ.”
“ನನ್ನ ಹೆಸರು ಗಣೇಶನ್. ನಾನು ಸೈಕಲ್ ಮೇಲೆ ಸಾಮಾನುಗಳನ್ನು ಹೇರಿಕೊಂಡು ವ್ಯಾಪಾರ ಮಾಡುತ್ತೇನೆ. ಪ್ಲಾಸ್ಟಿಕ್ ಹಾಗೂ ಲೋಹದಿಂದ ತಯಾರಿಸಿದ ವಸ್ತುಗಳ ವ್ಯಾಪಾರ ಮಾಡುವ ಮೂಲಕ ನಾನು ನನ್ನ ಮಕ್ಕಳನ್ನು ಸಾಕುತ್ತೇನೆ. ಇಂದು ನನ್ನ ಮಕ್ಕಳು ಊಟ ಮಾಡಬೇಕೆಂದರೆ ನಾನು ಕೆಲವು ಕೊಡಪಾನಗಳನ್ನು ಮಾರಬೇಕಿದೆ. ನಾವು ಮುಂದಕ್ಕೆ ಹೋಗೋಣ!”
ತಮಿಳುನಾಡಿನ ಕಾರೈಕುಡಿ ಸಮೀಪದ ಕಾನಾಡುಕಾಥಾನ್ ಬಳಿ ನಾನು ಗಣೇಶನ್ ಅವರನ್ನು ಭೇಟಿಯಾದೆ. ಆ ಸಂದರ್ಭದಲ್ಲಿ ನಾನು ಒಬ್ಬ ವ್ಯಕ್ತಿಯ ಬದುಕನ್ನು ಛಾಯಾಚಿತ್ರಗಳ ಮೂಲಕ ದಾಖಲಿಸುವ ಪ್ರಯತ್ನದಲ್ಲಿದ್ದೆ. ಅವರನ್ನು ಭೇಟಿ ಮಾಡಿದ ದಿನ, 61 ವರ್ಷದ ಗಣೇಶನ್ ಆಗಷ್ಟೇ ಕೊತ್ತಮಂಗಲಂ ಗ್ರಾಮಕ್ಕೆ ಪ್ರಯಾಣ ಬೆಳೆಸಿದ್ದರು. ನನ್ನ ವಿನಂತಿಯನ್ನು ಕೇಳಿದ ಅವರು, ಮುಖದ ಮೇಲೆ ದೊಡ್ಡ ನಗು ತಂದುಕೊಂಡು ತಕ್ಷಣವೇ ಒಪ್ಪಿಕೊಂಡರು.






















