ನಾನು ತೇನ್ಕಾಶಿ ಜಿಲ್ಲೆಯ ಸರ್ಕಾರಿ ಮಾಡೆಲ್ ಸ್ಕೂಲ್ನ 12ನೇ ತರಗತಿ ವಿದ್ಯಾರ್ಥಿ ಎಸ್. ಕೀರ್ತಿ. ಶಾಲೆಯ ಮೂಲಕ ನಾನು ಒಂದು ವರ್ಷದ ಫೋಟೋಗ್ರಫಿ ಕಾರ್ಯಾಗಾರವೊಂದರಲ್ಲಿ ಭಾಗವಹಿಸಿದೆ. ಅಲ್ಲಿಯವರೆಗೂ, ನಂಬಿ, ಮದುವೆ ಮತ್ತು ದೊಡ್ಡ ಸಮಾರಂಭಗಳಲ್ಲಿ ಮಾತ್ರ ಫೋಟೋಗಳನ್ನು ತೆಗೆಯುತ್ತಾರೆ ಎಂದೇ ಅಂದುಕೊಂಡಿದ್ದೆ. ಆದರೆ ಇದೇ ಮೊದಲ ಬಾರಿಗೆ ನಮ್ಮಂತಹ ದುಡಿಯುವ ವರ್ಗದ ಜನರ ಜೀವನ ಮತ್ತು ಹೋರಾಟಗಳನ್ನು ಫೋಟೋಗಳ ಮೂಲಕ ದಾಖಲಿಸಬಹುದು ಮತ್ತು ಅವು ನಮ್ಮ ಘನತೆಯನ್ನು ಎತ್ತಿ ಹಿಡಿಯಬಲ್ಲವು ಎನ್ನುವುದು ಅರ್ಥವಾಯಿತು.
ಒಂದು ದಿನದ ಕಾರ್ಯಾಗಾರದಲ್ಲಿ, ಒಬ್ಬರು ತರಬೇತುದಾರರು ದುಡಿಯುವ ಜನರ ಜೀವನದ ಕುರಿತು ನಡೆದ ಒಂದು ಫೋಟೋ ಪ್ರದರ್ಶನದ ಬಗ್ಗೆ ಹೇಳಿ ನಂತರ ನನ್ನ ಕೈಗೆ ಒಂದು ಕ್ಯಾಮೆರಾವನ್ನು ಕೊಟ್ಟರು. ಮುಂದಿನ ಮೂರು ದಿನಗಳ ಕಾಲ ನಾನು ಜನರ ಜೀವನವನ್ನು ಚಿತ್ರೀಕರಿಸಬೇಕಿತ್ತು. ನನಗೆ ಏನು ಮಾಡುವುದೆಂದು ತಿಳಿಯಲಿಲ್ಲ. ಮೊದಲ ದಿನ, ಹೇಗೆ ಚಿತ್ರೀಕರಿಸಬೇಕು ಅಥವಾ ಏನನ್ನು ವಿಷಯವಾಗಿ ಇಟ್ಟುಕೊಳ್ಳಬೇಕು ಎನ್ನುವುದು ಹೊಳೆಯಲಿಲ್ಲ. ಆಗ, "ನಿಮ್ಮ ಕಥೆಯನ್ನು ಬೇರೆಲ್ಲೋ, ದೂರದಲ್ಲಿ ಹುಡುಕಬೇಡಿ. ಅದು ಯಾವಾಗಲೂ ನಿಮ್ಮ ಕಣ್ಣ ಮುಂದೆಯೇ ನಡೆಯುತ್ತಿರುತ್ತದೆ" ಎಂದು ನನ್ನ ತರಬೇತುದಾರರು ಹೇಳಿದ ಮಾತುಗಳು ನನಗೆ ನೆನಪಾದವು.
ಆಗ ನನಗೆ ಕಾರ್ಯಾಗಾರದಲ್ಲಿ ಓದಿದ್ದ 'ಬದುಕು ಕಟ್ಟಿಕೊಂಡ ಬೀದಿ ದೀಪದಡಿ ಕುಳಿತು ಅಮ್ಮನ ಬದುಕಿನ ಕತೆ ಧೇನಿಸುತ್ತಾ…' ಎಂಬ ಕಥೆ ನೆನಪಾಯಿತು. ನಾನೂ ಅಮ್ಮನ ಹೋರಾಟವನ್ನು ಅರ್ಥಮಾಡಿಕೊಂಡು ಅವರ ಬದುಕನ್ನು ದಾಖಲಿಸಲು ನಿರ್ಧರಿಸಿದೆ. ಈ ಸಮಯದಲ್ಲಿ ಬೆಳಿಗ್ಗೆಯಿಂದ ರಾತ್ರಿಯವರೆಗೂ ಅಮ್ಮ ಕೆಲಸ ಮಾಡುವುದನ್ನು ನೋಡುತ್ತಾ, ಅವರೊಂದಿಗೆ ಸಾಕಷ್ಟು ಮಾತನಾಡಿದೆ. ಈ ದಾಖಲೀಕರಣದ ಮೂಲಕ ಅಮ್ಮ ಎಷ್ಟು ಕಷ್ಟದ ಜೀವನ ನಡೆಸುತ್ತಿದ್ದಾರೆನ್ನುವುದನ್ನು ಅರಿತುಕೊಂಡೆ. ಅವರ ಹೆಸರು ಎಸ್. ಮುತ್ತುಲಕ್ಷ್ಮಿ ಮತ್ತು ಅವರಿಗೆ 42 ವರ್ಷ. ಅವರೊಬ್ಬ ಬಹಳ ಧೈರ್ಯಶಾಲಿ ಮತ್ತು ದಿಟ್ಟ ಮಹಿಳೆ.
ಅಮ್ಮ ನಮಗಾಗಿ ತಮ್ಮ ಕನಸುಗಳನ್ನು ತ್ಯಾಗ ಮಾಡಿದವರು. ಮೊದಲು ಅಪ್ಪ ಹಳ್ಳಿಯಲ್ಲಿ ಒಂದು ಸಣ್ಣ ಅಂಗಡಿ ನಡೆಸುತ್ತಿದ್ದರು. ಅವರ ಯೌವನದಲ್ಲಿ, ಅಪ್ಪ ಕೆಲಸ ಹುಡುಕಿಕೊಂಡು ಹೊರಗೆ ಹೋಗುತ್ತಿದ್ದರು. ಆಗ ನನ್ನಜ್ಜಿ 2,000 ರೂಪಾಯಿ ಸಾಲ ಮಾಡಿ, ಅವರಿಗೆ ಊರಿನಲ್ಲಿಯೇ ಒಂದು ಅಂಗಡಿ ಹಾಕಿಕೊಟ್ಟರು. ಅವರು ಸೈಕಲ್ಲಿನಲ್ಲಿ ಹತ್ತಿರದ ಗ್ರಾಮಕ್ಕೆ ಹೋಗಿ ಸಾಮಾನುಗಳನ್ನು ತಂದು ವ್ಯಾಪಾರ ಶುರು ಮಾಡಿದರು. ಇದು ನಡೆದಿದ್ದು 1997ರಲ್ಲಿ.
ಆದರೆ 2016ರಲ್ಲಿ ದುರದೃಷ್ಟಕರ ಘಟನೆಯೊಂದು ನಡೆಯಿತು. ಆ ಸಮಯದಲ್ಲಿ ಎಮ್ ಎಸ್ ಆಫೀಸ್ ಕಲಿಯಲು ಆರಂಭಿಸಿ ಎರಡು ತಿಂಗಳಾಗಿತ್ತು. ಜೊತೆಗೆ ಅವರು ಬಿಎ (ತಮಿಳು) ಓದುವ ಸಲುವಾಗಿ ಕಾಲೇಜಿಗೆ ಸೇರುವ ಆಲೋಚನೆಯಲ್ಲೂ ಇದ್ದರು. ಆದರೆ ಅದೇ ಸಮಯದಲ್ಲಿ ನಾನು, ತಮ್ಮ ಮತ್ತು ಅಪ್ಪ ಅಪಘಾತವೊಂದಕ್ಕೆ ತುತ್ತಾದೆವು. ಅಪ್ಪನ ಕಾಲಿಗೆ ತೀವ್ರ ಗಾಯಗಳಾಗಿ ಆಪರೇಷನ್ ಮಾಡಬೇಕಾಗಿ ಬಂತು. ನನಗೆ ಮತ್ತು ಅಣ್ಣನಿಗೆ ಸಣ್ಣ ಮೂಗೇಟುಗಳಷ್ಟೇ ಆಗಿದ್ದವು. ಆ ಸಂದರ್ಭದಲ್ಲಿ ಅಮ್ಮನ ಬಳಿ ಅಪ್ಪನ ಆಪರೇಷನ್ ಖರ್ಚಿಗೆ ಸಾಕಾಗುವಷ್ಟು ಹಣ ಇದ್ದಿರಲಿಲ್ಲ. ಅವರು ಹೇಗೋ ಮಾಡಿ ಹಣ ಹೊಂದಿಸಿದರು. ಸಂಬಂದಿಕರಿಂದ ಸಾಲ ಹಾಗೂ ಚಿನ್ನ ಅಡವಿಡುವ ಮೂಲಕ ಅವರು ಹಣ ಒಟ್ಟು ಮಾಡಿದ್ದರು. ಅಂದು ಅವರು ಒಟ್ಟು ಅವರು ಮೂರು ಲಕ್ಷ ರೂಪಾಯಿಗಳನ್ನು ಒಟ್ಟುಗೂಡಿಸಿದ್ದರು. ಆದರೆ ಇದೆಲ್ಲದರಿಂದ ಅವರ ಮೇಲೆ ದೊಡ್ಡ ಜವಾಬ್ದಾರಿಯ ಹೊರೆ ಬಿದ್ದಿತ್ತು.
ಇದು ಅಮ್ಮನ ಕನಸುಗಳಿಗೆ ಪೂರ್ಣವಿರಾಮ ನೀಡಿತು. ಆ ಸಂದರ್ಭದಲ್ಲಿ ತನಗೆ ಏನನ್ನಿಸಿತು ಎನ್ನುವುದರ ಕುರಿತು ಅಮ್ಮ ಎಂದೂ ಮಾತನಾಡಿದವರಲ್ಲ. ತನ್ನ ಕುಟುಂಬವನ್ನು ಪ್ರೀತಿಸುವುದು ತನ್ನ ಜವಾಬ್ದಾರಿಯೆಂದು ಅವರು ಭಾವಿಸಿದ್ದರು. ಅವರು ಎಂದೂ ತನ್ನನ್ನು ತಾನು ಮುಖ್ಯ ಎಂದುಕೊಂಡವರಲ್ಲ. ಇದೇ ಕಾರಣಕ್ಕಾಗಿ ನಾನು ಅವರ ಬದುಕನ್ನು ದಾಖಲಿಸಲು ನಿರ್ಧರಿಸಿದ್ದು. ಫೋಟೋ ಡಾಕ್ಯುಮೆಂಟರಿಯನ್ನು ಮುಗಿಸಿ ಶಾಲೆಗೆ ಸಲ್ಲಿಸಿದೆ. ನಂತರ ಅದು ಚೆನ್ನೈ ನಗರದಲ್ಲಿ ಪ್ರದರ್ಶನಕ್ಕೂ ಆಯ್ಕೆಯಾಯಿತು. ಈ ಕುರಿತು ನನ್ನ ಪೋಷಕರು ಬಹಳ ಹೆಮ್ಮೆಪಟ್ಟರು. ಅಪ್ಪನಿಗೆ ಫೋಟೋಗ್ರಾಫರ್ ಆಗುವ ಕನಸು ಕಂಡಿದ್ದರು. ಅವರು ಈಗ ನನ್ನ ಫೋಟೋಗ್ರಫಿ ಜರ್ನಿಯ ಕುರಿತು ಉತ್ಸುಕರಾಗಿದ್ದಾರೆ.
ಎಕ್ಸಿಬಿಷನ್ ನಡೆಯುತ್ತಿದ್ದ ಸ್ಥಳಕ್ಕೆ ಹೋಗಿ ನೋಡಿದಾಗ ನನಗೆ ಮೊದಲು ಕಾಣಿಸಿದ್ದೇ ಬ್ಯಾನರ್ ಮೇಲೆ ಇದ್ದ ಅಮ್ಮನ ಚಿತ್ರ. ಆ ಕ್ಷಣಕ್ಕೆ ನಾನು ಭಾವಪರವಶಳಾಗಿದ್ದೆ. ಆ ಪ್ರದರ್ಶನಕ್ಕೆ ಅನೇಕ ಕಲಾವಿದರು, ಪತ್ರಕರ್ತರು, ಫೋಟೋಗ್ರಾಫರುಗಳು, ಜೊತೆಗೆ ಕೆಲವು ವಿದೇಶಿಯರು ಸಹ ಬೇಟಿ ನೀಡಿದ್ದರು. ಅವರಲ್ಲಿ ಕೆಲವರು ಪೋಸ್ಟ್ ಕಾರ್ಡುಗಳ ಮೇಲೆ ನನ್ನ ಆಟೋಗ್ರಾಫ್ ಹಾಕಿಸಿಕೊಂಡರು. ಇನ್ನೂ ಕೆಲವರು ನನ್ನ ಕೆಲಸದ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದರು. ಆದರೆ ಈ ಪ್ರದರ್ಶನವನ್ನು ನೋಡಲು ಬರಲಾಗದ ಇಬ್ಬರೆಂದರೆ ಅಪ್ಪ ಮತ್ತು ಅಮ್ಮ. ನಾವು ಇಲ್ಲಿ ಎಕ್ಸಿಬಿಷನ್ ಮುಗಿಸುತ್ತಿದ್ದರೆ, ಅಮ್ಮ ಅಲ್ಲಿ ಬದುಕಿನ ಲೆಕ್ಕಾಚಾರಗಳನ್ನು ಸರಿದೂಗಿಸುವಲ್ಲಿ, ಸಂಘರ್ಷದ ಬದುಕಿನ ಬಂಡಿಯನ್ನು ಮುಂದೂಡುವಲ್ಲಿ ತೊಡಗಿದ್ದರೆನ್ನುವುದು ನನಗೆ ತಿಳಿದಿತ್ತು.
ಕೈಯಲ್ಲಿ ಕ್ಯಾಮೆರಾ ಹಿಡಿದು ಅಮ್ಮನ ಮೊದಲ ಫೋಟೋ ತೆಗೆದು ತೋರಿಸಿದಾಗ ಅವರ ಮುಖದಲ್ಲಿದ್ದ ಸಂಭ್ರಮ ಮತ್ತು ಭಾವನೆಗಳು ನನಗೆ ಈಗಲೂ ನೆನಪಿದೆ.
























