“ಮುಂಜಾನೆ ಶಾಲೆಗೆ ತೆರಳಲು ಮಕ್ಕಳನ್ನು ಎಬ್ಬಿಸಿ, ಅವರಿಗೆ ಒಳ್ಳೆಯ ಊಟವನ್ನು ತಯಾರಿಸಿ, ಅವರೊಂದಿಗೆ ಹೆಚ್ಚಿನ ಸಮಯವನ್ನು ಕಳೆಯುವ ತಾಯಿಯಾಗಬೇಕೆಂಬುದು ನನ್ನ ಇಚ್ಛೆ. ಆದರೆ ಅವರು ಏಳುವ ನಾಲ್ಕು ಗಂಟೆಗಳ ಮೊದಲೇ ನಾನು ಮನೆಯಿಂದ ಹೊರಡಬೇಕು. ವಾಪಸ್ಸು ಬರುವಾಗ ತಡ ರಾತ್ರಿಯಾಗಿರುತ್ತದೆ. ಅವರು ಗಾಢ ನಿದ್ದೆಯಲ್ಲಿರುತ್ತಾರೆ. ವಾರಪೂರ್ತಿ ನಾನು, ಭಾನುವಾರ ಯಾವಾಗ ಬರುತ್ತದೋ ಎಂದು ಕಾಯುತ್ತಿರುತ್ತೇನೆ. ಅಂದು ನಾನು ಎಂಟು ಗಂಟೆಗಳ ಕಾಲ ನಿದ್ರಿಸಿ, ದಿನದ ಮೂರು ಹೊತ್ತು ಉಂಡು, ಮನೆಯಲ್ಲಿ ನನ್ನ ಮಕ್ಕಳೊಂದಿಗೆ ಸ್ವಲ್ಪ ಸಮಯವನ್ನು ಕಳೆಯಬಹುದು.” ಎನ್ನುತ್ತಾರೆ ಅಮುಲು. ಆದರೆ ಇಂದು ಇನ್ನೂ ವಾರದ ದಿನ. ನಾನು ಮತ್ತು ಆಕೆ, ಮಾತನಾಡುತ್ತಾ, ಉತ್ತರ ಚನ್ನೈನ ತಿರುವೊಟ್ರಿಯೂರ್ನ ಅಕ್ಕಪಕ್ಕದ ಕಿರಿದಾದ ಗಲ್ಲಿಗಳಲ್ಲಿ ಸಾಗುತ್ತಿದ್ದೇವೆ. ಆಕೆಯು ತರಕಾರಿಗಳಿಂದ ತುಂಬಿದ ಗಾಡಿಯನ್ನು ತಳ್ಳುತ್ತಿದ್ದಾರೆ. ನಾನು ಕಾಲೇಜಿನಿಂದ ಮನೆಗೆ ಹೋಗುತ್ತಿದ್ದೇನೆ.
ಬೆಳಿಗ್ಗೆ ನಾನು ಹೊರಗೆ ಹೋಗುವಾಗ ಅಮುಲು ಅವರನ್ನು ನೋಡಿದೆ. ಈಗ ನಾನು ಮಧ್ಯಾಹ್ನ ಹಿಂದಿರುಗಿದಾಗಲೂ ಮೃದುವಾದ ಪೂನಂ ಸೀರೆಯನ್ನುಟ್ಟಿದ್ದ ಅಮುಲು, ತನ್ನೆಲ್ಲ ಶಕ್ತಿಯನ್ನು ಬಳಸಿ, ಸುಮಾರು ನೂರು ಕೆ.ಜಿ. ತೂಗುವ ಗಾಡಿಯನ್ನು ತಳ್ಳುತ್ತಾ ಇನ್ನೂ, ಬೀದಿಯಲ್ಲೇ ಇದ್ದಾರೆ. ಅದು 2024ರ ಬೇಸಿಗೆ. ತಿರುವಳ್ಳೂರ್ ಜಿಲ್ಲೆಯ ತಾಪಮಾನ ನಲವತ್ತು ಡಿಗ್ರಿ ಸೆಲ್ಸಿಯಸ್ಗಿಂತಲೂ ಹೆಚ್ಚಾಗುತ್ತದೆ. ಈ ಋತುವಿನ ಅತ್ಯಂತ ಹೆಚ್ಚಿನ ತಾಪಮಾನವು 44.3 ಸೆಲ್ಸಿಯಸ್ ಎಂದು ದಾಖಲಾಗಿದೆ. ನಲವತ್ತೊಂದರ ವಯಸ್ಸಿನ ತರಕಾರಿ ಮಾರುವ ಅಮುಲು ಅವರ ದಿನಚರಿಯಲ್ಲಿ ಈ ಯಾವುದೂ ಯಾವುದೇ ಬದಲಾವಣೆಗಳನ್ನು ತಂದಿರುವುದಿಲ್ಲ. ಸುಡು ಬಿಸಿಲಿನಲ್ಲೇ ಬದುಕನ್ನು ಸವೆಸುತ್ತಿರುವ ಭಾರತದ ಹತ್ತು ಮಿಲಿಯನ್ ಮಹಿಳಾ ಬೀದಿ ವ್ಯಾಪಾರಿಗಳ ಶೇ. 40ರಷ್ಟು ಜನರಲ್ಲಿ ಅಮುಲು ಸಹ ಒಬ್ಬರು. ಶೇ. 68ರಷ್ಟು ಬೀದಿ ವ್ಯಾಪಾರಿಗಳಂತೆ, ಇವರೂ ಸಹ ಬಿಸಿ ಗಾಳಿಯಲ್ಲಿಯೂ, ವಿರಾಮವಿಲ್ಲದೆ, ಮಧ್ಯಾಹ್ನದ ಊಟವೂ ಇಲ್ಲದೆ ದುಡಿಯುತ್ತಾರೆ.






















