ಅದು ನವೆಂಬರ್ ತಿಂಗಳ ಅಮಾವಾಸ್ಯೆ ದಿನ. ರಾತ್ರಿ ಒಂಬತ್ತು ಗಂಟೆಯ ಹೊತ್ತು. ತಮಿಳುನಾಡು ಕರಾವಳಿಯಲ್ಲಿನ ಪಳವೇರ್ಕಾಡು — ಪುಲಿಕಾಟ್ ಎಂದೂ ಕರೆಯುತ್ತಾರೆ — ಅಳಿವೆ ನಿಶ್ಶಬ್ದದಲ್ಲಿ ಮೀಯುತ್ತಿದೆ. ಒಂದು ನೀಲಿ ದೋಣಿ ಅಲೆಗಳ ಮೇಲೆ ತೂಗುತ್ತಾ ತೆರೆದ ಸಮುದ್ರದ ಕಡೆ ತೇಲುತ್ತಿದೆ.
ಅದೇ ದೋಣಿಯ ಮೇಲೆ ಕಾಲು ಅಗಲಿಸಿ ನಿಂತಿದ್ದಾರೆ ಸರತ್ ಕುಮಾರ್, ಅರುಣ್ ಕುಮಾರ್ ಮತ್ತು ಸೇವಿತ್ ಕುಮಾರ್. ಅವರ ಕಾಲಡಿಯಲ್ಲಿ ಏಳು ಮರದ ಕಂಬಗಳು, ಸುರುಳಿ ಬಿಚ್ಚಲು ಕಾಯುತ್ತಿರುವ ನೈಲಾನ್ ಬಲೆಗಳು ಬಿದ್ದುಕೊಂಡಿದ್ದವು. ಮೂವರೂ ತೀರದ ದೋಣಿರೇವು ಗ್ರಾಮದವರು— ಮೀನು ಹಿಡಿಯುವ ಕಲೆ ಅವರಿಗೆ ಬಾಲ್ಯದಲ್ಲೇ ಕೈವಶವಾಗಿತ್ತು.
ಕಡಲ ಸಮೀಪದಲ್ಲೇ ಬೆಳೆದರೂ, ನನ್ನ ಪಾಲಿಗೆ ಸಮುದ್ರ ಮಾತ್ರ ಕನಸಾಗಿಯೇ ಉಳಿದಿತ್ತು. ಅಮ್ಮ ಒಬ್ಬಳೇ ನಮ್ಮನ್ನು ಸಾಕಿದವಳು; ನನ್ನ ಮತ್ತು ತಂಗಿಯ ಸುರಕ್ಷತೆಯ ಚಿಂತೆ ಅವಳನ್ನು ಸದಾ ಕಾಡುತ್ತಿತ್ತು. ನೀರಿಗಿಳಿಯುವುದು ಆ ಮನೆಯಲ್ಲಿ ನಿಷಿದ್ಧವಾಗಿತ್ತು.
ಪಳವೇರ್ಕಾಡಿಗೆ ಮೊದಲ ಬಾರಿ ಭೇಟಿ ನೀಡಿದ್ದು ಹದಿನಾರರ ಹರೆಯದಲ್ಲಿ. ಚೆನ್ನೈ ಕ್ಲೈಮೇಟ್ ಆಕ್ಷನ್ ಗ್ರೂಪ್ ಏರ್ಪಡಿಸಿದ್ದ ಛಾಯಾಗ್ರಹಣ ಕಾರ್ಯಾಗಾರ; ಛಾಯಾಚಿತ್ರ ಪತ್ರಕರ್ತ ಪಳನಿ ಕುಮಾರ್ ಮಾರ್ಗದರ್ಶಕರಾಗಿದ್ದರು. ತೀರವನ್ನೇ ಊರಾಗಿಸಿಕೊಂಡ ಜನರ ಬದುಕು ನನ್ನ ಮನದಲ್ಲಿ ಪ್ರಶ್ನೆಗಳನ್ನು ಹುಟ್ಟಿಸಿತ್ತು.



























