ನಾನು ಕೆ ಮುಕೇಶ್, ವೆಲ್ಲೂರು ಜಿಲ್ಲೆಯ ಸರ್ಕಾರಿ ಮಾದರಿ ಶಾಲೆಯಲ್ಲಿ 11ನೇ ತರಗತಿಯ ವಿದ್ಯಾರ್ಥಿ. ಶಾಲೆಯಲ್ಲಿ ಫೋಟೋಗ್ರಫಿಯನ್ನು ಐಚ್ಛಿಕ ವಿಷಯವಾಗಿ ಅಭ್ಯಾಸ ಮಾಡುತ್ತಿದ್ದೇನೆ. ಕ್ಯಾಮರಾವನ್ನು ಹೇಗೆ ಬಳಸಬೇಕು, ಏನನ್ನು ಸೆರೆಹಿಡಿಯಬೇಕು ಎಂಬುದನ್ನು ನಾನು ಕಲಿತಿದ್ದೇನೆ. ಕ್ಯಾಮರಾದ ಮೂಲಕ ನಾನು 51 ವರ್ಷ ಪ್ರಾಯದ ನನ್ನ ತಂದೆ ಕದಿರ್ವೇಲು ಕೆ ಅವರಂತಹ ಕಲ್ಲಿನ ಕ್ವಾರಿಯಲ್ಲಿ ದುಡಿಯುವ ಜನರ ಹೋರಾಟವನ್ನು ದಾಖಲಿಸುತ್ತೇನೆ.
ಅಪ್ಪ ಕೆಲಸಕ್ಕೆ ಹೋಗುತ್ತಾರೆ, ಅಮ್ಮ ವಸಂತಿ ಕೆ ಮನೆಗೆಲಸ ಮಾಡುತ್ತಾ ನನ್ನನ್ನು ಮತ್ತು 12 ವರ್ಷ ಪ್ರಾಯದ ನನ್ನ ತಂಗಿ ದರ್ಶಿಕಾಳನ್ನು ನೋಡಿಕೊಳ್ಳುತ್ತಾರೆ. ಅಪ್ಪ 15 ದಿನಗಳಿಗೊಮ್ಮೆ ಮನೆಗೆ ಬಂದು ಒಂದೆರಡು ದಿನ ನಮ್ಮೊಂದಿಗೆ ಇರುತ್ತಾರೆ. ತುಂಬಾ ಸುಸ್ತಾಗಿರುತ್ತಾರೆ ಅವರು. ಮನೆಗೆ ಬಂದ ದಿನಗಳಲ್ಲಿ ಮಾತ್ರ ನಾವು ಅವರೊಂದಿಗೆ ಸಮಯ ಕಳೆಯುತ್ತೇವೆ.
ಅವರು ಮನೆಗೆ ಬಂದಾಗೆಲ್ಲಾ ಅವರ ಕೆಲಸದ ಬಗ್ಗೆ ತಿಳಿದುಕೊಳ್ಳಲು ತುಂಬಾ ಪ್ರಶ್ನೆಗಳನ್ನು ಕೇಳುತ್ತೇನೆ. ಅವರು ತಾಳ್ಮೆಯಿಂದಲೇ ಉತ್ತರಿಸುತ್ತಾರೆ. ಆದರೂ ಅವರ ಕೆಲಸದ ಸ್ವರೂಪವನ್ನು ನನಗೆ ಯಾವತ್ತೂ ಅರ್ಥಮಾಡಿಕೊಳ್ಳಲು ಆಗಲಿಲ್ಲ. ನಮ್ಮ ಫೋಟೋಗ್ರಫಿ ಟೀಚರ್ ಶ್ರೀಪತಿಯವರು ನೀಡಿದ ಪ್ರೋತ್ಸಾಹದಿಂದಾಗಿ ನಾನು ಒಂದು ದಿನ ಅಪ್ಪನೊಂದಿಗೆ ಅವರು ಕೆಲಸ ಮಾಡುವ ಜಾಗಕ್ಕೆ ಹೋಗಲು ತೀರ್ಮಾನಿಸಿದೆ. ನನ್ನ ಬಳಿ ಒಂದು ಕ್ಯಾಮರಾ ಇತ್ತು.
ನಾನು ಅಲ್ಲಿ ಏನೆಲ್ಲಾ ನೋಡಿದೆನೋ, ಅದನ್ನು ಇಲ್ಲಿ ಬರೆದಿದ್ದೇನೆ. ಈ ಫೋಟೋಗಳ ಮತ್ತು ಅಕ್ಷರಗಳ ಮೂಲಕ ನನ್ನ ಅಪ್ಪನ ಬದುಕಿನ ಕತೆಗಳನ್ನು ನಿಮಗೆ ಹೇಳುತ್ತೇನೆ.























