ಮಹೇಶ್ವರ ಸಮುಹಾ ಮೊದಲ ಬಾರಿ ಪ್ರವಾಹದಿಂದ ಸ್ಥಳಾಂತರಗೊಂಡಿದ್ದು ಅವರಿಗೆ ಕೇವಲ ಐದು ವರ್ಷ. “ಮೊದಲಿಗೆ ಮಳೆ ನಮ್ಮಲ್ಲಿ ಒಬ್ಬರ ಮನೆಯನ್ನು ಕೊಚ್ಚಿಕೊಂಡು ಹೋಯಿತು. ನಂತರ ನಾವು ಸುರಕ್ಷಿತ ಸ್ಥಳ ಹುಡುಕಿಕೊಂಡು ದೋಣಿಯಲ್ಲಿ ಹೊರಟೆವು. ಕೊನೆಗೆ ಅಲ್ಲೇ ಹತ್ತಿರದಲ್ಲಿದ್ದ ದ್ವೀಪವೊಂದಕ್ಕೆ ಹೋದೆವು” ಎಂದು ಅರವತ್ತು ವರ್ಷದ ಸಮುವಾ ಹೇಳುತ್ತಾರೆ.
ಪದೇ ಪದೇ ಎದುರಾಗುವ ಪ್ರವಾಹ ಮತ್ತು ಅದರಿಂದ ಉಂಟಾಗುವ ಭೂ ಸವಕಳಿಯು ಅಸ್ಸಾಂನ ನದಿ ದ್ವೀಪವಾದ ಮಜುಲಿಯ 1.6 ಲಕ್ಷ ನಿವಾಸಿಗಳ ಜೀವನದ ಮೇಲೆ ಪರಿಣಾಮ ಬೀರಿದೆ. ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ವರದಿಯ ಪ್ರಕಾರ, ದ್ವೀಪದ ಭೂಮಿಯ ವಿಸ್ತೀರ್ಣವು 1956ರಲ್ಲಿ ಸುಮಾರು 1245 ಚದರ ಕಿಲೋಮೀಟರುಗಳಷ್ಟಿತ್ತು. ಈಗ 2017ರಲ್ಲಿ ಅದರ ಅಳತೆ 703 ಚದರ ಕಿಲೋಮೀಟರುಗಳಿಗೆ ಇಳಿದಿದೆ.
"ಇದು ಮೊದಲಿನ ಸಲ್ಮೋರಾ ಅಲ್ಲ" ಎಂದು ಸಮುವಾ ಹೇಳುತ್ತಾರೆ, ಮತ್ತು "ಸುಮಾರು 43 ವರ್ಷಗಳ ಹಿಂದೆ ಬ್ರಹ್ಮಪುತ್ರ [ನದಿ] ಕಾರಣದಿಂದಾಗಿ ಸಲ್ಮೋರಾ ಕೊಚ್ಚಿಹೋಗಿತ್ತು." ನಂತರ ಬ್ರಹ್ಮಪುತ್ರ ಮತ್ತು ಅದರ ಉಪನದಿ ಸುಬನ್ಸಿರಿಯಿಂದ ಹೊಸ ಸಲ್ಮೋರಾ ರೂಪುಗೊಂಡ ನಂತರ, ಸಮುವಾ ಕಳೆದ 10 ವರ್ಷಗಳಿಂದ ತನ್ನ ಪತ್ನಿ, ಮಗಳು ಮತ್ತು ಮಗನ ಕುಟುಂಬದೊಂದಿಗೆ ಇಲ್ಲಿ ವಾಸಿಸುತ್ತಿದ್ದಾರೆ.
ಸಿಮೆಂಟ್ ಮತ್ತು ಮಣ್ಣಿನಿಂದ ಮಾಡಿದ ಅರೆ-ಶಾಶ್ವತ ರಚನೆಯೇ ಅವರ ಈಗಿನ ಹೊಸ ಮನೆ. ಮನೆಯ ಹೊರಗೆ ನಿರ್ಮಿಸಲಾದ ಶೌಚಾಲಯದ ಒಳಗೆ ಹೋಗಲು ಮೆಟ್ಟಿಲುಗಳ ಸಹಾಯ ಬೇಕು. "ಪ್ರತಿ ವರ್ಷ ನಮ್ಮ ಭೂಮಿ ಬ್ರಹ್ಮಪುತ್ರ ನದಿಯ ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿದೆ" ಎಂದು ಅವರು ಹೇಳುತ್ತಾರೆ.
ಆಗಾಗ್ಗೆ ಎದುರಾಗುವ ಪ್ರವಾಹವು ಊರಿನ ಕೃಷಿಯ ಮೇಲೂ ಪ್ರಭಾವ ಬೀರಿದೆ. “ನಾವು ಭತ್ತ, ಮಾಟಿ ದಾಲ್ [ಉದ್ದಿನ ಬೇಳೆ] ಮತ್ತು ಬೈಂಗನ್ [ಬದನೆ], ಪತ್ತಾ ಗೋಭಿ [ಎಲೆಕೋಸು] ರೀತಿಯ ತರಕಾರಿಗಳನ್ನು ಬೆಳೆಯಲು ಸಾಧ್ಯವಾಗುತ್ತಿಲ್ಲ; ಈಗ ಯಾರ ಬಳಿಯೂ ಭೂಮಿಯಿಲ್ಲ” ಎಂದು ಸಲ್ಮೋರಾದ ಸರಪಂಚ್ ಜಿಸ್ವರ್ ಹೇಳುತ್ತಾರೆ. ಇಲ್ಲಿನ ಅನೇಕ ನಿವಾಸಿಗಳು ದೋಣಿ ತಯಾರಿಕೆ, ಕುಂಬಾರಿಕೆ ಮತ್ತು ಮೀನುಗಾರಿಕೆಯಂತಹ ಇತರ ಕೆಲಸಗಳ ಮೊರೆ ಹೋಗಿದ್ದಾರೆ.
“ಸಲ್ಮೋರಾದಲ್ಲಿ ತಯಾರಾಗುವ ದೋಣಿಗಳಿಗೆ ದ್ವೀಪದ ಎಲ್ಲೆಡೆ ಬೇಡಿಕೆಯಿದೆ ಎಂದು ದೋಣಿಗಳನ್ನು ತಯಾರಿಸುವ ಸಮುವಾ ಹೇಳುತ್ತಾರೆ, ಏಕೆಂದರೆ ಚಪೋರಿಗಳ (ಸಣ್ಣ ದ್ವೀಪಗಳು) ಅನೇಕ ಜನರು ನದಿಯನ್ನು ದಾಟಲು, ಮಕ್ಕಳನ್ನು ಶಾಲೆಗೆ ಕರೆದೊಯ್ಯಲು, ಮೀನುಗಾರಿಕೆ ಮತ್ತು ಪ್ರವಾಹದ ಸಮಯದಲ್ಲಿ ದೋಣಿಗಳನ್ನು ಬಳಸುತ್ತಾರೆ.
ಸಮುವಾ ಸ್ವತಃ ದೋಣಿ ತಯಾರಿಕೆಯ ಕಲೆಯನ್ನು ಕಲಿತಿದ್ದಾರೆ; ಅವರು [ದೋಣಿಯನ್ನು ನಿರ್ಮಿಸಲು] ಮೂರು ಗುಂಪುಗಳಲ್ಲಿ ಕೆಲಸ ಮಾಡುತ್ತಾರೆ. ದೋಣಿಗಳನ್ನು ಹಜಲ್ ಗುರಿ ಮರದಿಂದ ತಯಾರಿಸಲಾಗುತ್ತದೆ, ಹಜಲ್ ಗುರಿ ಸುಲಭವಾಗಿ ಲಭ್ಯವಿಲ್ಲದ ದುಬಾರಿ ಮರ ಆದರೆ ಸಮುವಾ ಹೇಳುವಂತೆ, ಇದನ್ನೇ ದೋಣಿಗಳನ್ನು ತಯಾರಿಸಲು ಬಳಸಸುವುದಕ್ಕೆ ಇರುವ ಕಾರಣವೆಂದರೆ ಇದು "ಬಲವಾದದ್ದು ಮತ್ತು ಬಾಳಿಕೆ ಬರುವಂತಹದ್ದು." ಅವರು ಈ ಮರವನ್ನು ಸಲ್ಮೋರಾ ಮತ್ತು ಹತ್ತಿರದ ಹಳ್ಳಿಗಳ ಮಾರಾಟಗಾರರಿಂದ ಖರೀದಿಸುತ್ತಾರೆ.
ದೊಡ್ಡ ದೋಣಿ ತಯಾರಿಸಲು ಒಂದು ವಾರ ಹಿಡಿಯುತ್ತದೆ, ಸಣ್ಣ ದೋಣಿಗೆ ಐದು ದಿನ ಬೇಕಾಗುತ್ತದೆ. ಅನೇಕ ಜನರು ಒಟ್ಟಾಗಿ ಕೆಲಸ ಮಾಡಿದರೆ ಅವರು ಒಂದು ತಿಂಗಳಲ್ಲಿ 5-8 ದೋಣಿಗಳನ್ನು ಮಾಡಬಹುದು. ಒಂದು ದೊಡ್ಡ ದೋಣಿಗೆ (10-12 ಜನರು ಮತ್ತು ಮೂರು ಮೋಟಾರು ಸೈಕಲ್‌ಗಳನ್ನು ಹೊತ್ತೊಯ್ಯುವ) 70000 ರೂ ಮತ್ತು ಸಣ್ಣ ದೋಣಿಗೆ 50000 ರೂ. ಬೆಲೆಯಿದೆ. ಈ ಗಳಿಕೆಯನ್ನು ಗುಂಪಿನಲ್ಲಿ ಕೆಲಸ ಮಾಡುವ ಎರಡು ಅಥವಾ ಮೂರು ಜನರ ನಡುವೆ ಹಂಚಲಾಗುತ್ತದೆ.
ಮಾನ್ಸೂನ್ (ಮತ್ತು ಪ್ರವಾಹದ ಋತುವಿನಲ್ಲಿ) ಮಾತ್ರ ದೋಣಿಗಳ ಆರ್ಡರ್‌ಗಳು ಬರುವುದರಿಂದಾಗಿ ದೋಣಿ ನಿರ್ಮಾಣದಿಂದ ಬರುವ ಆದಾಯ ನಿಶ್ಚಿತವಿರುವುದಿಲ್ಲ. ಇದರಿಂದಾಗಿ ಸಮುವಾ ಅವರಿಗೆ ಹಲವು ತಿಂಗಳ ಕಾಲ ಸಂಪಾದನೆ ಹಾಗೂ ಕೆಲಸ ಇಲ್ಲದೆ ಖಾಲಿ ಕೂರಬೇಕಾಗುತ್ತದೆ.
ಪ್ರವಾಹದ ಸಮಯದಲ್ಲಿ ಅನುಭವಿ ಅಂಬಿಗ ಮಹಿಳೆ ರೂಮಿ ಹಜಾರಿಕ ನದಿಯಲ್ಲಿ ತೇಲಿ ಬರುವ ಸೌದೆಗಳನ್ನು ಸಂಗ್ರಹಿಸಿ ಊರಿನ ಸಂತೆಯಲ್ಲಿ ಮಾರುತ್ತಾರೆ. ಅಲ್ಲಿ ಒಂದು ಕ್ವಿಂಟಾಲ್ ಸೌದೆ ಕೆಲವು ನೂರು ರೂಪಾಯಿ ಸಿಗುತ್ತದೆ. ಜೊತೆಗೆ ಕಪ್ಪು ಜೇಡಿಮಣ್ಣಿನಿಂದ ಮಡಕೆಗಳನ್ನು ತಯಾರಿಸುವ ಅವರು ಅದನ್ನು ದ್ವೀಪದ ಮಧ್ಯದಲ್ಲಿರುವ ಗರಮೂರ್ ಮತ್ತು ಕಮಲಾಬರಿಯಲ್ಲಿ 15 ರೂಪಾಯಿಗಳಿಗೆ ಒಂದರಂತೆ ಮಾರಾಟ ಮಾಡುತ್ತಾರೆ ಮತ್ತು ಮಣ್ಣಿನ ದೀಪಗಳನ್ನು ಒಂದಕ್ಕೆ 5 ರೂಪಾಯಿಯಂತೆ ಮಾರುತ್ತಾರೆ.
"ನಾವು ಭೂಮಿಯ ಜೊತೆಗೆ ನಮ್ಮ
ಹಿಂದಿನ ಉದ್ಯೋಗಗಳನ್ನು ಸಹ
ಕಳೆದುಕೊಳ್ಳುತ್ತಿದ್ದೇವೆ" ಎಂದು ರೂಮಿ ಹೇಳುತ್ತಾರೆ, "ಸಾಲದೆಂಬಂತೆ ಬ್ರಹ್ಮಪುತ್ರ
ನಮ್ಮ ಸುತ್ತಲಿನ ನೆಲದ
ಮಣ್ಣನ್ನು ಕೊಚ್ಚಿಕೊಂಡು ಹೋಗುತ್ತಿದೆ."
ಈ ವರದಿಗೆ ನೆರವಾದ ಕೃಷ್ಣ ಪೆಗು ಅವರಿಗೆ ವರದಿಗಾರರ ಕೃತಜ್ಞತೆಗಳು.
ಅನುವಾದ: ಶಂಕರ. ಎನ್. ಕೆಂಚನೂರು