"ನನ್ನ ಬಳಿ ಇರುವ ನೂಲು ಮುಗಿದಿದೆ. ಜೊತೆಗೆ ಹಣ ಕೂಡ ಖಾಲಿಯಾಗಿದೆ. ಆದರೆ ಲಾಕ್‌ಡೌನ್‌ನಿಂದಾಗಿ ನಾನು ಸಿದ್ಧವಿರುವ ಸೀರೆಗಳನ್ನು ಸೇಠ್‌ಗೆ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಬುರ್ವಾರ್ ಹಳ್ಳಿಯ ಚಂದೇರಿ ಬಟ್ಟೆ ನೇಕಾರ ಸುರೇಶ್ ಕೋಲಿ ಅವರು ಹೇಳುತ್ತಾರೆ.

ಕೋವಿಡ್ -19 ಲಾಕ್‌ಡೌನ್‌ಗೆ ಕೇವಲ ಒಂದು ವಾರ ಇದ್ದಾಗ, 31 ವರ್ಷದ ಸುರೇಶ್ ಅವರ ಬಳಿ ಉಳಿದಿದ್ದ ನೂಲಿನ ಕೊನೆಯ ಸುರಳಿಗಳನ್ನು ನೇಯಲಾಗಿತ್ತು. ಅವರು ಪೂರ್ತಿ ಮುಗಿದಿರುವ ಸೀರೆಗಳನ್ನು ಪ್ರಾಣಪುರ ಗ್ರಾಮದ ಚಂದೇರಿ ಜವಳಿ ವ್ಯಾಪಾರಿ ಸೇಠ್‌ ಆನಂದಿ ಲಾಲ್ ಗೆ ಹಸ್ತಾಂತರಿಸಲು ಕಾಯುತ್ತಿದ್ದರು.

ಈ ನೇಕಾರರ ಗ್ರಾಮವು ಉತ್ತರ ಪ್ರದೇಶದ ಲಲಿತ್‌ಪುರ್ ಜಿಲ್ಲೆಯಲ್ಲಿರುವ ಬೆತ್ವಾ ನದಿಯ ರಾಜಘಾಟ್ ಅಣೆಕಟ್ಟಿನ ಬಳಿ ಇದೆ. ನದಿಯ ಉದ್ದಕ್ಕೂ ಮಧ್ಯಪ್ರದೇಶದ ಅಶೋಕನಗರ ಜಿಲ್ಲೆಯ ಚಂದೇರಿ ಪಟ್ಟಣ ಇದೆ, ಅದೇ ಹೆಸರಿನ ಕೈಮಗ್ಗ ಜವಳಿ ಕೇಂದ್ರವೂ ಅಲ್ಲಿದೆ. ಸೇಠ್ ನ ಗ್ರಾಮವಾಗಿರುವ ಪ್ರಾಣಪುರ ಕೂಡ ಈ ಪಟ್ಟಣಕ್ಕೆ ಹತ್ತಿರದಲ್ಲಿದೆ.

ಪೋಲಿಸ್ ಬ್ಯಾರಿಕೇಡ್‌ಗಳು ಯುಪಿ-ಎಂಪಿ ಗಡಿಯಲ್ಲಿ ಬುರ್ಹ್ವಾರ್ ಮತ್ತು ಚಂದೇರಿ ನಡುವಿನ 32 ಕಿಲೋಮೀಟರ್ ರಸ್ತೆಯಲ್ಲಿ ಕಾವಲಾಗಿವೆ, ಈಗ ಲಾಕ್‌ಡೌನ್‌ ಕಾರಣ ಸುರೇಶ್ ಮತ್ತು ಆನಂದಿಲಾಲ್‌ ಪರಸ್ಪರ ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ. "ಏನಾಗುತ್ತಿದೆ ಎಂದು ನನಗೆ ಅರ್ಥವಾಗುತ್ತಿಲ್ಲ. ದೆಹಲಿಯಿಂದ ಮನೆಗೆ ಹಿಂತಿರುಗುತ್ತಿದ್ದವರನ್ನು ಪೊಲೀಸರು ಕರೆದೊಯ್ದರು"ಎಂದು ಸುರೇಶ್ ಹೇಳುತ್ತಾರೆ. "ನಮ್ಮ ಹಳ್ಳಿಗೆ ಬೀಮಾರಿ (ರೋಗ) ಹೇಗೆ ತಗಲುತ್ತದೆ ಹೇಳಿ ? ಆದರೆ ಸರ್ಕಾರ ನಮ್ಮ ಜಿಲ್ಲೆಯನ್ನು ಲಾಕ್ ಮಾಡಿದೆ ಇದರಿಂದಾಗಿ ಈಗ ನಮ್ಮ ಜೀವನ ಏರುಪೇರಾಗಿದೆ" ಎನ್ನುತ್ತಾರೆ.

ಸುರೇಶ್ ಅವರು  ಆನಂದಿ ಲಾಲ್ ಅವರಿಗೆ ಈಗಾಗಲೇ ಸಿದ್ಧವಾಗಿರುವ ಮೂರು ಸೀರೆಗಳಿಗೆ 5,000 ರೂ ಕೊಡಲು ಕೇಳಿದರು. “ಆದರೆ ಅವರು ಕೇವಲ 500 ರೂ.ಗಳನ್ನು ಮಾತ್ರ ಕಳಿಸಿದರು. ಮಾರುಕಟ್ಟೆಗಳು ತೆರೆದುಕೊಳ್ಳುವವರೆಗೂ ಯಾವುದೇ ಪೂರ್ಣ ಪಾವತಿ ಇರುವುದಿಲ್ಲ ಎಂದು ಅವರು ಹೇಳುತ್ತಾರೆ.

ಲಾಕ್‌ಡೌನ್‌ಗೆ ಮುಂಚಿತವಾಗಿ, ಸೇಠ್ ಸುರೇಶ್‌ ಅವರಿಗೆ ಕಚ್ಚಾ ಸಾಮಗ್ರಿಗಳಾದ ಹತ್ತಿ ಮತ್ತು ರೇಷ್ಮೆ ನೂಲುಗಳು ಮತ್ತು ಜರಿ ನೂಲುಗಳನ್ನು ನೀಡುವುದರ ಜೊತೆಗೆ ಸೀರೆಗಳು, ದುಪಟ್ಟಾಗಳು, ಶಾಲುಗಳು, ಮೃದುವಾದ  ಅಲಂಕೃತ ಬಟ್ಟೆಗಳು ಅಥವಾ ಬರಿ ಬಟ್ಟೆಯನ್ನು ನೇಯ್ಗೆ ಮಾಡಲು ನಿಯೋಜಿಸಿದ್ದರು. ಸೇಠ್‌ ವಿನ್ಯಾಸಗಳನ್ನು ಸಹ ನೀಡುತ್ತಿದ್ದರು. ಪ್ರತಿ ಆರ್ಡರ್‌ಗೆ ದರಗಳನ್ನು ನಿಗದಿಪಡಿಸಲಾಗಿರುತ್ತಿತ್ತು ಮತ್ತು ವಿತರಣೆಯ ಸಮಯದಲ್ಲಿ ಪಾವತಿಯನ್ನು ಯಾವಾಗಲೂ ನಗದು ರೂಪದಲ್ಲಿ ಮಾಡಲಾಗುತ್ತದೆ.

Suresh and Shyambai Koli had steady work before the lockdown. 'I enjoy weaving. Without this, I don’t know what to do,' says Suresh
PHOTO • Astha Choudhary
Suresh and Shyambai Koli had steady work before the lockdown. 'I enjoy weaving. Without this, I don’t know what to do,' says Suresh
PHOTO • Mohit M. Rao

ಲಾಕ್‌ಡೌನ್‌ಗೆ ಮುಂಚಿತವಾಗಿ ಸುರೇಶ್ ಮತ್ತು ಶ್ಯಾಮಬಾಯಿ ಕೋಲಿ ಸ್ಥಿರವಾದ ಕೆಲಸವನ್ನು ಹೊಂದಿದ್ದರು. 'ನಾನು ನೇಯ್ಗೆಯನ್ನು ಆನಂದಿಸುತ್ತೇನೆ. ಇದಲ್ಲದೆ, ಬೇರೇನು ಮಾಡಬೇಕೆನ್ನುವುದು ನನಗೆ ಗೊತ್ತಿಲ್ಲ ' ಎಂದು ಸುರೇಶ್ ಹೇಳುತ್ತಾರೆ

ವ್ಯಾಪಾರಿಗಳು ಮತ್ತು ನೇಕಾರರ ನಡುವಿನ ಪ್ರತಿನಿತ್ಯದ ವ್ಯವಸ್ಥೆಗೆ ಈ ಲಾಕ್‌ಡೌನ್ ಭಂಗ ತಂದಿದೆ. ಏಪ್ರಿಲ್ ಮೊದಲ ವಾರದ ಹೊತ್ತಿಗೆ, ಸುರೇಶ ಅವರಿಗೆ ಕೆಲಸ ಮುಂದುವರಿಸಲು ಹೆಚ್ಚಿನ ನೂಲುಗಳು ಮತ್ತು ಜರಿಗಳು ಬೇಕಾಗಿದ್ದವು, ಮತ್ತು ಅವರ ಕುಟುಂಬವನ್ನು ನಡೆಸಲು ಅವರಿಗೆ ಹಣದ ಅಗತ್ಯವಿತ್ತು. ಅವರು ಹತಾಶರಾಗಿ ಪ್ರತಿದಿನ ಆನಂದಿ ಲಾಲ್‌ಗೆ ಫೋನ್ ಕರೆಗಳನ್ನು ಮಾಡಲು ಪ್ರಾರಂಭಿಸಿದರು.ಕೊನೆಯದಾಗಿ, ಏಪ್ರಿಲ್ 27 ರಂದು ಬ್ಯಾರಿಕೇಡ್‌ಗಳಲ್ಲಿ ಸುರೇಶ್ ಅವರನ್ನು ಭೇಟಿಯಾಗಲು ಸೇಠ್ ಒಪ್ಪಿಕೊಂಡರು. ಅವರು ನೂಲು ಮತ್ತು ಮೇ ಅಂತ್ಯದ ವೇಳೆಗೆ ನಾಲ್ಕು ಸೀರೆಗಳನ್ನು ನೇಯಲು ಮುಂಗಡವಾಗಿ ಸುರೇಶ ಅವರಿಗೆ 4,000 ರೂ ನೀಡಿದರು. ನೇಕಾರನಿಗೆ ನೀಡಬೇಕಾದ ಉಳಿದ ಹಣವನ್ನು ನಂತರ ಪಾವತಿಸಲಾಗುವುದು ಎಂದು ತಿಳಿಸಿದರು.

ಸುರೇಶ್ ಮತ್ತು ಅವರ ಕುಟುಂಬವು ಸಾಂಪ್ರದಾಯಿಕ ನೇಕಾರರ ಕೋಲಿ ('ಕೋರಿ') ಸಮುದಾಯಕ್ಕೆ ಸೇರಿದ್ದು, ಅವರನ್ನು ಪರಿಶಿಷ್ಟ ಜಾತಿಗೆ ಸೇರಿಸಲಾಗಿದೆ. ಸುರೇಶ್ ಅವರು ಸುಮಾರು 14 ವರ್ಷಗಳ ಹಿಂದೆ ತಮ್ಮ ತಂದೆಯಿಂದ ಈ ನೇಯ್ಗೆ ಕೆಲಸವನ್ನು ಕಲಿತರು. ಕೋಲಿಗಳು ಮತ್ತು ಮುಸ್ಲಿಂ ಒಬಿಸಿ ಸಮುದಾಯದಲ್ಲಿ ಬರುವ ಅನ್ಸಾರಿಗಳು, ಚಂದೇರಿ ಪಟ್ಟಣ ಮತ್ತು ಸುತ್ತಮುತ್ತಲಿನ ಜವಳಿ ನೇಕಾರರಲ್ಲಿ ಬಹುಸಂಖ್ಯೆಯಲ್ಲಿದ್ದಾರೆ.

ನಾವು ಅವರನ್ನು 2019ರ ಡಿಸೆಂಬರ್‌ನಲ್ಲಿ ಭೇಟಿಯಾದಾಗ, ಮಗ್ಗದ ಮೇಲೆ ಸುರೇಶರ ಚಲನೆಗಳು ಪಿಯಾನೋ ವಾದಕರಂತೆ ಇದ್ದವು- ಅವರು ಏಕಕಾಲದಲ್ಲಿ ಮೀಟುಗೋಲುಗಳನ್ನು ಮತ್ತು ಮರದ ಚಪ್ಪಡಿಗಳನ್ನು ಮೇಲಕ್ಕೆ ಮತ್ತು ಕೆಳಕ್ಕೆ, ಎಡಕ್ಕೆ ಮತ್ತು ಬಲಕ್ಕೆ, ಕೋಣೆಯೊಳಗೆ ಸ್ಥಿರವಾದ ಗತಿಯಲ್ಲಿ ಅದನ್ನು ಪ್ರತಿಧ್ವನಿಸಿದರು.’ಹತ್ತಿ ಬಾನಾ’ವನ್ನು (ನೇಯ್ಗೆ) ‘ರೇಷ್ಮೆ ತಾನಾ’ವಾಗಿ (ವಕ್ರವಾಗಿ) ನೇಯಲಾಗುತ್ತದೆ. ಲಾಕ್‌ಡೌನ್‌ಗೆ ಮುಂಚೆ, ಅವರು ಸಾಮಾನ್ಯವಾಗಿ ಪ್ರತಿದಿನ 10 ಗಂಟೆಗಳ ಕಾಲ ಮಗ್ಗದಲ್ಲಿ ಕುಳಿತುಕೊಳ್ಳುತ್ತಿದ್ದರು, ಹೆಚ್ಚುವರಿ ಆರ್ಡರ್ ಗಳಿದ್ದಲ್ಲಿ ಕೆಲವೊಮ್ಮೆ 14 ಗಂಟೆಗಳ ಕಾಲ ಇರುತ್ತಿದ್ದರು.

ಚಂದೇರಿಯ ಜವಳಿ ನವಿರು ಗುಣಮಟ್ಟವು ಪ್ರಮುಖವಾಗಿ ಕೊಳೆಯದ ಕಚ್ಚಾ ನೂಲಿನ ಮೂಲಕ ಬರುತ್ತದೆ. ಫ್ಯಾಬ್ರಿಕ್‌ನಿಂದ ತಯಾರಿಸಿರುವ ಅದರಲ್ಲೂ ಕೈಯಿಂದ ನೇಯ್ದಿರುವ ಎಲ್ಲ ವಸ್ತುಗಳಲ್ಲಿ ವಿಶೇಷವಾಗಿ ಚಂದೇರಿ ಸೀರೆಗೆ ಹೆಚ್ಚಿನ ಬೇಡಿಕೆ ಇದೆ. ಇದರ ಮೃದುವಾದ ಬಣ್ಣಗಳು, ರೇಷ್ಮೆಯ ಹೊಳಪು, ಮತ್ತು ಚಿನ್ನದ ಜರಿ ಬಾರ್ಡರ್ ಮತ್ತು ಬಗೆ ಬಗೆಯ ವಿನ್ಯಾಸವು ಇದರ ವೈಶಿಷ್ಟತೆಯನ್ನು ಹೆಚ್ಚಿಸುತ್ತವೆ. 500ಕ್ಕೂ ಹೆಚ್ಚು ವರ್ಷಗಳಿಂದ ಚಂದೇರಿ ಪ್ರದೇಶದಲ್ಲಿ ನೇಯಲಾಗಿದ್ದ ಈ ಸೀರೆಗಳಿಗೆ 2005ರಲ್ಲಿ ಭೌಗೋಳಿಕ ಸೂಚನಾ ಪ್ರಮಾಣಪತ್ರವನ್ನು (Geographical Indication certificate) ನೀಡಲಾಗಿದೆ.

ಚಂದೇರಿ ನೇಕಾರರು ಕೋವಿಡ್ -19 ಲಾಕ್‌ಡೌನ್‌ನಲ್ಲಿ ಸಿಲುಕಿಕೊಂಡಿರುವುದು

ಚಂದೇರಿ ಪಟ್ಟಣದಲ್ಲಿ ವ್ಯಾಪಾರವು ಸಂಕಷ್ಟದಲ್ಲಿದೆ. ನೇಕಾರರು ಒಂದಿಷ್ಟು ಪಾವತಿಗಾಗಿ ಸೇಠ್‌ಗಳೊಂದಿಗೆ ಚೌಕಾಸಿ ನಡೆಸುತ್ತಾರೆ.ಚಿಲ್ಲರೆ ಬೇಡಿಕೆ ಕುಸಿದಿರುವುದರಿಂದ ಈಗ ಅವರ ಪರಿಸ್ಥಿತಿ ಅತ್ಯಂತ ಕಷ್ಟಕರವಾಗಿವೆ

ಒಂದು ಸರಳ ಸೀರೆ ನೇಯ್ಗೆಗೆ ನಾಲ್ಕು ದಿನ ಬೇಕಾಗಬಹುದು ಎನ್ನುತ್ತಾರೆ ಸುರೇಶ್. ಆದರೆ ಜರಿ ಬುಟ್ಟಿ ಹಾಗೂ ಕಸೂತಿಯನ್ನು ಹೊಂದಿರುವ ವಿನ್ಯಾಸದ ಸಂಕೀರ್ಣತೆಗೆ ಅನುಗುಣವಾಗಿ ಅದು 8ರಿಂದ 30 ದಿನಗಳವರೆಗೆ ತೆಗೆದುಕೊಳ್ಳಬಹುದು. ಯಾವುದೇ ಗಡಿಬಿಡಿ ಇಲ್ಲದೇ ಹಲವಾರು ಗಂಟೆಗಳ ಕಾಲ ಆ ಕೆಲಸದಲ್ಲಿ ಮಗ್ನರಾದಾಗ ಮಾತ್ರ ವಿಶೇಷವಾಗಿರುವಂತಹ ಚಂದೇರಿ ಸೀರೆಯನ್ನು ತಯಾರಿಸಲು ಸಾಧ್ಯವಾಗುತ್ತದೆ.

ಲಾಕ್‌ಡೌನ್‌ಗೂ ಮುನ್ನ ಸುರೇಶ್ ಅವರಿಗೆ ಜೂನ್ ಅಂತ್ಯದಿಂದ ಆಗಸ್ಟ್ ಅಂತ್ಯದವರೆಗಿನ ಎರಡು ಮುಂಗಾರು ತಿಂಗಳುಗಳನ್ನು ಹೊರತುಪಡಿಸಿ ವರ್ಷಪೂರ್ತಿ ಸ್ಥಿರವಾದ ಕೆಲಸವಿತ್ತು, ಏಕೆಂದರೆ ಈ ಮುಂಗಾರು ಸಂದರ್ಭದಲ್ಲಿ ತೇವಾಂಶದಿಂದಾಗಿ ಹತ್ತಿ ನೂಲು ಉಬ್ಬುತ್ತದೆ. “ಆಗ ಇದು ಸುದೀರ್ಘ ಗಂಟೆಗಳ ಪ್ರಕ್ರಿಯೆಯಾಗಿರುವುದರಿಂದಾಗಿ ಬೇಸರವಾಗುತ್ತದೆ. ಆದರೆ ನಾನು ನೇಯ್ಗೆಯನ್ನು ಆನಂದಿಸುತ್ತೇನೆ. ಇದು ನನಗೆ ಆಹಾರ ಮತ್ತು ಜೀವನೋಪಾಯವನ್ನು ಒದಗಿಸುತ್ತದೆ. ಇದಲ್ಲದೆ, ಬೇರೇನು ಮಾಡಬೇಕೆಂದು ನನಗೆ ಗೊತ್ತಿಲ್ಲ. ಬದುಕಲು ನಮ್ಮ ಬಳಿ ಭೂಮಿ ಇಲ್ಲ, ಈ ಬಿಕ್ಕಟ್ಟನ್ನು ಎದುರಿಸಲು ನಮ್ಮಲ್ಲಿ ಯಾವುದೇ ಉಳಿತಾಯವೂ ಇಲ್ಲ, ”ಎಂದು ಸುರೇಶ್ ಹೇಳುತ್ತಾರೆ.

ಚಂದೇರಿ ನೇಕಾರರು ಸಾಮಾನ್ಯವಾಗಿ ಉತ್ಪನ್ನದ ಸಗಟು ಬೆಲೆಯ ಶೇ 20-30ರಷ್ಟು ಗಳಿಸುತ್ತಾರೆ. ಒಂದು ಸರಳವಾಗಿರುವ ಸೀರೆ, ಒಂದು ಪಲ್ಲು, ಇದನ್ನು ಸೇಠ್ ಚಿಲ್ಲರೆ ವ್ಯಾಪಾರಿಗಳಿಗೆ 2,000 ರೂ.ಗೆ ಮಾರುತ್ತಾರೆ, ಇದರಿಂದಾಗಿ ಸುರೇಶ್  ಸುಮಾರು 600. ರೂ.ಗಳನ್ನು ಸಂಪಾದಿಸುತ್ತಾರೆ. ಇದಕ್ಕಾಗಿ ನಾಲ್ಕು ದಿನ ಹಿಡಿಯುತ್ತದೆ. ಅವರು ನೇಯುವ ಹೆಚ್ಚಿನ ಸೀರೆಗಳು ಸಗಟು ವ್ಯಾಪಾರದಲ್ಲಿ 5,000, ರೂ.ಗೆ ಮಾರಾಟವಾಗುತ್ತವೆ ಮತ್ತು ಪ್ರತಿ ಸೀರೆಗೂ ಸುಮಾರು ಎಂಟು ದಿನಗಳನ್ನು ತೆಗೆದುಕೊಳ್ಳುತ್ತದೆ. ಕ್ಲಿಷ್ಟಕರವಾದ ಕರಕುಶಲತೆಯನ್ನು ಹೊಂದಿದ್ದರೆ 20,000 ರೂ.ಗಿಂತ ಹೆಚ್ಚಿನ ಮೊತ್ತಕ್ಕೆ ಮಾರಾಟ ಮಾಡಬಹುದು ಮತ್ತು ಇದನ್ನು ನೇಯ್ಗೆ ಮಾಡಲು ಒಂದು ತಿಂಗಳು ತೆಗೆದುಕೊಳ್ಳುತ್ತದೆ. ಹೆಚ್ಚು ಸಂಕೀರ್ಣ ವಿನ್ಯಾಸಗಳ ಸೀರೆಯು 12,000 ರೂ.ಗಳವರೆಗೆ ನೇಕಾರನಿಗೆ ಲಾಭವನ್ನು ತರುತ್ತದೆ.

ಎರಡು ಕೈಮಗ್ಗಗಳು ಸುರೇಶ್ ಅವರ ಬುರ್ಹ್ವಾರ್‌ನ ಮೂರು ಕೋಣೆಗಳ ಮನೆಯಲ್ಲಿ ಸಂಪೂರ್ಣ ಕೊಠಡಿಯನ್ನು ಆಕ್ರಮಿಸಿಕೊಂಡಿವೆ, ಅಲ್ಲಿ ಅವರು ತಮ್ಮ ಪತ್ನಿ ಶ್ಯಾಮಬಾಯಿ, ಅವರ ಐದು ವರ್ಷದ ಮಗಳು ಮತ್ತು ಅವರ ತಾಯಿ ಚಾಮುಬಾಯಿ ಅವರೊಂದಿಗೆ ವಾಸಿಸುತ್ತಿದ್ದಾರೆ.

ಆರ್ಡರ್ ಗಳು ಸ್ಥಿರವಾಗಿದ್ದಾಗ, ಎರಡು ಮಗ್ಗಗಳು ಸ್ವರಮೇಳದ ಸದ್ದನ್ನು ಮಾಡುತ್ತವೆ, ಪ್ರತಿದಿನ ಸೀರೆಗಳು ಸಿದ್ಧವಾಗುತ್ತವೆ. ಸುರೇಶ್ ಅವರು ತಮ್ಮ ತಂದೆಯಿಂದ ಖರೀದಿಸಿದ ಮಗ್ಗವನ್ನು ನಿರ್ವಹಿಸುತ್ತಾರೆ. ಶ್ಯಾಮಬಾಯಿ ಅವರು ಎರಡನೇ ಮಗ್ಗವನ್ನು ನಿರ್ವಹಿಸುತ್ತಾರೆ. ಒಟ್ಟಾಗಿ ಅವರು ಸುಮಾರು ತಿಂಗಳಿಗೆ 10,000–15,000 ರೂ.ಗಳನ್ನು ಸಂಪಾದಿಸುತ್ತಿದ್ದಾರೆ.

Left: A design card for a  zari butti, given to Suresh by the seth to weave. Right: The two looms in Suresh and Shyambai's home face each other
PHOTO • Astha Choudhary
Left: A design card for a  zari butti, given to Suresh by the seth to weave. Right: The two looms in Suresh and Shyambai's home face each other
PHOTO • Astha Choudhary

ಎಡಕ್ಕೆ: ಜರಿ ಬುಟ್ಟಿ ವಿನ್ಯಾಸದ ಕಾರ್ಡನ್ನು ನೇಯ್ಗೆ ಮಾಡಲು ಸೇಠ್ ಸುರೇಶನಿಗೆ ನೀಡಿದ್ದಾರೆ. ಬಲಕ್ಕೆ: ಸುರೇಶ್ ಮತ್ತು ಶ್ಯಾಮಬಾಯಿ ಅವರ ಮನೆಯಲ್ಲಿರುವ ಎರಡು ಮಗ್ಗಗಳು ಪರಸ್ಪರ ಎದುರುಬದುರಾಗಿವೆ

ಶ್ಯಾಮಬಾಯಿ ಚಂದೇರಿಯಲ್ಲಿನ ನೇಕಾರಿಕೆ ಕುಟುಂಬವೊಂದರಲ್ಲಿ ಬೆಳೆದರು, ಅಲ್ಲಿ ಅವರು ತಮ್ಮ ತಂದೆ ಮತ್ತು ಸಹೋದರನಿಂದ ಮಗ್ಗದ ಜಟಿಲತೆಗಳನ್ನು ಕಲಿತರು. "ನಾನು ಸುರೇಶರನ್ನು ಮದುವೆಯಾದಾಗ, ಕೋಣೆಯಲ್ಲಿ ಒಂದೇ ಒಂದು ಮಗ್ಗವಿತ್ತು. ನಾನು ಸ್ವಲ್ಪ ಸಹಾಯವನ್ನೇನೋ ಮಾಡಬಹುದು, ಆದರೆ ನಮ್ಮ ಗಳಿಕೆಯನ್ನು ಹೆಚ್ಚಿಸಲು ಸಾಧ್ಯವಾಗಲಿಲ್ಲ. ಎರಡು ವರ್ಷಗಳ ಹಿಂದೆ ನನಗೆ ಹೊಸ ಮಗ್ಗವನ್ನು ಖರೀದಿಸಲು ನಾವು 50,000 ರೂ. ಸಾಲವನ್ನು ತೆಗೆದುಕೊಂಡೆವು. ಆ ಮೂಲಕ ನಾವು ಸೀರೆಗಳು ಮತ್ತು ಬಟ್ಟೆಗಳ ಸಂಖ್ಯೆಯನ್ನು ಹೆಚ್ಚಿಸಬಹುದು ಎನ್ನುವುದು ನಮ್ಮ ಅಭಿಪ್ರಾಯವಾಗಿತ್ತು” ಎಂದು ಶ್ಯಾಮಬಾಯಿ ಹೇಳುತ್ತಾರೆ. ಅವರು ನೇಕಾರರಿಗೆ ಇರುವ ವಿಶೇಷ ಯೋಜನೆ ಅಡಿಯಲ್ಲಿ ಪಡೆದ ಬ್ಯಾಂಕ್ ಸಾಲವನ್ನು ಮರುಪಾವತಿಸಲು ಮಾಸಿಕ ಕಂತುಗಳ ರೂಪದಲ್ಲಿ 1,100 ರೂ.ಗಳನ್ನು ಪಾವತಿಸುತ್ತಾರೆ.

ಕೆಲವೊಮ್ಮೆ, ಸೇಠ್‌ನಿಂದ ಆರ್ಡರ್ ಗಳು ಕಡಿಮೆ ಇದ್ದಾಗ, ಶ್ಯಾಮಬಾಯಿ ಚಾಮುಬಾಯಿಗೆ ತೆಂಡು ಎಲೆಗಳನ್ನು ಸಂಗ್ರಹಿಸಲು ಸಹಾಯ ಮಾಡುತ್ತಾರೆ. ಚಾಮುಬಾಯಿ ಜೀವನೋಪಾಯಕ್ಕಾಗಿ ಬೀಡಿಗಳನ್ನು ಕಟ್ಟುತ್ತಾರೆ, ಅವರು ಕಟ್ಟುವ ಪ್ರತಿ 1,000 ಬೀಡಿಗಳಿಗೆ 110.ರೂ ದೊರೆಯುತ್ತದೆ.ಆದರೆ ಈಗ ಲಾಕ್‌ಡೌನ್‌ನಿಂದಾಗಿ ಅವರ ಆದಾಯವೂ ಸ್ಥಗಿತಗೊಂಡಿದೆ.

ಚಂದೇರಿ ಪಟ್ಟಣದಲ್ಲಿ ವ್ಯಾಪಾರವು ದುಸ್ಥಿತಿಯಲ್ಲಿದೆ. ನೇಕಾರರು ಒಂದಿಷ್ಟು ಪಾವತಿಗಾಗಿ ಸೇಠ್‌ಗಳೊಂದಿಗೆ ಚೌಕಾಸಿಗೆ ಮುಂದಾಗುತ್ತಾರೆ. ಚಿಲ್ಲರೆ ಬೇಡಿಕೆ ಕುಸಿದಿರುವುದರಿಂದ ಈಗ ಅವರ ಪರಿಸ್ಥಿತಿಯೂ ಅತ್ಯಂತ ಕಷ್ಟಕರವಾಗಿವೆ. ಹೆಚ್ಚಿನ ನೇಕಾರರು ವ್ಯಾಪಾರಿಗಳಿಗೆ ಅಥವಾ ಮಾಸ್ಟರ್ ನೇಕಾರರಿಗೆ ಕೆಲಸ ಮಾಡುತ್ತಾರೆ (ಸಾಮಾನ್ಯವಾಗಿ, ಅನುಭವಿ ನೇಕಾರರು ಕೂಡ ವ್ಯಾಪಾರಿಗಳಾಗಿದ್ದಾರೆ).

ಚಂದೇರಿ ಪಟ್ಟಣದಲ್ಲಿ ವಾಸಿಸುತ್ತಿರುವ 33 ವರ್ಷದ ಪ್ರದೀಪ್ ಕೋಲಿ ಅವರ ಕೂಲಿ ದರವನ್ನು ಏಪ್ರಿಲ್ ಮಧ್ಯದಲ್ಲಿ ವಾರಕ್ಕೆ 1,500 ರೂ.ರಿಂದ ಕೇವಲ 1,000 ರೂ.ಗೆ ಕಡಿತಗೊಳಿಸಲಾಗುವುದು ಎಂದು ಅವರ ಸೇಠ್‌ ಹೇಳಿದ್ದರು. "ಮಹೌಲ್ (ಪರಿಸ್ಥಿತಿ) ಬದಲಾಗುವವರೆಗೆ. "ನಾವು ವಾದಿಸಿದ್ದೆವು, ಮತ್ತು ಅವರು ಹೊಸ ಆರ್ಡರ್ ಗಳಿಗಾಗಿ ಹೊಸ ದರಗಳನ್ನು ಜಾರಿಗೊಳಿಸಲು ಒಪ್ಪಿದರು ಮತ್ತು ಆದರೆ ಅದು ಈಗಿರುವ ಆರ್ಡರ್ ಗಳಿಗಲ್ಲ. ಆದರೆ ಮಹೌಲ್ (ಪರಿಸ್ಥಿತಿ) ತ್ವರಿತವಾಗಿ ಬದಲಾಗದಿದ್ದರೆ, ನಾವು ದೊಡ್ಡ ಸಮಸ್ಯೆಗೆ ಸಿಲುಕುತ್ತೇವೆ” ಎಂದು ಪ್ರದೀಪ್ ಹೇಳುತ್ತಾರೆ.

ಚಂದೇರಿಯಲ್ಲಿನ ನೇಕಾರರಿಗೆ ಲಾಕ್‌ಡೌನ್‌ ಹಿನ್ನಲೆಯಲ್ಲಿ ಉಚಿತ ಸರ್ಕಾರಿ ಪಡಿತರ ಭರವಸೆ ನೀಡಲಾಯಿತು, ಆದರೆ ಏಪ್ರಿಲ್‌ನಲ್ಲಿ ಕೇವಲ 10 ಕಿಲೋ ಅಕ್ಕಿಯಷ್ಟೇ ದೊರೆತಿದೆ. "ನಗರ ಪಾಲಿಕೆ ಅಧಿಕಾರಿಗಳು ನನ್ನ ಮೊಹಲ್ಲಾದ ಸಮೀಕ್ಷೆಯನ್ನು ಮಾಡಿದರು ಮತ್ತು ನಮಗೆ ದಾಲ್, ಅಕ್ಕಿ ಮತ್ತು ಅಟ್ಟಾ [ಗೋಧಿ ಹಿಟ್ಟು] ಪಡಿತರವನ್ನು ನೀಡಿದರು. ಆದರೆ ನಿಜವಾದ ವಿತರಣೆಯ ಸಂದರ್ಭದಲ್ಲಿ ಅವರು ಅಕ್ಕಿಯನ್ನು ಮಾತ್ರ ನೀಡಿದರು,” ಎಂದು 24 ವರ್ಷದಿಂದ ನೇಯ್ಗೆ ಮಾಡುತ್ತಿರುವ 42 ವರ್ಷದ ದೀಪ್ ಕುಮಾರ್ ಹೇಳುತ್ತಾರೆ. ಅವನು ಈಗ ತಮ್ಮ ಜನರಿಗಾಗಿ ಎಚ್ಚರಿಕೆಯಿಂದ ಆಹಾರವನ್ನು ನೀಡುತ್ತಿದ್ದಾರೆ ಮತ್ತು ಅದಕ್ಕಾಗಿ ಅವರು ಹೇಳುವುದು ಹೀಗೆ, “ನನ್ನ ಚಾಯ್‌ನಲ್ಲಿ ಸಕ್ಕರೆ ಹಾಕುವ ಮೊದಲು ನಾನು ಎರಡು ಬಾರಿ ಯೋಚಿಸಬೇಕಾಗಬಹುದು ಎಂದುಕೊಂಡಿರಲಿಲ್ಲ. ಗೋಧಿ ರೊಟ್ಟಿಗಳು ಇನ್ಮುಂದೆ ನಮ್ಮ ದಿನ ನಿತ್ಯದ ಊಟವಾಗಿರುವುದಿಲ್ಲ ಎಂದು ನಾನು ಭಾವಿಸಿರಲಿಲ್ಲ” ಎನ್ನುತ್ತಾರೆ.

A weaver (left) who works for Aminuddin Ansari. Chanderi weavers are finding it difficult to get raw materials and to earn money now
PHOTO • Aminuddin Ansari
A weaver (left) who works for Aminuddin Ansari. Chanderi weavers are finding it difficult to get raw materials and to earn money now
PHOTO • Aminuddin Ansari

ಮೊಹಮ್ಮದ್ ರಯೀಸ್ ಮುಜಾವರ್ (ಎಡಕ್ಕೆ), ಅನ್ಸಾರಿಗಾಗಿ ಕೆಲಸ ಮಾಡುವ ನೇಕಾರ. ಚಂದೇರಿ ನೇಕಾರರಿಗೆ ಕಚ್ಚಾ ವಸ್ತುಗಳನ್ನು ಪಡೆಯಲು ಮತ್ತು ಹಣ ಸಂಪಾದಿಸಲು ಕಷ್ಟವಾಗುತ್ತಿದೆ

ದೀಪ್ ಕುಮಾರ್ ಅವರ ಮನೆಯಲ್ಲಿನ ಮಗ್ಗಗಳು - ಎರಡನೆಯದು ಅವರ ಸಹೋದರನಿಂದ ನಿರ್ವಹಿಸಲ್ಪಡುತ್ತವೆ - ಈಗ ನೂಲು ಖಾಲಿಯಾಗಿರುವುದರಿಂದಾಗಿ ಸದ್ಯದಲ್ಲೇ ಸ್ಥಗಿತಗೊಳ್ಳುತ್ತವೆ. ಈಗ ಅವರ ಮನೆಯ ವಾರದ ಆದಾಯ ಲಾಕ್ ಡೌನ್ ಗೂ ಮುಂಚೆ 4,500 ರೂ.ಇದ್ದಿದ್ದು ಈಗ 500.ರೂ.ಗೆ ಕುಸಿದಿದೆ. “ನಾನು ಶನಿವಾರ [ಪ್ರತಿ ವಾರ] ಸೇಠ್‌ನಿಂದ ಹಣವನ್ನು ಸಂಗ್ರಹಿಸಲು ಹೋಗುತ್ತೇನೆ. ಬುಧವಾರದ ವೇಳೆಗೆ, ನನ್ನ ಬಳಿ ಯಾವುದೇ ಹಣ ಉಳಿದಿರುವುದಿಲ್ಲ” ಎಂದು ದೀಪ್ ಕುಮಾರ್ ಅವರು ಹೇಳುತ್ತಾರೆ.

"ವಿದ್ಯುತ್ ಮಗ್ಗಗಳು ಜನಪ್ರಿಯವಾದಾಗ, ಚಂದೇರಿ ಸೀರೆಗಳಿಗೆ ಬೇಡಿಕೆ ಕುಸಿಯುತ್ತಾ ಬಂದಿತು. ಆದರೆ ಅದನ್ನು ನಾವು ಹೇಗೂ ನಿರ್ವಹಿಸಿದೆವು. ಆದರೆ ಇಂತಹ ಬಿಕ್ಕಟ್ಟನ್ನು ನನಗೆ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಯಾವುದೇ ಪೂರೈಕೆಯಿಲ್ಲ, ಬೇಡಿಕೆಯಿಲ್ಲ, ಹಣವಿಲ್ಲ, ”ಎಂದು 73 ವರ್ಷದ ತುಳಸಿರಾಮ್ ಕೋಲಿ ಹೇಳುತ್ತಾರೆ.ಅವರು ಕಳೆದ 50 ವರ್ಷಗಳಿಗಿಂತ ಹೆಚ್ಚು ಕಾಲ ನೇಯ್ಗೆ ಕೆಲಸವನ್ನು ಮಾಡುತ್ತಿದ್ದಾರೆ ಮತ್ತು 1985 ರಲ್ಲಿ ಅವರು ರಾಷ್ಟ್ರೀಯ ಪ್ರಶಸ್ತಿಯನ್ನು ಸಹ ಪಡೆದಿದ್ದಾರೆ. ಚಂದೇರಿಯಲ್ಲಿರುವ ಅವರ ಮನೆಯಲ್ಲಿ ಆರು ಮಗ್ಗಗಳಿವೆ, ಅದನ್ನು ಅವರು, ಅವರ ಹೆಂಡತಿ, ಇಬ್ಬರು ಗಂಡು ಮಕ್ಕಳು ಮತ್ತು ಸೊಸೆಯಂದಿರು ನಡೆಸುತ್ತಿದ್ದಾರೆ.

ಅಶೋಕ ನಗರ ಜಿಲ್ಲೆಯು ಇಲ್ಲಿಯವರೆಗೆ ಯಾವುದೇ ಕೋವಿಡ್ -19 ಪ್ರಕರಣಗಳನ್ನು ವರದಿಯಾಗದಿದ್ದರೂ, ಲಾಕ್‌ಡೌನ್ ಸಡಿಲಗೊಳಿಸಿದ ನಂತರವೂ ಚೇತರಿಸಿಕೊಳ್ಳುವ ಅದರ ಮಾರ್ಗ ಇನ್ನೂ ಸುದೀರ್ಘವಾಗಿದೆ.

"ಮುಂದಿನ 6-7 ತಿಂಗಳುಗಳವರೆಗೆ ನಾವು ಹೊಸ ಆರ್ಡರ್ ಗಳನ್ನು ಪಡೆಯುತ್ತೇವೆ ಎಂದು ನನಗೆ ಅನಿಸುತ್ತಿಲ್ಲ. ಅದರ ನಂತರವೂ, ನಾವು ಗಮನಾರ್ಹವಾದ ಮಂದಗತಿಯನ್ನು ಕಾಣುತ್ತೇವೆ, ಏಕೆಂದರೆ ಜನರು ಕೈಯಿಂದ ನೇಯ್ದ ಸೀರೆಗಳ ಮೇಲೆ ಧಾರಾಳವಾಗಿ ಹಣ ಖರ್ಚು ಮಾಡುವ ಸಾಮರ್ಥ್ಯವನ್ನು ಹೊಂದಿರುವುದಿಲ್ಲ. ಅವರು ಅಗ್ಗದ ವಿದ್ಯುತ್ ಮಗ್ಗದಿಂದ ತಯಾರಾಗಿರುವ ಸೀರೆಗಳನ್ನು ಖರೀದಿಸುತ್ತಾರೆ” ಎಂದು ಸುಮಾರು 100 ಕೈಮಗ್ಗದ ನೇಕಾರರೊಂದಿಗೆ ಕೆಲಸ ಮಾಡುವ ಚಂದೇರಿ ಪಟ್ಟಣದ ವ್ಯಾಪಾರಿ ಅಮೀನುದ್ದೀನ್ ಅನ್ಸಾರಿ ಹೇಳುತ್ತಾರೆ.

ಲಾಕ್‌ಡೌನ್ ಮೊದಲು, ಅಮೀನುದ್ದೀನ್ ಪ್ರತಿ ತಿಂಗಳು 8-9 ಲಕ್ಷ ರೂ.ಗಳ ಆರ್ಡರ್ ಗಳನ್ನು ಸ್ವೀಕರಿಸುತ್ತಿದ್ದರು. ದೆಹಲಿಯಲ್ಲಿ ಶೋ ರೂಮ್ ಗಳನ್ನು ಹೊಂದಿದವರು ಮತ್ತು ಅದೇ ರೀತಿಯಾಗಿ ಕಚ್ಚಾ ವಸ್ತುಗಳನ್ನು ಖರೀದಿಸಲು ಅವರಿಗೆ ಮುಂಗಡ ಪಾವತಿಸಿದ ದೊಡ್ಡ ಬಟ್ಟೆ ಬ್ರಾಂಡ್‌ ಗಳು ಅವರ ಗ್ರಾಹಕರಾಗಿದ್ದಾರೆ.ಮುಂಬರುವ ತಿಂಗಳುಗಳಲ್ಲಿ ಅನೇಕ ನೇಕಾರರು ಯೋಗ್ಯ ದಿನಗೂಲಿಯನ್ನು ಅರಸಿ ಹೊಗಲಿದ್ದಾರೆ ಎನ್ನುವುದನ್ನು ಅಮೀನುದ್ದೀನ್ ನಿರೀಕ್ಷಿಸಿದ್ದಾರೆ.

PHOTO • Aminuddin Ansari

ಚಂದೇರಿ ಸೀರೆ ಆಕರ್ಷಕವಾಗಿದೆ, ಏಕೆಂದರೆ ಅದರಲ್ಲಿರುವ ನವಿರು ಗುಣಮಟ್ಟ, ರೇಷ್ಮೆಯಂತಹ ಹೊಳಪು ಮತ್ತು ಕಸೂತಿ ಕಲೆ; ಆದರೆ ಅವರು ಅದನ್ನು ಲಾಕ್‌ಡೌನ್‌ನಲ್ಲಿ ಮಾರಾಟ ಮಾಡುತ್ತಿಲ್ಲ

ಶೋರೂಂಗಳು ಮತ್ತು ಬಟ್ಟೆ ಬ್ರಾಂಡ್‌ಗಳು ಆರ್ಡರ್‌ಗಳನ್ನು ರದ್ದುಗೊಳಿಸಲು ಆರಂಭಿಸಿವೆ. ಸುರೇಶ್ ಅವರ ಸೇಠ್ ಆನಂದಿ ಲಾಲ್ ಅವರೊಂದಿಗೆ 120 ನೇಕಾರರು ಕೆಲಸ ಮಾಡುತ್ತಿದ್ದಾರೆ, ಅನೇಕ ದೊಡ್ಡ ಬ್ರಾಂಡ್ ಶೋರೂಂಗಳು ಸಾಮಾನ್ಯವಾಗಿ ತಮ್ಮ ಸಿಬ್ಬಂದಿಯನ್ನು ಚಂದೇರಿಗೆ ಆರ್ಡರ್ ಗೆ ಕಳುಹಿಸುತ್ತವೆ ಎಂದು ಹೇಳುತ್ತಾರೆ. ಈ ವರ್ಷ ಜನವರಿಯಲ್ಲಿ ದೊಡ್ಡ ಬ್ರಾಂಡ್ ನಿಂದ 1 ಕೋಟಿ ರೂ. ಆರ್ಡರ್ ಗಳನ್ನು ಪಡೆದಿದ್ದೇವೆ. ನಾನು ನೇಕಾರರಿಗೆ ವಿತರಿಸಲು 10-15 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಖರೀದಿಸಿದೆ. ಲಾಕ್‌ಡೌನ್ ಘೋಷಿಸಿದ ಸುಮಾರು ಐದು ದಿನಗಳ ನಂತರ, ಇಲ್ಲಿಯವರೆಗೆ ಕೆಲಸ ಎಷ್ಟು ಪ್ರಗತಿಯಾಗಿದೆ ಎನ್ನುವುದನ್ನು ವಿಚಾರಿಸಲು ಅವರಿಂದ ನಮಗೆ ಕರೆಗಳು ಬಂದವು," ಎಂದು ಅವರು ಹೇಳಿದರು. ಆದರೆ ಸುಮಾರು 10 ದಿನಗಳ ನಂತರ, ಆರ್ಡರ್ ಗಳನ್ನು ರದ್ದುಗೊಳಿಸಲಾಯಿತು, ಈಗಾಗಲೇ ಮಗ್ಗದಲ್ಲಿ ಕೆಲಸಕ್ಕೆ ಚಾಲನೆ ನೀಡಿ ಹಾಗೆ ಉಳಿಸಲಾಗಿತ್ತು.

ಲಾಕ್‌ಡೌನ್‌ಗೂ ಮುಂಚೆ, ನೇಕಾರರು ಸಾಮಾನ್ಯವಾಗಿ ಸೀರೆಯ ಮಾರಾಟದಿಂದ ಬಂದಿರುವ ಲಾಭವನ್ನು ವ್ಯಾಪಾರಿಗಳು ಹೇಗೆ ಮರೆಮಾಚುತ್ತಾರೆ ಎನ್ನುವುದನ್ನು ಹೇಳುತ್ತಾರೆ. ಅವರು ನೇಕಾರರಿಗೆ ವೆಚ್ಚಗಳು ಮತ್ತು ಪಾವತಿಗಳನ್ನು ಲೆಕ್ಕಹಾಕಿದ ನಂತರ ಸಗಟು ದರದಲ್ಲಿ ಸುಮಾರು ಶೇ 40 ರಷ್ಟು ಲಾಭವನ್ನು ಗಳಿಸುತ್ತಾರೆ. ಎರಡು ವರ್ಷಗಳ ಹಿಂದೆ, 34 ವರ್ಷದ ಮೊಹಮ್ಮದ್ ದಿಲ್ ಶಾದ್ ಅನ್ಸಾರಿ, ಮತ್ತು ಸುಮಾರು 12-13 ಕುಟುಂಬ ಮತ್ತು ಸ್ನೇಹಿತರು ಮಧ್ಯವರ್ತಿಗಳ ಹಾವಳಿಯಿಂದ ಹೊರಬರಲು ನೇಕಾರರ ಅನೌಪಚಾರಿಕ ಸಾಮೂಹಿಕ ಸಂಸ್ಥೆಯನ್ನು ಆರಂಭಿಸಿದರು. ಅವರು ಕೈಮಗ್ಗ ನಿಗಮದಲ್ಲಿ ಸ್ವತಂತ್ರ ನೇಕಾರರಾಗಿ ನೋಂದಾಯಿಸಿಕೊಂಡರು ಮತ್ತು ಜೊತೆಯಾಗಿ ಆರ್ಡರ್ ಗಳನ್ನು ನಿರ್ವಹಿಸುವುದನ್ನು ಪ್ರಾರಂಭಿಸಿದರು. "ನಾವು WhatsApp ಮತ್ತು Facebook ಮತ್ತು Instagram ನಂತಹ ಸಾಮಾಜಿಕ ಮಾಧ್ಯಮಗಳಲ್ಲಿ ಆರ್ಡರ್ ತೆಗೆದುಕೊಳ್ಳಲು ಕಲಿತಿದ್ದೇವೆ" ಎಂದು ಅವರು ಹೇಳುತ್ತಾರೆ. ಈ ಸಾಮೂಹಿಕ ಸಂಸ್ಥೆ ಈಗ 74 ನೇಕಾರರನ್ನು ಹೊಂದಿದೆ.

ಆದರೆ ನಂತರ ಕೋವಿಡ್ -19 ಬಂದಿತು. ಮಾರ್ಚ್‌ನಲ್ಲಿ, ದಿಲ್‌ಶಾದ್ ದೆಹಲಿಯಲ್ಲಿ ದಸ್ತಕರ್ ಎಂಬ ಎನ್‌ಜಿಒ ಆಯೋಜಿಸಿದ್ದ ಕರಕುಶಲ ವಸ್ತುಗಳನ್ನು ಪ್ರೋತ್ಸಾಹಿಸುವ ಮತ್ತು ಕುಶಲಕರ್ಮಿಗಳನ್ನು ಬೆಂಬಲಿಸುವ ಪ್ರದರ್ಶನದಲ್ಲಿ ಭಾಗವಹಿಸಿದ್ದರು.ಅವರು ಅಲ್ಲಿ 12-15 ಲಕ್ಷ ರೂ. ಮೌಲ್ಯದ  ಉತ್ಪನ್ನಗಳನ್ನು ಮಾರಾಟ ಮಾಡುವ ಆಶಯ ಹೊಂದಿದ್ದರು. ಆದರೆ ದೆಹಲಿ ಸರ್ಕಾರ ಮಾರ್ಚ್ 13 ರಂದು ಸಾಮೂಹಿಕ ಕೂಟಗಳನ್ನು ನಿಷೇಧಿಸಿತು. "ಕೊನೆಗೆ ನಾವು 75,000 ರೂ.ಗಿಂತ ಕಡಿಮೆ ಮೌಲ್ಯದ ಮಾರಾಟದ ಉತ್ಪನ್ನಗಳೊಂದಿಗೆ ಮನೆಗೆ ಮರಳಿದೆವು" ಎಂದು ಅವರು ಹೇಳುತ್ತಾರೆ.

ಏಪ್ರಿಲ್ ಮೊದಲ ವಾರದ ಹೊತ್ತಿಗೆ, ವರ್ಷದ ಉಳಿದ ದಿನಗಳಲ್ಲಿ ಆರ್ಡರ್ ಮಾಡಿದ ಖರೀದಿದಾರರು ಅವುಗಳನ್ನು ರದ್ದುಗೊಳಿಸಲು ಆರಂಭಿಸಿದರು. ದಿಲ್‌ಶಾದ್ ಅವರು ಈಗ ಹತಾಶನಾಗಿದ್ದಾರೆ. "ನನಗೆ ರಾತ್ರಿ ನಿದ್ರೆ ಬರುವುದಿಲ್ಲ. ಸೀರೆಗಳು ಮತ್ತೆ ಯಾವಾಗ ಮಾರಾಟವಾಗುತ್ತವೆ ಎಂದು ನಮಗೆ ಗೊತ್ತಿಲ್ಲ. ಅಲ್ಲಿಯವರೆಗೆ, ನಾವೇನು ಮಾಡಬೇಕು ಹೇಳಿ?" ಎಂದು ಅವರು ಕೇಳುತ್ತಾರೆ.

ಮಾರುಕಟ್ಟೆಗಳು ಮತ್ತೆ ತೆರೆದಾಗ, ವ್ಯಾಪಾರಿಗಳು ಕಚ್ಚಾ ವಸ್ತುಗಳನ್ನು ಖರೀದಿಸಲು ಮತ್ತು ಬೃಹತ್ ಆರ್ಡರ್ ಗಳನ್ನು ತೆಗೆದುಕೊಳ್ಳಲು ಸೂಕ್ತ ಸಂಪನ್ಮೂಲಗಳನ್ನು ಹೊಂದಿರಬಹುದು, ಆದರೆ, “ನಾವು ಮತ್ತೆ ಸೇಠ್‌ಗಳ ವ್ಯವಸ್ಥೆಗೆ ಹಿಂತಿರುಗುತ್ತೇವೆ. ಅಥವಾ ನಮ್ಮಂತಹ ಅನೇಕ ನೇಕಾರರು ಚಂದೇರಿಯ ಹೊರಗೆ ದಿನಗೂಲಿ ಕೆಲಸ ಮಾಡುವತ್ತ ಮುಖ ಮಾಡಬಹುದು" ಎಂದು ದಿಲ್‌ಶಾದ್ ಭವಿಷ್ಯ ನುಡಿಯುತ್ತಾರೆ.

ಅನುವಾದ - ಎನ್. ಮಂಜುನಾಥ್

Mohit M. Rao

موہت ایم راؤ بنگلورو میں مقیم ایک آزاد رپورٹر ہیں۔ وہ بنیادی طور پر ماحولیات پر لکھتے ہیں، ساتھ ہی ان کی دلچسپی مزدوری اور مہاجرت میں بھی ہے۔

کے ذریعہ دیگر اسٹوریز Mohit M. Rao
Translator : N. Manjunath