"ನಾವು ರಹಸ್ಯ ಮಾರ್ಗದ ಮೂಲಕ ಹೊರಗ ಬಂದ್ವಿ, ಆದರೆ ನಾವರss ಏನ್ ಮಾಡಬೇಕು ಹೇಳರ್ರೀ? ಕನಿಷ್ಠ ನಮ್ಮ ಕಡೆ ವಸ್ತು ಇದ್ದಿದ್ರ, ನಾವ್ ಮನ್ಯಾಗ್ ಕುಂತು ಬುಟ್ಟಿ ನೇಯ್ದು ಅವುಗಳನ್ನ ತಯಾರ್ ಮಾಡಿ ಇಟ್ಕೋಬಹುದಿತ್ತು” ಎಂದು ತೆಲಂಗಾಣದ ಕಂಗಲ್ ಹಳ್ಳಿಯ ಬುಟ್ಟಿ ತಯಾರಕರ ಗುಂಪು ಹೇಳಿತು. ಅಂದ ಹಾಗೆ ಅವರ ರಹಸ್ಯ ಮಾರ್ಗ ಯಾವುದೆಂದರೆ, ಅಲ್ಲಿ ಪೋಲೀಸರ ಬ್ಯಾರಿಕೇಡ್‌ಗಳಾಗಲಿ ಅಥವಾ ಗ್ರಾಮಸ್ಥರು ದಾರಿಗೆ ಅಡ್ಡಲಾಗಿ ಹಾಕಿರುವ ಯಾವುದೇ ಮುಳ್ಳಿನ ಬೇಲಿಗಳಾಗಲಿ ಇರುವುದಿಲ್ಲ.
ಏಪ್ರಿಲ್ 4ರಂದು, ಈಚಲು ಮರದ ಗರಿಗಳನ್ನು ಸಂಗ್ರಹಿಸಲು ಕಂಗಾಲಿನಿಂದ ಏಳು ಕಿಲೋಮೀಟರ್ ದೂರದಲ್ಲಿರುವ ಕುಗ್ರಾಮ ವೆಳ್ಳಿದಂಡುಪಾಡುಗೆ ಹೋಗಲು, ಇತರ ನಾಲ್ಕು ಮಹಿಳೆಯರು ಮತ್ತು ಒಬ್ಬ ವ್ಯಕ್ತಿಯೊಂದಿಗೆ, ನೇಲಿಗುಂದರಾಶಿ ರಾಮುಲಮ್ಮ ಆಟೋರಿಕ್ಷಾವನ್ನು ಹತ್ತಿದರು. ಇದರ ಗರಿಯಿಂದ ಅವರು ಬುಟ್ಟಿಗಳನ್ನು ನೇಯುತ್ತಾರೆ. ಅವರು ಸಾಮಾನ್ಯವಾಗಿ ಈ ಗರಿಗಳನ್ನು ಸಾರ್ವಜನಿಕ ಜಮೀನಿನಿಂದ ಅಥವಾ ಕೆಲವೊಮ್ಮೆ ಕೃಷಿ ಭೂಮಿಯಿಂದ ಸಂಗ್ರಹಿಸಿ, ಅದಕ್ಕೆ ಪ್ರತಿಯಾಗಿ ಕೆಲವು ಬುಟ್ಟಿಗಳನ್ನು ರೈತರ ಜೊತೆಗೆ ವಿನಿಮಯ ಮಾಡಿಕೊಳ್ಳುತ್ತಾರೆ.
ತೆಲಂಗಾಣದಲ್ಲಿ ಪರಿಶಿಷ್ಟ ಪಂಗಡದ ಪಟ್ಟಿಯಲ್ಲಿರುವ ಯೆರುಕುಲ ಸಮುದಾಯದಲ್ಲಿನ ಕಂಗಲ್ ಬುಟ್ಟಿ ತಯಾರಕರಿಗೆ ಮಾರ್ಚಿಯಿಂದ ಮೇ ತಿಂಗಳ ಅವಧಿಯು ತಮ್ಮ ಬುಟ್ಟಿಗಳನ್ನು ಮಾರಾಟ ಮಾಡಲು ನಿರ್ಣಾಯಕ ಸಮಯವಾಗಿದೆ. ಈ ತಿಂಗಳುಗಳಲ್ಲಿರುವ ಬಿಸಿ ತಾಪಮಾನವು ಕೂಡ ಗರಿಗಳನ್ನು ಒಣಗಿಸಲು ಸೂಕ್ತವಾಗಿದೆ.
ವರ್ಷದ ಉಳಿದ ದಿನಗಳಲ್ಲಿ, ಅವರು ಸಾಮಾನ್ಯವಾಗಿ ಕೃಷಿ ಕಾರ್ಮಿಕರಾಗಿ ಕೆಲಸ ಮಾಡುತ್ತಾರೆ, ಇದರಿಂದ ದಿನಗೂಲಿಯಂತೆ ಅವರು 200 ರೂ. ಸಂಪಾದಿಸುತ್ತಾರೆ. ಡಿಸೆಂಬರ್‌ನಿಂದ ಫೆಬ್ರುವರಿ ಹತ್ತಿ ಕೊಯ್ಲಿನ ಅವಧಿಯಾಗಿರುವುದರಿಂದ ಆ ಒಂದು ತಿಂಗಳ ಅವಧಿಯಲ್ಲಿ ಕೆಲವೊಮ್ಮೆ ದಿನಕ್ಕೆ 700-800 ರೂ.ಗಳನ್ನು ಸಂಪಾದಿಸುತ್ತಾರೆ. ಆದರೆ ಇದೆಲ್ಲವೂ ಕೆಲಸ ಲಭ್ಯತೆ ಮೇಲೆ ಅವಲಂಬಿತವಾಗಿರುತ್ತದೆ.
ಈ ವರ್ಷ, ಕೋವಿಡ್ -19 ಲಾಕ್‌ಡೌನ್ ಅವರ ಬುಟ್ಟಿ ಮಾರಾಟದಿಂದ ಬರುವ ಅವರ ಗಳಿಕೆಯನ್ನು ಸಂಪೂರ್ಣ ಸ್ಥಗಿತಗೊಳಿಸಿದೆ. "ಈಗ ಯಾರ ಕಡೆ ರೊಕ್ಕಾ ಐತಿ, ಅವ್ರು ಮಾತ್ರ ಊಟ ಮಾಡಾಕುಂತಾರ, ಆದರೆ ನಾವು ಮಾಡಲ್ಲ, ಹಂಗಾಗಿ ನಾವು ಈ ಗರಿ ತರಾಕ್ ಹೊರಗ ಬಂದೇವಿ, ಇಲ್ಲಾಂದ್ರ ನಾವ್ ಯಾಕ್ ಬರತಿದ್ವಿ ಹೇಳಿ ?" ಎಂದು ಸುಮಾರು 70 ವರ್ಷ ವಯಸ್ಸಿನ ರಾಮುಲಮ್ಮ ಹೇಳುತ್ತಿದ್ದರು.
ರಾಮುಲಮ್ಮನ ಆರು ಸದಸ್ಯರ ಗುಂಪಿಗೆ 30-35 ಬುಟ್ಟಿಗಳನ್ನು ಮಾಡಲು 2-3 ದಿನಗಳವರೆಗೆ 5-6 ಗಂಟೆಗಳ ಕೆಲಸ ಬೇಕಾಗುತ್ತದೆ. ಕುಟುಂಬ ಸದಸ್ಯರು ಸಾಮಾನ್ಯವಾಗಿ ಒಟ್ಟಾಗಿ ಕೆಲಸ ಮಾಡುತ್ತಾರೆ - ಮತ್ತು ರಾಮುಲಮ್ಮನ ಅಂದಾಜಿನ ಪ್ರಕಾರ ಕಂಗಲ್‌ನಲ್ಲಿ ಕನಿಷ್ಠ 10 ಗುಂಪುಗಳಿವೆ. ನಲ್ಗೊಂಡ ಜಿಲ್ಲೆಯ ಕಂಗಲ್ ಮಂಡಲದಲ್ಲಿರುವ ಈ ಗ್ರಾಮದಲ್ಲಿ ಸುಮಾರು 7,000 ಜನರು ವಾಸಿಸುತ್ತಿದ್ದಾರೆ, ಅದರಲ್ಲಿ 200 ಜನರು ಪರಿಶಿಷ್ಟ ಪಂಗಡಕ್ಕೆ ಸೇರಿದ್ದಾರೆ.
'ನಾವು ಮೊದಲು ಗರಿಗಳಲ್ಲಿರುವ ಮುಳ್ಳು ತಗಿಬೇಕು, ಆಮ್ಯಾಲೆ ನಾವು ಅವನ್ನ ನೆನೆಸಿ, ಒಣಗಿಸಿ ಮತ್ತು ತೆಳುವಾಗಿರುವ ಮತ್ತು ಉದುರುವ ತುಣುಕುಗಳನ್ನು ತೆಗೆದುಹಾಕುತ್ತೇವೆ. ಆನಂತರ ಬುಟ್ಟಿ ಮತ್ತ ಇತರ ವಸ್ತುಗಳನ್ನು ಹೆಣೆಯುತ್ತೇವೆ,” ಎಂದು ರಾಮುಲಮ್ಮ ವಿವರಿಸುತ್ತಾರೆ. “ಮತ್ತು ಇದೆಲ್ಲವನ್ನೂ ಮಾಡಿದ ನಂತರ, ನಾವು ಈಗ ಲಾಕ್‌ಡೌನ್‌ನಿಂದಾಗಿ ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ.” ಎನ್ನುತ್ತಾರೆ.
ಹೈದರಾಬಾದಿನಿಂದ ವ್ಯಾಪಾರಿಯೊಬ್ಬರು 7ರಿಂದ 10 ದಿನಗಳಿಗೊಮ್ಮೆ ಬುಟ್ಟಿಗಳನ್ನು ತೆಗೆದುಕೊಳ್ಳಲು ಬರುತ್ತಾರೆ. ನೇಕಾರರು ಪ್ರತಿ ಬುಟ್ಟಿಯನ್ನು 50 ರೂ.ಗೆ ಮಾರುತ್ತಾರೆ- ಮಾರ್ಚಿಯಿಂದ ಮೇ ತಿಂಗಳವರೆಗೆ ಅವರು ದಿನಕ್ಕೆ 100ರಿಂದ 150 ರೂ.ಗಳನ್ನು ಸಂಪಾದಿಸುತ್ತಿದ್ದರು. “ಆದ್ರ ನಾವ್ ಮಾರಿದ್ರ ಅಷ್ಟ ನಮಗ ಆ ದುಡ್ಡು ಕಾಣುತ್ತರ್ರಿ" ಎಂದು 28 ವರ್ಷದ ನೇಲಿಗುಂಧರಾಶಿ ಸುಮತಿ ಹೇಳುತ್ತಾರೆ.
ಮಾರ್ಚ್ 23 ರಂದು ತೆಲಂಗಾಣದಲ್ಲಿ ಲಾಕ್‌ಡೌನ್ ವಿಧಿಸಿದ ನಂತರ, ವ್ಯಾಪಾರಿ ಕಂಗಲ್‌ಗೆ ಭೇಟಿ ನೀಡುವುದನ್ನು ನಿಲ್ಲಿಸಿದ್ದಾನೆ. “ವಾರಕ್ಕೊಮ್ಮೆರ ಇಲ್ಲಾಂದ್ರ, ಎರಡ ಸಲ ಬಂದು ನಮ್ಮ ಕಡೆ ಮತ್ತ ಅಕ್ಕಪಕ್ಕದ ಹಳ್ಳಿಗಳಲ್ಲಿ ಇತರರ ಕಡೆಯಿಂದ ಟ್ರಕ್ ತುಂಬಾ ಬುಟ್ಟಿ ಖರೀದಿ ಮಾಡ್ತಿದ್ದ” ಎಂದು 40 ವರ್ಷದ ನೆಲಗುಂದರಾಶಿ ರಾಮುಲು ಲಾಕ್‌ಡೌನ್ ಗೂ ಮೊದಲು ಇದ್ದಂತಹ ಪರಿಸ್ಥಿತಿಯನ್ನು ವಿವರಿಸಿದರು.
ರಾಮುಲು ಮತ್ತು ಇತರರು ತಯಾರಿಸುವ ಬುಟ್ಟಿಗಳನ್ನು ಮುಖ್ಯವಾಗಿ ಬೇಯಿಸಿದ ಅನ್ನವನ್ನು ಒಣಗಿಸಲು ಅಥವಾ ಹುರಿದ ಖಾದ್ಯದ ವಸ್ತುಗಳಿಂದ ಎಣ್ಣೆಯನ್ನು ಹೊರತೆಗೆಯಲು ಬೃಹತ್ ಕಾರ್ಯಕ್ರಮಗಳಲ್ಲಿ ಬಳಸಲಾಗುತ್ತದೆ. ಆದರೆ ಮಾರ್ಚ್ 15 ರಿಂದ ತೆಲಂಗಾಣ ಸರ್ಕಾರವು ಇಂತಹ ಕಾರ್ಯಕ್ರಮಗಳ ಮೇಲೆ ನಿಷೇಧ ಹೇರಿತು.
ಸ್ಥಳೀಯ ವ್ಯಾಪಾರಿಗಳು ಈಗ ಮಾರ್ಚ್ 25 ರಂದು ತೆಲುಗು ಹೊಸ ವರ್ಷವಾದ ಯುಗಾದಿಗೆ ಒಂದು ವಾರಕ್ಕೂ ಮುಂಚಿತವಾಗಿ ಸಂಗ್ರಹಿಸಿದ ಬುಟ್ಟಿಗಳು ಹಾಗೆಯೇ ಇವೆ. ಆದ್ದರಿಂದ ಈಗ ಲಾಕ್‌ಡೌನ್ ನ್ನು ಸಡಿಲಗೊಳಿಸಿದರೂ ಅಥವಾ ತೆಗೆದುಹಾಕಿದರೂ ಸಹ, ವ್ಯಾಪಾರಿ ಸಮಾರಂಭದ ಹಾಲ್ ಗಳು ಕಾರ್ಯಕ್ರಮದ ಸ್ಥಳಗಳು ಪುನಃ ಆರಂಭವಾದಾಗಲೇ ಅವನು ಕಂಗಲ್ ಗೆ ಮುಂದಿನ ಭೇಟಿ ನೀಡುವುದು.
“ಅವರು ಫೋನ್‌ನಲ್ಲಿ ಲಾಕ್ ಡೌನ್ ನಂತರ ಎಲ್ಲಾ ಬುಟ್ಟಿಗಳನ್ನು ನಮ್ಮಿಂದ ಖರೀದಿಸುವುದಾಗಿ ಭರವಸೆ ನೀಡಿದ್ದಾರೆ.” ಎಂದು ಸುಮತಿ ಹೇಳುತ್ತಾರೆ. ಉತ್ಪನ್ನಗಳು ಹಾಳಾಗುವುದಿಲ್ಲವಾದ್ದರಿಂದ, ಅವರು ಮತ್ತು ಇತರ ನೇಕಾರರು ಯಾವುದು ವ್ಯರ್ಥವಾಗುವುದಿಲ್ಲ ಎನ್ನುವ ಆಶಯವನ್ನು ಹೊಂದಿದ್ದಾರೆ. ಆದರೆ ಕಂಗಲ್‌ನಲ್ಲಿರುವ ಪ್ರತಿ ನೇಕಾರರ ಮನೆಯಲ್ಲಿ ಬುಟ್ಟಿಗಳ ರಾಶಿಯೇ ಬಿದ್ದಿರುವುದರಿಂದ, ಲಾಕ್‌ಡೌನ್ ತೆರವುಗೊಳಿಸಿದಾಗಲೂ ಪ್ರತಿ ಬುಟ್ಟಿಯ ದರ ಎಷ್ಟು ಕಡಿಮೆಯಾಗಬಹುದು ಎನ್ನುವುದಕ್ಕೆ ಇನ್ನೂ ಸ್ಪಷ್ಟತೆ ಇಲ್ಲ.
ಲಾಕ್‌ಡೌನ್ ಪ್ರಾರಂಭವಾಗುವ ಮೊದಲು, ಮತ್ತು ಯುಗಾದಿಗೆ ಇನ್ನೂ ಒಂದು ವಾರ ಮುಂಚಿತವಾಗಿ ವ್ಯಾಪಾರಿ ಖರೀದಿಸಿದ ಬುಟ್ಟಿಗಳಿಂದ ಬಂದಂತಹ ಹಣದಿಂದ ರಾಮುಲು ಅವರ ಪತ್ನಿ ನೆಲಗುಂದರಾಶಿ ಯಾಡಮ್ಮ ಅವರು ಮಾರುಕಟ್ಟೆಯಿಂದ 10 ದಿನಗಳವರೆಗೆ ಆಗುವಷ್ಟು ದಾಸ್ತಾನುಗಳನ್ನು ಖರೀದಿಸಿದ್ದರು. ಬುಟ್ಟಿ ತಯಾರಕರು ಸಾಮಾನ್ಯವಾಗಿ ಅಕ್ಕಿ, ಬೇಳೆಕಾಳು, ಸಕ್ಕರೆ, ಮೆಣಸಿನ ಪುಡಿ ಮತ್ತು ಎಣ್ಣೆಯಂತಹ ಅಗತ್ಯ ವಸ್ತುಗಳನ್ನು ನಿಯಮಿತ ಮತ್ತು ಸೀಮಿತ ಪ್ರಮಾಣದಲ್ಲಿ ಸ್ಥಳೀಯ ಮಾರುಕಟ್ಟೆಯಿಂದ ಮತ್ತು ಕಂಗಾಲಿನಲ್ಲಿರುವ ನ್ಯಾಯಬೆಲೆ ಅಂಗಡಿ (ಸಾರ್ವಜನಿಕ ವಿತರಣಾ ವ್ಯವಸ್ಥೆ) ಗಳಲ್ಲಿ ಖರೀದಿಸುತ್ತಾರೆ.ನಾನು ಏಪ್ರಿಲ್ 4ರಂದು ಯಾಡಮ್ಮನನ್ನು ಭೇಟಿಯಾದಾಗ, ಆಗಲೇ ಮಾರುಕಟ್ಟೆಯಲ್ಲಿ ಖರೀದಿಸಿದ ಅಕ್ಕಿಯು ಖಾಲಿಯಾಗಿತ್ತು ಮತ್ತು ಈ ಹಿಂದಿನ ತಿಂಗಳಲ್ಲಿ ಉಳಿದಿರುವ ರೇಷನ್ ಅಕ್ಕಿಯಲ್ಲಿ ಅವರು ಅಡುಗೆ ಮಾಡುತ್ತಿದ್ದರು. ತೆಲಂಗಾಣದಲ್ಲಿ, ಒಂದು ಕುಟುಂಬದ ಪ್ರತಿಯೊಬ್ಬ ವ್ಯಕ್ತಿಗೆ ಆರು ಕಿಲೋಗ್ರಾಂಗಳಷ್ಟು ರೇಷನ್ ಅಕ್ಕಿಗೆ ಪ್ರತಿ ಕಿಲೋಗೆ 1.ರೂ ದರದಲ್ಲಿ ನೀಡಲಾಗುತ್ತದೆ. ಅದೇ ಮಾರುಕಟ್ಟೆಯಿಂದ ಖರೀದಿಸಿರುವ ಒಂದು ಕಿಲೋ ಅಕ್ಕಿಗೆ 40 ರೂ.ಗಳಾಗುತ್ತದೆ.
ಆದಾಗ್ಯೂ, ಲಾಕ್‌ಡೌನ್‌ಗೂ ಬಹಳ ಮೊದಲೇ, ಯಾದಮ್ಮ ಮತ್ತು ಇತರರು ಕಂಗಲ್‌ನ ಪಿಡಿಎಸ್ ಔಟ್‌ಲೆಟ್‌ನಲ್ಲಿ ತಾವು ತೆಗೆದುಕೊಂಡ ಅಕ್ಕಿಯು ತಿನ್ನಲು ಯೋಗ್ಯವಲ್ಲ ಎನ್ನುವುದನ್ನು ಕಂಡುಕೊಂಡರು- ಅದನ್ನು ಬೇಯಿಸಿದಾಗ ಅದು ಜಿಗುಟಾಗುತ್ತದೆ ಅಥವಾ ಕೆಟ್ಟವಾಸನೆಯನ್ನು ಬೀರುತ್ತದೆ. "ಇದು ಕಮ್ಮತಿ ಬಿಯ್ಯಂ (ರುಚಿಕರ ಅನ್ನ)" ಎಂದು ಯಾಡಮ್ಮ ವ್ಯಂಗ್ಯವಾಗಿ ಹೇಳುತ್ತಾರೆ. ಇದನ್ನು ತಿಂದು, ತಿಂದು ಮತ್ತು ಸಾಯುತ್ತಿರಬೇಕು,” ಎಂದು ಅವರು ಉದ್ಗರಿಸಿದರು.
ಆದರೂ, ಅವರು ನಿಯಮಿತವಾಗಿ ಪಿಡಿಎಸ್ ಅಕ್ಕಿಯನ್ನು ಮನೆಗೆ ತರುತ್ತಿದ್ದರು, ನಿಯಮಿತವಾಗಿ ಸಂಗ್ರಹಿಸದಿದ್ದರೆ ತಮ್ಮ ಪಡಿತರ ಚೀಟಿಗಳನ್ನು ಎಲ್ಲಿ ಕಳೆದುಕೊಳ್ಳಲಾಗುತ್ತದೆಯೋ ಎನ್ನುವ ಭೀತಿ ಅವರದ್ದಾಗಿದೆ.ಯಾದಮ್ಮ ತನಗಾಗಿ, ತನ್ನ ಗಂಡ ಮತ್ತು ಅವರ ಇಬ್ಬರು ಮಕ್ಕಳಿಗಾಗಿ ಸಂಜೆಯ ಊಟಕ್ಕೆ ರೊಟ್ಟಿ ಮಾಡಲು ಆ ಅಕ್ಕಿಯನ್ನು ಹಿಟ್ಟಿಗಾಗಿ ರುಬ್ಬುತ್ತಿದ್ದರು. ಲಾಕ್‌ಡೌನ್‌ಗೂ ಮೊದಲು, ಅವರ ಬೆಳಗಿನ ಮತ್ತು ಮಧ್ಯಾಹ್ನದ ಊಟವನ್ನು ಮಾರುಕಟ್ಟೆಯಲ್ಲಿ ತರಕಾರಿಗಳ ಜೊತೆಗೆ ಖರೀದಿಸಿರುವ ದುಬಾರಿ ದರದ 'ಸಣ್ಣ ಬಿಯ್ಯಂ' (ಉತ್ತಮ ಗುಣಮಟ್ಟದ ಅಕ್ಕಿ) ನಿಂದ ತಯಾರಿಸಲಾಗುತ್ತಿತ್ತು. ಈ ಅಕ್ಕಿ, ತರಕಾರಿಗಳು ಮತ್ತು ಇತರ ಅಗತ್ಯ ವಸ್ತುಗಳನ್ನು ಖರೀದಿಸಲು, ಬುಟ್ಟಿ ನೇಕಾರರಿಗೆ ನಿಯಮಿತ ಗಳಿಕೆಯ ಅಗತ್ಯವಿದೆ. “ಈ ಚಿನ್ನ ಜಾತಿಕಿ' (ಈ ದುರ್ಬಲ ಸಮುದಾಯಗಳಿಗೆ) ಇವು ಸಮಸ್ಯೆಗಳಾಗಿವೆ” ಎಂದು ರಾಮುಲಮ್ಮ ಹೇಳುತ್ತಾರೆ.
ರಾಜ್ಯ ಸರ್ಕಾರವು ಭಾರತೀಯ ಆಹಾರ ನಿಗಮದಿಂದ (ಎಫ್‌ಸಿಐ) ಸರಬರಾಜು ಮಾಡಿದ ಗೋದಾಮಿನ ದಾಸ್ತಾನಿನಿಂದ ಆಹಾರ ಧಾನ್ಯಗಳನ್ನು ವಿತರಿಸುತ್ತದೆ. ಎಫ್‌ಸಿಐನ ಗುಣಮಟ್ಟ ನಿಯಂತ್ರಣದ ಕೈಪಿಡಿಯು ' ಪಾರಿವಾಳಗಳ ಹಿಕ್ಕೆಗಳು, ಗುಬ್ಬಚ್ಚಿಗಳ ಗರಿಗಳು, ಇಲಿಗಳ ಮೂತ್ರ ಮತ್ತು ತಿಗಣೆಗಳು, ಹುಳಗಳು ಅಥವಾ ಜೀರುಂಡೆಗಳ ಮುತ್ತಿಕೊಳ್ಳುವಿಕೆಯಿಂದಾಗಿ ಆಹಾರ ಧಾನ್ಯಗಳನ್ನು ಹಾನಿಗೊಳಿಸಬಹುದು ಎಂದು ಹೇಳುತ್ತದೆ. ಆದ್ದರಿಂದ ಕೆಲವೊಮ್ಮೆ, ಮಿಥೈಲ್ ಬ್ರೋಮೈಡ್ ಮತ್ತು ಫಾಸ್ಫೈನ್ ನಂತಹ ರಾಸಾಯನಿಕಗಳು, ಕೊಳೆತ ಬೆಳ್ಳುಳ್ಳಿಯಂತೆ ವಾಸನೆಗೆ ಕಾರಣವಾಗುತ್ತವೆ, ಇದನ್ನು ಧೂಪವಾಗಿ ಬಳಸಲಾಗುತ್ತದೆ. ಕಂಗಲ್ ಜನರಿಗೆ ಪಿಡಿಎಸ್ ಮೂಲಕ ನೀಡುವ ಅಕ್ಕಿಯು ಕಳಪೆ ಗುಣಮಟ್ಟದ್ದಾಗಿರುವುದಕ್ಕೆ ಇವು ಕೆಲವು ಕಾರಣಗಳಾಗಿರಬಹುದು. “ನಮ್ಮ ಮಕ್ಕಳಂತೂ ಆ ಅನ್ನವನ್ನು ತಿನ್ನುವುದಿಲ್ಲ” ಎಂದು ಇನ್ನೊಬ್ಬ ಬುಟ್ಟಿ ತಯಾರಕರಾದ ನೇಲಿಗುಂದರಾಶಿ ವೆಂಕಟಮ್ಮ ಹೇಳುತ್ತಾರೆ.
ಈಗಲಾದರೂ, ಗುಣಮಟ್ಟದ ಸಮಸ್ಯೆಯನ್ನು ಸ್ವಲ್ಪಮಟ್ಟಿಗೆ ಪರಿಹರಿಸಲಾಗಿದೆ. ರಾಮುಲು ಮತ್ತು ಅವರ ಕುಟುಂಬ, ಮತ್ತು ಕಂಗಲ್‌ನ ಇತರ ನಿವಾಸಿಗಳು ಪ್ರತಿ ವ್ಯಕ್ತಿಗೆ 12 ಕಿಲೋ ಅಕ್ಕಿ ಮತ್ತು ಪ್ರತಿ ಕುಟುಂಬಕ್ಕೆ 1500 ರೂ.ಗಳಂತೆ ರಾಜ್ಯ ಸರ್ಕಾರದ ಕೋವಿಡ್ -19 ಪರಿಹಾರ ಪ್ಯಾಕೇಜ್‌ನ ಭಾಗವಾಗಿ ಅವರು ಇದನ್ನು ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಎರಡು ಬಾರಿ ಪಡೆದಿದ್ದಾರೆ. ಈ ಅಕ್ಕಿಯು ಅವರು ಪಿಡಿಎಸ್ ನಲ್ಲಿ ಪಡೆಯುವುದಕ್ಕಿಂತ ಉತ್ತಮ ಗುಣಮಟ್ಟದ್ದಾಗಿದೆ ಎಂದು ರಾಮುಲು ಹೇಳುತ್ತಾರೆ. ಆದರೆ, ಅವರು ಮೇ 6 ರಂದು ನನಗೆ ಫೋನಿನಲ್ಲಿ ಹೇಳಿದರು, “ಎಲ್ಲವೂ (ಪರಿಹಾರ ಪ್ಯಾಕೇಜ್‌ನಲ್ಲಿರುವ ಅಕ್ಕಿ) ಚೊಲೋ ಇಲ್ಲ. ಅದರಲ್ಲಿ ಕೆಲವೊಂದಿಷ್ಟು ಚೊಲೋ ಇದೆ, ಕೆಲವು ಇಲ್ಲ. ನಾವ್ ಸದ್ಯಕ್ಕೆ ಇದನ್ನೇ ತಿನ್ನುತ್ತಿದ್ದೇವೆ. ಕೆಲವರು ಮಾರುಕಟ್ಟೆಯಿಂದ ಖರೀದಿ ಮಾಡಿದ ಅಕ್ಕಿಯ ಜೊತೆ ಪರಿಹಾರದ ಅಕ್ಕಿಯನ್ನು ಮಿಶ್ರಣ ಮಾಡಿ ತಿನ್ನಲು ಬಳಸುತ್ತಿದ್ದಾರೆ.”ಎಂದು ಹೇಳಿದರು.
ನಾನು ಏಪ್ರಿಲ್ 15ರಂದು ರಾಮುಲು ಅವರನ್ನು ಭೇಟಿ ಮಾಡಿದಾಗ, ಕಂಗಲ್ ನಲ್ಲಿರುವ ಸರ್ಕಾರಿ ಭತ್ತ ಖರೀದಿ ಕೇಂದ್ರದಲ್ಲಿ ಅವರು ದಿನಗೂಲಿ ಕೆಲಸವನ್ನು ಕಂಡುಕೊಂಡಿದ್ದರು - ಈ ಕಾರ್ಯವು ಸಾಮಾನ್ಯವಾಗಿ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಲಭ್ಯವಿರುತ್ತದೆ. ಆದರೆ ಅವರು ಪರ್ಯಾಯ ದಿನಗಳಲ್ಲಿ ಮಾತ್ರ ಕೆಲಸ ಮಾಡುತ್ತಿದ್ದರು, ಇಲ್ಲಿ ಅನೇಕ ಜನರು ಅದೇ ಕೆಲಸವನ್ನು ಹುಡುಕುತ್ತಿದ್ದರು ಮತ್ತು ಇದರಿಂದ ದಿನಕ್ಕೆ 500 ರೂ.ಸಂಪಾದಿಸುತ್ತಾರೆ. ಈ ಮಧ್ಯಂತರ ಕೆಲಸವು ಮೇ ತಿಂಗಳದ ಮೂರನೆಯ ವಾರದವರೆಗೆ ಇರುತ್ತದೆ, ಆ ವೇಳೆಗೆ ಭತ್ತದ ಖರೀದಿ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ.
ರಾಮುಲಮ್ಮ, ಯಾಡಮ್ಮ ಮತ್ತು ಗುಂಪಿನ ಇತರ ಮಹಿಳೆಯರು ಕೂಡ ಒಮ್ಮೊಮ್ಮೆ ದಿನಕ್ಕೆ 200-300 ರೂ.ಗಾಗಿ ದುಡಿಯುತ್ತಾರೆ."ನಾವು ಹತ್ತಿ ಬೆಳೆ ಉಳಿಕೆಗಳನ್ನು ಸಂಗ್ರಹಿಸಲು ಹೊರಟಿದ್ದೇವೆ (ಕಾಂಡಗಳು, ಸಣ್ಣ ತೆಳು ರೆಂಬೆಗಳು ಮತ್ತು ಕಟಾವಿನ ಇತರ ತ್ಯಾಜ್ಯ ಉತ್ಪನ್ನಗಳು)" ಎಂದು ಮೇ 12 ರ ಬೆಳಿಗ್ಗೆ ಯಾಡಮ್ಮ ನನಗೆ ಫೋನಿನಲ್ಲಿ ಹೇಳಿದರು.
ಮುಂಬರುವ ತಿಂಗಳುಗಳಲ್ಲಿ ಅವರು ಮತ್ತು ಕಂಗಲ್‌ನ ಇತರ ಕುಟುಂಬಗಳು ಏನು ತಿನ್ನುತ್ತವೆ ಎಂಬುದು ಅವರು ಪಿಡಿಎಸ್ ಅಥವಾ ಪರಿಹಾರ ಪ್ಯಾಕೇಜ್‌ನಲ್ಲಿ ಪಡೆಯುವ ಅಕ್ಕಿಯ ಗುಣಮಟ್ಟವನ್ನು ಅವಲಂಬಿಸಿರುತ್ತದೆ ಮತ್ತು ಅವರು ಬುಟ್ಟಿಗಳನ್ನು ಮಾರಿ ಮತ್ತು ಸ್ಥಿರ ಕೃಷಿ ಕೆಲಸವನ್ನು ಕಂಡುಕೊಳ್ಳಬಹುದೇ ಎನ್ನುವುದು ಇನ್ನೂ ಯೋಚಿಸಬೇಕಾಗಿದೆ.
ಏತನ್ಮಧ್ಯೆ, ಮೇ 1ರಂದು ಹೊರಡಿಸಲಾದ ಗೃಹ ಸಚಿವಾಲಯದ ಹೊಸ ಲಾಕ್‌ಡೌನ್ ಮಾರ್ಗಸೂಚಿಗಳು ಹೇಳುವಂತೆ, ಗರಿಷ್ಠ 50 ಜನರು ಮದುವೆಗೆ ಸಂಬಂಧಿಸಿದ ಕಾರ್ಯಕ್ರಮಗಳಿಗೆ ಹಾಜರಾಗಬಹುದು ಎನ್ನಲಾಗಿದೆ. ಒಂದು ವೇಳೆ ಅದು ತೆಲಂಗಾಣದಲ್ಲಿ ಜಾರಿಗೆ ಬಂದಲ್ಲಿ, ಬುಟ್ಟಿ ಪೂರೈಕೆ ಸರಪಳಿ ಪುನರಾರಂಭವಾಗುತ್ತದೆ. ಆದರೆ ಇದುವರೆಗೂ ಬುಟ್ಟಿ ವ್ಯಾಪಾರಿಯಿಂದ ಯಾವುದೇ ಕರೆ ಬಂದಿಲ್ಲ, ಅದಕ್ಕಾಗಿ ನಾವು ಕಾಯುತ್ತಿದ್ದೇವೆ" ಎಂದು ರಾಮುಲು ಹೇಳುತ್ತಾರೆ.
“ಕನಿಷ್ಠ 5-6 ತಿಂಗಳಾದರೂ ಬುಟ್ಟಿಗಳು ಹಾಳಾಗುವುದಿಲ್ಲ,” ಎಂದು ರಾಮುಲಮ್ಮ ಹೇಳುತ್ತಾರೆ. “ಆದರೆ ಖರೀದಿದಾರರು ನಮಗೆ ಇನ್ನೂ ಕರೆ ಮಾಡಿಲ್ಲ. ಕರೋನಾ ಕೂಡ ಇನ್ನೂ ಮುಗಿದಿಲ್ಲ.” ಎಂದು ಹೇಳಿದರು.
ಅನುವಾದ - ಎನ್ . ಮಂಜುನಾಥ್