ದಸರಾ ಹಬ್ಬದ ದಿನಗಳೆಂದರೆ ಮುಂಜಾನೆಯ ಪ್ರಾರ್ಥನೆ ಮತ್ತು ಪೂಜಾ ಕಾರ್ಯಗಳಲ್ಲಿ ಪಾಲ್ಗೊಳ್ಳಲು ವಿದ್ಯಾರ್ಥಿಗಳೆಲ್ಲರೂ ಶಾಲಾ ಮುಖ್ಯ ಆವರಣದಲ್ಲಿ ಸೇರುವುದು ಇಲ್ಲಿಯ ವಾಡಿಕೆ.
`ಕಟ್ಟೈಕುಟ್ಟು ಗುರುಕುಲಂ' ಎಂಬುದು ತಮಿಳುನಾಡಿನ ಕಂಚೀಪುರಂ ಜಿಲ್ಲೆಯಲ್ಲಿರುವ ಒಂದು ವಸತಿ ನಾಟಕ ಶಾಲೆ. ಸುತ್ತಲೂ ಹಚ್ಚಹಸಿರಿನಿಂದ ಕಂಗೊಳಿಸುತ್ತಿದ್ದು ಪುಂಜಾರ ಸಂತಕಲ್ ಎಂಬ ಹಳ್ಳಿಯಲ್ಲಿರುವ ಈ ಶಾಲೆಯು ಚೆನ್ನೈಯಿಂದ ಸುಮಾರು ಎಂಭತ್ತೈದು ಕಿಲೋಮೀಟರುಗಳ ದೂರದಲ್ಲಿದ್ದು, ಆಟೋ ಹಿಡಿದು ಬರುವುದಾದರೆ ಕಂಚೀಪುರಂನಿಂದ ಮೂವತ್ತೈದು ಕಿಲೋಮಿಟರುಗಳ ದೂರದಲ್ಲಿದೆ. ಸಾಮಾನ್ಯ ಶಾಲೆಗಳಲ್ಲಿರುವಂತೆ ಹನ್ನೆರಡನೆಯ ತರಗತಿಯವರೆಗಿನ ಶಿಕ್ಷಣವನ್ನು ನೀಡುವುದಲ್ಲದೆ ತಮಿಳುನಾಡಿನ ರಂಗಭೂಮಿಯ ಪ್ರಕಾರಗಳಲ್ಲೊಂದಾದ `ಕಟ್ಟೈಕುಟ್ಟು'ನ್ನೂ ಇಲ್ಲಿ ವಿದ್ಯಾರ್ಥಿಗಳಿಗೆ ಕಲಿಸಿಕೊಡಲಾಗುತ್ತದೆ. ಈ ಸ್ಥಳದ ವಿಶೇಷತೆಯೆಂದರೆ ಕಟ್ಟೈಕುಟ್ಟು ಗುರುಕುಲಂನ ವಿದ್ಯಾರ್ಥಿ ಸಮೂಹದಲ್ಲಿ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಹಿನ್ನೆಲೆಯಿಂದ ಬಂದ ವಿದ್ಯಾರ್ಥಿಗಳದ್ದೇ ಸಿಂಹಪಾಲು.
ಮುಂಜಾನೆಯ ಏಳೂ ಮೂವತ್ತರಿಂದ ಸಂಜೆಯ ಐದರವರೆಗಿನ ಸಮಯವು ಗುರುಕುಲಂನ ಚಟುವಟಿಕೆಗಳ ಸಮಯ. ಈ ಸಮಯವನ್ನು ಸಾಮಾನ್ಯವಾದ ಪಠ್ಯ ವಿಷಯ, ಕಟ್ಟೈಕುಟ್ಟು ಮತ್ತು ಸಂಗೀತದ ತರಬೇತಿಗಳಿಗಾಗಿ ಸಮರ್ಪಕವಾಗಿ ವಿಂಗಡಿಸಲಾಗಿದೆ. ಇತರ ಶಾಲೆಗಳಂತೆ ಗುರುಕುಲಂನಲ್ಲೂ ಪೂರ್ವಾಹ್ನದ ಸಮಯವನ್ನುಅಧ್ಯಯನ ಸಂಬಂಧಿ ಚಟುವಟಿಕೆಗಳಿಗಾಗಿ ಮೀಸಲಿಟ್ಟಿದ್ದರೆ ಅಪರಾಹ್ನದ ನಂತರದ ಸಮಯವನ್ನು ಪಠ್ಯೇತರ ಚಟುವಟಿಕೆಗಳಿಗಾಗಿ ಮೀಸಲಿಡಲಾಗಿದೆ.
ಕಟ್ಟೈಕುಟ್ಟು ಗುರುಕುಲಂನ್ನು ಇತರ ಶಾಲೆಗಳಿಗಿಂತ ವಿಭಿನ್ನವಾದ ಸ್ಥಾನದಲ್ಲಿ ನಿಲ್ಲಿಸುವ ಏಕೈಕ ವೈಶಿಷ್ಟ್ಯವೆಂದರೆ ಇಲ್ಲಿಯ ವಿದ್ಯಾರ್ಥಿಗಳಿಗೆ ಕಟ್ಟೈಕುಟ್ಟು ಬಗ್ಗೆ ನೀಡಲಾಗುವ ಉತ್ಕೃಷ್ಟ ತರಬೇತಿ. ಹಾಡುಗಾರಿಕೆ, ನೃತ್ಯ, ನಟನೆಯಷ್ಟೇ ಅಲ್ಲದೆ ವಿದ್ಯಾರ್ಥಿಗಳಿಗೆ ಇಲ್ಲಿ ವಾದ್ಯಗಳನ್ನು ನುಡಿಸುವ ಕಲೆಯಲ್ಲೂ ಪರಿಣತಿಯನ್ನು ನೀಡಲಾಗುತ್ತದೆ. ಪ್ರಸಾಧನ ಕಲೆಯನ್ನು ಕಲಿತ ವಿದ್ಯಾರ್ಥಿಗಳು ರಾಮಾಯಣ ಮತ್ತು ಮಹಾಭಾರತದ ಕಥೆಗಳನ್ನಾಧರಿಸಿದ ನಾಟಕ ಪ್ರದರ್ಶನದ ಸಂದರ್ಭಗಳಲ್ಲಿ ಕಲಾವಿದರಿಗೆ ಅಲಂಕಾರ, ವೇಷಭೂಷಣಾದಿಗಳಲ್ಲಿ ಸಹಕರಿಸುವುದನ್ನೂಇಲ್ಲಿ ಕಾಣಬಹುದು.
ಸಾಂಪ್ರದಾಯಿಕ ನೆಲೆಯಲ್ಲಿ ನೋಡುವುದಾದರೆ ಕಟ್ಟೈಕುಟ್ಟು ಕೇವಲ ಗಂಡುಮಕ್ಕಳಷ್ಟೇ ಆಡುವ ಕಲೆ. ಆದರೆ ಗುರುಕುಲಂನಲ್ಲಿ ಗಂಡು ಹೆಣ್ಣೆಂಬ ಭೇದವಿಲ್ಲದೆ ಎಲ್ಲಾ ವಿದ್ಯಾರ್ಥಿಗಳಿಗೂ ಈ ಕಲಾಪ್ರಕಾರದ ತರಬೇತಿಯನ್ನು ಶ್ರದ್ಧೆಯಿಂದ ನೀಡಲಾಗುತ್ತಿದೆ. ಯಾವುದೇ ಪ್ರಕಾರದ, ಯಾವುದೇ ಶೈಲಿಯ ಪಾತ್ರಗಳೇ ಆದರೂ ಲಿಂಗಭೇದವಿಲ್ಲದೆ ಪಾಲ್ಗೊಂಡು ಪಾತ್ರಗಳಿಗೆ ಜೀವವಾಗುವ ವಿದ್ಯಾರ್ಥಿಗಳನ್ನು ಇಲ್ಲಿ ಕಾಣಬಹುದು. ಮಹಾಭಾರತದ ಕಥಾ ಭಾಗವೊಂದನ್ನಾಧರಿಸಿ ವಿದ್ಯಾರ್ಥಿಗಳು ಮತ್ತು ಶಿಕ್ಷಕ ವೃಂದವು ಜೊತೆಯಾಗಿ ನಡೆಸುತ್ತಿರುವ ನಾಟಕವನ್ನುಗುರುಕುಲಂನ ತರಬೇತಿ ಶಿಬಿರವೊಂದರಲ್ಲಿ ಅಭಿವ್ಯಕ್ತಿ ಕಲೆಯ ಬಗ್ಗೆ ತರಬೇತಿಯನ್ನು ಪಡೆಯುತ್ತಿರುವ ಮಹಿಳೆಯರ ತಂಡವೊಂದು ಈ ಬಾರಿ ನೋಡುತ್ತಿದೆ.
ಒಂಭತ್ತನೇ ತರಗತಿಯಲ್ಲಿ ಓದುತ್ತಿರುವ ಕೆ. ಶಿವರಂಜನಿ ಎಂಬ ವಿದ್ಯಾರ್ಥಿನಿಯೋರ್ವಳು ನಾಟಕದಲ್ಲಿ ವಿಕರ್ಣನ ಪಾತ್ರವನ್ನು ನಿರ್ವಹಿಸುತ್ತಿದ್ದಾಳೆ. ವಿಕರ್ಣನು ಕೌರವ ಸಹೋದರರಲ್ಲಿ ಕಿರಿಯನಾದವನೂ, ದ್ರೌಪದಿಯ ವಸ್ತ್ರಾಪಹರಣದ ಸಮಯದಲ್ಲಿ ಕೌರವರ ಪಾಳಯದಿಂದ ದ್ರೌಪದಿಯ ಪರವಾಗಿ ಮಾತನಾಡಿದ ಏಕಮಾತ್ರ ವ್ಯಕ್ತಿಯೂ ಹೌದು. ಇಂಥಾ ಸವಾಲಿನ ಪಾತ್ರವನ್ನು, ಅದರಲ್ಲೂ ಪುರುಷನೊಬ್ಬನ ಪೌರಾಣಿಕ ಪಾತ್ರವನ್ನು ನಟಿಸಿದ ಅನುಭವದ ಬಗ್ಗೆ ಶಿವರಂಜನಿಯ ಬಳಿ ಕೇಳಿದರೆ ``ಪ್ರೇಕ್ಷಕರೆದುರು ಮೊದಲಬಾರಿಗೆ ವೇದಿಕೆಯಲ್ಲಿ ನಟಿಸಿದ್ದರಿಂದ ಸ್ವಲ್ಪ ಭಯವಾಗಿದ್ದಂತೂ ನಿಜ'' ಎಂದು ಖುಷಿಯಿಂದ ಕಣ್ಣರಳಿಸುತ್ತಾ ಹೇಳುತ್ತಾಳೆ.
ಗುರುಕುಲಂನ ಮುಖ್ಯೋಪಾಧ್ಯಾಯರೂ, ಸ್ಥಾಪಕರೂ ಆದ ಪಿ. ರಾಜಗೋಪಾಲ್ ಅವರು ದಸರಾ ಹಬ್ಬದ ಪ್ರಯುಕ್ತ ಪ್ರಾರ್ಥನೆ ಮತ್ತು ಪ್ರವಚನಗಳನ್ನು ನೀಡುತ್ತಿದ್ದರೆ, ವಿದ್ಯಾರ್ಥಿಗಳು ತದೇಕ ಚಿತ್ತದಿಂದ ಅವರ ನುಡಿಮುತ್ತುಗಳನ್ನು ಕೇಳುವ ದೃಶ್ಯವು ಮನಸೂರೆಗೊಳ್ಳುವಂಥದ್ದು.
ಹಬ್ಬದ ಪ್ರಯುಕ್ತದ ಮದ್ಯಾಹ್ನದ ವಿಶೇಷ ಭೋಜನದ ನಂತರದ ಸಮಯವು ನಾಟಕ ಪ್ರದರ್ಶನಕ್ಕೆ ಮೀಸಲು. ಗುರುಕುಲಂನ ವಿದ್ಯಾರ್ಥಿಗಳಿಂದಲೇ ಪ್ರಸ್ತುತಪಡಿಸಲಾಗುತ್ತಿರುವ `ದ್ರೌಪದಿ ಕುರವಂಚಿ' ಎಂಬ ಈ ನಾಟಕವು ಮಹಾಭಾರತದ ಕಥೆಯನ್ನಾಧರಿಸಿದ್ದು. ಈ ನಿಟ್ಟಿನಲ್ಲಿ ಮೊದಲ ಹೆಜ್ಜೆಯನ್ನಿಡುವ ಪ್ರಸಾಧನ ಕಲೆಯನ್ನು ಕಲಿತ ವಿದ್ಯಾರ್ಥಿಗಳು ನಾಟಕದಲ್ಲಿ ಅಭಿನಯಿಸಲಿರುವ ವಿದ್ಯಾರ್ಥಿಗಳ ಮುಖದ ಮೇಲೆ ಬಣ್ಣಗಳನ್ನದ್ದಿದ ತಮ್ಮ ಕುಂಚಗಳನ್ನಾಡಿಸುತ್ತಾ ಮೇಕಪ್ ಮಾಡಿ ಕಲಾವಿದರನ್ನು ಪ್ರದರ್ಶನಕ್ಕಾಗಿ ಅಣಿಗೊಳಿಸುತ್ತಾರೆ. ಮೇಕಪ್ ಗೆಂದೇ ಬರೋಬ್ಬರಿ ಒಂದು ತಾಸಿನ ಅಥವಾ ಅದಕ್ಕಿಂತ ಹೆಚ್ಚಿನ ಸಮಯವನ್ನು ತೆಗೆದುಕೊಳ್ಳುವ ಹನ್ನೆರಡರಿಂದ ಹದಿನೈದರ ಪ್ರಾಯದ ಈ ಪ್ರತಿಭಾವಂತ ಮಕ್ಕಳ ತಾಳ್ಮೆ ಮತ್ತು ತಮ್ಮ ಕೆಲಸದ ಬಗೆಗಿರುವ ಸಂಪೂರ್ಣ ಸಮರ್ಪಣಾ ಭಾವವು ಮೆಚ್ಚುವಂಥದ್ದು. ಮೊಟ್ಟಮೊದಲಿಗೆ ಫೌಂಡೇಶನ್ ಲೇಯರಿನಂತೆ ಬಳಸಲಾಗುವ ಲೇಪವನ್ನು ಹಚ್ಚಿದ ಬಳಿಕ ಬಾಲಕಿಯರ ಮುಖವನ್ನು ಹಸಿರು ಬಣ್ಣದಿಂದಲೂ ಮತ್ತು ಬಾಲಕರ ಮುಖವನ್ನು ಗುಲಾಬಿ ಬಣ್ಣದಿಂದಲೂ ನಾಟಕ್ಕಕಾಗಿ ಸಜ್ಜುಗೊಳಿಸಲಾಗುತ್ತದೆ. ನಂತರ ಕಲಾವಿದನ ಸೂಕ್ಷ್ಮ ಕೈಚಳಕದಿಂದ ಮಾಡಲಾಗುವ ಕಣ್ಣು, ಹುಬ್ಬು, ರೆಪ್ಪೆಗಳು, ತುಟಿ, ಮೀಸೆ, ಕೆನ್ನೆ ಮತ್ತುಗಲ್ಲದ ರೇಖೆಗಳನ್ನು ನಾಜೂಕಾಗಿ ಮೂಡಿಸಲಾಗುತ್ತದೆ.
ಹೀಗೆ ಮೇಕಪ್ ಕಲಾವಿದರಚಿಣ್ಣರ ಬಳಗವು ಕಲಾವಿದರನ್ನು ಅಣಿಗೊಳಿಸುವುದರಲ್ಲಿ ಮಗ್ನರಾಗಿರುವಂತೆಯೇ ಸುತ್ತ ನೆರೆದ ಆಸಕ್ತ ವಿದ್ಯಾರ್ಥಿಗಳು ಕಲಾವಿದನ ನುರಿತ ಕೈಗಳಿಂದ ಅದ್ಭುತಗಳನ್ನು ಮೂಡಿಸುತ್ತಿರುವ ಕುಂಚಗಳನ್ನು ನೋಡುತ್ತಾ, ಅಚ್ಚರಿಗೊಳ್ಳುತ್ತಾ ತಾವೂ ಕಲಿಯಲು ಪ್ರಯತ್ನಿಸುತ್ತಾರೆ.
ಹೀಗೆ ಮುಖ ಮತ್ತು ತಲೆಯ ಭಾಗದ ಅಲಂಕಾರಗಳ ತರುವಾಯ ಕಲಾವಿದ ವಿದ್ಯಾರ್ಥಿಗಳಲ್ಲೊಬ್ಬನಾದ ಎನ್. ಕಾರ್ತಿ ಆವರಣವನ್ನು ಬಿಟ್ಟು ವೇಷಭೂಷಣಗಳನ್ನು ಧರಿಸಲು ಕಾಸ್ಟ್ಯೂಮ್ ಕೋಣೆಯಲ್ಲಿ ಮರೆಯಾಗುತ್ತಾನೆ.
ಕೌರವ ಸಹೋದರರಲ್ಲಿ ಎರಡನೆಯವನಾದ ದುಶ್ಶಾಸನನ ಪಾತ್ರಧಾರಿಯ ರಂಗುರಂಗಿನ ವೇಷಭೂಷಣವು ಪಾತ್ರದಂತೆಯೇ ರೋಚಕವಾಗಿಯೂ, ರೌದ್ರವಾಗಿಯೂ ಇದ್ದು ಪ್ರೇಕ್ಷಕರನ್ನು ರಂಜಿಸುವುದರಲ್ಲಿ ಎರಡು ಮಾತಿಲ್ಲ.
ತಮಿಳುನಾಡಿನ ಹಳ್ಳಿಗಳಲ್ಲಿ ಕಟ್ಟೈಕುಟ್ಟು ಕಲೆಯ ಪ್ರದರ್ಶನವನ್ನು ರಾತ್ರಿಯಿಡೀ ನಡೆಸಲಾಗುತ್ತದೆ. ನಡೆಸಲಾಗುವ ಪ್ರದರ್ಶನಗಳಲ್ಲಿ ಬರುವ ಪ್ರಮುಖ ಕಥಾಪಾತ್ರಗಳಷ್ಟೇ ಮುಖ್ಯವಾದ ಇನ್ನೊಂದು ಪಾತ್ರವೆಂದರೆ ಹಾಸ್ಯಗಾರನದ್ದು. ಗಂಭೀರವಾದ ಕಥೆಯ ಮುಖ್ಯಭಾಗವು ವೇದಿಕೆಯಲ್ಲಿ ನಿರೂಪಣೆಗೊಳ್ಳುತ್ತಿರುವ ಜೊತೆಯಲ್ಲೇ ವಿದೂಷಕನಿಂದ ಬರುವ ಹಾಸ್ಯದ ಸೆಲೆಯು ಪ್ರೇಕ್ಷಕರನ್ನು ಯಶಸ್ವಿಯಾಗಿ ರಂಜಿಸುತ್ತದೆ. ಈ ಹಾಸ್ಯಗಾರನು ಕೆಲವೊಮ್ಮೆ ವ್ಯಕ್ತಿಯ, ಪಾತ್ರದ ಅಥವಾ ವ್ಯವಸ್ಥೆಯ ಬಗ್ಗೆ ತನ್ನ ಕಥಾ ಪರಿಧಿಯಲ್ಲೇ ವ್ಯಂಗ್ಯವಾಡುವುದೂ ಉಂಟು. ಕಥೆಗೆ ಸಂಬಂಧಿಸಿದ ಸಂಭಾಷಣೆಯ ಲಹರಿಯ ಜೊತೆಗೇ ಸಮಾಜದ ಕೆಳವರ್ಗದ ಸ್ಥಾನದಲ್ಲಿದ್ದುಕೊಂಡು ಮೇಲ್ವರ್ಗದ ಕಾಲೆಳೆಯುತ್ತಾ ಈತ ನಗೆಯುಕ್ಕಿಸುತ್ತಾನೆ. ತಮ್ಮದೇ ಜನರ, ಸಮಾಜದ ಕಥೆಯನ್ನು ತನ್ನ ಮಾತಿನ ಲಹರಿಯಲ್ಲಿ ಕಥಾ ನಿರೂಪಣೆಯೊಂದಿಗೆ ಹದವಾಗಿ ಸೇರಿಸುತ್ತಾ ಕಥೆಯ ಒಂದು ಭಾಗವೇ ಎಂದೆನಿಸುವಷ್ಟರ ಮಟ್ಟಿಗೆ ಪ್ರಸ್ತುತಪಡಿಸುವುದರಲ್ಲಿ ವಿದೂಷಕನದ್ದು ಎತ್ತಿದ ಕೈ. ಹೀಗೆ ಬಹಳಷ್ಟು ಗಂಭೀರ ಅಥವಾ ನೆಗೆಟಿವ್ ಶೇಡ್ ಇರುವಂಥಾ ಸನ್ನಿವೇಶಗಳಲ್ಲಿಯೂ ತನ್ನ ಮಾತಿನ ಚತುರತೆಯಿಂದ ನಗೆ ಬುಗ್ಗೆಯನ್ನು ತರುವ ಹಾಸ್ಯಗಾರನೆಂದರೆ ಎಲ್ಲರಿಗೂ ಪ್ರಿಯ.
ಹಲವು ಬಾರಿ ಹಿನ್ನೆಲೆಯಲ್ಲಿ ವಾದ್ಯ ಮೇಳದಲ್ಲಿರುವ ವಿದ್ಯಾರ್ಥಿಗಳೂ ವಿದೂಷಕನ ಹಾಸ್ಯವನ್ನು ಸವಿಯುತ್ತಾ ನಕ್ಕು ಹಗುರಾಗುತ್ತಾರೆ.
ಎಲ್ಲರೂ ಜೊತೆಯಾಗಿ ಹಾಡುವುದೂ ಕೂಡಕಟ್ಟುಕಟ್ಟೈನ ಸಂಪ್ರದಾಯಗಳಲ್ಲೊಂದು. ಒಂದೆಡೆ ವಿದ್ಯಾರ್ಥಿಗಳು ಹಾಡುತ್ತಾ ದನಿಗೂಡಿಸುತ್ತಿದ್ದರೆ, ಜೊತೆಯಲ್ಲೇ ಹಾರ್ಮೋನಿಯಂ, ಮುಖವೀಣೆ ಮತ್ತು ಮೃದಂಗಗಳನ್ನು ನುಡಿಸುತ್ತಾ ರಂಜಿಸುತ್ತಿರುವ ಚಿಣ್ಣರ ಬಳಗವು ಕಣ್ಮನಗಳನ್ನು ಸೆಳೆಯುತ್ತದೆ.
ಅನುವಾದ: ಪ್ರಸಾದ್ ನಾಯ್ಕ