ಫುಲಾಬಾಯಿ ಭೋಂಗ್ ಆಷಾಢ ಏಕಾದಶಿಯ ಪವಿತ್ರ ದಿನದಂದು ಭಗವಂತ ವಿಠ್ಠಲನ ಭಕ್ತರು ಆಚರಿಸುವ ಉಪವಾಸದ ಕುರಿತು ಈ ಸಂಚಿಕೆಯಲ್ಲಿ ಹಾಡಿದ್ದಾರೆ. ಈ ಉಪವಾಸವು ಆತ್ಮವನ್ನು ಜೀವನ ಮತ್ತು ಸಾವಿನ ಚಕ್ರದಿಂದ ಬಿಡುಗಡೆ ಮಾಡುತ್ತದೆನ್ನುವುದು ಭಕ್ತರ ನಂಬಿಕೆ
ಈ ವರ್ಷದ ಜುಲೈ 20ರಂದು ಬರುವ ಆಷಾಢ ಏಕಾದಶಿಯಂದು - ಧಾರ್ಮಿಕ ನಿಷ್ಠಾವಂತ ಹಿಂದೂಗಳು ಇಡೀ ದಿನ ಗುಟುಕು ನೀರನ್ನು ಮಾತ್ರ ಕುಡಿಯುವು ಮೂಲಕ ಉಪವಾಸ ಮಾಡುತ್ತಾರೆ. ಆದರೆ ಮಹಾರಾಷ್ಟ್ರದಲ್ಲಿ, ದೀರ್ಘಕಾಲ ಹಸಿದಿರಲು ಸಾಧ್ಯವಾಗದವರು ಈಗ ತಮಾಷೆಯಾಗಿ "ಮರಾಠಿ ಫಾಸ್ಟ್ ಫುಡ್" ಎಂದು ಕರೆಯಲ್ಪಡುವ ಆಹಾರವನ್ನು ತಿನ್ನುತ್ತಾರೆ. ಅಂದು ಸಾಬುದಾನ ಖಿಚಡಿಯಂತಹಹ ಸರಳ ಆದರೆ ರುಚಿಕರವಾದ ಭಕ್ಷ್ಯಗಳು, ಮರಗೆಣಸು, ಆಲೂಗಡ್ಡೆ ಮತ್ತು ಕಡಲೆಕಾಯಿಗಳಂತಹ ಆಹಾರವನ್ನು ಉಪವಾಸಮಾಡುವಾಗ ಸೇವಿಸಲು "ಅನುಮತಿಸಲಾಗಿರುವ" ಪದಾರ್ಥಗಳೊಂದಿಗೆ ಬೇಯಿಸಿ ತಿನ್ನಲಾಗುತ್ತದೆ.
ಪುಣೆಯ ಇಂದಾಪುರ ತಾಲ್ಲೂಕಿನ ನಿಂಗಾಂವ್ ಕೆಟ್ಕಿ ಗ್ರಾಮದ ಫುಲಬಾಯಿ ಭೋಂಗ್ ಅವರು ಗ್ರೈಂಡ್ ಮಿಲ್ ಸಾಂಗ್ಸ್ ಪ್ರಾಜೆಕ್ಟ್ (ಜಿಎಸ್ ಪಿ)ನ ಈ ಕಂತಿನಲ್ಲಿ ಆಷಾಢ ಏಕಾದಶಿ ಉಪವಾಸದ ಕುರಿತು ಐದು ಓವಿಗಳನ್ನು ಹಾಡಿದ್ದಾರೆ. ಹಿಂದೂ ಪಂಚಾಂಗದ ಚಾಂದ್ರಮಾನ ಮಾಸದ ಹನ್ನೊಂದನೇ ದಿನದಂದು ದಿನವಿಡೀ ಉಪವಾಸವನ್ನು ಆಚರಿಸಲಾಗುತ್ತದೆ. ಈ ದಿನ ಉಪವಾಸ ಮಾಡುವುದರಿಂದ ಮುಕ್ತಿ ದೊರೆಯುತ್ತದೆ ಮತ್ತು ಜನನ, ಜೀವನ ಮತ್ತು ಮರಣದ ಚಕ್ರದಿಂದ ತಮ್ಮ ಆತ್ಮವನ್ನು ಈ ಉಪವಾಸ ಬಿಡುಗಡೆ ಮಾಡುತ್ತದೆ ಎಂದು ಭಕ್ತರು ನಂಬುತ್ತಾರೆ.
ದೇವರಾದ ವಿಠ್ಠಲನೂ ಈ ದಿನದಂದು ಉಪವಾಸವನ್ನು ಮಾಡುತ್ತಾನೆಂದು ಗಾಯಕಿ ತನ್ನ ಹಾಡಿನಲ್ಲಿ ಹೇಳುತ್ತಾರೆ. ರುಕ್ಮಿಣಿ ದೇವಿಯು ತನ್ನ ಔಷಧೀಯ ಬಳಕೆಗೆ ಹೆಸರುವಾಸಿಯಾದ ಸಣ್ಣ ಹಸಿರು ಹಣ್ಣು ಗೋವಿಂದ ಫಲವನ್ನು ಹೊಂದಿರುವ ಎತ್ತರದ ವಾಘತಿ ಬಳ್ಳಿ (ಗಜ್ಜುಗದ ಬಳ್ಳಿ) ಹಬ್ಬಿರುವ ಮರಕ್ಕೆ ಏಣಿಗಳನ್ನು ಕಟ್ಟುತ್ತಾಳೆ ಎಂದು ಅವರು ನಮಗೆ ಹೇಳುತ್ತಾರೆ. ಉಪವಾಸವನ್ನು ಮುರಿಯಲು ಏಕಾದಶಿಯ ಮರುದಿನ ಈ ಹಣ್ಣನ್ನು ಬೇಯಿಸಿ ತಿನ್ನಲಾಗುತ್ತದೆ.
ಇದು ವಾರ್ಕರಿಗಳೆಂದು ಕರೆಯಲ್ಪಡುವ ವಿಠ್ಠಲನ ಭಕ್ತರು ಅನುಸರಿಸುವ ಸಂಪ್ರದಾಯವಾಗಿದೆ, ಅವರಲ್ಲಿ ಅನೇಕರು ರೈತರು ಮತ್ತು ಗ್ರಾಮೀಣ ಪ್ರದೇಶಗಳ ಕಾರ್ಮಿಕರು. ಅವರ ತೀರ್ಥಯಾತ್ರೆ ಅಥವಾ ವಾರಿ, ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯ ಪಂಢರಪುರ ಪಟ್ಟಣದ ವಿಠೋಬಾ ದೇವಾಲಯಕ್ಕೆ ಕಾಲ್ನಡಿಗೆಯಲ್ಲಿ ಪ್ರಯಾಣಿಸುತ್ತದೆ. ಈ ಪ್ರಯಾಣವು ಆಷಾಢ ಏಕಾದಶಿಯಂದು ಪಂಢರಪುರ ತಲುಪಿ ಕೊನೆಗೊಳ್ಳುತ್ತದೆ.
ಸುಮಾರು 800 ವರ್ಷಗಳ ಸುದೀರ್ಘ ಇತಿಹಾಸದಲ್ಲಿ ಮೊದಲ ಬಾರಿಗೆ, ಕೋವಿಡ್-19ನಿಂದಾಗಿ 2020ರ ವಾರಿ ಸಂಪ್ರದಾಯವನ್ನು ಮುರಿಯಲಾಯಿತು. ಈ ವರ್ಷವೂ ಪ್ರಯಾಣದ ಮೇಲಿನ ನಿರ್ಬಂಧಗಳಿಂದಾಗಿ ಜುಲೈನಲ್ಲಿ ಅದನ್ನು ನಡೆಸಲು ಸಾಧ್ಯವಾಗಲಿಲ್ಲ.
ʼಪರಿʼ ಜಿಎಸ್‌ಪಿ ಸರಣಿಯಲ್ಲಿ ನಾವು ಈಗಾಗಲೇ ಈ ಯಾತ್ರೆಯ ಬೆಳವಣಿಗೆಯ ಕುರಿತು ಹಾಡುಗಳನ್ನು ಪ್ರಕಟಿಸಿದ್ದೆವು. ಭಕ್ತಿ ಮತ್ತು ಅಪಶ್ರುತಿಯ ನಡುವೆ ವಿಠಲನ ಮೇಲೆ ವಾರ್ಕರಿಗಳ ಭಕ್ ತಿ: ಜಾನಪದ ಕವಿಗಳ ನಿರಂತರ ಹಾಡುವಿಕೆ ಯಲ್ಲಿ ಕವಿ-ಸಂತರಾದ ಜ್ಞಾನೇಶ್ವರ ಮತ್ತು ತುಕಾರಂ ಅವರ ಭಕ್ತಿಯ ಕುರಿತು ಮತ್ತು ಪಂಢರಪುರಕ್ಕೆ ಪ್ರೀತಿಯನ್ನು ಹೊತ್ ತು ಭಕ್ತಿಯಿಂದ ಕುಟುಂಬವನ್ನು ಕರೆದುಕೊಂಡು ಹೋಗುವ ಬಗ್ಗೆಯೂ ಹಾಡುಗಳನ್ನು ಈ ಹಿಂದೆ ಪ್ರಕಟಿಸಲಾಗಿತ್ತು.
ಈ ಸಂಚಿಕೆಯಲ್ಲಿ ಫುಲಾಬಾಯಿ ಹಾಡಿದ ಓವಿಯು ಆಷಾಢಿ ಏಕಾದಶಿ ಉಪವಾಸವನ್ನು ಕುರಿತು ಹೇಳುತ್ತದೆ . ಒಂದು ಪದ್ಯವು ಚಾಂದ್ರಮಾನ ಮಾಸದ ಹತ್ತನೇ ದಿನವಾದ ದಶಮಿಯನ್ನು ಕಾವ್ಯಾತ್ಮಕವಾಗಿ ಕಲ್ಪಿಸಿಕೊಳ್ಳುತ್ತದೆ, ಹನ್ನೊಂದನೇ ದಿನ ಏಕಾದಶಿಯನ್ನು ಕುರಿತು "ನೀನು ತುಂಬಾ ಒಳ್ಳೆಯವಳು" ಎಂದು ಹೇಳುತ್ತದೆ - ಏಕೆಂದರೆ ಈ ದಿನದಂದು ಪ್ರತಿಯೊಬ್ಬರೂ ವಿಠ್ಠಲನ ಬಗ್ಗೆ ತಮ್ಮ ಭಕ್ತಿಯನ್ನು ವ್ಯಕ್ತಪಡಿಸುತ್ತಾರೆ. ತನ್ನ ಮಗನಿಗೆ ಆಷಾಢಿ ಏಕಾದಶಿಯ ಮಹತ್ವವನ್ನು ವಿವರಿಸುತ್ತಾ, "ಮುಕ್ತಿಗೆ ಅರ್ಹತೆಯನ್ನು ಪಡೆಯಲು ನೀನು ಎಷ್ಟು ಏಕಾದಶಿಯನ್ನು (ಉಪವಾಸಗಳು) ಆಚರಿಸಿರುವೆ?" ಎಂದು ದೇವರು ತನ್ನನ್ನು ಸ್ವರ್ಗದ ಬಾಗಿಲಲ್ಲಿ ಕೇಳುತ್ತಾನೆ ಎಂದು ಗಾಯಕಿ ಹೇಳುತ್ತಾರೆ.“
ನನ್ನ ಮುದ್ದು ವಿಠಲನಿಗೆ ಆಷಾಢ ಏಕಾದಶಿ ಉಪವಾಸ
ವಾಘಟೆ ಬಳ್ಳಿಗೆ ಏಣಿ ಚಾಚುತಿದ್ದಾಳೆ ರುಕ್ಮಿಣಿ
ದಶಮಿ ಹೇಳಿತು ಏಕಾದಶಿಗೆ “ಎಷ್ಟೊಂದು ಒಳ್ಳೆಯ
ಗುಣ ನಿನಗೆ”
ನನ್ನ ಗೆಳೆಯ (ವಿಠಲ) ಬಾಳೆಯೆಲೆಯಲ್ಲಿ ಉಂಡೆದ್ದು ಉಪವಾಸ ಮುರಿದ
ಕಲಾವತಿಯೆಂದು ಏಕಾದಶಿಗೆ ಹೆಸರು, ಅವಳೊಂದು ಹೆಣ್ಣು
ಅವಳು ಬರುವಳು ತಿಂಗಳಿಗೆ ಒಮ್ಮೆ, ನಿನಗೆ ಎಷ್ಟು ಸಲ
ಹೇಳಲೋ ಓ ಅಣ್ಣ
ಸ್ವರ್ಗಾದ ಬಾಗಿಲಲಿ ನಿಂತ ನನ್ನೊಡನೆ ದೇವ ಕೇಳುವನು
ಎಷ್ಟು ಏಕಾದಶಿ ಮಾಡಿರುವೆ ಹೇಳು ನಿನಗೆ ಮೋಕ್ಷ ನೀಡುವೆನು
ಸ್ವರ್ಗದ ಬಾಗಿಲಿನಲಿ ದೇವರು ತಡೆದು ನಿಲ್ಲಿಸಿ ಕೇಳುತ್ತಾನೆ
ಎಷ್ಟೆಂದು ಹೇಳಲಿ ಕಂದ ನಿನಗೆ, ಉಪವಾಸ ಮಾಡಲಿಕೆ
ನಿನ್ನ ಸಹಕಾರ ಬೇಕು
ಪ್ರದರ್ಶಕಿ/ಗಾಯಕಿ : ಫುಲಾಬಾಯ್ ಭೋಂಗ್
ಗ್ರಾಮ : ನಿಮ್ಗಾಂವ್ ಕೆಟ್ಕಿ
ತಾಲ್ಲೂಕು : ಇಂದಾಪುರ
ಜಿಲ್ಲೆ : ಪುಣೆ
ಜಾತಿ : ಫುಲ್ಮಾಲಿ (ತೋಟಗಾರರು)
ದಿನಾಂಕ : ಹಾಡುಗಳು ಮತ್ತು ಗಾಯಕರ ಛಾಯಾಚಿತ್ರವನ್ನು ಡಿಸೆಂಬರ್ 12, 1995ರಂದು ದಾಖಲಿಸಲಾಗಿದೆ
ಪೋಸ್ಟರ್: ಊರ್ಜಾ
ಹೇಮಾ ರಾಯಿರ್ಕರ್ ಮತ್ತು ಗೈ ಪೊಯಿಟ್ವಿನ್ ಸ್ಥಾಪಿಸಿದ ಮೂಲ ಗ್ರೈಂಡ್‌ಮಿಲ್ ಸಾಂಗ್ಸ್ ಪ್ರಾಜೆಕ್ಟ್ ಕುರಿತು ಇಲ ್ಲಿ ಓದಿರಿ
ಅನುವಾದ: ಶಂಕರ ಎನ್. ಕೆಂಚನೂರು