ಇವನಿಗೆ ಚಿನ್ನ ಗುರುತಿಸುವುದು ಹೇಗಂತ ಗೊತ್ತು. “ನನ್ನ ಕೈಯಲ್ಲಿ ನಿಮ್ಮ ಆಭರಣ ಇಟ್ಟು ನೋಡಿ ಸ್ವಾಮಿ, ಅದೆಷ್ಟು ಕ್ಯಾರಟ್ ಅಂತ ಕ್ಷಣ ಮಾತ್ರದಲ್ಲಿ ಹೇಳುತ್ತೇನೆ” ಅಂತ ಹೇಳುವ ರಫೀಕ್ ಪಾಪಾಭಾಯಿ ಶೇಖ್ ತಾನೊಬ್ಬ “ಪತ್ತಾರ” ಅಂತಾ ಹೇಳುವುದನ್ನು ಮರೆಯುವುದಿಲ್ಲ. ಅವನು ಇದನ್ನು ಹೇಳಿದ್ದು, ಪೂನಾ-ಸತಾರಾ ಹೆದ್ದಾರಿಯಲ್ಲಿನ ಪಡ್ವಿ ಗ್ರಾಮದಲ್ಲಿ. ಬಹುಶಃ ಇಲ್ಲಿ ಅವನ ಕೈಗೆ ಇನ್ನೊಂದು ಚಿನ್ನ ಸಿಕ್ಕಿರಬೇಕು, ಈ ಸಲ ಹೋಟೆಲಿನ ರೂಪದಲ್ಲಿ.


ಪೂನಾ ಜಿಲ್ಲೆಯ ತುದಿಯಲ್ಲಿನ ದೌಂಡ ನ ಮೂಲಕ ಹಾದುಹೋಗುತ್ತಿರುವಾಗ ಕಾಣಿಸಿದ್ದು ಅಷ್ಟೇನೂ ವ್ಯವಸ್ಥಿತವಲ್ಲದ, ಢಾಳಾಗಿ ಎದ್ದು ಕಾಣುವ ಈ ಹೋಟೆಲ್. ಸರ್ರನೆ ಕಾರನ್ನು ಹಿಂದೆಳೆದುಕೊಂಡು ನಿಂತೆವು. ಕಟ್ಟಡದ ಮೇಲಿನ ತುದಿಯಲ್ಲಿ “ ಹೋಟೆಲ್ ಸೆಲ್ಫಿ” ಅಂತಾ ಕೆಂಪು ಮತ್ತು ಹಸಿರಿನಿಂದ ಬರೆದದ್ದಿದೆ. ಇಲ್ಲಿ ಶಾಕಾಹಾರ, ಮಾಂಸಾಹಾರ, ಫಾಸ್ಟ್ ಫುಡ್ ಸಿಗುತ್ತದೆ. ಅಲ್ಲದೆ ‘ ಫ್ಯಾಮಿಲಿ ಸ್ಪೆಷಲ್’ ಅಂತಾನೂ ಬರೆದಿದ್ದಿದೆ. ಹಾಗಂದರೇನು ಅಂತ ಮಾತ್ರ ಕೇಳಬೇಡಿ. ಅದು ಬಹುಶಃ ರಫೀಕ್ ನಿಗೇ ಗೊತ್ತಿರಬೇಕು.


“ನಾನಿದನ್ನ ನನ್ನ ಮಗನಿಗೆ ಅಂತಾ ಮಾಡಿದ್ದು” ಅಂತಾ ಹೇಳುವ ರಫೀಕ್ ಮುಂದುವರೆದು,“ನಾನು ಪತ್ತಾರ ಸ್ವಾಮಿ. ಆದರೆ ಈ ಲೈನ್ ನಲ್ಲೂ ಯಾಕೆ ಪ್ರಯತ್ನ ಮಾಡಬಾರದು ಅಂತಾ ಅನ್ನಿಸಿತು. ಅದಕ್ಕೆ ಮಗನಿಗೆ ಇದನ್ನು ಹಾಕಿಕೊಟ್ಟೆ. ಈ ಹೆದ್ದಾರಿ ತುಂಬಾ ಗಾಡಿಗಳು ಓಡಾಡುತ್ತವೆ. ಜನ ಚಹಾ ಮತ್ತು ಊಟಕ್ಕೆ ನಿಲ್ಲೋ ಸಾಧ್ಯತೆ ಜಾಸ್ತಿ.” ಅಂತೆನ್ನುತ್ತಾನೆ. ಬೇರೆಯವರಂತೆ ಈತ ತನ್ನ ಹೋಟೆಲನ್ನು ಹೆದ್ದಾರಿಗೆ ಮುತ್ತಿಕ್ಕುವಂತೆ ತೀರ ಪಕ್ಕದಲ್ಲೇ ಮಾಡಿಲ್ಲ. ಹೆದ್ದಾರಿಯಿಂದ ಸಾಕಷ್ಟು ಅಂತರದಲ್ಲಿ  ಮಾಡಿದ್ದಾನೆ. ಜನರು ಆರಾಮಾಗಿ ತಮ್ಮ ಗಾಡಿಗಳನ್ನು ಇದರ ಮುಂದೆ ನಿಲ್ಲಿಸುವ ಹಾಗೆ. ನಾವು ಮಾಡಿದ್ದೂ ಹಾಗೆನೇ ಅಲ್ವಾ?


02-SAI_1076-PS-Hotel Selfie.jpg

ಹೋಟೆಲ್ ಮಾಲೀಕ ಹಾಗೂ ಪತ್ತಾರ ರಫೀಕ್ ಶೇಕ್ , ಇಲ್ಲ , ಇದು ' ಸೆಲ್ಫಿ ' ಅಲ್


ನಮ್ಮನ್ನು ಸೆಳೆದದ್ದು ನಿನ್ನ ಹೋಟೆಲ್ ನ ಹೆಸರು ‘ಸೆಲ್ಫಿ’ ಅಂತಾ ಹೇಳಿದಾಗ ಅವನ ಮುಖದ ಮೇಲೆ ಮೂಡಿದ ಅರ್ಥಗರ್ಭಿತ ನಗು  ನೋಡಬೇಕು. ತನ್ನ ಮಗನ ಕಡೆ ತಿರುಗಿ, ‘ನೋಡಿದ್ಯಾ ಮಗನೇ, ನಾ ನಿನಗೆ ಮೊದಲೇ ಹೇಳಿರಲಿಲ್ಲವಾ?’ ಅಂತಾ ಅನ್ನೋ ತರಹ ಇತ್ತು ಆ ನಗು.  ಯಾಕೆಂದರೆ,ಈ ಹೆಸರನ್ನು ಸೂಚಿಸಿದ್ದು ಅವನೇ ಅಂತೆ. ನಿಮಗೆ ಗೊತ್ತಿರಲಿ, ಹಳ್ಳಿ ಕಡೆ ಧಾಬಾ, ರೆಸ್ಟೋರೆಂಟ್, ದರ್ಶಿನಿ ಯಂಥಾ ಯಾವುದೇ ಸ್ಥಳಗಳಿಗೆ ಹೋಟೆಲ್ ಅಂತಾನೇ ಕರೆಯೋದು.


ನಾವು ಅವನ ಜೊತೆ ಸೆಲ್ಫಿ ತೆಗೆದುಕೊಳ್ಳಲಿಲ್ಲ. ಅದು ಬಹುಶಃ ತುಂಬಾ ಕಳಪೆ ಅನ್ನಿಸುತ್ತಿತ್ತೇನೋ. ಅದಕ್ಕಿಂತ ಹೆಚ್ಚಾಗಿ ಅವನ ಹೋಟೆಲ್ ನ ಈ ವಿಶಿಷ್ಟವಾದ ಹೆಸರಿಗೆ ಸಿಗಬೇಕಾದ ಪ್ರಾಮುಖ್ಯತೆ ಸಿಗುತ್ತಿರಲಿಲ್ಲವೇನೋ?  ಒಬ್ಬರಲ್ಲ ಒಬ್ಬರು, ಒಂದಲ್ಲ ಒಂದು ದಿನ ಹೋಟೆಲ್ ಗೆ ಈ ಹೆಸರನ್ನು ಇಟ್ಟೇ ಇಡುತ್ತಾರೆ. ಆದರೆ, ಹಾಗೆ ಬೇರೆಯವರಿಗಿಂತ ಮೊದಲೇ ಇವನು ಮಾಡಿದ್ದಾನೆ. ಅಥವಾ ನಮಗೆ ಗೊತ್ತಿರುವಂತೆ ಇವನದೇ ಮೊದಲು.


ಜನ ಇಲ್ಲಿ ತಿನ್ನಲು ಅಥವಾ ಚಹಾ ಕುಡಿಯಲು ಗಾಡಿ ನಿಲ್ಲಿಸಿದರು ಅಂತಾ ಅಂದುಕೊಳ್ಳಿ. ಹಾಗಾದಾಗ, ಅವರು ಏನಾದರೂ ತಿನ್ನುತ್ತಾರೆ ಅಥವಾ ಕುಡಿಯುತ್ತಾರೆ ಅನ್ನೋ ಗ್ಯಾರಂಟಿ ಇಲ್ಲದಿದ್ದರೂ ಒಂದು ‘ಸೆಲ್ಫಿ’ ಮಾತ್ರ ಪಕ್ಕಾ ತೆಗೆದುಕೊಳ್ಳುತ್ತಾರೆ. ಇಲ್ಲಿ ಕುಡಿಯುವ ಟೀ ನೀವು ಮರೆತುಹೋಗಬಹುದು. ಆದರೆ, ‘ಹೋಟೆಲ್ ಸೆಲ್ಫಿ’ ಮಾತ್ರ ನಿಮ್ಮೊಂದಿಗೆ ಸದಾಕಾಲ ಇರುತ್ತೆ. ಈಗಲ್ ನ ಹಾಡನ್ನು ಇನ್ನೊಂದು ರೀತಿ ಅರ್ಥೈಸುವುದಾದರೆ, ‘ನೀವು ಅದನ್ನು ಬೇಕಾದಾಗ ಬಿಟ್ಟು ಹೋಗಬಹುದೇ ಹೊರತು ಮರೆತು ಹೋಗಲು ಸಾಧ್ಯವಿಲ್ಲ’


ರಫೀಕ್ ನ ಈ ಹೋಟೆಲ್ ಜನರನ್ನು ಸೆಳೆಯುತ್ತೆ ಅನ್ನೋದರಲ್ಲಿ ಸಂಶಯವಿಲ್ಲ. ಇವನಿಗೆ ಚಿನ್ನ ಗುರುತಿಸುವುದು ಹೇಗಂತ ಗೊತ್ತು.


ಅನುವಾದ : 'ಕ್ರೇಜಿ ಫ್ರಾಗ್ ಮೀಡಿಯಾ ಫೀಚರ್ಸ್' ಈ ಅನುವಾದದ ರೂವಾರಿ. ಧಾರವಾಡದಲ್ಲಿ ನೆಲೆಸಿರುವ ಸಂತೋಷ್ ತಾಮ್ರಪರ್ಣಿ ವೃತ್ತಿಯಿಂದ ಎಂಜಿನಿಯರ್. ಆದರೂ ಒಲವು ಬರಹಗಳತ್ತ. 'ಅವಧಿ' ಅಂತರ್ಜಾಲ ಪತ್ರಿಕೆಯಲ್ಲಿ ಬರೆದಿರುವ ಹಾಸ್ಯ ಲೇಖನಗಳು ಜನಪ್ರಿಯ.


ಮೂಲ ಲೇಖಕರು : ಪಿ.ಸಾಯಿನಾಥ್ "ಪೀಪಲ್ಸ್ ಆರ್ಕೇವ್ ಆಫ್ ರೂರಲ್ ಇಂಡಿಯಾ'' ದ ಸ್ಥಾಪಕ-ಸಂಪಾದಕರು. ಹಲವು ದಶಕಗಳಿಂದ ಗ್ರಾಮೀಣ ಭಾರತದ ವರದಿಗಾರಿಕೆಯನ್ನು ಮಾಡುತ್ತಾ ಬಂದಿರುವ ಹಿರಿಯ ಪತ್ರಕರ್ತರಾಗಿರುವ ಇವರು ಬಲುಚರ್ಚಿತ ‘ಎವೆರಿಬಡಿ ಲವ್ಸ್ ಗುಡ್ ಡ್ರಾಟ್' (ಕನ್ನಡಕ್ಕೆ ಜಿ ಎನ್ ಮೋಹನ್ ಅನುವಾದಿಸಿದ `ಬರ ಅಂದ್ರೆ ಎಲ್ಲರಿಗೂ ಇಷ್ಟ') ಪುಸ್ತಕದ ಲೇಖಕರೂ ಹೌದು.


P. Sainath

ପି. ସାଇନାଥ, ପିପୁଲ୍ସ ଆର୍କାଇଭ୍ ଅଫ୍ ରୁରାଲ ଇଣ୍ଡିଆର ପ୍ରତିଷ୍ଠାତା ସମ୍ପାଦକ । ସେ ବହୁ ଦଶନ୍ଧି ଧରି ଗ୍ରାମୀଣ ରିପୋର୍ଟର ଭାବେ କାର୍ଯ୍ୟ କରିଛନ୍ତି ଏବଂ ସେ ‘ଏଭ୍ରିବଡି ଲଭସ୍ ଏ ଗୁଡ୍ ଡ୍ରଟ୍’ ଏବଂ ‘ଦ ଲାଷ୍ଟ ହିରୋଜ୍: ଫୁଟ୍ ସୋଲଜର୍ସ ଅଫ୍ ଇଣ୍ଡିଆନ୍ ଫ୍ରିଡମ୍’ ପୁସ୍ତକର ଲେଖକ।

ଏହାଙ୍କ ଲିଖିତ ଅନ୍ୟ ବିଷୟଗୁଡିକ ପି.ସାଇନାଥ