ನಾನು ಗಾಂಧಿನಗರ ಮತ್ತು ಅಳಗಾಪುರಿಗೆ ಬಂದು ತಲುಪುವ ಹೊತ್ತಿಗಾಗಲೇ ಊರು ದುಃಖದ ಕಡಲಿನಲ್ಲಿ ಮುಳುಗಿದ್ದ ಜನರಿಂದ ತುಂಬಿ ಹೋಗಿತ್ತು. ಈ ಎರಡು ದಲಿತ (ಪರಿಶಿಷ್ಟ ಜಾತಿ) ಸಮುದಾಯಕ್ಕೆ ಸೇರಿದ ಊರುಗಳನ್ನು ನಡುವೆ ಇರುವ ರಸ್ತೆ ಬೇರ್ಪಡಿಸುತ್ತಿತ್ತು. ಊರಿನ ತುಂಬಾ ಪೊಲೀಸರು ಮತ್ತು ವಾಹನಗಳ ಜಂಗುಳಿಯೂ ಇತ್ತು. ಶಿವಕಾಶಿಯಲ್ಲಿರುವ ಕನಿಷ್ಕಾ ಪಟಾಕಿ ಕಾರ್ಖಾನೆಯಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ತಮ್ಮವರನ್ನು ಕಳೆದುಕೊಂಡ ಊರು ನೋವಿನಲ್ಲಿ ಅದ್ದಿ ತೆಗೆದಂತೆ ಕಾಣುತ್ತಿತ್ತು. ಗಾಂಧಿನಗರವೊಂದರಲ್ಲೇ ಆರು ಸಾವು ಸಂಭವಿಸಿತ್ತು ಮತ್ತು ಅವರೆಲ್ಲರೂ ದಲಿತರಾಗಿದ್ದರು.

ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಜನರು ಬೀದಿಗಳಲ್ಲಿ ನಿಂತು ಅಳುತ್ತಿದ್ದರು. ಇನ್ನೂ ಕೆಲವರು ತಮ್ಮ ಫೋನು ಹಿಡಿದು ವಿರುಧ ನಗರ ಜಿಲ್ಲೆಯ ಇತರ ಪಟ್ಟಣ ಮತ್ತು ಹಳ್ಳಿಗಳಲ್ಲಿರುವ ಜನರಿಗೆ ಮಾಹಿತಿ ನೀಡುತ್ತಿದ್ದರು.

ಸ್ವಲ್ಪ ಸಮಯದ ನಂತರ ಇದೀ ಊರು ಸ್ಮಶಾನದತ್ತ ಚಲಿಸತೊಡಗಿತು. ನಾನೂ ಅವರನ್ನು ಸೇರಿಕೊಂಡೆ. 2023ರ ಅಕ್ಟೋಬರ್‌ ತಿಂಗಳ 17ನೇ ತಾರೀಖಿನಂದು ನಡೆದ ಅವಘಡದಲ್ಲಿ ಮೃತರಾದ ಊರಿನ ಆರು ಕಾರ್ಮಿಕರಿಗೆ ಅಂತಿಮ ವಿದಾಯ ಸಲ್ಲಿಸಲು ಇಡೀ ಊರೇ ಒಂದಾಗಿ ಸಾಗುತ್ತಿತ್ತು. ಸುಟ್ಟ ದೇಹಗಳನ್ನು ಹೊರತೆಗೆಯುವ ಉಸ್ತುವಾರಿಯನ್ನು ಹೊತ್ತಿದ್ದ ಅಗ್ನಿಶಾಮಕ ದಳದ ಸಿಬ್ಬಂದಿಯೊಬ್ಬರು ಮರಣೋತ್ತರ ಪರೀಕ್ಷೆಗಾಗಿ ಅವುಗಳನ್ನು ಪಡೆಯಲು ಪಟ್ಟ ಕಷ್ಟಗಳನ್ನು ವಿವರಿಸುತ್ತಿದ್ದರು.

ಕೊನೆಗೂ ರಾತ್ರಿ ಸುಮಾರು 8:30ರ ಹೊತ್ತಿಗೆ ಆರು ಆಂಬುಲೆನ್ಸ್‌ ವಾಹನಗಳು ಶವಾಗಾರದ ಎದುರು ಬಂದು ನಿಂತವು. ವಾಹನಗಳು ನಿಲ್ಲುತ್ತಿದ್ದಂತೆ ದುಃಖತಪ್ತ ಜನರು ಕೂಗುತ್ತಾ ವಾಹನದ ಸುತ್ತ ಜಮಾಯಿಸಿದರು. ಆ ಕ್ಷಣಕ್ಕೆ ನನಗೆ ನನ್ನ ಕೆಮೆರಾ ಹೊರತೆಗೆಯಲು ಸಾಧ್ಯವಾಗಲಿಲ್ಲ. ಆ ಹೊತ್ತಿಗೆ ನಾನು ನನ್ನ ಕರ್ತವ್ಯವನ್ನು ಮರೆತು ನಿಂತಿದ್ದೆ.  ಸ್ಮಶಾನ ರಾತ್ರಿಯ ಕತ್ತಲೆಯಲ್ಲಿ ಮುಳುಗಿತ್ತು. ಅಲ್ಲಿಯೇ ಇದ್ದ ಸಣ್ಣ ಬೆಳಕಿನ ಸುತ್ತ ಹಾರುತ್ತಿದ್ದ ಗೆದ್ದಲು ಹುಳುಗಳು ನನಗೆ ಊರಿನ ಜನರಂತೆ ಕಾಣುತ್ತಿದ್ದವು…

ಶವಗಳನ್ನು ಹೊರತೆಗೆಯುತ್ತಿದ್ದಂತೆ ಜನಸಮೂಹ ಒಂದೇ ಸಲ ಹಿಂದೆ ಸರಿದಿತು - ಸುಟ್ಟ ಮಾಂಸದ ವಾಸನೆ ಸಹಿಸಲಸಾಧ್ಯವಾಗಿತ್ತು. ಕೆಲವರು ವಾಂತಿ ಮಾಡಿಕೊಂಡರು. ಶವಗಳಿಗೆ ಅವುಗಳ ಹೆಸರನ್ನು ಲೇಬಲ್ ಮಾಡಿ ನೇತು ಹಾಕಿದ್ದರಿಂದಾಗಿ ಗುರುತಿಸಲು ಸಾಧ್ಯವಾಯಿತು. ಅಲ್ಲಿದ್ದ ಜನಸಮೂಹ ದೂರ ಸರಿಯುತ್ತಿದ್ದಂತೆ, ಸ್ಮಶಾನ ಒಬ್ಬಂಟಿಯಾಗಿ ನಿಂತಿತು.

PHOTO • M. Palani Kumar
PHOTO • M. Palani Kumar

ಎಡ: ಶಿವಕಾಶಿಯ ಕನಿಷ್ಕಾ ಪಟಾಕಿ ಕಾರ್ಖಾನೆಯಲ್ಲಿ ಸಂಭವಿಸಿದ ಬೆಂಕಿ ಅಪಘಾತದಲ್ಲಿ 14 ಕಾರ್ಮಿಕರು ಸಾವನ್ನಪ್ಪಿದ್ದಾರೆ. ಬಲ: ಬೆಂಕಿಗೆ ಬಲಿಯಾದವರಲ್ಲಿ ಒಬ್ಬರಾದ ಎಂ.ಬಾಲಮುರುಗನ್ ಅವರ ಮನೆಯಲ್ಲಿ ಜನರು ಒಟ್ಟುಗೂಡಿರುವುದು

PHOTO • M. Palani Kumar
PHOTO • M. Palani Kumar

ಎಡ: ಮೃತರ ಸಂಬಂಧಿಕರು ಮತ್ತು ಸ್ನೇಹಿತರು ಚಿತಾಗಾರದತ್ತ ನಡೆಯುತ್ತಿರುವುದು. ಬಲ: ಕತ್ತಲಾದರೂ ಜನರು ಶವಗಳು ಬರುವವರೆಗೆ ಕಾಯುತ್ತಾ ನಿಂತಿದ್ದರು

14 ವರ್ಷದ ಎಮ್‌ ಸಂಧ್ಯಾಳಿಗೆ ತಾನು ವಿಜ್ಞಾನಿಯಾಗಬೇಕೆನ್ನುವ ಕನಸು. ಈಗ ತನ್ನ ತಾಯಿಯನ್ನು ಕಳೆದುಕೊಂಡಿರುವ ಈ ವಿದ್ಯಾರ್ಥಿ ತನ್ನ ಕನಸುಗಳನ್ನು ಕೈಬಿಡಬೇಕಾದ ಅಸಹಾಯಕ ಪರಿಸ್ಥಿತಿಯಲ್ಲಿದ್ದಾಳೆ. ಸಂಧ್ಯಾಳ ತಾಯಿ ಕಳೆದ ಎಂಟು ವರ್ಷಗಳಿಂದ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು. ತನ್ನ ಮಗಳ ಬೇಕು ಬೇಡಗಳನ್ನು ಪೂರೈಸುವುದಕ್ಕಾಗಿ ಓವರ್‌ ಟೈಮ್‌ ಕೆಲಸ ಮಾಡುತ್ತಿದ್ದರು. ಒಬ್ಬಂಟಿ ಪೋಷಕರಾಗಿ ಸಂಧ್ಯಾಳ ತಾಯಿ ತನ್ನ ಮಗಳಿಗೆ ತನ್ನಿಂದ ಸಾಧ್ಯವಿರುವುದೆಲ್ಲವನ್ನೂ ಮಾಡಿದ್ದಾರೆ ಎಂದು ಪ್ರಸ್ತುತ ಸಂಧ್ಯಾಳನ್ನು ನೋಡಿಕೊಳ್ಳುತ್ತಿರುವ ಅವಳ ಪಾಟಿ (ಅಜ್ಜಿ) ಹೇಳುತ್ತಾರೆ. “ಪಾಟಿ ನನ್ನನ್ನು ಎಷ್ಟು ದಿನಗಳವರೆಗೆ ನೋಡಿಕೊಳ್ಳಲು ಸಾಧ್ಯವೋ ಗೊತ್ತಿಲ್ಲ. ಅವರಿಗೆ ತೀವ್ರವಾದ ಸಕ್ಕರೆ ಕಾಯಿಲೆಯಿದೆ” ಎಂದು ಸಂಧ್ಯಾ ಹೇಳುತ್ತಾಳೆ.

ಇದೇ ದುರಂತದಲ್ಲಿ ಪಂಚವರ್ಣಮ್‌ ತನ್ನ ಗಂಡನನ್ನು ಕಳೆದುಕೊಂಡಿದ್ದಾರೆ. “ಹೊರಗೆ ಸ್ಯಾಂಪಲ್ಲಿಗಾಗಿ ಇರಿಸಿದ್ದ ಪಟಾಕಿಗೆ ಅಂದು ಬೆಂಕಿ ಹೊತ್ತಿಕೊಂಡಿತ್ತು. ಬಾಗಿಲ ಬಳಿಯೇ ಕುಳಿತಿದ್ದರಿಂದಾಗಿ ನಾನು ಬಚಾವಾದೆ. ಆದರೆ ಹೊಗೆಯಿಂದಾಗಿ ಅವರಿಗೆ ಹೊರಗೆ ಬರಲು ಸಾಧ್ಯವಾಗಲಿಲ್ಲ” ಎಂದು ಅವರು ಹೇಳುತ್ತಾರೆ.

ಅವರು ಅಲ್ಲಿಂದ ತಪ್ಪಿಸಿಕೊಳ್ಳುವಾಗ ಆದ ಗೀರು ಮತ್ತು ಗುಳ್ಳೆಗಳನ್ನು ತೋರಿಸಿದರು. “ಸಾಮಾನ್ಯವಾಗಿ ದೊಡ್ಡ ಮಟ್ಟದಲ್ಲಿ ಪಟಾಕಿ ಖರೀದಿಸುವ ಗಿರಾಕಿಗಳು ಸ್ಯಾಂಪಲ್‌ ಕೇಳುತ್ತಾರೆ. ಹೀಗೆ ಸ್ಯಾಂಪಲ್‌ ಪರೀಕ್ಷೆ ಮಾಡಲು ಪಟಾಕಿಗಳನ್ನು ಕಾರ್ಖಾನೆಯಿಂದ ಕನಿಷ್ಠ ಒಂದು ಕಿಲೋಮೀಟರ್‌ ದೂರದಲ್ಲಿ ಸುಟ್ಟು ನೋಡಬೇಕು. ಆದರೆ ಅಂದು ಅವರು ಕಾರ್ಖಾನೆಯ ಬಳಿಯಲ್ಲೇ ಸ್ಯಾಂಪಲ್‌ ಪರಿಕ್ಷೀಸಿದರು. ಆಗ ಹಚ್ಚಿದ ಪಟಾಕಿಯ ಕಿಡಿಗಳು ಎಲ್ಲೆಡೆ ಹಾರುತ್ತಿದ್ದವು. ಅವುಗಳಲ್ಲಿ ಕೆಲವು ಕಾರ್ಖಾನೆಯ ಛಾವಣಿಯ ಮೇಲೆಯೂ ಬಿದ್ದವು. ಆ ಕಿಡಿಗಳು ಜೋಡಿಸುತ್ತಿದ್ದ ಪಟಾಕಿಗಳ ಮೇಲೂ ಬಿದ್ದವು. ನಂತರ ಕೆಲವೇ ಕ್ಷಣಗಳಲ್ಲಿ ಇಡೀ ಕೋಣೆಗೆ ಬೆಂಕಿ ಹೊತ್ತಿಕೊಂಡಿತು. ಆಗ ಅಲ್ಲಿದ್ದ 15 ಕಾರ್ಮಿಕರಲ್ಲಿ 13 ಜನರು ಬೆಂಕಿಯಲ್ಲಿ ಸಿಕ್ಕಿಕೊಂಡರು. ಥರ್ಡ್ ಡಿಗ್ರಿ ಸುಟ್ಟಗಾಯಗಳೊಂದಿಗೆ ಪಾರಾದ ಮೂವರು ಅಪಘಾತದ ಸಮಯದಲ್ಲಿ ಶೌಚಾಲಯದಲ್ಲಿದ್ದರು. ಇಲ್ಲದಿದ್ದರೆ, ಅವರು ಸಹ ಬದುಕುಳಿಯುತ್ತಿರಲಿಲ್ಲ. ಅವರು ಹೊರಗೆ ಬರುವ ಹೊತ್ತಿಗೆ ಅವರ ಸೀರೆಗಳಿಗೆ ಬೆಂಕಿ ಹೊತ್ತಿಕೊಂಡಿತ್ತು" ಎಂದು ಅವರು ನೆನಪಿಸಿಕೊಂಡರು.

ಪಂಚವರ್ಣಂ ಮತ್ತು ಅವರ ಪತಿ ಬಾಲಮುರುಗನ್ ಆದಾಯವು ಅವರು ಎಷ್ಟು ಗಂಟೆಗಳ ಕಾಲ ಈ ಶ್ರಮದಾಯಕ ಕೆಲಸವನ್ನು ಮಾಡುತ್ತಾರೆನ್ನುವುದನ್ನು ಅವಲಂಬಿಸಿತ್ತು. ಹೀಗೆ ಕಷ್ಟಪಟ್ಟು ಸಂಪಾದಿಸಿದ ಹಣದಿಂದ ದಂಪತಿ ಬಿಎಸ್ಸಿ ನರ್ಸಿಂಗ್ ಮೊದಲ ವರ್ಷದಲ್ಲಿ ಓದುತ್ತಿರುವ ಮಗಳು ಮತ್ತು ಐಟಿಐಯಲ್ಲಿ ಡಿಪ್ಲೊಮಾ ಪಡೆದ ಮಗನನ್ನು ಬೆಳೆಸಿದ್ದಾರೆ. ತನ್ನ ಪತಿ ಬಾಲಮುರುಗನ್ ಅವರನ್ನು ನೆನಪಿಸಿಕೊಂಡ ಪಂಚವರ್ಣಂ, “ಅವರು ಮಕ್ಕಳಿಗೆ ಶಿಕ್ಷಣ ಕೊಡಿಸುವ ಸಲುವಾಗಿ ಎಷ್ಟು ಕಷ್ಟಪಡುವುದಕ್ಕಾದರೂ ಸಿದ್ಧರಿದ್ದರು” ಎಂದು ಹೇಳಿದರು. “ಅವರ ಗಮನವೆಲ್ಲಾ ಸದಾ ಒಂದೇ ವಿಷಯದ ಮೇಲಿತ್ತು. ಅದು ಶಿಕ್ಷಣ. ನಾವೂ ಅವರಂತೆ ಇಂತಹ ಕೆಲಸ ಮಾಡಿ ಒದ್ದಾಡಬಾರದು ಎನ್ನುವುದು ಅವರ ಗುರಿಯಾಗಿತ್ತು” ಎಂದು ಮಗಳಾದ ಭವಾನಿ ಹೇಳುತ್ತಾರೆ.

PHOTO • M. Palani Kumar
PHOTO • M. Palani Kumar

ರಾತ್ರಿ 8:30ಕ್ಕೆ, ಮೊದಲ ಆಂಬ್ಯುಲೆನ್ಸ್ ಸ್ಮಶಾನಕ್ಕೆ ಬಂತು (ಎಡಕ್ಕೆ); ಅದರ ನಂತರ ಇನ್ನೂ ಐದು (ಬಲ) ಬಂದವು

PHOTO • M. Palani Kumar
PHOTO • M. Palani Kumar

ಎಡ: ತೀರಿಕೊಂಡ ಕಾರ್ಮಿಕರನ್ನು ಅವರಿಗೆ ಸುತ್ತಿದ ಬಟ್ಟೆಯ ಮೇಲೆ ಬರೆದಿರುವ ಸಂಖ್ಯೆಗಳಿಂದ ಗುರುತಿಸಲಾಯಿತು. ಬಲ: ಆಂಬ್ಯುಲೆನ್ಸ್ ವಾಹನದಿಂದ ಶವಗಳನ್ನು ಇಳಿಸುವುದನ್ನು ನೋಡುತ್ತಿರುವ ದುಃಖಿತ ಕುಟುಂಬಗಳು ಮತ್ತು ಸ್ನೇಹಿತರು

ಈಗ ಬೆಂಕಿ ಅಪಘಾತ ಮತ್ತು ನಂತರದ ಆಸ್ಪತ್ರೆಯ ವೆಚ್ಚಗಳ ಕಾರಣದಿಂದಾಗಿ ಪಂಚವರ್ಣಂ ಅವರ ಕುಟುಂಬವು ಸಾಲದಲ್ಲಿ ಮುಳುಗಿದೆ. ಜೊತೆಗೆ ಮೂತ್ರಪಿಂಡದ ತೊಂದರೆಯಿಂದಾಗಿ ಅವರು ಇದುವರೆಗೆ ಐದು ಶಸ್ತ್ರಚಿಕಿತ್ಸೆಗಳಿಗೂ ಒಳಗಾಗಿದ್ದಾರೆ. ಅವರಿಗೆ ತಿಂಗಳಿಗೆ ಐದು ಸಾವಿರ ರೂಪಾಯಿಗಳಷ್ಟು ವೆಚ್ಚ ಮಾತ್ರೆ ತೆಗೆದುಕೊಳ್ಳುವಂತೆಯೂ ಸೂಚಿಸಲಾಗಿದೆ. “ಇನ್ನೂ ಮಗಳ ಕಾಲೇ ಫೀಜು 20,000 ರೂ.) ಪಾವತಿಸಿಲ್ಲ. ಅದನ್ನು ದೀಪಾವಳಿ ಬೋನಸ್‌ ಬಂದರೆ ಅದರಿಂದ ಕಟ್ಟಬೇಕು ಎಂದುಕೊಂಡಿದ್ದೇವೆ” ಎಂದು ಅವರು ಹೇಳಿದರು. ಪಂಚವರ್ಣಂ ಅವರಿಗೆ ಆರೋಗ್ಯ ತಪಾಸಣೆ ಕೂಡಾ ದುಬಾರಿಯೆನ್ನಿಸುತ್ತಿದೆ; ದೇಹದಲ್ಲಿನ ಉಪ್ಪಿನ ಮಟ್ಟವನ್ನು ನಿಯಂತ್ರಣದಲ್ಲಿಡಲು ಮಾತ್ರೆಗಳನ್ನು ತಿನ್ನುತ್ತಾ ದಿನಗಳನ್ನು ಕಳೆಯುತ್ತಿರುವುದಾಗಿ ಅವರು ಹೇಳುತ್ತಾರೆ.

ಭವಾನಿ ಬಾಲಮುರುಗನ್ ಮತ್ತು ಪಂಚವರ್ಣಂ ಅವರ ಕಿರಿಯ ಮಗಳು. ಈ 18 ವರ್ಷದ ಯುವತಿ ತನ್ನ ತಂದೆಯ ಸಾವಿನ ನೋವಿನಿಂದ ಹೊರಬರಲು ಪರದಾಡುತ್ತಿದ್ದಾರೆ. "ಅವರು ನಮ್ಮನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ಮನೆಯಲ್ಲಿ ಒಂದು ಕೆಲಸವನ್ನೂ ಮುಟ್ಟಲು ಬಿಡುತ್ತಿರಲಿಲ್ಲ. ನಮ್ಮ ಮನೆಯಲ್ಲಿ ಎಲ್ಲವನ್ನೂ ನೋಡಿಕೊಳ್ಳುತ್ತಿದ್ದವರು ಅವರೇ. ಅಮ್ಮನಿಗೆ ಆರೋಗ್ಯ ಸರಿಯಿಲ್ಲದ ಕಾರಣ ಮನೆಯಲ್ಲಿ ಅಡುಗೆ, ಮನೆ ಸ್ವಚ್ಛಗೊಳಿಸುವುದು ಎಲ್ಲವನ್ನೂ ಅವರೇ ಮಾಡುತ್ತಿದ್ದರು. ಒಂದು ದಿನವೂ ನಾನು ಮಾಡಲಿ ಎಂದು ನೋಡಿದವರಲ್ಲ" ತಮ್ಮ ಅಪ್ಪನ ಮೇಲೆ ಬಹಳವಾಗಿ ಅವಲಂಬಿತರಾಗಿದ್ದ ಮಕ್ಕಳಿಬ್ಬರೂ ಈಗ ಅವರ ಅಗಲುವಿಕೆಯಿಂದಾಗಿ ಬದುಕನ್ನು ಮತ್ತೆ ಹಳಿಗೆ ತರಲು ಸಾಧ್ಯವಾಗದೆ ಪರದಾಡುತ್ತಿದ್ದಾರೆ.

ಸರ್ಕಾರವು 3 ಲಕ್ಷ ರೂ.ಗಳ ಪರಿಹಾರವನ್ನು ನೀಡಿದೆ. ಅದಕ್ಕೆ ಸಂಬಂಧಿಸಿದ ಚೆಕ್ಕನ್ನು ಅವರು ಕಲೆಕ್ಟರ್ ಕಚೇರಿಯಿಂದ ಸ್ವೀಕರಿಸಿದ್ದಾರೆ. ಕಾರ್ಖಾನೆಯು ಅಕ್ಟೋಬರ್ ತಿಂಗಳಿನಲ್ಲಿ 6 ಲಕ್ಷ ರೂ.ಗಳನ್ನು ಪರಿಹಾರವಾಗಿ ನೀಡಿತು. ತಾನು ಮತ್ತು ಬಾಲಮುರುಗನ್ ಇಬ್ಬರೂ ನಿಷ್ಠಾವಂತ ಉದ್ಯೋಗಿಗಳಾಗಿದ್ದು, ಕಳೆದ 12 ವರ್ಷಗಳಿಂದ ಪಟಾಕಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವುದರಿಂದ ಅವರು ಸಹಾಯ ಮಾಡುತ್ತಾರೆನ್ನುವ ವಿಶ್ವಾಸವನ್ನು ಪಂಚವರ್ಣಂ ಹೊಂದಿದ್ದರು.

ಗಾಂಧಿನಗರ ಗ್ರಾಮದ ಗಂಡಸರು ಮತ್ತು ಹೆಂಗಸರು ಹೆಚ್ಚಾಗಿ ಕೃಷಿ ಹೊಲಗಳಲ್ಲಿ ಅಥವಾ ಪಟಾಕಿ ಕಾರ್ಖಾನೆಯಲ್ಲಿ ದಿನಗೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಾರೆ. ಭೂಮಾಲೀಕರಿಗಿಂತಲೂ ಕಾರ್ಖಾನೆಗಳ ಮಾಲಕರು ಸ್ವಲ್ಪ ಹೆಚ್ಚು ಸಂಬಳ ನೀಡುತ್ತಾರೆನ್ನುವ ಕಾರಣಕ್ಕೆ ಪಂಚವರ್ಣಂ ಅವರ ಕುಟುಂಬವು ಈ ಕೆಲಸವನ್ನು ಆಯ್ದುಕೊಂಡಿತ್ತು.

ಅವರ 19 ವರ್ಷದ ಮಗ ಪಾಂಡಿಯರಾಜನ್ ಅಪಘಾತದ ಸ್ಥಳಕ್ಕೆ ಹೋದಾಗಿನಿಂದ ಭಯ ಮತ್ತು ದುಃಖದಿಂದ ಪಾರ್ಶ್ವವಾಯುವಿಗೆ ಒಳಗಾಗಿದ್ದಾರೆ. ಇದು ಅವನನ್ನು ಪೂರ್ತಿಯಾಗಿ ಅಲುಗಾಡಿಸಿದೆ ಎಂದು ಅವರ ತಂಗಿ ಹೇಳುತ್ತಾರೆ. "ಆ ದಿನ ಅವರು [ತಂದೆ] ಕೊನೆಯದಾಗಿ ಕರೆ ಮಾಡಿದ್ದು ನನಗೆ. ನಾನು ಊಟ ಮಾಡಿದ್ದೀನೋ, ಇಲ್ಲವೋ ಎಂದು ಕೇಳಲು ಅವರು ಕರೆ ಮಾಡುತ್ತಿದ್ದರು. ಅರ್ಧ ಗಂಟೆಯ ನಂತರ, ಅವರ ಸಹೋದ್ಯೋಗಿ ನನಗೆ ಕರೆ ಮಾಡಿ ಘಟನೆಯ ಬಗ್ಗೆ ಮಾಹಿತಿ ನೀಡಿದರು. ನಾನು ಸ್ಥಳಕ್ಕೆ ಧಾವಿಸಿದೆ, ಆದರೆ ಅಲ್ಲಿ ನನ್ನನ್ನು ಒಳಗೆ ಬಿಡಲಿಲ್ಲ. ಆಸ್ಪತ್ರೆಗೆ ತಲುಪಿದ ನಂತರವೇ, ಅವರು ಜೀವಂತವಾಗಿಲ್ಲ ಎಂದು ತಿಳಿಯಿತು" ಎಂದು ಪಾಂಡಿಯರಾಜನ್ ಹೇಳುತ್ತಾರೆ.

“ಇನ್ನು ಮುಂದೆ ಬದುಕುವುದು ಹೇಗೆಂದೇ ನಮಗೆ ತಿಳಿಯುತ್ತಿಲ್ಲ. ನಮ್ಮ ಅಮ್ಮ ಹೇಳಿದ ಯಾವುದೇ ಕೆಲಸ ಮಾಡುವುದಕ್ಕೆ ನಾವು ತಯಾರಿದ್ದೇವೆ. ಅಮ್ಮ ನಮ್ಮ ಬಳಿ ಸಾಯಿರಿ ಎಂದರೆ ನಾವು ಅದಕ್ಕೂ ಸಿದ್ಧರಿದ್ದೇವೆ. ಎಷ್ಟು ದಿನಗಳ ಕಾಲ ಸಂಬಂಧಿಕರು ನಮಗೆ ಆಶ್ರಯ ಮತ್ತು ಕಾಳಜಿ ನೀಡಬಲ್ಲರು?”

PHOTO • M. Palani Kumar
PHOTO • M. Palani Kumar

ಎಡ: ಶವಸಂಸ್ಕಾರಕ್ಕೆ ಸ್ಥಳವನ್ನು ಸಿದ್ಧಪಡಿಸಲು ಜನರು ತಮ್ಮ ಮೊಬೈಲ್ ಟಾರ್ಚುಗಳನ್ನು ಬಳಸಿದರು. ಬಲ: ಎಲ್ಲಾ ಆರು ಶವಗಳನ್ನು ಒಟ್ಟಿಗೆ ದಹನ ಮಾಡಲಾಯಿತು

PHOTO • M. Palani Kumar

ಸಂಬಂಧಿಕರು ಮತ್ತು ಸ್ನೇಹಿತರು ಹೊರಟು ಹೋದ ನಂತರವೂ ಉರಿಯುತ್ತಿರುವ ಚಿತೆಯಲ್ಲಿನ ಕೊಳ್ಳಿಗಳು

ತಮಿಳುಸೆಲ್ವಿಯವರು ಪಟಾಕಿ ದುರಂತಕ್ಕೆ ಬಲಿಯಾದ ಸಮಯದಲ್ಲಿ ಅವರಿಗೆ 57 ವರ್ಷ ವಯಸ್ಸಾಗಿತ್ತು. ಅವರು 23 ವರ್ಷಗಳ ಹಿಂದೆ ಪಟಾಕಿ ಕಾರ್ಖಾನೆಗೆ ಸೇರಿದರು. ಆಗ ಅವರು ದಿನಕ್ಕೆ 200 ರೂ.ಗಳನ್ನು ಸಂಪಾದಿಸುತ್ತಿದ್ದರು, ಅದು ಕ್ರಮೇಣ ದಿನಕ್ಕೆ 400 ರೂ.ಗೆ ಏರಿತು.

ಅವರ ಕಿರಿಯ ಮಗ ಟಿ.ಈಶ್ವರನ್, “ನಾನು ಎರಡು ವರ್ಷದವನಾಗಿರುವಾಗ ನನ್ನ ತಂದೆ ತೀರಿಕೊಂಡರು. ಅಂದಿನಿಂದ ಅಮ್ಮನೇ ನನ್ನ ಅಣ್ಣ ಮತ್ತು ನನ್ನನ್ನು ನೋಡಿಕೊಂಡಿದ್ದು” ಅವರು ಮತ್ತು ಅವರ ಅಣ್ಣ ಇಬ್ಬರೂ ಪದವೀಧರರು. “ನಾನು ಕಂಪ್ಯೂಟರ್‌ ಸೈನ್ಸ್‌ ಮಾಡಿದೆ. ಅಣ್ಣ ಬಿಎಸ್ಸಿ ಪದವಿ ಗಳಿಸಿದರು” ಎಂದು ಅವರು ಹೇಳುತ್ತಾರೆ.

ತಮಿಳ್ ಸೆಲ್ವಿ ಅವರ ಹಿರಿಯ ಮಗ ಈಗ ತಿರುಪುರದಲ್ಲಿ ಪೊಲೀಸ್ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ. "ಅವಳು ತನ್ನ ಇಡೀ ಜೀವನವನ್ನು ತನ್ನ ಮಕ್ಕಳ ಸುಧಾರಣೆಗಾಗಿ ಕೆಲಸ ಮಾಡಿದಳು, ಆದರೆ ಅವರು ತಲುಪಲಿರುವ ಎತ್ತರಕ್ಕೆ ಸಾಕ್ಷಿಯಾಗಲು ಇಂದು ಅವಳೇ ಉಳಿದಿಲ್ಲ" ಎಂದು ಅವರ ಸಂಬಂಧಿಕರು ಹೇಳಿದರು.

ಬೆಂಕಿ ದುರಂತದಲ್ಲಿ ಬದುಕುಳಿದ ಕುರುವಮ್ಮ ಹೇಳುವ ಪ್ರಕಾರ, ರಾಸಾಯನಿಕ ವಸ್ತುಗಳನ್ನು ಒಣಗಿಸುವುದು, ಕಾಗದದಲ್ಲಿ ಸುತ್ತುವುದು ಮತ್ತು ಸ್ಫೋಟಕ ರಾಸಾಯನಿಕಗಳನ್ನು ತುಂಬಿಸುವುದು ಮತ್ತು ಕಡೆಯದಾಗಿ ಅವುಗಳನ್ನು ಕಟ್ಟುವ ಕೆಲಸಕ್ಕೆ ಸುಮಾರು 250 ರೂ. ಕೂಲಿ ಕೊಡಲಾಗುತ್ತದೆ. ವಾರದ ಕೊನೆಯಲ್ಲಿ ಬಟವಾಡೆ ಮಾಡಲಾಗುತ್ತದೆ. ಅವರಿಗೆ ನಿಯಮಿತವಾಗಿ ಸಂಬಳದಲ್ಲಿ ಏರಿಕೆ ಇರುವುದಿಲ್ಲ. ಅದರ ಬದಲು ಅವರಿಗೆ ಬೋನಸ್‌ ನೀಡಲಾಗುತ್ತದೆ. ರಜೆಯಿಲ್ಲದೆ ಕಾರ್ಖಾನೆಯಲ್ಲಿ ಕೆಲಸ ಮಾಡುವವರುಗೆ ಪ್ರತಿ ಆರು ತಿಂಗಳಿಗೊಮ್ಮೆ 5,000 ರೂ.ಗಳ ಬೋನಸ್ ಪಡೆಯಲು ಅರ್ಹರಾಗಿರುತ್ತಾರೆ.

ಈ ಹಳ್ಳಿಯ ಅನೇಕ ಮಹಿಳೆಯರು ಕೆಲಸದ ಸ್ಥಳದಲ್ಲಿನ ಕಠಿಣ ಪರಿಸ್ಥಿತಿಗಳ ಹೊರತಾಗಿಯೂ ಈ ಕಾರ್ಖಾನೆಗಳಲ್ಲಿ ಕೆಲಸ ಮಾಡುತ್ತಾರೆ. ಏಕೆಂದರೆ ಹೆಚ್ಚಿನ ಕುಟುಂಬಗಳು ಮನೆ ನಡೆಸಲು ಇದೇ ಆದಾಯವನ್ನು ಅವಲಂಬಿಸಿವೆ. ಬೆಂಕಿಯಿಂದ ಸುಟ್ಟಗಾಯಗಳಿಗೆ ಬಲಿಯಾದ ದಿವಂಗತ ಕುರುವಮ್ಮಾಳ್, ತನ್ನ ಕುಟುಂಬವನ್ನು ಹೆಗಲ ಮೇಲೆ ಹೊತ್ತುಕೊಂಡ ಅಂತಹ ಮಹಿಳೆಯರಲ್ಲಿ ಒಬ್ಬರು. ಅವರ ಪತಿ ಸುಬ್ಬು ಕಣಿ ಅವರು ಕೊಳವೆಬಾವಿ ಕೆಲಸ ಮಾಡುವ ಸಂದರ್ಭದಲ್ಲಿ ಇದೇ ರೀತಿಯ ಬೆಂಕಿ ಅಪಘಾತದಲ್ಲಿ ಭಾಗಶಃ ದೃಷ್ಟಿ ಕಳೆದುಕೊಂಡಿದ್ದಾರೆ. ಅವರು ಈಗ ಕೂಲಿ ಮಾಡುವ ಸ್ಥಿತಿಯಲ್ಲಿಲ್ಲ. ಕುರುವಮ್ಮಾಳ್‌ ಅವರ ಸಾವಿನೊಂದಿಗೆ ಅವರ ಮೇಲೆ ಅವಲಂಬಿತವಾಗಿದ್ದ ಮೂರು ಜನರ ಕುಟುಂಬ ಅಸಹಾಯಕವಾಗಿದೆ. "ನಾನು ದೃಷ್ಟಿ ಕಳೆದುಕೊಂಡ ನಂತರ ಅವಳು ನನ್ನ ಪಾಲಿಗೆ ದಾರಿ ತೋರಿಸುವ ಬೆಳಕಾಗಿದ್ದಳು” ಎಂದು ಸುಬ್ಬು ಕಣಿ ಕಣ್ಣೀರು ಸುರಿಸುತ್ತಾ ಹೇಳುತ್ತಾರೆ.

PHOTO • M. Palani Kumar

ಬಾಲಮುರುಗನ್ ಅವರು ಪತ್ನಿ ಪಂಚವರ್ಣಂ ಮತ್ತು ಮಕ್ಕಳಾದ ಪಾಂಡಿಯರಾಜನ್ ಮತ್ತು ಭವಾನಿ ಅವರನ್ನು ಅಗಲಿದ್ದಾರೆ

PHOTO • M. Palani Kumar
PHOTO • M. Palani Kumar

ಎಡ: ಬಾಲಮುರುಗನ್ ತನ್ನ ಕುಟುಂಬವನ್ನು ಪ್ರವಾಸಕ್ಕೆ ಕರೆದೊಯ್ಯುತ್ತಿದ್ದರು. ಈ ಫೋಟೋವನ್ನು ಕನ್ಯಾಕುಮಾರಿಗೆ ಪ್ರವಾಸಕ್ಕೆ ಹೋದ ಸಂದರ್ಭದಲ್ಲಿ ತೆಗೆದುಕೊಳ್ಳಲಾಗಿದೆ. ಬಲ: ಭವಾನಿ ಅವರ ಫೋನಿನಲ್ಲಿರುವ ಬಾಲಮುರುಗನ್ ಅವರ ಫೋಟೋ

ಇದೇ ಬೆಂಕಿ ದುರಂತಕ್ಕೆ ಬಲಿಯಾದ ಇನ್ನೊಬ್ಬ ಮಹಿಳೆ ಇಂದ್ರಾಣಿ. ತೀವ್ರ ಮೊಣಕಾಲು ನೋವಿನಿಂದ ಬಳಲುತ್ತಿದ್ದ ಅವರಿಗೆ 30 ನಿಮಿಷಗಳಿಗಿಂತ ಹೆಚ್ಚು ಕಾಲ ನಿಲ್ಲುವುದು ಅವರಿಗೆ ಅಸಾಧ್ಯವಾಗಿತ್ತು. ಆದರೆ ಮೂರ್ಛೆರೋಗದಿಂದ ಬಳಲುತ್ತಿದ್ದ ತನ್ನ ಪತಿ ಮತ್ತು ತನ್ನ ಮಕ್ಕಳನ್ನು ನೋಡಿಕೊಳ್ಳುವ ಸಲುವಾಗಿ ಅವರು ಬೇರೆ ದಾರಿಯಿಲ್ಲದೆ ಈ ಕೆಲಸಕ್ಕೆ ಹೋಗುತ್ತಿದ್ದರು. ಮೊದಲು ಅವರ ನಾಲ್ಕು ಸದಸ್ಯರ ಕುಟುಂಬವು ಒಂದು ಕೋಣೆಯ ಮನೆಯಲ್ಲಿ ವಾಸಿಸುತ್ತಿತ್ತು. ನಂತರ ಸಾಲ ಮಾಡಿ ಮತ್ತೊಂದು ಕೋಣೆಯನ್ನು ಮನೆಗೆ ಸೇರಿಸಿದ್ದರು.

“ನಾನು ಮತ್ತು ಅಮ್ಮ ಸೇರಿ ಮುಂದಿನ ಆರು ತಿಂಗಳಿನಲ್ಲಿ ಸಾಲ ತೀರಿಸಲು ಯೋಜಿಸಿದ್ದೆವು. ಅವಳು ನನ್ನ ಮದುವೆಯ ಕುರಿತಾಗಿಯೂ ಚಿಂತಿತಳಾಗಿದ್ದಳು. ಅಪಸ್ಮಾರ ಪೀಡಿತ ತಂದೆ ಮತ್ತು ಅನಾರೋಗ್ಯ ಪೀಡಿತ ತಾಯಿಯಿರುವ ಬಡ ಹುಡುಗಿಯನ್ನು ಮದುವೆಯಾಗಲು ಯಾರು ತಾನೆ ಬಯಸುತ್ತಾರೆ?" ಎಂದು ಇಂದ್ರಾಣಿಯವರ ಮಗಳು ಕಾರ್ತೀಶ್ವರಿ ಕೇಳುತ್ತಾರೆ. ಅವರು ಈ ವರ್ಷ ಗ್ರೂಪ್‌ 4 ವಿಭಾಗದ ಸರ್ಕಾರಿ ಹುದ್ದೆಗಾಗಿ ಪರೀಕ್ಷೆ ಬರೆಯುವ ಆಲೋಚನೆಯಲ್ಲಿದ್ದರು. “ಕೋಚಿಂಗ್‌ ಕೇಂದ್ರಗಳು ಕೇಳುವಷ್ಟು ಫೀಸ್‌ ಕಟ್ಟುವ ಶಕ್ತಿ ನನಗಿಲ್ಲ” ಎಂದು ಅವರು ಹೇಳುತ್ತಾರೆ.

ಡಿಸೆಂಬರ್‌ 2023ರಲ್ಲಿ ಕುಟುಂಬವು ಇನ್ನೊಂದು ದುರಂತಕ್ಕೆ ಸಾಕ್ಷಿಯಾಯಿತು. ಕಾರ್ತೀಶ್ವರಿಯವರ ತಂದೆ ಕ್ರಿಸ್ಮಸ್‌ ಸ್ಟಾರ್‌ ಕಟ್ಟಲೆಂದು ಮೇಲೆ ಏರಿದ್ದವರು ಅಲ್ಲಿಂದ ಜಾರಿ ಬಿದ್ದರು. ಇದು ಅವರ ಪಾಲಿಗೆ ಮಾರಣಾಂತಿಕ ಕುಸಿತವಾಗಿ ಪರಿಣಮಿಸಿತು. ಪ್ರಸ್ತುತ ಕಾರ್ತೀಶ್ವರಿ ಕುಟುಂಬದ ಸಾಲಗಳು ಮತ್ತು ಮಹತ್ವಾಕಾಂಕ್ಷೆಯ ಗ್ರೂಪ್ 4 ಉದ್ಯೋಗದ ಕನಸಿನೊಂದಿಗೆ ಒಬ್ಬಂಟಿಯಾಗಿ ಉಳಿದುಹೋಗಿದ್ದಾರೆ.

ಊರಿನ ಗುರುವಮ್ಮ ಅವರಂತಹ ಕೆಲವು ಮಹಿಳೆಯರು ಬೆಂಕಿಪೊಟ್ಟಣ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು, ಈ ಕೆಲಸದಲ್ಲಿ 110 ಬೆಂಕಿಪೊಟ್ಟಣಗಳನ್ನು ಕತ್ತರಿಸಿ ಪ್ಯಾಕ್ ಮಾಡಿದರೆ ಕೇವಲ ಮೂರು ರೂಪಾಯಿ ಸಿಗುತ್ತಿತ್ತು. ನಂತರ ಮಹಿಳೆಯರಿಗೆ ಕಡಿಮೆ ಸಂಬಳ ನೀಡಿ ತಮ್ಮನ್ನು ಶೋಷಿಸಲಾಗುತ್ತಿದೆ ಎನ್ನುವ ಅರಿವು ಮೂಡಿದ ಕಾರಣ ಅವರೆಲ್ಲರೂ ಸಾಮೂಹಿಕವಾಗಿ ಈ ಕೆಲಸವನ್ನು ಬಿಟ್ಟು ಪಟಾಕಿ ಕಾರ್ಖಾನೆ ಕೆಲಸಕ್ಕೆ ಸೇರಲು ತೀರ್ಮಾನಿಸಿದರು.

PHOTO • M. Palani Kumar
PHOTO • M. Palani Kumar

ಎಡ: ಮುನೀಶ್ವರಿಯವರ ವಾರದ ಬಟವಾಡೆಯ ಲೆಕ್ಕದ ಪುಸ್ತಕ. ಅವರ ವಾರದ ಆದಾಯವು ಎಂದೂ 1,000 ರೂ.ಗಳನ್ನು ತಲುಪಿದ್ದಿಲ್ಲ. ಬಲ: ತಿರುಚೆಂಡೂರಿನಲ್ಲಿ ತೆಗೆದ ಫೋಟೋದಲ್ಲಿ ಸಂಧ್ಯಾ ಮತ್ತು ಮುನೀಶ್ವರಿ

PHOTO • M. Palani Kumar
PHOTO • M. Palani Kumar

ಎಡ: ಅಪಘಾತದಲ್ಲಿ ಮೃತಪಟ್ಟ ತನ್ನ ತಾಯಿ ಮುನೀಶ್ವರಿಗೆ ಸಂಧ್ಯಾ ಬರೆದ ಪತ್ರ. ಬಲ: ಸಂಧ್ಯಾ ತನ್ನ ಅಜ್ಜಿಯೊಂದಿಗೆ

ಈ ಹಳ್ಳಿಯಲ್ಲಿ ಉದ್ಯೋಗಕ್ಕೆ ಇರುವ ಏಕೈಕ ಆಯ್ಕೆಯೆಂದರೆ ಅದು ಕೃಷಿ. ಆದರೆ ಬರ ಮತ್ತು ಕ್ಷಾಮವು ಕೃಷಿ ಭೂಮಿಯನ್ನು ಕೃಷಿ ಮಾಡಲು ಯೋಗ್ಯವಲ್ಲದ ಭೂಮಿಯನ್ನಾಗಿ ಮಾಡಿರುವ ಕಾರಣ ಈಗ ಅದೊಂದು ಆಯ್ಕೆಯಾಗಿ ಉಳಿದಿಲ್ಲ. ಕೆಲವು ಪ್ರದೇಶಗಳಲ್ಲಿ, ಸಾಕಷ್ಟು ಅಂತರ್ಜಲವಿದ್ದರೂ, ಭೂಮಾಲೀಕರು ನ್ಯಾಯಯುತ ವೇತನವನ್ನು ಪಾವತಿಸುವುದಿಲ್ಲ. ಆದ್ದರಿಂದ, ಕುರುವಮ್ಮ ಅವರಂತಹ ಮಹಿಳೆಯರು ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಾರೆ ಜೊತೆಗೆ ಕುರಿ ಮತ್ತು ಜಾನುವಾರುಗಳನ್ನು ಸಹ ಸಾಕುತ್ತಾರೆ. ಅದರೆ, ಬರಗಾಲದಿಂದಾಗಿ ಜಾನುವಾರುಗಳಿಗೆ ಮೇಯಲು ಹುಲ್ಲುಗಾವಲುಗಳಿಲ್ಲದ ಕಾರಣ ಅವರು ಅನೇಕ ಸವಾಲುಗಳನ್ನು ಎದುರಿಸುತ್ತಾರೆ.

ಇನ್ನು ಗ್ರಾಮಸ್ಥರಿಗೆ ಲಭ್ಯವಿರುವ ಏಕೈಕ ಪರ್ಯಾಯ ಉದ್ಯೋಗವೆಂದರೆ ಅದು ಎಂಎನ್ಆರ್‌ಇಜಿಎ, ಇದನ್ನು ರಾಜ್ಯದಲ್ಲಿ ನೂರ್ ನಾಳ್ ವ್ಯಾಲೈ (100 ದಿನಗಳ ಕೆಲಸ) ಎಂದು ಕರೆಯಲಾಗುತ್ತದೆ. ಸರ್ಕಾರವು 100 ದಿನಗಳ ಕೆಲಸದ ಯೋಜನೆಯನ್ನು ವರ್ಷದ 365 ದಿನಗಳಿಗೆ ವಿಸ್ತರಿಸಿದರೆ ಹಳ್ಳಿಯ ಮಹಿಳೆಯರಿಗೆ ಪ್ರಯೋಜನವಾಗುತ್ತದೆ ಎಂದು ತಮ್ಮ ಪತ್ನಿ ತಂಗಮಲೈ ಅವರನ್ನು ಕಳೆದುಕೊಂಡ ಟಿ.ಮಹೇಂದ್ರನ್ ಹೇಳಿದರು.

ಈ ಪ್ರದೇಶದ ಪಟಾಕಿ ಕಂಪನಿಗಳಿಗೆ ಸರಿಯಾದ ಪರವಾನಗಿ ಇಲ್ಲ ಎನ್ನುವ ಮಹೇಂದ್ರನ್ ಅವುಗಳನ್ನು ಮೇಲ್ವಿಚಾರಣೆ ಮಾಡಬೇಕಾದ ಸರ್ಕಾರಿ ಅಧಿಕಾರಿಗಳು ಈ ಕಾರ್ಖಾನೆಗಳನ್ನು ಆರು ತಿಂಗಳಿಗಿಂತ ಹೆಚ್ಚು ಕಾಲ ಸ್ಥಗಿತಗೊಳಿಸಲು ಧೈರ್ಯ ಮಾಡುವುದಿಲ್ಲ ಎಂದು ಆರೋಪಿಸುತ್ತಾರೆ. ಪರಿಣಾಮವಾಗಿ, ಏಳನೇ ತಿಂಗಳಲ್ಲಿ ಕಾರ್ಖಾನೆ ಮತ್ತೆ ತೆರೆಯುತ್ತದೆ. ಇದು ಮೊದಲ ಅಪಘಾತವಲ್ಲ: ಅಕ್ಟೋಬರ್ 2023ರಲ್ಲಿ ಕೃಷ್ಣಗಿರಿಯಲ್ಲಿ ಇಂತಹದ್ದೇ ಒಂದು ಬೆಂಕಿ ಅವಘಡದಲ್ಲಿ ಎಂಟು ದಲಿತ ಮಕ್ಕಳು ಸಾವನ್ನಪ್ಪಿದ್ದಾರೆ. ಓದಿ: 'ಇಲ್ಲಿನ ಪ್ರತಿ ಮನೆಯೂ ಸ್ಮಶಾನದಂತಾಗಿದೆ '

ದುಃಖ, ವಿಯೋಗ ಮತ್ತು ಬದುಕುಳಿದವರು ಎದುರಿಸುತ್ತಿರುವ ಕಠಿಣ ಸವಾಲುಗಳಿಂದ ನಿರೂಪಿಸಲ್ಪಟ್ಟ ಈ ದುಃಖಕರ ಘಟನೆಯು ಸಾಮಾಜಿಕ ಮತ್ತು ಸರ್ಕಾರಿ ಸಹಾಯದ ತುರ್ತು ಅಗತ್ಯವನ್ನು ಎತ್ತಿ ತೋರಿಸಿದೆ. ಬಾಧಿತರಾದವರ ಬದುಕಿನ ಕತೆಗಳು ಇಲ್ಲಿ ಸುಧಾರಿತ ಕೆಲಸದ ವಾತಾವರಣ, ಸುರಕ್ಷತಾ ಮುನ್ನೆಚ್ಚರಿಕೆಗಳು ಮತ್ತು ಸಮಗ್ರ ಸಾಮಾಜಿಕ ಸುರಕ್ಷತಾ ಜಾಲದ ತಕ್ಷಣದ ಅಗತ್ಯವನ್ನು ಒತ್ತಿಹೇಳುತ್ತವೆ. ಪ್ರತಿಯೊಂದು ದುರಂತ ಘಟನೆಯು ಆಕಾಂಕ್ಷೆಗಳು, ಕಷ್ಟಗಳು ಮತ್ತು ತಮ್ಮ ಪ್ರೀತಿಪಾತ್ರರು ಅನುಭವಿಸುವ ಹೃದಯ ವಿದ್ರಾವಕ ದುಃಖವನ್ನು ಹೊಂದಿರುವ ವ್ಯಕ್ತಿಗಳನ್ನು ಒಳಗೊಂಡಿರುತ್ತದೆ ಎಂಬುದನ್ನು ಈ ಘಟನೆಗಳು ಸಾರಿ ಸಾರಿ ಹೇಳುತ್ತಿವೆ.

PHOTO • M. Palani Kumar
PHOTO • M. Palani Kumar

ಎಸ್.ಕುರುವಮ್ಮಾಳ್ (ಎಡ) ಅಪಘಾತದಲ್ಲಿ ನಿಧನರಾದರು. ಆಕೆಯ ಪತಿ ಸುಬ್ಬು ಕಣಿಯವರಿಗೆ ದೃಷ್ಟಿ ಸಮಸ್ಯೆಯಿದ್ದು, ಕುಟುಂಬವನ್ನು ಪೋಷಿಸುವ ಸಲುವಾಗಿ ಕುರುವಮ್ಮಾಳ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದವರು

PHOTO • M. Palani Kumar
PHOTO • M. Palani Kumar

ಎಡ: ಅಪಘಾತದಲ್ಲಿ ನಿಧನರಾದ ಇಂದ್ರಾಣಿ. ಈ ವೀಡಿಯೊವನ್ನು ಅವರ ಮಗಳು ಕಾರ್ತೀಶ್ವರಿ ತನ್ನ ರಜಾದಿನಗಳಲ್ಲಿ ತಾಯಿಯೊಂದಿಗೆ ಕಾರ್ಖಾನೆಗೆ ಹೋದಾಗ ತೆಗೆದಿದ್ದು. ಬಲ: ಇಂದ್ರಾಣಿಯವರ ಪತಿ ಮುರುಗಾನಂದಂ ಪೂರ್ತಿಯಾಗಿ ತನ್ನ ಪತ್ನಿಯ ಆರೈಕೆಯ ಮೇಲೆಯೇ ಅವಲಂಬಿತರಾಗಿದ್ದರು. ಪತ್ನಿಯ ಮರಣದ ನಂತರ ಅವರ ಆರೋಗ್ಯ ಸ್ಥಿತಿ ಹದಗೆಟ್ಟಿತು. ಡಿಸೆಂಬರ್ 2023ರಲ್ಲಿ, ಅವರು ಕುರ್ಚಿಯಿಂದ ಜಾರಿ ಬಿದ್ದು ನಿಧನರಾದರು

PHOTO • M. Palani Kumar
PHOTO • M. Palani Kumar

ಎಡಕ್ಕೆ: ಇಂದ್ರಾಣಿ ಸಾಯುವ ಮೊದಲು ಧರಿಸಿದ್ದ ಸೀರೆ. ಬಲ: ಇಂದ್ರಾಣಿ ನಿರ್ಮಿಸಿದ ಸಣ್ಣ ಕೋಣೆಯಲ್ಲಿ ನಿಂತಿರುವ ಕಾರ್ತೀಶ್ವರಿ

PHOTO • M. Palani Kumar

ಎಸ್.ಮುರುಘಾಯಿ ಅವರಿಗೂ ಸುಟ್ಟ ಗಾಯಗಳಾಗಿದ್ದವು, ಅದೃಷ್ಟವಶಾತ್‌ ಅವರು ಅವಘಡದಲ್ಲಿ ಬದುಕುಳಿದರು

PHOTO • M. Palani Kumar

ತಂಗಮಲೈಯವರ ಪತಿ ತನ್ನ ಹೆಂಡತಿ ಫೋಟೊ ಹುಡುಕುತ್ತಿದ್ದಾರೆ. ಅವರ ಪತ್ನಿಯೂ ಅಪಘಾತದಲ್ಲಿ ಮೃತರಾಗಿದ್ದಾರೆ

PHOTO • M. Palani Kumar

ಮುತ್ತುಲಕ್ಷ್ಮಿಯವರ ಗಂಡ ತಾವು ದಂಪತಿ ಒಟ್ಟೆಗೆ ತೆಗೆಸಿಕೊಂಡ ಫೋಟೊ ಜೊತೆ

PHOTO • M. Palani Kumar

“ಕಾರ್ತೀಶ್ವರಿಯವರ ಬದುಕಿನಲ್ಲಿ ಒಂದಷ್ಟು ಬೆಳಕನ್ನು ತರುತ್ತದೆ ಎನ್ನುವ ನಂಬಿಕೆಯೊಂದಿಗೆ ಅಪಘಾತದ ಕುರಿತಾದ ಈ ಫೋಟೋ ಕಥಾನಕ ರಚಿಸಿದ್ದೇನೆ' ಎಂದು ಛಾಯಾಗ್ರಾಹಕ ಪಳನಿ ಕುಮಾರ್ ಹೇಳುತ್ತಾರೆ

ಅನುವಾದ: ಶಂಕರ. ಎನ್. ಕೆಂಚನೂರು

M. Palani Kumar

एम. पलनी कुमार २०१९ सालचे पारी फेलो आणि वंचितांचं जिणं टिपणारे छायाचित्रकार आहेत. तमिळ नाडूतील हाताने मैला साफ करणाऱ्या कामगारांवरील 'काकूस' या दिव्या भारती दिग्दर्शित चित्रपटाचं छायांकन त्यांनी केलं आहे.

यांचे इतर लिखाण M. Palani Kumar
Editor : Rajasangeethan

Rajasangeethan is a Chennai based writer. He works with a leading Tamil news channel as a journalist.

यांचे इतर लिखाण Rajasangeethan
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

यांचे इतर लिखाण Shankar N. Kenchanuru