ಬಾಲ್ಯದಲ್ಲಿ ರಜಿತಾ ತನ್ನ ತಂದೆ ಮತ್ತು ಅಜ್ಜ ಚಿಕ್ಕ ಹುಡುಗರಿಗೆ ತರಬೇತಿ ನೀಡುವುದನ್ನು ಕಿಟಕಿಯಿಂದ ಇಣುಕಿ ನೋಡುತ್ತಿದ್ದರು. ಆ ಹುಡುಗರ ಜೊತೆ ತನಗೂ ತರಬೇತಿ ಪಡೆಯಲು ಏಕೆ ಸಾಧ್ಯವಿಲ್ಲ ಎನ್ನುವ ಕುರಿತು ಯೋಚಿಸುತ್ತಿದ್ದರು. ವಿಶೇಷವಾಗಿ ಬೊಂಬೆಗಳು ಆ ಪುಟ್ಟ ಹುಡುಗಿಯ ಕಣ್ಣನ್ನು ಸೆಳೆಯುತ್ತಿದ್ದವು. ಕಿವಿಗಳಿಗೆ ಪದ್ಯಗಳ ವಿಶಿಷ್ಟ ಲಯ ಇಂಪೆನ್ನಿಸುತ್ತಿತ್ತು.

“ಗೊಂಬೆಯಾಟದ ಕಡೆಗಿನ ನನ್ನ ಮೋಹಭರಿತ ಕುತೂಹಲ ತಾತನ ಕಣ್ಣಿಗೆ ಬಿತ್ತು. ಅವರು ಪದ್ಯಗಳನ್ನು ಕಲಿಸಿಕೊಡುವುದಾಗಿ ಹೇಳಿದರು” ಎನ್ನುತ್ತಾರೆ 33 ವರ್ಷದ ರಜಿತಾ.

ರಜಿತಾ ಪುಲವರ್‌ ಶೋರನೂರಿನಲ್ಲಿರುವ ಕುಟುಂಬದ ಚಿತ್ರಶಾಲೆಯಲ್ಲಿನ ಮರದ ಬೆಂಚ್‌ ಮೇಲೆ ಕುಳಿತು ನಮ್ಮೊಂದಿಗೆ ಮಾತನಾಡುತ್ತಿದ್ದರು. ಇದೇ ಚಿತ್ರಶಾಲೆಯಲ್ಲಿ ಗೊಂಬೆಗಳಿಗೆ ಮುಖವರ್ಣಿಕೆಗಳನ್ನು ಬರೆಯಲಾಗುತ್ತದೆ.  ಅವರ ಮುಂದಿದ್ದ ಮೇಜಿನ ಮೇಲೆ ದಬ್ಬಳ, ಉಳಿ ಮತ್ತು ಸುತ್ತಿಗೆಯಂತಹ ಸಲಕರಣೆಗಳು ಬಿದ್ದಿದ್ದವು.

ಅಂದು ಮಧ್ಯಾಹ್ನ ಹೊತ್ತು ಚಿತ್ರಶಾಲೆಯಲ್ಲಿ ಎಲ್ಲರೂ ವಿರಾಮದಲ್ಲಿದ್ದರು. ಬೊಂಬೆಗಳನ್ನು ತಯಾರಿಸುವ ಶೆಡ್ಡಿನಲ್ಲಿ ರಜಿತಾ ಅವರ ಪಕ್ಕದಲ್ಲಿದ್ದ ಫ್ಯಾನಿನ ಸದ್ದನ್ನು ಹೊರತುಪಡಿಸಿದರೆ ಬೇರೆ ಸದ್ದು ಕೇಳುತ್ತಿರಲಿಲ್ಲ. ಹೊರಗಿನ ತೆರೆದ ಟೆರೇಸ್‌ ಮೇಲೆ ಚರ್ಮದ ಹಾಳೆಗಳನ್ನು ಒಣಗಲು ಹಾಕಲಾಗಿತ್ತು. ನಂತರ ಅವುಗಳನ್ನು ಕತ್ತರಿಸಿ ಗೊಂಬೆಗಳನ್ನು ಮಾಡಲಾಗುತ್ತದೆ.

“ಇವು ನಾವು ಆಧುನಿಕ ಕತೆಗಳನ್ನು ಪ್ರಸ್ತುತಪಡಿಸಲು ಬಳಸುವ ಕೈಗೊಂಬೆಗಳು” ಎಂದು ತಾನು ಕೆಲಸ ಮಾಡುತ್ತಿದ್ದ ಗೊಂಬೆಯೊಂದರತ್ತ ತೋರಿಸುತ್ತಾ ರಜಿತಾ ಹೇಳಿದರು. ತೊಲ್ಪಾವಕೂತು ಬೊಂಬೆಯಾಟವು ಭಾರತದ ಮಲಬಾರ್ ಕರಾವಳಿಯ ಸಾಂಪ್ರದಾಯಿಕ ಕಲಾ ಪ್ರಕಾರವಾಗಿದ್ದು, ಮೂಲತಃ ಭದ್ರಕಾಳಿ ದೇವಿಯ ವಾರ್ಷಿಕ ಉತ್ಸವದ ಸಮಯದಲ್ಲಿ ದೇವಾಲಯದ ಆವರಣದಲ್ಲಿ ಪ್ರದರ್ಶಿಸಲಾಗುತ್ತದೆ.

PHOTO • Megha Radhakrishnan
PHOTO • Megha Radhakrishnan

ಎಡ: ಸಮಕಾಲೀನ ಪಾತ್ರಗಳಿಗಾಗಿ ರಚಿಸಲಾದ ಗೊಂಬೆಗಳೊಂದಿಗೆ ರಜಿತಾ. ಬಲ: ತನ್ನ ತಂದೆ ರಾಮಚಂದ್ರ ಅವರೊಂದಿಗೆ ಬೊಂಬೆಯಾಟ ಪ್ರದರ್ಶಿಸುತ್ತಿರುವುದು

ರಜಿತಾ ಅವರ ಅಜ್ಜ ಕೃಷ್ಣನ್ ಕುಟ್ಟಿ ಪುಲವರ್ ಈ ಕಲೆಯನ್ನು ಆಧುನೀಕರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಅವರು ಅದನ್ನು ದೇವಾಲಯಗಳ ಆಚೆಗೆ ತೆಗೆದುಕೊಂಡು ಹೋದರು ಮತ್ತು ಅದರ ಮೂಲವಾದ ರಾಮಾಯಣದಾಚೆಗಿನ ಕಥೆಗಗಳನ್ನು ಪ್ರದರ್ಶಿಸಿದರು. (ಓದಿ: ತಮ್ಮ ಕಲೆಯ ಎಲ್ಲೆ ವಿಸ್ತರಿಸುತ್ತಿರುವ ಕೇರಳದ ಬೊಂಬೆಯಾಟಗಾರರು ).

ಹೆಜ್ಜೆಗಳನ್ನು ಅನುಸರಿಸಿದ ಮೊಮ್ಮಗಳು ಬೊಂಬೆಯಾಟ ತಂಡವನ್ನು ಸೇರಿದ ಮೊದಲ ಮಹಿಳಾ ಪ್ರದರ್ಶಕಿ ಎನ್ನಿಸಿಕೊಂಡಿದ್ದಾರೆ. ಅವರು 2021ರಲ್ಲಿ ತಮ್ಮದೇ ಆದ ಪೂರ್ಣ ಪ್ರಮಾಣದ ಮಹಿಳಾ ತಂಡವನ್ನು ಸ್ಥಾಪಿಸಿದರು, ಇದು ತೋಳ್‌ಪಾವಕೂತು ಬೊಂಬೆಯಾಟದ ಇತಿಹಾಸದಲ್ಲಿ ಮೊದಲ ಮಹಿಳಾ ತಂಡ.

ಈ ಪ್ರಯಾಣ ದೀರ್ಘವಾಗಿತ್ತು.

ಲಯಬದ್ಧ ಪದ್ಯಗಳನ್ನು ಕರಗತ ಮಾಡಿಕೊಳ್ಳುವುದು ಸವಾಲಿನ ಕೆಲಸವಾಗಿತ್ತು ಏಕೆಂದರೆ ಅವು ಮಲಯಾಳಂ ಮಾತನಾಡುವ ರಜಿತಾಗೆ ಗೊತ್ತಿಲ್ಲದ ತಮಿಳು ಭಾಷೆಯಲ್ಲಿದ್ದವು. ಆದರೆ ಅರ್ಥ ಮತ್ತು ಉಚ್ಚಾರಣೆಯ ವಿವರಗಳನ್ನು ಗ್ರಹಿಸುವಾಗ ಅವರ ತಂದೆ ಮತ್ತು ಅಜ್ಜ ಅವರೊಂದಿಗೆ ತಾಳ್ಮೆಯಿಂದ ಜೊತೆ ನೀಡಿದ್ದರು: "ನನ್ನ ಅಜ್ಜ ತಮಿಳು ವರ್ಣಮಾಲೆಯನ್ನು ಕಲಿಸುವ ಮೂಲಕ ಪ್ರಾರಂಭಿಸಿ ನಂತರ ನಿಧಾನವಾಗಿ ಪದ್ಯಗಳನ್ನು ಪರಿಚಯಿಸಿದರು."

"ಅವರು ಮಕ್ಕಳಾದ ನಮಗೆ ತುಂಬಾ ಆಸಕ್ತಿ ಹುಟ್ಟಿಸುವಂತಹ ಪದ್ಯಗಳನ್ನು ಆಯ್ಕೆ ಮಾಡಿಕೊಂಡಿದ್ದರು" ಎಂದು ರಜಿತಾ ಮಾತು ಮುಂದುವರಿಸುತ್ತಾರೆ. ಅವರು ತನ್ನ ಅಜ್ಜನಿಂದ ಕಲಿತ ಮೊದಲ ಪದ್ಯವು ರಾಮಾಯಣದ ಒಂದು ದೃಶ್ಯವಾಗಿದ್ದು, ಅದರಲ್ಲಿ ಹನುಮಂತರ ರಾವಣನಿಗೆ ಸವಾಲು ಹಾಕುತ್ತಾನೆ:

“ಅಡಾ ತಡತ್ತು ಚೇಯ್ದಾ ನೀ
ಅಂದ ನಾದಾನ್‌ ದೇವಿಯೇ
ವಿಡಾ ತಡತ್‌ ಪೋಮೆಡಾ
ಜಲತಿ ಚೂಳಿ ಲಂಗಯೇ
ವೀಂಡಾತು ಪೋಕುಮೋ
ಎಡಾ ಪೋಡಾ ಈ ರಾವಣಾ”

ಎಲವೋ ರಾವಣ
ಎಲವೋ ಪಾಪಿಯೇ
ನೀನು ಭೂಮಿ ಪುತ್ರಿಯ ಬಂಧಿಸಿಟ್ಟಿರುವೆ
ನನ್ನ ಬಾಲದಲ್ಲೇ ನಿನ್ನ ಲಂಕೆಯ ಸುಡುವೆನು
ನಿನ್ನ ಕತೆ ಮುಗಿಯಿತು ರಾವಣ!

PHOTO • Megha Radhakrishnan

ಪ್ರದರ್ಶನದ ಸಮಯದಲ್ಲಿ ರಜಿತಾ ಮತ್ತು ಅವರ ತಂಡ

ಕುಟುಂಬದ ಗಂಡುಮಕ್ಕಳು ಅವರನ್ನು ಉತ್ಸಾಹದಿಂದ ಸ್ವಾಗತಿಸಿದರು, ಮತ್ತು ವಿಶೇಷವಾಗಿ, ಅವರ ಸಹೋದರ ರಾಜೀವ್ ತುಂಬಾ ಪ್ರೋತ್ಸಾಹಿಸಿದರು ಎಂದು ರಜಿತಾ ಹೇಳುತ್ತಾರೆ. "ಅವರು ಮಹಿಳಾ ತಂಡವನ್ನು ಕಟ್ಟುವಂತೆ ನನ್ನನ್ನು ಪ್ರೇರೇಪಿಸಿದರು."

ಮೊದಲಿನಿಂದಲೂ ದೇವಾಲಯಗಳಲ್ಲಿ ಪ್ರದರ್ಶನ ನೀಡಲು ಮಹಿಳೆಯರಿಗೆ ಅವಕಾಶವಿರಲಿಲ್ಲ (ಅದು ಈಗಲೂ ಬಹುತೇಕ ಮುಂದುವರೆದಿದೆ), ಹೀಗಾಗಿ ಕಲೆಯಯನ್ನು ಕಲಿತ ನಂತರ, ರಜಿತಾ ಸಮಕಾಲೀನ ವೇದಿಕೆಯಲ್ಲಿ ತಮ್ಮ ಕುಟುಂಬದ ತಂಡದೊಂದಿಗೆ ಕೆಲಸ ಮಾಡಲು ಪ್ರಾರಂಭಿಸಿದರು. ಆದರೆ ಆರಂಭದಲ್ಲಿ, ಅವರು ತೆರೆಮರೆಯಲ್ಲಿಯೇ ಕೆಲಸ ಮಾಡುವುದಕ್ಕೆ ಆದ್ಯತೆ ನೀಡಿದರು.

"ಸೀತೆಯಂತಹ ಸ್ತ್ರೀ ಪಾತ್ರಗಳಿಗೆ (ರಾಮಾಯಣದ ಆಧುನಿಕ ರೂಪಾಂತರಗಳಲ್ಲಿ) ನಾನು ದನಿ ನೀಡಿದೆ, ಆದರೆ ಬೊಂಬೆಗಳನ್ನು ನಿರ್ವಹಿಸಲು ಅಥವಾ ಪ್ರೇಕ್ಷಕರನ್ನು ಉದ್ದೇಶಿಸಿ ಮಾತನಾಡಲು ನನಗೆ ವಿಶ್ವಾಸವಿರಲಿಲ್ಲ" ಎಂದು ಅವರು ಹೇಳುತ್ತಾರೆ. ಆದರೆ ತನ್ನ ತಂದೆ ಮಕ್ಕಳಿಗಾಗಿ ನಡೆಸುತ್ತಿದ್ದಕಾರ್ಯಾಗಾರಗಳಲ್ಲಿ ಭಾಗವಹಿಸಿದ್ದು ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಲು ಅವರಿಗೆ ಸಹಾಯ ಮಾಡಿತು. "ಕಾರ್ಯಾಗಾರದ ಸಮಯದಲ್ಲಿ, ನಾನು ಅನೇಕ ಜನರೊಂದಿಗೆ ಸಂವಹನ ನಡೆಸಬೇಕಾಗುತ್ತಿತ್ತು. ಆಗ ನನಗೆ ಜನಸಮೂಹವನ್ನು ಎದುರಿಸುವ ಬಗ್ಗೆ ನನಗೆ ಹೆಚ್ಚು ವಿಶ್ವಾಸ ಬಂತು.

ರಜಿತಾ ಬೊಂಬೆಗಳನ್ನು ತಯಾರಿಸುವ ಕೌಶಲವನ್ನು ಸಹ ಕರಗತ ಮಾಡಿಕೊಂಡರು. "ಕಾಗದದ ಮೇಲೆ ಬೊಂಬೆಗಳನ್ನು ರಚಿಸುವ ಮೂಲಕ ಕಲಿಕೆಯನ್ನು ಪ್ರಾರಂಭಿಸಿದೆ. ನನ್ನ ಪೋಷಕರು ಮತ್ತು ನನ್ನ ಸಹೋದರನೇ ನನ್ನ ಗುರುಗಳು" ಎಂದು ಅವರು ಹೇಳುತ್ತಾರೆ. "ಚರ್ಮದ ಮೇಲೆ ಮಾದರಿಗಳನ್ನು ಬಿಡಿಸುವುದು ಮತ್ತು ಬೊಂಬೆಗಳಿಗೆ ಜೀವ ತುಂಬುವ ಬಣ್ಣಗಳನ್ನು ಸೇರಿಸುವುದನ್ನು ನಂತರ ನಿಧಾನವಾಗಿ ಕಲಿತೆ." ರಾಮಾಯಣದ ಬೊಂಬೆಗಳು ಉತ್ಪ್ರೇಕ್ಷಿತ ಮುಖದ ಲಕ್ಷಣಗಳನ್ನು ಹೊಂದಿದ್ದರೆ, ಸಮಕಾಲೀನ ಪ್ರದರ್ಶನಗಳ ಬೊಂಬೆಗಳು ಹೆಚ್ಚು ವಾಸ್ತವಿಕವಾಗಿರುತ್ತವೆ. "ಮಹಿಳೆಯ ವಯಸ್ಸಿನ ಆಧಾರದ ಮೇಲೆ ವೇಷಭೂಷಣಗಳು ಸಹ ಬದಲಾಗುತ್ತವೆ - ಅವಳು ವಯಸ್ಸಾದವಳಾಗಿದ್ದರೆ, ಬೊಂಬೆ ಸೀರೆಯನ್ನು ಉಟ್ಟಿರುತ್ತದೆ, ಹುಡುಗಿಯಾದರೆ, ಟಾಪ್ ಮತ್ತು ಜೀನ್ಸ್ ತೊಡಿಸಲಾಗುತ್ತದೆ" ಎಂದು ರಜಿತಾ ವಿವರಿಸುತ್ತಾರೆ.

ತೋಳ್ಪಾವಕೂತ್ತು ಆಟದಲ್ಲಿದ್ದ ಪುರುಷಪ್ರಾಧಾನ್ಯತೆಯನ್ನು ತೊಡೆದು ಹಾಕಲು ರಜಿತಾ ಅವರಿಗೆ ಬೆಂಬಲ ನೀಡಿದ್ದು ಕುಟುಂಬದ ಪುರುಷರಷ್ಟೇ ಅಲ್ಲ. ರಜಿತಾ ಅವರಿಗೂ ಮೊದಲು ಅವರ ತಾಯಿಯಾದ ರಾಜಲಕ್ಷಿಯವರೂ ಈ ಮೇಳದಲ್ಲಿ ತಮ್ಮ ಸ್ಥಾನವನ್ನು ಸ್ಥಾಪಿಸಿದ್ದರು.

1986ರಲ್ಲಿ ರಜಿತಾ ಅವರ ತಂದೆಯಾದ ರಾಮಚಂದ್ರ ಅವರನ್ನು ಮದುವೆಯಾದ ನಂತರ, ರಾಜಲಕ್ಷ್ಮಿ ಬೊಂಬೆಯಾಟಗಾರರಿಗೆ ಬೊಂಬೆಗಳನ್ನು ತಯಾರಿಸಲು ಸಹಾಯ ಮಾಡುವ ಮೂಲಕ ಕುಟುಂಬದಲ್ಲಿನ ಬೊಂಬೆಯಾಟದಲ್ಲಿ ತೊಡಗಿಸಿಕೊಂಡರು. ಆದರೆ ಅವರಿಗೆ ಪದ ಹೇಳಲು ಅಥವಾ ಪ್ರದರ್ಶನ ನೀಡಲು ಅವಕಾಶ ಸಿಕ್ಕಿರಲಿಲ್ಲ. "ರಜಿತಾಳ ಪ್ರಯಾಣವನ್ನು ನೋಡಿದಾಗ, ತೃಪ್ತಿಯೆನ್ನಿಸುತ್ತದೆ. ನಾನು ಚಿಕ್ಕವಳಿದ್ದಾಗ ಸಾಧ್ಯವಾಗದ್ದನ್ನು ಅವಳು ಈಗ ಸಾಧಿಸಿದ್ದಾಳೆ" ಎಂದು ರಾಜಲಕ್ಷ್ಮಿ ಹೇಳುತ್ತಾರೆ.

PHOTO • Courtesy: Krishnankutty Pulvar Memorial Tholpavakoothu Kalakendram, Shoranur
PHOTO • Courtesy: Krishnankutty Pulvar Memorial Tholpavakoothu Kalakendram, Shoranur

ಎಡಕ್ಕೆ: ರಜಿತಾ ಮತ್ತು ಅವರ ಸಹೋದರ ರಾಜೀವ್ ಕೈಗೊಂಬೆಯನ್ನು ತೋರಿಸುತ್ತಿದ್ದಾರೆ. ಬಲ: ಅಭ್ಯಾಸದ ಸಮಯದಲ್ಲಿ ಮಹಿಳಾ ಬೊಂಬೆಯಾಟಗಾರರು

PHOTO • Megha Radhakrishnan
PHOTO • Megha Radhakrishnan

ಎಡ: ರಾಜಲಕ್ಷ್ಮಿ (ಎಡ), ಅಶ್ವತಿ (ಮಧ್ಯ) ಮತ್ತು ರಜಿತಾ ಬೊಂಬೆಗಳನ್ನು ತಯಾರಿಸುತ್ತಿದ್ದಾರೆ. ಬಲ: ರಜಿತಾ ಸುತ್ತಿಗೆ ಮತ್ತು ಉಳಿಯನ್ನು ಬಳಸಿ ಚರ್ಮದಿಂದ ಬೊಂಬೆಯನ್ನು ತಯಾರಿಸುತ್ತಾರೆ

*****

ಅಶ್ವತಿಯವರಿಗೆ ಆರಂಭದಲ್ಲಿ ಈ ಕಲೆಯಲ್ಲಿ ಆಸಕ್ತಿ ಇದ್ದಿರಲಿಲ್ಲ. ಅವರು ತಾನೋರ್ವ ಬೊಂಬೆಯಾಟದ ಕಲಾವಿದೆಯಾಗುತ್ತೇನೆ ಎನ್ನುವ ಕನಸನ್ನೂ ಕಂಡವರಲ್ಲ. ಬೊಂಬೆಯಾಟದ ಕುಟುಂಬಕ್ಕೆ ಮದುವೆಯಾದ ನಂತರ, "ನಾನು ಈ ಕಲಾ ಪ್ರಕಾರವನ್ನು ಮೆಚ್ಚಲು ಪ್ರಾರಂಭಿಸಿದೆ" ಎಂದು ಅವರು ಹೇಳುತ್ತಾರೆ. ಆದರೆ ಧಾರ್ಮಿಕ ರೂಪದ ಗೊಂಬೆಯಾಟ ನಿಧಾನವಾಗಿರುತ್ತದೆ ಮತ್ತು ಇದರಲ್ಲಿನ ಪದಗಳು ಕುತೂಹಲ ಕೆರಳಿಸುತ್ತಿರಲಿಲ್ಲ, ಹೀಗಾಗಿ ಅವರು ಅದನ್ನು ಕಲಿಯುವ ಕುರಿತು ಆಸಕ್ತಿ ತೋರಿರಲಿಲ್ಲ. ಆದರೆ ಅವರ ಪತಿ ರಾಜೀವ್ ಮತ್ತು ತಂಡದ ಸಮಕಾಲೀನ ಗೊಂಬೆಯಾಟದ ಪ್ರದರ್ಶನಗಳನ್ನು ನೋಡುತ್ತಾ ಅವರಲ್ಲಿ ಈ ಕುರಿತು ಆಸಕ್ತಿ ಮೂಡತೊಡಗಿತು. ನಂತರ ಈ ಕಲೆಯನ್ನು ಕಲಿತು ಅವರೂ ರಜಿತಾ ಅವರೊಂದಿಗೆ ಸೇರಿಕೊಂಡರು.

ಮುಂದೆ ರಾಮಚಂದ್ರ ಅವರು ತಮ್ಮ ತಂಡದಲ್ಲಿ ಇನ್ನಷ್ಟು ಮಹಿಳೆಯರನ್ನು ತೊಡಗಿಸಿಕೊಂಡಿದ್ದರು ಮತ್ತು ಇದು ನೆರೆಯ ಮನೆಗಳಿಂದ ಹುಡುಗಿಯರನ್ನು ತಂಡವನ್ನು ಸೇರಲು ಆಹ್ವಾನಿಸುವ ಮೂಲಕ ಸಂಪೂರ್ಣ ಮಹಿಳಾ ಬೊಂಬೆಯಾಟ ಗುಂಪನ್ನು ರಚಿಸಲು ರಜಿತಾ ಅವರನ್ನು ಪ್ರೇರೇಪಿಸಿತು. ಮೊದಲ ತಂಡದಲ್ಲಿ ಎಂಟು ಸದಸ್ಯರಿದ್ದರು - ನಿವೇದಿತಾ, ನಿತ್ಯಾ, ಸಂಧ್ಯಾ, ಶ್ರೀನಂದ, ದೀಪಾ, ರಾಜಲಕ್ಷ್ಮಿ ಮತ್ತು ಅಶ್ವತಿ.

“ನಾವು ನನ್ನ ತಂದೆಯವರ ಮಾರ್ಗದರ್ಶನದಲ್ಲಿ ತರಬೇತಿ ತರಗತಿಗಳನ್ನು ಆರಂಭಿಸಿದೆವು. ಈ ಹುಡುಗಿಯರಲ್ಲಿ ಹೆಚ್ಚಿನವರು ಶಾಲಾ ವಿದ್ಯಾರ್ಥಿಗಳಾಗಿದ್ದ ಕಾರಣ, ರಜಾ ದಿನಗಳಲ್ಲಿ ಅಥವಾ ಅವರಿಗೆ ಬಿಡುವಿರುವ ಸಮಯದಲ್ಲಿ ತರಬೇತಿ ನೀಡುತ್ತಿದ್ದೆವು. ಮಹಿಳೆಯರು ಗೊಂಬೆಯಾಟದಲ್ಲಿ ಭಾಗವಹಿಸಬಾರದು ಎನ್ನುವ ಸಂಪ್ರದಾಯವಿದ್ದರೂ, ಕುಟುಂಬಗಳು ನಮಗೆ ಸಾಕಷ್ಟು ಬೆಂಬಲ ನೀಡಿದವು” ರಜಿತಾ ಹೇಳುತ್ತಾರೆ.

ಒಟ್ಟಿಗೆ ಪ್ರದರ್ಶನ ನೀಡುವ ಸಮಯದಲ್ಲಿ, ಮಹಿಳೆಯರು ಮತ್ತು ಹುಡುಗಿಯರು ನಿಕಟ ಬಾಂಧವ್ಯವನ್ನು ಬೆಳೆಸಿಕೊಂಡಿದ್ದಾರೆ. "ನಾವು ಒಂದು ಕುಟುಂಬದಂತೆ" ಎಂದು ರಜಿತಾ ಹೇಳುತ್ತಾರೆ ಮತ್ತು "ನಾವು ಹುಟ್ಟುಹಬ್ಬ ಮತ್ತು ಇತರ ಕೌಟುಂಬಿಕ ಸಮಾರಂಭಗಳನ್ನು ಒಟ್ಟಿಗೆ ಆಚರಿಸುತ್ತೇವೆ" ಎಂದು ಹೇಳುತ್ತಾರೆ.

ಅವರ ಮೊದಲ ಪ್ರದರ್ಶನವು ಡಿಸೆಂಬರ್ 25, 2021ರಂದು ನಡೆಯಿತು. "ನಾವು ಕಷ್ಟಪಟ್ಟು ಕೆಲಸ ಮಾಡಿದ್ದೆವು ಮತ್ತು ತಯಾರಿ ನಡೆಸಲು ಸಾಕಷ್ಟು ಸಮಯವನ್ನು ಕಳೆದಿದ್ದೆವು" ಎಂದು ರಜಿತಾ ಹೇಳುತ್ತಾರೆ. ಅದೇ ಮೊದಲ ಬಾರಿಗೆ ಮಹಿಳಾ ಗುಂಪು ತೋಳ್ಪಾವಕೂತ್ತು ಗೊಂಬೆಯಾಟವನ್ನು ಪ್ರದರ್ಶಿಸಲು ಹೊರಟಿತ್ತು. ಪಾಲಕ್ಕಾಡ್‌ ಬಳಿ ಸಬಾಂಗಣವೊಂದರಲ್ಲಿ ಕೇರಳ ಸರ್ಕಾರದ 'ಸಮಮ್' ಕಾರ್ಯಕ್ರಮದ ಅಡಿಯಲ್ಲಿ ಈ ಕಾರ್ಯಕ್ರಮ ನಡೆದಿತ್ತು.

PHOTO • Courtesy: Krishnankutty Pulvar Memorial Tholpavakoothu Kalakendram, Shoranur
PHOTO • Megha Radhakrishnan

ಎಡ: ಪೆಣ ಪಾವಕೂತ್ತು ತಂಡವು ಕಾರ್ಯಕ್ರಮವೊಂದರಲ್ಲಿ ಫೋಟೊಗೆ ನಿಂತಿರುವುದು. ಇದು ಮೊದಲ ಮಹಿಳಾ ತೋಳ್ಪಾವಕೂತ್ತು ತಂಡ. ಬಲ: ಬೊಂಬೆಗಳನ್ನು ಹಿಡಿದಿರುವ ತಂಡದ ಸದಸ್ಯರು

ಅದು ಚಳಿಗಾಲವಾದರೂ ದೀಪದ ಬೆಳಕಿನ ಶಾಖಕ್ಕೆ ಪ್ರದರ್ಶನ ನೀಡುವುದು ಕಷ್ಟವಾಗುತ್ತಿತ್ತು. “ನಮ್ಮಲ್ಲಿ ಕೆಲವರಿಗೆ ಬಿಸಿಗೆ ಬೊಬ್ಬೆಗಳೆದ್ದಿದ್ದವು, ಪರೆದೆಯ ಹಿಂದೆ ಭಯಂಕರ ಸೆಕೆಯಿತ್ತು” ಎನ್ನುತ್ತಾರೆ ರಜಿತಾ. ಆದರೆ ಎಲ್ಲರೂ ಪ್ರದರ್ಶನ ನೀಡುವ ಕುರಿತು ಕಟಿಬದ್ಧರಾಗಿದ್ದರು. “ಅಂದು ನಮ್ಮ ಪ್ರದರ್ಶನ ಯಶಸ್ವಿಯಾಗಿತ್ತು” ಎಂದು ಅವರು ಹೇಳುತ್ತಾರೆ.

ಮಲಯಾಳಂನಲ್ಲಿ 'ಸಮಾನ' ಎಂಬ ಅರ್ಥವನ್ನು ನೀಡುವ ಸಮಮ್ ಕಾರ್ಯಕ್ರಮವು ಮಹತ್ವಾಕಾಂಕ್ಷೆಯ ಮಹಿಳಾ ಕಲಾವಿದರಿಗೆ ವೇದಿಕೆಯನ್ನು ಒದಗಿಸುತ್ತದೆ ಮತ್ತು ಇದನ್ನು ಪಾಲಕ್ಕಾಡ್ ನ ಮಹಿಳಾ ಮತ್ತು ಮಕ್ಕಳ ಆರೈಕೆ ಇಲಾಖೆ ಆಯೋಜಿಸುತ್ತದೆ. ರಜಿತಾ ಅವರ ತಂಡದ ಪ್ರದರ್ಶನವು ಶಿಕ್ಷಣ, ಉದ್ಯೋಗ ಮತ್ತು ಕುಟುಂಬ ಜೀವನದಲ್ಲಿನ ಮಹಿಳೆಯರ ಹೋರಾಟಗಳನ್ನು ಎತ್ತಿ ತೋರಿಸಿತು ಮತ್ತು ಅವರ ಹಕ್ಕುಗಳನ್ನು ಬಲಪಡಿಸುವ ಮಾರ್ಗಗಳ ಕುರಿತು ಮಾತನಾಡಿತು.

"ಈ ಅಸಮಾನತೆಯ ವಿರುದ್ಧ ಹೋರಾಡಲು ನಾವು ನಮ್ಮ ಕಲೆಯನ್ನು ಬಳಸುತ್ತೇವೆ. ಗೊಂಬೆಗಳ ನೆರಳು ನಮ್ಮ ಹೋರಾಟಗಳನ್ನು ಪ್ರತಿಬಿಂಬಿಸುತ್ತವೆ" ಎಂದು ರಜಿತಾ ಹೇಳುತ್ತಾರೆ. "ನಾವು ಹೊಸ ಆಲೋಚನೆಗಳು ಮತ್ತು ವಿಷಯಗಳನ್ನು ಅನ್ವೇಷಿಸಲು ಬಯಸುತ್ತೇವೆ, ವಿಶೇಷವಾಗಿ ಸಾಮಾಜಿಕ ಸಮಸ್ಯೆಗಳನ್ನು ಪರಿಹಾರದ ನಿಟ್ಟಿನಲ್ಲಿ. ಮಹಿಳೆಯರ ದೃಷ್ಟಿಕೋನದಿಂದ ರಾಮಾಯಣದ ನಿರೂಪಣೆಯನ್ನು ಪ್ರಸ್ತುತಪಡಿಸಲು ಸಹ ನಾವು ಬಯಸುತ್ತೇವೆ.”

ತನ್ನದೇ ಆದ ತಂಡವನ್ನು ಸ್ಥಾಪಿಸಿದ ನಂತರ, ರಜಿತಾ ಬೊಂಬೆಯಾಟದ ಕುಶಲತೆಯನ್ನು ಮೀರಿ ಕೌಶಲಗಳನ್ನು ಕಲಿಯಲು ಪ್ರಾರಂಭಿಸಿದರು. ಅವರು ಸ್ಕ್ರಿಪ್ಟ್ ಕೆಲಸ ಮಾಡುವುದು, ಧ್ವನಿ ಮತ್ತು ಸಂಗೀತವನ್ನು ರೆಕಾರ್ಡ್ ಮಾಡುವುದು, ಬೊಂಬೆ ತಯಾರಿಕೆ, ಕೌಶಲ ಮತ್ತು ತಂಡದ ಸದಸ್ಯರಿಗೆ ತರಬೇತಿ ನೀಡುವ ಪೂರ್ಣ ಪ್ರಮಾಣದ ಪ್ರದರ್ಶನಗಳನ್ನು ಆಯೋಜಿಸಿದ್ದಾರೆ. "ಪ್ರತಿ ಪ್ರದರ್ಶನಕ್ಕೂ ನಾವು ಸಾಕಷ್ಟು ತಯಾರಿ ನಡೆಸಬೇಕಾಗಿತ್ತು. ಉದಾಹರಣೆಗೆ, ಮಹಿಳಾ ಸಬಲೀಕರಣ ವಿಷಯದ ಸಾಧನೆಗಾಗಿ, ನಾನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಹೋಗಿ ಮಹಿಳೆಯರಿಗೆ ಲಭ್ಯವಿರುವ ಯೋಜನೆಗಳು ಮತ್ತು ಅವಕಾಶಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿದೆ. ನಂತರ, ಸ್ಕ್ರಿಪ್ಟ್ ಮತ್ತು ಸಂಗೀತವನ್ನು ಹೊರಗುತ್ತಿಗೆ ನೀಡಿದೆ. ರೆಕಾರ್ಡಿಂಗ್ ಮುಗಿದ ನಂತರ, ನಾವು ಬೊಂಬೆಗಳನ್ನು ತಯಾರಿಸಲು ಮತ್ತು ಅವುಗಳನ್ನು ಕುಣಿಸಲು ಪೂರ್ವಾಭ್ಯಾಸ ಮಾಡಲು ಪ್ರಾರಂಭಿಸಿದೆವು. ಇಲ್ಲಿ, ತಂಡದ ಪ್ರತಿಯೊಬ್ಬ ಸದಸ್ಯರಿಗೂ ಕೊಡುಗೆ ನೀಡಲು, ಬೊಂಬೆಗಳನ್ನು ರೂಪಿಸಲು ಮತ್ತು ರಂಗ ಚಲನೆಗಳಲ್ಲಿ ಕೆಲಸ ಮಾಡಲು ಸ್ವಾತಂತ್ರ್ಯವಿದೆ.”

PHOTO • Megha Radhakrishnan
PHOTO • Megha Radhakrishnan

ಎಡ: ಅಶ್ವತಿ (ಬಲಭಾಗದಲ್ಲಿ) ಮತ್ತು ರಜಿತಾ ಪ್ರದರ್ಶನದ ಸಮಯದಲ್ಲಿ. ಬಲ: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ಹೋಲುವ ಕೈಗೊಂಬೆ

PHOTO • Megha Radhakrishnan
PHOTO • Megha Radhakrishnan

ಎಡ: ಪೆಣ್ ಪಾವಕೂತ್ತು ಪ್ರದರ್ಶನದ ತೆರೆಮರೆಯಲ್ಲಿ. ಬಲ: ಪರದೆಯ ಹಿಂದೆ ಪ್ರದರ್ಶಕರು ಮತ್ತು ಸಭಾಂಗಣದಲ್ಲಿ ಪ್ರೇಕ್ಷಕರು

ಅವರ ಪ್ರದರ್ಶನಗಳು ಸಂಖ್ಯೆಯಲ್ಲಿ ಕೇವಲ ಒಂದು ಪ್ರದರ್ಶನದಿಂದ 40ಕ್ಕೂ ಹೆಚ್ಚು ಪ್ರದರ್ಶನಗಳಿಗೆ ಬೆಳೆದಿವೆ ಮತ್ತು ಈಗ 15 ಸದಸ್ಯರನ್ನು ಹೊಂದಿರುವ ಅವರ ತಂಡವು ತಮ್ಮ ಮಾತೃ ಸಂಸ್ಥೆಯಾದ ಕೃಷ್ಣನ್ ಕುಟ್ಟಿ ಮೆಮೋರಿಯಲ್ ತೋಳ್ಪಾವಕೂತ್ತು ಕಲಾಕೇಂದ್ರಂ ಜೊತೆ ನಿಕಟ ಸಹಕಾರದೊಂದಿಗೆ ಕೆಲಸ ಮಾಡುತ್ತದೆ. 2020ರಲ್ಲಿ, ರಜಿತಾ ಅವರಿಗೆ ಕೇರಳ ಜಾನಪದ ಅಕಾಡೆಮಿಯಿಂದ ಯುವ ಪ್ರತಿಭಾ ಪ್ರಶಸ್ತಿಯನ್ನು ನೀಡಲಾಯಿತು.

ರಜಿತಾ ಹೇಳುವಂತೆ ಆರಂಭದಲ್ಲಿ ಮಹಿಳಾ ತಂಡಕ್ಕೆ ಪುರುಷರ ತಂಡಕ್ಕಿಂತ ಕಡಿಮೆ ಸಂಭಾವನೆ ನೀಡಲಾಗುತ್ತಿತ್ತು. ಆದರೆ ಈಗ ಪರಿಸ್ಥಿತಿ ಒಂದಷ್ಟು ಸುಧಾರಿಸಿದೆ. "ಹಲವಾರು ಸಂಸ್ಥೆಗಳು, ವಿಶೇಷವಾಗಿ ಸರ್ಕಾರಿ ವಲಯದಲ್ಲಿರುವ ಸಂಸ್ಥೆಗಳು, ಈಗ ನಮ್ಮನ್ನು ಸಮಾನವಾಗಿ ನಡೆಸಿಕೊಳ್ಳುತ್ತಿವೆ ಮತ್ತು ಪುರುಷ ಕಲಾವಿದರಿಗೆ ನೀಡುವ ಸಂಭಾವನೆಯನ್ನು ನಮಗೂ ನೀಡುತ್ತಿವೆ" ಎಂದು ಅವರು ಹೇಳುತ್ತಾರೆ

ಮತ್ತೊಂದು ಮಹತ್ವದ ಹೆಜ್ಜೆಯೆಂದರೆ ದೇವಾಲಯದಲ್ಲಿ ಪ್ರದರ್ಶನ ನೀಡಲು ಆಹ್ವಾನವನ್ನು ಸ್ವೀಕರಿಸುವುದು. "ಇದು ಧಾರ್ಮಿಕ ಪ್ರದರ್ಶನವಲ್ಲದಿದ್ದರೂ, ದೇವಾಲಯವು ನಮ್ಮನ್ನು ಆಹ್ವಾನಿಸಿರುವುದು ನಮಗೆ ಸಂತೋಷವಾಗಿದೆ" ಎಂದು ರಜಿತಾ ಹೇಳುತ್ತಾರೆ. ಅವರು ಈಗ ಕಂಬ ರಾಮಾಯಣದ ಶ್ಲೋಕಗಳನ್ನು ಕಲಿಯುತ್ತಿದ್ದಾರೆ, ಇದು ಮಹಾಕಾವ್ಯದ ತಮಿಳು ಆವೃತ್ತಿಯಾಗಿದ್ದು, ಧಾರ್ಮಿಕ ಥೋಲ್ಪಾವಕೂಟುವಿನಲ್ಲಿ ಪಠಿಸಲಾಗುತ್ತದೆ, ನಂತರ ಅವರು ತಂಡದ ಇತರ ಸದಸ್ಯರಿಗೆ ಕಲಿಸುತ್ತಾರೆ. ಮತ್ತು ಅವಳು ಭವಿಷ್ಯದ ಬಗ್ಗೆ ಭರವಸೆ ಹೊಂದಿದ್ದಾಳೆ. "ಪವಿತ್ರ ದೇವಾಲಯದ ತೋಪುಗಳಲ್ಲಿ ಮಹಿಳಾ ಬೊಂಬೆಯಾಟಗಾರರು ಕಂಬ ರಾಮಾಯಣದ ಶ್ಲೋಕಗಳನ್ನು ಪಠಿಸುವ ಯುಗವಿರುತ್ತದೆ ಎಂದು ನನಗೆ ತುಂಬಾ ಖಾತ್ರಿಯಿದೆ, ಮತ್ತು ಅದಕ್ಕಾಗಿ ನಾನು ಹುಡುಗಿಯರನ್ನು ಸಜ್ಜುಗೊಳಿಸುತ್ತಿದ್ದೇನೆ."

ಈ ವರದಿಗೆ ಮೃಣಾಲಿನಿ ಮುಖರ್ಜಿ ಫೌಂಡೇಶನ್ (ಎಂಎಂಎಫ್) ಫೆಲೋಶಿಪ್ ಬೆಂಬಲ ದೊರಕಿದೆ.

ಅನುವಾದ: ಶಂಕರ. ಎನ್. ಕೆಂಚನೂರು

Sangeeth Sankar

Sangeeth Sankar is a research scholar at IDC School of Design. His ethnographic research investigates the transition in Kerala’s shadow puppetry. Sangeeth received the MMF-PARI fellowship in 2022.

यांचे इतर लिखाण Sangeeth Sankar
Photographs : Megha Radhakrishnan

Megha Radhakrishnan is a travel photographer from Palakkad, Kerala. She is currently a Guest Lecturer at Govt Arts and Science College, Pathirippala, Kerala.

यांचे इतर लिखाण Megha Radhakrishnan
Editor : PARI Desk

PARI Desk is the nerve centre of our editorial work. The team works with reporters, researchers, photographers, filmmakers and translators located across the country. The Desk supports and manages the production and publication of text, video, audio and research reports published by PARI.

यांचे इतर लिखाण PARI Desk
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

यांचे इतर लिखाण Shankar N. Kenchanuru