ನಾನು ಶೊಬೋರ್ಪಾಡಾ ತಲುಪುವಾಗ ರಾತ್ರಿಯಾಗಿತ್ತು. ಇಲ್ಲಿರುವ ಹನ್ನೊಂದು ಮನೆಗಳು ಬಾಂಡುವಾನ್ ತಾಲೂಕಿನ ಕುಂಚಿಯಾ ಗ್ರಾಮದ ಅಂಚಿನ ರಸ್ತೆಯಿಂದ ತುಂಬಾ ದೂರದಲ್ಲಿವೆ. ಈ ಮಣ್ಣಿನ ಸಣ್ಣ ಮನೆಗಳಲ್ಲಿ ಶೊವರ್ (ಶೊಬೋರ್ ಎಂದೂ ಕರೆಯುತ್ತಾರೆ) ಸಮುದಾಯಕ್ಕೆ ಸೇರಿದ ಜನರು ಒಟ್ಟಾಗಿ ವಾಸ ಮಾಡುತ್ತಾರೆ.
ಆ ಮನೆಗಳಿರುವ ಮಬ್ಬುಗತ್ತಲಿನ ಪರಿಸರದಿಂದ ಆರಂಭವಾಗುವ ಕಾಡು ಹೆಚ್ಚು ಹೆಚ್ಚು ದಟ್ಟವಾಗಿ ಬೆಳೆಯುತ್ತಾ, ವ್ಯಾಪಿಸಿಕೊಳ್ಳುತ್ತಾ ದುವಾರ್ಸಿ ಬೆಟ್ಟಗಳೊಂದಿಗೆ ವಿಲೀನಗೊಳ್ಳುತ್ತದೆ. ಸಾಲ್, ಸೆಗುನ್, ಪಿಯಾಲ್ ಮತ್ತು ಪಲಾಶ್ ಮರಗಳಿಂದ ಕೂಡಿರುವ ಈ ಅರಣ್ಯವೇ ಜನರ ಆಹಾರ, ಹಣ್ಣುಗಳು, ಹೂವುಗಳು ಹಾಗೂ ತರಕಾರಿಗಳು ಮತ್ತು ಜೀವನೋಪಾಯದ ಮೂಲವಾಗಿದೆ.
ಶೊವರ್ ಸಮುದಾಯವನ್ನು ಪಶ್ಚಿಮ ಬಂಗಾಳದಲ್ಲಿ ಡಿ-ನೋಟಿಫೈಡ್ ಟ್ರೈಬ್ (ಡಿಎನ್‌ಟಿ) ಮತ್ತು ಪರಿಶಿಷ್ಟ ಪಂಗಡ ಎಂದು ಪರಿಗಣಿಸಲಾಗಿದೆ. ವಸಾಹತುಶಾಹಿ ಬ್ರಿಟಿಷ್ ಸರ್ಕಾರದ ಅಪರಾಧಿ ಜನಾಂಗ ಕಾಯ್ದೆಯ (ಸಿಟಿಎ) ಅಡಿಯಲ್ಲಿ 'ಅಪರಾಧಿಗಳು' ಎಂದು ಬ್ರಾಂಡ್ ಮಾಡಲಾಗಿದ್ದ ಅನೇಕ ಬುಡಕಟ್ಟುಗಳಲ್ಲಿ ಇವರೂ ಸೇರಿದ್ದಾರೆ. 1952 ರಲ್ಲಿ ಭಾರತ ಸರ್ಕಾರವು ಈ ಕಾಯ್ದೆಯನ್ನು ರದ್ದುಗೊಳಿಸಿತು ಮತ್ತು ಈ ಬುಡಕಟ್ಟುಗಳನ್ನು ಈಗ ಡಿ-ನೋಟಿಫೈಡ್ ಟ್ರೈಬ್ಸ್ (ಡಿಎನ್‌ಟಿಎಸ್) ಅಥವಾ ಅಲೆಮಾರಿ ಬುಡಕಟ್ಟುಗಳು (ಎನ್‌ಟಿಎಸ್) ಎಂದು ಕರೆಯಲಾಗುತ್ತದೆ.
ಇಂದಿಗೂ ಸಹ ಶೊಬೋರ್ಪಾಡಾದ ಕುಟುಂಬಗಳು (ಶೊಬೋರ್ಪಾರಾ ಎಂದೂ ಕರೆಯುತ್ತಾರೆ) ಜೀವನಕ್ಕಾಗಿ ಕಾಡನ್ನೇ ಅವಲಂಬಿಸಿವೆ. 26 ವರ್ಷ ಪ್ರಾಯದ ನೇಪಾಲಿ ಶೊಬೋರ್ ಇಂತವರಲ್ಲಿ ಒಬ್ಬರು. ಅವರು ತಮ್ಮ ಪತಿ ಘಲ್ಟು, ಇಬ್ಬರು ಹೆಣ್ಣುಮಕ್ಕಳು ಮತ್ತು ಒಬ್ಬ ಮಗನೊಂದಿಗೆ ಪುರುಲಿಯಾ ಜಿಲ್ಲೆಯ ಮಣ್ಣಿನಿಂದ ಕಟ್ಟಲಾದ ಮನೆಯಲ್ಲಿ ವಾಸಿಸುತ್ತಿದ್ದಾರೆ. ಹಿರಿಯವ ಮಗ, ಮಗಳಿಗೆ ಒಂಬತ್ತು ವರ್ಷ, ಅವಳು ಇನ್ನೂ 1ನೇ ತರಗತಿಯಲ್ಲಿದ್ದಾಳೆ. ಎರಡನೆಯವಳು ಅಂಬೆಗಾಲಿನ ಮಗು ಮತ್ತು ಅವಳಿನ್ನೂ ತಾಯಿಯ ಎದೆ ಹಾಲನ್ನು ಕುಡಿಯುತ್ತಿದ್ದಾಳೆ. ಈ ಕುಟುಂಬವು ಆದಾಯಕ್ಕಾಗಿ ಸಾಲ್ (ಶೋರಿಯಾ ರೋಬಸ್ಟಾ) ಎಲೆಗಳನ್ನು ನಂಬಿದೆ.
ಇಡೀ ಗ್ರಾಮದಲ್ಲಿರುವ 11 ಮನೆಗಳಲ್ಲಿ ಏಳು ಮನೆಗಳು ಸಾಲ್ ಮರಗಳ ಎಲೆಗಳಿಂದ ತಟ್ಟೆ ತಯಾರಿಸಿ ಮಾರಾಟ ಮಾಡುತ್ತವೆ. ಈ ಎಲೆಗಳನ್ನು ದುವಾರ್ಸಿನಿ ಅರಣ್ಯದಲ್ಲಿರುವ ಮರಗಳಿಂದ ತರುತ್ತಾರೆ. ಈ ಕಾಡು ಊರಿಗೆ ಗಡಿಯಾಗಿರುವ ಬೆಟ್ಟಗಳ ಮೇಲಿದೆ. “ನೌ ಬಜೇ ಯಹಾನ್ ಸೆ ಜಾತೇ ಹೈ. ಏಕ್ ಘಂಟಾ ಲಗ್ತಾ ಹೈ ದುವಾರ್ಸಿನಿ ಪಹುಂಚ್ನೆ ಮೇ [ನಾವು ಇಲ್ಲಿಂದ ಬೆಳಿಗ್ಗೆ ಸುಮಾರು ಒಂಬತ್ತಕ್ಕೆ ಹೊರಡುತ್ತೇವೆ. ದುವಾರ್ಸಿನಿ ತಲುಪಲು ಒಂದು ಗಂಟೆ ಬೇಕು]," ಎಂದು ನೇಪಾಲಿಯವರು ಹೇಳುತ್ತಾರೆ.
ದಂಪತಿಗಳು ಆ ಕಾಡಿಗೆ ಹೊರಡುವ ಮೊದಲು ಅಡುಗೆ ತಯಾರಿಸುತ್ತಾರೆ, ನೇಪಾಲಿಯವರು ಮನೆಯ ಮುಂದಿರುವ ಅಂಗಳದಲ್ಲಿ ಕೆಲಸ ಮಾಡುತ್ತಿದ್ದಾರೆ. ಕಾಡಿಗೆ ಹೋಗುವ ಮೊದಲು ಮಕ್ಕಳಿಗೆ ಮತ್ತು ಗಂಡನಿಗೆ ಊಟ ಹಾಕಬೇಕು, ದೊಡ್ಡ ಮಗಳನ್ನು ಶಾಲೆಗೆ ಕಳುಹಿಸಬೇಕು, ಮಗನನ್ನು ನೋಡಿಕೊಳ್ಳಲು ಎರಡನೆಯ ಮಗಳನ್ನು ಮನೆಯಲ್ಲಿಯೇ ಬಿಡಬೇಕು. ಅಕ್ಕಪಕ್ಕದ ಮನೆಯಲ್ಲಿ ಯಾರಿಗಾದರೂ ಈ ಮಕ್ಕಳ ಮೇಲೆ ನಿಗಾ ಇಡಲು ಹೇಳುತ್ತಾರೆ.
ದುವಾರ್ಸಿನಿ ಕಾಡನ್ನು ತಲುಪಿದ ಕೂಡಲೇ ಗಂಡ-ಹೆಂಡತಿ ತಮ್ಮ ಕೆಲಸ ಆರಂಭಿಸುತ್ತಾರೆ. 33 ವರ್ಷ ಪ್ರಾಯದ ಘೋಲ್ಟುರವರು ಮರ ಹತ್ತಿ ಸಣ್ಣ ಮತ್ತು ದೊಡ್ಡ ಎಲೆಗಳನ್ನು ಸಣ್ಣ ಚಾಕುವಿನಿಂದ ಕತ್ತರಿಸುತ್ತಾರೆ. ನೇಪಾಲಿಯವರು ತನ್ನ ಸುತ್ತ ಇರುವ ಮರಗಳಿಂದ ಕೈಗೆಟುಕುವ ಎಲೆಗಳನ್ನು ಕೀಳುತ್ತಾರೆ. “ಬಾರಾ ಬಜೆ ತಕ್ ಪಟ್ಟೆ ತೊಡ್ತೆ ಹೈ. ದೋ-ತೀನ್ ಘಂಟೆ ಲಗ್ತೇ ಹೈಂ [ನಾವು ಸುಮಾರು 12 ಗಂಟೆಯವರೆಗೆ ಎಲೆಗಳನ್ನು ಕೀಳುತ್ತೇವೆ. ಇದಕ್ಕೆ ಎರಡು ಮೂರು ಗಂಟೆಗಳು ಬೇಕು]," ಎಂದು ಅವರು ಹೇಳುತ್ತಾರೆ. ಮಧ್ಯಾಹ್ನದ ಹೊತ್ತಿಗೆ ಇಬ್ಬರೂ ವಾಪಾಸ್ ಮನೆಗೆ ಬರುತ್ತಾರೆ.
"ನಾವು ಮನೆಗೆ ಬಂದು ಮತ್ತೊಮ್ಮೆ ಊಟ ಮಾಡುತ್ತೇವೆ." ಎಂದು ಹೇಳುವ ಘೋಲ್ಟುರವರು ಊಟದ ನಂತರ ವಿಶ್ರಾಂತಿ ಪಡೆಯುತ್ತಾರೆ. ಮಧ್ಯಾಹ್ನದ ಒಂದು ಗಳಿಗೆಯ ನಿದ್ದೆ ಅವರಿಗೆ ಬೇಕೇ ಬೇಕು, ಆದರೆ ನೇಪಾಲಿಯವರು ಮಾತ್ರ ಒಮ್ಮೊಮ್ಮೆ ನಿದ್ದೆ ಮಾಡುತ್ತಾರೆ. ಅವರು ಎಲೆಗಳಿಂದ ತಟ್ಟೆಗಳನ್ನು ತಯಾರಿಸುವ ಕೆಲಸ ಆರಂಭಿಸುತ್ತಾರೆ. ಒಂದು ತಟ್ಟೆ ಮಾಡಲು ಎಂಟರಿಂದ ಹತ್ತು ಸಾಲ್ ಎಲೆಗಳು ಬೇಕು. ಈ ಎಲೆಗಳನ್ನು ಒಟ್ಟಿಗೆ ಜೋಡಿಸಲು ತೆಳುವಾದ ಬಿದಿರಿನ ಕಡ್ಡಿಗಳು ಬೇಕು. “ನಾನು ಬಿದಿರು ಖರೀದಿಸಲು ಮಾರ್ಕೆಟ್‌ಗೆ ಹೋಗುತ್ತೇನೆ. ಒಂದು ಪೀಸ್‌ಗೆ 60 ರೂಪಾಯಿ. ಇದು ಮೂರರಿಂದ ನಾಲ್ಕು ತಿಂಗಳವರೆಗೆ ಬರುತ್ತದೆ. ನೇಪಾಲಿ ಈ ಬಿದಿರನ್ನು ಸೀಳುತ್ತಾಳೆ,” ಎಂದು ಘೋಲ್ಟು ಹೇಳುತ್ತಾರೆ.
ಒಂದು ಪ್ಲೇಟ್ ತಯಾರಿಸಲು ನೇಪಾಲಿಯವರು ಒಂದು ಅಥವಾ ಎರಡು ನಿಮಿಷ ತೆಗೆದುಕೊಳ್ಳುತ್ತಾರೆ. "ನಾವು ಒಂದು ದಿನಕ್ಕೆ 200-300 ಖಾಲಿ ಪಟ್ಟಾ ಮಾಡಬಹುದು," ಎಂದು ಅವರು ಹೇಳುತ್ತಾರೆ. ಶೊವರ್ ಜನರು ಎಲೆಯ ತಟ್ಟೆಗಳನ್ನು ಖಾಲಿ ಪಟ್ಟ ಅಥವಾ ತಾಲಾ ಎಂದು ಕರೆಯುತ್ತಾರೆ. ನೇಪಾಲಿಯವರು ದಿನದಲ್ಲಿ ಎಂಟು ಗಂಟೆಗಳ ಕಾಲ ಕೆಲಸ ಮಾಡಿದರೆ ಇಷ್ಟು ತಟ್ಟೆಗಳನ್ನು ತಯಾರಿಸಬಹುದು.
ನೇಪಾಲಿಯವರು ತಟ್ಟೆಗಳನ್ನು ತಯಾರಿಸಿದರೆ, ಘೋಲ್ಟು ಅವುಗಳನ್ನು ಮಾರುವ ಕೆಲಸ ಮಾಡುತ್ತಾರೆ.
“ಇದರಿಂದ ಹೆಚ್ಚೇನು ಸಿಗುವುದಿಲ್ಲ. ಪ್ರತಿ 100 ಪ್ಲೇಟ್‌ಗಳಿಗೆ ಅರವತ್ತು ರೂಪಾಯಿ ಸಾಕೇ? ಒಂದು ದಿನ ಕೆಲಸ ಮಾಡಿದರೆ ಸುಮಾರು 150 ರಿಂದ 200 ರೂಪಾಯಿ ಸಿಗುತ್ತದೆ. ಒಬ್ಬರು ನಮ್ಮ ಮನೆಗೇ ಬಂದು ನಮ್ಮಿಂದ ಇವುಗಳನ್ನು ಖರೀದಿಸುತ್ತಾರೆ,” ಎಂದು ಘೋಲ್ಟು ಹೇಳುತ್ತಾರೆ. ದಂಪತಿಗಳು ಆತನಿಗೆ ಒಂದು ತಟ್ಟೆಗೆ 60 ರಿಂದ 80 ಪೈಸೆಗೆ ಮಾರುತ್ತಾರೆ. ಇಬ್ಬರೂ ಸೇರಿ ದಿನಕ್ಕೆ ಕೇವಲ 250 ರೂಪಾಯಿ ಸಂಪಾದಿಸುತ್ತಿರುವುದು ರಾಜ್ಯದಲ್ಲಿ ಮನರೇಗಾ ಅಡಿಯಲ್ಲಿ ಕೌಶಲ್ಯರಹಿತ ಕಾರ್ಮಿಕರಿಗೆ ಸಿಗುವ ದಿನದ ಕೂಲಿಗಿಂತಲೂ ಚಿಂತಾಜನಕವಾಗಿದೆ.
ನೀವು ಎಷ್ಟು ಕಷ್ಟಪಟ್ಟು ಕೆಲಸ ಮಾಡುತ್ತಿದ್ದೀರಾ ಎಂದು ನಾನು ಆಶ್ಚರ್ಯದಿಂದ ಹೇಳುವಾಗ ನೇಪಾಲಿಯವರು ತಮ್ಮ ಗಂಡನ ಬಗ್ಗೆ "ಅವರೂ ಸಹಾಯ ಮಾಡುತ್ತಾರೆ," ತಕ್ಷಣ ಪ್ರತಿಕ್ರಿಸಿದರು. "ಅವರು ತರಕಾರಿ ಮಾರುವವರ ಬಳಿ ಕೆಲಸ ಮಾಡುತ್ತಾರೆ. ದಿನವೂ ಅಲ್ಲ, ಆದರೆ ಅವರು ಇವರನ್ನು ಕರೆದಾಗಲೆಲ್ಲಾ ಆ ದಿನ 200 ರೂಪಾಯಿ ಸಂಪಾದಿಸುತ್ತಾರೆ. ಒಂದು ವಾರದಲ್ಲಿ ಎರಡು-ಮೂರು ಬಾರಿ ಇರಬಹುದು,” ಎಂದು ಅವರು ಹೇಳುತ್ತಾರೆ.
"ಈ ಮನೆ ನನ್ನ ಹೆಸರಿನಲ್ಲಿದೆ," ಎಂದು ನೇಪಾಲಿ ಹೇಳುತ್ತಾರೆ. ಒಂದು ಸಣ್ಣ ವಿರಾಮದ ನಂತರ ಮೆಲ್ಲಗೆ ನಗುವಾಗ ಅವರ ಕಣ್ಣುಗಳು ಹೊಳೆಯುತ್ತವೆ. ಆ ಕಣ್ಣುಗಳಲ್ಲಿ ಅವರ ಆ ಪುಟ್ಟ ಮಣ್ಣಿನ ಮನೆಯ ಪ್ರತಿಬಿಂಬ ಕಾಣುತ್ತದೆ.
ಕನ್ನಡ ಅನುವಾದ: ಚರಣ್ ಐವರ್ನಾಡು