ಆದಿವಾಸಿಗಳನ್ನು ಕುರಿತ ಸಂಭಾಷಣೆಗಳು ಮತ್ತು ತನ್ನೊಳಗಿನ ಕಲಾವಿದನೊಂದಿಗೆ ಮಾತನಾಡುತ್ತಿವೆಯೋ ಎಂಬಂತೆ ಭಾಸವಾಗುತ್ತಿದ್ದ ಸಂಗೀತ ವಾದ್ಯಗಳೊಂದಿಗೆ ಸಂಬಲ್‌ಪುರದಲ್ಲಿ ಚಿತ್ರೀಕರಿಸಲ್ಪಟ್ಟ ಭುಖ ಎಂಬ ಚಿತ್ರವನ್ನು ವೀಕ್ಷಿಸಿದ ಕೃಷ್ಣ ಚಂದ್ರ ಬಾಘ್, ಅದನ್ನು ವೀಕ್ಷಿಸಿದ ದಿನದ ಬಗ್ಗೆ ಭಾವುಕರಾಗಿ ಹೀಗೆಂದರು: “ಈ ಕೈಗಳಿರುವುದೇ ಸಂಗೀತಕ್ಕಾಗಿ.”
ದಶಕಗಳ ನಂತರ, ಕೃಷ್ಣ, ಆ ಚಿತ್ರದ ಸಂಭಾಷಣೆಯೊಂದನ್ನು ಅಪ್ರಯತ್ನಪೂರ್ವಕವಾಗಿ ತಪ್ಪಿಲ್ಲದಂತೆ ನುಡಿದರು: “ನಮ್ಮ ಈ ಪ್ರಾಚೀನ ವೃತ್ತಿಯನ್ನು (ದುಲ್‌ದುಲಿ) ನಾವು ಬಿಡಲಾರೆವು. ನಮ್ಮ ತಂದೆಯಾಗಲಿ, ತಾತನಾಗಲಿ ಎಂದಿಗೂ ಕೂಲಿಗಾರರಾಗಿರಲಿಲ್ಲ.”
ಪ್ರದರ್ಶನಗಳಲ್ಲಿ, ಸಂಬಲ್‌ಪುರಿ ಜನರ ಜಾನಪದ ಪರಂಪರೆಯೆನಿಸಿದ ದುಲ್‌ದುಲಿಯಲ್ಲಿ, ಐದು ನಗಾರಿ ಮತ್ತು ನಾದವನ್ನು ಹೊರಡಿಸುವ ಸಂಗೀತವಾದ್ಯಗಳು ಸಮ್ಮಿಳಿತಗೊಳ್ಳುತ್ತವೆ. ಹೆಚ್ಚಿನ ಕೌಶಲ್ಯವುಳ್ಳ ಸಂಗೀತಗಾರರು ಮಾತ್ರವೇ ಇದರಲ್ಲಿ ಭಾಗವಹಿಸಲು ಸಾಧ್ಯ.
ಕೃಷ್ಣ ಅವರು ಹೀಗೆನ್ನುತ್ತಾರೆ: ನನ್ನಂತಹ ದುಲ್‌ದುಲಿ ಕಲಾಕಾರರಿಗೆ ನಾವು ಗುರುತಿಸಲ್ಪಟ್ಟಿದ್ದೇವೆಂಬ ಭಾವವನ್ನು ಮೂಡಿಸಿದ ಮೊದಲ ಚಿತ್ರಗಳಲ್ಲಿ ಭುಖ ಚಿತ್ರವೂ ಒಂದು. 50ರ ಪತ್ನಿ ಸುಕಂತಿ ಬಾಘ್ ಮತ್ತು ಮಗ ಕ್ಷಿತಿಷ್ ಬಾಘ್ ಅವರೊಡನೆ ಪಶ್ಚಿಮ ಒಡಿಶಾದ ಸಂಬಲ್‌ಪುರದಲ್ಲಿ ವಾಸಿಸುವ ಇವರು, ದಲಿತ ಸಮುದಾಯಕ್ಕೆ ಸೇರಿದವರಾಗಿದ್ದಾರೆ.
ಘಾಸಿಯಾ ಸಮುದಾಯವು ಸಂಗೀತ ವಾದ್ಯಗಳನ್ನು ತಯಾರಿಸುತ್ತದೆ. ಗಂಡಾ ಸಮುದಾಯದ ಜನರು ಅವನ್ನು ನುಡಿಸುತ್ತಾರೆ. ಈ ಎರಡೂ ಸಮುದಾಯಗಳು ಚರ್ಮದ ಕೆಲಸದಲ್ಲಿ ತೊಡಗುವುದರಿಂದ ಅವರನ್ನು ಅಪವಿತ್ರರೆಂದು ಪರಿಗಣಿಸಲಾಗುತ್ತದೆ. ಇವರಿಗೆ ಕೆಲಸವನ್ನು ದೊರಕಿಸಿಕೊಳ್ಳುವುದು ಕಷ್ಟ. ಹೀಗಾಗಿ ಇವರು, ನೃತ್ಯ ಮತ್ತು ಸಂಗೀತ ವಾದ್ಯಗಳನ್ನು ನುಡಿಸುವ ಚಟುವಟಿಕೆಗಳಲ್ಲಿ ತೊಡಗುತ್ತಾರೆ. ಘಾಸಿ ಮತ್ತು ಗಂಡಾ ಸುಮುದಾಯಗಳೆರಡನ್ನೂ ಒಡಿಶಾದಲ್ಲಿ ಪರಿಶಿಷ್ಟ ಜಾತಿಯಡಿ ಪಟ್ಟಿಮಾಡಲಾಗಿದೆ (ಜನಗಣತಿ 2011).
ಬಳಸಲ್ಪಡುವ ಐದು ಸಂಗೀತವಾದ್ಯಗಳಲ್ಲಿ, ಈ ಸಮುದಾಯಗಳು ಢೋಲ್ ಮತ್ತು ನಿಶಾನ್‌ಗಳನ್ನು ತಯಾರಿಸುತ್ತವೆ. ಈ ಡ್ರಮ್ ವಾದ್ಯಗಳ ತೊಗಲು ಪ್ರಾಣಿಯ ಚರ್ಮದಿಂದ ಮಾಡಲ್ಪಟ್ಟಿರುತ್ತದೆ. ನಿಶಾನ್‌ನ ಎರಡು ಪಾರ್ಶ್ವಗಳನ್ನು ಜಿಂಕೆಯ ಕೊಂಬುಗಳಿಂದ ಅಲಂಕರಿಸಲಾಗುತ್ತದೆ. ಈ ಸಂಗೀತ ವಾದ್ಯಗಳನ್ನು ಮಾಡಲು ಪ್ರಾಣಿಯ ಕಚ್ಚಾ ಅಥವಾ ಹದಮಾಡಿದ ತೊಗಲು ಮತ್ತು ಕೊಂಬುಗಳನ್ನು ಸೂಕ್ಷ್ಮವಾಗಿ ನಿರ್ವಹಿಸಬೇಕಾಗುತ್ತದೆ. ಪರಂಪರೆಯಿಂದಲೂ ಈ ಕೆಲಸಗಳನ್ನು ದಲಿತ ಸಮುದಾಯದವರು ನಿರ್ವಹಿಸುತ್ತಾರೆ.
ರಂಗ್‌ಫರುಅ ಎಂದು ಕರೆಯಲಾಗುವ ದುಲ್‌ದುಲಿ ತಂಡದಲ್ಲಿ ವಾದ್ಯಗಳನ್ನು ನುಡಿಸುವ ಹಿರಿಯರಲ್ಲಿ (player) 50ರ ವಯಸ್ಸಿನ ಕೃಷ್ಣ ಅವರೂ ಒಬ್ಬರು. ದುಲ್‌ದುಲಿಯು ಐದು ನಗಾರಿ ಮತ್ತು ನಾದವನ್ನು ಹೊರಡಿಸುವ ಸಂಗೀತವಾದ್ಯಗಳನ್ನು ಸಮ್ಮಿಳಿತಗೊಳಿಸುತ್ತದೆ. ಇವನ್ನು ಒಟ್ಟಾರೆಯಾಗಿ ಪಂಚ ಬಾದ್ಯ (ಐದು ವಾದ್ಯಗಳು) ಎಂದು ಕರೆಯುತ್ತಾರೆ. ಅಂದರೆ ಮುಹುರಿ ಮತ್ತು ಖರ್ತಲ್‌ನಂತರ ಸುಷಿರ ವಾದ್ಯಗಳೊಂದಿಗೆ ತಾಳವಾದ್ಯಗಳಾದ ಢೋಲ್, ನಿಶಾನ್, ಮತ್ತು ತಶ
ಎಲ್ಲವನ್ನೂ ಒಟ್ಟಿಗೆ ಬಾರಿಸಿದಾಗ, “ವಾದ್ಯಗಳಿಂದ ಹೊರಬರುವ ಶಬ್ದವು ಎಷ್ಟು ಜೋರಾಗಿರುತ್ತದೆಯೆಂದರೆ, ಯಾವುದೇ ಕೊಠಡಿಯ ಒಳಗೆ ಇದನ್ನು ಸರಿಯಾಗಿ ಅಭ್ಯಾಸಮಾಡಲಾಗುವುದಿಲ್ಲ” ಎನ್ನುತ್ತಾರೆ ಕೃಷ್ಣ.
ಎರಡು ಪಾರ್ಶ್ವಗಳ ಪೀಪಾಯಿಯ ಆಕಾರದಲ್ಲಿರುವ ಢೋಲ್ ಎಂಬ ನಗಾರಿಯನ್ನು ಬಾರಿಸುವುದರಲ್ಲಿ ಇವರು ನಿಷ್ಣಾತರು. ಛಾಯಾಚಿತ್ರ ಗ್ರಾಹಕ ವೃತ್ತಿಯಲ್ಲಿ ಸ್ವತಂತ್ರವಾಗಿ ತೊಡಗಿಸಿಕೊಂಡಿರುವ 28ರ ವಯಸ್ಸಿನ ಇವರ ಮಗ ಕ್ಷಿತಿಷ್, ಢೋಲ್ ಸಹ ಬಾರಿಸುತ್ತಾರಲ್ಲದೆ, ಪ್ರದರ್ಶನಗಳಲ್ಲಿ ತಂದೆಯ ಜೊತೆಗೂಡುತ್ತಾರೆ. “ನಮಗೆ ಯಾವುದೇ ಕ್ರಮಬದ್ಧ ತರಬೇತಿಯಿಲ್ಲ. ನಾನು ಈ ಕಲಾ ಪ್ರಕಾರವನ್ನು ನನ್ನ ತಂದೆಯಿಂದ ಕಲಿತೆ. ಅವರು ತಮ್ಮ ತಂದೆಯಿಂದ ಇದನ್ನು ಕಲಿತರು. ದುಲ್‌ದುಲಿ ಕಲಾತ್ಮಕ ಪರಂಪರೆಯನ್ನು ತನ್ನ ಕುಟುಂಬದ ಹಿಂದಿನ ಮೂರು ತಲೆಮಾರುಗಳಿಂದಲೂ ಗುರುತಿಸಬಹುದು” ಎಂಬುದಾಗಿ ಅವರು ತಿಳಿಸಿದರು.
ವಾಸದ ಕೊಠಡಿಯಲ್ಲಿ ಪ್ರಮಾಣ ಪತ್ರಗಳಿಂದ ತುಂಬಿರುವ ಗೋಡೆಯತ್ತ ಗಮನಸೆಳೆದ ಕೃಷ್ಣ ಹೀಗೆಂದರು: “ಇದು ನಮಗೆ ಸಂದ ಗೌರವ.” 40 ದಶಕಗಳಿಂದಲೂ ಕಲಾಕಾರರಾಗಿರುವ ಇವರು ದೇಶಾದ್ಯಂತ ಹಾಗೂ ಲೋಕ್ ಮಹೋತ್ಸವ್‌ನಂತಹ ಪ್ರತಿಷ್ಠಿತ ಕಾರ್ಯಕ್ರಮಗಳಲ್ಲಿ ಪ್ರದರ್ಶನಗಳನ್ನು ನೀಡಿದ್ದಾರೆ. ಲೋಕ್ ಮಹೋತ್ಸವವು ಒಡಿಶಾದ ಸ್ಥಳೀಯ ಜಿಲ್ಲಾ ಆಡಳಿತ ವ್ಯವಸ್ಥೆಯು ಆಯೋಜಿಸುವ ವಾರ್ಷಿಕ ಉತ್ಸವ.
ತಂಡದ ಪ್ರದರ್ಶನದ ಅವಧಿಗೆ ಅನುಸಾರವಾಗಿ ಕೃಷ್ಣ, 1,000 – 2,000 ರೂ.ಗಳವರೆಗೆ ಶುಲ್ಕವನ್ನು ವಿಧಿಸುತ್ತಾರೆ.
ಕೃಷ್ಣ ಅವರು ಮೂರು ವರ್ಷಗಳ ಹಿಂದೆ ಹತ್ತಿರದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಸಂಗೀತದ ಉಪಾಧ್ಯಾಯರ ಕೆಲಸವನ್ನು ಆರಂಭಿಸಿದರು. ತಮ್ಮ ದುಲ್‌ದುಲಿ ತಂಡದೊಂದಿಗಿನ ಅಭ್ಯಾಸ ಹಾಗೂ ಪ್ರದರ್ಶನಗಳ ಜೊತೆಗೆ, ಈ ಸಂಗೀತಗಾರರು ವಾರಾಂತ್ಯಗಳಲ್ಲಿ ಯುವಜನರಿಗೆ ದಲಖಲಿ ನೃತ್ಯವನ್ನು ಸಹ ಕಲಿಸುತ್ತಾರೆ.
*****
ದುಲ್‌ದುಲಿ ಮತ್ತು ದಲ್ಖಯ್ ಜೊತೆಯಾಗಿ ಸಾಗುತ್ತವೆ ಎನ್ನುತ್ತಾರೆ, 40 ವರ್ಷಗಳಿಂದಲೂ ಈ ಕಲಾ ಪ್ರಕಾರದಲ್ಲಿ ತೊಡಗಿಸಿಕೊಂಡಿರುವ ದುರ್ಗಾ ಪ್ರಸಾದ್ ದಾಶ್. ನರ್ತಕರು, ನೃತ್ಯ ಸಂಯೋಜಕರು ಮತ್ತು ಪ್ರದರ್ಶನ ಕಲಾವಿದರೂ ಆಗಿರುವ ಇವರು ದಲ್ಖಯ್ ಅನ್ನು ಕಲಿಸುತ್ತಾರೆ.
55 ವರ್ಷದ ಇವರು ಧನ್‌ಕೌಡ ವಲಯದಲ್ಲಿನ ಮಕೆ ಜ್ಹಿಪಲಿ ಹಳ್ಳಿಯ ನಿವಾಸಿ. ದಲ್ಖಯ್‌ನಲ್ಲಿ ದುರ್ಗಾ ದೇವಿಯ ಭೌತಿಕ ಅಭಿವ್ಯಕ್ತಿಯೆನಿಸಿದ ದಲ್ಖಯ್ ದೇವತೆಗೆ ಮೀಸಲಾದ ಹಾಡಿಗೆ ನರ್ತಿಸುವ ತಂಡವನ್ನು ಹೊಂದಿರುವ ದಲ್ಖಯ್ ಕಲೆಯೊಂದಿಗೆ ಬ್ರಾಹ್ಮಣ ಸುಮುದಾಯವು ಐತಿಹಾಸಿಕ ಸಂಬಂಧವನ್ನು ಹೊಂದಿಲ್ಲವೆಂದು ತಿಳಿಸುವ ದಾಶ್ ಬ್ರಾಹ್ಮಣ ಸಮುದಾಯಕ್ಕೆ ಸೇರಿದವರು.
“ಈ ಹಿಂದೆ ಕೊಲ್, ಖರಿಯ, ಬಿಂಝಲ್ ಮತ್ತು ಒರಒನ್ ಸಮುದಾಯದ (ಒಡಿಶಾದಲ್ಲಿ ಪರಿಶಿಷ್ಟ ಬುಡಕಟ್ಟು ಎಂಬುದಾಗಿ ಪಟ್ಟಿಮಾಡಲಾಗಿದೆ) ಮಹಿಳೆಯರು ದಸರಾ ಹಬ್ಬದ ಸಮಯದಲ್ಲಿನ ತಮ್ಮ ಉಪವಾಸವನ್ನು ಕೊನೆಗೊಳಿಸಲು ದುಲ್‌ದುಲಿ ಲಯಕ್ಕೆ ತಕ್ಕಂತೆ ನರ್ತಿಸುತ್ತಿದ್ದರು” ಎಂದರು ದಾಶ್.
“ನಾನು ಚಿಕ್ಕವನಿದ್ದಾಗ ದಲ್ಖಯ್ ಪ್ರದರ್ಶನಗಳನ್ನು ವೀಕ್ಷಿಸಲು ನನಗೆ ಅನುಮತಿಯಿರಲಿಲ್ಲ. ಮಕ್ಕಳಿಗೆ ಅದು ಅಸಭ್ಯವೆಂದು ಆ ಕಾಲದಲ್ಲಿ ಪರಿಗಣಿಸಲಾಗಿತ್ತು. ಶಾಲಾ ದಿನಗಳಲ್ಲಿ ಗುಂಪಿನಲ್ಲಿ ಅಡಗಿಕೊಂಡು ನಾನು ದಲ್ಖಯ್ ಪ್ರದರ್ಶನವನ್ನು ವೀಕ್ಷಿಸುತ್ತಿದ್ದೆ” ಎಂದರವರು.
1980ರ ಉತ್ತರಾರ್ಧದಲ್ಲಿ ಇದು ಬದಲಾಯಿತು. ದಲ್ಖಯ್ ಸಾರ್ವಜನಿಕವಾಗಿ ಪ್ರದರ್ಶಿತಗೊಳ್ಳತೊಡಗಿತು. ಅದರ ಶ್ರೋತೃಗಳ ಸಂಖ್ಯೆ ಹೆಚ್ಚಾಯಿತಲ್ಲದೆ, ಅನೇಕ ಹೊಸ ತಂಡಗಳು ರೂಪುಗೊಂಡವು. ವಿವಿಧ ಸಮುದಾಯಗಳ ಜನರು ಇದಕ್ಕೆ ಸೇರಿದರು. ಈ ಕಲಾಪ್ರಕಾರದಲ್ಲಿ ಮೊದಲಿನಿಂದಲೂ ತೊಡಗಿಸಿಕೊಂಡಿದ್ದವರು ಶಿಕ್ಷಕರು ಅಥವಾ ಸಲಹೆಗಾರರಾಗಿ ತಮ್ಮದೇ ನೃತ್ಯ ತಂಡ ಮತ್ತು ತರಬೇತಿ ಶಾಲೆಯನ್ನು ಆರಂಭಿಸಿದರು.
ದಲ್ಖಯ್ ಪ್ರದರ್ಶನಗಳ ಕ್ಷೇತ್ರದಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸಿದ ತಮ್ಮ ಅನುಭವವನ್ನು ಒಟ್ಟುಗೂಡಿಸುತ್ತ, “ದಲ್ಖಯ್ ಕೇವಲ ನೃತ್ಯವಲ್ಲ. ಇದೇ ನಮ್ಮ ಪ್ರಪಂಚ” ಎಂದರು ಡಾಶ್.
*****
24ರ ವಯಸ್ಸಿನ ದಲ್ಖಯ್ ನರ್ತಕಿ ಟಿಕಿ ಮೆಹೆರ್, ಸಂಬಲ್‌ಪುರದ ರೈರಖೋಲ್ ವಲಯದ ರೈರಖೋಲ್ ಗ್ರಾಮದವರು. ಇವರು ಮೆಹಲ್ ಸಮುದಾಯಕ್ಕೆ ಸೇರಿದವರು. ಹೆಚ್ಚು ಲಾಭದಾಯಕ ದಲ್ಖಯ್ ಅವಕಾಶಗಳ ಅನ್ವೇಷಣೆಯಲ್ಲಿದ್ದ ಇವರು, ತನ್ನ ಕುಟುಂಬದ ನಾಲ್ವರೊಂದಿಗೆ ಅಂದರೆ, ಇಬ್ಬರು ಕಿರಿಯ ಸಹೋದರರು ಹಾಗೂ ತಾಯಿಯೊಂದಿಗೆ 2014ರಲ್ಲಿ ಇದೇ ಜಿಲ್ಲೆಯ ಬರ್ಲ ಊರಿಗೆ ಬಂದು ನೆಲೆಸಿದರು.
ಇಂದು ಇವರು ಕಲಜಿಬಿ ಎಂಬ ಪ್ರಖ್ಯಾತ ನೃತ್ಯ ತಂಡದ ಸದಸ್ಯರು. ದೇಶಾದ್ಯಂತ ಪ್ರದರ್ಶನಗಳನ್ನು ನೀಡುವ ಎಂಟು ಖಾಯಂ ದಲ್ಖಯ್ ನರ್ತಕಿಯರಲ್ಲಿ ಇವರೂ ಒಬ್ಬರು. “ಮೊದಲಿಗೆ ನಾನು ಹಿನ್ನೆಲೆ ನರ್ತಕಿಯಾಗಿದ್ದೆ ಈಗ ಹಾಕಿ worldcupನಲ್ಲಿ ಪ್ರದರ್ಶನವನ್ನು ನೀಡುತ್ತಿದ್ದೇನೆ. ಇದು ನನಗೆ ತೃಪ್ತಿಯನ್ನು ನೀಡಿದೆ” ಎಂದು ಅವರು ಹೆಮ್ಮೆಯಿಂದ ನುಡಿದರು.
ಟಿಕಿ 19 ವರ್ಷದವರಿದ್ದಾಗ ಅವರ ತಂದೆ ನಿಧನರಾದರು. ಮಕ್ಕಳಲ್ಲಿ ಹಿರಿಯರಾದ ಇವರು ಏಕಾಏಕಿ ತಾಯಿ ಹಾಗೂ ಇಬ್ಬರು ಕಿರಿಯ ಸಹೋದರರ ಜವಾಬ್ದಾರಿಯನ್ನು ನಿಭಾಯಿಸುವ ದಾರಿಯನ್ನು ಹುಡುಕಬೇಕಾಯಿತು. “ಸಂಪಾದನೆಗೆ ದಾರಿಯಾಗಬಹುದೆಂಬ ನಿರೀಕ್ಷೆಯೊಂದಿಗೆ ನಾನು ದಲ್ಖಯ್ ಅನ್ನು ಕಲಿಯಲಾರಂಭಿಸಿದೆ” ಎಂಬುದಾಗಿ ಅವರು ತಿಳಿಸಿದರು.
“ಶಾಲಾ ವಾರ್ಷಿಕೋತ್ಸವದಲ್ಲಿ ವೇದಿಕೆಯ ಮೇಲಿನ ತಮ್ಮ ಮಕ್ಕಳ ನೃತ್ಯ ಪ್ರದರ್ಶನವನ್ನು ಎಲ್ಲ ತಂದೆ ತಾಯಿಯರು ಗುರುತಿಸುತ್ತಾರಾದರೂ, ಅದೇ ಮಗುವು ತಾನು ವೃತ್ತಿಪರ ನರ್ತಕ/ಕಿಯಾಗುತ್ತೇನೆಂದರೆ ಬಯ್ಯುತ್ತಾರೆ” ಎಂದರಾಕೆ.
ಪ್ರಾರಂಭದಲ್ಲಿ ಇವರ ನಿರ್ಧಾರಗಳಿಗೆ ವಿರೋಧವ ವ್ಯಕ್ತವಾಯಿತು. “ನೆರೆಹೊರೆಯವರು ನನ್ನ ಕುಟುಂಬದವರಿಗೆ ನೃತ್ಯವು ನನಗೆ ಗೌರವಯುತ ವೃತ್ತಿಯಲ್ಲ. ಯಾರೂ ನನ್ನನ್ನು ವಿವಾಹವಾಗುವುದಿಲ್ಲ” ಎಂದು ಹೇಳುತ್ತಿದ್ದರು.
ಆದರೆ, ಟಿಕಿ ಅವರಿಗೆ ಅತ್ಯಂತ ಕಠಿಣ ಸಮಯಗಳಲ್ಲಿ ನೃತ್ಯವು ನಿರಂತರವಾಗಿ ಭರವಸೆಯನ್ನು ನೀಡುತ್ತಿತ್ತು. “ನನ್ನೆಲ್ಲ ಏಳುಬೀಳುಗಳಲ್ಲಿ ನನಗೆ ಸಂತೋಷವನ್ನು ನೀಡುತ್ತಿದ್ದುದು ನೃತ್ಯವೊಂದೇ. ಜಗತ್ತಿನೊಂದಿಗೆ ಮುಖಾಮುಖಿಯಾಗಲು ಇದು ನನ್ನ ”ಆತ್ಮವಿಶ್ವಾಸಕ್ಕೆ ಹುಮ್ಮಸ್ಸು ನೀಡುತ್ತಿತ್ತು” ಎಂದರವರು.
ಅನುವಾದ: ಶೈಲಜಾ ಜಿ.ಪಿ.