ಅಶೋಕ್‌ ಭಟ್‌ ಅವಸರವಾಗಿ ತಮ್ಮ ಗೊಂಬೆಗಳನ್ನು, ಮರದಿಂದ ಮಾಡಿದ ಪುಟಾಣಿ ಪುಟಾಣಿ ಆಟಿಕೆ ಆನೆ ಮತ್ತು ಕುದುರೆಗಳನ್ನು ಸೇರಿಸಿ ಗಂಟು ಕಟ್ಟುತ್ತಿದ್ದಾರೆ. ಅವುಗಳನ್ನು ಮಾರಾಟಕ್ಕೆಂದು ಹರಡಿದ ಬಿಳೀ ಹಾಳೆಯಲ್ಲಿಯೇ ಅವುಗಳನ್ನು ಮೂಟೆಕಟ್ಟುತ್ತಿದ್ದಾರೆ. ಅವರು ತಡಮಾಡುವಂತಿಲ್ಲ, ಏಕೆಂದರೆ ಅವರು ತಮ್ಮ ಗೊಂಬೆಗಳನ್ನು ಮಾರಾಟಕ್ಕೆಂದು ಇಟ್ಟಿರುವ‌ ದಕ್ಷಿಣ ದೆಹಲಿಯ ಸರಕಾರೀ ಮಾರುಕಟ್ಟೆ ʼದೆಹಲಿ ಹಾಥ್ʼ ನ ಹೊರಗಡೆ ಅನಧಿಕೃತ ವ್ಯಾಪರಿಗಳ ಮೇಲೆ ಪೋಲೀಸರು ಹಠಾತ್‌ ಧಾಳಿ ಆರಂಭಿಸಿದ್ದಾರೆ. ಅಶೋಕ್‌ ಮುಂದೇನು ಮಾಡಬೇಕು ಎಂಬುದೇ ಅನಿಶ್ಚಿತವಾಗಿದೆ.

ದೆಹಲಿ ಹಾಥ್‌ ಎಂಬುದು ಕುಶಲಕರ್ಮಿಗಳು ತಾವು ತಯಾರಿಸಿದ ವಸ್ತುಗಳನ್ನು ಮಾರಾಟ ಮಾಡಲು ಸ್ಥಳೀಯ ಮುನ್ಸಿಪಾಲಿಟಿಯಿಂದ ಗುರುತಿಸಲಾದ ತೆರೆದ ಮಾರುಕಟ್ಟೆ ಜಾಗ. ಈ ಜಾಗದಲ್ಲಿ ಕುಶಲಕರ್ಮಿಗಳು ತಮ್ಮ ವಸ್ತುಗಳನ್ನು ಮಾರಾಟ ಮಾಡಲು ಅವರಿಗೆ ಅಲ್ಪ ಅವಧಿಯವರೆಗೆ ಸ್ಟಾಲ್ ಗಳನ್ನು ನೀಡಲಾಗುತ್ತದೆ. ಆದರೆ ಅಶೋಕ್‌ ಮತ್ತು ತಮ್ಮ ಸರದಿಗಾಗಿ ಕಾಯುತ್ತಿರುವ ಇನ್ನೂ ಕೆಲವರು ತಮ್ಮ ನಿಗದಿತ ಜಾಗದಿಂದ ಹೊರಗೆ ತಮ್ಮ ವಸ್ತುಗಳನ್ನು ಮಾರಾಟ ಮಾಡುತ್ತಿದ್ದಾರೆ. ಆದ್ದರಿಂದಲೇ ʼಅನಧಿಕೃತʼ ಮಾರಾಟ ಎಂದು ಪರಿಗಣಿಸಿ ಅವರ ಮೇಲೆ ಪೊಲೀಸರು ಧಾಳಿ ಮಾಡುತ್ತಿದ್ದಾರೆ.

“ದೆಹಲಿ ಹಾಥ್‌ ನ ಹೊರಗಡೆ ಇದೆಲ್ಲಾ ಮಾಮೂಲಿ” ಎನ್ನುತ್ತಾರೆ 40 ವರ್ಷದ ಅಶೋಕ್‌ ಭಟ್.‌ “ ಸಂಪಾದನೆ ಮಾಡಬೇಕಾದ ಅನಿವಾರ್ಯತೆಯಿಂದಾಗಿ ನಾನಿಲ್ಲಿ ನನ್ನಗೊಂಬೆಗಳನ್ನು ಮಾರಾಟ ಮಾಡುತ್ತಿದ್ದೇನೆ”. ಪೋಲೀಸರು ಹೊರಟುಹೋದ ಮೇಲೆ ಅಶೋಕ್‌ ಮಾರುಕಟ್ಟೆಯ ಪ್ರವೇಶ ದ್ವಾರದ ಬಳಿ ತಮ್ಮ ಜಾಗಕ್ಕೆ ಮತ್ತೆ ಮರಳುತ್ತಾರೆ. ಮತ್ತೊಮ್ಮೆ ಬಿಳೀ ಬಟ್ಟೆಯನ್ನು ಹರಡಿ  ಗೊಂಬೆಗಳನ್ನು ತಮ್ಮ ಮಡದಿಯ ಸಹಾಯದಿಂದ ಮತ್ತೆ ಮಾರಾಟಕ್ಕೆ ಜೋಡಿಸುತ್ತಾರೆ (ಅವರ ಮಡದಿ ತಮ್ಮ ಹೆಸರು ಹೇಳಲು ಇಚ್ಛೆಪಡಲಿಲ್ಲ). ಆಕರ್ಷಕ ಕೆಂಪು ಮತ್ತು ಕೇಸರಿ ಬಣ್ಣದ ಬಂಧೇಜ್‌ ಪ್ರಿಂಟ್‌ ವಿನ್ಯಾಸದಿಂದ ಕಂಗೊಳಿಸುವ ಸುಂದರ ಗೊಂಬೆಗಳನ್ನು ಮಾರಾಟಕ್ಕೆ ಒಪ್ಪವಾಗಿ ಜೋಡಿಸಿ ತಮ್ಮ ದಿನವನ್ನು ಮತ್ತೊಮ್ಮೆ ಪ್ರಾರಂಭಿಸುತ್ತಾರೆ.

*****

“ಗೊಂಬೆಯಾಟಗಾರರ ಕಾಲೋನಿ ಸದಾ ದೇಶ ವಿದೇಶಗಳ ಪ್ರವಾಸಿಗರಿಂದ ತುಂಬಿರುತ್ತಿತ್ತು”

“ ನಮಗೆ ಯಾವತ್ತೂ ಕೆಲಸದ ಕೊರತೆ ಆದದ್ದೇ ಇಲ್ಲ” ಎನ್ನುತ್ತಾರೆ ಮೂವತ್ತರ ಹರೆಯದ ಬೊಂಬೆಯಾಟ ಕಲಾವಿದ ಸನ್ನಿ(ಹೆಸರು ಬದಲಾಯಿಸಲಾಗಿದೆ). ರಾಜಧಾನಿ ದೆಹಲಿಯಲ್ಲಿ ಸದಾ ಒಂದಿಲ್ಲೊಂದು ಗೊಂಬೆಯಾಟ ಪ್ರದರ್ಶನ ನಡೆಯುತ್ತಲೇ ಇರುತ್ತಿದ್ದ ನೆರೆಹೊರೆಯಲ್ಲೇ ಬೆಳೆದ ಅವರು ತಮ್ಮ ಬಾಲ್ಯವನ್ನು ನೆನಪಿಸಿಕೊಳ್ಳುತ್ತಾರೆ. ಇಂತಹ ರೋಮಾಂಚಕ ವಾತಾವರಣವೇ ಅವರಿಗೆ ಈ ಕಲೆಯನ್ನು ಕಲಿತುಕೊಳ್ಳಲು ಪ್ರೇರಣೆಯಾಯಿತು. ಮುಂದುವರಿದು ಹೇಳುತ್ತಾರೆ “ ಬಹಳ ದೂರ ದೂರದ ಊರುಗಳಿಂದ ಜನ ಗೊಂಬೆಯಾಟ ಪ್ರದರ್ಶನ ನೋಡಲು ಬರುತ್ತಿದ್ದರು ಮತ್ತು ತಕ್ಚಣವೇ ನಮಗೆ ಹಣ ಪಾವತಿ ಮಾಡುತ್ತಿದ್ದರು”.

Chamanlal Bhat (left), Ashok Bhat and his wife (right) have made puppets and performed shows with them across the country
PHOTO • Himanshu Pargai
Chamanlal Bhat (left), Ashok Bhat and his wife (right) have made puppets and performed shows with them across the country
PHOTO • Himanshu Pargai

ಚಮನ್ ಲಾಲ್‌ ಭಟ್ (ಎಡಬದಿ), ಅಶೋಕ್‌ ಭಟ್‌ ಮತ್ತು ಅವರ ಪತ್ನಿ (ಬಲಬದಿ) ಗೊಂಬೆಗಳನ್ನು ತಯಾರಿಸುವುದು ಮಾತ್ರವಲ್ಲದೆ ದೇಶಾದ್ಯಂತ ಗೊಂಬೆಯಾಟ ಪ್ರದರ್ಶನಗಳನ್ನೂ ನೀಡಿದ್ದಾರೆ

60 ವರ್ಷ ಆಸುಪಾಸಿನ ಕುಶಲಕರ್ಮಿ ಚಮನ್‌ ಲಾಲ್‌ ಭಟ್‌ ತಮ್ಮ ಕುಟುಂಬದೊಂದಿಗೆ 1970ರ ದಶಕದ ಪ್ರಾರಂಭದಲ್ಲಿ ಪಶ್ಚಿಮ ದೆಹಲಿಯಲ್ಲಿರುವ ಈ ಗೊಂಬೆಯಾಟಗಾರರ ಕಾಲೊನಿಗೆ ಬಂದು ನೆಲೆಸಿದರು. ಅವರಂತೆ ಅನೇಕ ಕಲಾವಿದರು ರಾಜಸ್ಥಾನದಿಂದ ಇಲ್ಲಿಗೆ ವಲಸೆ ಬಂದು ನೆಲೆಸಿದ್ದರು. ಶಾದೀಪುರ್‌ ಎಂಬ ದೆಹಲಿಯ ಈ ಭಾಗ ಹೇಗೆ ಬೊಂಬೆ ತಯಾರಕರ ಕೇಂದ್ರ ಎಂದು ಕರೆಸಿಕೊಳ್ಳುತ್ತಿತು ಎಂಬುದನ್ನು ಅವರು ನೆಸಪಿಸಿಕೊಳ್ಳುತ್ತಾರೆ.

ಅಶೋಕ್‌ ತಮ್ಮ ತಂದೆಯಿಂದ ಈ ಬೊಂಬೆಗಳನ್ನು ತಯಾರಿಸುವ ಮತ್ತು ಬೊಂಬೆಯಾಟ ಪ್ರದರ್ಶನ ನೀಡುವ ಕಲೆಯನ್ನು ಕಲಿತವರು. ಅವರ ಕುಟುಂಬದಲ್ಲಿ ಹಲವಾರು ತಲೆಮಾರುಗಳಿಂದ ಈ ಕಲೆಯನ್ನು ಉಳಿಸಿಕೊಂಡು ಬಂದಿದ್ದಾರೆ. ರಾಜಸ್ಥಾನೀ ಜಾನಪದ ಕಥೆಗಳನ್ನು ಆಧರಿಸಿ ಅವರು ಬೊಂಬೆಯಾಟ ಪ್ರದರ್ಶನ ನೀಡುತ್ತಾರೆ. ಮಾತ್ರವಲ್ಲದೆ ಆಡಿಸುವವರ ಅಪೇಕ್ಷೆಯ ಮೇರೆಗೆ ಇತರೆ ಕಥೆಗಳ ಬೊಂಬೆಯಾಟ ಪ್ರದರ್ಶನವನ್ನೂ ನೀಡುತ್ತಾರೆ. “ ಗೊಂಬೆಗಳನ್ನು ತಯಾರಿಸುವುದು, ಪ್ರದರ್ಶನಕ್ಕಾಗಿ ಕಥೆಗಳನ್ನು ಬರೆಯುವುದು, ಮತ್ತು ಪ್ರದರ್ಶನ ನೀಡುವುದು  ಕೇವಲ ದೈಹಿಕ ಶ್ರಮ ಮಾತ್ರವಲ್ಲ, ಅದಕ್ಕಾಗಿ ತುಂಬ ಮಾನಸಿಕ ಶ್ರಮ ಪಡಬೇಕಾಗುತ್ತದೆ”  ಎನ್ನುತ್ತಾರೆ.

ಈ ಕಲೆಯ ಬಗ್ಗೆ ವಿವರಿಸುತ್ತಾ ಅವರು ಹೇಳುತ್ತಾರೆ “ ಗೊಂಬೆಗಳನ್ನು ತಯಾರಿಸುವುದು ಬಹಳ ಸಮಯ ಹಿಡಿಯುವ ಕೆಲಸ. ಮೊದಲು ಮರದಿಂದ  ಪಟ್ಟಿಗಳನ್ನು ಮಾಡಬೇಕು, ಅವುಗಳನ್ನು ಹಲವು ದಿನ ಬೆಸಿಲಿನಲ್ಲಿ ಒಣಗಿಸಬೇಕು, ಆನಂತರ ಅವುಗಳಿಗೆ ಪಾಲಿಷ್‌ ಮಾಡಿ ಬಣ್ಣ ಬಳಿಯಬೇಕು”.

“ಬೊಂಬೆಗಳು ಸುಂದರವಾಗಿ ಕಾಣಲು ನಾಲ್ಕರಿಂದ ಐದು ಬಾರಿ ಬಣ್ಣ ಹಚ್ಚಬೇಕಾಗುತ್ತದೆ. ಆನಂತರ ಬ್ರಶ್‌ ಬದಿಗೆ ಇಟ್ಟು ಸೂಜಿ ಮತ್ತು ದಾರದ ಕೆಲಸ ಪ್ರಾರಂಭವಾಗುತ್ತದೆ. ಗೊಂಬೆಯ ಪ್ರತಿಭಾಗಕ್ಕೂ ಬೇರೆ ಬೇರೆ ಉಪಕರಣಗಳನ್ನು ಬಳಸುವ ಚಾಕಚಕ್ಯತೆ ಸಿದ್ಧಿಸಲು ಹಲವಾರು ವರ್ಷಗಳ ಅನುಭವ ಬೇಕಾಗುತ್ತದೆ. ಗೊಂಬೆಗಳಿಗೆ ಸುಂದರವಾದ ಬಟ್ಟೆ ತೊಡಿಸಲು ಬಟ್ಟೆಯನ್ನು ಹೊಲಿದು ಅವುಗಳ ಮೇಲೆ ಜರಿಯ ಕೆಲಸ ಮಾಡಬೇಕು. ಆನಂತರ ಸೂತ್ರವನ್ನು ಜೋಡಿಸಿ ಗೊಂಬೆಗಳು ಕುಣಿಯುವಂತೆ ಮಾಡಬೇಕು” ಎನ್ನುತ್ತಾರೆ.

“ವರ್ಷದ ಈ ತಿಂಗಳುಗಳಲ್ಲಿ ನಾನು ಜಾತ್ರೆ, ಮದುವೆ ಮತ್ತು ಕಾರ್ಯಕ್ರಮಗಳಲ್ಲಿ ಕೆಲಸಮಾಡುತ್ತಿದ್ದೆ” ಎಂದು ಅಶೋಕ್‌ ನೆನಪಿಸಿಕೊಳ್ಳುತ್ತಾರೆ. “ಈಗಲೂ ನಮ್ಮ ಕೆಲಸವನ್ನು ಇಷ್ಟಪಟ್ಟು ಕರೆಸುವವರು ಇದ್ದಾರೆ. ಆದರೆ ಅಂತವರ ಸಂಖ್ಯೆ ಈಗ ಬಹಳ ಕಡಿಮೆ”

Puppets made by Ashok and his family for sale outside Dilli Haat in New Delhi
PHOTO • Himanshu Pargai

ನವದೆಹಲಿಯ ದೆಹಲಿ ಹಾಥ್‌ ನ ಹೊರಗಡೆ ಮಾರಾಟಕ್ಕಿರುವ ಅಶೋಕ್‌ ಮತ್ತು ಕುಟುಂಬದವರು ತಯಾರಿಸಿದ ಗೊಂಬೆಗಳು

“ತಮ್ಮ ಶಾಲೆಗೆ ಹೋಗುವ ಮಕ್ಕಳ ಓದಿಗೆ ಬೆಂಬಲವಾಗಲು ಗೊಂಬೆಗಳನ್ನು ಮಾರುವುದು ನಮಗಿರುವ ಒಂದೇ ದಾರಿ. ನನ್ನಪ್ಪ ನನಗೆ ಈ ಗೊಂಬೆಯಾಟದ ಕಲೆಯನ್ನು ಕಲಿಸಿದಂತೆ ನಾನೂ ನನ್ನ ಮಕ್ಕಳಿಗೆ ಕಲಿಸುತ್ತಿದ್ದೇನೆ. ಏಕೆಂದರೆ ಗೊಂಬೆಯಾಟದ ಕಲೆ ಯಾವತ್ತೂ ಸಾಯುವುದಿಲ್ಲ” ಎಂದು ನಗುತ್ತಾ ಹೇಳುತ್ತಾರೆ.

*****

20 ವರ್ಷದ ಕಲಾವಿದ ಸನ್ನಿ ತಮ್ಮ ನಿವಾಸ ಸ್ಥಾನ ಬದಲಾವಣೆ ಆದದ್ದೇ ತಮ್ಮ ಭವಿಷ್ಯ ಹಾಳಾಗಲು ಕಾರಣ ಎಂದು  ಆನಂದ ಪರ್ಬತ್‌ ಕೈಗಾರಿಕಾ ಪ್ರದೇಶದ ತಮ್ಮ ತಾತ್ಕಾಲಿಕ ಮನೆಯ ಮುಂದೆ ಕುಳಿತು ಬೇಸರಿಸುತ್ತಾರೆ.

ಮೊದಲು ನಮ್ಮ ಗೊಂಬೆಯಾಟ ಸಮುದಾಯವು ಪಶ್ಚಿಮ ದೆಹಲಿಯಲ್ಲಿರುವ ಶಾದೀಪುರ ಎಂಬಲ್ಲಿತ್ತು. 2017 ರಲ್ಲಿ ದೆಹಲಿ ಅಭಿವೃದ್ಧಿ ಪ್ರಾಧಿಕಾರವು ಮೊದಲ ಕೊಳಗೇರಿ ಪುನರ್ವಸತಿ ಯೋಜನೆಯ ಅನ್ವಯ ಅಲ್ಲಿನ ನಿವಾಸಿಗಳನ್ನು ಈಗಿರುವ ಈ ಶಿಬಿರಕ್ಕೆ ಸ್ಥಳಾಂತರಿಸಲಾಯಿತು. ಪ್ರಾಧಿಕಾರವು ಅವರಿಗಾಗಿ ಹಿಂದಿನ ಸ್ಥಳದಲ್ಲೇ ಮನೆಗಳನ್ನು ಮರುನಿರ್ಮಾಣ ಮಾಡಿ ಅವರಿಗೆ ಮೊದಲಿನ ಜಾಗದಲ್ಲೇ ಉತ್ತಮ ಮನೆಗಳಲ್ಲಿ ಪುನರ್ವಸತಿ ಕಲ್ಪಿಸುವುದು ಯೋಜನೆಯ ಉದ್ದೇಶವಾಗಿತ್ತು. ಆದರೆ ಆರು ವರ್ಷ ಕಳೆದರೂ ಗೊಂಬೆ ಕಲಾವಿದರು ತಾತ್ಕಾಲಿಕ ಶಿಬಿರದಲ್ಲೇ ಇದ್ದಾರೆ.

ಅವರು ವಾಸಿಸುತ್ತಿರುವ ತಾತ್ಕಾಲಿಕ ಶಿಬಿರಗಳು ಮೊದಲಿನ ಪ್ರದೇಶದಿಂದ ಐದು ಕಿಲೋಮೀಟರದ ದೂರದಲ್ಲಿವೆ. ಇದರಿಂದಾಗಿ ಗೊಂಬೆ ತಯಾರಕರು ಮತ್ತು ಗೊಂಬೆಯಾಟ ಕಲಾವಿದರ ಬದುಕಿನ ಮೇಲೆ ತೀವ್ರ ಪರಿಣಾಮ ಉಂಟಾಗಿದೆ ಎಂಬುದು ಅವರ ಅಭಿಪ್ರಾಯ.

“ ಹಿಂದೆ ನಮ್ಮ ಕಾಲೋನಿ ಮುಖ್ಯ ರಸ್ತೆಯ ಬಳಿ ಇತ್ತು ಮತ್ತು ಸುಲಭವಾಗಿ ತಲುಪಬಹುದಾಗಿತ್ತು. ಈಗ ನಾವಿರುವ ಜಾಗದ ಬಗ್ಗೆ ಯಾರಿಗೂ ತಿಳಿದಿಲ್ಲ. ಯಾರೂ ಇಲ್ಲಿ ಬರಲು ಇಷ್ಟಪಡುವುದಿಲ್ಲ. ಆನಂದ್‌ ಪರ್ಬತ್‌ ಪ್ರದೇಶದ ಬಗ್ಗೆ ತಿಳಿದಿರುವ ಟ್ಯಾಕ್ಸಿವಾಲಗಳೂ ಇಲ್ಲಿಗೆ ಬರುವ ಸವಾರಿಯನ್ನು ಒಪ್ಪಿಕೊಳ್ಳುವುದಿಲ್ಲ.

ಸನ್ನಿ ಹೇಳುತ್ತಾರೆ “ಈ ಶಿಬಿರದ ಹೊರಬದಿಯಲ್ಲಿ ಸರಿಯಾದ ರಸ್ತೆಗಳೇ ಇಲ್ಲ. ಇಲ್ಲಿನ ದಾರಿಯಲ್ಲಿ ನಡೆಯುವುದೂ ಬಹಳ ಕಷ್ಟ.  ಎಲ್ಲಿಗಾದರೂ ಸಮಯಕ್ಕೆ ಸರಿಯಾಗಿ ತಲುಪಬೇಕಾದರೆ ನಾವು ಎರಡು ಗಂಟೆ ಮೊದಲೇ ಹೊರಡಬೇಕಾಗುತ್ತದೆ”

Puppet-makers blame the fall in the fortunes of puppet makers to a shift in residence to a transit camp in Anand Parbat Industrial Area. Residents say the area is poorly maintained and they often fall ill
PHOTO • Himanshu Pargai
Puppet-makers blame the fall in the fortunes of puppet makers to a shift in residence to a transit camp in Anand Parbat Industrial Area. Residents say the area is poorly maintained and they often fall ill
PHOTO • Himanshu Pargai

ತಮ್ಮ ಮೂಲ ಸ್ಥಾನದಿಂದ ಈ ತಾತ್ಕಾಲಿಕ ಶಿಬಿರಗಳಿಗೆ ತಮ್ಮ ವಸತಿಯನ್ನು ಬದಲಾಯಿಸಿದ್ದು ಗೊಂಬೆ ತಯಾರಕರ ಬದುಕಿನ ಭವಿಷ್ಯವನ್ನೇ ಹಾಳುಗೆಡವಿದಂತಾಗಿದೆ. ಈ ಪ್ರದೇಶದ ಸ್ವಚ್ಛತೆಯನ್ನು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ, ಇದರಿಂದಾಗಿ ಅವರೆಲ್ಲ ಆಗಾಗ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ

ಫೈಬರ್‌ ಗ್ಲಾಸ್‌ ಗೋಡೆ ಮತ್ತು ಟಿನ್‌ ಶೀಟ್‌ಹಾಕಿ ಮಾಡಿದ ಈ ತಾತ್ಕಾಲಿಕ ಶಿಬಿರದ ಮನೆಗಳಲ್ಲಿ ಸುಮಾರು 2800 ಕುಟುಂಬಗಳು ವಾಸಮಾಡುತ್ತವೆ. ಮನೆಗಳ ಸಾಲಿನ ಕೊನೆಯಲ್ಲಿ ಎಲ್ಲ ಮನೆಗಳಿಗೂ ಸಾಮಾನ್ಯ ಶೌಚಾಲಯ ಮತ್ತು ಸ್ನಾನದ ಮನೆಗಳಿವೆ. ಅವುಗಳ ನಿರ್ವಹಣೆ ಏನೂ ಚೆನ್ನಾಗಿಲ್ಲ. ನಲ್ಲಿಯಲ್ಲಿ ನೀರು ಬರುವುದೇ ಅಪರೂಪ. “ ಈ ಶಿಬಿರದಲ್ಲಿಆರೋಗ್ಯ ಮತ್ತು ಸ್ವಚ್ಛತಾ ನಿರ್ವಹಣೆಗೆ ಬೇಕಾದ ಸೌಲಭ್ಯಗಳೇ ಇಲ್ಲ. ಕಲುಷಿತ ನೀರಿನಿಂದಾಗಿ ಎಲ್ಲರೂ ಪದೇಪದೇ ಅನಾರೋಗ್ಯಕ್ಕೆ ಒಳಗಾಗುತ್ತಾರೆ. ರೋಗಕ್ಕೆ ತುತ್ತಾಗಿ ಹಲಾವಾರು ಕುಶಲಕರ್ಮಿಗಳನ್ನು ಕಳೆದುಕೊಂಡಿದ್ದೇವೆ” ಎಂದು ಅವರು ಬೇಸರದಿಂದ ಹೇಳುತ್ತಾರೆ.

ಹಲವಾರು ಬೊಂಬೆಯಾಟ ಕಲಾವಿದರು ಮತ್ತು ಕುಶಲಕರ್ಮಿಗಳು ಬೇರೆ ಕೆಲಸ ಮತ್ತು ಕಲಾ ಪ್ರಕಾರಗಳನ್ನು ಅರಸಿ ಹೋಗುತ್ತಿದ್ದಾರೆ. “ಢೋಲ್‌ ನುಡಿಸುವುದು ಈಗ ಬಹಳ ಜನಪ್ರಿಯ ಉದ್ಯೋಗ” ಎನ್ನುತ್ತಾರೆ ಚಮನ್‌ ಲಾಲ್.‌ ಇನ್ನೊಬ್ಬ ಕುಶಲಕರ್ಮಿ 29 ವರ್ಷದ ಅಜಯ್‌ ಭಟ್‌ ಹೇಳುತ್ತಾರೆ “ ಢೋಲ್‌ ನುಡಿಸಲು ಹೋದರೆ ದಿನವೊಂದಕ್ಕೆ 20,000 ರೂಪಾಯಿವರೆಗೂ ಸಂಪಾದಿಸಬಹುದು. ನಾವು ಬೊಂಬೆಯಾಟ ಪ್ರದರ್ಶನ ನೀಡಬಾರದು ಎಂಬ ಯೋಚನೆ ನಮಗೂ ಇಲ್ಲ,  ಆದರೆ ನಮ್ಮ ಕುಟುಂಬ ನಿರ್ವಹಣೆಗಾಗಿ ನಾವು ಸಂಪಾದನೆಯನ್ನೂ ಮಾಡಬೇಕಲ್ಲ̤”

ಚಮನ್‌ ಲಾಲ್‌ ರಾಜಧಾನಿ ದೆಹಲಿಗೆ ವಲಸೆ ಬರುವ ಮೊದಲು ತನ್ನ ಬದುಕು ಹೇಗಿತ್ತು ಎಂದು ಚಳಿಗಾಲದ  ಮಸುಕು ಬೆಳಕಿನಲ್ಲಿ ಮನೆಯ ಹೊರಗೆ ಕುಳಿತು, ನೆನಪಿಸಿಕೊಳ್ಳುತ್ತಾರೆ. ಅವರು ಉತ್ತರಪ್ರದೇಶ ಮತ್ತು ರಾಜಸ್ಥಾನದ ಹಳ್ಳಿ  ಹಳ್ಳಿಗಳಲ್ಲಿ ಬೊಂಬೆಯಾಟ ಪ್ರದರ್ಶನ ನೀಡುತ್ತಾ ತಮ್ಮ ಬಾಲ್ಯವನ್ನು ಕಳೆದಿದ್ದರು.

ಅವರು ಹೇಳುತ್ತಾರೆ “ಹಳ್ಳಿಯ ಮುಖ್ಯಸ್ಥರಾದ ಸರಪಂಚರು ನಮಗೆ ಪ್ರದರ್ಶನ ನೀಡಲು ಜಾಗ ಕೊಡುತ್ತಿದ್ದರು. ಎಲ್ಲರೂ ನಮ್ಮನ್ನು ಸಂತೋಷದಿಂದ ಸ್ವಾಗತಿಸುತ್ತಿದ್ದರು ಮತ್ತು ಪ್ರದರ್ಶನ ನೋಡಲು ಬರುತ್ತಿದ್ದರು”

ಅನುವಾದ: ಅರವಿಂದ‌ ಕುಡ್ಲ

Student Reporter : Himanshu Pargai

Himanshu Pargai is a final year MA Development student at Azim Premji University, Bengaluru.

यांचे इतर लिखाण Himanshu Pargai
Editor : Riya Behl

रिया बहल बहुमाध्यमी पत्रकार असून लिंगभाव व शिक्षण या विषयी ती लिहिते. रियाने पारीसोबत वरिष्ठ सहाय्यक संपादक म्हणून काम केलं असून शाळा-महाविद्यालयांमधील विद्यार्थ्यांना पारीसोबत जोडून घेण्याचं कामही तिने केलं आहे.

यांचे इतर लिखाण Riya Behl
Translator : Aravinda Kudla

Aravinda Kudla is a school teacher from rural Karnataka.

यांचे इतर लिखाण Aravinda Kudla