“ನಮಗೆ ಆಹಾರದ ಪೊಟ್ಟಣಗಳು ಬೇಡ, ನಾವು ದಿನಸಿ ಅಂಗಡಿಯಿಂದ ಅಕ್ಕಿ ಖರೀದಿಸುತ್ತೇವೆ. ಪ್ರವಾಹದ ನೀರಿಗೆ ಏನಾದರೂ ಪರಿಹಾರ ಹುಡುಕಿ!” ಇದು ಸೆಮ್ಮಂಜೇರಿಯಲ್ಲಿ ಗುಂಪುಗೂಡಿದ್ದ ಮಹಿಳೆಯರು ಹೇಳಿದ ಮಾತುಗಳು.
ಕಾಂಚೀಪುರಂ ಜಿಲ್ಲೆಯ ಓಲ್ಡ್ ಮಹಾಬಲಿಪುರಂ ರಸ್ತೆಯಲ್ಲಿರುವ ಚೆನ್ನೈ ನಗರದಿಂದ ದಕ್ಷಿಣಕ್ಕೆ 30 ಕಿಲೋಮೀಟರ್ ದೂರದಲ್ಲಿರುವ ಈ ಪ್ರದೇಶವು 2020ರ ನವೆಂಬರ್ 25ರಂದು ತೀವ್ರ ಪ್ರವಾಹಕ್ಕೀಡಾಗಿತ್ತು.
ಈ ತಗ್ಗು ಪ್ರದೇಶದ ನಿವಾಸಿಗಳಿಗೆ ಈ ರೀತಿಯ ಪ್ರವಾಹ ಹೊಸದೂ ಅಲ್ಲ ಅಥವಾ ಅಸಾಮಾನ್ಯವೂ ಅಲ್ಲ. 2015ರಲ್ಲಿ, ಚೆನ್ನೈ ಐತಿಹಾಸಿಕ ಹಾಗೂ ಕೆಟ್ಟ ನಿರ್ವಹಣೆಯ ಪ್ರವಾಹವನ್ನು ಎದುರಿಸಿದ್ದ ಸಮಯದಲ್ಲಿ ಸೆಮ್ಮಂಜೇರಿಯೂ ನೀರಿನಲ್ಲಿ ಮುಳುಗಿತ್ತು. ಆದರೆ ಕೆಲವು ಅಕ್ಕಪಕ್ಕದ ಪ್ರದೇಶಗಳಲ್ಲಿ, ಇತ್ತೀಚಿನ ವರ್ಷಗಳಲ್ಲಿ ಬೀದಿಗಳು ಮತ್ತು ಮಳೆನೀರಿನ ಚರಂಡಿಗಳು ಸ್ವಲ್ಪ ಉತ್ತಮವಾಗಿ ನಿರ್ಮಿಸಲ್ಪಟ್ಟಿವೆ.
ಬಹುಶಃ ಸೆಮ್ಮಂಜೇರಿ (ಅಥವಾ ಸೆಮ್ಮಂಚೇರಿ ) ಹೌಸಿಂಗ್ ಬೋರ್ಡ್ ಪ್ರದೇಶವು ವಿವಿಧ ನಗರ ‘ಅಭಿವೃದ್ಧಿ’ ಮತ್ತು ಮೂಲಸೌಕರ್ಯ ಯೋಜನೆಗಳಿಂದಾಗಿ ಸ್ಥಳಾಂತರಗೊಂಡ ಕುಟುಂಬಗಳಿಗೆ ನೆಲೆಯಾಗಿರುವ ಕಾರಣ ನಿರ್ಲಕ್ಷಿಸಲಾಗಿರಬಹುದು. ಇಲ್ಲಿ ವಾಸಿಸುವವರಲ್ಲಿ ಅನೇಕರು ಚೆನ್ನೈ ನಗರದಲ್ಲಿ ಮನೆಗೆಲಸ ಮಾಡುವವರು, ನೈರ್ಮಲ್ಯ ಕಾರ್ಮಿಕರು, ಆಟೋರಿಕ್ಷಾ ಚಾಲಕರು ಅಥವಾ ಅನೌಪಚಾರಿಕ ವಲಯದ ಇತರ ಕೆಲಸಗಳಲ್ಲಿ ತೊಡಗಿಸಿಕೊಂಡಿರುವವರು.
ತಮಿಳುನಾಡಿಗೆ ಭೀಕರ ಚಂಡಮಾರುತ ನಿವಾರ್ ಅಪ್ಪಳಿಸಿದಾಗ ಕಡಲೂರಿನಲ್ಲಿ ಸುಮಾರು 250 ಮಿ.ಮೀ ಮತ್ತು ಚೆನ್ನೈಯಲ್ಲಿ ಭೂಕುಸಿತದ ಸಮಯದಲ್ಲಿ 100 ಮಿ.ಮೀ.ಗಿಂತ ಹೆಚ್ಚಿನ ಮಳೆಯಾಯಿತು, ಸೆಮ್ಮಂಜೇರಿಯಲ್ಲಿನ ಮನೆಗಳ ಒಳಗೆ ಒಂದು ಅಡಿಯಷ್ಟು ಮತ್ತು ಮನೆಗಳ ಹೊರಗೆ 2 ಅಡಿಗಳಷ್ಟು ನೀರು ನಿಂತಿತು.
ಚಂಡಮಾರುತವು ಪುದುಚೇರಿ ಬಳಿ (ನವೆಂಬರ್ 25ರಂದು ರಾತ್ರಿ 11:15) ದಕ್ಷಿಣ ಕರಾವಳಿಯನ್ನು ಹಾದು ಹೋದ ಒಂದು ದಿನದ ನಂತರ ನವೆಂಬರ್ 27ರಂದು ʼಪರಿʼ ಸೆಮ್ಮಂಜೇರಿಗೆ ಭೇಟಿ ನೀಡಿತು, ಈ ಚಂಡಮಾರುತದಿಂದಾಗಿ ಮೂವರು ಸಾವನ್ನಪ್ಪಿದರು ಮತ್ತು 1.38 ಲಕ್ಷ ಜನರನ್ನು ಸ್ಥಳಾಂತರಿಸಲಾಯಿತು , 16,500 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಗಳಿಗೆ ಹಾನಿಯಾಗಿದೆ (ಹಲವಾರು ಪತ್ರಿಕೆಗಳು ವರದಿ ಮಾಡಿರುವಂತೆ), ಮತ್ತು ಕರಾವಳಿಯ ನಗರಗಳು ಮತ್ತು ಪಟ್ಟಣಗಳಲ್ಲಿ ಪ್ರವಾಹ ಉಂಟಾಯಿತು.
ಸೆಮ್ಮಂಜೇರಿಯಲ್ಲಿ ನೀರು ಮನೆಗಳಿಗೆ ನುಗ್ಗಿ, ಅವರ ಮನೆಗಳಲ್ಲಿನ ಸಾಮಾಗ್ರಿಗಳನ್ನೆಲ್ಲ ನಾಶಗೊಳಿಸಿತ್ತು, ದಿನಗಳವರೆಗೆ ವಿದ್ಯುತ್ ಸರಬರಾಜನ್ನು ಸ್ಥಗಿತಗೊಳಿಸಿತು ಮತ್ತು ಮಹಡಿಯಲ್ಲಿ ವಾಸಿಸುವ ನೆರೆಹೊರೆಯವರೊಂದಿಗೆ ವಾಸಿಸಬೇಕಾದ ಅನಿವಾರ್ಯತೆಯನ್ನು ಸೃಷ್ಟಿಸಿತು. ಶೌಚಾಲಯಗಳು ಪ್ರವಾಹಕ್ಕೆ ಒಳಗಾದವು, ಚರಂಡಿಗಳು ಉಕ್ಕಿ ಹರಿಯಿತು; ಹಾವುಗಳು ಮತ್ತು ಚೇಳುಗಳು ಮನೆಯ ಒಳಾಂಗಣದಲ್ಲಿ ಅಲೆದಾಡಿದವು ಮತ್ತು ಮನೆಗಳ ಗೋಡೆಗಳು ಕುಸಿದವು. ಆದರೆ ಇಲ್ಲಿನ ಸುಮಾರು 30,000 ನಿವಾಸಿಗಳ ಪಾಲಿಗೆ ಇದೊಂದು ಅಪರಿಚಿತ ದೃಶ್ಯವೇನಾಗಿರಲಿಲ್ಲ.
ಇಲ್ಲಿ ಏಕೆ ಹೀಗಾಯಿತು? ಇಲ್ಲಿನ ಪರಿಸ್ಥಿತಿಗೆ ಇದು ತಗ್ಗು ಪ್ರದೇಶವಾಗಿರುವುದೊಂದೇ ಕಾರಣವಲ್ಲ, ಇಲ್ಲಿ ಸಮಸ್ಯೆಗಳು ಬೇರೆಯದೇ ಎತ್ತರದಲ್ಲಿವೆ. ಅವು ಈಗಾಗಲೇ ಇಕ್ಕಟ್ಟಾಗಿರುವ ಒಳಚರಂಡಿಯ ದಾರಿಗಳನ್ನು ಇನ್ನಷ್ಟು ಕಡಿತಗೊಳಿಸಿವೆ. ಸ್ಥಳೀಯ ಕೆರೆಗಳು ಕೂಡ ಉಕ್ಕಿ ಹರಿಯುತ್ತವೆ. ಇದರೊಂದಿಗೆ ರಾಜ್ಯದ ಜಲಾಶಯಗಳು ಹೆಚ್ಚುವರಿ ನೀರನ್ನು ಬಿಡುಗಡೆ ಮಾಡುತ್ತವೆ. ಇವೆಲ್ಲವೂ ಪುನಾರವರ್ತಿತ ಪ್ರವಾಹದೊಡನೆ ಸೇರಿಕೊಂಡು ತಮ್ಮದೇ ಕೊಡುಗೆಯನ್ನು ನೀಡುತ್ತವೆ. ಜೊತೆಗೆ ಪುನರ್ವಸತಿ ಕಾಲೋನಿಗಳ ಸುತ್ತ ಎತ್ತರದ ಗೋಡೆಗಳು ಸುಮಾರು 10 ಅಡಿ ಎತ್ತರದಲ್ಲಿ ಇದ್ದು, ಇದರ ಉದ್ದೇಶ ಬಹುಶಃ ಕಡಿಮೆ ಆದಾಯದ ಬಡಪಾಯಿ ನಿವಾಸಿಗಳನ್ನು ಹೊರಗಿನ ಕಣ್ಣುಗಳಿಗೆ ಕಾಣದಂತೆ ಮಾಡುವುದಾಗಿರಬಹುದು.
ಹೀಗಾಗಿ ಇಲ್ಲಿ ಪ್ರತಿ ಬಾರಿ ದೊಡ್ಡ ಮಳೆ ಬಂದಾಗಲೂ ಬೀದಿಗಳು ನದಿಗಳಾಗಿ ಬದಲಾಗುತ್ತವೆ, ವಾಹನಗಳು ದೋಣಿಗಳಂತೆ ತೇಲುತ್ತವೆ. ಮಕ್ಕಳು ರಸ್ತೆಯ ಮಧ್ಯದಲ್ಲಿಯೇ ಬಟ್ಟೆ ಬಲೆಗಳೊಂದಿಗೆ ಮೀನುಗಳನ್ನು ಹಿಡಿಯುತ್ತಾರೆ, ಮತ್ತು ಅವರ ತಾಯಂದಿರು ಒಂದು ಒಡೆದ ಐದು ಲೀಟರ ಬಕೆಟ್‌ನಿಂದ ಮನೆಯೊಳಗೆ ತುಂಬಿಕೊಂಡ ನೀರನ್ನು ಖಾಲಿ ಮಾಡುತ್ತಾ ದಿನ ಕಳೆಯುತ್ತಾರೆ
"ನಾವು ಪ್ರತಿವರ್ಷ ಇಲ್ಲಿ ಸುನಾಮಿ ಎದುರಿಸುತ್ತೇವೆ, ಆದರೆ ಮತಗಳನ್ನು ಕೇಳುವ ಸಮಯದಲ್ಲಿ ಬಿಟ್ಟರೆ ನಂತರ ನಮ್ಮನ್ನು ಕೇಳುವವರೇ ಇಲ್ಲ" ಎಂದು ಮಹಿಳೆಯರು ಹೇಳಿದರು. "ನಾವು 2005ರಲ್ಲಿ ಫೋರ್‌ಶೋರ್ ಎಸ್ಟೇಟ್, ಉರುರ್ ಕುಪ್ಪಮ್ ಮತ್ತು ಚೆನ್ನೈನ ಇತರ ಪ್ರದೇಶಗಳಿಂದ ಇಲ್ಲಿಗೆ ಬಂದಿದ್ದೇವೆ. ನಮ್ಮನ್ನು ಸ್ಥಳಾಂತರಿಸಿದವರು, ಅಧಿಕಾರಿಗಳು ಮತ್ತು ರಾಜಕಾರಣಿಗಳು, ಅವರು ಮಾಳಿಗೆಗಳಲ್ಲಿ [ದೊಡ್ಡ ಮನೆಗಳಲ್ಲಿ] ಸಂತೋಷದಿಂದ ವಾಸಿಸುತ್ತಿದ್ದಾರೆ. ನಮ್ಮನ್ನು ನೋಡಿ!"
ಅಲ್ಲಿನ ಹೆಂಗಸರು ಮತ್ತು ಮಕ್ಕಳು ಎಲ್ಲರೂ ಒಂದು ಅಡಿ ಎತ್ತರದ ನೀರಿನಲ್ಲಿ ನಿಂತು ಕೇಳಿದ್ದು ಕೇವಲ ಆ ನೀರು ಹೊರಹೋಗುವಂತೆ ಮಾಡುವಂತಹ ಸಣ್ಣ ದಾರಿಯೊಂದನ್ನು ಮಾತ್ರ.
ಅನುವಾದ: ಶಂಕರ ಎನ್. ಕೆಂಚನೂರು