ರಾಜಾಜಿ ಹುಲಿ ಸಂರಕ್ಷಿತ ಪ್ರದೇಶದ ವನ್ ಗುಜ್ಜರ್ ಬಸ್ತಿಯಲ್ಲಿ ಒಂದು ಮಧ್ಯಾಹ್ನ.ಫಾತಿಮಾ ಬಾನೊ ಹಿಂದಿಯಲ್ಲಿ ಕವಿತೆಯೊಂದನ್ನು ಓದುತ್ತಿದ್ದಳು: "ಫ್ಯಾನ್ ತಿರುಗುತ್ತಿದೆ ಮೇಲೆ, ಮಗು ಮಲಗಿದೆ ಕೆಳಗೆ. ಮಲಗು ನನ್ನ ಮಗುವೇ ಮಲಗು, ದೊಡ್ಡ ಕೆಂಪು ಹಾಸಿಗೆಯ ಮೇಲೆ ಮಲಗು..." ಒಂಬತ್ತು ವರ್ಷದ ಅವಳು  ತರಗತಿಯ ಮಕ್ಕಳ ಗುಂಪಿನ ನೋಟದಿಂದ ತನ್ನನ್ನು ತಪ್ಪಿಸಿಕೊಳ್ಳಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಳು.

ತಬಸ್ಸುಮ್ ಬೀವಿಯವರ ಮನೆಯ ಮುಂದಿನ ಅಂಗಳದಲ್ಲಿ ಅಂದು ಅವರ ‘ಶಾಲೆ’ನಡೆಯುತ್ತಿತ್ತು. 5ರಿಂದ 13 ವರ್ಷದೊಳಗಿನ ವಿದ್ಯಾರ್ಥಿಗಳ ಗುಂಪು ದೊಡ್ಡ ಕಾರ್ಪೆಟ್ ಒಂದರ ಮೇಲೆ ಕುಳಿತಿತ್ತು ಮತ್ತು ಅವರಲ್ಲಿ ಕೆಲವರ ಕೈಯಲ್ಲಿ ನೋಟ್‌ ಪುಸ್ತಕಗಳಿದ್ದವು. ತಬಸ್ಸುಮ್ ಬೀವಿಯವರ ಇಬ್ಬರು ಮಕ್ಕಳು ಕೂಡಾ ಆ ಮಕ್ಕಳ ನಡುವೆ ಕುಳಿತಿದ್ದರು, ಅವರಿಗೆ ಒಂದು ಗಂಡು ಮತ್ತು ಇನ್ನೊಂದು ಹೆಣ್ಣು ಮಗು. ತಬಸ್ಸುಮ್ ಬೀವಿ ಅವರ ಕುಟುಂಬವು ಈ ಬಸ್ತಿಯಲ್ಲಿನ ಬಹುತೇಕ ಎಲ್ಲರಂತೆ ಎಮ್ಮೆಗಳನ್ನು ಸಾಕುತ್ತಾರೆ ಮತ್ತು ಹಾಲು ಮಾರಾಟ ಮಾಡುತ್ತಾರೆ.

ಈ ಶಾಲೆಯನ್ನು 2015ರಿಂದ ಕುನಾವೂ ಚೌಡ್ ಬಸ್ತಿಯ ವಿವಿಧ ಸ್ಥಳಗಳಲ್ಲಿ ನಡೆಸಲಾಗುತ್ತಿದೆ. ಕೆಲವೊಮ್ಮೆ ಅಂಗಳದಲ್ಲಿ ನಡೆದರೆ ಇನ್ನೂ ಕೆಲವೊಮ್ಮೆ ಮನೆಯ ದೊಡ್ಡ ಕೋಣೆಯಲ್ಲಿ ನಡೆಯುತ್ತದೆ. ತರಗತಿಗಳು ಸೋಮವಾರದಿಂದ ಶುಕ್ರವಾರದವರೆಗೆ 9:30ರಿಂದ 12:30ರವರೆಗೆ ನಡೆಯುತ್ತವೆ. ಡಿಸೆಂಬರ್ 2020ರಲ್ಲಿ, ಒಮ್ಮೆ ನಾನು ಅಲ್ಲಿಗೆ ಹೋಗಿದ್ದಾಗ, ಫಾತಿಮಾ ಬಾನೋ ಕವನವನ್ನು ಓದುತ್ತಿದ್ದಳು ಮತ್ತು ತರಗತಿಯಲ್ಲಿ 11 ಹುಡುಗಿಯರು ಮತ್ತು 16 ಹುಡುಗರಿದ್ದರು.

ವನ್ ಗುಜ್ಜರ್ ಯುವಕರ ಗುಂಪೊಂದು ಇಲ್ಲಿನ ಮಕ್ಕಳಿಗೆ ಕಲಿಸುತ್ತದೆ. ಉತ್ತರಾಖಂಡದ ಪೌರಿ ಗರ್ವಾಲ್ ಜಿಲ್ಲೆಯ ಯಮಕೇಶ್ವರ ಬ್ಲಾಕ್‌ನಲ್ಲಿರುವ ಸುಮಾರು 200 ಕುಟುಂಬಗಳ ಕುನಾವೂ ಚೌಡ್ ಕುಗ್ರಾಮದಲ್ಲಿನ ಈ ಯುವ ಶಿಕ್ಷಕರು ಶಿಕ್ಷಣದಲ್ಲಿನ ದೊಡ್ಡ ಅಂತರವನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತಿದ್ದಾರೆ. (ಸಮುದಾಯದ ಕಾರ್ಯಕರ್ತರ ಪ್ರಕಾರ, 70,000 - 100,000 ವನ್ ಗುಜ್ಜರ್‌ ಜನರು ರಾಜ್ಯದ ಕುಮಾವೂನ್ ಮತ್ತು ಗರ್ವಾಲ್ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ; ಅವರನ್ನು ಉತ್ತರಾಖಂಡದಲ್ಲಿ ಓಬಿಸಿಗಳೆಂದು ಪಟ್ಟಿಮಾಡಲಾಗಿದೆ, ಆದರೆ ಅವರು ಪರಿಶಿಷ್ಟ ಪಂಗಡದ ಸ್ಥಾನಮಾನಕ್ಕಾಗಿ ಬೇಡಿಕೆಯಿಟ್ಟಿದ್ದಾರೆ.) ಸಂರಕ್ಷಿತ ಪ್ರದೇಶದಲ್ಲಿರುವ ಈ ನೆಲೆಯಲ್ಲಿನ ಮನೆಗಳನ್ನು ಸಾಮಾನ್ಯವಾಗಿ ಮಣ್ಣು ಮತ್ತು ಹುಲು ಬಳಸಿ ಕಟ್ಟಲಾಗಿರುತ್ತದೆ. ಇದಕ್ಕೆ ಕಾರಣ ಪಕ್ಕಾ ಮನೆ ನಿರ್ಮಾಣಕ್ಕೆ ಅರಣ್ಯ ಇಲಾಖೆ ನಿಷೇಧ ಹೇರಿರುವುದು. ಇಲ್ಲಿ ಶೌಚಾಲಯದ ವ್ಯವಸ್ಥೆಯಿಲ್ಲ, ಇಲ್ಲಿನ ಜನರು ನಿತ್ಯದ ಬಳಕೆಗೆ ಕಾಡಿನ ಹೊಳೆಗಳ ನೀರನ್ನೇ ಬಳಸುತ್ತಾರೆ.

The ‘school’ has been assembling intermittently in the Kunau Chaud settlement since 2015 – either in the yard or in a large room in a house
PHOTO • Varsha Singh
The ‘school’ has been assembling intermittently in the Kunau Chaud settlement since 2015 – either in the yard or in a large room in a house
PHOTO • Varsha Singh

2015ರಿಂದ ಕುನಾವೂ ಚೌಡ್‌ ಬಸ್ತಿಯಲ್ಲಿ ವಿವಿಧ ಸ್ಥಳಗಳಲ್ಲಿ ಈ ʼಶಾಲೆʼ ನಡೆಯುತ್ತಿದೆ. ಕೆಲವೊಮ್ಮೆ ಅಂಗಳದಲ್ಲಿ ಅಥವಾ ಕೆಲವೊಮ್ಮೆ ಮನೆಯ ದೊಡ್ಡ ಕೋಣೆಯಲ್ಲಿ

ಕುನಾವೂ ಚೌಡ್ ಮೀಸಲು ಅರಣ್ಯದ ಒಳಗಿದ್ದು, ಇದು ಸುಸಜ್ಜಿತ ರಸ್ತೆಯಿಂದ ದೂರದಲ್ಲಿದೆ. ಇಲ್ಲಿನ ಶಾಲಾ ಶಿಕ್ಷಣವು ವಿವಿಧ ಸಮಸ್ಯೆಗಳಿಂದ ಅನಿಶ್ಚಿತತೆ ಮತ್ತು ತೊಂದರೆಗಳೊಂದಿಗೆ ಹೋರಾಡುತ್ತಿದೆ. ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ (5ನೇ ತರಗತಿವರೆಗೆ), ಮತ್ತು ಸರ್ಕಾರಿ ಅಂತರ ಕಾಲೇಜು (12ನೇ ತರಗತಿಯವರೆಗೆ) ಇಲ್ಲಿಂದ ಸುಮಾರು ಮೂರು ಕಿಲೋಮೀಟರ್ ದೂರದಲ್ಲಿದೆ. ಚಿರತೆ, ಆನೆ, ಜಿಂಕೆ ಮುಂತಾದ ಕಾಡು ಪ್ರಾಣಿಗಳು ಇಲ್ಲಿ ಓಡಾಡುವುದನ್ನು ಕಾಣಬಹುದು. ಶಾಲೆಗಳನ್ನು ತಲುಪಲು, ಬೀನ್ ನದಿಯ (ಗಂಗಾನದಿಯ ಉಪನದಿ) ಆಳವಿಲ್ಲದ ನೀರಿನ ಮೂಲಕ ಹಾದು ಹೋಗಬೇಕು. ಮಳೆಗಾಲದ ಜುಲೈ ಮತ್ತು ಆಗಸ್ಟ್‌ ತಿಂಗಳಿನಲ್ಲಿ ನೀರಿನ ಮಟ್ಟ ಹೆಚ್ಚಾದಾಗ ಮಕ್ಕಳು ಶಾಲೆಗೆ ಹೋಗುವುದನ್ನು ನಿಲ್ಲಿಸುತ್ತಾರೆ ಅಥವಾ ಅವರ ಪೋಷಕರು ಮಕ್ಕಳನ್ನು ಶಾಲೆಗೆ ತಂದುಬಿಡುತ್ತಾರೆ.

ಇಲ್ಲಿನ ಎಷ್ಟೋ ಮಕ್ಕಳು ಶಾಲೆಗೆ ದಾಖಲಾಗಿಲ್ಲ. ದಾಖಲೆ-ಪತ್ರಗಳ ಕೊರತೆಯಿಂದಾಗಿ ಅವರ ಶಾಲೆಗೆ ಸೇರುವ ಪ್ರಯತ್ನ ವಿಫಲವಾಗಿದೆ. ದೂರದ ಅರಣ್ಯ ನೆಲೆಗಳಲ್ಲಿ ವಾಸಿಸುವ ಗುಜ್ಜರ್ ಕುಟುಂಬಗಳಿಗೆ ಅಧಿಕೃತ ದಾಖಲೆಗಳಿಗೆ ಅರ್ಜಿ ಸಲ್ಲಿಸುವುದು ಮತ್ತು ಪಡೆಯುವುದು ದೀರ್ಘ ಮತ್ತು ಕಷ್ಟಕರ ಕೆಲಸವಾಗಿದೆ. ಕುನಾವೂ ಚೌಡ್‌ನಲ್ಲಿರುವ ಮಕ್ಕಳ ಪೋಷಕರು ತಮ್ಮ ಹೆಚ್ಚಿನ ಮಕ್ಕಳಿಗೆ ಜನನ ಪ್ರಮಾಣಪತ್ರಗಳು (ಬಸ್ತಿಯಲ್ಲಿಯೇ ಜನಿಸಿದವರು) ಅಥವಾ ಆಧಾರ್ ಕಾರ್ಡ್‌ಗಳಿಲ್ಲ ಎಂದು ಹೇಳುತ್ತಾರೆ. (ಮೇ 2021ರಲ್ಲಿ, ಉತ್ತರಾಖಂಡ ಹೈಕೋರ್ಟ್ ವನ್ ಗುಜ್ಜರ್‌ಗಳು ಎದುರಿಸುತ್ತಿರುವ ವಿವಿಧ ಸಮಸ್ಯೆಗಳನ್ನು ಪರಿಹರಿಸಲು ಸಮಿತಿಯನ್ನು ರಚಿಸುವಂತೆ ಆದೇಶಿಸಿತು )

ಅನೇಕ ಕುಟುಂಬಗಳ ಹಿರಿಯ ಮಕ್ಕಳು ಜಾನುವಾರುಗಳನ್ನು ನೋಡಿಕೊಳ್ಳುವಲ್ಲಿ ಹೆಚ್ಚಿನ ಸಮಯವನ್ನು ಕಳೆಯುತ್ತಾರೆ. ಅಂತಹ ಮಕ್ಕಳಲ್ಲಿ ಓರ್ವನಾಗಿರುವ ಜೈತೂನ್ ಬೀಬಿಯವರ 10 ವರ್ಷದ ಮಗ ಇಮ್ರಾನ್ ಅಲಿ, ತನ್ನ ಕುಟುಂಬದ ಆರು ಎಮ್ಮೆಗಳನ್ನು ನೋಡಿಕೊಳ್ಳುತ್ತಾನೆ. ಅವನನ್ನು ಸರ್ಕಾರಿ ಪ್ರಾಥಮಿಕ ಶಾಲೆಗೆ ದಾಖಲಿಸಲಾಗಿತ್ತು ಮತ್ತು ನಂತರ ಆಗಸ್ಟ್ 2021ರಲ್ಲಿ 6ನೇ ತರಗತಿಗೂ ಸೇರಿಸಲಾಗಿತ್ತು, ಆದರೂ ಆತನ ಓದು ಇಂದಿಗೂ ಸವಾಲಾಗಿ ಉಳಿದಿದೆ. ಇಮ್ರಾನ್ ಹೇಳುವಂತೆ, “ನಾನು ಬೆಳಿಗ್ಗೆ 6 ಗಂಟೆಗೆ ಎದ್ದು ಜಾನುವಾರುಗಳಿಗೆ ಮೇವು ನೀಡಿ ನಂತರ ಹಾಲು ಕರೆಯುತ್ತೇನೆ. ಅದರ ನಂತರ, ಅವುಗಳಿಗೆ ನೀರು ಕುಡಿಸಿ ಮೇಯಲು ಹೊಡೆಯುತ್ತೇನೆ.” ಇಮ್ರಾನ್‌ ಅಲಿಯ  ತಂದೆ ಎಮ್ಮೆ ಹಾಲು ಮಾರುತ್ತಾರೆ ಮತ್ತು ಅವನ ತಾಯಿ ಮನೆಯ ಆರೈಕೆಯನ್ನು ಮಾಡುತ್ತಾರೆ, ಇದರಲ್ಲಿ ಜಾನುವಾರುಗಳನ್ನು ನೋಡಿಕೊಳ್ಳುವುದು ಕೂಡಾ ಸೇರಿದೆ.

ಇಮ್ರಾನ್‌ನಂತೆ ಇಲ್ಲಿನ ಅನೇಕ ಮಕ್ಕಳು ದಿನದ ಹೆಚ್ಚಿನ ಸಮಯ ಮನೆಗೆಲಸದಲ್ಲಿ ತೊಡಗಿದ್ದು, ಇದು ಅವರ ಶಾಲಾ ಶಿಕ್ಷಣದ ಮೇಲೆ ಪರಿಣಾಮ ಬೀರುತ್ತಿದೆ. ಇವರಲ್ಲಿ ಬಾನೋ ಬೀಬಿಯ ಮಕ್ಕಳೂ ಸೇರಿದ್ದಾರೆ. ಬಾನೋ ಬೀಬಿ ಹೇಳುತ್ತಾರೆ, "ನಮ್ಮ ಮಕ್ಕಳು ಎಮ್ಮೆಗಳನ್ನು ನೋಡಿಕೊಳ್ಳಲು ನಮಗೆ ಸಹಾಯ ಮಾಡುತ್ತಾರೆ. ಅವುಗಳಿಗೆ ನೀರುಣಿಸುತ್ತಾರೆ ಮತ್ತು ಮೇಯಿಸಲು ಕರೆದುಕೊಂಡು ಹೋಗುತ್ತಾರೆ, ಅವರು ಕಾಡಿನಿಂದ ಕಟ್ಟಿಗೆ ತರಲು, ಚೂಲ್ಹಾದಲ್ಲಿ ಅಡುಗೆ ಮಾಡಲು ಸಹ ಸಹಾಯ ಮಾಡುತ್ತಾರೆ” ಅವರ ಹಿರಿಯ ಮಗ ಯಾಕೂಬ್, 10, ಇಂಟರ್-ಕಾಲೇಜಿನಲ್ಲಿ 7ನೇ ತರಗತಿಯಲ್ಲಿ ಓದುತ್ತಿದ್ದಾನೆ, ಆದರೆ ಕ್ರಮವಾಗಿ 5ರಿಂದ 9 ವರ್ಷ ವಯಸ್ಸಿನ ಇಬ್ಬರು ಹೆಣ್ಣುಮಕ್ಕಳು ಮತ್ತು ಒಬ್ಬ ಮಗ ಬಸ್ತಿಯಲ್ಲಿರುವ 'ಅನೌಪಚಾರಿಕ' ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ, ಅವರು ಹೇಳುತ್ತಾರೆ. "ನಮ್ಮ ಮಕ್ಕಳು ಓದಿದರೆ ಒಳ್ಳೆಯದು. ಆದರೆ ನಾವು ಈ ಕಾಡಿನಲ್ಲಿಯೇ ವಾಸಿಸಬೇಕು ಮತ್ತು ಈ ಕೆಲಸಗಳನ್ನು ಸಹ ಮಾಡಬೇಕು."

In many families, older children spend their days watching over cattle. Among them is Zaitoon Bibi’s (left) 10-year-old son Imran Ali (extreme right)
PHOTO • Varsha Singh
In many families, older children spend their days watching over cattle. Among them is Zaitoon Bibi’s (left) 10-year-old son Imran Ali (extreme right)
PHOTO • Varsha Singh

ಅನೇಕ ಕುಟುಂಬಗಳ ಹಿರಿಯ ಮಕ್ಕಳು ಜಾನುವಾರುಗಳನ್ನು ನೋಡಿಕೊಳ್ಳುವಲ್ಲಿ ಹೆಚ್ಚಿನ ಸಮಯವನ್ನು ಕಳೆಯುತ್ತಾರೆ. ಅವರಲ್ಲಿ ಜೈತೂನ್ ಬೀಬಿಯವರ (ಎಡ) 10 ವರ್ಷದ ಮಗ ಇಮ್ರಾನ್ ಅಲಿ ಕೂಡಾ ಒಬ್ಬ (ಬಲ ತುದಿ)

ಬಹಳ ಕಾಲದಿಂದ ವನ್ ಗುಜ್ಜರ್ ಸಮುದಾಯದ ಅಲೆಮಾರಿ ಜೀವನವೂ ಅವರ ಮಕ್ಕಳ ಶಿಕ್ಷಣಕ್ಕೆ ಅಡ್ಡಿಯಾಗಿತ್ತು. ಈಗ ಬಹುತೇಕ ವನ್ ಗುಜ್ಜರ್ ಜನರು ಬೇಸಿಗೆಯಲ್ಲಿ ಎತ್ತರದ ಪ್ರದೇಶಗಳಿಗೆ ತೆರಳುವ ಬದಲು ವರ್ಷವಿಡೀ ಒಂದೇ ನೆಲೆಯಲ್ಲಿ ವಾಸಿಸುತ್ತಿದ್ದಾರೆ ಎನ್ನುತ್ತಾರೆ ಸ್ಥಳೀಯ ಅರಣ್ಯ ಹಕ್ಕು ಸಮಿತಿ ಸದಸ್ಯ ಶರಾಫತ್ ಅಲಿ. ಕುನಾವೂ ಚೌಡ್‌ನಲ್ಲಿರುವ ಸುಮಾರು 200 ಕುಟುಂಬಗಳಲ್ಲಿ ಕೇವಲ 4-5 ಕುಟುಂಬಗಳು ಮಾತ್ರ ಈಗ ಪರ್ವತಗಳಿಗೆ (ಉತ್ತರಕಾಶಿ ಅಥವಾ ರುದ್ರಪ್ರಯಾಗ ಜಿಲ್ಲೆ) ಹೋಗುತ್ತವೆ ಎಂದು ಅವರು ಅಂದಾಜಿಸುತ್ತಾರೆ.

ಮಹಾಮಾರಿಯ ಹೊಡೆತ, 2020ರ ದೀರ್ಘಾವಧಿಯ ಲಾಕ್‌ಡೌನ್ ಮತ್ತು ನಂತರ 2021ರಲ್ಲಿ ಪುನಃ ಹೇರಲಾದ ಲಾಕ್‌ಡೌನ್‌ ಶಿಕ್ಷಣವನ್ನು ಮುಂದುವರಿಸುವ ಪ್ರಯತ್ನದ ಮೇಲೆ ತೀವ್ರ ಪರಿಣಾಮ ಬೀರಿದವು. ನಾನು 2020ರಲ್ಲಿ ಇಮ್ರಾನ್‌ ಅಲಿಯನ್ನು ಭೇಟಿಯಾದಾಗ, ಅವನು, “ನಮ್ಮ ಶಾಲೆ [ಸರ್ಕಾರಿ ಪ್ರಾಥಮಿಕ ಶಾಲೆ] ಲಾಕ್‌ಡೌನ್‌ನಿಂದ ಮುಚ್ಚಲ್ಪಟ್ಟಿದೆ. ಈಗ [ಬಸ್ತಿಯ 'ಶಾಲೆಯಲ್ಲಿ'] ನಾವೇ ಓದಿಕೊಳ್ಳುತ್ತೇವೆ," ಎಂದು ಹೇಳಿದ್ದ.

ಮಾರ್ಚ್ 2020ರಲ್ಲಿ ಲಾಕ್‌ಡೌನ್ ಪ್ರಾರಂಭವಾದಾಗ, ಕೆಲವು ತರಗತಿಗಳು ಮನೆಯಲ್ಲಿ ನಡೆಯುತ್ತಿದ್ದವು. 33ರ ಹರೆಯದ ಶಿಕ್ಷಕ ಮೊಹಮ್ಮದ್ ಶಂಶಾದ್ ಹೇಳುತ್ತಾರೆ, ‘‘ಮಕ್ಕಳಿಗೆ ಅವರ ನೋಟ್‌ ಪುಸ್ತಕದಲ್ಲಿ ಒಂದಿಷ್ಟು ಹೋಂವರ್ಕ್ ನೀಡಿ 3-4 ದಿನಗಳ ನಂತರ ಪರಿಶೀಲಿಸುತ್ತಿದ್ದೆವು, ಮನೆಯಲ್ಲಿ 3-4 ಮಕ್ಕಳನ್ನು ಸೇರಿಸಿ ಹೊಸ ಪಾಠವನ್ನು ಹೇಳಿಕೊಡುತ್ತಿದ್ದೆವು. ಶಂಶಾದ್, 26 ವರ್ಷದ ಮೊಹಮ್ಮದ್ ಮೀರ್ ಹಮ್ಜಾ ಮತ್ತು 20 ವರ್ಷದ ಅಫ್ತಾಬ್ ಅಲಿ ಅವರೊಂದಿಗೆ ಗ್ರಾಮದ ಈ ಸ್ಥಳೀಯ ಶಾಲೆಯಲ್ಲಿ ಕಲಿಸುತ್ತಾರೆ.

2017ರಲ್ಲಿ, ಅವರು ಮತ್ತು ಇತರ ಯುವಕರು ಸೇರಿ ವನ್ ಗುಜ್ಜರ್ ಆದಿವಾಸಿ ಯುವ ಸಂಘಟನೆಯನ್ನು ರಚಿಸಿದರು. ಸಂಸ್ಥೆಯು 177 ಸದಸ್ಯರನ್ನು ಹೊಂದಿದ್ದು (ಆರು ಮಹಿಳೆಯರು) ಉತ್ತರಾಖಂಡ, ಹಿಮಾಚಲ ಪ್ರದೇಶ ಮತ್ತು ಉತ್ತರ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿದೆ. ಸಂಸ್ಥೆಯು ಸಮುದಾಯ ಶಿಕ್ಷಣ ಮತ್ತು ಅರಣ್ಯ ಹಕ್ಕುಗಳಿಗಾಗಿ ಕೆಲಸ ಮಾಡುತ್ತದೆ. ಹಮ್ಜಾ ಅವರು ಕರಸ್ಪಾಂಡೆನ್ಸ್ ಕೋರ್ಸ್ ಮೂಲಕ ಸೋಷಿಯಲ್‌ ವರ್ಕ್‌ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆಯುತ್ತಿದ್ದಾರೆ. ಮತ್ತೊಂದೆಡೆ, ಶಂಶಾದ್ ಡೆಹ್ರಾಡೂನ್ ಕಾಲೇಜಿನಲ್ಲಿ ಬಿಕಾಂ ಪೂರ್ಣಗೊಳಿಸಿದ್ದಾರೆ ಮತ್ತು ಅಫ್ತಾಬ್ ಸರ್ಕಾರಿ ಇಂಟರ್ ಕಾಲೇಜಿನಲ್ಲಿ 12ನೇ ತರಗತಿಯವರೆಗೆ ಓದಿದ್ದಾರೆ. ಬಸ್ತಿ ಪ್ರದೇಶದ ಇತರರಂತೆ, ಅವರ ಕುಟುಂಬಗಳು ಕೂಡಾ ತಮ್ಮ ಆದಾಯಕ್ಕಾಗಿ ಮುಖ್ಯವಾಗಿ ಎಮ್ಮೆಗಳ ಮೇಲೆ ಅವಲಂಬಿತವಾಗಿವೆ.

For long, the Van Gujjar community’s nomadic migrations were also an impediment to education. But now, says Sharafat Ali
PHOTO • Varsha Singh
a member of the local Forest Rights Committee, most Van Gujjars no longer go to the highlands in the summer.
PHOTO • Varsha Singh

ಎಡ: ಬಹುಕಾಲದಿಂದ ವನ್ ಗುಜ್ಜರ್ ಸಮುದಾಯದ ಅಲೆಮಾರಿ ಜೀವನ ಅವರ ಮಕ್ಕಳ ಶಿಕ್ಷಣಕ್ಕೂ ಅಡ್ಡಿಯಾಗಿತ್ತು. ಆದರೆ, ಪ್ರಸ್ತುತ ಹೆಚ್ಚಿನ ವನ್ ಗುಜ್ಜರ್ ಜನರು ಬೇಸಿಗೆಯಲ್ಲಿ ಎತ್ತರದ ಪ್ರದೇಶಗಳಿಗೆ ವಲಸೆ ಹೋಗುತ್ತಿಲ್ಲ ಎನ್ನುತ್ತಾರೆ ಸ್ಥಳೀಯ ಅರಣ್ಯ ಹಕ್ಕು ಸಮಿತಿ ಸದಸ್ಯ ಶರಾಫತ್ ಅಲಿ. ಬಲ: 'ನಮ್ಮ ಮಕ್ಕಳು ಓದಿದರೆ ಚೆನ್ನಾಗಿರುತ್ತದೆ' ಎನ್ನುತ್ತಾರೆ ಬಾನೋ ಬೀಬಿ

ಇಲ್ಲಿನ ಮಕ್ಕಳನ್ನು ಶಾಲೆಗೆ ಬರುವಂತೆ ಮಾಡುವುದು ಸುಲಭದ ಕೆಲಸವಲ್ಲ ಎನ್ನುತ್ತಾರೆ ಇಲ್ಲಿನ ಶಿಕ್ಷಕರು. ಈ ಮಕ್ಕಳ ಪೋಷಕರೇ ಶಾಲೆಗೆ ಹೋಗಿಲ್ಲ. ಹೀಗಾಗಿ ಶಿಕ್ಷಣದ ಪ್ರಯೋಜನಗಳ ಬಗ್ಗೆ ಅವರಿಗೆ ಅರಿವಿಲ್ಲ ಮತ್ತು ಈ ಬಗ್ಗೆ ಮನವರಿಕೆ ಮಾಡಲು ಬಹಳಷ್ಟು ಶ್ರಮಿಸಬೇಕಾಯಿತು.

ಒಂದೆಡೆ ವಿದ್ಯಾವಂತರಿಗೆ ಉದ್ಯೋಗ ಸಿಗುವುದು ಕಷ್ಟವಾದರೆ, ಜೀವನೋಪಾಯದ ಇತರ ಆಯ್ಕೆಗಳೂ ಸೀಮಿತವಾಗಿವೆ. ಮತ್ತೊಂದೆಡೆ, ಅರಣ್ಯ ಇಲಾಖೆಯು ಅರಣ್ಯ ಭೂಮಿಯನ್ನು ಸಾಗುವಳಿ ಮಾಡದಂತೆ ವನ್ ಗುಜ್ಜರ್‌ ಜನರನ್ನು ನಿಷೇಧಿಸಿದೆ. ಹೆಚ್ಚಿನ ಕುಟುಂಬಗಳು ಎಮ್ಮೆಗಳು ಮತ್ತು ಕೆಲವು ಹಸುಗಳನ್ನು ಹೊಂದಿವೆ, ಅವುಗಳ ಸಂಖ್ಯೆ 5ರಿಂದ 25ರವರೆಗೆ ಇರುತ್ತದೆ. ಈ ಜಾನುವಾರುಗಳ ಹಾಲಿನ ವ್ಯಾಪಾರ ನಡೆಸುತ್ತಿದ್ದಾರೆ. ಹೃಷಿಕೇಶದಲ್ಲಿನ ವ್ಯಾಪಾರಿಗಳು (ಈ ಬಸ್ತಿಯಿಂದ ಸುಮಾರು 10 ಕಿಮೀ) ಗುಜ್ಜರ್ ಕುಟುಂಬಗಳಿಂದ ಹಾಲನ್ನು ಖರೀದಿಸುತ್ತಾರೆ. ಅವರು ಸಾಕಿರುವ ಜಾನುವಾರುಗಳ ಸಂಖ್ಯೆಗೆ ಅನುಗುಣವಾಗಿ, ಒಂದು ಕುಟುಂಬವು ಹಾಲು ಮಾರಾಟ ಮಾಡುವ ಮೂಲಕ ತಿಂಗಳಿಗೆ 20,000-25,000 ರೂ. ಸಂಪಾದಿಸುತ್ತದೆ. ಆದರೆ ಈ ಆದಾಯದ ಹೆಚ್ಚಿನ ಭಾಗವು ಅದೇ ವ್ಯಾಪಾರಿಗಳಿಂದ ಮೇವು ಖರೀದಿಸಲು ಮತ್ತು ಬಾಕಿ ಪಾವತಿಸಲು ಮತ್ತು ಹಳೆಯ ಸಾಲಗಳನ್ನು ಪಾವತಿಸಲು ಹೋಗುತ್ತದೆ (ಅವರ ಸಾಲಗಳು ವಿಶೇಷವಾಗಿ ಏಪ್ರಿಲ್‌ನಿಂದ ಸೆಪ್ಟೆಂಬರ್ ವಲಸೆಯ ತಿಂಗಳುಗಳಲ್ಲಿ ಹೆಚ್ಚಾಗುತ್ತದೆ).

ಯುವ ಸಂಘಟನೆಯ ಸಂಚಾಲಕ ಮೀರ್ ಹಮ್ಜಾ ಅವರ ಪ್ರಕಾರ, ಕುನಾವೂ ಚೌಡ್ ಬಸ್ತಿಯ ಶೇಕಡಾ 10ರಷ್ಟು ಮಕ್ಕಳು ಸಹ ತಮ್ಮ ಔಪಚಾರಿಕ ಶಿಕ್ಷಣವನ್ನು ನಿರಂತರವಾಗಿ ಮುಂದುವರಿಸಲು ಸಾಧ್ಯವಾಗಲಿಲ್ಲ. ಶಿಕ್ಷಣದ ಹಕ್ಕಿಗೆ ಸಂಬಂಧಿಸಿದ ಕಾನೂನುಗಳಿದ್ದರೂ ಶಿಕ್ಷಣವನ್ನು ಪೂರ್ಣಗೊಳಿಸಲು ಸಾಧ್ಯವಾಗುತ್ತಿಲ್ಲ ಎಂದು ಅವರು ವಿವರಿಸುತ್ತಾರೆ, ಸರ್ಕಾರದ ಶಿಕ್ಷಣಕ್ಕೆ ಸಂಬಂಧಿಸಿದ ವಿವಿಧ ಯೋಜನೆಗಳು ಈ ಸಮುದಾಯಕ್ಕೆ ತಲುಪುತ್ತಿಲ್ಲ, ಏಕೆಂದರೆ ನಮ್ಮ ಬಸ್ತಿಯು ಗ್ರಾಮ ಪಂಚಾಯಿತಿಯೊಂದಿಗೆ ಸಂಪರ್ಕ ಹೊಂದಿಲ್ಲ. ಹೀಗಾಗಿ ಯಾವುದೇ ಯೋಜನೆ ಅಥವಾ ಪರಿಹಾರಕ್ಕೆ ಸಂಬಂಧಿಸಿದ ಪ್ರಯೋಜನಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಕುನಾವೂ ಚೌಡಕ್ಕೆ ಕಂದಾಯ ಗ್ರಾಮದ ಸ್ಥಾನಮಾನ ನೀಡಬೇಕೆಂಬುದು ಇಲ್ಲಿನ ನಿವಾಸಿಗಳ ಆಗ್ರಹ.

2015-16ರಲ್ಲಿ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ (2009) ನಿಬಂಧನೆಗಳ ಅಡಿಯಲ್ಲಿ, ದೂರದ ಪ್ರದೇಶಗಳಲ್ಲಿ ವಾಸಿಸುವ ವನ್ ಗುಜ್ಜರ್ ಮಕ್ಕಳನ್ನು ಔಪಚಾರಿಕ ಶಿಕ್ಷಣಕ್ಕೆ ಸಂಪರ್ಕಿಸಲು ಕುನಾವೂ ಚೌಡ್ ಸೇರಿದಂತೆ ಕೆಲವು ಬಸ್ತಿಗಳಲ್ಲಿ ವಸತಿಯೇತರ ವಿಶೇಷ ತರಬೇತಿ ಕೇಂದ್ರಗಳನ್ನು (ಎನ್‌ಆರ್‌ಎಸ್‌ಟಿಸಿಗಳು) ಪ್ರಾರಂಭಿಸಲಾಯಿತು.

Mohamad Shamshad (left), along with Mohamad Mir Hamza, are the mainstays of the basti school’s local posse of teachers.
PHOTO • Varsha Singh
Mohamad Shamshad (left), along with Mohamad Mir Hamza, are the mainstays of the basti school’s local posse of teachers.
PHOTO • Varsha Singh

ಮೊಹಮ್ಮದ್ ಶಂಶಾದ್ (ಎಡ), ಮೊಹಮ್ಮದ್ ಮೀರ್ ಹಮ್ಜಾ ಮತ್ತು ಅಫ್ತಾಬ್ ಅಲಿ ಅವರೊಂದಿಗೆ ಸೇರಿಈ ಸ್ಥಳೀಯ ಬಸ್ತಿ ʼಶಾಲೆಯಲ್ಲಿʼ ಕಲಿಸುತ್ತಾರೆ

ಆ ಶೈಕ್ಷಣಿಕ ವರ್ಷದಲ್ಲಿ ಕುನಾವೂ ಚೌಡ್‌ನ 38 ಮಕ್ಕಳು ಈ ಸ್ಥಳೀಯ ತರಗತಿಗಳಿಗೆ ಹಾಜರಾಗಿದ್ದರು ಎಂದು ಯಮಕೇಶ್ವರ ಬ್ಲಾಕ್‌ನ ಶಿಕ್ಷಣಾಧಿಕಾರಿ ಶೈಲೇಂದ್ರ ಅಮೋಲಿ ಹೇಳುತ್ತಾರೆ. 2019ರಲ್ಲಿ ಮತ್ತೊಂದು ಅನುಮೋದನೆ ಪಡೆದ ನಂತರ, ಆ ವರ್ಷದ ಜೂನ್‌ನಿಂದ 2020ರ ಮಾರ್ಚ್ ತಿಂಗಳಲ್ಲಿ ಲಾಕ್‌ಡೌನ್ ಜಾರಿಗೆ ಬರುವವರೆಗೆ 92 ಮಕ್ಕಳೊಂದಿಗೆ ತರಗತಿಗಳನ್ನು ಮತ್ತೆ ನಡೆಸಲಾಯಿತು. 2021-22ರ ಶೈಕ್ಷಣಿಕ ವರ್ಷಕ್ಕೂ ಕುನಾವೂ ಚೌಡ್‌ನ 6-12 ವರ್ಷದ 63 ಮಕ್ಕಳಿಗೆ ಎನ್‌ಆರ್‌ಎಸ್‌ಟಿಸಿ ತರಗತಿಗಳನ್ನು ಅನುಮೋದಿಸಲಾಗಿದೆ ಎಂದು ಶೈಲೇಂದ್ರ ಹೇಳುತ್ತಾರೆ.

ಆದರೆ, ವನ್ ಗುಜ್ಜರ್ ಜನರಿಗೆ ಔಪಚಾರಿಕ ಶಿಕ್ಷಣದಲ್ಲಿ ಈಗಲೂ ಹೆಚ್ಚಿನ ನಂಬಿಕೆಯಿಲ್ಲ ಎಂದು ಅವರು ಹೇಳುತ್ತಾರೆ. 2015-16ರಲ್ಲಿ, ಎನ್‌ಆರ್‌ಎಸ್‌ಟಿಸಿ ಅಡಿಯಲ್ಲಿ ನೋಂದಾಯಿಸಲ್ಪಟ್ಟ ಅನೇಕ ಮಕ್ಕಳನ್ನು 2021-22ರಲ್ಲಿ ಮರು-ನೋಂದಣಿ ಮಾಡಲಾಗಿದೆ, ಆದರೂ ಈ ತರಗತಿಗಳು ಅಂತರ ತುಂಬುವ ಪ್ರಯತ್ನಗಳಾಗಿವೆ ಎನ್ನುತ್ತಾರವರು.

ಮತ್ತೊಂದೆಡೆ, ಹಮ್ಜಾ ಮತ್ತು ಇತರ ಸ್ಥಳೀಯ ಶಿಕ್ಷಕರು ಎನ್‌ಆರ್‌ಎಸ್‌ಟಿಸಿ ತರಗತಿಗಳು (2015-16 ಮತ್ತು 2019ರಲ್ಲಿ) ಪ್ರತಿದಿನ ನಡೆಯಲಿಲ್ಲ ಮತ್ತು ಯಾರೂ ಮೇಲ್ವಿಚಾರಣೆ ಮಾಡಲಿಲ್ಲ ಎಂದು ಹೇಳುತ್ತಾರೆ. ಶಿಕ್ಷಕರು ಹೆಚ್ಚಾಗಿ ಬರುತ್ತಿರಲಿಲ್ಲಈ ಶಿಕ್ಷಕರು ಇತರ ಗ್ರಾಮಗಳು ಮತ್ತು ಸಮುದಾಯಗಳಿಂದ ಬಂದವರು ಮತ್ತು ಅವರಿಗೆ ಇಲ್ಲಿನ ಸ್ಥಳೀಯ ಸೂಕ್ಷ್ಮ ವ್ಯತ್ಯಾಸಗಳ ಬಗ್ಗೆ ತಿಳಿದಿರಲಿಲ್ಲ.

ಎನ್‌ಆರ್‌ಎಸ್‌ಟಿಸಿಯ ಮಾರ್ಗಸೂಚಿಗಳ ಪ್ರಕಾರ, ಸ್ಥಳೀಯ ವಿದ್ಯಾವಂತ ಯುವಕರಿಗೆ ಈ ಯೋಜನೆಗೆ ಅನುಮೋದನೆ ಪಡೆದ ಬಡಾವಣೆಗಳು ಅಥವಾ ಹಳ್ಳಿಗಳಲ್ಲಿ ಕಲಿಸುವ ಕೆಲಸವನ್ನು ನೀಡಲಾಗುವುದು ಮತ್ತು ಇದಕ್ಕಾಗಿ ಅವರಿಗೆ ತಿಂಗಳಿಗೆ 7,000 ರೂ ನೀಡಲಾಗುವುದು ಎಂದು ಅಮೋಲಿ ಹೇಳುತ್ತಾರೆ. ಆದರೆ 2015-16ರಲ್ಲಿ ಕುನಾವೂ ಚೌಡ್‌ನಲ್ಲಿ ತರಗತಿಗಳು ಪ್ರಾರಂಭವಾದಾಗ, ಬಸ್ತಿಯಲ್ಲಿ ಯಾವುದೇ ಪದವೀಧರರಿದ್ದಿರಲಿಲ್ಲ ಹೀಗಾಗಿ, ಬೇರೆ ಗ್ರಾಮದ ವ್ಯಕ್ತಿಯನ್ನು ಶಿಕ್ಷಕರಾಗಿ ನೇಮಿಸಲಾಯಿತು. ಇದೀಗ ಸ್ನಾತಕೋತ್ತರ ವ್ಯಾಸಂಗ ಮಾಡುತ್ತಿರುವ ಮೀರ್ ಹಮ್ಜಾ ಹಾಗೂ ಬಿಕಾಂ ಪದವಿ ಪಡೆದಿರುವ ಶಂಶಾದ್ ತಮಗೆ ಇನ್ನೂ ಕೆಲಸ ನೀಡಲಾಗಿಲ್ಲವೆಂದು ದೂರುತ್ತಾರೆ.

The ‘informal’ classes serve as add-on tuitions for older enrolled students and as preparation time for younger kids still to reach school
PHOTO • Varsha Singh

'ಅನೌಪಚಾರಿಕ' ತರಗತಿಗಳು ಹಿಂದೆ ದಾಖಲಾದ ವಿದ್ಯಾರ್ಥಿಗಳಿಗೆ ಹೆಚ್ಚುವರಿ ತರಗತಿಗಳಾಗಿ ಕಾರ್ಯನಿರ್ವಹಿಸಿದರೆ ಕಿರಿಯ ಮಕ್ಕಳ ಪಾಲಿಗೆ ಶಾಲೆ ತಲುಪುವ ಸಿದ್ಧತೆಯಾಗಿ ಕಾರ್ಯನಿರ್ವಹಿಸುತ್ತವೆ

ಆದರೆ, ಎನ್‌ಆರ್‌ಎಸ್‌ಟಿಸಿ ಸೆಷನ್‌ಗಳಲ್ಲಿ ಉಂಟಾಗುವ ಅಂತರವನ್ನು ತುಂಬಲು ಅವರು ನಡೆಸುವ 'ಅನೌಪಚಾರಿಕ' ತರಗತಿಗಳು ಸರ್ಕಾರಿ ಇಂಟರ್‌ಕಾಲೇಜಿಗೆ ಹೋಗುವ ಹಳೆಯ ವಿದ್ಯಾರ್ಥಿಗಳಿಗೆ ಹೆಚ್ಚುವರಿ ಟ್ಯೂಷನ್‌ಗಳಂತಿವೆ. ಅದೇ ಸಮಯದಲ್ಲಿ, ಅವರು 5ನೇ ತರಗತಿ ಪರೀಕ್ಷೆಗೆ (ಸರ್ಕಾರಿ ಪ್ರಾಥಮಿಕ ಶಾಲೆಗೆ ಹೋಗುವ ಅಥವಾ ಯಾವುದೇ ಶಾಲೆಗೆ ದಾಖಲಾಗದ) ಚಿಕ್ಕ ಮಕ್ಕಳನ್ನು ಸಿದ್ಧಪಡಿಸುತ್ತಾರೆ, ಇದರಿಂದಾಗಿ ಅವರು ಔಪಚಾರಿಕವಾಗಿ 6​​ನೇ ತರಗತಿಗೆ ದಾಖಲಾಗಬಹುದು. ಸ್ಥಳೀಯ ಶಿಕ್ಷಕರು ತಮ್ಮ ಜೀವನ ವೆಚ್ಚವನ್ನು ಭರಿಸಲು ಪ್ರತಿ ಮಗುವಿನಿಂದ 30-35 ರೂ. ಪಡೆಯುತ್ತಾರೆ. ಆದಾಗ್ಯೂ, ಈ ಮೊತ್ತವು ಹೆಚ್ಚು ಅಥವಾ ಕಡಿಮೆ ಕೂಡಾ ಇದ್ದರೂ ನಡೆಯುತ್ತದೆ ಮತ್ತು ಕಡ್ಡಾಯವಲ್ಲ.

ತಮ್ಮ ಸಮುದಾಯದ ಸದಸ್ಯರೊಂದಿಗೆ ದೀರ್ಘಕಾಲ ಕೆಲಸ ಮಾಡುತ್ತಾ, ಶಿಕ್ಷಣದ ಪ್ರಯೋಜನಗಳನ್ನು ಮನವರಿಕೆ ಮಾಡಲು ಮಾಡಿದ ಪ್ರಯತ್ನಗಳು ನಿಧಾನವಾಗಿ ಫಲ ಕೊಡಲಾರಂಭಿಸಿದೆ ಎನ್ನುತ್ತಾರೆ ಶಿಕ್ಷಕರು. ಈಗ ಸಮುದಾಯದಲ್ಲಿ ಬದಲಾವಣೆ ಕಾಣಿಸಲಾರಂಭಿಸಿದೆ.

ಜೈತೂನ್ ಬೀಬಿ ಹೇಳುತ್ತಾರೆ, “ನಮ್ಮ ಮಕ್ಕಳು ಓದಲು ಮತ್ತು ಬರೆಯಲು ಸಾಧ್ಯವಾ‌ಗಬೇಕೆಂದು ನಾವೂ ಬಯಸುತ್ತೇವೆ. ಕಾಡಿನ ಬದುಕು ಬಹಳ ಕಷ್ಟ. ಅವರು ನಮ್ಮಂತೆ ಕಷ್ಟಪಟ್ಟು ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ನಮ್ಮಲ್ಲಿ ಯಾರೂ ವಿದ್ಯಾವಂತರಲ್ಲ. ನಮ್ಮ ಮಕ್ಕಳೂ ನಮ್ಮಂತೆಯೇ ಆಗಬೇಕೆಂದು ನಾವು ಬಯಸುವುದಿಲ್ಲ.”

5ರಿಂದ 11 ವರ್ಷದೊಳಗಿನ ತನ್ನ ಮೂವರು ಮಕ್ಕಳನ್ನು ಓದಿಸಬೇಕೆಂದು ಮೊಹಮ್ಮದ್ ರಫಿ ಬಯಸುತ್ತಾರೆ. ಅವರ 11 ವರ್ಷದ ಮಗ ಯಾಕೂಬ್ ಸರ್ಕಾರಿ ಶಾಲೆಯಲ್ಲಿ ಏಳನೇ ತರಗತಿಯಲ್ಲಿ ಓದುತ್ತಿದ್ದರೆ, ಅವರ ಇಬ್ಬರು ಕಿರಿಯ ಮಕ್ಕಳು ಬಸ್ತಿಯ ತರಗತಿಗಳಲ್ಲಿ ಓದುತ್ತಿದ್ದಾರೆ. ಹೊರ ಜಗತ್ತನ್ನು ನೋಡಿದಾಗ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು ಅನ್ನಿಸುತ್ತದೆ’ಎನ್ನುತ್ತಾರೆ ರಫಿ.

Initially, few girls would turn up for the basti classes, but the situation is changing, with Ramzano (left) and Nafeesa Bano (centre) among those who now attaned. Right: Rafeeq, a Van Gujjar child, at the learning centre
PHOTO • Varsha Singh
Initially, few girls would turn up for the basti classes, but the situation is changing, with Ramzano (left) and Nafeesa Bano (centre) among those who now attaned. Right: Rafeeq, a Van Gujjar child, at the learning centre
PHOTO • Varsha Singh
Initially, few girls would turn up for the basti classes, but the situation is changing, with Ramzano (left) and Nafeesa Bano (centre) among those who now attaned. Right: Rafeeq, a Van Gujjar child, at the learning centre
PHOTO • Varsha Singh

ಆರಂಭದಲ್ಲಿ ಕೆಲವೇ ಹುಡುಗಿಯರು ಬಸ್ತಿಯ ತರಗತಿಗಳಿಗೆ ಹಾಜರಾಗಿದ್ದರು, ಆದರೆ, ರಮ್ಜಾನೊ (ಎಡ) ಮತ್ತು ನಫೀಸಾ ಬಾನೊರಂತಹ (ಮಧ್ಯ) ಹುಡುಗಿಯರು ಶಾಲೆಗೆ ಪ್ರವೇಶಿಸುವುದರೊಂದಿಗೆ, ಪರಿಸ್ಥಿತಿಗಳು ಬದಲಾಗಿವೆ. ಬಲ: ರಫೀಕ್, ಕಲಿಕಾ ಕೇಂದ್ರದಲ್ಲಿನ ಗುಜ್ಜರ್ ಪೋಷಕರೊಬ್ಬರ ಮಗು

ಶರಾಫತ್ ಅಲಿ ಅವರ ಇಬ್ಬರು ಮಕ್ಕಳಾದ ಏಳು ವರ್ಷದ ನೌಶಾದ್ ಮತ್ತು ಐದು ವರ್ಷದ ಮಗಳು ಆಶಾ ಕೂಡ ಬಸ್ತಿ ಶಾಲೆಯಲ್ಲಿ ಓದುತ್ತಿದ್ದಾರೆ. ಅವರು ಹೇಳುತ್ತಾರೆ, “ಕಳೆದ ಐದು ವರ್ಷಗಳಿಂದ, ನಾನು ಬೇಸಿಗೆಯಲ್ಲಿ ನನ್ನ ಜಾನುವಾರುಗಳೊಂದಿಗೆ ಎತ್ತರದ ಪರ್ವತಗಳಿಗೆ ವಲಸೆ ಹೋಗುವುದನ್ನು ನಿಲ್ಲಿಸಿದ್ದೇನೆ, ಈಗ ನಾವು ಒಂದೇ ಸ್ಥಳದಲ್ಲಿ ವಾಸಿಸುತ್ತಿದ್ದೇವೆ, ಇದರಿಂದ ನಮ್ಮ ಮಕ್ಕಳು ಸಹ ಓದಲು ಮತ್ತು ಬರೆಯಲು ಸಾಧ್ಯವಾಗುತ್ತದೆ, ಅವರು ಒಳ್ಳೆಯ ಶಿಕ್ಷಣವನ್ನು ಗಳಿಸಬೇಕೆಂದು ಬಯಸುತ್ತೇವೆ, ಅವರು ಸಹ ಸಮಾಜದಲ್ಲಿ ಇತರರಂತೆ ಬದುಕಬೇಕು, ಅವರಿಗೂ ಉದ್ಯೋಗ ಸಿಗಬೇಕು.”

ವನ್ ಗುಜ್ಜರರ ವಿವಿಧ ನೆಲೆಗಳಲ್ಲಿ ತಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುತ್ತಿದೆ ಎನ್ನುತ್ತಾರೆ ಶಂಶಾದ್. “2019ರಲ್ಲಿ, ಐದು ವನ್ ಗುಜ್ಜರ್ ನೆಲೆಗಳ ಸುಮಾರು 40 ಮಕ್ಕಳು ನಮ್ಮ ಸಂಸ್ಥೆಯ ಮೂಲಕ 6ನೇ ತರಗತಿಗೆ ಪ್ರವೇಶ ಪಡೆದರು. ಕೆಲವು ಹುಡುಗರು ಮತ್ತು ಕೆಲವು ಹುಡುಗಿಯರು (ಇಲ್ಲಿಯವರೆಗೆ ಕುನಾವೂ ಚೌಡ್‌ನಿಂದ ಹುಡುಗಿಯರು ಪ್ರವೇಶ ಪಡೆದಿಲ್ಲ) 10ನೇ ತರಗತಿಯನ್ನು ತಲುಪಲು ಪ್ರಾರಂಭಿಸಿದ್ದಾರೆ ಮತ್ತು ಕೆಲವರು 12 ನೇ ತರಗತಿಯಲ್ಲಿ ಓದುತ್ತಿದ್ದಾರೆ.

ಆರಂಭದಲ್ಲಿ ಕೆಲವೇ ಹುಡುಗಿಯರು ಮಾತ್ರವೇ ಬಸ್ತಿ ತರಗತಿಗಳಿಗೆ ಹಾಜರಾಗುತ್ತಿದ್ದರು ಎಂದು ಅವರು ಹೇಳುತ್ತಾರೆ. “ಅವರನ್ನು ಶಾಲೆಗೆ ಕಳುಹಿಸುವಂತೆ ನಾವು ಪೋಷಕರ ಮನವೊಲಿಸಬೇಕಾಗಿತ್ತು. ಆದರೆ, ಕಳೆದ 3-4 ವರ್ಷಗಳಲ್ಲಿ ಪರಿಸ್ಥಿತಿ ಬದಲಾಗಿದೆ." ಈ ಶೈಕ್ಷಣಿಕ ವರ್ಷದಲ್ಲಿ 6ನೇ ತರಗತಿಗೆ ಪ್ರವೇಶ ಪಡೆದ ಕುನಾವೂ ಚೌಡ್‌ನ ಕೆಲವೇ ವಿದ್ಯಾರ್ಥಿಗಳಲ್ಲಿ ಸುಮಾರು 12 ವರ್ಷ ವಯಸ್ಸಿನ ರಾಮ್ಜಾನೊ ಒಬ್ಬಳು. ಇವಳು ಈ ನೆಲೆಯಿಂದ 6ನೇ ತರಗತಿಗೆ ದಾಖಲಾಗಿರುವ ಮೊದಲ ವಿದ್ಯಾರ್ಥಿನಿಯಾಗಿದ್ದು, ತಾನು 10ನೇ ತರಗತಿ ತೇರ್ಗಡೆ ಹೊಂದುವ ಕನಸು ಹೊಂದಿರುವುದಾಗಿ ಹೇಳುತ್ತಾಳೆ.

ಮತ್ತು ಬಹುಶಃ ಮುಂದಿನ ದಿನಗಳಲ್ಲಿ, ಕವಿತೆ ಓದುತ್ತಿದ್ದ ಒಂಬತ್ತು ವರ್ಷದ ಫಾತಿಮಾ ಬಾನೋ ಕೂಡಾ ತನ್ನ ಸಮುದಾಯದ ಈ ಅನಿಶ್ಚಿತ ಪಯಣದ ಸಂಪ್ರದಾಯವನ್ನು ಮೀರುವ ಮೂಲಕ ಆಕೆಯೂ ಸರ್ಕಾರಿ ಶಾಲೆಯನ್ನು ತಲುಪಲಿದ್ದಾಳೆ.

ಅನುವಾದ: ಶಂಕರ. ಎನ್. ಕೆಂಚನೂರು

Varsha Singh

Varsha Singh is an independent journalist based in Dehradun, Uttarakhand. She covers the Himalayan region’s environment, health, gender and people’s issues.

यांचे इतर लिखाण Varsha Singh
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

यांचे इतर लिखाण Shankar N. Kenchanuru