ಲಕ್ಷ್ಮಿ ತುಡು ಆಸ್ಪತ್ರೆ ತಲುಪುವಷ್ಟರಲ್ಲಿ ಕಲ್ಪನಾ ತೀರಿಕೊಂಡಿದ್ದರು. “ಹುಡುಗಿ ಆ ದಿನ ಬೆಳಿಗ್ಗೆ ತುಂಬಾ ಹಸಿದಿದ್ದಳು. ನಾನು ಅವಳಿಗೆ ಅನ್ನ ತರಬೇಕೆಂದಿದ್ದೆ ಆದರೆ ಅಷ್ಟು ಹೊತ್ತಿಗೆ ತಡವಾಗಿತ್ತು,” ಎಂದು ನೆನಪಿಸಿಕೊಳ್ಳುತ್ತಾರೆ. “ಅಂದು ಜೋರಾಗಿ ಮಳೆ ಬರುತ್ತಿತ್ತು”
ಅದು ಜೂನ್ 2020, ಅಂದು ಅವರ 26 ವರ್ಷದ ಮಗಳು ಕಲ್ಪನಾ ತಲೆನೋವು ಮತ್ತು ನಿರಂತರ ವಾಂತಿಯ ಕಾರಣ ಆಸ್ಪತ್ರೆಗೆ ದಾಖಲಾಗಿದ್ದರು. ಲಕ್ಷ್ಮಿಯವರ ಮಧ್ಯದ ಮಗಳಾದ ಶಿಬಾನಿ ಆಸ್ಪತ್ರೆಯಲ್ಲಿ ತನ್ನ ಅಕ್ಕನೊಂದಿಗೆ ಇದ್ದಳು.
ಕಲ್ಪನಾ ಅವರು 2017ರಿಂದ ಖಾಸಗಿ ಡಯಾಗ್ನಾಸ್ಟಿಕ್ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು, ಸ್ಥಳೀಯವಾಗಿ ಕಲ್ಡಿಘಿ ಆಸ್ಪತ್ರೆ ಎಂದು ಕರೆಯಲಾಗುವ ಗಂಗಾರಂಪುರದ ಸರ್ಕಾರಿ-ಉಪವಿಭಾಗದ ಆಸ್ಪತ್ರೆಯ ವೈದ್ಯರು ಖಾಸಗಿ ನರವಿಜ್ಞಾನ ತಜ್ಞರನ್ನು ಸಂಪರ್ಕಿಸುವಂತೆ ಸಲಹೆ ನೀಡಿದ್ದರು. ಎರಡನೇ ಮಗನ ಜನನದ ನಂತರ 2019ರಲ್ಲಿ ಆಕೆಯ ಸ್ಥಿತಿ ಇನ್ನಷ್ಟು ಹದಗೆಟ್ಟಿತು.
ಮಾರ್ಚ್ 2020ರಲ್ಲಿ ಲಾಕ್‌ಡೌನ್ ಪ್ರಾರಂಭಗೊಳ್ಳುವುದರೊಂದಿಗೆ, ಆಕೆಯ ಕೋಲ್ಕತ್ತಾದಲ್ಲಿರುವ ಡಯಾಗ್ನಾಸ್ಟಿಕ್ ಕೇಂದ್ರದ ವೈದ್ಯರ ಮಾಸಿಕ ಭೇಟಿ ಅನಿಯಮಿತಗೊಳ್ಳತೊಡಗಿತು. "ನಾವು ಕಾಯಲು ಸಿದ್ಧರಿದ್ದೆವು ಆದರೆ ಅವರ ಭೇಟಿಯ ದಿನಾಂಕಗಳನ್ನು ನಿರಂತರವಾಗಿ ಮುಂದೂಡಲಾಗುತ್ತಿತ್ತು" ಎಂದು ಲಕ್ಷ್ಮಿ ನೆನಪಿಸಿಕೊಳ್ಳುತ್ತಾರೆ. "ಹೀಗಾಗಿ ನಾವು ಮೊದಲು ಬರೆದುಕೊಡಲಾಗಿದ್ದ ಅದೇ ಔಷಧಿಗಳನ್ನು ಮತ್ತೆ ಮತ್ತೆ ಖರೀದಿಸಿದೆವು."
ಕಲ್ಪನಾ ಗಂಗಾರಂಪುರ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿಎ ವಿದ್ಯಾರ್ಥಿನಿಯಾಗಿದ್ದಾಗ 2014ರಲ್ಲಿ ಅವರ ವಿವಾಹವಾಯಿತು. ಅವರ 29 ವರ್ಷದ ಪತಿ ನಯನ್ ಮರ್ಡಿ ಕಿರಾಣಿ ಅಂಗಡಿಯೊಂದನ್ನು ನಡೆಸುತ್ತಿದ್ದರು ಮತ್ತು ಪಶ್ಚಿಮ ಬಂಗಾಳದ ದಕ್ಷಿಣ ದಿನಾಜ್‌ಪುರ ಜಿಲ್ಲೆಯ ಗಂಗಾರಂಪುರ ಪಟ್ಟಣದಿಂದ 17 ಕಿಲೋಮೀಟರ್ ದೂರದಲ್ಲಿರುವ ಅನಂತಪುರ ಗ್ರಾಮದಲ್ಲಿ ಅರೆಕಾಲಿಕ ಟೈಲರಿಂಗ್ ವೃತ್ತಿ ಕೂಡಾ ಮಾಡುತ್ತಿದ್ದರು. ಆಕೆಯ ಅತ್ತೆ ಕೃಷಿ ಕಾರ್ಮಿಕರಾಗಿದ್ದರು. ಒಂದು ವರ್ಷದ ನಂತರ, ಕಲ್ಪನಾಳ ಮೊದಲ ಗಂಡು ಮಗುವಿನ ಜನನದ ನಂತರ, ಬಾಲ್ಯದಿಂದಲೂ ಅನುಭವಿಸುತ್ತಿದ್ದ ತಲೆನೋವು ವಿಪರೀತವಾಗಿ ಉಲ್ಬಣಿಸತೊಡಗಿತು.
ಈ ವರ್ಷದ ಜೂನ್ 28ರಂದು, ನಯನ್ ತನ್ನ ತಂಗಿ ಶಿಬಾನಿಯನ್ನು ಅನಂತಪುರದಿಂದ ಕಲ್ಡಿಘಿ ಆಸ್ಪತ್ರೆಗೆ ಬಾಡಿಗೆ ಕಾರಿನಲ್ಲಿ ಕರೆದುಕೊಂಡು ಹೋಗಿ ಆಸ್ಪತ್ರೆಗೆ ದಾಖಲಿಸಿದರು. ಆಸ್ಪತ್ರೆಯಲ್ಲಿ ಏನಾಯಿತು ಎನ್ನುವುದು ಲಕ್ಷ್ಮಿಯವರಿಗೆ ಸರಿಯಾಗಿ ಗೊತ್ತಿಲ್ಲ. ಅವರಿಗೆ ಈಗ ನೆನಪಿರುವುದು ಮರುದಿನ ಬೆಳಿಗ್ಗೆ ಕಲ್ಪನಾ ನಿಧನರಾಗಿದ್ದರು ಎನ್ನುವವುದು ಮಾತ್ರ.
ಇದಕ್ಕೂ ಐದು ವರ್ಷಕ್ಕಿಂತ ಕಡಿಮೆ ಅವಧಿಯಲ್ಲಿ ಲಕ್ಷ್ಮಿ ತನ್ನ ಪತಿಯನ್ನು ಕಳೆದುಕೊಂಡಿದ್ದರು. ಚಳಿಗಾಲದ ಸಂಜೆ ಚಳಿ ಕಾಯಿಸಲೆಂದು ಬೆಂಕಿಯೆದುರು ಕುಳಿತಿದ್ದಾಗ ಆಕಸ್ಮಿಕವಾಗಿ ಜ್ಯೇತು ತುಡು ಅವರ ಬಟ್ಟೆಗೆ ಬೆಂಕಿಗೆ ತಗುಲಿತು. 58ರ ಹರೆಯದ ಜ್ಯೇತು ಕ್ಷಯರೋಗ ಮತ್ತು ಪಿತ್ತಜನಕಾಂಗದ ಕಾಯಿಲೆಗಳಿಂದಾಗಿ ಒಂದು ದಶಕದಿಂದ ಹಾಸಿಗೆ ಹಿಡಿದಿದ್ದರು. ಇದಕ್ಕೂ ಮೊದಲು ಅವರು ಗಂಗಾರಂಪುರ ಪಟ್ಟಣದಲ್ಲಿ ಸೈಕಲ್ ರಿಕ್ಷಾವನ್ನು ಓಡಿಸುತ್ತಿದ್ದರು. "ನಾವು ಅವರನ್ನು ಕಲ್ಡಿಘಿ ಆಸ್ಪತ್ರೆಗೆ ಕರೆದೊಯ್ದಿದ್ದೆವು" ಎಂದು ಲಕ್ಷ್ಮಿ ನೆನಪಿಸಿಕೊಳ್ಳುತ್ತಾರೆ. "ಅವರು 16 ದಿನಗಳ ನಂತರ ನಿಧನರಾದರು."
ಈ ಘಟನೆಯು ಲಕ್ಷ್ಮಿಯವರನ್ನು ಮೂವರು ಹೆಣ್ಣುಮಕ್ಕಳಾದ - ಸಂತಾನ, ಈಗ 30 ವರ್ಷ, ಕಲ್ಪನಾ, 26, ಮತ್ತು 21 ವರ್ಷದ ಶಿಬಾನಿ - ಮತ್ತು 15 ವರ್ಷದ ಮಗ ಶಿಬ್ನಾಥ್ ಇವರೆಲ್ಲರ ಪಾಲಿಗೆ ಏಕಮಾತ್ರ ಪೋಷಕಿ ಮತ್ತು ದುಡಿಮೆಗಾರರನ್ನಾಗಿ ಮಾಡಿತು.
“ನನ್ನೊಳಗೆ ದುಃಖ ತುಂಬಿತ್ತು. ಮೂರು ಹೆಣ್ಣುಮಕ್ಕಳು ಮತ್ತು ಒಬ್ಬ ಸಣ್ಣ ಹುಡುಗ. ನಾನು ಅವರನ್ನು ಏಕಾಂಗಿಯಾಗಿ ಬೆಳೆಸಬೇಕಾಗಿತ್ತು”ಎಂದು ಲಕ್ಷ್ಮಿ ಹೇಳುತ್ತಾರೆ – ಅವರು ಪರಿಶಿಷ್ಟ ಪಂಗಡವಾಗಿರುವ ಸಂತಾಲ್ ಸಮುದಾಯಕ್ಕೆ ಸೇರಿದವರು. ಗಂಗಾರಂಪುರದ ತನ್ನ ಮನೆಯ ಅಂಗಳದಲ್ಲಿ ನಮ್ಮೊಂದಿಗೆ ಮಾತನಾಡುತ್ತಿದ್ದರು. “ನಾನು ಬಹಳ ನೋವನ್ನು ನಿಭಾಯಿಸಿದೆ. ಒಂದು ದಿನವೂ ನಾನು ಸುಮ್ಮನೆ ಕುಳಿತುಕೊಳ್ಳುವುದನ್ನು ನೀವು ಕಾಣಲು ಸಾಧ್ಯವಿಲ್ಲ,” ಎಂದು ಅವರು ಹೇಳುತ್ತಾರೆ. “ಪ್ರತಿದಿನ ಕೆಲಸ ಮಾಡುತ್ತೇನೆ. ನಾನು ನನ್ನ ಮಕ್ಕಳನ್ನು ಬೆಳೆಸಿದ್ದು ಹೀಗೆ.”
ಜ್ಯೇತು ತೀರಿಕೊಂಡ ಕೇವಲ 11 ದಿನಗಳ ನಂತರ, ಗಾರೆ ಕೆಲಸ ಮಾಡುತ್ತಿದ್ದ ಅವರ 53 ವರ್ಷದ ಸಹೋದರ ಸುಫಲ್ ತುಡು, ಜ್ಯೇತು ಅವರ ಅಂತ್ಯಕ್ರಿಯೆಯ ಸಮಾರಂಭಕ್ಕೆ ಸಂಬಂಧಿಕರನ್ನು ಆಹ್ವಾನಿಸಲು ಹೋಗುವಾಗ ಪಾರ್ಶ್ವವಾಯುವಿನಿಂದ ನಿಧನರಾದರು.
ಲಕ್ಷ್ಮಿ ಪ್ರಸ್ತುತ ಪ್ರಧಾನ್ ಮಂತ್ರಿ ಆವಾಸ್ ಯೋಜನೆಯಡಿ 2016ರಲ್ಲಿ ನಿರ್ಮಿಸಲಾದ ಎರಡು ಕೋಣೆಗಳ ಮನೆಯಲ್ಲಿ ವಾಸಿಸುತ್ತಿದ್ದಾರೆ. ಮನೆಯ ಹಿತ್ತಲಿನಲ್ಲಿ ಒಂದು ಸಣ್ಣ ಕೊಳವಿದೆ, ಜೊತೆಗೆ ಟಾರ್ಪಾಲಿನ್ ಮತ್ತು ತಗಡಿನ ಗೋಡೆಗಳು ಮತ್ತು ಮಣ್ಣಿನ ನೆಲವನ್ನು ಹೊಂದಿರುವ ಅಡುಗೆಮನೆಯಿದೆ. ಅವರು ತನ್ನ ಜಮೀನನ್ನು ಮಣ್ಣಿನ ಗುಡಿಸಲಿನಲ್ಲಿ ವಾಸಿಸುವ ಸುಫಲ್ ತುಡು ಅವರ ವಿಧವೆ ತನ್ನ ಅತ್ತಿಗೆ ಹಿಸ್ಮುನಿಯೊಂದಿಗೆ ಹಂಚಿಕೊಳ್ಳುತ್ತಾರೆ. ಇಬ್ಬರೂ ಮಹಿಳೆಯರು ಕೃಷಿ ಮತ್ತು ನಿರ್ಮಾಣ ಕಾರ್ಮಿಕರಾಗಿ ಕೆಲಸ ಮಾಡುತ್ತಾರೆ.
"ಜೈ ಬಾಂಗ್ಲಾ [ಕೆಂಗಣ್ಣು ಬೇನೆಗೆ ಸ್ಥಳೀಯ ಪದ, 1971ರಲ್ಲಿ ಬಾಂಗ್ಲಾದೇಶದ ವಿಮೋಚನಾ ಯುದ್ಧದ ಸಮಯದಲ್ಲಿ ಭಾರತಕ್ಕೆ ಅಪ್ಪಳಿಸಿದ ಸಾಂಕ್ರಾಮಿಕವು ಅದರ ಹೆಸರನ್ನು ಪಡೆದುಕೊಂಡಿದೆ] ನಡೆಯುತ್ತಿರುವಾಗ ನನಗೆ ಎರಡು ತಿಂಗಳ ವಯಸ್ಸಾಗಿತ್ತು ಎಂದು ನನ್ನ ತಂದೆ ಹೇಳುತ್ತಿದ್ದರು" ಎಂದು ಲಕ್ಷ್ಮಿ ಹೇಳುತ್ತಾರೆ. ಅದರ ಪ್ರಕಾರ ಅವರ ವಯಸ್ಸು 49, ಆದರೂ ಆಕೆಯ ಆಧಾರ್ ಕಾರ್ಡ್ ಅವರ ವಯಸ್ಸು 55 ಎಂದು ಹೇಳುತ್ತದೆ. ಬಾಲ್ಯದಲ್ಲಿ, ಅವರ ಮಗಳು ಕಲ್ಪನಾಳಿಗೆ ಆಗಾಗ್ಗೆ ಬರುತ್ತಿದ್ದಂತಹ ತಲೆನೋವು ಅವರನ್ನು ನಿಯಮಿತವಾಗಿ ಶಾಲೆಗೆ ಹೋಗದಂತೆ ಮಾಡಿತು - ಅವರು 1ನೇ ತರಗತಿಯನ್ನು ಮಾತ್ರ ಪೂರ್ಣಗೊಳಿಸಲು ಸಾಧ್ಯವಾಯಿತು. ಆದ್ದರಿಂದ ಲಕ್ಷ್ಮಿಯ ಪೋಷಕರು ಅವರ ಜಾನುವಾರುಗಳನ್ನು ನೋಡಿಕೊಳ್ಳುವ ಕೆಲಸವನ್ನು ಅವರಿಗೆ ನೀಡಿದರು. ಅವರ ತಂದೆ ಗಾರೆ ಕೆಲಸಗಾರ ಮತ್ತು ಆಕೆಯ ತಾಯಿ ಗಂಗಾರಂಪುರದಲ್ಲಿ ಕೃಷಿ ಕಾರ್ಮಿಕರಾಗಿದ್ದರು.
ಲಕ್ಷ್ಮಿಯವರ ಇಬ್ಬರು ಸಹೋದರಿಯರು 10ನೇ ತರಗತಿಯವರೆಗೆ ಅಧ್ಯಯನ ಮಾಡಿದ್ದರೂ "ಓದಲು ಮತ್ತು ಬರೆಯಲು ನನಗೆ ತಿಳಿದಿಲ್ಲ" ಎಂದು ಹೇಳುತ್ತಾರೆ. ಬಹುಶಃ ಅದಕ್ಕಾಗಿಯೇ ಆಕೆಯ ಮಕ್ಕಳ ಶಿಕ್ಷಣವು ಅವರ ಪಾಲಿಗೆ ಇನ್ನಷ್ಟು ಮಹತ್ವದ್ದಾಗಿತ್ತು. ಜ್ಯೇತು ಅವರ ಮರಣದ ನಂತರ, ಲಕ್ಷ್ಮಿಯ ಸಹೋದರಿಯೊಬ್ಬರು ಶಿಬ್ನಾಥ್‌ನನ್ನು ನೆರೆಯ ಉತ್ತರ ದಿನಾಜ್ಪುರ ಜಿಲ್ಲೆಯ ನಂದಂಗಾಂವ್ ಗ್ರಾಮದಲ್ಲಿ ತನ್ನೊಂದಿಗೆ ಇರಲು ಕರೆದೊಯ್ದರು. ಅವರು ಅಲ್ಲಿ ಸ್ಥಳೀಯ ಅಂಗನವಾಡಿಯಲ್ಲಿ ಕೆಲಸ ಮಾಡುತ್ತಾರೆ. ಜೊತೆಗೆ ಹುಡುಗನ ಶಾಲಾ ಶಿಕ್ಷಣಕ್ಕೆ ಸಹಾಯ ಮಾಡುತ್ತಿದ್ದಾರೆ. "ಬೋರ್ಡ್ ಪರೀಕ್ಷೆಗಳು ಮುಗಿದ ನಂತರ ನನ್ನೊಂದಿಗೆ ಇರಲು ನಾನು ಅವನನ್ನು ಕರೆತರುತ್ತೇನೆ" ಎಂದು 10ನೇ ತರಗತಿ ವಿದ್ಯಾರ್ಥಿ ಶಿಬ್ನಾಥ್ ಬಗ್ಗೆ ಲಕ್ಷ್ಮಿ ಹೇಳುತ್ತಾರೆ.
ಲಕ್ಷ್ಮಿಯವರ ಬಳಿ ಯಾವುದೇ ಕೃಷಿಭೂಮಿಯಿಲ್ಲ, ಮತ್ತು ಅವರ ಗಂಡನ ಪಾಲಿನ ಭೂಮಿಯನ್ನು (ಈ ಬಗ್ಗೆ ವಿವರವಾಗಿ ಮಾತನಾಡದಿರಲು ಬಯಸುತ್ತಾರೆ) ಅವರ ಹಿರಿಯ ಹೆಣ್ಣುಮಕ್ಕಳ ಮದುವೆ ಖರ್ಚಿಗಾಗಿ ಮಾರಾಟ ಮಾಡಬೇಕಾಯಿತು. 2007ರಲ್ಲಿ ಸಂತಾನರಿಗೆ ಮತ್ತು 2014ರಲ್ಲಿ ಕಲ್ಪನಾರ ಮದುವೆ ಮಾಡಲಾಯಿತು. ಗೃಹಿಣಿಯಾಗಿರುವ ಸಂತಾನ, ಗಂಗಾರಂಪುರದಿಂದ ಸುಮಾರು 12 ಕಿಲೋಮೀಟರ್ ದೂರದಲ್ಲಿರುವ ಸುತೈಲ್ ಗ್ರಾಮದಲ್ಲಿ ವಾಸಿಸುತ್ತಿದ್ದಾರೆ, ಅಲ್ಲಿ ಅವರ ಪತಿ ಕೃಷಿ ಕಾರ್ಮಿಕನಾಗಿ ಮತ್ತು ಅರೆಕಾಲಿಕ ಖಾಸಗಿ ಶಿಕ್ಷಕನಾಗಿ ಕೆಲಸ ಮಾಡುತ್ತಾರೆ.
ಆಗಸ್ಟ್ 2020ರಲ್ಲಿ, ಖಾರಿಫ್ ಹಂಗಾಮಿನ ಭತ್ತದ ಬೇಸಾಯ ಭರದಿಂದ ಸಾಗುತ್ತಿದ್ದ ಸಮಯದಲ್ಲಿ ಲಕ್ಷ್ಮಿ ನೆರೆಯ ಭೂಮಾಲೀಕರ ಹೊಲಗಳಲ್ಲಿ ಕೆಲಸ ಮಾಡಲು ಅವರ ಕಿರಿಯ ಮಗಳು ಶಿಬಾನಿಯ ಸಹಾಯವನ್ನು ಪಡೆದಿದ್ದರು.
ಈ ಭಾಗಗಳಲ್ಲಿ ಭತ್ತದ ಬೆಳೆಯನ್ನು ಜೂನ್‌ನಿಂದ ಆಗಸ್ಟ್‌ವರೆಗೆ ಬಿತ್ತನೆ ಮಾಡಲಾಗುತ್ತದೆ ಮತ್ತು ಅಕ್ಟೋಬರ್ ಮತ್ತು ಡಿಸೆಂಬರ್ ನಡುವೆ ಕೊಯ್ಲು ಮಾಡಲಾಗುತ್ತದೆ. ಮುಖ್ಯವಾಗಿ ಸೆಣಬು, ಜೊತೆಗೆ ಸಾಸಿವೆ, ಆಲೂಗಡ್ಡೆ ಮತ್ತು ಮೆಣಸಿನಕಾಯಿಗಳನ್ನು ಸಹ ಬೆಳೆಯಲು ಲಕ್ಷ್ಮಿ ಸಹಾಯ ಮಾಡುತ್ತಾರೆ. ಕೆಲವೊಮ್ಮೆ, ಜುಲೈ ಮತ್ತು ಆಗಸ್ಟ್ನಲ್ಲಿ, ಸೆಣಬಿನ ಕೊಯ್ಲು ಮತ್ತು ಭತ್ತದ ನಾಟಿ ಚಟುವಟಿಕೆಗಳು ಒಟ್ಟಿಗೆ ಬರುತ್ತವೆ. ಆ ಸಮಯದಲ್ಲಿ ಲಕ್ಷ್ಮಿ ಭತ್ತದ ಗದ್ದೆಗಳಲ್ಲಿ ಕೆಲಸ ಮಾಡಲು ಆದ್ಯತೆ ನೀಡುತ್ತಾರೆ, ಸೆಣಬಿನ ಕೊಯ್ಲು ಹೆಚ್ಚು ಶ್ರಮದಾಯಕ ಕೆಲಸವಾಗಿದೆ. ಆದರೆ ಆಕೆಗೆ ಸಾಮಾನ್ಯವಾಗಿ ಹೆಚ್ಚಿನ ಆಯ್ಕೆ ಇರುವುದಿಲ್ಲ.
"ಒಟ್ಟಾರೆಯಾಗಿ, ನಾವು ಪ್ರತಿವರ್ಷ 2ರಿಂದ 3 ತಿಂಗಳು ಗದ್ದೆ ಕೆಲಸ ಮಾಡುತ್ತೇವೆ ಮತ್ತು ಉಳಿದ ದಿನಗಳಲ್ಲಿ ನಾವು ಕಟ್ಟಡ ನಿರ್ಮಾಣ ಕಾರ್ಮಿಕರಾಗಿ ಕೆಲಸ ಮಾಡುತ್ತೇವೆ" ಎಂದು ಲಕ್ಷ್ಮಿ ಹೇಳುತ್ತಾರೆ, ಜೊತೆಗೆ ಇತರೆ ಕೆಲಸಗಳನ್ನೂ ಮಾಡುತ್ತಾರೆ. ಆದರೆ ಗಂಗಾರಾಂಪುರ ಪುರಸಭೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೃಷಿ ಕಾರ್ಮಿಕರಿಗೆ ಕೆಲಸ ಸಿಗುವುದು ಸುಲಭವಲ್ಲ. ಏಕೆಂದರೆ ಅಂತಹ ಕಾರ್ಮಿಕರಿಗೆ ಗುತ್ತಿಗೆದಾರರು ಹೆಚ್ಚು ಪ್ರಾಶಸ್ತ್ಯ ನೀಡುವುದಿಲ್ಲ. ಅನೇಕ ಬಾರಿ ಲಕ್ಷ್ಮಿ ಕೆಲಸ ಪಡೆಯಲು ಹಲವಾರು ದಿನಗಳ ತನಕ ಕಾಯಬೇಕಾಗುತ್ತದೆ.
ಕಟ್ಟಡ ನಿರ್ಮಾಣ ಕೆಲಸಕ್ಕೆ ಲಕ್ಷ್ಮಿಯಂತಹ ‘ಕೌಶಲ ರಹಿತ’ ಕಾರ್ಮಿಕರಿಗೆ ನಿಗದಿತ 200 ರೂ. ದೈನಂದಿನ ವೇತನವಾಗಿ ಕೊಡಲಾಗುತ್ತದೆ. ಆದರೆ ಹೊಲಗಳಲ್ಲಿ ಕೆಲಸ ಮಾಡಿದರೆ ದಿನವೊಂದಕ್ಕೆ ರೂ. 150ರಿಂದ 300 ರೂಪಾಯಿಗಳ ತನಕ ದೊರೆಯುತ್ತದೆ. (ಪಶ್ಚಿಮ ಬಂಗಾಳದಲ್ಲಿ ಕೌಶಲ ರಹಿತ ಉದ್ಯೋಗಕ್ಕೆ ಕನಿಷ್ಠ ದೈನಂದಿನ ವೇತನ 257 ರೂ.) ಲಕ್ಷ್ಮಿಯವರ ಸರಾಸರಿ ಮಾಸಿಕ ಆದಾಯ ರೂ. 4,000ದಿಂದ 5,000. ಅವರು ಅಕ್ಕಿ, ಗೋಧಿ ಹಿಟ್ಟು ಮತ್ತು ಸೀಮೆಎಣ್ಣೆಯಂತಹ ಅಗತ್ಯ ವಸ್ತುಗಳಿಗಾಗಿ ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆಯನ್ನು ಅವಲಂಬಿಸಿದ್ದಾರೆ. ಕುಟುಂಬವು ಆದ್ಯತಾ ಕುಟುಂಬ ಪಡಿತರ ಚೀಟಿಯನ್ನು ಹೊಂದಿದ್ದು ಅದು ಅವರಿಗೆ ಅಕ್ಕಿ, ಗೋಧಿ, ಸಕ್ಕರೆ (ಸಾಮಾನ್ಯವಾಗಿ ಲಭ್ಯವಿರುವುದಿಲ್ಲ) ಮತ್ತು ಸೀಮೆಎಣ್ಣೆಯನ್ನು ಸಬ್ಸಿಡಿ ದರದಲ್ಲಿ ನೀಡುತ್ತದೆ.
ಕೃಷಿ ಹಂಗಾಮಿನಲ್ಲಿ, ಲಕ್ಷ್ಮಿ ತನ್ನ ದಿನವನ್ನು ಬೆಳಿಗ್ಗೆ 4 ಗಂಟೆಗೆ ಎದ್ದು ಮನೆ ಕೆಲಸಗಳೊಂದಿಗೆ ಪ್ರಾರಂಭಿಸುತ್ತಾರೆ. ಬೆಳಗಿನ ಎಂಟು ಗಂಟೆಗೆ ಕೆಲಸಕ್ಕೆ ಹೊರಡುತ್ತಾರೆ. ಹೊಲಗಳಲ್ಲಿ ತಾಯಿಗೆ ಸಹಾಯ ಮಾಡಿದ ನಂತರ ಮಗಳು ಶಿಬಾನಿ ಮನೆಕೆಲಸ ಮಾಡುವ ಅಗತ್ಯವಿರುವುದಿಲ್ಲ. "ನಾನು ಒಬ್ಬಳೇ ಕೆಲಸಗಳನ್ನು ನಿಭಾಯಿಸಲು ಸಾಧ್ಯವಿರುವಾಗಲೆಲ್ಲಾ ನಾನು ಅವಳಿಗೆ ಓದಲು ಬಿಡುತ್ತೇನೆ" ಎಂದು ಲಕ್ಷ್ಮಿ ಹೇಳುತ್ತಾರೆ.
ಗಂಗಾರಾಂಪುರ ಕಾಲೇಜಿನಲ್ಲಿ ದ್ವಿತೀಯ ವರ್ಷದ ಬಿಎ ವಿದ್ಯಾರ್ಥಿನಿಯಾಗಿರುವ ಶಿಬಾನಿ ತನ್ನ ಕಾಲೇಜಿನ ನ್ಯಾಷನಲ್ ಕೆಡೆಟ್ ಕಾರ್ಪ್ಸ್ (ಎನ್‌ಸಿಸಿ, ಭಾರತೀಯ ಸಶಸ್ತ್ರ ಪಡೆಗಳೊಂದಿಗೆ ಸಂಯೋಜಿತ) ಘಟಕಕ್ಕೆ ಸೇರಲು ಬಯಸಿದ್ದಾರೆ. ಅವರು ಕ್ರೀಡಾಪಟುವಾಗಿದ್ದು 2011 ಮತ್ತು 2012ರಲ್ಲಿ ಕೋಲ್ಕತ್ತಾದಲ್ಲಿ ನಡೆದ ರಾಜ್ಯಮಟ್ಟದ ಕಬ್ಬಡ್ಡಿ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿದ ಪ್ರಮಾಣ ಪತ್ರಗಳನ್ನು ನನಗೆ ತೋರಿಸಿದರು. 13ನೇ ವಯಸ್ಸಿನಲ್ಲಿ ಅವರು 2011ರಲ್ಲಿ ಪುಣೆಯಲ್ಲಿ ನಡೆದ ರಾಷ್ಟ್ರಮಟ್ಟದ ಕಬ್ಬಡ್ಡಿ ಚಾಂಪಿಯನ್‌ಶಿಪ್‌ನಲ್ಲಿ ಉತ್ತರ ಬಂಗಾ ಪ್ರದೇಶವನ್ನು (ಪಶ್ಚಿಮ ಬಂಗಾಳದ ಉತ್ತರ ಜಿಲ್ಲೆಗಳನ್ನು ಒಳಗೊಂಡಂತೆ) ಪ್ರತಿನಿಧಿಸಿದ್ದರು. ತಾನು 2013ರಲ್ಲಿ ಸ್ಥಳೀಯ ಮ್ಯಾರಥಾನ್‌ನಲ್ಲಿ ಗೆದ್ದ ಬೈಸಿಕಲ್ ಅನ್ನು ಹೆಮ್ಮೆಯಿಂದ ತೋರಿಸುತ್ತಾರೆ.
ಆದರೆ ಶಿಬಾನಿಯನ್ನು ಎನ್‌ಸಿಸಿಗೆ ಸೇರಿಸಲು ಲಕ್ಷ್ಮಿ ಸಿದ್ಧರಿಲ್ಲ. "ಇದರರ್ಥ ಉಡುಪುಗಳಿಗೆ ಹೆಚ್ಚುವರಿ ಖರ್ಚು, ಮತ್ತು ಅವಳು ಪ್ರತಿದಿನ ಕಾಲೇಜಿಗೆ ಹೋಗಬೇಕಾಗುತ್ತದೆ" ಎನ್ನುತ್ತಾರೆ ಲಕ್ಷ್ಮಿ. ಶಿಬಾನಿ ಕಾಲೇಜಿಗೆ ಹೋಗುವುದು ಪರೀಕ್ಷೆಗಳು ಮತ್ತು ಇತರ ಪ್ರಮುಖ ದಿನಗಳಲ್ಲಿ ಮಾತ್ರ. ಕೃಷಿ ಕೆಲಸ ನಡೆಯುವ ತಿಂಗಳುಗಳಲ್ಲಿ ಕೆಲಸದಲ್ಲಿ ತಾಯಿಗೆ ಸಹಾಯ ಮಾಡಬೇಕು.
"ನನಗೆ ಬಹಳ ಬೇಸರವಾಯಿತು" ಎಂದು ಶಿಬಾನಿ ಹೇಳುತ್ತಾರೆ, ಆಕೆ ತನ್ನ ಎನ್‌ಸಿಸಿ ಕನಸನ್ನು ತ್ಯಜಿಸಿ ತನ್ನ ಕ್ರೀಡಾ ಚಟುವಟಿಕೆಗಳನ್ನು ಬದಿಗಿರಿಸಬೇಕಾಗಿತ್ತು. "ಆದರೆ ಹಾಗೆ ಮಾಡದೆ ಬೇರೆ ದಾರಿಯಿಲ್ಲ."
ಶಿಕ್ಷಣದ ಹೊರತಾಗಿಯೂ ಶಿಬಾನಿ ಮತ್ತು ಶಿಬ್ನಾಥ್ ಅವರಿಗೆ ಉದ್ಯೋಗ ಸಿಗುವುದು ಕಷ್ಟ ಎನ್ನುವುದು ಲಕ್ಷ್ಮಿಯವರಿಗೆ ತಿಳಿದಿದೆ. “ಸಮಯ ಉತ್ತಮವಾಗಿಲ್ಲ. ನನಗೆ [ನನ್ನ ಮಕ್ಕಳಿಗೆ] ಉತ್ತಮ ಫಲಿತಾಂಶ ಬೇಕು,” ಎಂದು ಅವರು ಹೇಳುತ್ತಾರೆ. "ಆದರೆ ನಾನು ಯಾವುದೇ ಭರವಸೆಗಳನ್ನು ಇಟ್ಟುಕೊಂಡಿಲ್ಲ." ಸಶಸ್ತ್ರ ಪಡೆಗಳಿಗೆ ಸೇರುವ ಶಿಬ್ನಾಥ್‌ನ ಕನಸನ್ನು ಲಕ್ಷ್ಮಿ ಬೆಂಬಲಿಸುತ್ತಾರೆ. ಇದರ ನಡುವೆ, ಶಿಬಾನಿಗೆ ಮದುವೆ ವಯಸ್ಸು ಸನ್ನಿಹಿತವಾಗಿದೆ, ಮತ್ತು ಸೂಕ್ತ ವರನ ಹುಡುಕಾಟ ನಡೆಯುತ್ತಿದೆ.
"ನಾನು ಕೃಷಿಯ ಮೇಲೆ ಅವಲಂಬಿತಳಾಗಿ [ನನ್ನ ತಾಯಿಯಂತೆ] ಮುಂದುವರಿಯಬೇಕಾಗುತ್ತದೆ" ಎಂದು ಶಿಬಾನಿ ಹೇಳುತ್ತಾರೆ. ಅವರು ತನ್ನ ಸಂಬಂಧಿಕರಲ್ಲಿ ಟೈಲರಿಂಗ್ ಕಲಿಯುತ್ತಿದ್ದು ಒಂದು ದಿನ ಅಂಗಡಿಯೊಂದನ್ನು ತೆರೆಯುವ ಮೂಲಕ ಲಕ್ಷ್ಮಿಯವರಿಗೆ ಸಹಾಯ ಮಾಡುವ ಭರವಸೆ ಹೊಂದಿದ್ದಾರೆ.
ಅನುವಾದ: ಶಂಕರ ಎನ್. ಕೆಂಚನೂರು